ಕೇಂದ್ರದಿಂದ ʼಬಹುಮಾನʼವಾಗಿ ಪಡೆದ ರಾಜ್ಯಸಭಾ ಸ್ಥಾನಕ್ಕೆ ಗೊಗಾಯ್‌ ಕೊಡುಗೆ ಶೂನ್ಯ

ರಂಜನ್‌ ಗೊಗಾಯ್‌ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿ ಮಾರ್ಚ್‌ 19, 2021ಕ್ಕೆ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ರಾಜ್ಯಸಭೆಗೆ ಅವರು ನೀಡಿದ ʼಕೊಡುಗೆʼಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರದಿಂದ ʼಬಹುಮಾನʼವಾಗಿ ಪಡೆದ ರಾಜ್ಯಸಭಾ ಸ್ಥಾನಕ್ಕೆ ಗೊಗಾಯ್‌ ಕೊಡುಗೆ ಶೂನ್ಯ

ಪಾರ್ಲಿಮೆಂಟ್‌ನಲ್ಲಿ ನ್ಯಾಯಾಂಗದ ವಿಚಾರಧಾರೆಗಳನ್ನು ಕಾರ್ಯಾಂಗಕ್ಕೆ ವಿವರಿಸುವ ಅವಕಾಶ ನನಗೆ ಸಿಗಲಿದೆ. ಹಾಗೇಯೇ, ಕಾರ್ಯಾಂಗದ ವಿಚಾರಧಾರೆಯನ್ನು ಅರಿಯಲು ನನಗೆ ಅವಕಾಶವಿದೆ, ಎಂದು ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್‌ ಗೊಗಾಯ್‌ ಅವರು ಹೇಳಿದ್ದರು. ಸದ್ಯಕ್ಕೆ ಗೊಗಾಯ್‌ ಅವರು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾರ್ಚ್‌ 19ಕ್ಕೆ ಒಂದು ವರ್ಷವಾಯಿತು. ಆದರೆ, ನ್ಯಾಯಾಂಗದ ಯಾವ ವಿಚಾರವನ್ನು ಸದನದ ಗಮನಕ್ಕೆ ತಂದಿದ್ದಾರೆ ಅಥವಾ ಸದನದ ಯಾವ ವಿಚಾರದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಿ ಪಡಿಸಿದ್ದಾರೆ ಎಂದು ಕೇಳಿದರೆ, ಸಿಗುವ ಉತ್ತರ ʼಏನೂ ಇಲ್ಲʼ.

ಕಳೆದ ಒಂದು ವರ್ಷದಲ್ಲಿ ಮಾಜಿ ಸಿಜಿಐ ಅವರು ಸದನದಲ್ಲಿ ತುಟಿಪಿಟಕ್ಕೆನನ್ನಲಿಲ್ಲ. ಅವರ ಪ್ರಮಾಣ ವಚನಾ ಸ್ವೀಕಾರದ ಸಂದರ್ಭದಲ್ಲಿ ವೊಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಅವರು ಹೆಚ್ಚಿಗೆ ಮಾತನಾಡಲಾಗಲಿಲ್ಲ. ಆದರೆ, ಅದರ ನಂತರ ಅವರಿಗೆ ಮಾತನಾಡುವ ಅವಕಾಶ ಇದ್ದರೂ ಮಾತನಾಡುವ ಗೋಜಿಗೆ ಅವರು ಹೋಗಲಿಲ್ಲ. ರಾಜ್ಯಸಭೆಗೆ ಅವರ ಆಯ್ಕೆಯನ್ನು ಅವರು ಅಧಿಕಾರದಲ್ಲಿದ್ದಾಗ ಮಾಡಿದ್ದ ಸರ್ಕಾರದ ʼಸೇವೆʼಗೆ ನೀಡಿರುವ ʼಬಹುಮಾನʼ ಎಂದು ಹಲವರು ಟೀಕಿಸಿದ್ದರು. ಸದನದಲ್ಲಿ ಅವರ ಮೌನ ಈ ಮಾತುಗಳನ್ನು ಪುಷ್ಟೀಕರಿಸಿದಂತಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರಂಜನ್‌ ಗೊಗಾಯ್‌ ಅವರು, ಖುದ್ದು ರಾಷ್ಟ್ರಪತಿಗಳೇ ನಿಮ್ಮ ಮೇಲೆ ಭರವಸೆ ಇಟ್ಟುಕೊಂಡು ನಿಮ್ಮ ಸೇವೆಯನ್ನು ಕೇಳುತ್ತಿರುವಾಗ ನೀವು ಇಲ್ಲವೆನ್ನಲು ಆಗುವುದಿಲ್ಲ, ಎಂದಿದ್ದರು.

ರಾಷ್ಟ್ರಪತಿಗಳಿಗಿರುವ ಪರಮಾಧಿಕಾರಗಳಲ್ಲಿ, ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡುವುದೂ ಸೇರಿದೆ. ಸಮಾಜಶಾಸ್ತ್ರ, ಕಲೆ, ಸಾಹಿತ್ಯ ಹಾಗೂ ವಿಜ್ಞಾನದಲ್ಲಿ ಉನ್ನತ ಮಟ್ಟದ ಜ್ಞಾನ ಅಥವಾ ವ್ಯಾವಹಾರಿಕ ಜ್ಞಾನ ಹೊಂದಿರುವವರನ್ನು ಈ ಸ್ಥಾನಗಳಿಗೆ ಆಯ್ಕೆ ಮಾಡಬಹುದು. ಇವರು ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ತಮ್ಮ ಅಮೂಲ್ಯವಾದ ವಿಚಾರಗಳನ್ನು ಮಂಡಿಸುತ್ತಾರೆ ಎಂಬ ʼನಂಬಿಕೆʼಯೊಂದಿಗೆ ವಿಶೇಷವಾಗಿ ಕೆಲವರನ್ನು ನಾಮನಿರ್ದೇಶನ ಮಾಡಲಾಗುತ್ತದೆ.

ಕೇಂದ್ರದಿಂದ ʼಬಹುಮಾನʼವಾಗಿ ಪಡೆದ ರಾಜ್ಯಸಭಾ ಸ್ಥಾನಕ್ಕೆ ಗೊಗಾಯ್‌ ಕೊಡುಗೆ ಶೂನ್ಯ
ರಂಜನ್‌ ಗೊಗಾಯ್‌ರಿಗೆ ರಾಜ್ಯಸಭೆ ಸದಸ್ಯರಾಗಲು ಅರ್ಹತೆ ಇಲ್ಲ- ಸುಪ್ರೀಂ ನಿವೃತ್ತ ನ್ಯಾಯಾಧೀಶ ವಿ ಗೋಪಾಲ ಗೌಡ

ಈ ರೀತಿಯ ನಾಮ ನಿರ್ದೇಶನದಿಂದ ಆಯ್ಕೆಯಾದವರು, ರಂಜನ್‌ ಗೊಗಾಯ್‌. ಇವರು ರಾಜ್ಯಸಭೆಗೆ ಆಯ್ಕೆಯಾದ ನಂತರ, ಅಲ್ಲಿ ಮಂಡಿಸಲಾಗುವ ಕಾಯ್ದೆಗಳ ಕುರಿತು, ಕಾನೂನುಗಳ ಕುರಿತು ವಿಶೇಷವಾದ ಚರ್ಚೆಗಳನ್ನು ನಡೆಸಬಹುದಿತ್ತು. ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ ತಾವು ಕಂಡಂತಹ ಕಾನೂನಿನ ಲೋಪದೋಷಗಳ ಕುರಿತು ಚರ್ಚೆ ನಡೆಸಬಹುದಿತ್ತು, ಸದನದ ಗಮನ ಸೆಳೆಯಬಹುದಿತ್ತು. ಆದರ, ಇದ್ಯಾವುದೂ ಆಗಲೇ ಇಲ್ಲ.

ಕೇಂದ್ರದಿಂದ ʼಬಹುಮಾನʼವಾಗಿ ಪಡೆದ ರಾಜ್ಯಸಭಾ ಸ್ಥಾನಕ್ಕೆ ಗೊಗಾಯ್‌ ಕೊಡುಗೆ ಶೂನ್ಯ
ನ್ಯಾಯಾಂಗ ವ್ಯವಸ್ಥೆ ಕುಸಿಯುತ್ತಿದೆ –ಮಾಜಿ CJI ರಂಜನ್‌ ಗೊಗಾಯ್

ಮಾರ್ಚ್‌ 20,2021ರಂದು ರಾಜ್ಯಸಭೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ ರಂಜನ್‌ ಗೊಗಾಯ್‌ ಅವರು ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ಬಳಿಕ ಯಾವುದೇ ಮಸೂದೆಗಳ ಕುರಿತು ನಡೆದ ಚರ್ಚೆಗಳಲ್ಲಿ ಭಾಗವಹಿಸಿಲ್ಲ.

ಕಳೆದ ಒಂದು ವರ್ಷದಲ್ಲಿ ಭಾರತದ ಸಂಸತ್ತಿನಲ್ಲಿ ಹಲವು ಮಸೂದೆಗಳ ಕುರಿತು ಚರ್ಚೆಯಾಗಿದೆ. ಮುಖ್ಯವಾಗಿ, ಕೃಷಿಗೆ ಸಂಬಂಧಪಟ್ಟಂತೆ, ಇದು ರಾಜ್ಯಗಳ ಪರಿಧಿಯೊಳಗೆ ಬರುವ ವಿಚಾರವೋ ಅಥವಾ ಕೇಂದ್ರದ ವಿಚಾರವೋ ಎಂಬ ಪ್ರಶ್ನೆ ಮಸೂದೆಗಳ ಚರ್ಚೆಯ ವೇಳೆ ಮೂಡಿತ್ತು. ಈ ಸಂದರ್ಭದಲ್ಲಿ ರಂಜನ್‌ ಗೊಗಾಯ್‌ ಅವರ ವಿಚಾರಗಳು ಚರ್ಚೆಗೆ ಮತ್ತಷ್ಟು ಬಲ ನೀಡುತ್ತಿದ್ದವು. ಆದರೆ, ಈ ಚರ್ಚೆಯಲ್ಲಿ ಭಾಗವಹಿಸುವುದು ರಂಜನ್‌ ಗೊಗಾಯ್‌ ಅವರಿಗೆ ಮುಖ್ಯವೆಂದು ಅನ್ನಿಸಲಿಲ್ಲ.

ಪಾರ್ಲಿಮೆಂಟ್‌ ಸದಸ್ಯರಿಗೆ ತಮ್ಮದೇ ಆದ ಖಾಸಗಿ ಮಸೂದೆಗಳನ್ನು ಮಂಡಿಸಲು ಅವಕಾಶವಿದೆ. ಆದರೆ, ಈ ರೀತಿಯ ಮಸೂದೆಗಳನ್ನು ಮಂಡಿಸಲು ಸಮಗ್ರವಾದ ಮತ್ತು ಆಳವಾದ ಜ್ಞಾನ ಇರಬೇಕಾದ ಅವಶ್ಯಕತೆ ಇದೆ. ಮಂಡಿಸಲಾಗುವ ಮಸೂದೆ, ಸಂವಿಧಾನದ ಘನತೆಗೆ ಧಕ್ಕೆ ತರುವಂತಿರಬಾರದು. ಕಾನೂನಾತ್ಮಕವಾಗಿ ಯಾವುದೇ ತೊಡಕಿರಬಾರದು. ಮಸೂದೆ ಮಂಡನೆಯ ವೇಳೆ ಬಳಸಲಾಗುವ ಭಾಷೆಯೂ ಮಸೂದೆಯ ಆಶಯಗಳನ್ನು ಎತ್ತಿ ಹಿಡಿಯುವಂತಿರಬೇಕು. ಈ ಎಲ್ಲವನ್ನು ಕೂಡಾ ಸುಲಭವಾಗಿ ನಿಭಾಯಿಸಬಹುದಾದ ಕೌಶಲ್ಯ ಓರ್ವ ಮಾಜಿ ಮುಖ್ಯ ನ್ಯಾಯಮೂರ್ತಿಗೆ ಇತ್ತು. ಆದರೆ, ಇದಕ್ಕೂ ಅವರು ಒಲ್ಲೆ ಅಂದುಬಿಟ್ಟರು. ಯಾವುದೇ ಮಸೂದೆಯನ್ನು ಮಂಡಿಸುವ ಗೋಜಿಗೆ ರಂಜನ್‌ ಗೊಗಾಯ್‌ ಹೋಗಲಿಲ್ಲ.

ಸರಿ… ಖಾಸಗಿ ಮಸೂದೆಯನ್ನು ಮಂಡಿಸುವುದು ಕ್ಲಿಷ್ಟಕರವಾದ ವಿಚಾರವೆಂದುಕೊಳ್ಳೋಣ. ಸರ್ಕಾರದ ನೀತಿಗಳ ಕುರಿತು, ಕಾನೂನುಗಳ ಕುರಿತು ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಒಬ್ಬ ಪಾರ್ಲಿಮೆಂಟ್‌ ಸದಸ್ಯನಿಗೆ ಇರುತ್ತದೆ. ಕೇಂದ್ರ ಮಂತ್ರಿಯು ಬರಹ ರೂಪದಲ್ಲಿ ಉತ್ತರ ನೀಡಬಹುದಾದಂತಹ ಚುಕ್ಕೆ ಗುರುತಿಲ್ಲದ ಪ್ರಶ್ನೆ ಅಥವಾ ಸದನದಲ್ಲಿ ಕಡ್ಡಾಯವಾಗಿ ಉತ್ತರಿಸಬೇಕಾದ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳುವ ಹಕ್ಕು ಸಂಸದರಿಗೆ/ಶಾಸಕರಿಗೆ ಇರುತ್ತದೆ. ಸರ್ಕಾರದ ನೀತಿಗಳ ಕುರಿತು, ಕಾನೂನುಗಳ ಕುರಿತು, ವಿದೇಶಾಂಗ ನೀತಿಗಳ ಕುರಿತು, ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕತೆಯ ಕುರಿತು ಜ್ಞಾನವಿದ್ದರೂ, ರಂಜನ್‌ ಗೊಗಾಯ್‌ ಅವರು ಒಂದೇ ಒಂದು ಪ್ರಶ್ನೆಯನ್ನು ಸದನದಲ್ಲಿ ಕೇಳಲಿಲ್ಲ.

ಒಂದು ವೇಳೆ ಯಾವುದೇ ಸಂಸದರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಮಂತ್ರಿಗಳು ಸಮರ್ಪಕವಾದ ಉತ್ತರ ನೀಡದಿದ್ದಲ್ಲಿ, ಯಾವುದೇ ಸಂಸದರು ಉಪ ಪ್ರಶ್ನೆಯನ್ನು ಕೇಳಬಹುದಾಗಿದೆ. ಇಲ್ಲಿಯೂ ರಂಜನ್‌ ಗೊಗಾಯ್‌ ಅವರ ಸಾಧನೆ ಶೂನ್ಯ.

ಇನ್ನು ರಂಜನ್‌ ಗೊಗಾಯ್‌ ಅವರ ಸದನದ ಹಾಜರಾತಿಯನ್ನು ಗಮನಿಸಿದರೆ, 2020ರ ಬಜೆಟ್‌ ಕಲಾಪವು 34 ದಿನಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಅವರು ಮಾರ್ಚ್‌ 19 ಮತ್ತು 20ರಂದು ಅಂದರೆ, ಪ್ರಮಾಣ ವಚನ ಸ್ವೀಕರಿಸುವ ಹಾಗೂ ಅದರ ನಂತರದ ದಿನದಂದು ಮಾತ್ರ ಸದನಕ್ಕೆ ಹಾಜರಾಗಿದ್ದರು. ಇದಾದ ಬಳಿಕ ನಡೆದ ಮುಂಗಾರು ಅಧಿವೇಶನ 18 ದಿನಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಒಂದೇ ಒಂದು ದಿನವೂ ಗೊಗಾಯ್‌ ಅವರು ಸದನಕ್ಕೆ ಹಾಜರಾಗಲಿಲ್ಲ. ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ 33 ದಿನಗಳ ಕಾಲ ರಾಜ್ಯಸಭೆ ಜತೆ ಸೇರಿದೆ. ರಂಜನ್‌ ಗೊಗಾಯ್‌ ಅವರು ಫೆಬ್ರುವರಿ 12, 2021ರಂದು ಮಾತ್ರ ಸದನಕ್ಕೆ ಹಾಜರಾಗಿದ್ದರು.

ಒಟ್ಟಿನಲ್ಲಿ, ʼಸೀಲ್‌ʼ ಮಾಡಲಾದ ಪತ್ರದಂತೆ, ರಂಜನ್‌ ಗೊಗಾಯ್‌ ಅವರು ತಮ್ಮ ರಾಜ್ಯಸಭಾ ಅವಧಿಯ ಮೊದಲ ವರ್ಷವನ್ನು ಕಳೆದಿದ್ದಾರೆ. ಎಲ್ಲಿಯೂ ತಮ್ಮ ಬಾಯಿಯನ್ನು ತೆರೆಯುವ ಕಷ್ಟವನ್ನು ತೆಗೆದುಕೊಳ್ಳಲು ಒಪ್ಪದ ಗೊಗಾಯ್‌ ಅವರು, ತಾವು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹೇಳಿದಂತೆ ಯಾವ ರೀತಿಯಲ್ಲಿ ನ್ಯಾಯಾಂಗದ ವಿಚಾರಧಾರೆಯನ್ನು ಕಾರ್ಯಾಂಗದ ಮುಂದಿಟ್ಟಿದ್ದಾರೆ ಎಂಬುದನ್ನು ಅವರೇ ತಿಳಿಸಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com