ಸುಪ್ರೀಂ ಕೋರ್ಟ್ ಜನರ ವಿಶ್ವಾಸ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ; ನ್ಯಾ. ನಾಗಮೋಹನ್‌ ದಾಸ್

ಸಿಎಎ ವಿಚಾರ, ವಲಸೆ ಕಾರ್ಮಿಕರ ಸಂಕಷ್ಟ, ಜಮ್ಮು ಕಾಶ್ಮೀರದ 70 ರಿಂದ 80 ಲಕ್ಷ ಜನರ ಮೂಲಭೂತ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಕ್ಷಣಕ್ಕೆ ಸ್ಪಂದಿಸಿಲ್ಲ
ಸುಪ್ರೀಂ ಕೋರ್ಟ್ ಜನರ ವಿಶ್ವಾಸ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ; ನ್ಯಾ. ನಾಗಮೋಹನ್‌ ದಾಸ್

ಭಾರತದ ನ್ಯಾಯಾಂಗ ಅದರಲ್ಲಿಯೂ ಮುಖ್ಯವಾಗಿ ಸರ್ವೋಚ್ಛ ನ್ಯಾಯಾಲಯದ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದಾಗ ಜನರ ವಿಶ್ವಾಸವನ್ನು ಕೆಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ರೈತರ ವಿಚಾರವಲ್ಲ, ಸಿಎಎ ವಿಚಾರ, ಕೋವಿಡ್‌ ಸಂಧರ್ಭದಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟದ ವಿಚಾರ, ಜಮ್ಮು ಕಾಶ್ಮೀರದ 70 ರಿಂದ 80 ಲಕ್ಷ ಜನರ ಮೂಲಭೂತ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತಕ್ಷಣಕ್ಕೆ ಸ್ಪಂದಿಸಿಲ್ಲ, ಕೆಲವು ದಿನಗಳ ನಂತರ ಮಾಧ್ಯಮಗಳ ವಿಮರ್ಶೆ,ಜನಸಾಮಾನ್ಯರು ಧ್ವನಿಯೆತ್ತಿದ್ದಾಗ ನಿಧಾನವಾಗಿ ಗಮನಹರಿಸಿತ್ತು ಎಂದು ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶ ಹೆಚ್‌. ಎನ್‌ ನಾಗಮೋಹನ್‌ ದಾಸ್‌ ಹೇಳಿದ್ದಾರೆ.

ಪ್ರತಿಧ್ವನಿಯ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಭಾರತದ ಪ್ರಸಕ್ತ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ, ರೈತರ ಆಂದೋಲನ, ಸುಪ್ರೀಂ ಕೋರ್ಟ್‌ ಕಾರ್ಯ ವೈಖರಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೃಷಿ ಕಾನೂನುಗಳ ಕುರಿತು ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್‌ ಕ್ರಮದ ಕುರಿತಂತೆ ಮಾತನಾಡಿದ ಅವರು, "ಇವತ್ತು ರೈತರ ವಿಚಾರದಲ್ಲಿಯೂ ಸುಪ್ರೀಂ ಕೋರ್ಟ್‌ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಸರ್ವೋಚ್ಚ ನ್ಯಾಯಾಲಯವು ಇವತ್ತು ನೀಡಿದ ತೀರ್ಪು ರೈತ ಹೋರಾಟದ ಪ್ರಾರಂಭದಲ್ಲಿಯೇ ಈ ನಿರ್ಧಾರ ತೆಗೆದುಕೊಂಡಿದ್ದರೆ ಇಷ್ಟು ಹೊತ್ತಿಗೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ರೈತರ ಸಮಸ್ಯೆಯನ್ನು ಕೇಂದ್ರ ಸರ್ಕಾರ ಬಗೆಹರಿಸದಿದ್ದರೆ ಸುಪ್ರೀಂ ಕೋರ್ಟ್‌ ಭಾಗಿಯಾಗಿ ಸಮಿತಿ ರಚಿಸಿ ಸೂಕ್ತ ತಿರ್ಮಾನ ಕೈಗೊಳ್ಳುತ್ತೆ ಎಂಬ ತೀರ್ಪು ಸೂಕ್ತವಾಗಿದೆ” ಎಂದಿದ್ದಾರೆ.

ಈ ಬೆಳವಣಿಗೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರ ಎಚ್ಚೆತ್ತು, ರೈತರ ಸಮಸ್ಯೆಯನ್ನು ಪರಿಹಾರ ಮಾಡಬಹುದು ಎಂಬ ಆಶಾಭಾವನೆ ಇಟ್ಟುಕೊಳ್ಳೋಣ, ಆದರೆ ಸಂಪೂರ್ಣ ನಂಬಿಕೆಯಿಲ್ಲ, ಅನೇಕ ಸಂದರ್ಭದಲ್ಲಿ ಇಂತಹ ಭ್ರಮೆಗಳು ನಿರಾಸೆಗೊಳಿಸಿವೆ. ಸುಪ್ರೀಂ ಕೋರ್ಟ್‌ ನಿರ್ಧಾರ ಗಮನಹರಿಸಿ ಸರ್ಕಾರ ಎಚ್ಚೆತ್ತು ಪರಿಹರಿಸಬಹುದೆಂಬ ನಂಬಿಕೆಯಿದೆ.

ಬಾಬ್ರಿ ಮಸೀದಿ ದ್ವಂಸದ ವಿಚಾರ, ಮೀಸಲಾತಿ ವಿಚಾರ ಪ್ರಾರಂಭದಲ್ಲಿ ಆಶಾದಾಯಕವಾಗಿ ಕಂಡರು ಕೂಡ ಅಂತಿಮವಾಗಿ ಜನರಿಗೆ ಪರಿಹಾರ ಸಿಕ್ಕಿಲ್ಲ, ಈ ರೀತಿಯ ಅನೇಕ ವಿಚಾರದಲ್ಲಿ ಮೊದಲಿಗೆ ಆಶಾದಾಯಕವಾಗಿ ಕಂಡರು ಕೂಡ ಕೊನೆಗೆ ಅಷ್ಟೊಂದು ಆಶಾದಾಯಕವಾಗಿರಲ್ಲಿಲ್ಲ, ಆದರೆ ಇವತ್ತಿನ ದಿನದ ಸುಪ್ರೀಂ ಕೋರ್ಟ್‌ನ ತೀರ್ಪು ಒಪ್ಪುತ್ತೇನೆ, ಇದೇ ದಾಟಿಯಲ್ಲಿ ಮುಂದುವರೆಯಬೇಕು ಅದನ್ನು ನಾನು ಉತ್ತಮ ಬೆಳವಣಿಗೆ ಎಂದು ಸ್ವೀಕಾರ ಮಾಡುತ್ತೇನೆ, ಆದರೆ ಸುಪ್ರೀಂ ಕೋರ್ಟ್‌ನಿಂದಲೇ ಎಲ್ಲಾ ಆಗುತ್ತೆ ಅನ್ನೋ ಭ್ರಮೆ ನನಗಿಲ್ಲ ಎಂದಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಕೇವಲ ನಮ್ಮ ಅಭಿಪ್ರಾಯವನ್ನೂ ಮಾತ್ರ ವ್ಯಕ್ತಪಡಿಸುವುದು ಎಂದಲ್ಲ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು, ಪ್ರಶ್ನೆ ಮಾಡುವುದು, ವಿಮರ್ಶಿಸುವುದು, ಪ್ರತಿಭಟಿಸುವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರದ ಅಡಿಯಲ್ಲಿದೆ.

ಇವತ್ತಿನ ದಿನ ಅನ್ಯಾಯದ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿರುವುದು ಅವರ ಹಕ್ಕು ಸರ್ಕಾರ ಇಂತಹ ವಿಚಾರಗಳಲ್ಲಿ ಸೋಲು ಗೆಲುವು ಪ್ರಶ್ನೆಯನ್ನು ಲೆಕ್ಕಿಸಬಾರದು. ರೈತರ ಗೆಲುವು ಸರ್ಕಾರದ ಸೋಲು ಅಥವಾ ಸರ್ಕಾರದ ಗೆಲುವು ರೈತರ ಸೋಲು ಎಂಬ ಪ್ರಶ್ನೆ ತಲೆದೂರಬಾರದು, ಇಲ್ಲಿ ಹಠಮಾರಿತನ ಮಾಡದೆ ಸ್ವಾರ್ಥ ಬುದ್ಧಿತೋರದೆ ಸರ್ಕಾರ, ರೈತರು ಹಾಗು ತಜ್ಞರ ಕೂತು ಚರ್ಚೆ ಮಾಡಬೇಕು.

ಇಲ್ಲಿ ಜನ ಹಿತಕ್ಕೆ ತಲೆಬಾಗಬೇಕೇ ಹೊರತು ಕಾರ್ಪೋರೇಟ್‌ ಹಿತಕ್ಕೆ ಶರಣಾಗಬಾರದು. ಕೆಲವೇ ಜನರ ಹಿತಕ್ಕೋಸ್ಕರ ಕಾನೂನು ತಿದ್ದುಪಡಿಗಳನ್ನು ಮಾಡಿದರೆ ಅದು ಜನರ ಆಕ್ರೋಶಕ್ಕೆ ಕಾರಣವಾಗುತ್ತದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಈ ದೃಷ್ಟಿಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗವೂ ಸ್ಪಂದಿಸುವ ಅಗತ್ಯವಿದೆ ಎಂದು ಹೆಚ್‌. ಎನ್‌ ನಾಗಮೋಹನ ದಾಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com