ಕಳಂಕ ಮೆತ್ತಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿದ ಅನಪೇಕ್ಷಿತ ಘಟನೆ!

ಈ ಮೊದಲು ಎನ್ ಆರ್ ಸಿ ಮತ್ತು ಸಿಎಎ ಕಾಯ್ದೆಯ ವಿಷಯದಲ್ಲಿ ಮಾಡಿದಂತೆಯೇ ಈ ರೈತ ಹೋರಾಟಕ್ಕೂ ದೇಶದ್ರೋಹ ಶಕ್ತಿಗಳ ನಂಟು ಬೆಸೆದು ಹೋರಾಟವನ್ನು ಹಣಿಯುವ ಪ್ರಭುತ್ವದ ಸಂಚಿಗೆ ರೈತರ ಈ ಭಾವೋದ್ವೇಗದ ನಡವಳಿಕೆ ಸುಲಭ ಆಹಾರವಾಗಿದೆ.
ಕಳಂಕ ಮೆತ್ತಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿದ ಅನಪೇಕ್ಷಿತ ಘಟನೆ!

ಐತಿಹಾಸಿಕ ರೈತರ ಟ್ರ್ಯಾಕ್ಟರ್ ಪರೇಡ್ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ದಿಲ್ಲಿಯಿಂದ ದೇಶದ ಹಳ್ಳಿಹಳ್ಳಿಯವರೆಗೆ ರೈತರು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ತಮ್ಮ ಆಕ್ರೋಶವನ್ನು ಈ ಪರೇಡ್ ಮೂಲಕ ಮತ್ತೊಮ್ಮೆ ಹೊರಹಾಕಿದ್ದಾರೆ.

ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ರಸ್ತೆಗಿಳಿದ ಟ್ರ್ಯಾಕ್ಟರುಗಳು ರಾಷ್ಟ್ರ- ಅಂತಾರಾಷ್ಟ್ರ ಮಟ್ಟದಲ್ಲಿ ಮೂರು ವಿವಾದಿತ ಕೃಷಿ ಕಾಯ್ದೆಗಳು ಮತ್ತು ಅವುಗಳ ವಿರುದ್ಧ ಕಳೆದ ಎರಡು ತಿಂಗಳಿನಿಂದ ದೆಹಲಿ ಮತ್ತು ದೇಶದ ವಿವಿಧೆಡೆ ಅನ್ನದಾತರು ನಡೆಸುತ್ತಿರುವ ನಿರಂತರ ಹೋರಾಟದ ಬಗ್ಗೆ ಗಮನ ಸೆಳೆದಿವೆ. ಜೊತೆಗೆ ಒಂದು ಅಭೂತಪೂರ್ವ ಹೋರಾಟದ ಭಾಗವಾಗಿ ನಡೆದ ರೈತ ರ್ಯಾಲಿಯ ವೇಳೆ ಕೆಲವು ಅನಿರೀಕ್ಷಿತ ಘಟನೆಗಳು ನಡೆದಿವೆ.

ಪೊಲೀಸರು ಮತ್ತು ರೈತರ ನಡುವಿನ ಸಂಘರ್ಷ, ನಿಗದಿತ ಮಾರ್ಗಗಳನ್ನು ಹೊರತುಪಡಿಸಿ ರೈತರು ದೆಹಲಿಯ ಕೆಲವು ಕಡೆ ಟ್ರ್ಯಾಕ್ಟರ್ ಚಲಾಯಿಸಿರುವುದು, ಕೆಂಪು ಕೋಟೆಗೆ ನುಗ್ಗಿ ಅಲ್ಲಿ, ರಾಷ್ಟ್ರಧ್ವಜದ ಪಕ್ಕದಲ್ಲಿ ರೈತ ಧ್ವಜ ಹಾರಿಸಿರುವುದು ಮುಂತಾದ ಘಟನೆಗಳು ಅನಪೇಕ್ಷಿತ ಎಂಬ ಮಾತೂ ಕೇಳಿಬಂದಿದೆ. ಜೊತೆಗೆ ಪೊಲೀಸರೊಂದಿಗಿನ ಸಂಘರ್ಷದ ವೇಳೆ ರೈತ ಹೋರಾಟಗಾರರೊಬ್ಬರು ಸಾವು ಕಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಕೂಡ ಮಂಗಳವಾರ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಿದ್ದಾರೆ. ದೆಹಲಿ ಹೊರತುಪಡಿಸಿ ಉಳಿದೆಡೆ ಇಡೀ ಹೋರಾಟ ಸಂಪೂರ್ಣ ಶಾಂತಿ ಮತ್ತು ಶಿಸ್ತುಬದ್ಧವಾಗಿಯೇ ನಡೆದು ಯಶ ಕಂಡಿದೆ. ಕೃಷಿಕರೇ ವಿರೋಧಿಸುತ್ತಿದ್ದರೂ, ಹಠಕ್ಕೆ ಬಿದ್ದು ಕಾಯ್ದೆಯ ಪರ ವಕಾಲತು ವಹಿಸುತ್ತಿರುವ ಅಧಿಕಾರಸ್ಥರಿಗೆ ದಿಟ್ಟ ಸಂದೇಶವನ್ನು ರವಾನಿಸಿದೆ.

ಕಳೆದ 60 ದಿನಗಳಿಂದ ರೈತರು ದೆಹಲಿ ಸಿಂಗು ಮತ್ತು ಟೆಕ್ರಿ ಸೇರಿದಂತೆ ಹಲವು ಗಡಿಗಳಲ್ಲಿ ನಡೆಸುತ್ತಿರುವ ನಿರಂತರ ಹೋರಾಟ ದೇಶ ಮತ್ತು ವಿದೇಶಗಳಲ್ಲಿ ಹುಟ್ಟಿಸಿದ್ದ ಸದಭಿಪ್ರಾಯವನ್ನು ಮತ್ತು ಆ ಮೂಲಕ ಅದು ಕೇಂದ್ರ ಬಿಜೆಪಿ ಆಡಳಿತದ ಮೇಲೆ ಹೇರುತ್ತಿದ್ದ ಒತ್ತಡವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಈ ಟ್ರ್ಯಾಕ್ಟರ್ ಪರೇಡ್ ಬಹಳ ದೊಡ್ಡ ಪಾತ್ರ ವಹಿಸಿದೆ. ಆದರೆ, ಅದೇ ಹೊತ್ತಿಗೆ ಪರೇಡ್ ವೇಳೆ ನಡೆದ ಕೆಲವು ಘಟನೆಗಳು, ಹೋರಾಟಕ್ಕೆ ಮಸಿ ಬಳಿಯಲು ನಿರಂತರ ಯತ್ನ ಮಾಡುತ್ತಿದ್ದ ಬಿಜೆಪಿ ಮತ್ತು ಅದರ ಸಂಘಪರಿವಾರದ ಮಂದಿ ಹಾಗೂ ಅದರ ಕೃಪಾ ಪೋಷಿತ ಮಾಧ್ಯಮಗಳಿಗೆ ದೊಡ್ಡ ಅಸ್ತ್ರ ಒದಗಿಸಿಕೊಟ್ಟಿದೆ. ಇದು ನಿಜಕ್ಕೂ ಅನಪೇಕ್ಷಿತ ಬೆಳವಣಿಗೆ.

ಕಳಂಕ ಮೆತ್ತಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿದ ಅನಪೇಕ್ಷಿತ ಘಟನೆ!
ದೆಹಲಿ: ತೀವ್ರಗೊಂಡ ರೈತರ ಪ್ರತಿಭಟನೆ –ಹಲವೆಡೆ ಇಂಟರ್‌ನೆಟ್‌ ಸೇವೆ ಸ್ಥಗಿತ

ಈ ನಡುವೆ, ಹೋರಾಟದ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತಿರುವ 41 ರೈತ ಸಂಘಟನೆಗಳ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ ಕೂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಕಿಸಾನ್ ಪರೇಡ್ ವೇಳೆ ಸಂಘಟನೆಯೊಂದರ ಕೆಲವರ ವರ್ತನೆಗಳನ್ನು ತಾನು ಖಂಡಿಸುವುದಾಗಿಯೂ ಮತ್ತು ತಕ್ಷಣದಿಂದಲೇ ಒಕ್ಕೂಟವು ಸಂಬಂಧಪಟ್ಟ ಸಂಘಟನೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದೆ. ಕಿಸಾನ್ ಪರೇಡ್ ಮಾರ್ಗ ಬದಲಾವಣೆ ಮತ್ತು ಕೆಂಪು ಕೋಟೆಗೆ ನುಗ್ಗಿದ್ದನ್ನು ಮೋರ್ಚಾ ಬಲವಾಗಿ ವಿರೋಧಿಸಿದೆ.

ಎರಡು ತಿಂಗಳ ಹಿಂದೆ ತಮ್ಮ ಬದುಕು ಕಿತ್ತುಕೊಳ್ಳುವ ಕಾನೂನು ಬೇಡ ಎಂದು ರೈತರು ಹಮ್ಮಿಕೊಂಡಿದ್ದ ದೆಹಲಿ ಚಲೋ ಭಾಗವಾಗಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಮತ್ತಿತರ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆಯೊಂದಿಗೆ ದೆಹಲಿಗೆ ಬಂದಾಗ, ಅವರ ಶಾಂತಿಯುತ, ಪ್ರಜಾಸತ್ತಾತ್ಮಕ ಹೋರಾಟಕ್ಕೆ ಅವಕಾಶ ನೀಡದೆ, ಅವರ ಮೇಲೆ ಅಶ್ರುವಾಯು ಸಿಡಿಸಿ, ಜಲಫಿರಂಗಿ ಹಾರಿಸಿ, ಲಾಠಿ ಚಾರ್ಜ್ ಮಾಡಿ ಬಲಪ್ರಯೋಗದ ಮೂಲಕ ತಡೆಯಲಾಯಿತು. ಪಂಜಾಬ್ ಮತ್ತು ಹರ್ಯಾಣದೊಂದಿಗೆ ದೆಹಲಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಲ್ಲೇ ಕಂದಕ ತೋಡಿ, ಬೃಹತ್ ಕಂಟೇನರ್ ಅಡ್ಡ ಇಟ್ಟು, ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಿ ಅನ್ನದಾತರ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳಲಾಯಿತು. ಆಳುವ ಸರ್ಕಾರ ತನ್ನ ಪೊಲೀಸ್ ಮತ್ತು ಅಧಿಕಾರ ಬಲ ಪ್ರಯೋಗಿಸಿ ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹಕ್ಕನ್ನು ಮೊಟಕು ಮಾಡಿತು.

ಕಳಂಕ ಮೆತ್ತಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿದ ಅನಪೇಕ್ಷಿತ ಘಟನೆ!
Fact Check: ಕೆಂಪು ಕೋಟೆಯ ಮೇಲೆ ಹಾರಿಸಿದ್ದು ಖಲಿಸ್ತಾನ ಬಾವುಟವೇ?

ಸರ್ಕಾರದ ಇಂತಹ ದಮನ ನೀತಿಯನ್ನು ವಿರೋಧಿಸಿ ನವೆಂಬರ್ 26ರಿಂದ ಸಾವಿರಾರು ರೈತರು ಸಿಂಗು ಮತ್ತು ಟೆಕ್ರಿ ಗಡಿಯಲ್ಲಿ ನಿರಂತರ ಆಹೋರಾತ್ರಿ ಹೋರಾಟ ಆರಂಭಿಸಿದರು. ರಸ್ತೆಯಲ್ಲಿ ಬಿಡಾರ ಹೂಡಿ, ಅಲ್ಲಿಯೇ ವಾಸ್ತವ್ಯ ಮಾಡಿ ದೆಹಲಿ ಮೈನಸ್ ಡಿಗ್ರಿ ಚಳಿಯ ನಡುವೆಯೂ ಹೋರಾಟ ಮುಂದುವರಿಸಿದರು. ಆದರೆ, ದೇಶದ ಶೇ.70ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಆ ಅನ್ನದಾತರ ವಿರೋಧ, ಆತಂಕಕ್ಕೆ ಕಿವಿಗೊಡುವ ಬದಲು ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಅವರ ಸಚಿವ ಸಹೋದ್ಯೋಗಿಗಳು, ಬಿಜೆಪಿ ಸಂಸದರು, ನಾಯಕರು ಮತ್ತು ಅದರ ಸಂಘಪರಿವಾರದ ಮಂದಿ ರೈತರ ವಿರುದ್ಧವೇ ಅಪಪ್ರಚಾರ, ಸುಳ್ಳು ಸುದ್ದಿ, ವದಂತಿ ಹರುಡುವುದರಲ್ಲಿ ನಿರತರಾದರು. ಆ ಮೂಲಕ ರೈತರ ಐತಿಹಾಸಿಕ ಶಾಂತಿಯುತ ಹೋರಾಟಕ್ಕೆ ಮಸಿ ಬಳಿಯುವ ಯತ್ನ ನಡೆಯಿತು. ಖಲೀಸ್ತಾನ ಚಳವಳಿಯ ನಂಟು ಹೆಣೆಯುವ ಮೂಲಕ ಇಡೀ ಹೋರಾಟಕ್ಕೆ ದೇಶದ್ರೋಹಿ ಸಂಘಟನೆಗಳ ಕುಮ್ಮಕ್ಕಿದೆ ಎಂದು ಬಿಂಬಿಸುವ ಯತ್ನ ಬಿಜೆಪಿಯಿಂದಲೇ ನಡೆಯಿತು. ಬಳಿಕ ಕಾಂಗ್ರೆಸ್ ಕುಮ್ಮಕ್ಕಿನ ಮಾತು ಕೇಳಿಬಂದಿತು. ಹಾಗೇ ಭಯೋತ್ಪಾದಕರು, ದೇಶದ್ರೋಹಿಗಳು, ವಿದೇಶಿ ಶಕ್ತಿಗಳ ಕೈವಾಡವಿದೆ ಎಂಬ ಹೊಸ ಹೊಸ ದಾಳಗಳನ್ನು ಉರುಳಿಸುವ ಮೂಲಕ ಹೋರಾಟಕ್ಕೆ ಮಸಿ ಬಳಿಯುವ ನಿರಂತರ ವಿಫಲ ಯತ್ನಗಳು ನಡೆದವು.

ಇಂತಹ ಎಲ್ಲಾ ಪ್ರಯತ್ನಗಳಿಗೆ ಕೇವಲ ಬಿಜೆಪಿ ಮತ್ತು ಅದರ ಪರಿವಾರದ ನಾಯಕರು ಮಾತ್ರವಲ್ಲ; ತನ್ನ ಬಿ ಟೀಂನಂತೆ ಕೆಲಸ ಮಾಡುವ ದೇಶದ ಮುಖ್ಯವಾಹಿನಿ ಮಾಧ್ಯಮಗಳನ್ನೂ ಬಿಜೆಪಿ ಬಳಸಿಕೊಂಡಿತು. ಬಹುತೇಕ ಮಾಧ್ಯಮಗಳು, ಬಿಜೆಪಿ ಐಟಿ ಸೆಲ್ ಮತ್ತು ಟ್ರೋಲ್ ಪಡೆಗಳು ಹರಿಬಿಟ್ಟ ಅಂತಹ ಕಟ್ಟುಕತೆಗಳನ್ನು, ಷಢ್ಯಂತ್ರಗಳನ್ನು ಸತ್ಯವೆಂದೇ ಬಿಂಬಿಸಲು ಇನ್ನಿಲ್ಲದ ಯತ್ನ ನಡೆಸಿದವು. ಅಷ್ಟಾಗಿಯೂ ಅಂತಿಮವಾಗಿ ರೈತರ ಪರ ದೇಶದ ಬಹುಸಂಖ್ಯಾತ ಸಮುದಾಯ ಬೆಂಬಲವಾಗಿ ನಿಂತಿದ್ದು ಆ ಹೋರಾಟದ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ವರಸೆಯ ಕಾರಣಕ್ಕೆ. ಬರೋಬ್ಬರಿ ಅರವತ್ತು ದಿನಗಳ ಕಾಲ 41ಕ್ಕೂ ಹೆಚ್ಚು ರೈತ ಸಂಘಟನೆಗಳು ಮತ್ತು ಸಾವಿರಾರು ಮಂದಿ ರೈತರು, 170ಕ್ಕೂ ಹೆಚ್ಚು ಮಂದಿ ಹೋರಾಟಗಾರರ ಸರಣಿ ಸಾವಿನ ಹೊರತಾಗಿಯೂ ಕಾಯ್ದುಕೊಂಡುಬಂದಿದ್ದ ತಾಳೆ ಮತ್ತು ಶಿಸ್ತುಬದ್ಧ ಹೋರಾಟಕ್ಕೆ ಭಯೋತ್ಪಾದನೆಯ, ದೇಶದ್ರೋಹದ ಕಳಂಕ ಮೆತ್ತುವ ಮೂಲಕ ಇಡೀ ರೈತ ಚಳವಳಿಯನ್ನು ಸಾರಾಸಗಟಾಗಿ ತಳ್ಳಿ ಹಾಕಲು ಕಾಯುತ್ತಿದ್ದ ಸರ್ಕಾರ ಮತ್ತು ಸಂಘಪರಿವಾರದ ಮಂದಿಗೆ ಗಣರಾಜ್ಯೋತ್ಸವ ದಿನದ ಕೆಲವು ಘಟನೆಗಳು ಮಡಕೆ ಮಾಡುವವನಿಗೆ ವರುಷ, ದೊಣ್ಣೆ ಹಿಡಿದವನಿಗೆ ನಿಮಿಷ ಎಂಬಂತೆ ಮಾಡಿವೆ.

ಕಳಂಕ ಮೆತ್ತಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿದ ಅನಪೇಕ್ಷಿತ ಘಟನೆ!
ಶಾಂತಿಯುತ ಪ್ರತಿಭಟನಾಕರರ ಮೇಲೆ ಗುಂಡಿನ ದಾಳಿ ನಡೆಸಿದ ದೆಹಲಿ ಪೊಲೀಸ್: ಪ್ರತ್ಯಕ್ಷದರ್ಶಿ ಆರೋಪ

ಕೆಂಪು ಕೋಟೆಯ ಮೇಲೆ ರೈತ ಧ್ವಜ ಹಾರಿಸಿದ್ದು ಮತ್ತು ಪೊಲೀಸರೊಂದಿಗಿನ ಸಂಘರ್ಷವನ್ನೇ ಮುಂದಿಟ್ಟುಕೊಂಡು ಇಡೀ ಚಳವಳಿಯ ಹಿಂದೆ ಭಯೋತ್ಪಾದಕರಿದ್ದಾರೆ, ವಿದೇಶಿ ಕುಮ್ಮಕ್ಕಿದೆ, ದೇಶದ್ರೋಹಿಗಳಿದ್ದಾರೆ ಎಂದು ಬಿಜೆಪಿ ಮತ್ತು ಅದರ ಪರ ಇರುವ ಮಂದಿ ಮತ್ತು ಮಾಧ್ಯಮ ಬಿಂಬಿಸತೊಡಗಿದ್ದಾರೆ. ಆದರೆ, ರೈತರ ಗುಂಪು ಮನಸ್ಥಿತಿ ಮತ್ತು ಆಕ್ರೋಶಗಳು ಇಂತಹ ಅತಿ ಎನಿಸುವ ನಡವಳಿಕೆಗೆ ಕಾರಣವಿರಬಹುದು. ಅದರಲ್ಲೂ 60 ದಿನಗಳ ನಿರಂತರ ಹೋರಾಟದ ಹೊರತಾಗಿಯೂ, ನೂರಾರು ರೈತರ ಜೀವಬಲಿಯ ಹೊರತಾಗಿಯೂ ಆ ಬಗ್ಗೆ ಕನಿಷ್ಟ ಸ್ಪಂದನೆ ತೋರದ, ಮಾತುಕತೆಯ ಮಾತನಾಡುತ್ತಲೇ ತನ್ನ ಹಠವನ್ನು ಕಿಂಚಿತ್ತೂ ಬಿಡದ ಸರ್ಕಾರದ ಧೋರಣೆ ಸಹಜವಾಗೇ ರೈತರನ್ನು ರೊಚ್ಚಿಗೆಬ್ಬಿಸಿದೆ. ಅದರಲ್ಲೂ ಪೊಲೀಸ್ ಬಲ ಪ್ರಯೋಗಿಸಿ ಹೋರಾಟ ಹತ್ತಿಕ್ಕುವ, ಹೋರಾಟಕ್ಕೆ ಭಯೋತ್ಪಾದನೆಯ ನಂಟು ಜೋಡಿಸುವ ಯತ್ನವನ್ನೇ ಸರ್ಕಾರವೇ ನಡೆಸಿದ್ದು ಅವರನ್ನು ಇನ್ನಷ್ಟು ಕೆರಳಿಸಿರಬಹುದು. ಹಾಗಾಗಿ ಆಕ್ರೋಶ ಮತ್ತು ಹತಾಶೆಯ ಭಾವೋದ್ವೇಗದಲ್ಲಿ ಸಮೂಹ ಮನಸ್ಥಿತಿಯಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದಿರಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಆದರೆ, ಈ ಮೊದಲು ಎನ್ ಆರ್ ಸಿ ಮತ್ತು ಸಿಎಎ ಕಾಯ್ದೆಯ ವಿಷಯದಲ್ಲಿ ಮಾಡಿದಂತೆಯೇ ಈ ರೈತ ಹೋರಾಟಕ್ಕೂ ದೇಶದ್ರೋಹ ಶಕ್ತಿಗಳ ನಂಟು ಬೆಸೆದು ಹೋರಾಟವನ್ನು ಹಣಿಯುವ ಪ್ರಭುತ್ವದ ಸಂಚಿಗೆ ರೈತರ ಈ ಭಾವೋದ್ವೇಗದ ನಡವಳಿಕೆ ಸುಲಭ ಆಹಾರವಾಗಿದೆ.

ಇಂತಹದ್ದೇ ಕ್ಷಣಕ್ಕೆ ಕಾಯುತ್ತಿದ್ದವರಂತೆ ಕರ್ನಾಟಕದ ಕೃಷಿ ಸಚಿವ ಬಿ ಸಿ ಪಾಟೀಲ್ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಈ ಹೋರಾಟದ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂಬ ಹೇಳಿಕೆ ನೀಡಿದ್ದಾರೆ. ಅದರಲ್ಲೂ ರಾಜ್ಯದ ರೈತರ ಸಂಕಷ್ಟಗಳ ಪರಿಹಾರವಾಗಲೀ, ಕೃಷಿ ಬಿಕ್ಕಟ್ಟುಗಳ ಬಗ್ಗೆಯಾಗಲೀ ಕೆಲಸ ಮಾಡಿದ್ದಕ್ಕಿಂತ ಸದಾ ರೈತ ವಿರೋಧಿ ಹೇಳಿಕೆಗಳಿಂದಲೇ ಇತ್ತೀಚಿಗೆ ಸುದ್ದಿಯಲ್ಲಿರುವ ಬಿ ಸಿ ಪಾಟೀಲ್, ದೆಹಲಿ ಹೋರಾಟದಲ್ಲಿ ಇರುವವರು ರೈತರಲ್ಲ, ಭಯೋತ್ಪಾದಕರು ಎಂದು ನೇರವಾಗಿ ಹೇಳಿದ್ದಾರೆ.

ಅದೇ ಹೊತ್ತಿಗೆ, ಕೆಂಪು ಕೋಟೆಗೆ ನುಗ್ಗಿದ್ದು ಭಯೋತ್ಪಾದನಾ ಕೃತ್ಯ ಎನ್ನುವುದಾದರೆ, 25 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಒಂದು ಕಟ್ಟಡವನ್ನು ಕೋರ್ಟು, ಕಾನೂನು, ಹೊಣೆಗಾರಿಕೆಯನ್ನೆಲ್ಲಾ ಗಾಳೀಗೆ ತೂರಿ ನೆಲಕ್ಕುರುಳಿಸಿದರಲ್ಲ. ಅಂದು ಮತ್ತು ಇಂದು ಆ ಘಟನೆಯನ್ನು ಸಮರ್ಥಿಸಿಕೊಂಡು, ಸಂಭ್ರಮಿಸುವ ಮಂದಿ, ಈಗ ರೈತರ ಆಕ್ರೋಶವನ್ನು ಭಯೋತ್ಪಾದನಾ ಕೃತ್ಯ, ಹೊಣೆಗೇಡಿತನ ಎಂದು ಬಣ್ಣಿಸುತ್ತಿರುವುದು ಹಾಸ್ಯಾಸ್ಪದ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೇ ಪ್ರತಿಭಟನಾನಿರತ ರೈತರ ವಿಷಯದಲ್ಲಿ ಈವರೆಗೆ ಕೇಂದ್ರ ಸರ್ಕಾರ ನಡೆಸಿದ ದಬ್ಬಾಳಿಕೆಯ, ದಮನಕಾರಿ ಕ್ರಮಗಳ ವಿಷಯದಲ್ಲಿ ಮೌನವಾಗಿದ್ದವರು ಇದೀಗ ಏಕಾಏಕಿ ಹೊಣೆಗಾರಿಕೆಯ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ದೇಶಪ್ರೇಮದ ಬಗ್ಗೆ ಮಾತನಾಡುತ್ತಿರುವುದು ವಿಚಿತ್ರವಾಗಿದೆ ಎಂಬ ವ್ಯಂಗ್ಯದ ಪ್ರತಿಕ್ರಿಯೆಗಳೂ ಇವೆ.

ಒಟ್ಟಾರೆ, ಗಣರಾಜ್ಯೋತ್ಸವದ ದಿನ ರೈತರು ನಡೆಸಿದ ಐತಿಹಾಸಿಕ ಪ್ರತಿಭಟನೆ ಒಂದು ಕಡೆ ಹೋರಾಟದ ಬದ್ಧತೆ ಮತ್ತು ದಿಟ್ಟತನದ ಸಂದೇಶ ರವಾನಿಸಿದ್ದರೆ, ಮತ್ತೊಂದು ಕಡೆ ಕೆಲವೇ ಮಂದಿ ನಡೆಸಿದ ಕೆಲವು ಅತಿ ಎನಿಸುವ ನಡವಳಿಕೆಗಳು ಇಡೀ ಹೋರಾಟಕ್ಕೆ ಮಸಿ ಬಳಿಯಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com