ರಾಹುಲ್‌ ಗಾಂಧಿ: ವಿರೋಧಿಗಳು ಗಂಭೀರವಾಗಿ ಪರಿಗಣಿಸಿರುವ ರಾಜಕೀಯದ ʼವಿಫಲ ನಾಯಕʼ

ಇವತ್ತಿನ ರಾಜಕೀಯವು ರಾಹುಲ್‌ ಗಾಂಧಿಯನ್ನು ವಿಫಲನಾಯಕನೆಂದೇ ಪ್ರತಿಪಾದಿಸಿದೆ. ಆದರೆ ಈ ʼವಿಫಲನಾಯಕʼನನ್ನು ಅವರ ವಿರೋಧಿಗಳು ಬಹಳ ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಪರಿಗಣಿಸದ್ದು ಬಹುಶ: ಅವರದ್ದೇ ಆದ ಕಾಂಗ್ರೆಸ್‌ ಮಾತ್ರ.
ರಾಹುಲ್‌ ಗಾಂಧಿ: ವಿರೋಧಿಗಳು ಗಂಭೀರವಾಗಿ ಪರಿಗಣಿಸಿರುವ ರಾಜಕೀಯದ ʼವಿಫಲ ನಾಯಕʼ

ಸಾರ್ವಜನಿಕ ವೇದಿಕೆಗಳ ಭಾಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮಕ್ಕೆ ನಿಲ್ಲಲಾಗದ ರಾಹುಲ್‌ ಗಾಂಧಿಯವರು ಖಾಸಗೀ ಮತ್ತು ಸಣ್ಣ ಸಣ್ಣ ಸಂವಾದಗಳಲ್ಲಿ ಅತ್ಯದ್ಭುತವಾದ ಒಳನೋಟಗಳಿಂದ ಮಾತಾಡುತ್ತಿರುವುದನ್ನು ಗಮನಿಸಿ ಇದನ್ನು ಬರೆಯಬೇಕೆಂದೆನಿಸಿತು. ಪಾಂಡಿಚೇರಿ, ಪುಣೆ, ಮುಂಬೈ, ಆಲಿಘಡ್‌, ಬ್ರೌನ್‌ ವಿವಿ, ಕಾರ್ನೆಲ್‌ ವಿವಿ, ಬರ್ಕ್ಲಿ ವಿವಿ ಮೊದಲಾದೆಡೆಗಳಲ್ಲಿ ವಿದ್ಯಾರ್ಥಿ ಮತ್ತು ಅಧ್ಯಾಪಕರೊಡನೆ ನಡೆಸಿದ ಸಂಭಾಷಣೆಗಳಲ್ಲಿ ಅವರು ಭಾರತದ ಸಹನಶೀಲತೆ, ವೈವಿಧ್ಯತೆ, ಗಾಂಧೀಜಿಯ ಅಹಿಂಸೆಯ ಪರಿಕಲ್ಪನೆ, ಸಾಮಾಜಿಕ ನ್ಯಾಯ, ಸುಸ್ಥಿರ ಅಭಿವೃದ್ಧಿ , ಮೊದಲಾದ ವಿಷಯಗಳ ಕುರಿತು ಅತ್ಯಂತ ಲವಲವಿಕೆಯ ಉಪನ್ಯಾಸ ನೀಡಿದ್ದಾರೆ. ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ್ದಾರೆ.

ಒಂದು ಹಂತದಲ್ಲಿ ʼ ನನ್ನನ್ನು ನೀವು ಸರ್‌ ಎಂದು ಯಾಕೆ ಕರೆಯುತ್ತೀರಿ? ಅದು ನಿಮ್ಮ ಮೇಸ್ಟ್ರುಗಳಿಗಿರಲಿ, ನನ್ನನ್ನು ರಾಹುಲ್‌ʼಎಂದೇ ಕರೆಯಿರಿʼ ಎಂದು ಹೇಳಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವತ್ತಿನ ಭಾರತದ ರಾಜಕಾರಣವು ರಾಹುಲ್‌ ನ್ನು ʼಪೆದ್ದ ʼ ಎಂದು ವಿವರಿಸಲು ಬಹಳ ಕೆಲಸ ಮಾಡುತ್ತಿದೆ. ವಿರೋಧಿಯನ್ನು ಹಣಿಯಲು ಹೀಗೆ ಮಾಡುವುದು ಅಸಹಜವೇನೂ ಅಲ್ಲ. ಆದರೆ ನಮ್ಮಂಥವರು ಅಂಥ ಬಲೆಯಲ್ಲಿ ಬೀಳದ ಎಚ್ಚರವನ್ನು ಕಾಯ್ದುಕೊಳ್ಳುವುದು ಬಹಳ ಅಗತ್ಯ. ರಾಹುಲ್‌ ಗಾಂಧಿಯು ದೇಶದ ಪ್ರಧಾನಿ ಆಗದಿರಬಹುದು. ವಂಶಪಾರಂಪರ್ಯದ ಶಾಪ ಹೊತ್ತಿರುವ ಅವರಿಗೆ ಅದರಿಂದ ಹೊರಬರುವ ದಾರಿಯೂ ಕಾಣುತ್ತಿಲ್ಲ. ʼ ನೆಹರೂ ವಂಶ ತನ್ನೊಂದಿಗೇ ಕೊನೆಯಾಗಿ ಶಾಪಮುಕ್ತವಾಗಲಿʼ ಎಂದು ಅವರು ಭಾವಿಸಿಕೊಂಡು ಮದುವೆಯಾಗದೇ ಉಳಿದಿರುವಂತಿಗೆ . ಅವರಿಗೊಬ್ಬ ಬದಲಿಯನ್ನು ಹುಡುಕುವಲ್ಲಿ ಕಾಂಗ್ರಸ್‌ ವಿಫಲವಾಗಿದೆ. ಇದರ ಹೊರತಾಗಿ, ರಾಹುಲ್‌ ಗಾಂಧಿ, ಇವತ್ತಿನ ರಾಜಕಾರಣದ ಪ್ರಖರ ಮತ್ತು ಪ್ರಬುದ್ಧ ಚಿಂತಕರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದು ಗೊತ್ತಿರುವುದರಿಂದಲೇ ಅವರ ಮೇಲಿನ ಆಕ್ರಮಣಗಳು ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇವೆ. ರಾಹುಲ್‌ ಗಾಂಧಿ ದಡ್ಡನೇ ಆಗಿದ್ದರೆ ಕೇಂದ್ರ ಸರಕಾರದ ಎಲ್ಲ ಮಂತ್ರಿಗಳೂ ಅವರನ್ನೇ ಬಗೆ ಬಗೆಯ ವಿಶೇಷಣಗಳನ್ನು ಬಳಸಿ ಟಾರ್ಗೆಟ್‌ ಮಾಡುವ ಅಗತ್ಯವಿರಲಿಲ್ಲ. ಕೇವಲ ಒಬ್ಬ ಎಂಪಿಯ ಮೇಲೆ ಹದ್ದೆರಗುವಂತೆ ಇವರೆಲ್ಲ ಎರಗುವುದರ ಹಿಂದಿನ ಭಯವನ್ನು ಗಮನಿಸಿ. ಹೊರಗಿನಿಂದ ಜನರು ರಾಹುಲ್‌ ನ್ನು ಅಪಹಾಸ್ಯ ಮಾಡುತ್ತಿರುವಾಗಲೇ ಒಳಗಿನಿಂದ ರಾಹುಲ್‌ ವಿರೋಧಿಗಳು ಬಹಳ ಗಂಭೀರವಾಗಿಯೇ ಕೆಲಸ ಮಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಾಗೆ ಮಾಡದಿರುತ್ತಿದ್ದರೆ, ರಾಹುಲ್‌ ಇವತ್ತು ಬಾರತೀಯ ರಾಜಕಾರಣದಲ್ಲಿ ಅಪ್ರಸ್ತುತರಾಗಿ ಎಲ್ಲೋ ಮಾಯವಾಗಿಬಿಡುತ್ತಿದ್ದರು.

ರಾಹುಲನ್ನು ಜೀವಂತವಾಗಿರಿಸಿದ ಕೀರ್ತಿ ಅವರ ವಿರೋಧಿಗಳಿಗೇ ಸಲ್ಲಬೇಕು. ವಿರೋಧ ಪಕ್ಷದಲ್ಲಿದ್ದು ಆಳುವ ಪಕ್ಷದ ವಿರುದ್ಧ ರಾಹುಲ್‌ ಎತ್ತಿದ ಪ್ರಶ್ನೆಗಳು ಹಲವು. ಪೂರ್ವಾಗ್ರಹ ಪೀಡಿತವಾದ ಮಾಧ್ಯಮಗಳಿಂದಾಗಿ ಇದು ಜನರಿಗೆ ತಿಳಿಯದೇ ಹೋಗಿರಬಹುದು. ಕೋವಿಡ್‌ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದೇ ರಾಹುಲ್. ದೊಡ್ಡ ಸಾಲ ತೀರಿಸದ 50 ಜನರ ಹೆಸರನ್ನು ಕೊಡಿ ಎಂಬ ಪ್ರಶ್ನೆಗೆ ಉತ್ತರವಾಗಿ ಅರ್ಥ ಮಂತ್ರಿ ನಿರ್ಮಾಲಾ ಸೀತಾರಾಮನ್‌ 13 ಟ್ವೀಟ್‌ ಮಾಡಿದರೂ ಯಾಕೋ ಉತ್ತರಿಸುವ ಧೈರ್ಯ ಮಾಡಲಿಲ್ಲ. ಕೊನೆಗೂ ಆರ್‌ ಬಿ ಐ ಯು ನೀರವ್‌ ಮೋದಿ , ಮೆಹುಲ್‌ ಚೋಕ್ಸಿ ಮತ್ತಿತರ 10 ಜನರ ಹೆಸರನ್ನು ಸಾಕೇತ್‌ ಗೋಖಲೆಯವರಿಗೆ ನೀಡಲೇ ಬೇಕಾಯಿತು.

ರಾಹುಲ್‌ ಅವರ ಬಹಳ ಪ್ರಸಿದ್ಧವಾದ ʼ ಸೂಟ್‌ ಬೂಟ್‌ ಕಾ ಸರ್ಕಾರ್‌ ʼ ಹೇಳಿಕೆಯಿಂದ ಸರಕಾರವು ಕಾರ್ಪೋರೇಟ್‌ ಟ್ಯಾಕ್ಸ್‌ ವಿನಾಯತಿ ಯೋಜನೆಯನ್ನು ಹಿಂದೆಗೆದುಕೊಂಡಿತು ಎಂದು ವರದಿಯಾಗಿದೆ. ರಫೇಲ್‌ ಹಗರಣದ ಸಂದರ್ಭದಲ್ಲಿಯೂ ಅವರು ತಮ್ಮ ಶಂಕೆಗಳನ್ನು ಪ್ರಕಟಪಡಿಸಿದರು. ʼಚೌಕಿದಾರ್‌ ಚೋರ್‌ ಹೈʼ ಎಂದು ರಾಹುಲ್‌ ಹೇಳಿದಾಗ, ಪ್ರಧಾನಿಗಳೂ ಸೇರಿದಂತೆ ಲಕ್ಷಾಂತರ ಜನರು ʼಮೈ ಭಿ ಚೌಕಿದಾರ್‌ʼ ಎಂದು ಹೇಳಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದರು. ಕೋವಿಡ್‌ ಸಮಯದಲ್ಲಿ ತನ್ನ ಕ್ಷೇತ್ರದ ಜನರಿಗೆ ವಿಶೇಷವಾಗಿ ಸಹಾಯ ಮಾಡಿದ 10 ಜನ ಎಂಪಿಗಳಲ್ಲಿ ರಾಹುಲ್‌ ಕೂಡಾ ಒಬ್ಬರು ಎಂದು ವರದಿಯಾಗಿತ್ತು.

ಇವತ್ತಿನ ರಾಜಕೀಯವು ರಾಹುಲ್‌ ಗಾಂಧಿಯನ್ನು ವಿಫಲನಾಯಕನೆಂದೇ ಪ್ರತಿಪಾದಿಸಿದೆ. ಆದರೆ ಈ ʼವಿಫಲನಾಯಕʼನನ್ನು ಅವರ ವಿರೋಧಿಗಳು ಬಹಳ ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಪರಿಗಣಿಸದ್ದು ಬಹುಶ: ಅವರದ್ದೇ ಆದ ಕಾಂಗ್ರೆಸ್‌ ಮಾತ್ರ.

- ಪುರುಶೋತ್ತಮ ಬಿಳಿಮಲೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com