ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಭಾರತಕ್ಕೆ ಹೊಸದೇ?

ಬುದ್ಧಿ ಜೀವಿಗಳ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಈ ದಿನಗಳಲ್ಲಿ ಅಂತರರಾಷ್ಟ್ರೀಯವಾಗಿ ಚರ್ಚೆ ನಡೆಯುತ್ತಿದೆ. ಆದರೆ ಕ್ರೈಮ್ ಇನ್ ಇಂಡಿಯಾ ವರದಿಯಲ್ಲಿನ ಸರ್ಕಾರದ ಮಾಹಿತಿಯು 99.5% ಬಂಧಿತರು ಅರೆ ಸಾಕ್ಷರರು ಮತ್ತು ಹಿಂದುಳಿದ ಸಮುದಾಯಗಳಿಂದ ಬಂದವರು ಎಂದು ತಿಳಿಸುತ್ತದೆ
ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಭಾರತಕ್ಕೆ ಹೊಸದೇ?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 ರ ಪ್ರಕಾರ ಹೈದರಾಬಾದ್‌ನಲ್ಲಿ ಕಾರ್ಬನ್ ಫೋನ್ ಕಳ್ಳತನ ಮಾಡಿದ್ದಕ್ಕಾಗಿ ಬೇಕರಿ ಕೆಲಸಗಾರ ಅನ್ವರ್ ಅಲಿ ಎಂಬವರನ್ನು ಬಂಧಿಸಲಾಗಿದೆ. ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ 1986 (ಪಿಡಿ ಕಾಯ್ದೆ) ಅಡಿಯಲ್ಲಿಯೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಸಣ್ಣ ಅಪರಾಧಕ್ಕಾಗಿ ವಿಚಾರಣೆಯಿಲ್ಲದೆ ಸರ್ಕಾರವು ಒಂದು ವರ್ಷದವರೆಗೆ ಅವರನ್ನು ಜೈಲಿನಲ್ಲಿರಿಸಿದೆ ಎಂದು 'ದಿ ವೈರ್' ವರದಿ ಮಾಡಿದೆ.

ತೆಲಂಗಾಣ ಪಿಡಿ ಕಾಯ್ದೆ 2019 ರಂತಹ ಒಂಬತ್ತು ಪ್ರಿವೆಂಷನ್ ಕಾನೂನುಗಳ ಅಡಿಯಲ್ಲಿ ಬಂಧನಕ್ಕೊಳಗಾದ 1,06,612 ಭಾರತೀಯರಲ್ಲಿ ಅಲಿ ಒಬ್ಬರು. ಗುಜರಾತ್‌ನಲ್ಲಿ 2,601 ಜನರನ್ನು, ತಮಿಳುನಾಡಿನಲ್ಲಿ 1,883 ಜನರನ್ನು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಈ‌ ಕಾಯ್ದೆಯನ್ವಯ 600 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪೈಕಿ 489 ಜನರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ 1980ರಡಿಯಲ್ಲಿ ಬಂಧಿಸಲಾಗಿದೆ. ಮತ್ತು ಉಳಿದ ಪ್ರಕಣಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಬೆದರಿಕೆಯ ಆಧಾರದ ಮೇಲೆ ಬಂಧಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬುದ್ಧಿ ಜೀವಿಗಳ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಈ ದಿನಗಳಲ್ಲಿ ಅಂತರರಾಷ್ಟ್ರೀಯವಾಗಿ ಚರ್ಚೆ ನಡೆಯುತ್ತಿದೆ. ಆದರೆ ಕ್ರೈಮ್ ಇನ್ ಇಂಡಿಯಾ ವರದಿಯಲ್ಲಿನ ಸರ್ಕಾರದ ಮಾಹಿತಿಯು 99.5% ಬಂಧಿತರು ಅರೆ ಸಾಕ್ಷರರು ಮತ್ತು ಹಿಂದುಳಿದ ಸಮುದಾಯಗಳಿಂದ ಬಂದವರು ಎಂದು ತಿಳಿಸುತ್ತದೆ. ಅವರು ಮಾಧ್ಯಮಗಳ ಗಮನ ತಮ್ಮತ್ತ ಸೆಳೆಯುವಷ್ಟು ಪ್ರಬಲರಲ್ಲ. ಹಾಗಾಗಿ ಈ ಬಂಧನಗಳು ಸುದ್ದಿಯಾಗುವುದೇ ಇಲ್ಲ. ‘ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಬೆದರಿಕೆ’ ಎಂಬ ಕಾನೂನು ವರ್ಗ ಪಕ್ಷಪಾತದ ಸ್ಪಷ್ಟ ನಿದರ್ಶನದಂತೆ ಕಂಡುಬರುತ್ತದೆ.

ಎನ್‌ಎಸ್ಎಯಂತಹ ಕಾನೂನುಗಳನ್ನು ದೇಶದ 19 ರಾಜ್ಯಗಳು ಅನುಷ್ಠಾನಕ್ಕೆ ತಂದಿವೆ. ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಬೆದರಿಕೆ ಎಂದು ಹೇಳಿಕೊಳ್ಳುವ ಈ ಕಾನೂನುಗಳು ಸಾಮಾನ್ಯ ಅಪರಾಧಗಳನ್ನು ಅಸಾಮಾನ್ಯವೆಂದೇ ಪರಿಗಣಿಸುತ್ತವೆ. ಇದು ಸಾರ್ವಜನಿಕರಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತದೆ. ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಈ ಕಾನೂನು ಪೊಲೀಸ್ ಆಯುಕ್ತರಿಗೆ ಮ್ಯಾಜಿಸ್ಟ್ರೀರಿಯಲ್ ಅಧಿಕಾರ ನೀಡಲಾಗಿದ್ದು ಯಾರನ್ನೇ ಆದರೂ‌ ಮೂರು ತಿಂಗಳುಗಳ ಕಾಲ ಬಂಧನದಲ್ಲಿರಿಸಲು ಅನುಮತಿ ನೀಡುತ್ತದೆ.

ತೆಲಂಗಾಣ ರಾಜ್ಯವು ಕಳೆದ ಆರು ವರ್ಷಗಳಲ್ಲಿ ಎಂಟು ಪೊಲೀಸ್ ಆಯುಕ್ತರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಿದೆ. ಈ ಆಯುಕ್ತರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನು ಮಾಧ್ಯಮಗಳು ಪ್ರತಿ ವಾರ ವರದಿ ಮಾಡುತ್ತವೆ. ಕಳೆದ ಆರು ವರ್ಷಗಳಲ್ಲಿ, ಪಿಡಿ ಕಾಯ್ದೆಯಡಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ತೆಲಂಗಾಣವು 2,000 ಕ್ಕೂ ಹೆಚ್ಚು ನಾಗರಿಕರನ್ನು ವಿಚಾರಣೆಯಿಲ್ಲದೆ ಬಂಧಿಸಿದೆ.

ಅಲಿಯವರನ್ನು ಬಂಧಿಸಿರುವ ಪೊಲೀಸರು "ಗೂಂಡಾ ಮತ್ತು ಕ್ರಿಮಿನಲ್ ಗ್ಯಾಂಗ್‌ನ ನಾಯಕ / ಸದಸ್ಯನಾಗಿ ವರ್ತಿಸುವ ಮೂಲಕ ಮತ್ತು ಕಳ್ಳತನ, ದರೋಡೆ ಮತ್ತು ಮನೆ ಕಳ್ಳತನದಂತಹ ಅಪರಾಧಗಳನ್ನು ಮಾಡುವ ಮೂಲಕ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಹೇಳಿರುವ ಪೊಲೀಸರು ಮಾಂಸ ವ್ಯಾಪಾರದಲ್ಲಿ ಬಂಧಿತರಾಗಿರುವ ತ್ರಿದೀಪ್ ಸರ್ಕಾರ್ ಎನ್ನುವವರ ಮೇಲೆ "ಅವರ ಅನೈತಿಕ ಚಟುವಟಿಕೆಗಳು ಕುಟುಂಬ ವ್ಯವಸ್ಥೆಗೆ ಅಪಾಯಕಾರಿ, ಸ್ಥಳೀಯ ನಿವಾಸಿಗಳಿಗೆ ಹಾನಿಕಾರಕ ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತವೆ, ಲೈಂಗಿಕವಾಗಿ ಹರಡುವ ರೋಗಗಳನ್ನು ಹರಡುತ್ತವೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ; ಯುವಕರ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ" ಎಂದು ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಲವು ಸಲ ಸಾರ್ವಜನಿಕ ಆಕ್ರೋಶವನ್ನು ತಣಿಸಲು ಪೊಲೀಸರು ಆಪಾದಿತರನ್ನು ಬಂಧಿಸುತ್ತಾರೆ. ಬಂಧಿತರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಸರಿಯಾದ ಅವಕಾಶವೇ ಸಿಗುವುದಿಲ್ಲ ಎನ್ನುತ್ತಾರೆ. ಕಾನೂನಿನಂತೆಯೇ ಪ್ರಕ್ರಿಯೆಗಳು ನಡೆದರೆ ಮೇಲಿನ ಯಾವ ಪ್ರಕರಣಗಳೂ ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಕ್ಕೆ ಸೇರಿರುವ ಇಂತಹ ಆರೋಪಿಗಳಿಗೆ ಕಾನೂನಿನ ಸಮರ್ಪಕ ನೆರವು ಸಿಗುವುದು ದೂರದ ಮಾತು.

ಭಾರತದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಆದರೆ ಅಲಿ, ತ್ರಿದೀಪ್‌ರಂತಹ ಸಾಮಾನ್ಯ ಅಪರಾಧಿಗಳನ್ನು ದೊಡ್ಡ ಮಟ್ಟದ ಅಪರಾಧದ ಕಾನೂನಿನಡಿ ಬಂಧಿಸುವುದು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇದು ಹಠಾತ್ತನೆ ಆದ ಬದಲಾವಣೆಯಲ್ಲ. ಸರ್ಕಾರಗಳು ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗುತ್ತಿರುವುದನ್ನು ಗುರುತಿಸಲಾಗದಂತೆ ಕಾರ್ಯನಿರ್ವಹಿಸುತ್ತಿದ್ದವು.

ನಾಗರಿಕ ಸಮಾಜದ ಒಂದು ವರ್ಗವು ಈಗಲೂ ಈ ಬಂಧನಗಳಿಗೆ ಸಮಜಾಯಿಷಿ ನೀಡುತ್ತವೆ. ಈ ಬಂಧನಗಳಲ್ಲಿನ ವರ್ಗ ತಾರತಮ್ಯವನ್ನು ಗುರುತಿಸಲು ಮತ್ತು ಒಪ್ಪಿಕೊಳ್ಳಲು ಬುದ್ಧಿ ಜೀವಿಗಳೂ ನಿರಾಕರಿಸುತ್ತಾರೆ. ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಚರ್ಚೆ ಕೇವಲ ಕೆಲವೇ ಕೆಲವಷ್ಟಿರುವ ಉನ್ನತ ವರ್ಗದ ಬುದ್ಧಿ ಜೀವಿಗಳ ಸುತ್ತ ಮಾತ್ರ ಸುತ್ತುವಂತಹ ಪರಿಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಲಾಗಿದೆ. ಈ‌ ಮನೋಭಾವವು ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ನಿಯಮವನ್ನೇ ದುರ್ಬಲಗೊಳಿಸುವಂತಿದೆ ಮತ್ತು ಕೆಳವರ್ಗದ ವೈಯಕ್ತಿಕ ಸ್ವಾತಂತ್ರದ ಮೇಲಿನ ದಾಳಿಯನ್ನು ಮೌನವಾಗಿ ಸಮರ್ಥಿಸುವಂತಿದೆ.

ಮೂಲ: ದಿ ವೈರ್
ಅನುವಾದ: ಫಾತಿಮಾ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com