ಪ್ರಭಾವಿಗಳ ರಕ್ಷಿಸಲು ಮಾದಕ ನಟಿಯ ಆಯಾಮದ ಮೊರೆ ಹೋಯಿತೆ ತನಿಖೆ?

ಇಡೀ ಪ್ರಕರಣದಲ್ಲಿ ನಿಜವಾದ ಸೂತ್ರಧಾರರನ್ನು, ಅವರ ಪ್ರಭಾವ ಮತ್ತು ಸ್ಥಾನಮಾನದ ಕಾರಣಕ್ಕೆ ಬಚಾವು ಮಾಡುವ ಯತ್ನವಾಗಿ, ತನಿಖೆಯನ್ನು ಹಾದಿ ತಪ್ಪಿಸುವ ಯತ್ನವಾಗಿಯೇ ಈ ರಾಧಿಕಾ ಪ್ರಕರಣವನ್ನು ಮುಂದುಮಾಡಲಾಗಿದೆ ಎಂಬ ಗಂಭೀರ ಅನುಮಾನ ಈಗ ದಟ್ಟವಾಗತೊಡಗಿದೆ!
ಪ್ರಭಾವಿಗಳ ರಕ್ಷಿಸಲು ಮಾದಕ ನಟಿಯ ಆಯಾಮದ ಮೊರೆ ಹೋಯಿತೆ ತನಿಖೆ?

ಯುವರಾಜ್ ಎಂಬ ಆರ್ ಎಸ್ ಎಸ್ ಮತ್ತು ಬಿಜೆಪಿಯ ಪ್ರಭಾವಿ ನಾಯಕರ ಸಂಪರ್ಕದ ವಂಚಕನ ಭಾರೀ ವಂಚನೆ ಜಾಲದ ತನಿಖೆಯ ಭಾಗವಾಗಿ ಬೆಂಗಳೂರು ಸಿಸಿಬಿ ಪೊಲೀಸರು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಶುಕ್ರವಾರ ವಿಚಾರಣೆಗೊಳಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಸಾಕಷ್ಟು ಗುಸುಗುಸು ಚರ್ಚೆಗೊಳಗಾಗಿರುವ ಈ ಹೈಪ್ರೊಫೈಲ್ ವಂಚಕ ನಟಿಯ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಸಂದಾಯ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಆದರೆ, ನಟಿ ತನಗೆ ಸಿನಿಮಾವೊಂದಕ್ಕೆ ಸಂಬಂಧಿಸಿದಂತೆ ಯುವರಾಜ್ 15 ಲಕ್ಷ ರೂ. ತಮ್ಮ ಖಾತೆಯಿಂದ ವರ್ಗಾವಣೆ ಮಾಡಿದ್ದರು. ಇನ್ನು 60 ಲಕ್ಷ ರೂ. ಹಣ ತಮ್ಮ ಖಾತೆಗೆ ಎಲ್ಲಿಂದ ಬಂತೆಂದು ತಮಗೇ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಯುವರಾಜ್ ಅಲಿಯಾಸ್ ಸ್ವಾಮಿ ಮತ್ತು ನಟಿ ರಾಧಿಕಾ ನಡುವೆ ಯಾದವ್ ಎಂಬಾತ ಮಧ್ಯವರ್ತಿಯಾಗಿದ್ದ. ಆತನೇ ಯುವರಾಜ್ ನ ಅಕ್ರಮಗಳ ಪಾಲುದಾರನೂ ಆಗಿದ್ದ ಎಂದೂ ಹೇಳಲಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಂಚಕ ಸ್ವಾಮಿಯ ಪ್ರಕರಣ ಬಯಲಿಗೆ ಬಂದು ಹಲವು ದಿನಗಳೇ ಕಳೆದಿವೆ. ಆದರೆ, ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಪ್ರಕರಣದಲ್ಲಿ ಕೇಳಿಬರುತ್ತಲೇ ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಭರ್ಜರಿ ತನಿಖಾ ವರದಿಗಳು, ಚರ್ಚೆಗಳು ಆರಂಭವಾಗಿವೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ಪ್ರಭಾವಿ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿರುವ ಮತ್ತು ತಾನು ಆ ನಾಯಕರೊಂದಿಗೆ ಹೊಂದಿರುವ ಆಪ್ತ ನಂಟನ್ನೇ ತನ್ನ ಬಹುಕೋಟಿ ವಂಚನೆಯ ಕೃತ್ಯಗಳಿಗೆ ದಾಳವಾಗಿ ಬಳಸಿಕೊಂಡಿದ್ದಾನೆ. ಬಿಜೆಪಿಯ ಕೇಂದ್ರ ನಾಯಕರು ಮತ್ತು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಜೊತೆಗೆ ಆತ ಬಹಳ ಆತ್ಮೀಯನಾಗಿರುವ ಫೋಟೋಗಳು ಕೂಡ ಹರಿದಾಡುತ್ತಿವೆ.

ಜೊತೆಗೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಾಧೀಶೆ ಇಂದ್ರಕಲಾ ಎಂಬುವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಡಿ.21ರಂದೇ ದೂರು ದಾಖಲಿಸಿ, “ತನಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನಮಾನ ಕೊಡಿಸುವುದಾಗಿ ಬಿಜೆಪಿಯ ಕೇಂದ್ರ ನಾಯಕರೊಂದಿಗೆ ಭೇಟಿ ಮಾಡಿಸಿ ತನ್ನಿಂದ 8.27 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾನೆ ಎಂಬ ಗಂಭೀರ ಆರೋಪ ಮಾಡಿದ್ದಾನೆ. ಅವರು ತಮ್ಮ ದೂರಿನಲ್ಲಿ ಈ ವ್ಯಕ್ತಿಯನ್ನು ನಿವೃತ್ತ ಎಸ್ಪಿ ಪಾಪಯ್ಯ ಅವರು, ಈತನನ್ನು ಆರ್ ಎಸ್ ಎಸ್ ನ ಪ್ರಭಾವಿ ನಾಯಕ ಎಂದೇ ಪರಿಚಯಿಸಿದ್ದರು. ಅಲ್ಲದೆ ಬಿಜೆಪಿಯಲ್ಲಿ ಕೇಂದ್ರ ನಾಯಕರು ಮತ್ತು ರಾಜ್ಯದ ಪ್ರಮುಖರೆಲ್ಲರ ನಿಕಟ ಸಂಪರ್ಕವಿದೆ ಎಂದು ಯುವರಾಜ್ ತಮ್ಮ ಬಳಿ ಹೇಳಿಕೊಂಡಿದ್ದ. ತನಗೆ ಜ್ಯೋತಿಷ್ಯ ಹೇಳಲು ಬರುತ್ತದೆ ಎಂದು ಹೇಳಿ, ಸದ್ಯದಲ್ಲೇ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ ಎಂದು ನಂಬಿಸಿದ್ದರು. ತನಗೆ ಕೇಂದ್ರ ಸಚಿವರೊಂದಿಗೆ ಆಪ್ತ ಸಂಪರ್ಕವಿದೆ ಎಂದು ಬಿಜೆಪಿಯ ಹಲವು ನಾಯಕರೊಂದಿಗೆ ಇರುವ ಫೋಟೋಗಳನ್ನ ತೋರಿಸಿ ಆತ ತನ್ನಿಂದ ವಿವಿಧ ಸಂದರ್ಭಗಳಲ್ಲಿ ಒಟ್ಟು 8.27 ಕೋಟಿ ರೂ. ಪಡೆದು ವಂಚಿಸಿದ್ದಾನೆ” ಎಂದು ತಮ್ಮ ದೂರಿನಲ್ಲಿ ನಿವೃತ್ತ ನ್ಯಾಯಾಧೀಶೆ ಹೇಳಿದ್ದಾರೆ.

ಅಲ್ಲದೆ, ಆ ದೂರಿನಲ್ಲಿ ಅವರು, ಈ ಯುವರಾಜ್ ಅಲಿಯಾಸ್ ಸ್ವಾಮಿ ತಮಗೆ ಹುದ್ದೆ ಕೊಡಿಸುವುದಾಗಿ ನಂಬಿಕೆ ದೆಹಲಿಗೆ ಕರೆದುಕೊಂಡು ಹೋಗಿ ಬಿಜೆಪಿಯ ಪ್ರಮುಖ ನಾಯಕರೊಂದಿಗೂ ಭೇಟಿ ಮಾಡಿಸಿದ್ದರು. ಆದರೆ ನಂತರ ಆತ ಆ ಹುದ್ದೆಯನ್ನೂ ಕೊಡಿಸಲಿಲ್ಲ ಮತ್ತು ಸಾಲದ ರೂಪದಲ್ಲಿ ಪಡೆದ ಕೋಟ್ಯಂತರ ರೂಪಾಯಿ ಹಣವನ್ನೂ ವಾಪಸು ಮಾಡಿಲ್ಲ ಎಂದೂ ಹೇಳಿರುವುದಾಗಿ ವರದಿಯಾಗಿದೆ.

ಆದರೆ, ಹೀಗೆ ಒಬ್ಬ ನಿವೃತ್ತ ನ್ಯಾಯಾಧೀಶೆಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಬಿಜೆಪಿ ಮತ್ತು ಆರ್ ಎಸ್ ಎಸ್ ಪ್ರಭಾವಿ ನಾಯಕರೊಂದಿಗೆ ಭೇಟಿ ಮಾಡಿಸಿ ಉನ್ನತ ಹುದ್ದೆ ಕೊಡಿಸುವ ಬಗ್ಗೆ ಮಾತುಕತೆ ನಡೆಸಿದ್ದ ಎಂಬ ಗಂಭೀರ ಸಂಗತಿಯ ಕುರಿತು ನಿಜವಾಗಿಯೂ ತನಿಖೆ ಚುರುಕಾಗಬೇಕಿತ್ತು. ಮಾಧ್ಯಮಗಳೂ ಕೂಡ ಒಬ್ಬ ನಿವೃತ್ತ ನ್ಯಾಯಾಧೀಶೆಗೇ ಬಹುಕೋಟಿ ವಂಚನೆ ಮಾಡಿರುವ ಆ ಆರೋಪಿಯ ರಾಜಕೀಯ ಸಂಪರ್ಕಗಳೇನು? ಆತ ಹಾಗೆ ನ್ಯಾಯಾಧೀಶೆಗೆ ಭೇಟಿ ಮಾಡಿಸಿದ ಬಿಜೆಪಿಯ ನಾಯಕರು ಯಾರು? ಅವರೊಂದಿಗೆ ಆತ ಹೊಂದಿರುವ ನಂಟಿನ ಕುರಿತು ಆತನ ಫೋನ್ ಕರೆ ಮಾಹಿತಿ ಏನು ಹೇಳುತ್ತದೆ?

ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರೊಂದಿಗಿನ ತನ್ನ ಆಪ್ತ ನಂಟನ್ನೇ ಆತ ಇಡೀ ಈ ವಂಚನೆಯ ಜಾಲದಲ್ಲಿ ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡಿರುವುದು ಮೇಲ್ನೋಟಕ್ಕೇ ಗೊತ್ತಾಗಿದೆ ಮತ್ತು ನ್ಯಾಯಾಧೀಶೆ ಪ್ರಕರಣವೂ ಸೇರಿದಂತೆ ಆತನ ವಿರುದ್ಧ ವಿವಿಧ ಕಡೆ ದಾಖಲಾಗಿರುವ ಹಲವು ಪ್ರಕರಣಗಳಲ್ಲೂ ಆತ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ಮತ್ತು ಆತ ಅಂತಹ ಪ್ರಭಾವಿ ನಾಯಕರೊಂದಿಗೆ ತಮ್ಮನ್ನು ಭೇಟಿ ಮಾಡಿಸಿದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಹಾಗಿದ್ದಾಗ, ಆ ನಾಯಕರು ಯಾರು? ಅವರೊಂದಿಗೆ ಅವನ ಸಂಪರ್ಕ ಎಂಥಹದ್ದು? ಎಂಬ ಪ್ರಶ್ನೆಗಳು ಏಳುವುದು ಸಹಜ.

ಹಾಗೇ ಕೇವಲ ರಾಧಿಕಾ ಎಂಬ ಮಾದಕ ನಟಿಯ ಹೆಸರೊಂದನ್ನೇ ಹಿಡಿದುಕೊಂಡು, ಆಕೆ ಮತ್ತು ಯುವರಾಜ್ ನಡುವಿನ ವ್ಯವಹಾರವನ್ನು ಆ ನಟಿಯ ಮಾದಕ ಚಿತ್ರ, ವೀಡಿಯೋ ತುಣುಕು ಹಾಕಿ ರೋಚಕಗೊಳಿಸಿ ಬಾಯಿಗೆ ಬಂದದ್ದು ಅರಚಾಡುವ ಟಿವಿ ಮಾಧ್ಯಮಗಳು, ಆ ಯುವರಾಜ್ ಕೇವಲ ಆ ನಟಿಯೊಂದಿಗೆ ಮಾತ್ರ ಮಾತುಕತೆ ನಡೆಸಿದ ಕಾಲ್ ರೆಕಾರ್ಡ್ ಪತ್ತೆಯಾಗಿದೆಯೇ? ಅಥವಾ ಆತ ತನ್ನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರೊಂದಿಗೂ ಮಾತನಾಡಿದ್ದನೇ? ಮಾತನಾಡಿದ್ದರೆ ಯಾವೆಲ್ಲಾ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡಿದ್ದ? ಈ ವಂಚನೆ ಪ್ರಕರಣಗಳಿಗೂ ಆ ನಾಯಕರಿಗೂ ಸಂಬಂಧವಿಲ್ಲವೆ? ಎಂಬ ಬಗ್ಗೆಯೂ ಕಾಲ್ ರೆಕಾರ್ಡ್ ಮಾಹಿತಿ ಜಾಲಾಡಬೇಕಿತ್ತು ಅಲ್ಲವೇ?

ಆದರೆ, ಹಾಗೆ ಆಗಿಲ್ಲ. ಜೊತೆಗೆ ಈ ರಾಧಿಕಾ ಕುಮಾರಸ್ವಾಮಿ ಮತ್ತು ಯುವರಾಜ್ ಮಾತುಕತೆಯ ಕಾಲ್ ರೆಕಾರ್ಡ್ ಮಾತ್ರ ಬಹಿರಂಗಪಡಿಸಿ, ಉಳಿದ ಯಾವ ಕರೆ ದಾಖಲೆಯನ್ನು ಬಹಿರಂಗಪಡಿಸದೆ ಇರುವ ತನಿಖಾಧಿಕಾರಿಗಳ ತಂತ್ರಗಾರಿಕೆಯ ಬಗ್ಗೆಯೂ ಸಾಕಷ್ಟು ಅನುಮಾನುಗಳು ಎದ್ದಿವೆ. ಅದರಲ್ಲೂ ಆಡಳಿತ ಪಕ್ಷದ ಪ್ರಭಾವಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸ್ಥಾನಮಾನಗಳಲ್ಲಿರುವ ವ್ಯಕ್ತಿಗಳೊಂದಿಗೆ ಈ ವಂಚಕನ ಹೆಸರು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ಆತನ ಕರೆ ಮಾಹಿತಿ ಹೀಗೆ ನಟಿಯೊಬ್ಬರ ವಿಷಯದಲ್ಲಿ ಮಾತ್ರ ಸೋರಿಕೆಯಾಗಿ ಉಳಿದೆಲ್ಲವೂ ಮುಚ್ಚಿಹೋಗುತ್ತದೆ ಎಂದರೆ; ಅದರ ಹಿಂದಿನ ಕಾರಣಗಳನ್ನು ಊಹಿಸುವುದು ಸರಳ.

ಬೆಂಗಳೂರು ಸಿಸಿಬಿ ಪೊಲೀಸರು ಈ ಹಿಂದೆ ಮಾದಕ ವಸ್ತು ಪ್ರಕರಣದಲ್ಲಿಯೂ ಇಂತಹದ್ದೇ ವರಸೆ ಪ್ರದರ್ಶಿಸಿದ್ದರು. ಸಿನಿಮಾ ನಟ-ನಟಿಯರ ಕುರಿತ ವಿವರಗಳನ್ನು ಸೋರಿಕೆ ಮಾಡುವಲ್ಲಿ ವಹಿಸಿದ ಆಸಕ್ತಿ ಬಳಿಕ ಪ್ರಕರಣದಲ್ಲಿ ಕೇಳಿಬಂದ ಪ್ರಭಾವಿ ರಾಜಕಾರಣಿಗಳು ಪುತ್ರರು, ಆಪ್ತರ ವಿಷಯದಲ್ಲಿ ಕಂಡಿರಲಿಲ್ಲ. ಯಾವಾಗ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳ ಆಪ್ತರ ಹೆಸರುಗಳು ತನಿಖೆಯಲ್ಲಿ ಬಯಲಾಗತೊಡಗಿದವೋ ಆ ಇಡೀ ಪ್ರಕರಣ ವ್ಯವಸ್ಥಿತವಾಗಿ ಮಾಧ್ಯಮದ ಲೈಮ್ ಲೈಟ್ ನಿಂದ ತೆರೆಮರೆಗೆ ಸರಿದುಬಿಟ್ಟಿತು. ಇದೀಗ ಈ ಯುವರಾಜನ ಬಹುಕೋಟಿ ವಂಚನೆಯ ವಿಷಯದಲ್ಲಿ ಕೂಡ ಆತನ ಕೃತ್ಯಗಳಲ್ಲಿ ಶಾಮೀಲಾದ ಅಥವಾ ಆತನ ಹಿಂದೆ ಇದ್ದು ಎಲ್ಲಾ ಅಕ್ರಮಗಳ ಸೂತ್ರಧಾರರನ್ನು ಬಯಲಿಗೆಳೆಯುವ ಬದಲು, ಅಂಥವರನ್ನು ರಕ್ಷಿಸುವ ತಂತ್ರವಾಗಿಯೇ ಸಿನಿಮಾದ ನಂಟನ್ನು ಮುಂದೆ ಮಾಡಲಾಗುತ್ತಿದೆಯೇ ಎಂಬ ದಟ್ಟ ಅನುಮಾನಗಳಿಗೆ ಪ್ರಕರಣಕ್ಕೆ ಸಿಕ್ಕ ರಾಧಿಕಾ ತಿರುವು ಕಾರಣವಾಗಿದೆ. ಜೊತೆಗೆ ಇಡೀ ಪ್ರಕರಣದಲ್ಲಿ ಕೇಳಬೇಕಾದ ಗಂಭೀರ ಪ್ರಶ್ನೆಗಳನ್ನು ಕೇಳದೆ, ನಟಿಯ ಕುರಿತ ವಿವರಗಳನ್ನೇ ದಿನವಿಡೀ ರೀಲು ಸುತ್ತುತ್ತಿರುವ ಮಾಧ್ಯಮಗಳ ವರಸೆ ಕೂಡ ಅಂತಹ ಅನುಮಾನಗಳಿಗೆ ಇಂಬು ನೀಡುತ್ತಿದೆ.

ಅಂದರೆ; ಇಡೀ ಪ್ರಕರಣದಲ್ಲಿ ನಿಜವಾದ ಸೂತ್ರಧಾರರನ್ನು, ಅವರ ಪ್ರಭಾವ ಮತ್ತು ಸ್ಥಾನಮಾನದ ಕಾರಣಕ್ಕೆ ಬಚಾವು ಮಾಡುವ ಯತ್ನವಾಗಿ, ತನಿಖೆಯನ್ನು ಹಾದಿ ತಪ್ಪಿಸುವ ಯತ್ನವಾಗಿಯೇ ಈ ರಾಧಿಕಾ ಪ್ರಕರಣವನ್ನು ಮುಂದುಮಾಡಲಾಗಿದೆ ಎಂಬ ಗಂಭೀರ ಅನುಮಾನ ಈಗ ದಟ್ಟವಾಗತೊಡಗಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com