ಶ್ರೀಮಂತ ದೇಶಗಳಿಗಾಗಿ ಭಾರತದ ಕೃಷಿ ಮಸೂದೆಗಳು

ಕೆನಡಾದ ಪ್ರಧಾನಿ ಟ್ರುಡೋ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ದಮನಿಸುವ ಮೋದಿ ಸರ್ಕಾರದ ನೀತಿಯನ್ನು ಖಂಡಿಸಿದಾಗ ಇದು ವಿದೇಶಿ ಹಸ್ತಕ್ಷೇಪ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಐಎಂಎಫ್ ಆದೇಶವನ್ನು ವಿದೇಶಿ ಹಸ್ತಕ್ಷೇಪ ಎಂದು ಭಾವಿಸುವುದಿಲ್ಲ.
ಶ್ರೀಮಂತ ದೇಶಗಳಿಗಾಗಿ ಭಾರತದ ಕೃಷಿ ಮಸೂದೆಗಳು

ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಬಹುಪಾಲು ದೇಶಗಳಲ್ಲಿ ಆಹಾರ ಉತ್ಪಾದನೆ ಒಟ್ಟಾರೆ ಹೆಚ್ಚಳ ಕಂಡಿರುವ ಸಂದರ್ಭದಲ್ಲಿಯೇ ವಿಶ್ವದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯೂ ತೀವ್ರ ಹೆಚ್ಚಳ ಕಂಡಿರುವುದು ಅಚ್ಚರಿಯ ವಿಚಾರ ಅಲ್ಲವೇ ? ಈ ಜಿಜ್ಞಾಸೆಗೆ ಉತ್ತರ ಬಂಡವಾಳಶಾಹಿ ವ್ಯವಸ್ಥೆಯಲ್ಲಿದೆ. ಏಕೆಂದರೆ ಬಂಡವಾಳ ವ್ಯವಸ್ಥೆ ಲಾಭಕೋರತನ ಮತ್ತು ದುರಾಸೆಯ ಪ್ರತೀಕ.

ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವೂ ಈ ಲಾಭಕೋರತನ ಮತ್ತು ದುರಾಸೆಯ ವಿರುದ್ಧದ ಪ್ರತಿರೋಧವೇ ಆಗಿದೆ. ವಿಶ್ವ ವಾಣಿಜ್ಯ ಸಂಸ್ಥೆಯ ಅಣತಿಯಂತೆ ಭಾರತದ ಆಹಾರ ಸಾರ್ವಭೌಮತ್ವವನ್ನು ಕೆಲವೇ ಕೆಲವು ಬಂಡವಾಳಶಾಹಿಗಳ ( ಅದಾನಿ ಮತ್ತು ಅಂಬಾನಿ ಅವರಂತಹ ಬಂಡವಾಳಿಗರ) ಲಾಭಕೋರತನಕ್ಕೆ ಮತ್ತು ದುರಾಸೆಗೆ ಸಮರ್ಪಿಸುವ ನರೇಂದ್ರ ಮೋದಿ ಸರ್ಕಾರದ ವಂಚಕ ನೀತಿಯ ವಿರುದ್ಧ ಭಾರತದ ಸಮಸ್ತ ರೈತಾಪಿ ಸಮುದಾಯ ಹೋರಾಟ ನಡೆಸುತ್ತಿದೆ. ಈ ಮೂರು ಕೃಷಿ ಮಸೂದೆಗಳು ಭಾರತದ ಸಾರ್ವಜನಿಕ ಕಲ್ಯಾಣ ನೀತಿಗಳ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ ಎಂದು ಹೇಳಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉರುಗುವೇ ಸುತ್ತಿನ ಗ್ಯಾಟ್ ಮಾತುಕತೆಗಳನ್ನು ಅನುಸರಿಸಿ 1980ರಲ್ಲಿ ಅಮೆರಿಕದಲ್ಲಿ ಆರಂಭವಾದ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ವಿಶ್ವಬ್ಯಾಂಕ್ ಅಣತಿಯಂತೆ 1991ರಲ್ಲಿ ಭಾರತದಲ್ಲಿ ನರಸಿಂಹರಾವ್ ಸರ್ಕಾರದ ಮೂಲಕ ಚಾಲನೆ ಪಡೆದ ಪ್ರಕ್ರಿಯೆಗೆ ಈಗ ಅಂತಿಮ ಸ್ವರೂಪ ನೀಡಲಾಗುತ್ತಿದೆ. ಮೂರು ಕೃಷಿ ಮಸೂದೆಗಳು ಇದರ ಒಂದು ಭಾಗವೇ ಆಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಐಎಂಎಫ್ ಭಾರತದ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿರುವುದು ಅಚ್ಚರಿಯೇನಲ್ಲ. ವಿಡಂಬನೆ ಎಂದರೆ, ಕೆನಡಾದ ಪ್ರಧಾನಿ ಟ್ರುಡೋ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ದಮನಿಸುವ ಮೋದಿ ಸರ್ಕಾರದ ನೀತಿಯನ್ನು ಖಂಡಿಸಿದಾಗ ಇದು ವಿದೇಶಿ ಹಸ್ತಕ್ಷೇಪ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಐಎಂಎಫ್ ಆದೇಶವನ್ನು ವಿದೇಶಿ ಹಸ್ತಕ್ಷೇಪ ಎಂದು ಭಾವಿಸುವುದಿಲ್ಲ.

ವಿಶ್ವಬ್ಯಾಂಕ್-ಐಎಂಎಫ್ ಮಧ್ಯಸ್ತಿಕೆಯ ಇತಿಹಾಸ

1991ರಲ್ಲಿ ವಿಶ್ವಬ್ಯಾಂಕ್ ಭಾರತಕ್ಕೆ ಒಂದು ಸುದೀರ್ಘ ಒಡಂಬಡಿಕೆಯನ್ನು ಸಲ್ಲಿಸಿ, ಅರ್ಥ ವ್ಯವಸ್ಥೆಯನ್ನು ಕೂಡಲೇ ಪುನಾರಚನೆ ಮಾಡದೆ ಹೋದರೆ ಭಾರತಕ್ಕೆ ಅಂತಾರಾಷ್ಟ್ರೀಯ ಹಣಕಾಸು ನೆರವು, ಮುಖ್ಯವಾಗಿ ಐಎಂಎಫ್ ನೆರವು, ದೊರೆಯುವುದಿಲ್ಲ ಎಂದು ಎಚ್ಚರಿಸಿತ್ತು. ಈ ಒಡಂಬಡಿಕೆಯ ಮೂಲಕ ಸೂಚಿಸಲಾದ ಪ್ರಮುಖ ಪುನಾರಚನೆಯ ಯೋಜನೆಗಳನ್ನು ಈಗಾಗಲೇ ಹಲವು ಸರ್ಕಾರಗಳು ಜಾರಿಗೊಳಿಸಿವೆ. ಇನ್ನುಳಿದ ಕೆಲವು ನೀತಿಗಳನ್ನು ಈ ಮೂರು ಕೃಷಿ ಕಾಯ್ದೆಗಳ ಮೂಲಕ ಜಾರಿ ಮಾಡಲಾಗುತ್ತಿದೆ.

ವಿಶ್ವ ಬ್ಯಾಂಕಿನ ಪ್ರಮುಖ ಶಿಫಾರಸುಗಳು ಹೀಗಿವೆ :-

 1. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಹಾಯಧನ ಒದಗಿಸುವುದು ಸಮರ್ಥನೀಯವಲ್ಲ ಮತ್ತು ಅಭಿವೃದ್ಧಿಯ ಪಥದಲ್ಲಿ ಇದು ತೊಡಕಾಗಿ ಪರಿಣಮಿಸುತ್ತದೆ. ಹಾಗಾಗಿ ನೀರಾವರಿ, ವಿದ್ಯುತ್ ಸರಬರಾಜು, ರಸಗೊಬ್ಬರ ಮತ್ತು ಸಾಲ ಸೌಲಭ್ಯಗಳನ್ನು ತೆಗೆದುಹಾಕಬೇಕು.

 2. ಕೃಷಿ ಉತ್ಪನ್ನಗಳ ಮೇಲಿನ ಆಮದು ರಫ್ತು ನಿರ್ಬಂಧಗಳನ್ನು ತೆಗೆದುಹಾಕಬೇಕು.

 3. ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅವಶ್ಯಕತೆ ಇಲ್ಲದಿರುವುದರಿಂದ ಉದ್ದೇಶಿತ ಪಿಡಿಎಸ್ ಪದ್ಧತಿಯನ್ನು ಜಾರಿಗೊಳಿಸಿ, ಭಾರತೀಯ ಆಹಾರ ನಿಗಮದ ಪಾತ್ರವನ್ನು ಕಡಿಮೆ ಮಾಡಬೇಕು.

 4. ಸರ್ಕಾರದ ರಕ್ಷಣಾ ನೀತಿಗಳನ್ನು ರದ್ದುಪಡಿಸಿ ಕೃಷಿ ವ್ಯಾಪಾರದ ಉದಾರೀಕರಣ ಆಗಬೇಕು.

 5. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಿಸಬೇಕು.

 6. ಬ್ಯಾಂಕ್ ಸಾಲ ಸೌಲಭ್ಯಗಳನ್ನು ತರ್ಕಬದ್ಧವಾಗಿ ರೂಪಿಸಿ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಬೇಕು.

 7. ತಂತ್ರಜ್ಞಾನದ ಆಮದು ಮತ್ತು ಕಾರ್ಪೋರೇಟ್ ಹಣಕಾಸು ಪ್ರೇರಿತ ಸಂಶೋಧನೆಗೆ ಉತ್ತೇಜನ ನೀಡಬೇಕು.

 8. ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಗೆ ನೀತಿಗಳನ್ನು ರೂಪಿಸಬೇಕು.

 9. ರಸಗೊಬ್ಬರ ಮತ್ತು ಬೀಜಗಳನ್ನೂ ಸೇರಿದಂತೆ ಕೃಷಿ ಸಾಧನ ಮತ್ತು ಸಲಕರಣೆಗಳ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಸರ್ಕಾರದ ಪಾತ್ರವನ್ನು ಕಡಿಮೆ ಮಾಡಬೇಕು. ಸಂಶೋಧನೆ ಮತ್ತು ಮಾರುಕಟ್ಟೆಯ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆಯನ್ನು ಹೆಚ್ಚಿಸಬೇಕು.

 10. ವಾಣಿಜ್ಯ ಬೀಜ ಉತ್ಪಾದನೆಯಲ್ಲಿ ಸರ್ಕಾರಿ ಕಂಪನಿಗಳ ಪಾಲ್ಗೊಳ್ಳುವಿಕೆಯನ್ನು ಅಂತ್ಯಗೊಳಿಸಬೇಕು.

 11. ನೀರಾವರಿ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರಕ್ಕೆ ಪ್ರವೇಶ ನೀಡಿ ನೀರಿನ ದರಗಳನ್ನು ಹೆಚ್ಚಿಸಬೇಕು.

ಎಡಪಕ್ಷಗಳ ಮತ್ತು ಅನೇಕ ರೈತ ಸಂಘಟನೆಗಳ ತೀವ್ರ ವಿರೋಧದ ಹೊರತಾಗಿಯೂ ಭಾರತ ಸರ್ಕಾರ ವಿಶ್ವ ಬ್ಯಾಂಕಿನ ಈ ಶಿಫಾರಸುಗಳಿಗೆ ಅನುಮೋದನೆ ನೀಡಿತ್ತು. 1991-92ರ ಬಜೆಟ್‍ನಲ್ಲಿ ರಸಗೊಬ್ಬರದ ಬೆಲೆಗಳನ್ನು ಶೇ 30ರಷ್ಟು ಹೆಚ್ಚಿಸಲಾಗಿತ್ತು. ರಫ್ತು ವ್ಯಾಪಾರಕ್ಕೆ ನೀಡಲಾಗುತ್ತಿದ್ದ ಸಹಾಯಧನವನ್ನು ರದ್ದುಪಡಿಸಲಾಯಿತು. ಸಕ್ಕರೆಯ ಮೇಲೆ ನೀಡಲಾಗುತ್ತಿದ್ದ ಸಹಾಯಧನವನ್ನೂ ರದ್ದುಪಡಿಸಲಾಯಿತು. ನಂತರದ ಮೂರು ದಶಕಗಳಲ್ಲಿ ಯುಪಿಎ ಮತ್ತು ಎನ್‍ಡಿಎ ಸರ್ಕಾರಗಳು ವಿಶ್ವಬ್ಯಾಂಕಿನ ಬಹುತೇಕ ಆದೇಶಗಳನ್ನು ಜಾರಿಗೊಳಿಸಿವೆ.

ಸಂಸತ್ತಿನ ಮೇಲ್ಮನೆಯಲ್ಲಿ ಮತ ವಿಭಜನೆಗೂ ಅವಕಾಶ ನೀಡದೆ ಮೂರು ಕೃಷಿ ಕಾಯ್ದೆಗಳನ್ನು ಅನುಮೋದಿಸುವ ಮೂಲಕ ಅಳಿದುಳಿದ ವಿಶ್ವಬ್ಯಾಂಕ್ ಆದೇಶಗಳನ್ನು ಪೂರ್ತಿಯಾಗಿ ಜಾರಿಗೊಳಿಸಲು ಯತ್ನಿಸಲಾಗಿದೆ. ಈ ಸಾಮ್ರಾಜ್ಯಶಾಹಿ ಯೋಜನೆಗೆ ಅಕ್ಷರಶಃ ಸಂಸದೀಯ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ರೈತ ಮುಷ್ಕರ ಮತ್ತು ಪ್ರತಿರೋಧ ಒಂದು ಪ್ರಬಲ ಆಂದೋಲನವಾಗಿ ರೂಪುಗೊಳ್ಳುತ್ತಿದೆ. ಹಾಗಾಗಿಯೇ ಕೃಷಿ ಮಸೂದೆಯ ಸಮರ್ಥಕರು ಭಾರತದಲ್ಲಿ ಪ್ರಜಾಪ್ರಭುತ್ವ ಅತಿಯಾಯಿತು ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಕೃಷಿ ಕುರಿತ ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯುಟಿಒ) ಒಪ್ಪಂದ

1995ರಲ್ಲಿ ಸಹಿ ಮಾಡಲಾದ ಡಬ್ಲ್ಯುಟಿಒ ಕೃಷಿ ಒಪ್ಪಂದದಲ್ಲೂ ಸಹ ಇದೇ ರೀತಿಯ ವಿಶ್ವಬ್ಯಾಂಕ್ ಯೋಜನೆಗಳಿದ್ದು ಇದು ವಿವಿಧ ದೇಶಗಳನ್ನು ಬಂಧಿಸಿತ್ತು. ಈಗ ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳು ತಾವು ಒಪ್ಪಿಕೊಂಡ ಷರತ್ತುಗಳನ್ನು ಕಾರ್ಯಗತಗೊಳಿಸಲು ಬದ್ಧರಾಗಿರುವುದು ಕಡ್ಡಾಯವಾಗಿದ್ದು ನ್ಯಾಯಯುತವಾದ ಮಾರುಕಟ್ಟೆ ಪ್ರೇರಿತ ಕೃಷಿ ವ್ಯಾಪಾರ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ. ಇದಕ್ಕೆ ಪೂರಕವಾಗಿ ಕೃಷಿ ಬೆಂಬಲ ಮತ್ತು ರಕ್ಷಣಾ ನೀತಿಯನ್ನು ಪರಿಷ್ಕರಿಸಿ ಸರ್ಕಾರಗಳು ತಮ್ಮ ರಕ್ಷಣಾ ನೀತಿಯಿಂದ ಹಿಂದೆ ಸರಿಯುವುದು ಕಡ್ಡಾಯವಾಗಿರುತ್ತದೆ. ಈ ಧ್ಯೇಯವನ್ನು ಸಾಧಿಸಲು ಡಬ್ಲ್ಯುಟಿಒ, ಜಾಗತಿಕ ಕೃಷಿ ಮಾರುಕಟ್ಟೆಯಲ್ಲಿರುವ ನಿರ್ಬಂಧಗಳನ್ನು ಮತ್ತು ವ್ಯತ್ಯಯಗಳನ್ನು ಸರಿಪಡಿಸಿ ತಡೆಗಟ್ಟುವ ನೆಪ ಒಡ್ಡಿದೆ. ಇದರರ್ಥ ಸಹಾಯಧನ ಪದ್ಧತಿಯನ್ನು ಕೊನೆಗೊಳಿಸಿ ಬಡ ರಾಷ್ಟ್ರಗಳಲ್ಲಿ ರೈತರಿಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆದು ಶ್ರೀಮಂತ ರಾಷ್ಟ್ರಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಯಲ್ಲಿ ಸುರಿಯುವುದೇ ಆಗಿದೆ. ಇದು ಒಂದು ರೀತಿಯ ನವ ವಸಾಹತುಶಾಹಿ ಎಂದೂ ಹೇಳಬಹುದು.

ಕೃಷಿ ಒಡಂಬಡಿಕೆಯ ಅನುಸಾರ ಸದಸ್ಯ ರಾಷ್ಟ್ರಗಳು ಸ್ಥಳೀಯ ಕೃಷಿ ಉತ್ಪಾದಕರಿಗೆ ನೀಡುವ ಬೆಂಬಲವನ್ನು ನಿರ್ಬಂಧಿಸಬೇಕಾಗುತ್ತದೆ. ರಫ್ತು ಸಹಾಯಧನವನ್ನು ನಿರ್ಬಂಧಿಸಬೇಕಾಗುತ್ತದೆ. ಆಮದು ಸುಂಕವನ್ನು ಕಡಿಮೆ ಮಾಡಬೇಕಾಗುತ್ತದೆ. ಆಹಾರ ಭದ್ರತೆಯ ಯೋಜನೆಯಡಿ ಸಾರ್ವಜನಿಕ ದಾಸ್ತಾನುಗಳನ್ನು ನಿರ್ಬಂಧಿಸಬೇಕಾಗುತ್ತದೆ. ಹೀಗೆ ನಿರ್ಬಂಧಿಸಿದಲ್ಲಿ ಭಾರತದಲ್ಲಿ ಭಾರತೀಯ ಆಹಾರ ನಿಗಮವನ್ನು ಮುಚ್ಚುವುದೇ ಅಲ್ಲದೆ, ಶೋಷಿತ ಪ್ರಜೆಗಳ ಮತ್ತು ಸಮುದಾಯಗಳ ಆಹಾರ ಭದ್ರತೆಗಾಗಿ ಆಹಾರ ಧಾನ್ಯಗಳ ಸಂಗ್ರಹಣೆ ಮಾಡುವುದನ್ನೂ ಸ್ಥಗಿತಗೊಳಿಸಬೇಕಾಗುತ್ತದೆ. ಈ ಒಡಂಬಡಿಕೆಯೇ ಬೆಳೆ ವಿಮೆಯನ್ನೂ ಸಹ ಖಾಸಗಿ ಕಂಪನಿಗಳಿಗೇ ನೀಡುವಂತೆ ಒತ್ತಡ ಹೇರಿರುವುದಲ್ಲದೆ, ಕೃಷಿ ಕ್ಷೇತ್ರದ ಮೂಲ ಸೌಕರ್ಯಗಳ ಅಭಿವೃದ್ಧಿಯ ಕ್ರಮಗಳಿಗೂ ಅಡ್ಡಗಾಲು ಹಾಕಿದೆ. ಮೂರು ಹೊಸ ಕೃಷಿ ಕಾಯ್ದೆಗಳು, ಭಾರತ ಕೃಷಿ ಒಡಂಬಡಿಕೆಯ ಮೂಲಕ ಡಬ್ಲ್ಯುಟಿಒಗೆ ನೀಡಿದ ಆಶ್ವಾಸನೆಯನ್ನು ಪೂರೈಸುವ ಮಾರ್ಗವಾಗಿದೆ.

20ನೆಯ ಶತಮಾನದ ಪೂರ್ವಾರ್ಧದಲ್ಲಿ ಆಹಾರ ಉತ್ಪಾದನೆಯ ಕೊರತೆಯೇ ಪ್ರಾಥಮಿಕ ಕಾಳಜಿಯಾಗಿತ್ತು. ಇದೇ ಅವಧಿಯಲ್ಲಿ ಸಾಮ್ರಾಜ್ಯಶಾಹಿಯ ಆಕ್ರಮಣಕಾರಿ ನೀತಿಯೂ ತೀವ್ರವಾಗಿದ್ದು ಎರಡು ಮಹಾಯುದ್ಧಗಳ ಹಿನ್ನೆಲೆಯಲ್ಲಿ ಜಾಗತಿಕ ಪುನರ್ ಸಮೀಕರಣದ ಪ್ರಕ್ರಿಯೆ ಜಾರಿಯಲ್ಲಿತ್ತು. ಕಳೆದ ಶತಮಾನದ ಉತ್ತರಾರ್ಧದಲ್ಲಿ ಆಹಾರ ಉತ್ಪಾದನೆ ವಿಶ್ವಾದ್ಯಂತ ಹೆಚ್ಚಾಗುವುದರಲ್ಲಿ ತಂತ್ರಜ್ಞಾನದ ಮುನ್ನಡೆಯೂ ಸಹಕಾರಿಯಾಗಿತ್ತು. ರೈತರಿಗೆ ಸಹಾಯಧನ ಮತ್ತು ಬೆಂಬಲ ನೀಡುವ ನೀತಿಗಳಿಗೆ, ಕೃಷಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ವಿವಿಧ ರಾಷ್ಟ್ರಗಳು ಹಲವು ನೀತಿಗಳನ್ನು ಜಾರಿಗೊಳಿಸಿದ್ದವು. ಇದು ಆಹಾರ ಸರಬರಾಜನ್ನು ಸಮರ್ಪಕವಾಗಿ ಪೂರೈಸುವುದರಲ್ಲಿ ಸಹಾಯಕವಾಗಿತ್ತು.

ಸ್ವಾತಂತ್ರ್ಯ ಪಡೆದ ನಂತರದಲ್ಲಿ ಭಾರತ ಆಹಾರ ಭದ್ರತೆಯನ್ನು ಸಾಧಿಸಲು, ಭೂ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿ, ಕೃಷಿ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ದಿಟ್ಟ ಕ್ರಮಗಳನ್ನು ಕೈಗೊಂಡಿತ್ತು. ಭೂ ಸುಧಾರಣೆಯ ಕಾರ್ಯಸೂಚಿಯು ಇನ್ನೂ ಅಪೂರ್ಣವಾಗಿಯೇ ಉಳಿದಿದ್ದು, ಇಂದಿಗೂ ಸಹ ಗ್ರಾಮೀಣ ಅಭಿವೃದ್ಧಿಗೆ ಈ ವೈಫಲ್ಯವೇ ತೊಡಕಾಗಿ ಪರಿಣಮಿಸಿದೆ. ಪಂಜಾಬ್, ಹರ್ಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ಹಲವು ಪ್ರಾಂತ್ಯಗಳಲ್ಲಿ ಭೂ ಸುಧಾರಣೆಯ ಕ್ರಮಗಳು ಯಶಸ್ಸು ಕಂಡಿದ್ದವು. ತತ್ಪರಿಣಾಮ ನಂತರದ ವರ್ಷಗಳಲ್ಲಿ ಈ ಪ್ರಾಂತ್ಯಗಳಲ್ಲಿಯೇ ಹಸಿರು ಕ್ರಾಂತಿಯೂ ( ಕೃಷಿ ಕ್ಷೇತ್ರದ ಬಂಡವಾಳಶಾಹಿ ಅಭಿವೃದ್ಧಿ) ಯಶಸ್ವಿಯಾಗಿತ್ತು.

ಹಸಿರು ಕ್ರಾಂತಿ ಮತ್ತು ಅನುಸರಿಸದೆ ಹೋದ ಮಾರ್ಗ

ಬೆಳೆಗಳ ವಿಭಿನ್ನತೆ ಮತ್ತು ಹವಾಮಾನದ ನೆಲೆಯಲ್ಲಿ ನೋಡುವುದಾದರೆ ಭಾರತದ ಕೃಷಿ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ವೈವಿಧ್ಯತೆಯನ್ನು ಗುರುತಿಸಬಹುದು. ಭಾರತದಲ್ಲಿ ಕೃಷಿ ವಿವಿಧ ಪ್ರಾಂತೀಯ ಸಂಪ್ರದಾಯಗಳಿಗೆ, ಸಂಸ್ಕøತಿಗಳಿಗೆ ಮತ್ತು ತಾಂತ್ರಿಕತೆಗಳಿಗೆ ಅನುಗುಣವಾಗಿ ಬೆಳೆದುಬಂದಿದೆ. 1960ರ ದಶಕದಲ್ಲಿ ಅಮೆರಿಕದಿಂದ ಆಮದು ಮಾಡಿಕೊಳ್ಳಲಾದ ಅಧಿಕ ಇಳುವರಿಯ ತಳಿಗಳನ್ನು ಬಳಸುವುದು ವಿಜ್ಞಾನಿಗಳ ಮುಂದಿನ ಏಕೈಕ ಆಯ್ಕೆಯೇನೂ ಆಗಿರಲಿಲ್ಲ. ಭಾರತದ ರಾಜಕೀಯ ಆಡಳಿತ ವ್ಯವಸ್ಥೆ, ಅಧಿಕಾರಶಾಹಿ ಮತ್ತು ಕೃಷಿ ವಿಜ್ಞಾನಿಗಳ ಒಂದು ಸಮೂಹ ಈ ಆಮದು ಮಾಡಿಕೊಂಡ ಹಸಿರು ಕ್ರಾಂತಿಯ ತಂತ್ರಜ್ಞಾನವನ್ನು ಪ್ರೋತ್ಸಾಹಿಸಿದ್ದರು. ಇದರಲ್ಲಿ ಮುಖ್ಯವಾಗಿ ಅಧಿಕ ಇಳುವರಿಯ ಬೀಜಗಳನ್ನು ಆಮದು ಮಾಡಿಕೊಂಡು, ಅಭಿವೃದ್ಧಿಪಡಿಸುವುದು ಮುಖ್ಯ ಅಂಶವಾಗಿತ್ತು. ಈ ಬೀಜ ತಳಿಗಳನ್ನು ಬಳಸಿದಲ್ಲಿ ಅಪಾರ ಪ್ರಮಾಣದ ಕೀಟನಾಶಕ, ರಸಗೊಬ್ಬರ, ನೀರಾವರಿ ಮತ್ತಿತರ ಸಾಧನಗಳನ್ನು ಬಳಸುವುದು ಅನಿವಾರ್ಯವಾಗಿತ್ತು. ಏಕೆಂದರೆ ಈ ಬೀಜ ತಳಿಗಳು ಅಲ್ಲಿನ ಸ್ಥಳೀಯ ಹವಾಮಾನದಲ್ಲಿ ತಯಾರಿಸಿದ್ದುದರಿಂದ ಭಾರತದ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಮಾಡಲು ಇದು ಅವಶ್ಯವಾಗಿತ್ತು. ಹಾಗಾಗಿ, ಈ ತಂತ್ರಜ್ಞಾನದ ಆಮದು, ಹೆಚ್ಚಾದ ಸಾಧನ ಸಲಕರಣೆಗಳ ವೆಚ್ಚ ಕೃಷಿ ಉತ್ಪಾದನೆಯನ್ನು ಬಾಧಿಸಿತ್ತು. ಇದು ಕೃಷಿ ಕ್ಷೇತ್ರದಲ್ಲಿ ಬೃಹತ್ ಕಾರ್ಪೋರೇಷನ್‍ಗಳ ಪ್ರವೇಶಕ್ಕೆ ನಾಂದಿಯಾಯಿತು.

ವಿಶ್ವಮಾನ್ಯ ಅಕ್ಕಿ ಬೆಳೆಯ ವಿಜ್ಞಾನಿ ಮತ್ತು ಕೇಂದ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆಗಿದ್ದ ಡಾ ಆರ್ ಹೆಚ್ ರಿಚಾರಿಯಾ ಭಾರತೀಯ ವಿಜ್ಞಾನಿಗಳ ನಿಲುವನ್ನು ವಿರೋಧಿಸುವ ಮೂಲಕ ತಮ್ಮ ಹುದ್ದೆಗೇ ಸಂಚಕಾರ ಉಂಟಾಗುವ ಅಪಾಯ ಎದುರಿಸಿದ್ದರು. ಭಾರತದಲ್ಲೇ ಲಭ್ಯವಿದ್ದ ವೈವಿಧ್ಯಮಯ ತಳಿಗಳಲ್ಲಿ ಅಧಿಕ ಇಳುವರಿಯ ಬೀಜಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸೂಚಿಸಿದ್ದ ಡಾ ರಿಚಾರಿಯಾ, ಈ ತಳಿಗಳಿಗೆ ಕಡಿಮೆ ಪ್ರಮಾಣದ ರಾಸಾಯನಿಕ ಗೊಬ್ಬರ ಬೇಕಾಗುವುದೆಂದೂ, ರೋಗಗಳು, ಬರಗಾಲ, ಕೀಟಬಾಧೆಗಳನ್ನು ತಡೆದುಕೊಳ್ಳುವ ಪ್ರತಿರೋಧಕ ಶಕ್ತಿ ಇರುತ್ತದೆ ಎಂದೂ ವಾದಿಸಿದ್ದರು. ಇದರಿಂದ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಗಳಿತ್ತು. ಪಂಜಾಬ್‍ನಲ್ಲಿ ನಂತರದ ವರ್ಷಗಳಲ್ಲಿ ಅಂತರ್ಜಲದಲ್ಲಿನ ಕೀಟನಾಶಕ ಅಂಶಗಳ ಪರಿಣಾಮ ವ್ಯಾಪಕವಾಗಿ ಸಾಂಕ್ರಾಮಿಕದಂತೆ ಹರಡಿದ ಕ್ಯಾನ್ಸರ್ ಸಮಸ್ಯೆಯಿಂದಲೂ ಮುಕ್ತವಾಗಬಹುದಿತ್ತು.

ಛತ್ತಿಸ್ ಘಡದಲ್ಲಿ ( ಆಗ ಮಧ್ಯಪ್ರದೇಶದ ಭಾಗವಾಗಿತ್ತು) ಸಹಜವಾಗಿ ಬೆಳೆಯುತ್ತಿದ್ದ ಅಕ್ಕಿಯ ಮಾದರಿಯಿಂದ ವಂಶವಾಹಿ ಕೋಶವನ್ನು ಡಾ ರಿಚಾರಿಯಾ ಸಿದ್ಧಪಡಿಸಿದ್ದರು. ಈ ವಂಶವಾಹಿ ಕೋಶವು ಆಮದು ಮಾಡಿಕೊಳ್ಳಲಾಗುತ್ತಿದ್ದ ತಳಿಗಳಷ್ಟೇ ಅಧಿಕ ಇಳುವರಿ ತರುವಂತಹದ್ದಾಗಿದ್ದು ಹೆಚ್ಚಿನ ಸಾಧನಗಳು ಮತ್ತು ರಸಗೊಬ್ಬರವನ್ನೂ ಬಳಸುವ ಅವಶ್ಯಕತೆ ಇರಲಿಲ್ಲ. ಅಂದಿನ ಸಂದರ್ಭದಲ್ಲಿ ನಾವು ಇಂದು ಸಂಭ್ರಮಿಸುವ ಹಸಿರು ಕ್ರಾಂತಿಯ ಬದಲು ಡಾ ರಿಚಾರಿಯಾ ಕಂಡುಹಿಡಿದ ಈ ಕೃಷಿ ಅಭಿವೃದ್ಧಿ ಮಾದರಿಯನ್ನು ಅನುಸರಿಸಿದ್ದರೆ ಇಂದಿನ ಭಾರತದ ಕೃಷಿ ವ್ಯವಸ್ಥೆ ಯಾವ ಸ್ಥಿತಿಯಲ್ಲಿರುತ್ತಿತ್ತು ? ಇಂದು ನಾವು ಅಪಾರ ಪ್ರಮಾಣದ ಪರಿಸರ ವಿನಾಶವನ್ನು, ನೀರಿನ ಬಿಕ್ಕಟ್ಟನ್ನು, ರೈತರ ಸಾಲದ ಹೊರೆಯನ್ನು ಮತ್ತು ರೈತರ ಆತ್ಮಹತ್ಯೆಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮತ್ತೊಂದೆಡೆ ಗ್ರಾಮೀಣ ಜನತೆಯ ಜೀವನ ಮತ್ತು ಜೀವನೋಪಾಯದ ಮೇಲೆ ಬೃಹತ್ ಕಾರ್ಪೋರೇಟ್ ಉದ್ದಿಮೆಗಳ ಪ್ರಭಾವ ಹೆಚ್ಚಾಗುತ್ತಿರುವುದನ್ನೂ ಕಾಣುತ್ತಿದ್ದೇವೆ. ಇದು ಹಸಿರು ಕ್ರಾಂತಿಯ ನೇರ ಪರಿಣಾಮವೇ ಆಗಿದೆ.

1960ರ ದಶಕದಲ್ಲಿ ಡಾ ರಿಚಾರಿಯಾ ಹಸಿರು ಕ್ರಾಂತಿಯ ಮೂಲ ಪರಿಕಲ್ಪನೆಯನ್ನೇ ಪ್ರಶ್ನಿಸಿದ್ದರು. 1980ರ ಆರಂಭದಲ್ಲಿ ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಸಿದ ಅಕ್ಕಿ ಉತ್ಪಾದನೆಯನ್ನು ಹೆಚ್ಚಿಸುವ ತಮ್ಮ ಯೋಜನೆಯನ್ನು ಕುರಿತ ಪತ್ರವೊಂದರಲ್ಲಿ ಡಾ ರಿಚಾರಿಯಾ “ ಇಲ್ಲಿ ಉಂಟಾಗಿರುವ ಮುಖ್ಯ ತೊಡಕು ಎಂದರೆ ಅನಪೇಕ್ಷಣೀಯ ಅಕ್ಕಿಯ ಹೊಸ ಮಾದರಿಯನ್ನು ಅವಸರದಲ್ಲಿ ಪರಿಚಯಿಸಿರುವುದು. ಕುಬ್ಜ ಮಾದರಿಯ ಅಧಿಕ ಇಳುವರಿ ಮಾದರಿಯ ತಳಿಗಳನ್ನು ಆಧರಿಸಿ ನಾವು ಅನುಸರಿಸಿದ ತಂತ್ರಗಾರಿಕೆ, ಸ್ಥಳೀಯವಾಗಿ ಲಭ್ಯವಿದ್ದ ಇನ್ನೂ ಹೆಚ್ಚಿನ ಇಳುವರಿ ನೀಡಬಹುದಾಗಿದ್ದ ಮಾದರಿಗಳನ್ನೂ ಬದಿಗೆ ಸರಿಸುವಂತೆ ಮಾಡಿದ್ದವು. ಅನಿರೀಕ್ಷಿತ ಬರಗಾಲದ ಸಂದರ್ಭದಲ್ಲಿ ಈ ತಳಿಗಳ ಇಳುವರಿ ಕಡಿಮೆಯಾಗುತ್ತದೆ ಎನ್ನುವ ಅಂಶವನ್ನೂ ನಿರ್ಲಕ್ಷಿಸಿದ್ದೆವು. ಈ ತಳಿಗಳು ಶೀಘ್ರವಾಗಿ ರೋಗಗಳಿಗೆ ತುತ್ತಾಗುವುದಲ್ಲದೆ ಕೀಟಾಣುಗಳಿಂದ ಆಕ್ರಮಣಕ್ಕೊಳಗಾಗುತ್ತವೆ. ಇದನ್ನು ಸುಲಭವಾಗಿ ನಿಯಂತ್ರಿಸಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಇಳುವರಿಯೂ ಕಡಿಮೆಯಾಗುತ್ತದೆ,,,,,” ಎಂದು ಹೇಳಿದ್ದರು.

ಅಮೆರಿಕದ ತಂತ್ರಗಳಿಗೆ ಬಲಿಯಾಗಿ ಭಾರತದ ವಾಸ್ತವತೆಗಳನ್ನು ನಿರ್ಲಕ್ಷಿಸಿದ ಭಾರತದ ರಾಜಕೀಯ ಆಡಳಿತ ವ್ಯವಸ್ಥೆಯ ನೀತಿಯಿಂದಾಗಿ ಡಾ ರಿಚಾರಿಯಾ ಅವರ ಚಿಂತನೆಗಳು ಮೂಲೆಗುಂಪಾದವು. ಅವರನ್ನು ನಿರ್ಲಕ್ಷಿಸಿದ್ದಷ್ಟೇ ಅಲ್ಲದೆ, ಮೂಲೆಗುಂಪುಮಾಡಿ, ತಮ್ಮ ನೌಕರಿಯನ್ನು, ಹುದ್ದೆಯನ್ನು ಮತ್ತು ವೈಜ್ಞಾನಿಕ ಸಾಧನೆಗಳನ್ನು ಉಳಿಸಿಕೊಳ್ಳಲು ಸುದೀರ್ಘ ಕಾಲ ಕಾನೂನು ಹೋರಾಟ ಮಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಇಂದು ನಾವು ಸಾವಯವ ಕೃಷಿ ಮತ್ತು ಸಾವಯವ ಆಹಾರದ ಬಗ್ಗೆ ಮಾತನಾಡುತ್ತಿದ್ದೇವೆ. ಇಂದಿಗೂ ಸಹ ಭಾರತ ತನ್ನ ನೀತಿಯನ್ನು ಪರಿಷ್ಕರಿಸಿ, ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಮಾದರಿಯನ್ನು ಅನುಸರಿಸಲು ಅವಕಾಶಗಳು ವಿಪುಲವಾಗಿವೆ.

ಭಾರತದ ಕೃಷಿ ಕ್ಷೇತ್ರ ಹಲವು ದಶಕಗಳಿಂದ ಜಡಸ್ಥಿತಿಯನ್ನು ಎದುರಿಸುತ್ತಿದೆ. ಡಬ್ಲ್ಯುಟಿಒ ಆದೇಶಗಳು ಮತ್ತು ನವ ಉದಾರವಾದಿ ಪುನರ್ ರಚನೆಯ ಪರಿಣಾಮ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. 1991ರ ಇದೇ ಒಡಂಬಡಿಕೆಯಲ್ಲಿ “ ಹಸಿರು ಕ್ರಾಂತಿಯ ತಂತ್ರಜ್ಞಾನದ ಮೂಲಕ ಸಾಧಿಸಿದ ಬೆಳವಣಿಗೆಯ ಮಿತಿಯನ್ನು ಈಗಾಗಲೇ ತಲುಪಲಾಗಿದ್ದು, ಸದ್ಯದಲ್ಲಿ ಯಾವುದೇ ಹೊಸ ತಂತ್ರಜ್ಞಾನಗಳು ಲಭ್ಯವಿಲ್ಲ ” ಎಂದು ಹೇಳಲಾಗಿತ್ತು. ಹಸಿರು ಕ್ರಾಂತಿಯ ತಂತ್ರಜ್ಞಾನದಲ್ಲಿ ಅಂತರ್ಗತವಾಗಿದ್ದ ದೌರ್ಬಲ್ಯ ಮತ್ತು ಕೊರತೆಗಳನ್ನು ಪರಿಷ್ಕರಿಸಿ, ಸರಿಪಡಿಸುವ ಬದಲು ಈಗ ಹಸಿರು ಕ್ರಾಂತಿಯ ಎರಡನೆ ಪಾಳಿಯತ್ತ ಮುನ್ನಡೆಯಲಾಗುತ್ತಿದೆ. ಇದು ಸಾಮ್ರಾಜ್ಯಶಾಹಿ ಬಂಡವಾಳಕ್ಕೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಆಡಳಿತ ನೀತಿಯಷ್ಟೇ ಆಗಿದ್ದು ಇದರಿಂದ ರೈತರು ತಮ್ಮ ಭೂಮಿಯಿಂದ ಇನ್ನೂ ಹೆಚ್ಚು ಪ್ರತ್ಯೇಕಿಸಲ್ಪಡುತ್ತಾರೆ ಮತ್ತು ಒಂದು ವೃತ್ತಿಯಾಗಿ ಕೃಷಿಯಿಂದ ದೂರವಾಗುತ್ತಾರೆ. ಇದು ಭಾರತೀಯ ರೈತರ ದೃಷ್ಟಿಯಿಂದ ಒಪ್ಪುವಂತಹ ನೀತಿಯಲ್ಲ.

ಕೃಷಿ ಮತ್ತು ವ್ಯವಸಾಯದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭೂ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಈ ಅಪೂರ್ಣ ಕಾರ್ಯಸೂಚಿ ಇಂದು ನೆನೆಗುದಿಗೆ ಬಿದ್ದಿದ್ದು, ಭೂ ಸುಧಾರಣಾ ಕ್ರಮಗಳಿಂದ ಸಾಧಿಸಲಾದುದನ್ನೂ ಈಗ ಹಿಂಪಡೆಯಲಾಗುತ್ತಿದೆ. ಭೂ ಸ್ವಾಧೀನ ನೀತಿಗಳು, ಭೂ ಕ್ರೋಢೀಕರಣದ ಆಡಳಿತ ನೀತಿಗಳು, ಕೃಷಿ ಕ್ಷೇತ್ರವನ್ನು ಬಲಪಡಿಸುವ ಮಾರ್ಗಗಳು ಎಂದು ಹೇಳಲಾಗುವುದಾದರೂ, ಇದು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ತಮ್ಮ ಭೂಮಿಯಿಂದ ಒಕ್ಕಲೆಬ್ಬಿಸುವ ತಂತ್ರಗಾರಿಕೆಯಷ್ಟೇ ಆಗಿದೆ. ಮೂರು ಕೃಷಿ ಕಾಯ್ದೆಗಳು ಈ ಕ್ರಿಯೆಯನ್ನು ತೀವ್ರಗೊಳಿಸುತ್ತವೆ.

ಕೃಷಿ ಮೂಲ ಸೌಕರ್ಯಗಳಲ್ಲಿ ಮತ್ತು ರಸ್ತೆ, ಸಂಗ್ರಹ ಸಾಮಥ್ರ್ಯ, ನೀರಾವರಿ, ವಿದ್ಯುತ್ ಸರಬರಾಜು ಹೆಚ್ಚಳದಲ್ಲಿ ಹೆಚ್ಚು ವೆಚ್ಚ ಮಾಡಲು ರೈತರು ಸತತವಾಗಿ ಆಗ್ರಹಿಸುತ್ತಲೇ ಇದ್ದಾರೆ. ಇದರ ಮೂಲಕವೇ ದೇಶದ ಗ್ರಾಮೀಣ ಆರ್ಥಿಕತೆಯ ತಳಪಾಯವನ್ನು ಭದ್ರಪಡಿಸಿ, ದೇಶದ ಆಹಾರ ಸಾರ್ವಭೌಮತ್ವವನ್ನು ಕಾಪಾಡಲು ಸಾಧ್ಯವಾಗುತ್ತದೆ. ಈ ಬೇಡಿಕೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಈಗ ಇಡೀ ಕೃಷಿ ಮೂಲ ಸೌಕರ್ಯಗಳನ್ನು ಖಾಸಗಿ ಕ್ಷೇತ್ರದವರಿಗೆ ಒಪ್ಪಿಸುವ ಸಿದ್ಧತೆಗಳು ಭರದಿಂದ ನಡೆದಿವೆ.

ಆಳುವ ವರ್ಗಗಳನ್ನು ಪ್ರತಿನಿಧಿಸುವ ಪಕ್ಷಗಳು ಮತ್ತು ನರೇಂದ್ರಮೋದಿ ಸರ್ಕಾರದ ಸೈದ್ಧಾಂತಿಕ ಬೆಂಬಲಿಗರು ಹಾಗೂ ಸಮರ್ಥಕರು ಆರೋಪಿಸುವಂತೆ ಸಹಾಯಧನ ಎಂದರೆ ಉಚಿತವಾಗಿ ನೀಡುವ ಸವಲತ್ತು ಅಲ್ಲ. ಸಹಾಯಧನ ಎಂದರೆ ದೇಶದ ಸಂಪನ್ಮೂಲಗಳನ್ನು ಅತ್ಯಂತ ಅರ್ಹ ಕ್ಷೇತ್ರದಲ್ಲಿ ಸದ್ವಿನಿಯೋಗ ಮಾಡುವ ಒಂದು ಸಾಧನವಾಗಿದ್ದು ಇದರಿಂದಲೇ ದೇಶದ ಸಮಾಜೋ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ದೇಶಕ್ಕೂ ತನ್ನದೇ ಆದಂತಹ ತಂತ್ರಗಾರಿಕೆಯನ್ನು ಅಳವಡಿಸುವ ಹಕ್ಕು ಇರುತ್ತದೆ. ಏಕಸ್ವಾಮ್ಯ ಬಂಡವಾಳಿಗರಿಗೆ ಮುಕ್ತ ಅವಕಾಶ ನೀಡುವ ಸಲುವಾಗಿ ನಾವು ಎಪಿಎಂಸಿ ಮತ್ತಿತರ ಸಾಧನಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಅವಶ್ಯಕತೆ ಇಲ್ಲ.. ಬದಲಾಗಿ, ನಾವು ರೈತ ಸಂಘಟನೆಗಳು ಬಹಳ ವರ್ಷಗಳಿಂದ ಆಗ್ರಹಿಸುತ್ತಿರುವಂತೆ ಈಗ ಅನುಸರಿಸುತ್ತಿರುವ ತಂತ್ರಗಾರಿಕೆಗಳನ್ನೇ ಬಲಪಡಿಸಿ, ಉತ್ತಮ ಸಾಲ ಸೌಲಭ್ಯಗಳನ್ನು ರೂಪಿಸುವತ್ತ ಯೋಚಿಸಬೇಕಾಗಿದೆ. ಇದು ಸಾಧ್ಯವಾಗದಿರುವುದರಿಂದಲೇ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮರ್ಪಕವಾಗಿ ಆಹಾರ ಒದಗಿಸುವಷ್ಟು ಕೃಷಿ ಉತ್ಪನ್ನಗಳನ್ನು ಭಾರತೀಯ ರೈತರು ಇಂದು ಉತ್ಪಾದಿಸುತ್ತಿದ್ದಾರೆ. ದುರಂತ ಎಂದರೆ ಎಲ್ಲ ಪ್ರಜೆಗಳೂ ಪೌಷ್ಟಿಕತೆಯನ್ನು ಹೊಂದಿಲ್ಲ, ಅಗತ್ಯವಿದ್ದಷ್ಟು ಆಹಾರವನ್ನೂ ಸೇವಿಸುತ್ತಿಲ್ಲ. ಏಕೆಂದರೆ ರೈತರು ಬೆಳೆಯುವ ಆಹಾರ ಪದಾರ್ಥಗಳು ಆರ್ಥಿಕ ಅಸಮಾನತೆಯ ಕಾರಣ ಪ್ರಜೆಗಳನ್ನು ತಲುಪುತ್ತಿಲ್ಲ. ಇದು ಏರುತ್ತಿರುವ ಬಡತನದ ಪ್ರಮಾಣದಲ್ಲಿ ಬಿಂಬಿತವಾಗುತ್ತದೆ. ಈ ವಿದ್ಯಮಾನ ಮೋದಿ ಆಡಳಿತದಲ್ಲಿ ಇನ್ನೂ ಗಂಭೀರ ಪರಿಸ್ಥಿತಿ ತಲುಪಿದೆ. ನಮ್ಮ ರೈತರನ್ನು ಇನ್ನೂ ಹೆಚ್ಚಿನ ಅಪಾಯದಂಚಿಗೆ ದೂಡುವ ಆಡಳಿತ ನೀತಿಗಳ ಚೌಕಟ್ಟನ್ನು ಧಿಕ್ಕರಿಸುವ ಮೂಲಕ ನಾವು ದೇಶದ ಆಹಾರ ಸಾರ್ವಭೌಮತ್ವವನ್ನು ಸಾಧಿಸುವತ್ತ ಮುನ್ನಡೆಯಬೇಕಿದೆ. ಸಮಸ್ತ ಪ್ರಜೆಗಳಿಗೂ ಅವರ ಮೂಲ ಭೂತ ಹಕ್ಕುಗಳು ಲಭ್ಯವಿರುವಂತೆ, ಅವಶ್ಯಕ ಆಹಾರವೂ ತಲುಪುವಂತಹ ಸನ್ನಿವೇಶವನ್ನು ನಾವು ಸೃಷ್ಟಿಸಬೇಕಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ನಿರ್ಲಕ್ಷಿಸಿ ಸಡಿಲಗೊಳಿಸಿರುವುದು, ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಕಡಿತಗೊಳಿಸಿರುವುದು ಹಾಗೂ ಭಾರತೀಯ ಆಹಾರ ನಿಗಮಕ್ಕೆ ನೀಡುವ ಹಣಕಾಸು ನಿಧಿಯನ್ನು ಕಡಿಮೆ ಮಾಡಿರುವುದು ಪರಸ್ಪರ ಸಂಬಂಧವಿಲ್ಲದ ಪ್ರಕ್ರಿಯೆಗಳಲ್ಲ. ಇವೆಲ್ಲವೂ ಒಂದೇ ಯೋಜನೆಯ ಅಂಶಗಳಾಗಿದ್ದು ಬೃಹತ್ ರೈತ ಮುಷ್ಕರವು ಈ ನೀತಿಗಳ ವಿರುದ್ಧವೇ ನಡೆಯುತ್ತಿದೆ.

ಅಭಿವೃದ್ಧಿ ಹೊಂದಿದ ದೇಶಗಳು ತಮ್ಮಲ್ಲಿ ಬೆಳೆಯುವ ಹೆಚ್ಚುವರಿ ಆಹಾರ ಧಾನ್ಯಗಳನ್ನು ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಸುರಿಯಲು ಡಬ್ಲ್ಯುಟಿಒ ಮೂಲಕ ಪಿತೂರಿ ನಡೆಸುತ್ತಿವೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರವೂ ಸಹ ಡಬ್ಲ್ಯುಟಿಒ ನಿಯಮಗಳ ಅನುಸಾರವಾಗಿಯೇ ನಡೆಯುತ್ತಿದ್ದು ಸಾಮ್ರಾಜ್ಯಶಾಹಿಗಳ ಆಜ್ಞಾಪನೆಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಡಬ್ಲ್ಯುಟಿಒ ನೀತಿಗಳಿಂದ ದೇಶದ ಪ್ರಜೆಗಳ ಮೇಲೆ ಉಂಟಾಗುವ ಭೀಕರ ಪರಿಣಾಮಗಳ ವಿರುದ್ಧ ದೇಶದ ಸಮಸ್ತ ರೈತರು, ಕಾರ್ಮಿಕರು ಮತ್ತಿತರ ದುಡಿಯುವ ವರ್ಗಗಳು ಉಗ್ರ ಹೋರಾಟವನ್ನು ನಡೆಸುತ್ತಿದ್ದು ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ನಾವು ಡಬ್ಲ್ಯುಟಿಒ ನೀತಿಗಳ ವಿರುದ್ಧ ದನಿ ಎತ್ತಬೇಕಿದೆ. ಈ ಮೂರು ಹೊಸ ಕೃಷಿ ಮಸೂದೆಗಳು ಅಮೆರಿಕದ ತಂತ್ರಗಾರಿಕೆಯ ಒಂದು ಭಾಗವಾಗಿದ್ದು ಇದರ ಮೂಲಕ ಭಾರತೀಯ ರೈತರು ಆಹಾರ ಧಾನ್ಯಗಳಂತಹ ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟು ವಾಣಿಜ್ಯ ಬೆಳೆಗಳತ್ತ ಗಮನ ಹರಿಸುವಂತೆ ಮಾಡಲಾಗುತ್ತಿದೆ. ಎಥನಾಲ್ ಉತ್ಪಾದನೆಗೆ ಅಗತ್ಯವಾದ ಜೋಳ ಬೆಳೆಯಲು ಪ್ರೇರೇಪಿಸಲಾಗುತ್ತಿದೆ. ಇದು ನಮ್ಮ ಆಹಾರ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಮೇಲಿನ ನೇರ ಪ್ರಹಾರವಾಗಿದ್ದು, ಈ ಆಕ್ರಮಣದ ವಿರುದ್ಧ ನಾವೆಲ್ಲರೂ ರೈತರೊಡನೆ ನಿಂತು ದೆಹಲಿಯಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಬೇಕಾಗಿದೆ.

ಸಂಜಯ್ ಶರ್ಮ (ಲಿಬರೇಷನ್ ಪತ್ರಿಕೆ-ಸಿಪಿಐಎಂಎಲ್ ಮುಖವಾಣಿ)

ಅನುವಾದ : ನಾ ದಿವಾಕರ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com