ಪರಿಸರವಾದಿಗಳು ದೇಶದ್ರೋಹಿಗಳು ಎಂದು ಪ್ರಮಾಣಪತ್ರ ಸಲ್ಲಿಸಿದ NHAI!

ಸ್ವತಃ ಪ್ರಧಾನಿಯವರು ಹಾಕಿಕೊಟ್ಟ ದಾರಿಯಲ್ಲಿ ದೇಶದ ವಿವಿಧ ಸರ್ಕಾರಿ ಇಲಾಖೆಗಳು, ಪ್ರಾಧಿಕಾರ, ಸಂಸ್ಥೆಗಳು ಕೂಡ ಹೆಜ್ಜೆಹಾಕತೊಡಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಸಂಸ್ಥೆಯಂತೂ ಸಾಕ್ಷಾತ್ ಹೈಕೋರ್ಟಿಗೇ ಇಂತಹ ಉಲ್ಲೇಖಗಳನ್ನು ಮಾಡಿ ಪ್ರಮಾಣಪತ್ರವನ್ನೇ ಸಲ್ಲಿಸಿಬಿಟ್ಟಿದೆ. ಪರಿಸರ ಸಂರಕ್ಷಣೆಯ ಪರ ದನಿ ಎತ್ತಿದವರನ್ನೇ ದೇಶದ್ರೋಹಿಗಳು, ವಿದೇಶಿ ಏಜೆಂಟರು ಎಂದು ನ್ಯಾಯಾಲಯಕ್ಕೇ ಹೇಳಿದೆ!
ಪರಿಸರವಾದಿಗಳು ದೇಶದ್ರೋಹಿಗಳು ಎಂದು ಪ್ರಮಾಣಪತ್ರ ಸಲ್ಲಿಸಿದ NHAI!

ಈವರೆಗೆ ಸರ್ಕಾರದ ನೀತಿಗಳನ್ನು ಟೀಕಿಸುವವರನ್ನು, ಅಧಿಕಾರಸ್ಥರನ್ನು ಪ್ರಶ್ನಿಸುವವರನ್ನು ಬಿಜೆಪಿ ಮತ್ತು ಸಂಘಪರಿವಾರದ ಮಂದಿ ದೇಶದ್ರೋಹಿಗಳು, ವಿದೇಶಿ ಏಜೆಂಟರು ಎಂದು ಕರೆಯುತ್ತಿದ್ದರು. ಆ ಮೂಲಕ ತಮ್ಮ ಟೀಕಾಕಾರರು, ಪ್ರತಿಪಕ್ಷಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ವಿರುದ್ಧ ಒಂದು ಕಪಟ ಅಸ್ತ್ರ ಝಳಪಿಸುತ್ತಿದ್ದರು.

ಇದೀಗ ಆ ವರಸೆ ಮತ್ತೊಂದು ಮಜಲಿಗೆ ಹೊರಳಿದ್ದು, ಸರ್ಕಾರದ ಅಧಿಕೃತ ಇಲಾಖೆಗಳೇ, ತಮ್ಮ ಅಧಿಕೃತ ಪ್ರಮಾಣಪತ್ರಗಳಲ್ಲೇ ಇಂತಹ ಹೇಳಿಕೆಗಳನ್ನು ನೀಡತೊಡಗಿವೆ. ಅದರಲ್ಲೂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಪ್ರಮಾಣ ಪತ್ರದಲ್ಲೇ ಪರಿಸರವಾದಿಗಳು ‘ದೇಶದ್ರೋಹಿಗಳು’, ‘ಅವರ ಹಿಂದೆ ವಿದೇಶಿ ಕುಮ್ಮಕ್ಕು ಇದೆ’ ಹಾಗೂ ‘1986ರ ಪರಿಸರ ಸಂರಕ್ಷಣೆ ಕಾಯ್ದೆಯೇ ವಿದೇಶಿ ಹಿತಾಸಕ್ತಿಯಿಂದ ರೂಪುಗೊಂಡ ಕಾಯ್ದೆ’ ಎನ್ನುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ ಎಚ್ ಎಐ), ಆಘಾತಕಾರಿ ವ್ಯಾಖ್ಯಾನ ನೀಡಿ ಸ್ವತಃ ಹೈಕೋರ್ಟನ್ನೇ ಬೆಚ್ಚಿಬೀಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ- ಗೋವಾ ನಡುವಿನ ಕಾಳಿ ಹುಲಿ ಅಭಯಾರಣ್ಯ ಸೇರಿದಂತೆ ದಟ್ಟ ಅರಣ್ಯದ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 4ಎ ವಿಸ್ತರಣೆ ಯೋಜನೆಗೆ ಪರಿಸರ ನಿರಪೇಕ್ಷಣಾ ವರದಿ ಪಡೆಯದೇ ಇರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇಂತಹ ಆಘಾತಕಾರಿ ಹೇಳಿಕೆಗಳಿವೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದಾಗಿ ಲಕ್ಷಾಂತರ ಮರಗಳು ನಾಶವಾಗುತ್ತವೆ ಮತ್ತು ವನ್ಯಜೀವಿಗಳು ಹಾಗೂ ಒಟ್ಟಾರೆ ಪರಿಸರದ ಮೇಲೆ ಅಪಾಯ ವ್ಯತಿರಿಕ್ತ ಪರಿಣಾಮಗಳಾಗಲಿವೆ. ಆದರೆ, ಅಂತಹ ಅನಾಹುತಕಾರಿ ಯೋಜನೆಯ ವಿಷಯದಲ್ಲಿ ಅದರ ಪರಿಸರ ಪರಿಣಾಮಗಳ ಕುರಿತ ಸಮಾಲೋಚನೆಗೆ(ಇಐಎ) ಪ್ರಕ್ರಿಯೆಯನ್ನೇ ನಡೆಸದೆ ಕಾಮಗಾರಿ ಆರಂಭಿಸಲಾಗಿದೆ ಎಂಬುದನ್ನು ಪ್ರಶ್ನಿಸಿ ಕೆಲವು ಸ್ವಯಂಸೇವಾ ಸಂಸ್ಥೆಗಳು, ಪರಿಸರ ಸಂಘಟನೆಗಳು ಸಲ್ಲಿಸಿದ್ದ ವಿವಿಧ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ಈ ಅಂಶಗಳ ಬಗ್ಗೆ ಸ್ವತಃ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಅವರೇ ಆಘಾತಗೊಂಡರು.

1986ರ ಪರಿಸರ ಸಂರಕ್ಷಣೆ ಕಾಯ್ದೆಯನ್ನು ಕೇವಲ ಪರಿಸರ ರಕ್ಷಣೆಗಾಗಿ ಮಾತ್ರ ಜಾರಿಗೆ ತಂದಿಲ್ಲ; ಅದರ ಜಾರಿಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ. ಹಾಗೇ ದೇಶದಲ್ಲಿ ಹೆದ್ದಾರಿ ಯೋಜನೆಗಳನ್ನು ವಿರೋಧಿಸುತ್ತಿರುವುದರ ಹಿಂದೆಯೂ ವಿದೇಶಿ ಶಕ್ತಿಗಳ ಕೈವಾಡವಿದೆ. ಹಾಗೆ ವಿರೋಧಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ದೇಶದ್ರೋಹಿ ಸಂಘಟನೆಗಳು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಪ್ರಮಾಣ ಪತ್ರದಲ್ಲಿ ಹೇಳಿದೆ. ಈ ಅಂಶಗಳನ್ನು ಗಮನಿಸಿದ ಮುಖ್ಯನ್ಯಾಯಮೂರ್ತಿಗಳು ಆ ಬಗ್ಗೆ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದು, ಇಂತಹ ಹೇಳಿಕೆಯನ್ನು ಪ್ರಮಾಣಪತ್ರದಲ್ಲಿ ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಿ, ಯಾವ ಹಿನ್ನೆಲೆಯಲ್ಲಿ ಮತ್ತು ಯಾವ ಆಧಾರದ ಮೇಲೆ ಇಂತಹ ಅಂಶಗಳನ್ನು ಹೀಗೆ ಅಧಿಕೃತವಾಗಿ ಉಲ್ಲೇಖಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಅಲ್ಲದೆ, ಸರ್ಕಾರದ ಸಂಸ್ಥೆಗಳ ಇಂತಹ ಹೇಳಿಕೆಗಳು ಮತ್ತು ಅಂತಹ ಹೇಳಿಕೆಗಳ ಹಿಂದೆ ಇರುವ ಸರ್ಕಾರದ ಪಾತ್ರದ ಬಗ್ಗೆ ಆಘಾತವಾಗಿದೆ. ಇಡೀ ಪರಿಸರ ಕಾಯ್ದೆಯ ಹಿಂದೆ ವಿದೇಶಿ ಶಕ್ತಿಗಳ ಪ್ರಭಾವ ಇದೆ ಎಂದು ನ್ಯಾಯಾಲಯವನ್ನು ಕೂಡ ನಂಬಿಸಲು ಇವರು ಯತ್ನಿಸುತ್ತಿದ್ದಾರೆ. ಕಳೆದ 17 ವರ್ಷಗಳಿಂದ ನ್ಯಾಯಾಧೀಶನಾಗಿ ಕೆಲಸ ಮಾಡಿದ್ದೇನೆ. ಆದರೆ, ನನ್ನ ವೃತ್ತಿಜೀವನದುದ್ದಕ್ಕೂ ಎಂದೂ ಕೂಡ ಇಂತಹ ಕೊಳಕು ಹೇಳಿಕೆಯನ್ನು ಕೇಳಿರಲಿಲ್ಲ. ಅದರಲ್ಲೂ ಸಾರ್ವಜನಿಕ ಸಂಸ್ಥೆಯೊಂದು, ಇಲಾಖೆಯೊಂದು ಇಂತಹ ಹೇಳಿಕೆ ನೀಡಿದ್ದನ್ನು ಕಂಡಿರಲಿಲ್ಲ” ಎಂದು ಚಾಟಿ ಬೀಸಿದ್ದಾರೆ.

ಗೋವಾ- ಕರ್ನಾಟಕ ನಡುವಿನ ಕಾಳಿ ಹುಲಿ ಅಭಯಾರಣ್ಯ ಸೇರಿದಂತೆ ಅತಿ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 4ಎಯ ವಿಸ್ತರಣೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪರಿಸರ ಪರಿಣಾಮ ಸಮೀಕ್ಷೆಯಿಂದ ವಿನಾಯಿತಿ ನೀಡಿದೆ. ಆದರೆ, ಪರಿಸರ ಸಂರಕ್ಷಣೆ ಕಾಯ್ದೆಯಡಿ ಕೇಂದ್ರ ಸರ್ಕಾರಕ್ಕೆ ಅಂತಹ ವಿನಾಯ್ತಿ ನೀಡುವ ಅಧಿಕಾರವಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು. ಅಲ್ಲದೆ, ಹಲವು ಪರಿಸರ ತಜ್ಞರು, ವಿಜ್ಞಾನಿಗಳು, ಸಂಶೋಧಕರ ಕೃತಿಗಳು ಮತ್ತು ವರದಿಗಳನ್ನು ಉಲ್ಲೇಖಿಸಿ ಯಾಕೆ ಈ ರಸ್ತೆ ವಿಸ್ತರಣೆ ಅಪಾಯಕಾರಿ ಎಂಬುದನ್ನು ವಿವರಿಸಿದ್ದರು.

ಹಾಗೆ ಉಲ್ಲಂಘಿಸಿದ ತಜ್ಞರ ಪೈಕಿ ಕೆಲವರು ವಿದೇಶಿಯರು ಇರುವುದನ್ನೇ ನೆಪಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ರಕರಣಕ್ಕೆ ಸಲ್ಲಿಸಿದ ತನ್ನ ಪ್ರತಿಕ್ರಿಯೆ ಪ್ರಮಾಣಪತ್ರದಲ್ಲಿ “ದೇಶದಲ್ಲಿ ಹೆದ್ದಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಸರದ ಹೆಸರಿನಲ್ಲಿ ವಿರೋಧಿಸುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳೆಲ್ಲ ದೇಶದ್ರೋಹಿಗಳು, ವಿದೇಶಿ ಕುಮ್ಮಕ್ಕು ಹೊಂದಿರುವವರು, ದೇಶದ ಅಭಿವೃದ್ಧಿಗೆ ತಡೆಯೊಡ್ಡುವ ವಿದೇಶಿ ಶಕ್ತಿಗಳ ಹುನ್ನಾರದಿಂದಾಗಿ ಅವರುಗಳಿಂದ ವಿದೇಶಿ ದೇಣಿಗೆ ಪಡೆದು ಹೀಗೆ ವಿರೋಧಿಸುತ್ತಿದ್ದಾರೆ” ಎಂದು ಹೇಳಿದೆ.

“ವಿದೇಶಿ ಹಿತಾಸಕ್ತಿಗಳ ಕಾರಣದಿಂದ ಪರಿಸರ ಕಾಯ್ದೆ ರೂಪಿಸಲಾಗಿದೆ. 1972ರಲ್ಲಿ ಸ್ಟಾಕ್ ಹೋಂನಲ್ಲಿ ನಡೆದ ವಿಶ್ವ ಸಂಸ್ಥೆಯ ಮಾನವ-ಪರಿಸರ ಕುರಿತ ಶೃಂಗಸಭೆಯಲ್ಲಿ ತೆಗೆದುಕೊಂಡು ನಿರ್ಣಯಗಳ ಅನುಸಾರವೇ ದೇಶದಲ್ಲಿ 1986ರ ಪರಿಸರ ಕಾಯ್ದೆಯನ್ನು ರೂಪಿಸಲಾಗಿದೆ. ಹಾಗಾಗಿ ಪರಿಸರ ಕಾಯ್ದೆಯ ಉದ್ದೇಶ ದೇಶದ ಪರಿಸರ ಸಂರಕ್ಷಣೆ ಮಾತ್ರವಲ್ಲ; ವಿದೇಶಿ ಶಕ್ತಿಗಳ ಹಿತಾಸಕ್ತಿ ಕಾಯುವ ಉದ್ದೇಶವೂ ಇದೆ. ಆ ಹಿನ್ನೆಲೆಯಲ್ಲೇ ವಿದೇಶಿ ಸಂಸ್ಥೆಗಳಾದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ಪಿಯುಸಿಎಲ್ ನಂತಹ ಸಂಸ್ಥೆಗಳು ಹೆದ್ದಾರಿ ಯೋಜನೆ ವಿರೋಧಿಸುತ್ತಿವೆ. ಆ ಸಂಸ್ಥೆಗಳ ಹಿಂದೆಯೂ ವಿದೇಶಿ ಶಕ್ತಿಗಳ ಕೈವಾಡ ಇದೆ” ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ಪ್ರಧಾನ ವ್ಯವಸ್ಥಾಪಕ ಆರ್ ಬಿ ಪೇಕಮ್ ಹೈಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಅಲ್ಲದೆ, “ದೇಶದಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸೇರಿದಂತೆ ಬಹಳಷ್ಟು ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆದು ವಿದೇಶಿ ಕುಮ್ಮಕ್ಕಿನ ಮೇಲೆ ದೇಶದ ಸರ್ಕಾರಗಳ ನೀತಿ-ನಿಲುವುಗಳು, ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳನ್ನು ತಡೆಯುವ, ಟೀಕಿಸುವ ಮತ್ತು ವಿರೋಧಿಸುವ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಅಂತಹ ಸಂಸ್ಥೆಗಳಿಗೆ ಬರುವ ಹಣ ಕೂಡ ಹವಾಲಾ ಹಣವಾಗಿದ್ದು, ಅದಕ್ಕೆ ಯಾವುದೇ ಲೆಕ್ಕಪತ್ರ ಕೂಡ ಇಲ್ಲ. ಅಂತಹ ಹವಾಲಾ ಹಣದ ಬಲದ ಮೇಲೆಯೇ ಅವರುಗಳು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದೂ ಆರ್ ಬಿ ಪೇಕಮ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ, “ದೇಶದಲ್ಲಿ ಸುಮಾರು 20 ಲಕ್ಷ ಮಂದಿ ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದ್ದಾರೆ. ದೊಡ್ಡಮಟ್ಟದಲ್ಲಿ ಅರಣ್ಯ ನಾಶಕ್ಕೆ ಇಂತಹ ಜನರೇ ಕಾರಣ ವಿನಃ ಅಭಿವೃದ್ಧಿ ಯೋಜನೆಗಳಲ್, ಅಥವಾ ಹೆದ್ದಾರಿ ಪ್ರಾಧಿಕಾರದ ರಸ್ತೆ ವಿಸ್ತರಣೆ ಕಾಮಗಾರಿಗಳೂ ಅಲ್ಲ. ಆದರೆ, ಹಾಗೆ ಅರಣ್ಯ ಕಬಳಿಸಿರುವವರನ್ನು ಅಕ್ರಮವಾಗಿ, ಕಾನೂನುಬಾಹಿರವಾಗಿ ಅರಣ್ಯ ಹಕ್ಕು ಕಾಯ್ದೆಯಡಿ ರಕ್ಷಿಸಲಾಗುತ್ತಿದೆ. ಅವರನ್ನು ಬುಡಕಟ್ಟು ಜನ ಎಂದು ಹಾಗೆ ರಕ್ಷಣೆ ನೀಡಲಾಗುತ್ತಿದೆ” ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಹೇಳಿಕೆಯನ್ನು ಕಂಡು ಕೋಪಗೊಂಡ ಮುಖ್ಯನ್ಯಾಯಮೂರ್ತಿಗಳು ತೀರಾ ಕಟುವಾಗಿ ಪ್ರತಿಕ್ರಿಯಿಸುತ್ತಲೇ, ಆ ಹೇಳಿಕೆ ಪ್ರಮಾಣಪತ್ರವನ್ನು ವಾಪಸು ಪಡೆಯುವುದಾಗಿ ಹೆದ್ದಾರಿ ಪ್ರಾಧಿಕಾರದ ಪರ ಹಾಜರಿದ್ದ ವಕೀಲರು ಹೇಳಿದರು. ಆದರೆ, ಅದನ್ನು ನಿರಾಕರಿಸಿದ ಮುಖ್ಯನ್ಯಾಯಮೂರ್ತಿಗಳು, ಆಕ್ಷೇಪಣೆ ಹೇಳಿಕೆಯ ಕುರಿತು ವಿಚಾರಣೆ ನಡೆಸಲು ಒಂದು ಸಮಿತಿ ರಚಿಸಿ, ಅದರ ವರದಿಯನ್ನು ನ್ಯಾಯಾಲಯಕ್ಕೆ ಜ.31ರ ಒಳಗೆ ಸಲ್ಲಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ತಾಕೀತು ಮಾಡಿದರು. ಪ್ರಕರಣದ ಮುಂದಿನ ವಿಚಾರಣೆ ಫೆ.2ಕ್ಕೆ ನಿಗದಿಯಾಗಿದೆ.

ಒಟ್ಟಾರೆ, ಈವರೆಗೆ ಆಡಳಿತ ಪಕ್ಷ ಬಿಜೆಪಿ ಮತ್ತು ಅದರ ಸಂಘಪರಿವಾರ ಹಾಗೂ ಸ್ವತಃ ಪ್ರಧಾನಿ ಮೋದಿಯವರ ಅಭಿಮಾನ ಅಂಧಭಕ್ತರು, ಸರ್ಕಾರದ ಜನ ವಿರೋಧಿ ಆಡಳಿತ ನೀತಿ-ನಿಲುವುಗಳು, ಆದೇಶಗಳನ್ನು ಪ್ರಶ್ನಿಸುವ, ವಿರೋಧಿಸುವ ಮತ್ತು ಟೀಕಿಸುವವರನ್ನು ದೇಶದ್ರೋಹಿಗಳೆಂದು ಕರೆಯುತ್ತಿದ್ದರು. ಸ್ವತಃ ಮೋದಿಯವರೇ ಅಂತಹದ್ದೊಂದು ಹೇಯ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು ಮತ್ತು ಪ್ರಧಾನಿ, ಗೃಹ ಸಚಿವರು ಸೇರಿದಂತೆ ಸರ್ಕಾರದ ಹಲವು ಪ್ರಮುಖರು ಮತ್ತು ಸರ್ಕಾರದಿಂದ ಹೊರಗಿರುವ ಬಿಜೆಪಿ-ಪರಿವಾರದ ನಾಯಕರು ಕೂಡ ಇಂತಹ ಮಾತುಗಳನ್ನು ಕಳೆದ ಆರೇಳು ವರ್ಷಗಳಲ್ಲಿ ನಿರಂತರವಾಗಿ ಆಡುತ್ತಲೇ ಇದ್ದಾರೆ. ಅವರ ಅಂತಹ ಹೇಯ ಮಾತುಗಳಿಗೆ ಕೇವಲ ಪ್ರತಿಪಕ್ಷಗಳು, ರಾಜಕೀಯ ವಿರೋಧಿಗಳು ಮಾತ್ರವಲ್ಲದೆ, ದೇಶದ ಪತ್ರಕರ್ತರು, ಪರಿಸರವಾದಿಗಳು, ಮಹಿಳಾ ಹೋರಾಟಗಾರರು, ವಿದ್ಯಾರ್ಥಿಗಳು, ಇದೀಗ ದೆಹಲಿಯಲ್ಲಿ ಮೂರು ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿರುವ ರೈತರು ಕೂಡ ಈಡಾಗಿದ್ದರು.

‘ದೇಶದ್ರೋಹಿ’ ಎಂಬುದು ಸರ್ಕಾರದ, ಆಡಳಿತ ಪಕ್ಷದ ಮತ್ತು ಅದರ ನಾಯಕರ ವಿರುದ್ಧದ ಎಲ್ಲಾ ಬಗೆಯ ಟೀಕೆ, ವಿಮರ್ಶೆ, ಪ್ರಶ್ನೆಗಳನ್ನು ಹತ್ತಿಕ್ಕುವ, ಸಾರಾಸಗಟಾಗಿ ಬದಿಗೆ ಸರಿಸುವ, ಆ ಮೂಲಕ ದೇಶದ ಜನರಿಗೆ ಉತ್ತರದಾಯಿಗಳಾಗಿರಬೇಕಾದ ಹೊಣೆಗಾರಿಕೆಯಿಂದ ಸುಲಭವಾಗಿ ನುಣುಚಿಕೊಳ್ಳುವ ಒಂದು ಪ್ರಬಲ ಅಸ್ತ್ರವಾಗಿ ರೂಢಿಗೆ ಬಂದಿತ್ತು. ಅದರಲ್ಲಿ ಟೀಕಿಸುವ, ಪ್ರಶ್ನಿಸುವ, ವಿರೋಧಿಸುವ ವ್ಯಕ್ತಿ ಮತ್ತು ಸಂಘಟನೆಗಳ ಹಿನ್ನೆಲೆಯ ಮೇಲೆ ಅವರನ್ನು ಪಾಕಿಸ್ತಾನಿ, ರಷ್ಯಾ, ಚೀನಾ ಏಜೆಂಟರೆಂದು, ನಕ್ಸಲರು, ನಗರ ನಕ್ಸಲರು ಎಂದು ಬ್ರಾಂಡ್ ಮಾಡಲಾಗುತ್ತಿತ್ತು. ತಮ್ಮನ್ನು ವಿರೋಧಿಸುವವರು ದಲಿತರಾದರೆ ನಕ್ಸಲರೆಂದು, ಮುಸ್ಲಿಮರಾದರೆ ಪಾಕಿಸ್ತಾನಿ ಎಂದು, ಮೇಲ್ಜಾತಿಯವರಾದರೆ ಚೀನಾ ಏಜೆಂಟರೆಂದು ಹೇಳಲಾಗುತ್ತಿತ್ತು. ಸ್ವತಃ ಪ್ರಧಾನಿ ಮೋದಿಯವೇ ಹೀಗೆ ತಮ್ಮ ಟೀಕಾಕಾರರಿಗೆ ಹಣೆಪಟ್ಟು ಹಚ್ಚುವ ಮೂಲಕ ದೇಶದಲ್ಲಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದೇ ಅಪರಾಧ, ದೇಶದ್ರೋಹ ಎಂಬ ಹೊಸ ರಾಜಕೀಯ ಸಂಪ್ರದಾಯ ಜಾರಿಗೆ ತಂದಿದ್ದರು.

ಇದೀಗ ಸ್ವತಃ ಪ್ರಧಾನಿಯವರು ಹಾಕಿಕೊಟ್ಟ ದಾರಿಯಲ್ಲಿ ದೇಶದ ವಿವಿಧ ಸರ್ಕಾರಿ ಇಲಾಖೆಗಳು, ಪ್ರಾಧಿಕಾರ, ಸಂಸ್ಥೆಗಳು ಕೂಡ ಹೆಜ್ಜೆಹಾಕತೊಡಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಸಂಸ್ಥೆಯಂತೂ ಸಾಕ್ಷಾತ್ ಹೈಕೋರ್ಟಿಗೇ ಇಂತಹ ಉಲ್ಲೇಖಗಳನ್ನು ಮಾಡಿ ಪ್ರಮಾಣಪತ್ರವನ್ನೇ ಸಲ್ಲಿಸಿಬಿಟ್ಟಿದೆ. ಪರಿಸರ ಸಂರಕ್ಷಣೆಯ ಪರ ದನಿ ಎತ್ತಿದವರನ್ನೇ ದೇಶದ್ರೋಹಿಗಳು, ವಿದೇಶಿ ಏಜೆಂಟರು ಎಂದು ನ್ಯಾಯಾಲಯಕ್ಕೇ ಹೇಳಿದೆ! ಇಷ್ಟಾಗಿಯೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿದೆಯೇ ಎಂಬುದು ಈಗಿರುವ ಪ್ರಶ್ನೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com