ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ

ಪ್ರತಿಯೊಂದು ಕಾಲಘಟ್ಟದಲ್ಲೂ ಸಾಮಾಜಿಕ ನ್ಯಾಯಕ್ಕಾಗಿ, ಆರ್ಥಿಕ ಸಮಾನತೆಗಾಗಿ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ, ಅನ್ಯಾಯದ ವಿರುದ್ಧ, ನಿರಂಕುಶ ಅಧಿಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಲೇ ಜನಾಂದೋಲನಗಳು ನಡೆದಿರುವುದನ್ನು ಕಂಡಿದ್ದೇವೆ. ಈ ಪ್ರತಿರೋಧದ ದನಿಗಳೇ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಳಹದಿಯನ್ನು ಸುಭದ್ರವಾಗಿರಿಸಿವೆ.
ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ

ಪ್ರತಿರೋಧದ ದನಿಗೆ ಅವಕಾಶವಿಲ್ಲದ ಯಾವುದೇ ರಾಜಕೀಯ ವ್ಯವಸ್ಥೆ ಅಥವಾ ಸಮಾಜ ಶಾಂತಿಯುತವಾಗಿ ಬಾಳಲು ಸಾಧ್ಯವಿಲ್ಲ. ಹಾಗೆಯೇ ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವ ಅಥವಾ ರಾಜಕೀಯ ಅಧಿಕಾರ ಪೀಠಗಳನ್ನು ಆಕ್ರಮಿಸುವ ಆಳುವ ವರ್ಗಗಳು ಪ್ರತಿರೋಧದ ದನಿಗೆ ಕಿವಿಗೊಡದಿದ್ದರೆ ಅಂತಹ ವ್ಯವಸ್ಥೆ ಕ್ರಮೇಣ ಅರಾಜಕತೆಯತ್ತ ಸಾಗುತ್ತದೆ. ಸಾಮಾಜಿಕ ವಲಯದಲ್ಲಿ ಪ್ರತಿರೋಧಕ್ಕೆ ಅವಕಾಶವೇ ಕೊಡದ ಒಂದು ಸಮಾಜ ತನ್ನ ಅಂತಃಸತ್ವವನ್ನೇ ಕಳೆದುಕೊಂಡು ಜಡಗಟ್ಟುತ್ತದೆ. ಭಾರತೀಯ ಸಮಾಜ ತನ್ನೊಳಗಿನ ಶ್ರೇಣೀಕೃತ ಜಾತಿ ವ್ಯವಸ್ಥೆ, ಜಾತಿ ಶ್ರೇಷ್ಠತೆಯ ವ್ಯಸನ, ಜಾತಿ ಪದ್ಧತಿಯ ಅನಿಷ್ಟಗಳು, ಅಸ್ಪೃಶ್ಯತೆಯಂತಹ ಕ್ರೂರ ಮನೋಭಾವ, ಪಿತೃಪ್ರಧಾನ ಧೋರಣೆ ಇವೆಲ್ಲವನ್ನೂ ಹೊತ್ತುಕೊಂಡಿದ್ದರೂ ಇಂದಿಗೂ ಸಹ ತನ್ನ ಮೂಲ ನೆಲೆಗಳನ್ನು ಉಳಿಸಿಕೊಂಡುಬಂದಿದ್ದರೆ ಅದಕ್ಕೆ ಕಾರಣ ಈ ದೇಶದ ನೆಲದಲ್ಲಿ ಪ್ರಾಚೀನ ಕಾಲದಿಂದಲೂ ಉಗಮಿಸುತ್ತಲೇ ಇರುವ ಪ್ರತಿರೋಧದ ನೆಲೆಗಳು.

ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಭಾರತೀಯ ಸಮಾಜದಲ್ಲಿ, ಪ್ರಬಲ ಸಾಮ್ರಾಜ್ಯಗಳು ಅಧಿಪತ್ಯ ಸಾಧಿಸಿದ್ದ ಸಂದರ್ಭದಲ್ಲೂ ಸಹ ಪ್ರತಿರೋಧದ ನೆಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ. ಇಂದು ನಾವು ಪ್ರಾಚೀನ ನಿರಂಕುಶಾಧಿಕಾರದ ನೆಲೆಗಳನ್ನು ಧ್ವಂಸಗೊಳಿಸಿ ಒಂದು ಪ್ರಜಾಸತ್ತಾತ್ಮಕ ಸಮಾಜೋ ರಾಜಕೀಯ ನೆಲೆಯಲ್ಲಿ ನೆಲೆಸಿದ್ದರೆ ಅದಕ್ಕೆ ಕಾರಣವೂ ಈ ಪ್ರತಿರೋಧದ ನೆಲೆಗಳೇ ಆಗಿವೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲೂ ಡಾ ಬಿ ಆರ್ ಅಂಬೇಡ್ಕರ್ ಹಲವಾರು ಪ್ರತಿರೋಧಗಳನ್ನು ಎದುರಿಸುತ್ತಲೇ ಅಂತಿಮ ಕರಡು ಸಿದ್ಧಪಡಿಸಿದ್ದರು. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿದ್ದ ಮೇಲ್ಜಾತಿಗಳ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಲೇ, ಸಮಸಮಾಜದ ಕನಸುಗಳನ್ನು ಹೊತ್ತ ಸಮಾಜವಾದಿ, ಜಾತ್ಯತೀತ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂದು ನಾವು 21ನೆಯ ಶತಮಾನದ ಮೂರನೆಯ ದಶಕದಲ್ಲಿದ್ದೇವೆ. 73 ವರ್ಷಗಳ ಸ್ವಾತಂತ್ರ್ಯದ ಸವಿ ಅನುಭವಿಸಿದ್ದೇವೆ. 70 ವರ್ಷಗಳ ಕಾಲ ಸಂವಿಧಾನದ ಆಶಯಗಳನ್ನು ಈಡೇರಿಸುವ ಮಾರ್ಗದಲ್ಲಿ ನಡೆದುಬಂದಿದ್ದೇವೆ. ಅಂಬೇಡ್ಕರ್ ಪ್ರತಿಪಾದಿಸಿದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನೇ ಸಮಸ್ಯೆಗಳು ಎದುರಾಗಿದ್ದರೂ ಸಮರ್ಥವಾಗಿ ಪರಿಹರಿಸುತ್ತಲೇ ಭಾರತ ಒಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಏಕೆಂದರೆ ಕಾಲದಿಂದ ಕಾಲಕ್ಕೆ ಸರ್ಕಾರಗಳು ಬದಲಾಗುತ್ತಿದ್ದರೂ, ಪ್ರತಿಯೊಂದು ಕಾಲಘಟ್ಟದಲ್ಲೂ ಸಾಮಾಜಿಕ ನ್ಯಾಯಕ್ಕಾಗಿ, ಆರ್ಥಿಕ ಸಮಾನತೆಗಾಗಿ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ, ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ, ಅನ್ಯಾಯದ ವಿರುದ್ಧ, ನಿರಂಕುಶ ಅಧಿಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಲೇ ಜನಾಂದೋಲನಗಳು ನಡೆದಿರುವುದನ್ನು ಕಂಡಿದ್ದೇವೆ. ಈ ಪ್ರತಿರೋಧದ ದನಿಗಳೇ ಭಾರತದ ಪ್ರಜಾತಂತ್ರ ವ್ಯವಸ್ಥೆಯ ತಳಹದಿಯನ್ನು ಸುಭದ್ರವಾಗಿರಿಸಿವೆ.

ಆದರೆ ಇಂದು ಈ ತಳಪಾಯ ಶಿಥಿಲವಾಗುತ್ತಿದೆ. ಆಳುವ ವರ್ಗಗಳು ಮತ್ತು ಈ ವರ್ಗವನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಕ್ರಮೇಣ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸಲು ಯತ್ನಿಸುತ್ತಲೇ ಇವೆ. ಸಂವಿಧಾನದ ಚೌಕಟ್ಟಿನಲ್ಲೇ ಕಾಯ್ದೆ ಕಾನೂನುಗಳ ತಿದ್ದುಪಡಿ ಮಾಡುವ ಮೂಲಕ, ಜನಾಭಿಪ್ರಾಯವನ್ನು ಸ್ವೇಚ್ಚಾಚಾರದ ಅಧಿಕಾರಕ್ಕೆ ಪರವಾನಗಿ ಎನ್ನುವಂತೆ ಭಾವಿಸಿ, ಪ್ರಜೆಗಳ ಬದುಕಿಗೇ ಸಂಚಕಾರ ತರುವಂತಹ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕರಾಳ ಶಾಸನಗಳಿಂದ ಹಿಡಿದು, ಜನಸಾಮಾನ್ಯರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುವ ಮಸೂದೆಗಳನ್ನು, ಸಂವಿಧಾನದ ನಿಯಮಗಳನ್ನೂ ಮೀರಿ ಜಾರಿಗೊಳಿಸಲಾಗುತ್ತಿದೆ. ಇಂತಹ ಒಂದು ಪ್ರಯತ್ನವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳಲ್ಲಿ ಕಾಣಬಹುದು.

ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಭಾರತದ ಬಹುತೇಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ಆಳುವ ಪಕ್ಷದ ಬೆಂಬಲಿಗರು, ಪ್ರಜಾತಂತ್ರದ ಮೌಲ್ಯವನ್ನೇ ಅರಿಯದ ಪ್ರಜ್ಞಾವಂತ ನಾಗರಿಕರು ಮತ್ತು ಸಾಂಸ್ಕೃತಿಕ ರಾಷ್ಟ್ರೀಯವಾದದ ಹರಿಕಾರರು, ದೇಶದ ರಾಜಧಾನಿಯೊಳಗೆ ನುಗ್ಗಿ, ಪ್ರತಿಷ್ಠಿತ ಕೆಂಪುಕೋಟೆಯನ್ನು ಆಕ್ರಮಿಸಿ ಅಲ್ಲಿ ತಮ್ಮದೇ ಆದ ಧಾರ್ಮಿಕ ಧ್ವಜವನ್ನು ಹಾರಿಸುವ ಒಂದು ಗುಂಪಿನ ಪ್ರತಿರೋಧವನ್ನು, ಭಯೋತ್ಪಾದಕ ಕೃತ್ಯದಂತೆ ಬಿಂಬಿಸುತ್ತಿರುವುದು ಕಾಣುತ್ತಿದ್ದೇವೆ. ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಹುಯಿಲೆಬ್ಬಿಸುತ್ತಲೇ ಕೆಂಪುಕೋಟೆಯನ್ನು ಪ್ರವೇಶಿಸಿರುವುದೇ ರಾಷ್ಟ್ರದ್ರೋಹದ ಕೃತ್ಯ ಎನ್ನುವಂತೆ ಸುದ್ದಿಮನೆಗಳು ಬಿತ್ತರಿಸುತ್ತಿವೆ. ಈ ಘಟನೆಯ ಸತ್ಯಾಸತ್ಯತೆಗಳು ಏನೇ ಇರಲಿ, ಧ್ವಜ ನೆಟ್ಟವರು ಯಾರೇ ಇರಲಿ, ಅನ್ಯಾಯಕ್ಕೊಳಗಾದ, ನೊಂದ ಮನಸುಗಳ ಪ್ರತಿರೋಧದ ಹಿಂದೆ ಸುಪ್ತ ಆಕ್ರೋಶ ಮಡುಗಟ್ಟಿರುತ್ತದೆ ಎನ್ನುವುದನ್ನು ಈ ಘಟನೆ ನಿರೂಪಿಸುತ್ತದೆ.

ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ
ಶಾಂತಿಯುತ ಪ್ರತಿಭಟನಾಕರರ ಮೇಲೆ ಗುಂಡಿನ ದಾಳಿ ನಡೆಸಿದ ದೆಹಲಿ ಪೊಲೀಸ್: ಪ್ರತ್ಯಕ್ಷದರ್ಶಿ ಆರೋಪ

ದೆಹಲಿಯಲ್ಲಿ ನಡೆದ ಘಟನೆ ಸರಿಯೋ ತಪ್ಪೋ ಎನ್ನುವುದಕ್ಕಿಂತಲೂ, 60 ದಿನಗಳ ಕಾಲ ಅತ್ಯಂತ ಶಾಂತಿಯುತವಾಗಿ ನಡೆದ ಒಂದು ಜನಾಂದೋಲನ, 150ಕ್ಕೂ ಹೆಚ್ಚು ಸಾವುಗಳ ನಂತರವೂ ತಾಳ್ಮೆ ಸಂಯಮ ಕಳೆದುಕೊಳ್ಳದ ಒಂದು ಆಂದೋಲನ, ಪೊಲೀಸರ ಲಾಠಿ, ಜಲಫಿರಂಗಿ, ಅಶ್ರುವಾಯು ದಾಳಿಯನ್ನು ಸಹಿಸಿಕೊಂಡು ದೃಢಚಿತ್ತದಿಂದ ಮುನ್ನಡೆದ ಒಂದು ಹೋರಾಟ, ಚಳಿ ಮಳೆಯನ್ನೂ ಲೆಕ್ಕಿಸದೆ ಜನರಿಂದಲೇ ಹಣ ಸಂಗ್ರಹಿಸಿ ತನ್ನ ಸ್ವಂತಬಲದಿಂದ ಎರಡು ತಿಂಗಳ ಕಾಲ ನಡೆದ ಚಳುವಳಿ, ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಮುಷ್ಕರ ನಿರತರ ಮುನ್ನಡಿಗೆಯನ್ನು ತಡೆಗಟ್ಟಲು ಸಿಮೆಂಟ್ ಗೋಡೆಗಳನ್ನು, ಮುಳ್ಳು ತಂತಿಗಳನ್ನು, ಜೆಸಿಬಿ ಮತ್ತು ಬೃಹತ್ ಲಾರಿಗಳನ್ನು ಬಳಸಿದರೂ ಕಂಗೆಡದೆ ನಡೆದ ಹೋರಾಟ, ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಬೃಹತ್ ಕಂದಕಗಳನ್ನು ತೋಡಿ ಮುನ್ನಡಿಗೆಗೆ ಅಡ್ಡಿಪಡಿಸಿದರೂ ಧೃತಿಗೆಡದೆ ನಡೆದ ಒಂದು ಹೋರಾಟ, ಹೇಗೆ ಹಿಂಸಾತ್ಮಕವಾಗಲು ಸಾಧ್ಯ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

ನಿಗದಿತ ಮಾರ್ಗವನ್ನು ಬಿಟ್ಟು, ಒಳಮಾರ್ಗದಿಂದ ದೆಹಲಿಯನ್ನು ಪ್ರವೇಶಿಸಿ, ಪೊಲೀಸರ ಅಡ್ಡಗೋಡೆಗಳನ್ನು ದಾಟಿ ರಾಜಧಾನಿಯನ್ನು ಪ್ರವೇಶಿಸಿ ಕೆಂಪುಕೋಟೆಯ ಮೇಲೆ ನೆರೆದ ಹೋರಾಟಗಾರರೆಲ್ಲರೂ ದೇಶದ್ರೋಹಿಗಳೇನಲ್ಲ. ಅಲ್ಲಿ ಧ್ವಜ ನೆಡುವ ಮೂಲಕ ವಿವಾದ ಮತ್ತು ಗೊಂದಲ ಸೃಷ್ಟಿಸಿದ ವ್ಯಕ್ತಿಯೂ ದೇಶದ್ರೋಹಿಯೇನಲ್ಲ. ರೈತ ಮುಷ್ಕರವನ್ನು ಶಿಥಿಲಗೊಳಿಸಲೆಂದೇ, ದುರ್ಬಲಗೊಳಿಸಲೆಂದೇ ಇಂತಹ ಪಿತೂರಿಗಳನ್ನು ನಡೆಸುವ ರಾಜಕೀಯ ಶಕ್ತಿಗಳು ನಿಜವಾದ ದೇಶದ್ರೋಹಿಗಳು ಅಲ್ಲವೇ ? ಲಕ್ಷಾಂತರ ಜನರ ಪ್ರತಿಭಟನೆಯಲ್ಲಿ ಒಂದು ಸಣ್ಣ ಗುಂಪು ಈ ರೀತಿಯ ಗಲಭೆಯಲ್ಲಿ ತೊಡಗುವುದೂ ಸಹ ಘೋರ ಅಪರಾಧವೇನಲ್ಲ. ಇದು ಸಹಜ ಪ್ರಕ್ರಿಯೆ. ಏಕೆಂದರೆ ಈ ರೈತಾಪಿ ಸಮುದಾಯ ಎರಡು ತಿಂಗಳ ಕಾಲ ತಾಳ್ಮೆಯಿಂದ ನ್ಯಾಯಕ್ಕಾಗಿ ಹೋರಾಡುತ್ತಿದೆ.

ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ
ದೆಹಲಿ: ತೀವ್ರಗೊಂಡ ರೈತರ ಪ್ರತಿಭಟನೆ –ಹಲವೆಡೆ ಇಂಟರ್‌ನೆಟ್‌ ಸೇವೆ ಸ್ಥಗಿತ

ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದು ಬಿಜೆಪಿ ಕಾರ್ಯಕರ್ತ, ಬಿಜೆಪಿ ಸಂಸದ ಸನ್ನಿ ಡಯೋಲ್‍ನ ನಿಕಟವರ್ತಿ ಮತ್ತು ಕೇಂದ್ರ ನಾಯಕರಿಗೆ ಸಮೀಪವರ್ತಿಯಾದ ದೀಪ್ ಸಿಧು ಎಂದು ಇದೀಗ ಸಾಬೀತಾಗಿದೆ. ತಾನೇ ಧ್ವಜ ಹಾರಿಸಿದ್ದಾಗಿ ದೀಪ್ ಸಿಧು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆದರೆ ರಾಷ್ಟ್ರಧ್ವಜಕ್ಕೆ ಯಾವುದೇ ಅಪಮಾನವಾಗಿಲ್ಲ ಎಂದು ಸ್ಪಷ್ಟವಾಗಿದ್ದು, ಭಾರತದ ಧ್ವಜಕ್ಕಿಂತಲೂ ಕೆಳಮಟ್ಟದಲ್ಲೇ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೀಪ್ ಸಿಧು ವಿರುದ್ಧ ದೂರು ದಾಖಲಿಸದ ದೆಹಲಿ ಪೊಲೀಸರು, ಘಟನೆಗೆ ಸಂಬಂಧವೇ ಇಲ್ಲದ 22 ರೈತ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಈ ಘಟನೆಯ ಹಿಂದಿನ ಹುನ್ನಾರವನ್ನು ತಂತಾನೇ ಬಯಲು ಮಾಡುತ್ತದೆ.

ಇಲ್ಲಿ ನಮ್ಮನ್ನು ಕಾಡಬೇಕಾದ ಪ್ರಶ್ನೆ ಎಂದರೆ, ಎರಡು ತಿಂಗಳ ಕಾಲ ಶಾಂತಿಯುತ ಮುಷ್ಕರ ನಡೆಸಿರುವ 540ಕ್ಕೂ ಹೆಚ್ಚು ರೈತ ಸಂಘಟನೆಗಳು ಗಣರಾಜ್ಯೋತ್ಸವದ ದಿನದಂದೇ ದೆಹಲಿಯಲ್ಲಿ ಎರಡು ಲಕ್ಷ ಟ್ರಾಕ್ಟರ್‍ಗಳ ಪರೇಡ್ ನಡೆಸಲು ತೀರ್ಮಾನಿಸಿದ್ದು ಏಕೆ ? ರೈತರ ಬೇಡಿಕೆ ಮೊದಲನೆ ದಿನದಿಂದಲೂ ಒಂದೇ ಆಗಿದೆ, ಮೂರೂ ಕೃಷಿ ಮಸೂದೆಗಳನ್ನು ಹಿಂಪಡೆಯುವುದು. ಇದರ ಹೊರತಾಗಿ ಮತ್ತಾವುದೇ ರಾಜೀಸೂತ್ರಕ್ಕೆ ತಾವು ಸಿದ್ಧರಾಗಿಲ್ಲ ಎಂದು ರೈತ ಸಂಘಟನೆಗಳು ಸ್ಪಷ್ಟಪಡಿಸುತ್ತಲೇ ಇವೆ. ಕೇಂದ್ರ ಸರ್ಕಾರ ಈ ಬೇಡಿಕೆಗಳಿಗೆ ಮಾತುಕತೆಗಳ ಪ್ರಸ್ತಾವದ ಮೂಲಕ ಸ್ಪಂದಿಸಿದೆಯೇ ಹೊರತು, ಮಾನವೀಯ ಸ್ಪಂದನೆಯನ್ನು ತೋರಿಯೇ ಇಲ್ಲ. 150ಕ್ಕೂ ಹೆಚ್ಚು ರೈತರ ಸಾವಿಗೆ ಒಂದು ಅನುಕಂಪದ ಮಾತನ್ನೂ ಆಡದ ಬೌದ್ಧಿಕ ನಿಷ್ಕ್ರಿಯತೆ ಮತ್ತು ಕ್ರೌರ್ಯವನ್ನು ನಾವು ಕಂಡಿದ್ದೇವೆ. ಇದು ಸಹಜವಾಗಿಯೇ ಮುಷ್ಕರ ನಿರತರಲ್ಲಿ ಆಕ್ರೋಶ ಮೂಡಿಸುತ್ತದೆ.

“ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ, ಸದ್ಯಕ್ಕೆ ಮಸೂದೆಗಳನ್ನು ಹಿಂಪಡೆಯುತ್ತೇವೆ. ಸಂಸತ್ತಿನಲ್ಲಿ ಚರ್ಚೆಗೊಳಪಡಿಸುವ ಮೂಲಕ, ಕೃಷಿ ತಜ್ಞರು ಮತ್ತು ವಿಜ್ಞಾನಿಗಳೊಡನೆ, ರೈತ ಸಂಘಟನೆಗಳೊಡನೆ ಮಾತುಕತೆ ನಡೆಸಿ ದೇಶದ ರೈತಾಪಿಗೆ ಸಮಧಾನಕರವಾಗಿರುವಂತಹ ಹೊಸ ಮಸೂದೆಯನ್ನು ಜಾರಿಗೊಳಿಸುತ್ತೇವೆ ” ಎನ್ನುವ ಮೂರು ನಾಲ್ಕು ಸಾಂತ್ವನದ ಮಾತುಗಳು ಮುಷ್ಕರವನ್ನು ಕೊನೆಗೊಳಿಸಬಹುದಿತ್ತು. ಗಣರಾಜ್ಯೋತ್ಸವದ ದಿನದಂದೇ ಎರಡು ಲಕ್ಷ ಟ್ರಾಕ್ಟರ್‍ಗಳು ದೇಶದ ರಾಜಧಾನಿಯಲ್ಲಿ ಮೆರವಣಿಗೆ ನಡೆಸುವ ಒಂದು ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಮಾನವೀಯ, ಸಕಾರಾತ್ಮಕ ಸ್ಪಂದನೆ ತಡೆಒಡ್ಡಬಹುದಿತ್ತು. ಆದರೆ ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಶಯಗಳನ್ನೇ ಲೆಕ್ಕಿಸದ ಕೇಂದ್ರ ಸರ್ಕಾರ ರೈತರ ಒಕ್ಕೊರಲ ಬೇಡಿಕೆಗಳನ್ನು ನಿರ್ಲಕ್ಷಿಸಿರುವುದೇ ಹೆಚ್ಚು. ಈ ಧೋರಣೆ ಸಣ್ಣ ಪುಟ್ಟ ಗಲಭೆಗಳಿಗೆ, ಅಹಿತಕರ ಘಟನೆಗಳಿಗೆ ಎಡೆಮಾಡಿಕೊಟ್ಟರೆ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ.

ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ
ದೆಹಲಿ : ಬೃಹತ್‌ ರೈತರ ಟ್ರ್ಯಾಕ್ಟರ್‌ ಮೆರವಣಿಗೆ – ಬೆಳಗ್ಗೆಯೇ ಗಡಿಭಾಗಗಳಲ್ಲಿ ನೆರೆದ ಸಾವಿರಾರು ರೈತರು

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಹಬ್ಬದ ದಿನದಂದು ದೇಶವ್ಯಾಪಿ ಆಂದೋಲನವೊಂದು ರೂಪುಗೊಂಡಿರುವುದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಭಾರತದಲ್ಲಿ ಪ್ರಜಾತಂತ್ರ ಉಳಿದಿರುವುದಕ್ಕೆ ಸಾಕ್ಷಿಯಾದಂತೆಯೇ ಈ ಜನಾಂದೋಲನ ಈ ದೇಶದ ಆಡಳಿತ ವ್ಯವಸ್ಥೆ ನಿರಂಕುಶತ್ವದೆಡೆಗೆ ಜಾರುತ್ತಿರುವುದಕ್ಕೂ ಸಾಕ್ಷಿಯಾಗಿದೆ. ಹೋರಾಟಗಾರರನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳು, ಟ್ರಾಕ್ಟರ್‍ಗಳನ್ನು ಜಪ್ತಿ ಮಾಡುವುದು, ಉತ್ತರಪ್ರದೇಶದಲ್ಲಿ ಟ್ರಾಕ್ಟರ್‍ಗಳಿಗೆ ಡೀಸೆಲ್ ಸರಬರಾಜು ಸ್ಥಗಿತಗೊಳಿಸುವುದು, ಕರ್ನಾಟಕದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾವಿರಾರು ಟ್ರಾಕ್ಟರುಗಳನ್ನು ತಡೆಗಟ್ಟಿರುವುದು, ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಹೋರಾಟಗಾರರಲ್ಲಿ ಭೀತಿ ಹುಟ್ಟಿಸುವುದು ಈ ಎಲ್ಲ ಕ್ರಮಗಳು ನಿರಂಕುಶ ಪ್ರಭುತ್ವದ ಸೂಚನೆಗಳಾಗಿಯೇ ಕಾಣುತ್ತವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಗೆ ಮುಕ್ತ ಅವಕಾಶ ನೀಡಿದ್ದರೆ, ಟ್ರಾಕ್ಟರ್ ಪರೇಡ್‍ಗೆ ಪೂರ್ಣ ಅನುಮತಿ ನೀಡಿದ್ದಲ್ಲಿ ಬಹುಶಃ ಗಲಭೆ ಸಂಭವಿಸುತ್ತಿರಲಿಲ್ಲ. ಅಥವಾ ನಿಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತೇವೆ, ಮುಷ್ಕರ ಹಿಂಪಡೆಯಿರಿ ಎಂದು ವಿನಂತಿಸಿದ್ದರೆ ಟ್ರಾಕ್ಟರ್ ಪರೇಡ್ ನಡೆಯುತ್ತಲೇ ಇರಲಿಲ್ಲ. ಎರಡೂ ನೆಲೆಯಲ್ಲಿ ಸರ್ಕಾರಗಳು ವಿಫಲವಾಗಿವೆ. ಬದಲಾಗಿ, ಹೋರಾಟಗಾರರಲ್ಲಿ ಭಯೋತ್ಪಾದಕರನ್ನು, ಖಲಿಸ್ತಾನಿಗಳನ್ನು, ನಗರ ನಕ್ಸಲರನ್ನು ಹುಡುಕಲು ಪ್ರಯತ್ನಿಸಿವೆ. ತಮ್ಮ ಜೀವನೋಪಾಯದ ಮೂಲ ಸೆಲೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಅನ್ನದಾತರನ್ನು ದೇಶದ್ರೋಹಿಗಳೆಂದು ಕರೆಯುವಷ್ಟು ಮಟ್ಟಿಗೆ ನಮ್ಮ ರಾಜಕೀಯ ನಾಯಕರು, ಪಕ್ಷಗಳು ಬೌದ್ಧಿಕ ದಾರಿದ್ರ್ಯ ಪ್ರದರ್ಶಿಸಿವೆ.

ಆಳುವ ವರ್ಗಗಳ ಈ ದುರ್ವರ್ತನೆಗೆ ಪೂರಕವಾಗಿ ವಿದ್ಯುನ್ಮಾನ ಮಾಧ್ಯಮಗಳು ರೈತ ಮುಷ್ಕರವನ್ನು ಬಿಂಬಿಸಿವೆ. ಜನವರಿ 25ರವರೆಗೂ ದೆಹಲಿಯಲ್ಲಿ ಮುಷ್ಕರ ಹೂಡಿದ್ದ ರೈತರ ಸಮಸ್ಯೆಗಳನ್ನಾಗಲೀ, ಬೇಡಿಕೆಗಳನ್ನಾಗಲೀ, ಮುಷ್ಕರದ ಮೂಲ ಸಮಸ್ಯೆಯನ್ನಾಗಲೀ ಕಣ್ಣೆತ್ತಿಯೂ ನೋಡದ ಮಾಧ್ಯಮಗಳು ಹಠಾತ್ತನೆ ತಮ್ಮ ರಾಷ್ಟ್ರವಾದಿ ದೇಶಪ್ರೇಮವನ್ನು ಪ್ರದರ್ಶಿಸಲು ಆರಂಭಿಸಿದ್ದು ಜನವರಿ 26ರಂದು, ಟ್ರಾಕ್ಟರ್ ಪರೇಡ್ ಆರಂಭವಾದ ನಂತರ. ಒಂದು ರೀತಿಯಲ್ಲಿ ಇದು ರೈತ ಮುಷ್ಕರದ ವಿಜಯ ಎಂದೇ ಹೇಳಬಹುದು. ಇಡೀ ದೇಶದ ಗಮನ ಸೆಳೆಯುವಂತಹ ಒಂದು ಜನಾಂದೋಲನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೆಚ್ಚು ಗೌರವಯುತವಾಗಿ ಕಾಣುತ್ತದೆ. ಕನ್ನಡದ ಸುದ್ದಿಮನೆಗಳ ಪಕ್ಷಪಾತಿ ಧೋರಣೆ ಮತ್ತು ಉತ್ಕಟ-ಉನ್ಮತ್ತ ರಾಷ್ಟ್ರವಾದಿ ದೇಶಪ್ರೇಮದ ಹೊರತಾಗಿಯೂ ರೈತ ಮುಷ್ಕರ ಟಿವಿ ಪರದೆಗಳ ಮೂಲಕ ಮನೆಮನೆ ತಲುಪಿರುವುದು ರೈತರ ದಿಗ್ವಿಜಯವಾಗಿ ಕಾಣುತ್ತದೆ.

ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ
'ದೆಹಲಿ ಚಲೋ'ದಿಂದ 'ಪಾರ್ಲಿಮೆಂಟ್ ಚಲೋ'ವರೆಗೆ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿರೋಧದ ಧ್ವನಿಗಳಿಗೆ ಕಿವಿಗೊಡುವ ಸಂಯಮ ಇರುವವರು ಅಧಿಕಾರದಲ್ಲಿದ್ದರೆ ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ . ನೊಂದ ಜನತೆಯ ಹಕ್ಕೊತ್ತಾಯಗಳನ್ನು, ಆಗ್ರಹಗಳನ್ನು ಆಲಿಸಿ, ಪರಿಶೀಲಿಸಿ, ಪರಾಮರ್ಶಿಸಿ, ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳ ನಡುವೆ ಚರ್ಚೆಗೊಳಪಡಿಸಿ ಸಮಸ್ತ ಜನತೆಗೆ ಒಳಿತನ್ನುಂಟುಮಾಡುವ ನೀತಿಗಳನ್ನು, ಯೋಜನೆಗಳನ್ನು ಜಾರಿಗೊಳಿಸುವುದು ಒಂದು ಪ್ರಬುದ್ಧ ಸಂಸದೀಯ ಪ್ರಜಾತಂತ್ರದ ಲಕ್ಷಣ. ದುರಂತ ಎಂದರೆ ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತ ಈ ಪ್ರಬುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಪೂರ್ಣ ಬಹುಮತ ಗಳಿಸುವುದು ಎಂದರೆ ದೇಶದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಪ್ರತಿನಿಧಿಸುವುದು ಎಂದರ್ಥವೇ ಹೊರತು, ಸ್ವೇಚ್ಚಾನುಸಾರ ಕಾನೂನುಗಳನ್ನು ರೂಪಿಸಲು ಮುಕ್ತ ಪರವಾನಗಿ ದೊರೆತಂತಲ್ಲ. ಡಾ ಬಿ ಆರ್ ಅಂಬೇಡ್ಕರ್ ಈ ಕುರಿತು ಅನೇಕ ಸಂದರ್ಭಗಳಲ್ಲಿ ಸ್ಪಷ್ಟನೆ ನೀಡುತ್ತಲೇ ಸಂವಿಧಾನ ರಚನೆಯಲ್ಲಿ ತೊಡಗುತ್ತಾರೆ.

ಆದರೆ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪಷ್ಟ ಬಹುಮತ ಎನ್ನುವುದು ಸ್ವೇಚ್ಚಾಚಾರದ ಪರವಾನಗಿಯೇ ಆಗಿದೆ. ಕಳೆದ ಆರು ವರ್ಷಗಳಲ್ಲಿ ಈ ಧೋರಣೆ ಸಮೂಹ ಸನ್ನಿಗೊಳಗಾದ ಬೃಹತ್ ಜನಸಮುದಾಯದ ನಡುವೆ ಸ್ವೀಕೃತಿಯನ್ನೂ ಪಡೆದುಬಿಟ್ಟಿದೆ. ಹಾಗಾಗಿಯೇ 150 ಮುಷ್ಕರ ನಿರತ ರೈತರ ಸಾವು, ಲಕ್ಷಾಂತರ ರೈತರ ಒಕ್ಕೊರಲ ದನಿ, ಬೃಹತ್ ಸಂಖ್ಯೆಯ ರೈತಾಪಿಯ ಮೇಲೆ ನಡೆಯುವ ದೌರ್ಜನ್ಯ, ರೈತರ ಬೆನ್ನ ಮೇಲೆ ಬಾಸುಂಡೆ ಬರುವಂತೆ ಬಾರಿಸುವ ಪೊಲೀಸರ ಕ್ರೌರ್ಯ ಎಲ್ಲವೂ ‘ ದೇಶದ ಅಭಿವೃದ್ಧಿಯ ’ ದೃಷ್ಟಿಯಿಂದ ಸ್ವೀಕಾರಾರ್ಹ ಎನಿಸಿಬಿಡುತ್ತವೆ. ಇದು ಹಿತವಲಯದಲ್ಲಿರುವ ಮಧ್ಯಮ ವರ್ಗಗಳನ್ನು ಕಾಡುತ್ತಿರುವ ಒಂದು ದುರ್ವ್ಯಸನ. ಈ ವ್ಯಸನವೇ ದೇಶದಲ್ಲಿ ನಿರಂಕುಶ ಆಳ್ವಿಕೆಗೆ ಸುಭದ್ರ ತಳಪಾಯವನ್ನು ನಿರ್ಮಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ಮೂರು ಲಕ್ಷ ರೈತರು ಆತ್ಮಹತ್ಯೆಗೆ ಶರಣಾದಾಗ, ಎರಡು ತಿಂಗಳ ಕಾಲ ಚಳಿ ಮಳೆ ಎನ್ನದೆ, ಕೇಳುವವರಿಲ್ಲದೆ ಲಕ್ಷಾಂತರ ರೈತರು ರಸ್ತೆಗಳಲ್ಲೇ ಕುಳಿತು ಪ್ರತಿರೋಧ ವ್ಯಕ್ತಪಡಿಸುವಾಗ, ಈ ಮುಷ್ಕರದ ನಡುವೆಯೇ 150 ರೈತರು ಮೃತಪಟ್ಟಾಗ ಈ ದೇಶಕ್ಕೆ ಅಪಮಾನವಾಗಿದೆ ಎನಿಸಬೇಕಿತ್ತು. ಇದರಲ್ಲೇ ಆಡಳಿತ ವ್ಯವಸ್ಥೆಯ ರಾಷ್ಟ್ರದ್ರೋಹದ ವರ್ತನೆ ಗೋಚರಿಸಬೇಕಿತ್ತು. ದುರಂತ ಎಂದರೆ ಈ ದೇಶದ ಒಂದು ವರ್ಗದ ಜನತೆಗೆ, ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳಿಗೆ ಮತ್ತು ಅಧಿಕಾರ ಲಾಲಸೆಯಿಂದ ತಮ್ಮ ಸಭ್ಯತೆ, ಸಂಯಮ, ಸೌಜನ್ಯ ಮತ್ತು ಎಲ್ಲ ಮಾನವೀಯ ಮೌಲ್ಯಗಳನ್ನೂ ಕಳೆದುಕೊಂಡಿರುವ ಜನಪ್ರತಿನಿಧಿಗಳಿಗೆ ಈ ಹೋರಾಟವೇ ದೇಶದ್ರೋಹದ ನಡೆಯಂತೆ ಕಾಣುತ್ತಿದೆ. ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಸಾಂವಿಧಾನಿಕ ಸಂಸ್ಥೆಗಳಿಗೆ ಇದು ಗಂಭೀರ ವಿಚಾರ ಎನಿಸುತ್ತಲೇ ಇಲ್ಲ.

ಪ್ರತಿರೋಧದ ದನಿಯೂ ಪ್ರಭುತ್ವದ ನಿಷ್ಕ್ರಿಯತೆಯೂ
ದೆಹಲಿ ಹಿಂಸಾಚಾರ: ಸಿಎಎ ಪರ ಹೋರಾಟ ಎಂದರೆ ಏನು?

ಈ ವಿಷಮ ಸನ್ನಿವೇಶದಲ್ಲೇ ಭಾರತದ ರೈತಾಪಿ ತನ್ನ ದಿಗ್ವಿಜಯ ಸಾಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಗಣತಂತ್ರದಿನದ ಟ್ರಾಕ್ಟರ್ ಪರೇಡ್ ಮತ್ತು ದೇಶದ ರಾಜಧಾನಿಯನ್ನೂ ಸೇರಿದಂತೆ ದೇಶವ್ಯಾಪಿಯಾಗಿ ನಡೆದ ಪ್ರಜೆಗಳ ಜನಗಣರಾಜ್ಯೋತ್ಸವದ ಪ್ರತಿರೋಧದ ನೆಲೆಗಳು ಪ್ರಜಾತಂತ್ರಕ್ಕೆ ಸಂದ ದಿಗ್ವಿಜಯವಾಗಿದೆ. ಕೆಲವು ಅಹಿತಕರ ಘಟನೆಗಳ ನಡುವೆಯೂ ರೈತ ಸಮುದಾಯ ತನ್ನ ಅಂತಿಮ ಗುರಿಗೆ ಬದ್ಧತೆ ತೋರಿ ಶಿಸ್ತು ಸಂಯಮದಿಂದ ವರ್ತಿಸಿರುವುದು, ಈ ದೇಶದ ಜನಸಾಮಾನ್ಯರಲ್ಲಿರುವ ಸಂಯಮ, ತಾಳ್ಮೆಯ ಸಂಕೇತವಾಗಿದೆ. ಹಾಗೆಯೇ ಈ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕುವ ಪ್ರಯತ್ನಗಳ ಮೂಲಕ ಪ್ರಭುತ್ವ ಮತ್ತು ಆಳುವ ವರ್ಗಗಳು ಬೆತ್ತಲಾಗಿವೆ. ಸಾರ್ವಭೌಮ ಪ್ರಜೆಗಳ ಹೋರಾಟಗಳನ್ನು ರಾಷ್ಟ್ರದ್ರೋಹದ ಪರಿಭಾಷೆಯಲ್ಲಿ ಅಪಮಾನಿಸುವ ಮೂಲಕ ಮಾಧ್ಯಮಗಳು ಪೂರ್ಣ ಬೆತ್ತಲೆಯಾಗಿವೆ.

ಮುಂಬರುವ ದಿನಗಳಲ್ಲಿ ನಡೆಯಬಹುದಾದ ಜನಪರ ಹೋರಾಟಗಳಿಗೆ ದೆಹಲಿಯಲ್ಲಿನ ರೈತರ ಹೋರಾಟ ಮತ್ತು ದೇಶವ್ಯಾಪಿ ನಡೆಯುತ್ತಿರುವ ಆಂದೋಲನಗಳು ಸ್ಫೂರ್ತಿದಾಯಕವಾಗುವ ಆಶಯದೊಂದಿಗೇ, ಈ ದೇಶದ ಕಾರ್ಮಿಕ ಬಂಧುಗಳು, ಗ್ರಾಮೀಣ ಬಡಜನತೆ, ಶೋಷಿತ ಸಮುದಾಯಗಳು, ಅವಕಾಶವಂಚಿತರು, ಮಹಿಳೆಯರು ಮತ್ತು ಜಾತಿ ದೌರ್ಜನ್ಯವನ್ನು ನಿತ್ಯ ಎದುರಿಸುತ್ತಿರುವ ದಲಿತ ಸಮುದಾಯಗಳು ತಮ್ಮ ಹಕ್ಕೊತ್ತಾಯಗಳೊಂದಿಗೆ ಹೋರಾಟಗಳಿಗೆ ಸಜ್ಜಾಗಬೇಕಿದೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಸಂವಿಧಾನ ನಮ್ಮದು, ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನದ ಆಶಯಗಳೂ ನಮ್ಮವೇ ಆಗಿದೆ. ಈ ಸಂವಿಧಾನದ ರಕ್ಷಣೆಯಾದರೆ ಮಾತ್ರವೇ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ ಎನ್ನುವುದನ್ನು ಇನ್ನಾದರೂ ಮನಗಾಣಬೇಕಿದೆ. ಇತಿಹಾಸದ ಕರಾಳ ಪುಟಗಳು, ಸಮಕಾಲೀನ ಭಾರತದ ಕರಾಳ ಹಾಳೆಗಳು ನಮ್ಮ ಮುಂದಿವೆ, ಕಣ್ತೆರೆದು ನೋಡುವ ಇಚ್ಚಾಶಕ್ತಿ ನಮ್ಮೊಳಗಿದ್ದರೆ ಗೆಲುವು ನಮ್ಮದೇ. ಈ ಆಶಯದೊಂದಿಗೇ ಮುನ್ನಡೆಯಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com