ಬಿಜೆಪಿ ವಿರುದ್ಧ ಹೋರಾಟ ಕಟ್ಟುವ ಸವಾಲಿಗೆ ಸಾಕ್ಷಿಯಾದ ರೈತ ಹೋರಾಟ!

ಸಂವಿಧಾನ, ಪ್ರಜಾಸತ್ತೆಯನ್ನು ಮೀರಿದ ತನ್ನದೇ ಆದ ಬಲಿಷ್ಠ ಪರ್ಯಾಯ ವ್ಯವಸ್ಥೆಯ ಮೇಲೆ ಹೆಚ್ಚು ವಿಶ್ವಾಸವಿಟ್ಟಿರುವ ಮತ್ತು ಧರ್ಮ- ದೇಶ ಎಂಬ ಭಾವನಾತ್ಮಕ ಸಂಗತಿಗಳ ಮೇಲೆ ಎಲ್ಲವನ್ನೂ ಗೆಲ್ಲುವ ತಂತ್ರಗಾರಿಕೆ ಹೊಂದಿರುವ ಒಂದು ಪಕ್ಷದ ಆಡಳಿತದ ವಿರುದ್ದ ಸಾಮೂಹಿಕ ಹೋರಾಟ ಕಟ್ಟುವುದು ಮತ್ತು ಅದನ್ನು ಎಲ್ಲಾ ಪಿತೂರಿಗಳ ಹೊರತಾಗಿಯೂ ಯಶಸ್ವಿಯಾಗಿ ಮುನ್ನಡೆಸುವುದು ಚಾರಿತ್ರಿಕ ಸವಾಲು.
ಬಿಜೆಪಿ ವಿರುದ್ಧ ಹೋರಾಟ ಕಟ್ಟುವ ಸವಾಲಿಗೆ ಸಾಕ್ಷಿಯಾದ ರೈತ ಹೋರಾಟ!

ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 200ಕ್ಕೂ ಹೆಚ್ಚು ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಯೋಗೇಂದ್ರ ಯಾದವ್, ರಾಕೇಶ್ ಟಿಕಾಯತ್ ಸೇರಿದಂತೆ ಹತ್ತಕ್ಕೂ ಹೆಚ್ಚು ರೈತ ನಾಯಕರು ಸೇರಿದಂತೆ ನೂರಾರು ಮಂದಿಯ ವಿರುದ್ಧ 20ಕ್ಕೂ ಹೆಚ್ಚು ಎಫ್ ಐಆರ್ ದಾಖಲಿಸಲಾಗಿದೆ.

ಟ್ರ್ಯಾಕ್ಟರ್ ಪರೇಡ್ ಗೆ ನಿಗದಿಯಾಗಿದ್ದ ಮಾರ್ಗವನ್ನು ಬಿಟ್ಟು ಏಕಾಏಕಿ ಕೆಂಪುಕೋಟೆಯತ್ತ ನುಗ್ಗಿದ ರೈತರ ಗುಂಪಿನ ನೇತೃತ್ವವನ್ನು ಬಿಜೆಪಿಯ ಪ್ರಭಾವಿ ನಾಯಕರೊಂದಿಗೆ ಆಪ್ತ ನಂಟು ಹೊಂದಿದ್ದ ದೀಪ್ ಸಿದ್ದು ಮತ್ತು ಮಾಜಿ ಗ್ಯಾಂಗಸ್ಟರ್ ಲಖ್ಬೀರ್ ಸಿಂಗ್ ವಹಿಸಿದ್ದರು ಮತ್ತು ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ಹಾರಿಸಲು ಕೂಡ ಅವರೇ ಕುಮ್ಮಕ್ಕು ನೀಡಿದ್ದು ಎಂಬ ವರದಿಗಳ ಹೊರತಾಗಿಯೂ ಆಡಳಿತ ಪಕ್ಷ ಬಿಜೆಪಿ ಗಲಭೆಗೆ ರೈತರೇ ಕಾರಣ ಎಂಬುದನ್ನು ಬಲವಾಗಿ ಬಿಂಬಿಸುತ್ತಿವೆ. ಈ ನಡುವೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ಸನ್ನಿ ಡಿಯೋಲ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷರೊಂದಿಗೆ ದೀಪ್ ಸಿದ್ದು ಇರುವ ಫೋಟೋ ಮತ್ತು ವೀಡಿಯೋಗಳು ವೈರಲ್ ಆಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಕ್ಕೂಟದ ನಾಯಕರ ಆಣತಿಯನ್ನು ಮೀರಿ, ಕೆಲವು ಸಂಘಟನೆಯ ಕಾರ್ಯಕರ್ತರು ಮತ್ತು ಸರ್ಕಾರದ ಪ್ರಮುಖರ ನಂಟು ಹೊಂದಿರುವ ವ್ಯಕ್ತಿಗಳು, ಶಾಂತಿಯುತ ಪರೇಡನ್ನು ಹಳಿತಪ್ಪಿಸಿದ್ದಾರೆ. ರೈತ ಹೋರಾಟಕ್ಕೆ ಮಸಿ ಬಳಿದು ಹೋರಾಟವನ್ನು ಹತ್ತಿಕ್ಕುವ ಮತ್ತು ಹೋರಾಟಗಾರರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಸರ್ಕಾರ ಮತ್ತು ಬಿಜೆಪಿಯ ಷಢ್ಯಂತ್ರದ ಭಾಗವಾಗಿಯೇ ಇದೆಲ್ಲವೂ ನಡೆದಿದೆ. ಅಧಿಕಾರಸ್ಥರೊಂದಿಗೆ ಸಖ್ಯ ಹೊಂದಿರುವ ವ್ಯಕ್ತಿಗಳೇ ರೈತರ ಹೆಸರಿನಲ್ಲಿ ಚಳವಳಿಯಲ್ಲಿ ನುಸುಳಿ, ಗುಂಪಿಗೆ ಕುಮ್ಮಕ್ಕು ನೀಡಿ ಕೆಂಪುಕೋಟೆಗೆ ನುಗ್ಗಿಸಿರುವುದು ವೀಡಿಯೋಸಹಿತ ಬಹಿರಂಗವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಇದಕ್ಕೆ ಪೂರಕವಾಗಿ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ್ದ ದೀಪ್ ಸಿದ್ದು ಸೇರಿದಂತೆ ಆತನ ಸಹಚರರ ಮೇಲೆ ಯಾವುದೇ ಕೇಸು ದಾಖಲಿಸದ ದೆಹಲಿ ಪೊಲೀಸರು, ಎರಡು ತಿಂಗಳಿನಿಂದ ಹೋರಾಟದ ನೇತೃತ್ವ ವಹಿಸಿದ್ದ ನೈಜ ರೈತ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ!

ಬಿಜೆಪಿ ವಿರುದ್ಧ ಹೋರಾಟ ಕಟ್ಟುವ ಸವಾಲಿಗೆ ಸಾಕ್ಷಿಯಾದ ರೈತ ಹೋರಾಟ!
ಕಳಂಕ ಮೆತ್ತಲು ಕಾಯುತ್ತಿದ್ದವರಿಗೆ ಅಸ್ತ್ರ ಒದಗಿಸಿದ ಅನಪೇಕ್ಷಿತ ಘಟನೆ!

ಈ ನಡುವೆ, ಗಲಭೆಯ ಹಿನ್ನೆಲೆಯಲ್ಲಿ; ದೆಹಲಿಯಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ರೈತ ಹೋರಾಟದಿಂದ ದೂರ ಸರಿಯುವುದಾಗಿ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ ಮತ್ತು ಭಾರತೀಯ ಕಿಸಾನ್ ಒಕ್ಕೂಟ(ಭಾನು) ಹೇಳಿವೆ. ಎಂಎಸ್ ಪಿ ವಿಷಯದಲ್ಲಿ ಸರ್ಕಾರ ಕಾನೂನು ರಚಿಸುವವರೆಗೆ ರೈತ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ, ನಾವು ಇಲ್ಲಿಗೆ ಬಂದಿರುವುದು ಯಾವುದೇ ರೈತರ ಬಲಿದಾನಕ್ಕಾಗಲೀ ಅಥವಾ ಪೊಲೀಸರೊಂದಿಗಿನ ಸಂಘರ್ಷಕ್ಕಾಗಲೀ ಅಲ್ಲ. ಕೆಲವರು ಇಚ್ಛಿಸಿದ ಹಾದಿಯಲ್ಲಿ ಹೋರಾಟವನ್ನು ನಡೆಸಲು ನಮಗೆ ಇಷ್ಟವಿಲ್ಲ. ಹಾಗಾಗಿ ನಾವು ಈ ಹೋರಾಟದಿಂದ ಪ್ರತ್ಯೇಕವಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆಯ ವಿ ಎಂ ಸಿಂಗ್ ಹೇಳಿದ್ದಾರೆ.

ಬಹುಶಃ ದೇಶದ ರೈತ ಚಳವಳಿಗಳ ಇತಿಹಾಸದಲ್ಲೇ ಹಿಂದೆಂದೂ ಕಾಣದ ಒಂದು ದಿಟ್ಟ ಮತ್ತು ಶಿಸ್ತುಬದ್ಧ ರೈತ ಹೋರಾಟ ಕಳೆದ 60 ದಿನಗಳಿಂದ ದೆಹಲಿಯ ಗಡಿಯಲ್ಲಿ ನಡೆಯುತ್ತಿದೆ. ಸರ್ಕಾರದೊಂದಿಗಿನ ಒಂಭತ್ತು ಸುತ್ತಿನ ಮಾತುಕತೆಗಳು, ಹೋರಾಟಕ್ಕೆ ಮಸಿ ಬಳಿಯುವ ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳ ಹತ್ತಾರು ಯತ್ನಗಳು, ಪೊಲೀಸ್ ಬಲಪ್ರಯೋಗದ ಮೂಲಕ ಹೋರಾಟ ಹತ್ತಿಕ್ಕುವ ಹುನ್ನಾರಗಳ ಹೊರತಾಗಿಯೂ ರೈತರು ಅತ್ಯಂತ ಶಾಂತಿಯುತವಾಗಿ, ಶಿಸ್ತುಬದ್ಧವಾಗಿ ಪಟ್ಟು ಹಿಡಿದು ದೆಹಲಿಯ ಹೊರವಲಯದ ಹೆದ್ದಾರಿಗಳನ್ನೇ ಹೋರಾಟದ ಕಣವಾಗಿಸಿಕೊಂಡು ಕೂತಿದ್ದರು. ಬಹುಶಃ ಧರ್ಮ ಮತ್ತು ಹುಸಿ ರಾಷ್ಟ್ರೀಯತಾವಾದದ ಅಮಲಿನ ಭಾರೀ ಬೆಂಬಲ, ಭಕ್ತ ಮಂಡಳಿಯ ಅಭಿಮಾನದ ಬಲದ ಪ್ರಧಾನಿ ಮೋದಿಯವರ ಸರ್ಕಾರವಲ್ಲದೆ, ಇನ್ನಾವುದೇ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮಾತ್ರ ನಂಬಿಕೆ ಇಟ್ಟಿದ್ದ ಪಕ್ಷ ಅಥವಾ ಅದರ ಆಡಳಿತವಾಗಿದ್ದರೆ, ಇಷ್ಟರಲ್ಲೇ ಈ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಿರುತ್ತಿತ್ತು.

ಆದರೆ, ಹಲವು ಬಗೆಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮೀರಿ, ಪ್ರಜಾಪ್ರಭುತ್ವದ ಶಕ್ತಿ ಮತ್ತು ಮಿತಿಗಳ ಆಚೆಗೂ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿರುವ ಬಿಜೆಪಿ ಮತ್ತು ಅದರ ಈಗಿನ ಸರ್ಕಾರ, ಹೀಗೆ ರೈತ, ಕೂಲಿಕಾರ್ಮಿಕ, ದಲಿತ ಹೋರಾಟಗಳಿಗೆ ಮಣಿಯುವುದು ವಿರಳ. ಅದಕ್ಕೆ ಮುಖ್ಯ ಕಾರಣ, ಆ ಪಕ್ಷ ಮತ್ತು ಸ್ವತಃ ಪ್ರಧಾನಿ ಮೋದಿಯವರು ಹೊಂದಿರುವ ಬೇರೆ ಬೇರೆ ಸ್ತರದ ಮತ್ತು ಬೇರೆ ಬೇರೆ ವಿಧದ ಬೆಂಬಲ ವ್ಯವಸ್ಥೆ. ಅದು ಬಿಜೆಪಿಯ ಅತ್ಯಂತ ವ್ಯವಸ್ಥಿತ ಕೇಡರ್ ವ್ಯವಸ್ಥೆ ಇರಬಹುದು, ಬಿಜೆಪಿಯ ಅಂಗಸಂಸ್ಥೆಗಳಾದ ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ, ಎಬಿವಿಪಿ ಸೇರಿದಂತೆ ಅದು ಹೊಂದಿರುವ ನೂರಾರು ಹಿಂದೂಪರ ಸಂಘಟನೆಗಳ ಜಾಲವಿರಬಹುದು, ಹಿಂದುತ್ವ ಮತ್ತು ರಾಷ್ಟ್ರೀಯತಾವಾದವನ್ನೇ ವೃತ್ತಿ ಸಿದ್ಧಾಂತವಾಗಿಸಿಕೊಂಡಿರುವ ಮುಖ್ಯವಾಹಿನಿ ಮಾಧ್ಯಮವಿರಬಹುದು, ಪೊಲೀಸ್ ಮತ್ತು ಇತರ ತನಿಖಾ ಮತ್ತು ಭದ್ರತಾ ವ್ಯವಸ್ಥೆಯಲ್ಲಿಯೂ ಇರುವ ಬಿಜೆಪಿಯ ಬಲಪಂಥೀಯ ಧೋರಣೆಯ ದೊಡ್ಡ ಪಡೆ ಇರಬಹುದು, ಆಡಳಿತಶಾಹಿ ಇರಬಹುದು, ಅಂತಿಮವಾಗಿ ಕಾನೂನು ವಲಯದಲ್ಲಿಯೂ ಬಿಜೆಪಿ ಹೊಂದಿರುವ ಬಲವಿರಬಹುದು,.. ಎಲ್ಲವೂ ಬಿಜೆಪಿಯ ಆಡಳಿತಕ್ಕೆ ದೊಡ್ಡ ಮಟ್ಟದ ಶಕ್ತಿ ತಂದುಕೊಟ್ಟಿವೆ.

ಬಿಜೆಪಿ ವಿರುದ್ಧ ಹೋರಾಟ ಕಟ್ಟುವ ಸವಾಲಿಗೆ ಸಾಕ್ಷಿಯಾದ ರೈತ ಹೋರಾಟ!
ದೆಹಲಿ–ಜನಗಣರಾಜ್ಯೋತ್ಸವ ಪರೇಡ್: 22 FIR, 100ಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ಇದು ಮೇಲ್ನೋಟಕ್ಕೆ ಅಧಿಕೃತವಾಗಿರುವ ಬಿಜೆಪಿಯ ಬೆಂಬಲ ವ್ಯವಸ್ಥೆ. ಇದರೊಂದಿಗೆ ಮಾಸಿಕ ನೂರಾರು ಕೋಟಿ ಸಂಬಳ ಕೊಟ್ಟು ನೇಮಿಸಿಕೊಂಡಿರುವ ಅದರ ಐಟಿ ಸೆಲ್, ಟ್ರೋಲ್ ಪಡೆ, ಪ್ರತಿ ಹಳ್ಳಿ-ಹಳ್ಳಿಯಲ್ಲೂ ಇರುವ ಕಟೌಟ್ ಬ್ಯಾನರ್ ಕಟ್ಟುವಷ್ಟೇ ವದಂತಿ, ಸುಳ್ಳು ಸುದ್ದಿಗಳನ್ನು ಹರಡಲೆಂದು ನೇಮಿಸಿಕೊಂಡಿರುವ ಹುಡುಗರ ದಂಡುಗಳು ಇಂತಹ ಹೊತ್ತಲ್ಲಿ ಹಗಲಿರುಳೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದುಡಿಯುತ್ತವೆ. ಸರ್ಕಾರದ ಕುತ್ತಿಗೆ ಮೇಲೆ ಕೂತಿದ್ದ ರೈತರನ್ನು ದೇಶದ ಜನಸಾಮಾನ್ಯರ ಕಣ್ಣಲ್ಲಿ ವಿಲನ್ ಮಾಡುವಷ್ಟಾದರೂ ಯಶಸ್ಸು ಸಿಕ್ಕಿದರೂ ಅದು ಸರ್ಕಾರಕ್ಕೆ ಮತ್ತು ಆಡಳಿತ ಚುಕ್ಕಾಣಿ ಹಿಡಿದವರಿಗೆ ದೊಡ್ಡ ನಿರಾಳದ ಸಂಗತಿ. ಯಾಕೆಂದರೆ; ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಒಂದು ಸಂಘಟನೆ, ವ್ಯಕ್ತಿಯ ವರ್ಚಸ್ಸು, ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ಅವರ ವಿರುದ್ಧದ ಮೊದಲ ಜಯ. ಒಮ್ಮೆ ಜನರ ಕಣ್ಣಲ್ಲಿ ಸಂಘಟನೆ- ವ್ಯಕ್ತಿಗಳು ವಿಲನ್ ಆದರೆ, ಮುಂದೆ ಅವರ ವಿರುದ್ಧ ಸಾಮಾನ್ಯ ಪೊಲೀಸ್ ರಿಂದ ಎನ್ ಐಎವರೆಗೆ ಇಲ್ಲಸಲ್ಲದ ಕಾನೂನು-ಕಾಯ್ದೆಗಳ ಅಸ್ತ್ರ ಪ್ರಯೋಗಿಸುವುದು ನೀರು ಕುಡಿದಷ್ಟೇ ಸರಳ.

ಬಿಜೆಪಿ ವಿರುದ್ಧ ಹೋರಾಟ ಕಟ್ಟುವ ಸವಾಲಿಗೆ ಸಾಕ್ಷಿಯಾದ ರೈತ ಹೋರಾಟ!
ಕೆಂಪುಕೋಟೆ ಧ್ವಜ ಪ್ರಕರಣ: ಬಿಜೆಪಿ ಸಂಸದ ಪರ ಪ್ರಚಾರ ನಡೆಸಿದ್ದ ರುವಾರಿ ದೀಪ್ ಸಿಧು

ಅದರಲ್ಲೂ, ಐಟಿ ಸೆಲ್- ಟ್ರೋಲ್ ಪಡೆ, ಫೇಕ್ ನ್ಯೂಸ್ ಹರಡುವ ವೃತ್ತಿಪರ ವಾಟ್ಸಪ್ ಗುಂಪುಗಳ ಜೊತೆಗೆ ಮುಖ್ಯವಾಹಿನಿ ಮಾಧ್ಯಮಗಳೂ ಸತ್ಯಾಸತ್ಯತೆ, ವಾಸ್ತವಾಂಶ, ದನಿ ಇರದವರ ದನಿಯಾಗುವುದು ಮುಂತಾದ ವೃತ್ತಿ ಆದರ್ಶಗಳ ಬದಲಿಗೆ ಧರ್ಮ, ಹುಸಿ ರಾಷ್ಟ್ರೀಯತೆ, ಆಳುವ ಪಕ್ಷದ ಬಾಲಬಡುಕತನ, ಅಧಿಕಾರಸ್ಥರ ಭಜನೆಯನ್ನೇ ವೃತ್ತಿಧರ್ಮವಾಗಿಸಿಕೊಂಡಿರುವಾಗ ಅಂತಹ ಷಢ್ಯಂತ್ರಗಳಿಗೆ ರಾಷ್ಟ್ರೀಯ ಮಟ್ಟದ ಮಾಧ್ಯಮಗಳ ದೊಡ್ಡ ಬೆಂಬಲವೂ ಸಿಗುತ್ತದೆ. ಹಾಗಾಗಿಯೇ ರೈತರ ಚಳವಳಿಯಷ್ಟೇ ಅಲ್ಲ; ಅದು ಎನ್ ಆರ್ ಸಿ-ಸಿಎಎ ಹೋರಾಟವಿರಬಹುದು, ಜೆಎನ್ ಯು ಹೋರಾಟವಿರಬಹುದು, ಪರಿಸರ ಹೋರಾಟಗಳಿರಬಹುದು, ಬಹುತೇಕ ಎಲ್ಲಾ ಹೋರಾಟಗಳ ಸಂದರ್ಭದಲ್ಲಿಯೂ ದೇಶದ್ರೋಹ, ವಿದೇಶಿ ಶಕ್ತಿಗಳ ಕೈವಾಡದ ಮಾತುಗಳು ಬಹಳ ಲೀಲಾಜಾಲವಾಗಿ ಬಳಕೆಯಾಗಿವೆ. ಅದು ಕೇವಲ ಆಳುವ ಪಕ್ಷ ಮತ್ತು ಅದರ ಪರಿವಾರದ ಭಾಷೆಯಷ್ಟೇ ಆಗಿರದೆ, ಮುಖ್ಯವಾಹಿನಿಗಳ ಭಾಷೆಯೂ ಆಗಿದೆ ಎಂಬುದು ಬಿಜೆಪಿ ಮತ್ತು ಅದರ ತಂತ್ರಗಾರಿಕೆ ಹೇಗೆ ದೇಶದ ಮಾಧ್ಯಮಗಳ ಮನೋಧರ್ಮವೂ ಆಗಿದೆ ಎಂಬುದಕ್ಕೆ ಸಾಕ್ಷಿ.

ಅಂತಹ ಮನೋಧರ್ಮ ಯಾವ ಮಟ್ಟಕ್ಕೆ ಹೋಗಿದೆ ಎಂದರೆ; ಪ್ರಧಾನಮಂತ್ರಿ ಅಥವಾ ಅವರ ಆಡಳಿತ ನೀತಿಗಳ ವಿರುದ್ಧ ಟೀಕಿಸುವುದನ್ನು, ದೇಶದ ಅಧಿಕಾರದ ಚುಕ್ಕಾಣಿ ಹಿಡಿದವರು ಮತ್ತು ಅವರ ಆಡಳಿತ ವೈಖರಿಯ ವಿರುದ್ಧದ ಟೀಕೆಯಾಗಿ, ಪ್ರತಿಕ್ರಿಯೆಯಾಗಿ ನೋಡುವ ಬದಲು, ಅದನ್ನು ದೇಶದ ವಿರುದ್ಧದ ಹೇಳಿಕೆಯಾಗಿ, ದೇಶ ನಿಂದನೆಯ ಹೇಳಿಕೆಯಾಗಿ, ದೇಶದ್ರೋಹದ ಕೃತ್ಯವಾಗಿ ಸ್ವತಃ ಮಾಧ್ಯಮಗಳೂ ಬಿಂಬಿಸುವುದು ಈಗಿನ ರೂಢಿಯಾಗಿದೆ.

ಬಿಜೆಪಿ ವಿರುದ್ಧ ಹೋರಾಟ ಕಟ್ಟುವ ಸವಾಲಿಗೆ ಸಾಕ್ಷಿಯಾದ ರೈತ ಹೋರಾಟ!
ಹೋರಾಟದಿಂದ ಹಿಂದೆ ಸರಿದ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ

ಹಾಗಾಗಿ, ಒಂದು ರೀತಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ನಡೆಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುವ, ಆದರೆ ವಾಸ್ತವದಲ್ಲಿ ಸಂವಿಧಾನ, ಪ್ರಜಾಸತ್ತೆಯನ್ನು ಮೀರಿದ ತನ್ನದೇ ಆದ ಬಲಿಷ್ಠ ಪರ್ಯಾಯ ವ್ಯವಸ್ಥೆಯ ಮೇಲೆ ಹೆಚ್ಚು ವಿಶ್ವಾಸವಿಟ್ಟಿರುವ ಮತ್ತು ಧರ್ಮ ಮತ್ತು ದೇಶ ಎಂಬ ಭಾವನಾತ್ಮಕ ಸಂಗತಿಗಳ ಮೇಲೆ ಎಲ್ಲವನ್ನೂ ಗೆಲ್ಲುವ ತಂತ್ರಗಾರಿಕೆ ಹೊಂದಿರುವ ಒಂದು ಪಕ್ಷದ ಆಡಳಿತದ ವಿರುದ್ದ ಸಾಮೂಹಿಕ ಹೋರಾಟ ಕಟ್ಟುವುದು ಮತ್ತು ಅದನ್ನು ಎಲ್ಲಾ ಪಿತೂರಿಗಳ ಹೊರತಾಗಿಯೂ ಯಶಸ್ವಿಯಾಗಿ ಮುನ್ನಡೆಸುವುದು ಚಾರಿತ್ರಿಕ ಸವಾಲು.

ಸದ್ಯ ದೇಶದಲ್ಲಿ ನಡೆಯುತ್ತಿರುವ ರೈತ ಚಳವಳಿಗೆ, ತನ್ನದೇ ಆದ ನೂರೆಂಟು ಆಂತರಿಕ ಬಿಕ್ಕಟ್ಟು, ದೌರ್ಬಲ್ಯಗಳ ಹೊರತಾಗಿ ಇಂತಹ ಒಂದು ಬಲಿಷ್ಠ ಪರ್ಯಾಯ ವ್ಯವಸ್ಥೆಯ ಸಂಚುಗಳ ವಿರುದ್ಧ ಸೆಣೆಸಿ ಗೆಲ್ಲುವ ಮಹಾ ಸವಾಲು ಎದುರಾಗಿದೆ. ಗಣರಾಜ್ಯೋತ್ಸವ ದಿನದ ಟ್ರ್ಯಾಕ್ಟರ್ ಪರೇಡ್ ಹಾದಿ ತಪ್ಪಿಸಿದ ವಿದ್ಯಮಾನ ಕೂಡ ಅಂತಹ ಸಂಚಿನ ಒಂದು ಬಹಳ ಲೆಕ್ಕಾಚಾರದ ದಾಳ! ಆ ಹಿನ್ನೆಲೆಯಲ್ಲಿ ನೋಡಿದರೆ; 60 ದಿನಗಳ ಆಹೋರಾತ್ರಿ ಹೋರಾಟದಲ್ಲಿ ರೈತರು ತೋರಿದ ಸಂಯಮ ಮತ್ತು ಬದ್ಧತೆಯ ನೂರು ಪಟ್ಟನ್ನು ಈಗಿನ ಈ ಸ್ಥಿತಿ ಬೇಡುತ್ತದೆ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com