ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟ ಮುಂದೆ ಹೇಗೆ? ಎಲ್ಲಿಯವರೆಗೆ?

ಚಕ್ಕಾ ಜಾಮ್ ಶಾಂತವಾಗಿ, ಯಶಸ್ವಿಯಾಗಿ ನಡೆಯುತ್ತಿದ್ದಂತೆ ದೆಹಲಿ ಗಾಜಿಯಾಬಾದ್ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಜಾಗಕ್ಕೆ ಬಂದ ರಾಕೇಶ್ ಟಿಕಾಯತ್, 'ಕೇಂದ್ರ ಸರ್ಕಾರ ತಾನು ತಂದಿರುವ ಮೂರು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು. ಅಲ್ಲಿಯವರೆಗೂ ರೈತರು ವಿರಮಿಸುವ ಪ್ರಶ್ನೇಯೇ ಇಲ್ಲ, ಎಂದಿದ್ದಾರೆ
ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟ ಮುಂದೆ ಹೇಗೆ? ಎಲ್ಲಿಯವರೆಗೆ?

ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಮೂರು ಕೃಷಿ ಕಾನೂನುಗಳು ನಮಗೆ ಬಿಲ್ ಕುಲ್ ಬೇಡ, ಈ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು ಎಂದು ರೈತರು ಪ್ರತಿಭಟನೆ ಆರಂಭಿಸಿ 72 ದಿನ ಉರುಳಿವೆ. 72 ದಿನಗಳ ನಡುವೆ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ 11 ಸುತ್ತಿನ ಮಾತುಕತೆ ನಡೆದಿದೆ. ರೈತರು ದೆಹಲಿ ಚಲೊ, ರೈಲ್ ರೋಖೊ, ಟೋಲ್ ಜಾಮ್, ಉಪವಾಸ ಸತ್ಯಾಗ್ರಹ, ರಿಲೇ ಉಪವಾಸ ಪ್ರತಿಭಟನೆ, ಮಾಲ್ ಗಳ ಮುತ್ತಿಗೆಯೂ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ಜನವರಿ 26ರಂದು ಗಣರಾಜ್ಯೋತ್ಸವದ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯನ್ನೂ ನಡೆಸಿದ್ದಾರೆ‌.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕೆಲವರು (ಉದಾಹರಣೆಗೆ ದೀಪ್ ಸಿಧು) ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಸೇರಿಕೊಂಡು ಶಾಂತಯುತವಾಗಿ ಮತ್ತು ಈ ತಲೆಮಾರು ಕಂಡುಕೇಳರಿಯದಂಥ ಅಭೂತಪೂರ್ವ ಹೋರಾಟವನ್ನು ಹಳಿ ತಪ್ಪಿಸುವ ಕೆಲಸ ಮಾಡಿದ್ದರು. ಎಲ್ಲದರಲ್ಲೂ ‌ದೇಶಪ್ರೇಮವನ್ನು ಎಳೆತಂದು ಜನರ ಭಾವನೆಗಳನ್ನು ಕೆದಕಿ‌‌ ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರಲ್ಲಿ‌ ನಿಸ್ಸೀಮರಾಗಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಗಣರಾಜ್ಯೋತ್ಸವದ ದಿನ ನಡೆದ ಕಹಿ ಘಟನೆಯನ್ನೇ ನೆಪ ಮಾಡಿಕೊಂಡು ರೈತರ ಪ್ರತಿಭಟನೆಯ ಕತ್ತು‌ ಹಿಸುಕಲು ಮುಂದಾಗಿದ್ದರು. ದೆಹಲಿ ಗಡಿಗಳಿಂದ ಪ್ರತಿಭಟನಾ ನಿರತ ರೈತರನ್ನು ತೆರವುಗೊಳಿಸುವ ಕುತಂತ್ರ ಹೂಡಿದ್ದರು. ಅದಕ್ಕಾಗಿ ಸ್ಥಳೀಯರ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರೇ ರೈತರ ಮೇಲೆ ಕಲ್ಲು ತೂರಿದರು. ಇದೆಲ್ಲದರ ಪರಿಣಾಮ ರೈತರ ಪ್ರತಿಭಟನೆಯ ಕತೆ ಮುಗಿದೇ ಹೋಯಿತು ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಷ್ಟರಲ್ಲಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಭಾಷಣ ರೈತರಲ್ಲಿ‌ ಹೊಸ ಕೆಚ್ಚು ಮೂಡಿಸಿತು. ಮತ್ತೆ ರೈತರ ಪ್ರತಿಭಟನೆ ಹರಳುಗಟ್ಟತೊಡಗಿತು. ಇದೇ ವೇಳೆ ದೆಹಲಿ‌ಗೆ ಹತ್ತಿರ ಇರುವ ಕಾರಣಕ್ಕೆ ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಾಗಿ ಪ್ರತಿಭಟನೆ ನಡೆಸುತ್ತಿರುವುದನ್ನು ತಿರುಚುತ್ತಿರುವ 'ಘನ ಮಾಧ್ಯಮ', 'ಇದು ಪಂಜಾಬ್ ಮತ್ತು ಹರಿಯಾಣದ ರೈತರು ನಡೆಸುತ್ತಿರುವ ಹೋರಾಟ' ಎಂದು ಬಿಂಬಿಸುತ್ತಾ ದೇಶದ ಇತರೆ ಭಾಗದ ರೈತರಿಂದ ಅವರನ್ನು ವಿಂಗಡಿಸುವ ಕುತಂತ್ರ ಮಾಡಿದವು. ಘನಮಾಧ್ಯಮಕ್ಕೆ ಬಿಜೆಪಿಯ ಕುಮ್ಮಕ್ಕಿದೆ ಎಂಬುದನ್ನು ಬಿಡಿಸಿ‌ ಹೇಳಬೇಕಾಗಿಲ್ಲ.

ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟ ಮುಂದೆ ಹೇಗೆ? ಎಲ್ಲಿಯವರೆಗೆ?
ಕೃಷಿ ಕಾನೂನು ರದ್ದಾಗುವವರೆಗೂ ಮನೆಗೆ ಹಿಂದಿರುಗುವುದಿಲ್ಲ –ರಾಕೇಶ್ ಟಿಕಾಯತ್

ಇದೇ ಕಾರಣಕ್ಕೆ ಈ ಬೃಹತ್ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ 'ಇದು ದೇಶದ ಎಲ್ಲಾ ರೈತರ ಹೋರಾಟ' ಎಂಬ ಸಂದೇಶ ರವಾನಿಸಲು ಫೆಬ್ರವರಿ 6ರಂದು ದೇಶಾದ್ಯಂತ ಚಕ್ಕಾ ಜಾಮ್ (ಹೆದ್ದಾರಿ ತಡೆ) ಹೋರಾಟಕ್ಕೆ ಕರೆ ನೀಡಿತ್ತು. ಈಗ ಚಕ್ಕಾ ಜಾಮ್ ಯಶಸ್ವಿಯಾಗಿ ನಡೆದಿದೆ. ಸಂಯುಕ್ತ ಕಿಸಾನ್ ಮೋರ್ಚಾ 'ಶಾಂತಯುತವಾಗಿ ಚಕ್ಕಾ ಜಾಮ್ ನಡೆಸಬೇಕು' ಎಂಬುದಾಗಿಯೂ ಮನವಿ ಮಾಡಿತ್ತು. ಅದರಂತೆ ಶಾಂತಯುತವಾಗಿ ಕೂಡ ನಡೆದಿದೆ. ಜೊತೆಗೆ 'ಮುಂದೇನು?' ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಚಕ್ಕಾ ಜಾಮ್ ಶಾಂತವಾಗಿ, ಯಶಸ್ವಿಯಾಗಿ ನಡೆಯುತ್ತಿದ್ದಂತೆ ದೆಹಲಿ ಗಾಜಿಯಾಬಾದ್ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಜಾಗಕ್ಕೆ ಬಂದ ರಾಕೇಶ್ ಟಿಕಾಯತ್, 'ಕೇಂದ್ರ ಸರ್ಕಾರ ತಾನು ತಂದಿರುವ ಮೂರು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು. ಅಲ್ಲಿಯವರೆಗೂ ರೈತರು ವಿರಮಿಸುವ ಪ್ರಶ್ನೇಯೇ ಇಲ್ಲ. ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ಅಕ್ಟೋಬರ್ ‌ 2ರವರೆಗೂ ಕೇಂದ್ರ ಸರ್ಕಾರಕ್ಕೆ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಗಡುವು ನೀಡಿದೆ. ಅಷ್ಟರೊಳಗೆ ಕೃಷಿ ಕಾನೂನುಗಳನ್ನು ವಾಪಸ್ ಪಡೆಯದಿದ್ದರೆ ಇಡೀ‌ ದೇಶಾದ್ಯಂತ 40 ಲಕ್ಷ ಟ್ರ್ಯಾಕ್ಟರ್ ಸೇರಿಸಿ ದೇಶಾದ್ಯಂತ ಮೆರವಣಿಗೆ ಮಾಡಲಾಗುವುದು, ದೇಶಾದ್ಯಂತ ಯಾತ್ರೆ ಮಾಡಲಾಗುವುದು' ಎಂದು ಹೇಳಿದರು.

ರಾಕೇಶ್ ಟಿಕಾಯತ್ ಅವರ ಮಾತಿಗೆ ಜೈಕಾರದ ಅನುಮೋದನೆ ದೊರಕಿತು. ಆದರೆ ಟಿಕಾಯತ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅಕ್ಟೋಬರ್ 2ರವರೆಗೆ ಪ್ರತಿಭಟನೆ ಸಾಗಬೇಕಾದ ಹಾದಿಯ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಇನ್ಮೇಲೆ ರೈತರು ಕೂಡ ಶಿಫ್ಟ್ ವೈಸ್ ಪ್ರತಿಭಟನೆ ಮಾಡಬೇಕು.‌ ಅಂದರೆ ರೈತರು ಸ್ವಲ್ಪ ಜನ‌ ಇಲ್ಲಿ ಪ್ರತಿಭಟನೆ ಮಾಡಬೇಕು.‌ ಇನ್ನು ಕೆಲವರು ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿ ಬದುಕನ್ನು ನೋಡಿಕೊಳ್ಳಬೇಕು.‌ ದೆಹಲಿ ದೊರೆಗಳಿಗೆ ಬಿಸಿ ಮುಟ್ಟಿಸುವ ದೃಷ್ಟಿಯಿಂದ ಇಲ್ಲಿ, ಪ್ರತಿಭಟನಾ ಜಾಗದಲ್ಲಿ ಜನ‌‌ ಕಮ್ಮಿಯೂ ಆಗಬಾರದು, ಜಾಸ್ತಿಯೂ ಆಗಬಾರದು. 'ನ ಮಂಚ್ ಬದಲೇಗಾ, ನ ಪಂಚ್ ಬದಲೇಗಾ...' ಎಂದರು. ಈ ಹೋರಾಟದಲ್ಲಿ ನಾವು ಗೆಲ್ಲಲೇ ಬೇಕು. ಈ ನಿರ್ಣಾಯಕ ಯುದ್ಧದಲ್ಲಿ 'ಹಮೀ ಕಿಸಾನ್ ಹೈ, ಹಮೀ‌ ಜವಾನ್ ಹೈ...' ಎಂದರು.

ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟ ಮುಂದೆ ಹೇಗೆ? ಎಲ್ಲಿಯವರೆಗೆ?
ವಿವಾದಿತ ಮಸೂದೆಗಳಲ್ಲಿ ನಿಜಕ್ಕೂ ಏನಿದೆ? ವಿರೋಧ, ಸಮರ್ಥನೆಯ ನೆಲೆ ಏನು?

ಹೀಗೆ ಮಾತುಗಳು ಮಿಂಚಿನ ಸ್ವರೂಪ ಪಡೆದುಕೊಂಡಿದ್ದವು. ರಾಕೇಶ್ ಟಿಕಾಯತ್ 'ಈ‌ ದೇಶ ವ್ಯಾಪರಿಗಳದ್ದಲ್ಲ, ರೈತರದ್ದು' ಎಂದು ಘರ್ಜಿಸಿದರು. 'ಕಾನ್ ಕೋಲ್ಕೆ ಸುನ್ಲೇ ಸರ್ಕಾರ್' ಎಂದು ಅಬ್ಬರಿಸಿದರು. ನಾವು ರೈತರು ಗೆಲ್ಲುವವರೆಗೆ ಮನೆಗೆ ಹೋಗಲ್ಲ. ನೀವು ನಮ್ಮ ಪಾಲಿಗೆ ಮರಣಶಾಸನವಾಗಿರುವ ಕರಾಳ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು ಎಂದು ಹಕ್ಕೊತ್ತಾಯ ಮಾಡಿದರು. 'ಗರ್ ವಾಪ್ಸಿ ನಹಿ ಹೋಗಾ, ಬಿಲ್ ವಾಪ್ಸಿ ಕರೋ' ಎಂದರು. 'ನೀವಷ್ಟೇಯಲ್ಲ, ನಾವು ಕೂಡ ಕಾನೂನು ಪುಸ್ತಕ ಓದಿದ್ದೇವೆ ತಿಳಿದುಕೊಳ್ಳಿ' ಎಂದು ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯನ್ನೂ ನೀಡಿದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com