ಕರೋನಾ ನಿರ್ವಹಣೆ: ವಿವಿಧ ರಾಷ್ಟ್ರಗಳ ವಿವಿಧ ರೀತಿಗಳು

ಕರೋನಾಕ್ಕೆ ವ್ಯಾಕ್ಸಿನ್ ಬಂದ ಮೇಲೂ‌ ಅದು ಪ್ರಪಂಚದಾದ್ಯಂತ ಉಳಿಸಿರುವ ಕರಿ ನೆರಳು, ಆರ್ಥಿಕ ಹಿಂಜರಿತ, ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ದಶಕಗಳೇ ಬೇಕಾಗಬಹುದೇನೋ.
ಕರೋನಾ ನಿರ್ವಹಣೆ: ವಿವಿಧ ರಾಷ್ಟ್ರಗಳ ವಿವಿಧ ರೀತಿಗಳು

ಚೀನಾದ ವುಹಾನ್‌ನಲ್ಲಿ ನೋವೆಲ್ ಕರೋನಾ ವೈರಸ್‌ನ ಮೊದಲ ಪ್ರಕರಣ ಪತ್ತೆಯಾಗಿ ಒಂದು ವರ್ಷ ಕಳೆಯಿತು. ಚೀನಾದಲ್ಲಿ ಹುಟ್ಟಿದ ಈ ವೈರಸ್ ಎಲ್ಲಾ ಏಳು ಖಂಡಗಳಲ್ಲೂ ಹರಡಿ ಸುಮಾರು ತೊಂಬತ್ತು ಮಿಲಿಯನ್‌ನಷ್ಟು ಜನರನ್ನು ಭಾದಿಸಿ ಎರಡು ಮಿಲಿಯನ್ ಜನರ ಸಾವಿಗೆ ಕಾರಣವಾಯಿತು. ಈ ಒಂದು ವರ್ಷದಲ್ಲಿ ಜಾಗತಿಕವಾಗಿ ಆರ್ಥಿಕತೆಯು ನಾಲ್ಕು ಪ್ರತಿಶತಕ್ಕಿಂತಲೂ ಜಾಸ್ತಿ ಕುಸಿಯಿತು. ಇದು ಎರಡನೇ ಮಹಾಯುದ್ಧದ ನಂತರದ ಅತಿ ದೊಡ್ಡ ಆರ್ಥಿಕ ಕುಸಿತ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಕೋವಿಡ್‌ನ ಹಾನಿಯನ್ನು ಸರಿಪಡಿಸಲು ಜಗತ್ತು ಅನುಸರಿಸಿದ ಮಾರ್ಗಗಳು ಹಲವು. ಗಡಿಯನ್ನು ಮುಚ್ಚುವುದು, ಜನರ ಒಟ್ಟುಗೂಡುವಿಕೆಯನ್ನು ನಿಷೇಧಿಸುವುದು, ಲಾಕ್‌ಡೌನ್‌ ಹೇರುವುದು, ಆರ್ಥಿಕ ನೆರವು ಒದಗಿಸುವುದು, ಕೋವಿಡ್ ಪರೀಕ್ಷೆ ಮತ್ತು ಟ್ರೇಸಿಂಗ್. ಹೀಗೆ ಜಗತ್ತಿನ ನಾಯಕರು ಅನುಸರಿಸದೇ ಇರುವ ಮಾರ್ಗಗಳೇ ಇಲ್ಲ ಎನ್ನಬಹುದು. ಅತ್ಯುತ್ತುಮ‌ ನಾಯಕರು ಅಂತ ಕರೆಸಿಕೊಂಡವರಿಗೂ ಕೋವಿಡ್ ನಿರ್ವಹಣೆ ಅತ್ಯಂತ ಕಠಿಣಕರವಾಗಿ ತೋರಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಮಧ್ಯೆ ಸರ್ಕಾರಿ ನಿಯಮಗಳು, ಜನರ ಧ್ರುವೀಕರಣ, ಆರ್ಥಿಕ ಅಸ್ಥಿರತೆ, ಮಾಧ್ಯಮಗಳ ವೈಭವೀಕರಣ, ಸಾರ್ವಜನಿಕ ಅಭಿಪ್ರಾಯ, ಸಾಂಸ್ಥಿಕ ನಂಬಿಕೆ, ಆಡಳಿತದ ಸದುಪಯೋಗ ಮತ್ತು ದುರುಪಯೋಗ ಮುಂತಾದ ಸಂಗತಿಗಳು ದೇಶದೊಳಗೆ ಹುಟ್ಟಿಸಿ ಕ್ಷೋಭೆಯು ಕಡಿಮೆಯದಲ್ಲ.

ಈ ಬಗ್ಗೆ ಸಂಶೋಧನೆ ಕೈಗೊಂಡಿರುವ 'ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್'ನ ಪ್ರೊಫೆಸರ್ ಆ್ಯಡಂ ಒಲಿವರ್ ವಿವಿಧ ದೇಶಗಳು ಈ ಸಾಂಕ್ರಾಮಿಕ ರೋಗಕ್ಕೆ ಹೇಗೆ ಪ್ರತಿಕ್ರಿಯಿಸಿವೆ ಎಂಬುದನ್ನು ದಾಖಲು ಮಾಡಲು ಪ್ರಯತ್ನಿಸಿದ್ದಾರೆ. ದೇಶಗಳ ನಡುವೆ ಸಾಮಾನ್ಯವಾಗಿ ಮಾಡುವ ಹೋಲಿಕೆಗಳನ್ನು ಕೋವಿಡ್‌ನೊಂದಿಗೆ ಹೋಲಿಸಲಾಗುವುದಿಲ್ಲ. "ನಾವು ಆರೋಗ್ಯದ ಮೇಲಿನ ಪರಿಣಾಮಗಳನ್ನು ಹೊರತಾಗಿಯೂ ಯೋಚಿಸಬೇಕಾಗುತ್ತದೆ. ಇದರ ವ್ಯಾಪ್ತಿಯನ್ನು ಅಂದಾಜಿಸುವುದೇ ಕಷ್ಟಕರ. ಆರ್ಥಿಕ, ಸಾಮಾಜಿಕ, ಪಾರಿಸರಿಕ ಹಾನಿಯನ್ನು ಸುಲಭವಾಗಿ ಗುರುತಿಸಲಾಗುವುದಿಲ್ಲ" ಎಂದು ಹೇಳಿರುವುದಾಗಿ ಧ್ರುವ್ ಕುಲ್ಲೂರ್ ಅವರು ನ್ಯೂಯಾರ್ಕರ್.ಕಾಮ್‌ನಲ್ಲಿ ಬರೆದಿರುವ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ‌.

ಒಲಿವರ್ ಜಗತ್ತಿನ ಸರ್ಕಾರಗಳ ಪ್ರತಿಕ್ರಿಯೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸುತ್ತಾರೆ.

1. ತ್ವರಿತ ಕ್ರಮ

2. ಮೃದು ಧೋರಣೆ

3. ಕಠಿಣ ಕ್ರಮ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಬ್ರಿಟನ್ ಮೊದಲು ಕೋವಿಡ್ ಕಾಲದ ನಿಯಮಗಳ ಬಗ್ಗೆಯೂ ಮೃದು ಧೋರಣೆ ತಾಳಿತ್ತು. ಆದರೆ ಇಂಗ್ಲೆಂಡಿನಲ್ಲಿ‌ ಕೋವಿಡ್ ತೀವ್ರವಾಗಿ ಹಬ್ಬಲು ಪ್ರಾರಂಭಿಸಿದ ನಂತರ ಮೂರನೇ ವಿಧಾನವನ್ನು ಅನುಸರಿಸಿತು. ವಾಸ್ತವವಾಗಿ ಜಗತ್ತಿನ ಬಹುತೇಕ ದೇಶಗಳು ಕೋವಿಡ್ ನಿರ್ವಹಿಸುವಸುವಾಗ ಒಂದಲ್ಲ ಒಂದು ಹಂತದಲ್ಲಿ ಕಠಿಣ ಕ್ರಮವನ್ನು ಅನುಸರಿಸಿದೆ. ಕರೋನಾ ಕೇಸ್‌ಗಳು ಹೆಚ್ಚಾದಂತೆ, ಆಸ್ಪತ್ರೆಗಳು ತುಂಬಿದಂತೆ ಸರ್ಕಾರ ಮಾಸ್ ಧರಿಸುವುದನ್ನು ಕಡ್ಡಾಯ ಮಾಡಿತು, ಕರ್ಫ್ಯೂ ವಿಧಿಸಿತು, ದೊಡ್ಡಮಟ್ಟದ ಗ್ಯಾದೆರಿಂಗ್‌ಗಳನ್ನು ನಿಷೇಧಿಸಿತು ಮತ್ತು ಪರಿಸ್ಥಿತಿ ಸುಧಾರಿಸುವವರೆಗೆ ಲಾಕ್‌ಡೌನ್‌ ಹೇರಿತು.

ಆದರೆ ಯುರೋಪಿನ‌ ಮತ್ತೊಂದು ದೇಶ ಜರ್ಮನಿಯು ಮೊದಲ ವಿಧಾನವನ್ನು ಆರಿಸಿಕೊಂಡಿತು. ಫೆಡರಲಿಸ್ಟ್ ರಾಜಕೀಯ ವ್ಯವಸ್ಥೆ ಇರುವ ಜರ್ಮನ್ ಕೋವಿಡ್ ಸಂಬಂಧಿತ ನಿರ್ಧಾರಗಳನ್ನು ಅತ್ಯಂತ ತ್ವರಿತವಾಗಿ ಕೈಗೊಂಡಿತು. ಕ್ವಾಂಡಮ್ ಕೆಮಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆ್ಯಂಜೆಲಾ ಮಾರ್ಕೆಲ್ ನಿಯಮಿತವಾಗಿ ಪ್ರಾದೇಶಿಕ ಗವರ್ನರ್‌ಗಳನ್ನು ಭೇಟಿಯಾಗಿ ಕೋವಿಡ್ 19 ನಿಯಮಗಳನ್ನು ರೂಪಿಸಲು ನೆರವಾಗುತ್ತಿದ್ದರು ಮತ್ತು ವೈಜ್ಞಾನಿಕ ಸಂದೇಶಗಳನ್ನು ಪತ್ರಿಕಾ ಗೋಷ್ಠಿಗಳಲ್ಲಿ, ಸಂದರ್ಶನಗಳಲ್ಲಿ ಮತ್ತು ಪೋಡ್ಕಾಸ್ಟ್‌ಗಳಲ್ಲಿ ನೀಡುತ್ತಿದ್ದರು. ಇದು ಜನತೆಗೆ ಕೋವಿಡ್‌ನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು.

ಸಾಂಕ್ರಾಮಿಕ ರೋಗದ ಹಬ್ಬುವಿಕೆ ಪ್ರಾರಂಭವಾದಂತೆ ಜರ್ಮನಿಯು ಮೂಲ ಸೌಕರ್ಯಗಳ, ಸ್ಪಷ್ಟ ಸಂವಹನಗಳ, ವ್ಯಾಪಕ ಪರೀಕ್ಷೆಗಳ, ಪರಿಣಾಮಕಾರಿ ಕಾಂಟಾಕ್ಟ್ ಟ್ರೇಸಿಂಗ್ ಮೂಲಕ ಕರೋನಾದ ಮೇಲೆ ಹತೋಟಿ ಸಾಧಿಸಿತು‌. ಪ್ರತಿ ಇಪ್ಪತ್ತು ಸಾವಿರ ನಾಗರಿಕರಿಗೆ ಐವರು ಸದಸ್ಯರಿರುವ ತಂಡವೊಂದು ಕಾಂಟಾಕ್ಟ್ ಟ್ರೇಸ್ ಮಾಡಲು‌ ಲಭ್ಯವಿರುವಂತೆ ಯೋಜನೆ ರೂಪಿಸಿ, ಈ ಯೋಜನೆಯಲ್ಲಿ ಜರ್ಮನಿಯ ಸೈನಿಕರನ್ನೂ ಬಳಸಿಕೊಂಡಿತು. ಸರ್ಕಾರದ ಮೊಬೈಲ್ ಆ್ಯಪ್ ಒಂದು ಕೋವಿಡ್ ಸಂಬಂಧಿತ ವರದಿಗಳನ್ನು ತನ್ನ ಬಳಕೆದಾರರಿಗೆ ನಿರಂತರವಾಗಿ ಒದಗಿಸುತ್ತಿತ್ತು. ಅಧಿಕಾರಿಗಳ ಪ್ರಕಾರ ಹದಿನಾರು ಮಿಲಿಯನ್ ಜರ್ಮನ್ನರು ಅಂದರೆ ತನ್ನ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು ಈ ಆ್ಯಪ್ ನ ಪ್ರಯೋಜನ ಪಡೆದುಕೊಂಡಿದ್ದಾರೆ. ಜರ್ಮನಿಯ ಸುಧಾರಿತ ಆರೋಗ್ಯ ರಕ್ಷಣಾ ವ್ಯವಸ್ಥೆಯೂ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ದೇಶಕ್ಕೆ ನೆರವಾಗಿತ್ತು. ಆದರೆ ಅಕ್ಟೋಬರ್‌ನ ಮೊದಲೆರಡು ವಾರಗಳಲ್ಲಿ ಜರ್ಮನಿಯಲ್ಲೂ ದೈನಿಕ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದ್ದವು. ಹಾಗಾಗಿ ಸರ್ಕಾರ ಮತ್ತೆ ಅಲ್ಲಿ ನಿರ್ಬಂಧ ಹೇರಲು ನಿರ್ಧರಿಸಿತು.

ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಕರೋನಾ ಪರಿಣಾಮವನ್ನು ಕೀಳಂದಾಜಿಸಿ 'ಇದು ಒಂದು ಸಣ್ಣ ಜ್ವರ' ಮತ್ತು 'ನಿಕೃಷ್ಟ ಶೀತ' ಅಂದಿದ್ದರು. ಅವರು ದೇಶದ ವಿಜ್ಞಾನಿಗಳ ಆತಂಕವನ್ನು ನಿರ್ಲಕ್ಷಿಸಿ ದೇಶದ ಆರೋಗ್ಯ ಮಂತ್ರಿಯೊಂದಿಗೇ ಬಹಿರಂಗವಾಗಿ ಜಗಳಕ್ಕಿಳಿದಿದ್ದರು. ಈ ಹಿನ್ನಲೆಯಲ್ಲಿ ಒಂದು ತಿಂಗಳೊಳಗೆ ಇಬ್ಬರು ಆರೋಗ್ಯ ಮಂತ್ರಿಗಳ ರಾಜಿನಾಮೆ ಪಡೆದಿದ್ದರು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮನೆಯಲ್ಲಿರುವುದು 'ದುರ್ಬಲರು' ಮತ್ತು ವೈರಸ್ ಬ್ರೆಜಿಲ್‌ನ್ನು ಭಾದಿಸುವುದಿಲ್ಲ ಎಂದು ಹೇಳಿ ಲಾಕ್‌ಡೌನ್‌ ಹೇರುವುದನ್ನೇ ವಿರೋಧಿಸಿದ್ದರು. ಪರಿಣಾಮವಾಗಿ ಬ್ರೆಜಿಲ್‌ನಲ್ಲಿ ಎಂಟು ಮಿಲಿಯನ್ ‌ಗಿಂತಲೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾದವು ಮತ್ತು 2,00,000 ಅಧಿಕ ಸಾವು ಸಂಭವಿಸಿದವು. ಬ್ರೆಜಿಲ್‌ನ ಆರ್ಥಿಕತೆಯು 2020ರ ಎರಡನೇ ತ್ರೈಮಾಸಿಕದಲ್ಲಿ ಪ್ರತಿಶತ ಹತ್ತರಷ್ಟು ಕುಸಿಯಿತು. ಈ ಮೊದಲು Zika ಮತ್ತು HIV ವೈರಸ್ ಸಾರ್ವಜನಿಕ ಆರೋಗ್ಯದ ಮೇಲೆ ಪ್ರಹಾರ ನಡೆಸಿದಾಗ ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದ ಬ್ರೆಜಿಲ್ ಬೊಲ್ಸೊನಾರೋ ಅವರ ಬೇಜವಾಬ್ದಾರಿಯುತ ಆಡಳಿತಕ್ಕೆ ತೆತ್ತ ಬೆಲೆ ಇದು.

ಟೂರಿಸಂನ್ನೇ ನಂಬಿಕೊಂಡಿರುವ ಪುಟ್ಟ ದೇಶ ರ‌್ವಾಂಡ ಕರೋನಾವನ್ನು ನಿರ್ವಹಿಸಿದ ರೀತಿ ಅಮೋಘ. ಉಗಾಂಡ ಗಡಿಯ ಹತ್ತಿರದ ದಟ್ಟ ಕಾಡನ್ನು ವೀಕ್ಷಿಸಲು ಮತ್ತು ಅಳಿವಿನಂವಿನಲ್ಲಿರುವ ಪರ್ವತದ ಗೊರಿಲ್ಲಾಗಳನ್ನು ನೋಡಲು ಲಕ್ಷಗಟ್ಟಲೆ ಜನ ವರ್ಷಂಪ್ರತಿ ರ‌್ವಾಂಡ ದೇಶಕ್ಕೆ ಭೇಟಿ ನೀಡುತ್ತಾರೆ. 1994ರ ಕಿಗೋಲಿ ನರಮೇಧದ ಇತಿಹಾಸವನ್ನು ಬಗಲಲ್ಲಿಟ್ಟುಕೊಂಡ ರವಾಂಡ ಕೋವಿಡ್ ಹರಡುತ್ತಿದ್ದಂತೆ ದೇಶದೆಲ್ಲೆಡೆ ಲಾಕ್‌ಡೌನ್‌ ಹೇರಿತು. ಡಿಸೆಂಬರ್‌ನಲ್ಲಿ ಯುರೋಪಿಯನ್ ಯುನಿಯನ್‌ನ ದೇಶಗಳು ಇತರ ಕೆಲ ರಾಷ್ಟ್ರಗಳಿಂದ ಒಳಬರುವ ವಿಮಾನಗಳಿಗಿದ್ದ ನಿರ್ಬಂಧ ತೆರವು ಗೊಳಿಸಿತ್ತು. ಅವುಗಳಲ್ಲಿ ರವಾಂಡ ದೇಶವೂ ಒಂದು. ಹದಿಮೂರು ಮಿಲಿಯನ್ ಜನಸಂಖ್ಯೆ ಇರುವ ರವಾಂಡದಲ್ಲಿ ಕೇವಲ ಹತ್ತು ಸಾವಿರ ಕೋವಿಡ್ ಕೇಸುಗಳು ಮಾತ್ರ ದಾಖಲಾಗಿವೆ ಮತ್ತು ಇನ್ನೂರಕ್ಕಿಂತಲೂ ಕಡಿಮೆ ಸಾವು ಸಂಭವಿಸಿದೆ. ರವಾಂಡ ಕೋವಿಡ್ ನಿಯಂತ್ರಿಸಲು ಮೂರನೇ ವಿಧ ಅಂದ್ರೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. 820 ಡಾಲರ್‌ಗಳಷ್ಟು ತಲಾ ಆದಾಯವನ್ನು ಹೊಂದಿರುವ ಈ ದೇಶ ಕೋವಿಡ್ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ನಡೆಸಿತ್ತು. ಆಫ್ರಿಕಾ ಖಂಡದಲ್ಲಿ ಕೋವಿಡ್‌ಗೆ ತ್ವರಿತವಾಗಿ ಪ್ರತಿಕ್ರಿಯಿಸಿ ಯಶಸ್ವಿಯಾಗಿ ನಿಭಾಯಿಸಿದ್ದೂ ರವಾಂಡವೇ. ಹೆಚ್‌ಐವಿಯೊಂದಿಗೆ ಹೋರಾಡಲು ನಿರ್ಮಿಸಿದ್ದ ಪ್ರಯೋಗಾಲಯಗಳು, ಯಂತ್ರಗಳು, ಆರೋಗ್ಯ ಸಂಸ್ಥೆಗಳು, ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ಕೋವಿಡ್ ಕಾಲದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಆರ್ಥಿಕಾಭಿವೃದ್ಧಿ ಮತ್ತು ಸಹಕಾರಿ ಸಂಸ್ಥೆಯಲ್ಲಿನ ದೇಶಗಳಲ್ಲಿ 2020ರಲ್ಲಿ ಅತ್ಯಂತ ಕಡಿಮೆ ಆರ್ಥಿಕ ಕುಸಿತ ಅನುಭವಿಸಿದ ದೇಶ ದಕ್ಷಿಣ ಕೊರಿಯಾ. ಇದರ ಆರ್ಥಿಕ ಕುಸಿತ ಕೇವಲ ಒಂದು ಪ್ರತಿಶತ. 2015ರ ಮೆರ್ಸ್ (MERS) ವೈರಾಣುವಿನೊಂದಿಗೆ ಹೋರಾಟವು ದ.ಕೊರಿಯಾಗೆ ಕೋವಿಡ್ ಹೋರಾಟದಲ್ಲೂ ನೆರವಾಗಿದೆ. 2015ರ ನಂತರ ಸರ್ಕಾರ ಆರೋಗ್ಯದ ಮೇಲೆ ಹೆಚ್ಚಿನ ಹಣ ಮತ್ತು ಆಸಕ್ತಿ ಹೂಡಿದೆ. ಕರೋನಾ ಸೋಂಕು ಮೊದಲ ಬಾರಿ ಪತ್ತೆಯಾದ ತಕ್ಷಣ ಅಧಿಕಾರಿಗಳು ಪರೀಕ್ಷೆ, ಟ್ರೇಸಿಂಗ್ ಮತ್ತು ಐಸೋಲೇಷನ್‌ಗಳನ್ನು ಅತ್ಯಂತ ಕ್ಷಿಪ್ರ ಗತಿಯಲ್ಲಿ ಪ್ರಾರಂಭಿಸಿದರು. ಕೊರಿಯಾದಲ್ಲಿ ಕೋವಿಡ್ ಪರೀಕ್ಷೆ ಉಚಿತ. ಪರೀಕ್ಷೆ ಮಾಡಿಸಿಕೊಳ್ಳಬಯಸುವವರು ಒಂದು ನಿಗದಿತ ನಂಬರಿಗೆ ಕರೆ ಮಾಡಿ ತಿಳಿಸಿದರೆ ಸಾಕು ಅವರೇ ಬಂದು ಪರೀಕ್ಷೆ ಮಾಡುತ್ತಾರೆ. ಪ್ರಭಾವಶಾಲಿಯಾಗಿ ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡದ್ದು ಕೊರಿಯಾದ ಯಶಸ್ಸಿಗೆ ಮತ್ತೊಂದು ಕಾರಣ. ಹೊಸ ಪ್ರಕರಣ ಪತ್ತೆಯಾದರೆ ಆ ಏರಿಯಾದ ಎಲ್ಲಾ ನಾಗರಿಕರಿಗೂ ಮೇಸೇಜ್ ರವಾನೆಯಾಗುತ್ತದೆ. 51 ಮಿಲಿಯನ್‌ಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಕೊರಿಯಾದಲ್ಲಿ ಐನೂರಕ್ಕಿಂತ ಕಡಿಮೆ ಕೋವಿಡ್ ಸಾವುಗಳು ದಾಖಲಾಗಿವೆ.

ಜಾಗತಿಕ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಾರ್ಜ್‌ ಮ್ಯಾಸೊನ್ ಯುನಿವರ್ಸಿಟಿಯ ಆರ್ಥಿಕ ತಜ್ಞ ಟೈಲರ್ ಕೋವೆನ್ " ಪ್ರಪಂಚದ ವಿವಿಧ ದೇಶಗಳು ಕೋವಿಡ್‌ಗೆ ಹೇಗೆ ಪ್ರತಿಕ್ರಿಯಿಸಿವೆ ಎಂದು ಈಗಲೇ ನಿರ್ಣಯಿಸಲಾಗುವುದಿಲ್ಲ. ಯಾವ ನಿರ್ಧಾರ ಸರಿ ಯಾವುದು ತಪ್ಪು ಎನ್ನುವುದು ಅರ್ಥವಾಗಲು ದಶಕಗಳೇ ಬೇಕಾಗಬಹುದು" ಎನ್ನುತ್ತಾರೆ. ಕೆಲವು ದೇಶದ ಸರ್ಕಾರಗಳು ತ್ವರಿತವಾಗಿ ಸ್ಪಂದಿಸಿದರೆ ಇನ್ನೂ ಕೆಲವು ದೇಶಗಳಲ್ಲಿ ಜನ ಸರ್ಕಾರದ ಮೇಲಿನ‌ ನಂಬಿಕೆ ಕಳೆದುಕೊಳ್ಳುವಂತಾಯಿತು. ಜನತೆಯ ಬದುಕು ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವ ತೀರ್ಮಾನಗಳು ಸರ್ಕಾರದ ಮೇಲೆ ಜನತೆಗಿರುವ ನಂಬಿಕೆಯನ್ನೂ ಪ್ರಭಾವಿಸುತ್ತದೆ ಎಂದೂ ಅವರು ಅಭಿಪ್ರಾಯ ಪಡುತ್ತಾರೆ.

ಕರೋನಾ ವೈರಸ್‌ನ ವ್ಯಾಕ್ಸಿನ್‌ಗಳು ಕೂಡ ಸರ್ಕಾರಗಳ ಸಮರ್ಥತೆಯನ್ನು‌ ಮತ್ತು ಅಸಮರ್ಥತೆಯನ್ನು ಅರ್ಥ ಮಾಡಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಬಲ್ಲದು. ರೋಗದಂತೆಯೇ ವ್ಯಾಕ್ಸಿನ್ ಸಹ ಜನತೆಯ ಮೇಲೆ ಪ್ರಭಾವ ಬೀರಬಹುದು. ವ್ಯಾಕ್ಸಿನ್ ವಿತರಿಸಲು ಸರ್ಕಾರಗಳು ಕೈಗೊಳ್ಳುವ ಯೋಜನೆಗಳು ಅದರ ಕಾರ್ಯದಕ್ಷತೆಯನ್ನೂ ಜಾಹೀರು ಪಡಿಸಬಹುದು.

ಕರೋನಾಕ್ಕೆ ವ್ಯಾಕ್ಸಿನ್ ಬಂದ ಮೇಲೂ‌ ಅದು ಪ್ರಪಂಚದಾದ್ಯಂತ ಉಳಿಸಿರುವ ಕರಿ ನೆರಳು, ಆರ್ಥಿಕ ಹಿಂಜರಿತ, ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ದಶಕಗಳೇ ಬೇಕಾಗಬಹುದೇನೋ. ಖಂಡಿತವಾಗಿಯೂ ಕರೋನಾ ಈ ಶತಮಾನದ ಅತ್ಯಂತ ದೊಡ್ಡ ಪಿಡುಗಾಗಿ ಇತಿಹಾಸದಲ್ಲಿ ದಾಖಲಾಗಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com