ಪೇಜಾವರ ಕೃಷ್ಣೈಕ್ಯ ವಿಶ್ವೇಶತೀರ್ಥರನ್ನು ಅವಮಾನಿಸಿದರಾ ಪೇಜಾವರ ವಿಶ್ವಪ್ರಸನ್ನ ಶ್ರೀ ?

ಆರ್ ಎಸ್ ಎಸ್ ಗೆ ರಾಜಗುರುಗಳಂತಿದ್ದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ರೈತರ ವಿವಾದದಲ್ಲಿ ಮಾತ್ರ ರಾಜಿರಹಿತ ಹೋರಾಟಗಾರರಾಗಿದ್ದರು. ಅದು ಮನಮೋಹನ ಸಿಂಗ್ ಇರಲಿ, ನರೇಂದ್ರ ಮೋದಿಯಿರಲಿ, ರೈತರ ವಿಚಾರದಲ್ಲಿ ಅವರ ನಿಲುವು ಅಚಲವಾಗಿತ್ತು
ಪೇಜಾವರ ಕೃಷ್ಣೈಕ್ಯ ವಿಶ್ವೇಶತೀರ್ಥರನ್ನು ಅವಮಾನಿಸಿದರಾ ಪೇಜಾವರ ವಿಶ್ವಪ್ರಸನ್ನ ಶ್ರೀ ?

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಸ್ವಾಮೀಜಿಗಳು ಮಾತನಾಡಿದ್ದಾರೆ. "ರೈತರ ಹೆಸರಿನಲ್ಲಿ ಬೇರೆ ಏನೋ ನಡೆಯುತ್ತಿದೆ" ಎಂದು ಪೇಜಾವರ ಸ್ವಾಮಿಗಳು ಹೇಳುವ ಮೂಲಕ ಬಿಜೆಪಿ ಪಕ್ಷದ ನಾಯಕರ ಮಾತನ್ನೇ ಪುನರುಚ್ಚರಿಸಿದ್ದಾರೆ. ಇದು ಮೇಲ್ನೋಟಕ್ಕೆ ರೈತರಿಗೆ ಮಾಡಿದ ಅವಮಾನ ಎಂದು ಕಂಡುಬಂದರೂ, ವಾಸ್ತವವಾಗಿ ಇದು ಹೋರಾಟದ ಸ್ವಾಮೀಜಿಯೆಂದೇ ಖ್ಯಾತರಾಗಿದ್ದ ಪೇಜಾವರ ಕೃಷ್ಣೈಕ್ಯ ವಿಶ್ವೇಶತೀರ್ಥರಿಗೆ ಮಾಡಿದ ಅವಮಾನವೇ ಆಗಿದೆ.

ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ತಮ್ಮ ಗುರುಗಳಾದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ವಿಶ್ವೇಶತೀರ್ಥರಂತೆ ಸಾಮಾಜಿಕ, ರಾಜಕೀಯ ಅಧ್ಯಯನ ಮಾಡದೇ ಇದ್ದರೂ ಪರವಾಗಿಲ್ಲ, ಕನಿಷ್ಠ ತಮಗೆ ದೀಕ್ಷೆ ನೀಡಿದ ಪೇಜಾವರ ವಿಶ್ವೇಶತೀರ್ಥ ಶ್ರಿಗಳ ಬದುಕನ್ನಾದರೂ ಅಧ್ಯಯನ ಮಾಡಿ. ಇಲ್ಲದೇ ಇದ್ದರೆ ಪೇಜಾವರ ಮಠಕ್ಕೆ ಅವಮಾನ ಮಾಡಿದಂತಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿ, ಆರ್ ಎಸ್ ಎಸ್ ಗೆ ರಾಜಗುರುಗಳಂತಿದ್ದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ರೈತರ ವಿವಾದದಲ್ಲಿ ಮಾತ್ರ ರಾಜಿರಹಿತ ಹೋರಾಟಗಾರರಾಗಿದ್ದರು. ಅದು ಮನಮೋಹನ ಸಿಂಗ್ ಇರಲಿ, ನರೇಂದ್ರ ಮೋದಿಯಿರಲಿ, ರೈತರ ವಿಚಾರದಲ್ಲಿ ಅವರ ನಿಲುವು ಅಚಲವಾಗಿತ್ತು.

ಬಿ ಎಸ್ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿ. ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಭಾರತ ಸರ್ಕಾರದ ವಿಶೇಷ ಆರ್ಥಿಕ ವಲಯ ಜಾರಿಗಾಗಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ಪೆರ್ಮುದೆ, ಕುತ್ತೆತ್ತೂರು, ಎಕ್ಕಾರು ಕೃಷಿ ಭೂಮಿಯನ್ನು ನೋಟಿಫೈ ಗೊಳಿಸಿತ್ತು. ಮೂರು ಬೆಳೆ ಬೆಳೆಯುವ ಕೃಷಿಭೂಮಿಯನ್ನು ಸ್ವಾಧೀನಪಡಿಸಬಾರದು ಎಂಬ ನಿಯಮವಿದ್ದರೂ ಮೂರು ಬೆಳೆ ಬೆಳೆಯುವ ಕೃಷಿ ಭೂಮಿಯನ್ನೇ ಸ್ವಾಧೀನಕ್ಕೆ ನೋಟಿಸ್ ಕಳಿಸಲಾಗಿತ್ತು. ರೈತರು ಕೃಷಿ ಭೂಮಿ ಸಂರಕ್ಷಣಾ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿದಿದ್ದರು. ರೈತ ಹೋರಾಟಗಾರ್ತಿ ವಿದ್ಯಾದಿನಕರ್ ಎಲ್ಲಾ ಧರ್ಮದ ಮುಖಂಡರನ್ನು ಈ ರೈತ ಹೋರಾಟದಲ್ಲಿ ಒಳಗೊಳ್ಳುವಂತೆ ಮಾಡುವಾಗ ಪೇಜಾವರ ವಿಶ್ವೇಶತೀರ್ಥರನ್ನೂ ಸಂಪರ್ಕಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಹೋರಾಟಕ್ಕಿಳಿದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಗಳು ಉಪವಾಸ ಸತ್ಯಾಗ್ರಹ ನಡೆಸಿದ್ರು. ರೈತ ಹೋರಾಟಕ್ಕೆ ಮಣಿದ ಬಿ ಎಸ್ ಯಡಿಯೂರಪ್ಪ ಸರ್ಕಾರ 2035 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈ ಬಿಟ್ಟಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯೆಂದು ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳೇನು ಸರ್ಕಾರದ ಪರ ನಿಲ್ಲದೆ ರೈತರ ಪರ ನಿಂತರು. ಆರ್ ಎಸ್ ಎಸ್ ಮತ್ತು ಬಿಜೆಪಿಯಿಂದ ಎಷ್ಟೇ ಒತ್ತಡ ಬಂದರೂ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ತಮ್ಮ ನಿಲುವು ಬದಲಿಸಲಿಲ್ಲ.

ಇದೇ ರೈತ ಹೋರಾಟದಲ್ಲಿ ಹಲವು ಬಾರಿ ಪೇಜಾವರ ವಿಶ್ವೇಶತೀರ್ಥರು ತಮ್ಮ ಬದ್ದತೆಯನ್ನು ಸಾಭೀತುಪಡಿಸಿದ್ದರು. ಬಿಜೆಪಿ ರಾಜ್ಯ ಸರ್ಕಾರದ ವಿರುದ್ದದ ಎಸ್ಇಝಡ್ ರೈತ ಹೋರಾಟವನ್ನು ವಿದ್ಯಾದಿನಕರ್, ಲಾರೆನ್ಸ್ ಡಿ ಕುನ್ಹ, ವಿಲಿಯಂ ಡಿಸೋಜಾ ಸೇರಿದಂತೆ ಪ್ರಗತಿಪರರು ಮುನ್ನಡೆಸುತ್ತಿದ್ದರು. ಈ ಹೋರಾಟದಲ್ಲಿ ಬಿಜೆಪಿ ವಿರೋಧಿ ದಲಿತ ಸಂಘಟನೆಗಳು, ಜಮಾತೆ ಇಸ್ಲಾಮೀ ಹಿಂದ್ ಮುಸ್ಲಿಮ್ ಸಂಘಟನೆಗಳೂ ಭಾಗಿಯಾಗಿದ್ದವು. ಈ ಸಂಘಟನೆಗಳು ಇರುವ ಹಿನ್ನಲೆಯಲ್ಲಿ ತಾವು ಹೋರಾಟದಿಂದ ಹಿಂದೆ ಸರಿಯಬೇಕು ಎಂದು ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡರು ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳಿಗೆ ಮನವಿ ಮಾಡಿದ್ರೂ ಪೇಜಾವರ ಸ್ವಾಮಿಗಳು ಮಾತ್ರ ಹೋರಾಟದಿಂದ ಹಿಂದೆ ಸರಿಯಲಿಲ್ಲ.

ಮೋದಿ ಪ್ರಧಾನಿಯಾದ ಮೇಲೂ ತನ್ನ ನಿಲುವಿನಿಂದ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಬದಲಾವಣೆ ಮಾಡಿಕೊಂಡಿಲ್ಲ‌. ಬೇಕಿದ್ದರೆ ಮಠದ ಸ್ವಾಮೀಜಿಗಳ ಕಾರ್ಯಚಟುವಟಿಕೆಯ ಬಗ್ಗೆ ಮಠದಲ್ಲಿರುವ ದಾಖಲೆಗಳನ್ನು ತೆಗೆದು ನೋಡಿ. 2015 ಜನವರಿ 20 ರಿಂದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ರಾಯಚೂರು ಮೊಕ್ಕಾಂನಲ್ಲಿದ್ದರು‌. ಕೃಷಿ ಭೂಮಿ ಸ್ವಾಧೀನಕ್ಕೆ ರೈತರ ಒಪ್ಪಿಗೆ ಅಗತ್ಯವಿಲ್ಲ ಎಂಬ ಸುಗ್ರೀವಾಜ್ಞೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಮಯವದು. ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಪ್ರಧಾನಿ ಮೋದಿಯ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ರು. ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಕ್ಕೆ ನಮ್ಮ ಒಪ್ಪಿಗೆಯಿಲ್ಲ, ನಾನು ರೈತರ ಜೊತೆ ಇರ್ತೀನಿ ಎಂದಿದ್ದರು. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಅವರ ಸಿದ್ದಾಂತದ ಕಾರಣಗಳಿಗಾಗಿ ವಿರೋಧಿಸುವ ಎಲ್ಲರೂ ಅವರ ಇಂತಹ ಬದ್ದತೆಯ ಕಾರಣಗಳಿಗಾಗಿ ಅವರನ್ನು ಇಷ್ಟಪಡುತ್ತಿದ್ದರು.

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಈಗ ಬದುಕಿದ್ದರೆ, ಅವರೇನು ದೆಹಲಿಗೆ ಹೋಗಿ ರೈತ ಹೋರಾಟದಲ್ಲಿ ಭಾಗಿಯಾಗುತ್ತಿರಲಿಲ್ಲ. ಆದರೆ ಜೋರಾದ ಧ್ವನಿಯಲ್ಲಿ ಕೇಂದ್ರ ಸರ್ಕಾರದ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದರು. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳ ಪೀಠದಲ್ಲಿ ಕುಳಿತರೆ ಸಾಕಾಗುವುದಿಲ್ಲ. ಅವರ ಪರಂಪರೆಯನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂದುವರೆಸಬೇಕಿದೆ. ಇಲ್ಲದೇ ಇದ್ದರೆ ಪೇಜಾವರ ವಿಶ್ವಪ್ರಸನ್ನ ತೀರ್ಥರು ಕೃಷ್ಣೈಕ್ಯ ಪೇಜಾವರ ವಿಶ್ವೇಶತೀರ್ಥರಿಗೆ ಘೋರ ಮೋಸ ಮಾಡಿದಂತಾಗುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com