ಪ್ರತಿರೋಧ ದಮನಿಸಲು ಕರಾಳ ಶಾಸನಗಳನ್ನು ಬಳಸುವ ಸರ್ಕಾರಗಳು ತಮ್ಮ ನೈತಿಕತೆಯನ್ನೂ ಕಳೆದುಕೊಳ್ಳುತ್ತವೆ

ಒಂದು ಆಡಳಿತ ವ್ಯವಸ್ಥೆ, ಪ್ರಜಾಸತ್ತಾತ್ಮಕ ಸಂವಿಧಾನದ ಚೌಕಟ್ಟಿನಲ್ಲೇ ಇನ್ನೆಷ್ಟು ಕ್ರೌರ್ಯ ಪ್ರದರ್ಶಿಸಬಹುದು ಎನ್ನುವುದಕ್ಕೆ ಭಾರತದ ಆಡಳಿತ ವ್ಯವಸ್ಥೆ ದೆಹಲಿಯ ಗಡಿಯಲ್ಲಿ ಪ್ರಾತ್ಯಕ್ಷಿಕೆಯನ್ನೇ ನೀಡಿದೆ.
ಪ್ರತಿರೋಧ ದಮನಿಸಲು ಕರಾಳ ಶಾಸನಗಳನ್ನು ಬಳಸುವ ಸರ್ಕಾರಗಳು ತಮ್ಮ ನೈತಿಕತೆಯನ್ನೂ ಕಳೆದುಕೊಳ್ಳುತ್ತವೆ

ಒಂದು ಜನಾಂದೋಲನವನ್ನು ಬಲಪ್ರಯೋಗದ ಮೂಲಕವೇ ಹತ್ತಿಕ್ಕಬಹುದು ಎಂಬ ನಿರಂಕುಶ ಅಧಿಕಾರದ ದರ್ಪ ಶಾಶ್ವತವಾಗಿರುವುದಿಲ್ಲ. ಎಂತಹ ಅಲೆಕ್ಸಾಂಡರನಿಗೂ ಇತಿಹಾಸ ಮಣ್ಣು ಮುಕ್ಕಿಸಿಬಿಡುತ್ತದೆ. ಇದು ಇತಿಹಾಸ ಕಲಿಸಿರುವ, ನಾವು ಚರಿತ್ರೆಯಿಂದ ಕಲಿಯಬೇಕಾದ ಪಾಠ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಳುವ ವರ್ಗ ಎಷ್ಟೇ ಪ್ರಬಲವಾಗಿದ್ದರೂ, ಜನಾಂದೋಲನದ ರಭಸಕ್ಕೆ ಕೊಚ್ಚಿ ಹೋಗುತ್ತದೆ. ಇದನ್ನೂ ಇತಿಹಾಸ ತೋರಿಸಿಕೊಟ್ಟಿದೆ. ಭಾರತದಲ್ಲೇ ತುರ್ತುಪರಿಸ್ಥಿತಿಯ ಚಿತ್ರಣ ನಮ್ಮ ಕಣ್ಣೆದುರು ಇನ್ನೂ ಹಸಿರಾಗಿದೆ. ಈ ತುರ್ತುಪರಿಸ್ಥಿತಿ ಭಾರತದಲ್ಲಿ ಪ್ರಜಾತಂತ್ರವಾದಿಗಳನ್ನು ಸೃಷ್ಟಿಸಬೇಕಿತ್ತು. ದುರಂತ, ಅಂದು ಕಣ್ತೆರೆದ ಕೂಸುಗಳು ಇಂದು ಪ್ರಜಾತಂತ್ರದ ಕತ್ತು ಹಿಸುಕುವ ಕೀಚಕರಂತೆ ನಮ್ಮೆದುರು ನಿಂತಿದ್ದಾರೆ. ಇದು ಇತಿಹಾಸದ ವಿಡಂಬನೆಯೂ ಹೌದು, ಸಮಕಾಲೀನ ವಿಕೃತಿಯೂ ಹೌದು.

ಒಂದು ಆಡಳಿತ ವ್ಯವಸ್ಥೆ, ಪ್ರಜಾಸತ್ತಾತ್ಮಕ ಸಂವಿಧಾನದ ಚೌಕಟ್ಟಿನಲ್ಲೇ ಇನ್ನೆಷ್ಟು ಕ್ರೌರ್ಯ ಪ್ರದರ್ಶಿಸಬಹುದು ಎನ್ನುವುದಕ್ಕೆ ಭಾರತದ ಆಡಳಿತ ವ್ಯವಸ್ಥೆ ದೆಹಲಿಯ ಗಡಿಯಲ್ಲಿ ಪ್ರಾತ್ಯಕ್ಷಿಕೆಯನ್ನೇ ನೀಡಿದೆ. ಲಕ್ಷಾಂತರ ಜನರು ಮುಷ್ಕರನಿರತರಾಗಿರುವ ಪ್ರದೇಶಕ್ಕೆ ನೀರು ಸರಬರಾಜು ನಿಲ್ಲಿಸುವುದು, ಅಂತರ್ಜಾಲ ಸಂಪರ್ಕ ಕಡಿತಗೊಳಿಸುವುದು, ಶೌಚಾಲಯಗಳನ್ನು ಧ್ವಂಸ ಮಾಡುವುದು ಇದು ಒಂದು ನಾಗರಿಕ ಸಮಾಜವನ್ನು ನಾಚಿ ತಲೆತಗ್ಗಿಸುವಂತೆ ಮಾಡುವ ಕ್ರಮಗಳು. ಇಂತಹ ಕ್ರೌರ್ಯ ನಿರಂಕುಶ ಸರ್ವಾಧಿಕಾರಿಗಳನ್ನೂ ನಾಚಿಸುತ್ತದೆ. ಶಾಂತಿಯುತ ಮುಷ್ಕರ ನಡೆಸುತ್ತಿರುವ ರೈತರ ಮೇಲೆ ಅಶ್ರುವಾಯು ಪ್ರಯೋಗಿಸುವುದು, ಸೆಕ್ಷನ್ ೧೪೪ ಹೇರಿ ನಿಷೇಧಾಜ್ಞೆ ಹೇರುವುದು, ಕೂಡಲೇ ಜಾಗ ತೊರೆಯುವಂತೆ ಪೊಲೀಸ್ ದಬ್ಬಾಳಿಕೆಯ ಮೂಲಕ ಒತ್ತಡ ಹೇರುವುದು ಇದು ಒಂದು ಅನಾಗರಿಕ ಸಮಾಜದಲ್ಲಿ ಮಾತ್ರವೇ ಸಾಧ್ಯ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯಲ್ಲಿ ಜನವರಿ ೨೬ರಂದು ನಡೆದ ಅಹಿತಕರ ಘಟನೆಗಳೇ ಆಳುವ ವರ್ಗಗಳ ಹೊಲಸು ರಾಜಕಾರಣವನ್ನು ಬಯಲು ಮಾಡಿವೆ. ಶಾಂತಿಯುತ ಹೋರಾಟದಲ್ಲಿ ಒಡಕುಂಟು ಮಾಡಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಮೂಲಕ ಹೋರಾಟಗಾರರನ್ನು ಮಣಿಸುವ ತಂತ್ರ ಅಸಾಂವಿಧಾನಿಕವಷ್ಟೇ ಅಲ್ಲ ಅನಾಗರಿಕವೂ ಹೌದು, ಅಸಹ್ಯಕರವೂ ಹೌದು. ಇಂತಹ ಅಮಾನುಷ ಧೋರಣೆ ಮಾನವ ಸಂವೇದನೆ ಇರುವ ಯಾವುದೇ ಸಮಾಜಕ್ಕೂ ಶೋಭೆ ತರುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಅತಿ ಹೆಚ್ಚು ದುರ್ಬಳಕೆಯಾಗಿರುವ ದೇಶದ್ರೋಹ ಕಾಯ್ದೆಯನ್ನು ರೈತ ನಾಯಕರ ವಿರುದ್ಧವೂ ಬಳಸಲಾಗಿದೆ , ನೈಜ ಘಟನೆಗಳನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧವೂ ಬಳಸಲಾಗಿದೆ. ರೈತರ ಪರ ಇರುವ ವಿಶ್ಲೇಷಕರೂ ಸರ್ಕಾರದ ದೃಷ್ಟಿಯಲ್ಲಿ ದೇಶದ್ರೋಹಿಗಳೇ ಆಗಿದ್ದಾರೆ. ಇವರುಗಳ ವಿರುದ್ಧ ಯುಎಪಿಎ ಕರಾಳ ಶಾಸನ ಬಳಸಿ ಎಫ್ ಐ ಆರ್ ದಾಖಲಿಸಲಾಗಿದೆ.

ಸಂವಿಧಾನಬದ್ಧವಾಗಿ ನಾವೇ ರೂಪಿಸಿರುವ ಕಾಯ್ದೆ ಕಾನೂನುಗಳಿಗೆ ನಾವೇ ಅಪಮಾನ ಮಾಡುತ್ತಿದ್ದೇವೆ ಎಂಬ ಪರಿಜ್ಞಾನ ಆಳುವವರಿಗೆ ಇರಬೇಕು. ಕಳೆದ ಆರು ವರ್ಷಗಳಲ್ಲಿ ದೇಶ, ದೇಶದ್ರೋಹ, ದೇಶಭಕ್ತಿ, ಎಫ್ ಐ ಆರ್, ಈ ಎಲ್ಲ ಪದಗಳು ಅರ್ಥಹೀನವಾಗುವಷ್ಟು ಮಟ್ಟಿಗೆ ದುರುಪಯೋಗಕ್ಕೊಳಗಾಗಿವೆ. ಪ್ರತಿರೋಧದ ಜನಧ್ವನಿಯನ್ನು ದಮನಿಸಲು ಕರಾಳ ಶಾಸನಗಳನ್ನು ಬಳಸುವ ಮೂಲಕ ಚುನಾಯಿತ ಸರ್ಕಾರಗಳು ತಮ್ಮ ಸಾಂವಿಧಾನಿಕ ಕರ್ತವ್ಯದಿಂದ ವಿಮುಖವಾಗುತ್ತಿರುವುದೇ ಅಲ್ಲದೆ ತಮ್ಮ ನೈತಿಕತೆಯನ್ನೂ ಕಳೆದುಕೊಳ್ಳುತ್ತಿವೆ. ಟ್ರಾಕ್ಟರ್ ಗಳಿಗೆ ಡೀಸೆಲ್ ಒದಗಿಸದೆ ಪರೇಡ್ ವಿಫಲಗೊಳಿಸಿದ ಕ್ಷುದ್ರ ಮನಸುಗಳು ಮನುಷ್ಯನಿಗೆ ಅತ್ಯವಶ್ಯವಾದ ಕುಡಿವ ನೀರನ್ನೂ ಕಸಿದುಕೊಳ್ಳುವ ಮೂಲಕ, ತಮ್ಮ ಮೃಗೀಯ ಧೋರಣೆಯನ್ನು ಪ್ರದರ್ಶಿಸಿವೆ.

ಸರ್ಕಾರದ ಈ ಮೃಗೀಯ ಕ್ರೌರ್ಯಕ್ಕೆ ಒಂದೆರಡು ಹನಿ ಕಂಬನಿ ಪ್ರತ್ಯುತ್ತರ ನೀಡಿದೆ. ಸರ್ಕಾರದ ದಮನಕಾರಿ ನೀತಿಗೆ, ಬೆದರಿಕೆ ತಂತ್ರಗಳಿಗೆ, ಹಿಂಸಾತ್ಮಕ ಪಿತೂರಿಗೆ ಒಬ್ಬ ರೈತ ನಾಯಕನ ಕಣ್ಣೀರು ಉತ್ತರ ನೀಡಿದೆ. ಈ ಕಣ್ಣೀರನ್ನು ಅಪಹಾಸ್ಯ ಮಾಡಿದ , ಮಣ್ಣು ತಿನ್ನುವ ಮಾಧ್ಯಮ ಮಿತ್ರರು ತಮ್ಮ ಘನತೆಯನ್ನು ತಾವೇ ಮಣ್ಣುಪಾಲು ಮಾಡಿಕೊಂಡಿದ್ದಾರೆ. ತಮ್ಮ ನಾಯಕನ ಕಣ್ಣೀರಿಗೆ ಸ್ಪಂದಿಸಿ ಸಹಸ್ರ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಸೇರ್ಪಡೆಯಾದ ರೈತ ಬಂಧುಗಳು ಪೊಲೀಸರನ್ನು ಹಿಮ್ಮೆಟ್ಟಿಸಿದ್ದಾರೆ. ಇದು ಒಂದು ಜನಾಂದೋಲನದ ಅಂತಃಶಕ್ತಿ. ತಮ್ಮ ಹಕ್ಕುಗಳಿಗಾಗಿ, ಅಸ್ತಿತ್ವಕ್ಕಾಗಿ, ಜೀವನೋಪಾಯದ ರಕ್ಷಣೆಗಾಗಿ ಶಾಂತಿಯುತವಾಗಿ ಹೋರಾಡುತ್ತಿರುವ ರೈತರಲ್ಲಿ ಉಗ್ರಗಾಮಿಗಳನ್ನು, ದೇಶದ್ರೋಹಿಗಳನ್ನು ಕಾಣುವ ಆಡಳಿತ ವ್ಯವಸ್ಥೆಯನ್ನು ನಿರ್ಲಜ್ಜ , ನಿರ್ದಯಿ ಎನ್ನದೆ ವಿಧಿಯಿಲ್ಲ.

ಇಷ್ಟು ವೀರೋಚಿತ ಹೋರಾಟದ ಹೊರತಾಗಿಯೂ, ಈ ರೈತ ಸಮುದಾಯವನ್ನು ದಲ್ಲಾಳಿಗಳೆಂದೋ, ವಿದೇಶೀ ಏಜೆಂಟರೆಂದೋ, ವಿಧ್ವಂಸಕ ದೇಶದ್ರೋಹಿಗಳೆಂದೋ, ಕಾಂಗ್ರೆಸ್ ಏಜೆಂಟರೆಂದೋ ಭಾವಿಸುವ ನಮ್ಮ ನಡುವಿನ ಹಿತವಲಯದ ಮಧ್ಯಮ ವರ್ಗಗಳು ತಮ್ಮ ಮನಸ್ಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ನಾಳೆ ಕಾರ್ಮಿಕರೂ ಇದೇ ಆರೋಪ ಎದುರಿಸಬೇಕಾಗುತ್ತದೆ. ಶಿಕ್ಷಕರೂ, ವೈದ್ಯರೂ, ಪತ್ರಕರ್ತರೂ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸಮೂಹ ಸನ್ನಿಗೊಳಗಾಗಿ ಆರಾಧನಾ‌ ಮನಸ್ಥಿತಿಗೆ ತಮ್ಮ ಆತ್ಮಸಾಕ್ಷಿ, ಅಂತಃಸಾಕ್ಷಿಯನ್ನೂ ಒತ್ತೆ ಇಟ್ಟಿರುವ ಈ ಬೃಹತ್ ಜನವಲಯ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಈ ದೇಶದ ರೈತರು ಭೂಮಿಗಾಗಿ ಹೋರಾಡುತ್ತಿಲ್ಲ, ಆಸ್ತಿಗಾಗಿ ಹೋರಾಡುತ್ತಿಲ್ಲ. ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಈ ಹೋರಾಟಗಾರರ ಆಶಯಗಳಿಗೆ, ಆಗ್ರಹಗಳಿಗೆ ಮನ್ನಣೆ ನೀಡಿ, ಗೌರವಯುತವಾಗಿ ನಡೆದುಕೊಳ್ಳುವುದು ನಾಗರಿಕ ಸರ್ಕಾರದ ನೈತಿಕ ಕರ್ತವ್ಯ. ಇದನ್ನು ಅರ್ಥಮಾಡಿಕೊಳ್ಳುವುದು ವಿದ್ಯಾವಂತ, ಸುಶಿಕ್ಷಿತ, "ಸುಸಂಸ್ಕೃತ" ಮಧ್ಯಮ ವರ್ಗಗಳ ನೈತಿಕ ಹೊಣೆ. ಈ ಎರಡೂ ನೆಲೆಯಲ್ಲಿ ಭಾರತದ ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವ ರೀತಿ ಘಟನೆಗಳು ಸಂಭವಿಸುತ್ತಿವೆ. ಈ ಬೌದ್ಧಿಕ ದಾರಿದ್ರ್ಯ, ಮಾನಸಿಕ ಅಸ್ವಸ್ಥತೆ, ಆಂತರಿಕ ಮಾಲಿನ್ಯ ಮತ್ತು ಭೌತಿಕ ತ್ಯಾಜ್ಯವನ್ನು ತಲೆಯ ಮೇಲೆ ಹೊತ್ತು ದೇಶ ಇಂದು ಮಹಾತ್ಮನನ್ನು ಸ್ಮರಿಸುತ್ತಿದೆ.

ಗಾಂಧಿ ಮತ್ತೊಮ್ಮೆ, ಮಗದೊಮ್ಮೆ ಹತ್ಯೆಯಾಗುತ್ತಲೇ ಇದ್ದಾರೆ. ಇಂದೂ ಸಹ ಕಗ್ಗೊಲೆಗೀಡಾಗಿದ್ದಾರೆ. ಜನವರಿ ೩೦ ರಂದು ಹುತಾತ್ಮ ದಿನ ಆಚರಿಸುತ್ತಾ, ರಾಜಘಾಟದ ಗಾಂಧಿ ಸಮಾಧಿಗೆ ಪುಷ್ಪಾರ್ಚನೆ ಮಾಡಿ ನಮಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ ಎನಿಸುವುದಿಲ್ಲವೇ ? ಜಗತ್ತು ಕಂಡ ಅಪ್ರತಿಮ ಅಹಿಂಸಾವಾದಿಗೆ ನಮಿಸುವ ಕೈಗಳು, ವಂದಿಸುವ ದೇಹ, ಆರಾಧಿಸುವ ಮನಸು, ತನ್ನೊಳಗಿನ ಮೃಗೀಯ ಕ್ರೌರ್ಯವನ್ನು ಅಂತ್ಯಗೊಳಿಸದೆ ಹೋದರೆ ಅದು ಮಹಾತ್ಮರಿಗೆ ಅಪಮಾನ ಮಾಡಿದಂತೆ ಅಲ್ಲವೇ ? ಹುತಾತ್ಮ ದಿನದಂದು ರಾಜಘಾಟದ ಸಮಾಧಿಯ ಮೇಲೆ ಇರಿಸಲಾಗುವ ಪುಷ್ಪಗುಚ್ಚದ ನಡುವೆ ಇಂದಿನ ಭಾರತದ ಕ್ರೂರ ಆಡಳಿತ ವ್ಯವಸ್ಥೆಯ ಕರಾಳ ಛಾಯೆ ಕಾಣಲೇಬೇಕಲ್ಲವೇ ? ಕಾಣದೆ ಹೋದರೆ‌ ನಮ್ಮ ಅಂತಃಸಾಕ್ಷಿ ಸತ್ತಿದೆ ಎಂದೇ ಭಾವಿಸೋಣ.

ಗಾಂಧೀಜಿ ನಮ್ಮನ್ನು ಕ್ಷಮಿಸಿಬಿಡಿ. ನಿಮಗೆ ವಂದಿಸುವ ಅರ್ಹತೆಯನ್ನು ಭಾರತ ಕಳೆದುಕೊಂಡುಬಿಟ್ಟಿದೆ. ನಿಮ್ಮಂತೆಯೇ ಈ ಮಣ್ಣಿನ ಮಕ್ಕಳು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ತಮ್ಮ ಉಳಿವಿಗಾಗಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com