ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕಾಗಿರುವುದು ದೇಶಾಭಿಮಾನಿಗಳ ಕರ್ತವ್ಯ: ನ್ಯಾ. ಗೋಪಾಲ ಗೌಡ

ದುರ್ಬಲ ಬೆನ್ನೆಲುಬು ಹೊಂದಿರುವ ಒಂದು ದೇಶವು ತನ್ನ ಸಮಕಾಲೀನರ ನಡುವೆ ಎದ್ದು ನಿಲ್ಲುವುದಿರಲಿ, ತನ್ನ ಕಾಲ ಮೇಲೆ ತಾನು ಸ್ಥಿರವಾಗಿ ನಿಲ್ಲಲೂ ಸಾಧ್ಯವಿಲ್ಲ.‌ ಭಾರತದ ಬೆನ್ನೆಲುಬಿನ ಬೆಂಬಲಕ್ಕಾಗಿ ನಾವೆಲ್ಲರೂ ಎದ್ದು ನಿಲ್ಲುವುದು ಅಗತ್ಯವಾಗಿದೆ
ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕಾಗಿರುವುದು ದೇಶಾಭಿಮಾನಿಗಳ ಕರ್ತವ್ಯ: ನ್ಯಾ. ಗೋಪಾಲ ಗೌಡ

ನೂತನ ಕೃಷಿ ಕಾಯ್ದೆಗಳಾದ 1) ಕೃಷಿ ಉತ್ಪನ್ನ ವ್ಯಾಪಾರ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಕಾಯ್ದೆ-2020, 2) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ-2020 ಮತ್ತು 3) ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ-2020; ಈ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹಿಂದೆಂದೂ ಕಂಡರಿಯದ, ಪಟ್ಟುಹಿಡಿದ ಮತ್ತು ಐತಿಹಾಸಿಕ ಹೋರಾಟಕ್ಕೆ ಭಾರತ ಸಾಕ್ಷಿಯಾಗುತ್ತಿದೆ.

ನಮ್ಮ ಶಾಸನಕಾರರ ಯಾವುದೇ ಚರ್ಚೆ ಅಥವಾ ಪರಿಶೀಲನೆಗೊಳಪಡದಂತೆ, ಭಾರತದ 12 ಕೋಟಿ ರೈತರ ಮೇಲೆ ಪರಿಣಾಮ ಬೀರುವ ಈ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ಸಂಸತ್ತಿನ ಎರಡೂ ಸದನಗಳಲ್ಲಿ ತರಾತುರಿಯಲ್ಲಿ ಅನುಮೋದನೆ ಪಡೆದಿದೆ. ಸಂಸದೀಯ ನಿಯಮಗಳಡಿ ಅಗತ್ಯವಾಗಿರುವ ಮತ ಚಲಾವಣೆಗೂ ರಾಜ್ಯಸಭೆಯ ಸಭಾಪತಿಗಳು ಅವಕಾಶ ನೀಡಲಿಲ್ಲ. ಈ ಶಾಸನಗಳು ಮತ್ತು ಭಾರತೀಯ ಕೃಷಿಯ ಮೇಲೆ ಅವುಗಳ ಪರಿಣಾಮಗಳ ಸಾಧಕ ಮತ್ತು ಬಾಧಕಗಳ ಕುರಿತು ನಿರ್ಣಾಯಕ ಪಾಲದಾರರಾದ ರಾಜ್ಯ ಸರ್ಕಾರಗಳು ಮತ್ತು ರೈತ ಸಂಘಟನೆಗಳೊಂದಿಗೂ ಯಾವುದೇ ವಿಸ್ತೃತ ಸಮಾಲೋಚನೆಗಳು ನಡೆಯಲಿಲ್ಲ.

ಇಲ್ಲಿ ಗಮನಿಸಬೇಕಾದ ಎಲ್ಲದಕ್ಕಿಂತ ಹೆಚ್ಚಿನ ಆತಂಕಕಾರಿ ಸಂಗತಿ ಎಂದರೆ, ಎಸ್.ಆರ್. ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಎಐಆರ್ 1994 ಎಸ್ಸಿ 1918) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ 9-ನ್ಯಾಯಮೂರ್ತಿಗಳ ಪೀಠವು ನೀಡಿರುವ ಮಹತ್ವದ ತೀರ್ಪಿನಲ್ಲಿ, ಒಕ್ಕೂಟತ್ವದ ಪರಮಪವಿತ್ರ ಸ್ವಭಾವವು ಸಂವಿಧಾನದ ಮೂಲ ರಚನೆಯಾಗಿದೆ ಎಂಬುದಾಗಿ ಎತ್ತಿಹಿಡಿದಿರುವುದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಭಾರತೀಯ ಸಂವಿಧಾನದ ಒಕ್ಕೂಟ ಚೈತನ್ಯವನ್ನೇ ಭಾರತ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿರುವುದು. ಈ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ರೈತರ ಹೋರಾಟಗಳು ಹುಟ್ಟಿಕೊಳ್ಳಲು ಕೇಂದ್ರ ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ನಡೆ ಕಾರಣವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನೂತನ ಕೃಷಿ ಕಾನೂನುಗಳ ಉದ್ದೇಶ ಮತ್ತು ಕಾರಣಗಳ ಹೇಳಿಕೆಯು ಈ ಕಾನೂನುಗಳನ್ನು ಜಾರಿಗೊಳಿಸಲು ಬೇಕಾದ ಶಾಸನಾತ್ಮಕ ಅರ್ಹತೆಯ ಮೇಲೆ ಯಾವುದೇ ಬೆಳಕು ಚೆಲ್ಲುವುದಿಲ್ಲ. ಸೂಕ್ತ ಕಾರಣಗಳಿಂದಾಗಿಯೇ ಕೃಷಿಯು ಹೆಚ್ಚಾಗಿ ರಾಜ್ಯ ಶಾಸಕಾಂಗಗಳ ಕಾರ್ಯಕ್ಷೇತ್ರವಾಗಿದೆ. ಸಂವಿಧಾನದ ಏಳನೇ ಶೆಡ್ಯೂಲ್ನಲ್ಲಿರುವ ರಾಜ್ಯ ಪಟ್ಟಿಯ 8 ನಮೂದುಗಳಲ್ಲಿ ಕೃಷಿಯನ್ನು ಉಲೇಖಿಸಲಾಗಿದೆ. ‘ಮಾರುಕಟ್ಟೆಗಳು ಮತ್ತು ಮೇಳಗಳು’ರಾಜ್ಯ ವಿಷಯಗಳು (ರಾಜ್ಯ ಪಟ್ಟಿಯ ನಮೂದು 28). ರಾಜ್ಯದೊಳಗಿನ ವ್ಯಾಪಾರ ಮತ್ತು ವಾಣಿಜ್ಯ ಸಹ ರಾಜ್ಯ ವಿಷಯ (ನಮೂದು 27), ಆದರೆ ಸದರಿ ಪಟ್ಟಿಯ ನಮೂದು 33ರ ಅಧೀನಕ್ಕೊಳಪಟ್ಟಿರುತ್ತದೆ. ಆದಾಗ್ಯೂ, +

ನಮೂದು 33ರ ನಿಯಮಗಳ ವ್ಯಾಪ್ತಿಗೊಳಪಡುತ್ತವೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ. ನಮೂದು 33ರ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಲು ಅದರ ವ್ಯಾಪ್ತಿಯ ವಿಸ್ತರಣೆ ಇತಿಹಾಸ ಮತ್ತು ಹಿನ್ನೆಲೆ ಮುಖ್ಯವಾದುದು. ಬದಲಿಗೆ ಹೊಸ ಕೃಷಿ ಕಾನೂನುಗಳ ಸಮರ್ಥನೆಗೆ, ನಮೂದು 33 ರಲ್ಲಿ ಉಲ್ಲೇಖಿಸಿರುವುದಷ್ಟೇ ಸಾಕಾಗುವುದಿಲ್ಲ. 1955 ರಲ್ಲಿ ವಿಶಿಷ್ಟ ಸನ್ನಿವೇಶದಲ್ಲಿ ಭಾರತೀಯ ಸಂವಿಧಾನದ ಮೂರನೇ ತಿದ್ದುಪಡಿ ಮೂಲಕ ರಾಜ್ಯ ಪಟ್ಟಿಯ ನಮೂದು 33 ರಲ್ಲಿ (ಬಿ) ಇಂದ (ಇ) ವರೆಗೆ ಉಪ-ನಮೂದುಗಳನ್ನು ಸೇರಿಸಲು ನಮೂದು 33 ಕ್ಕೆ ತಿದ್ದುಪಡಿ ತರಲಾಯಿತು.

ಭಾರತ ಸರ್ಕಾರದ ಕಾಯ್ದೆ-1965ರ ಪ್ರಕಾರ ರಾಜ್ಯದೊಳಗಿನ ವ್ಯಾಪಾರ ಮತ್ತು ವಾಣಿಜ್ಯ ಹಾಗೂ ಸರಕುಗಳ ಉತ್ಪಾದನೆ, ಸರಬರಾಜು ಮತ್ತು ವಿತರಣೆಯು ಪ್ರಾಂತೀಯ ಪಟ್ಟಿಯಲ್ಲಿ ಪಟ್ಟಿಮಾಡಲಾಗಿರುವ ವಿಷಯಗಳಾಗಿವೆ. ಎರಡನೇ ಪ್ರಪಂಚ ಮಹಾಯುದ್ಧದ ಕಾರಣದಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಮತ್ತು ರಾಜ್ಯ/ಪ್ರಾಂತೀಯ ಪಟ್ಟಿಯಲ್ಲಿದ್ದ ಈ ವಿಷಯಗಳ ಶಾಸನ ಮಾಡುವ ಹಕ್ಕನ್ನು ಕೇಂದ್ರ ಶಾಸಕಾಂಗವು ಸ್ವಾಧೀನಪಡಿಸಿಕೊಂಡಿತು. ಆ ಸಂದರ್ಭದಲ್ಲಿ ಮತ್ತು ಸಾಮಾನ್ಯವಾಗಿ ಎಂದಿಗೂ ಎದುರಿಸದಿದ್ದ ತುರ್ತು ಸನ್ನಿವೇಶಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ, ಸಂಗ್ರಹಣೆ, ಕಾಳಸಂತೆ, ಅನಿಯಮಿತ ಬೆಲೆ ಹೆಚ್ಚಳ ಮತ್ತಿತರ ವಿಷಯಗಳ ನಿಯಂತ್ರಿಸಲು ನಮೂದು 33ರ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಪ್ರಾಥಮಿಕವಾಗಿ ಅವಕಾಶ ನೀಡಿತು. ಅದು ಅನಿವಾರ್ಯ ಎಂದು ಒಪ್ಪಬಹುದಾದರೂ, ಆ ಸಂದರ್ಭದಲ್ಲಿ ಸಂಸತ್ತು ತಂದ ಮೂರನೇ ತಿದ್ದುಪಡಿಯು, ರಾಜ್ಯ ಪಟ್ಟಿಯಲ್ಲಿ ವಿಶಿಷ್ಟ ನಮೂದಿಗೆ ದಾರಿ ಮಾಡಿಕೊಡಬೇಕಾಗಿತ್ತು. ಬದಲಿಗೆ, ನಮೂದು 33 ರೊಳಗೆ ಆಹಾರಪದಾರ್ಥಗಳು ಮತ್ತು ಇತರ ವಸ್ತುಗಳನ್ನು ವರ್ಗೀಕರಿಸಲಾಯಿತು, ಅದು ಈ ನಮೂದುಗಳ ಜರೂರು ಸ್ವಭಾವದ ಹೆಚ್ಚಿನ ಲಕ್ಷಣವಾಗಿದೆ.

ಕೇಂದ್ರ ಸರ್ಕಾರವು ಈ ನೂತನ ಕೃಷಿ ಕಾನೂನುಗಳನ್ನು ಆತುರಾತುರವಾಗಿ ಜಾರಿಗೊಳಿಸಿರುವುದು ವಿಶ್ವಾಸದ್ರೋಹವಾಗಿದೆ. ಭಾರತೀಯ ರೈತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಜಾಗತಿಕ ಕ್ರೋನಿ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಭಾರತೀಯ ಕೃಷಿಯನ್ನು ಮಾರುಕಟ್ಟೆಗಳ ಅಸ್ಥಿರತೆಗೆ ಬಲಿ ಕೊಡಲು ಭಾರತ ಸರ್ಕಾರವು ಮುಂದಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಈ ನೂತನ ಕೃಷಿ ಕಾನೂನುಗಳನ್ನು ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಿ ಆತುರಾತುರವಾಗಿ ಅನುಮೋದನೆಗೊಳಿಸುವ ಮುನ್ನ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ. ಅಪರೂಪದ ಜರೂರು ಸಂದರ್ಭಗಳಲ್ಲಿ ಮಾತ್ರ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗುತ್ತದೆ ಎಂಬುದು ಕಾನೂನಿನಲ್ಲಿ ಸ್ಥಾಪಿತವಾದ ಅಂಶವಾಗಿದೆ. ಹಾಗಿದ್ದಾಗ, ಈ ಕಾನೂನುಗಳ ವಿರುದ್ಧ ಜನರು ಗುಂಪುಗೂಡಲು ಮತ್ತು ಪ್ರತಿಭಟಿಸಲು ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆವರಿಸುವ ಪ್ರಚಲಿತ ಭಯದ ಸನ್ನಿವೇಶವು ತಡೆಯೊಡ್ಡಲಿದೆ ಎಂಬ ಅಂಶವನ್ನು ಹೊರತುಪಡಿಸಿ, ಈ ಸುಗ್ರಿವಾಜ್ಞೆಗಳನ್ನು ಜಾರಿಗೊಳಿಸಬೇಕಾದ ಯಾವ ತುರ್ತು ಸನ್ನಿವೇಶವಿತ್ತು? ನಮ್ಮ ರೈತರು, ನಿಜಕ್ಕೂ, ಈ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವ ಮೂಲಕ ಸಮರ್ಥನೀಯ ಹೆಜ್ಜೆ ಇಟ್ಟಿದ್ದಾರೆ.

ಮಾರುಕಟ್ಟೆಗಳ ಅಸ್ಥಿರತೆ ಮತ್ತು ಅನಿಮಿಯತ ಬೆಲೆ ಏರಿಳಿತಗಳ ವಿರುದ್ಧ ರೈತರಿಗೆ ರಕ್ಷಣೆ ನೀಡುತ್ತಿದ್ದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆಯ ಗಟ್ಟಿ ಅಡಿಪಾಯವನ್ನೇ ಹೊಸ ವ್ಯವಸ್ಥೆಯು ಛಿದ್ರಗೊಳಿಸುತ್ತದೆ. ಸ್ವಾಮಿನಾಥನ್ ವರದಿಯ ಎಂಎಸ್ಪಿ ಸೂತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ತಮ್ಮ ಕುಂದುಕೊರತೆಗಳ ನಿವಾರಣೆಗಾಗಿ ನ್ಯಾಯಾಲಯದ ಮೊರೆ ಹೋಗುವ ರೈತರ ಹಕ್ಕನ್ನೂ ‘ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ-2020’ ಕಿತ್ತುಕೊಂಡಿದೆ. ನ್ಯಾಯಾಂಗವನ್ನು ಹೊರಗಿಟ್ಟು ಕಂದಾಯ ದಂಡಾಧಿಕಾರಿಯನ್ನು ತೀರ್ಪುಗಾರನನ್ನಾಗಿ ಕೂರಿಸಲಾಗಿದೆ. ಇದು ರೈತರ ಮೂಲಭೂತ ಹಕ್ಕುಗಳ ಉಲಂಘನೆ ಮಾತ್ರವಲ್ಲ, ನ್ಯಾಯಾಂಗ ವಿಮರ್ಶೆಯನ್ನು ಹೃದಯವಾಗಿ ಹೊಂದಿರುವ ಸಂವಿಧಾನದ ಮೂಲ ವಿನ್ಯಾಸದ ತಿರಸ್ಕರಣೆಯಾಗಿದೆ.

ಆದ್ದರಿಂದ, ನಮ್ಮ ದೇಶದ ಸಾರ್ವಭೌಮತ್ವವೇ ಅಪಾಯದಲ್ಲಿರುವಾಗ ಕೃಷಿಕ ವರ್ಗದ ಪ್ರತಿಭಟನೆಯು ದೇಶಾಭಿಮಾನಿ ಹೋರಾಟದ ಗುಣಗಳನ್ನು ಪಡೆದುಕೊಳ್ಳುತ್ತದೆ. ಪ್ರಸ್ತಾಪಿತ ಸಮಸ್ಯೆಯಿಂದ ರೈತರಿಗಷ್ಟೇ ತೊಂದರೆಯಾಗುವುದಿಲ್ಲ. ದೇಶದ ಆಹಾರ ಭದ್ರತೆಯ ವಿಷಯದಲ್ಲೂ ದುಷ್ಪರಿಣಾಮ ಬೀರಲಿವೆ. ಹಾಗಾಗಿ, ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತರಿಗೆ ಸಾಧ್ಯವಿರುವ ಎಲ್ಲಾ ರೀತಿಗಳಲ್ಲಿ ಅಮಿತ ಬೆಂಬಲ ನೀಡುವುದು ಎಲ್ಲಾ ದೇಶಾಭಿಮಾನಿ ಜನರ ಅನಿವಾರ್ಯತೆಯಾಗಿದೆ.

ರೈತರ ಪ್ರತಿಭಟನೆಗೆ ನನ್ನ ಸಂಪೂರ್ಣ ಐಕಮತ್ಯ ವ್ಯಕ್ತಪಡಿಸುತ್ತೇನೆ ಮತ್ತು ನ್ಯಾಯಕ್ಕಾಗಿ ಅವರು ನಡೆಸುತ್ತಿರುವ ಹೋರಾಟ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ.

ದುರ್ಬಲ ಬೆನ್ನೆಲುಬು ಹೊಂದಿರುವ ಒಂದು ದೇಶವು ತನ್ನ ಸಮಕಾಲೀನರ ನಡುವೆ ಎದ್ದು ನಿಲ್ಲುವುದಿರಲಿ, ತನ್ನ ಕಾಲ ಮೇಲೆ ತಾನು ಸ್ಥಿರವಾಗಿ ನಿಲ್ಲಲೂ ಸಾಧ್ಯವಿಲ್ಲ.

ಭಾರತದ ಬೆನ್ನೆಲುಬಿನ ಬೆಂಬಲಕ್ಕಾಗಿ ನಾವೆಲ್ಲರೂ ಎದ್ದು ನಿಲ್ಲುವುದು ಅಗತ್ಯವಾಗಿದೆ.

(ಲೇಖಕರು ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಾಧೀಶರು)

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com