ಕೃಷಿ ಕಾಯ್ದೆ ಚರ್ಚೆ ಮೀರಿ ಆಳುವ ಮಂದಿಯ ಬೆತ್ತಲು ಮಾಡಿದ ಐತಿಹಾಸಿಕ ರೈತ ಚಳವಳಿ

ಪಂಜಾಬ್ ಮತ್ತು ಹರ್ಯಾಣದ ರೈತರಿಂದ ಆರಂಭಗೊಂಡ, ದೇಶದ ಐತಿಹಾಸಿಕ ಈ ರೈತ ಚಳವಳಿ, ಇದೀಗ ಭಾರತ ಮತ್ತು ಇಂಡಿಯಾದ ನಡುವಿನ ಸಂಘರ್ಷವಾಗಿ, ಬಡವರು ಮತ್ತು ಬಲ್ಲಿದರ ಹಿತಾಸಕ್ತಿ ಸಂಘರ್ಷವಾಗಿ ಬದಲಾಗಿದೆ. ಹಾಗಾಗಿ ಆಳುವ ಮಂದಿ ನಡುಬೀದಿಯಲ್ಲಿ ಬೆತ್ತಲಾಗತೊಡಗಿದ್ದಾರೆ!
ಕೃಷಿ ಕಾಯ್ದೆ ಚರ್ಚೆ ಮೀರಿ ಆಳುವ ಮಂದಿಯ ಬೆತ್ತಲು ಮಾಡಿದ ಐತಿಹಾಸಿಕ ರೈತ ಚಳವಳಿ

ಒಂದು ಕಡೆ ದೇಶದ ಅನ್ನದಾತರು ತಮ್ಮ ಬದುಕನ್ನು ಮುಳುಗಿಸುವ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ನಿರಂತರ ಆಹೋರಾತ್ರಿ ಪ್ರತಿಭಟನೆಗೆ ತಿಂಗಳು ತುಂಬಿದೆ. ಮತ್ತೊಂದು ಕಡೆ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥ ದೇಶಾದ್ಯಂತ ರೈತ ದಿನಾಚರಣೆ ನಡೆದಿದೆ. ಪ್ರಧಾನಿ ಮೋದಿಯವರು ಒಂದು ಕಡೆ ರೈತ ದಿನದ ಶುಭಾಶಯ ಕೋರುತ್ತಲೇ ಮತ್ತೊಂದು ಕಡೆ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ.

ವಿಪರ್ಯಾಸವೆಂದರೆ; ಇದೀಗ ಹೊಸ ಕಾಯ್ದೆಯ ಮೂಲಕ ಯಾವ ಎಪಿಎಂಸಿ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸಲು ಸರ್ಕಾರ ಹೊರಟಿದೆಯೋ ಅದೇ ಎಪಿಎಂಸಿ ವ್ಯವಸ್ಥೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತರಲು ಕಾರಣವಾಗಿದ್ದು ಇದೇ ಚೌಧರಿ ಚರಣ್ ಸಿಂಗ್. ಸ್ವಾತಂತ್ರ್ಯ ಪೂರ್ವದಲ್ಲಿ 1938ರ ಹೊತ್ತಿಗೇ ಅಂದಿನ ಯುನೈಟೆಡ್ ಪ್ರಾವಿನ್ಸ್ ಶಾಸನಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ಚರಣ್ ಸಿಂಗ್ ಮಂಡಿಸಿದ್ದರು. ವ್ಯಾಪಾರಿಗಳ ಶೋಷಣೆಯಿಂದ ರೈತರನ್ನು ರಕ್ಷಿಸುವ ಉದ್ದೇಶದ ಆ ಮಸೂದೆಯನ್ನು ಕೇಂದ್ರ ಶಾಸನಸಭೆಯಲ್ಲಿ ಮಂಡನೆಯಾದ ಬಳಿಕ ಸ್ವಾತಂತ್ರ್ಯ ಪೂರ್ವದಲ್ಲೇ ಪಂಜಾಬ್ ಸೇರಿದಂತೆ ದೇಶದ ಹಲವು ಪ್ರಾದೇಶಿಕ ಸರ್ಕಾರಗಳು ಅಳಡಿಸಿಕೊಂಡವು. ಆ ಮೂಲಕ ರೈತರ ಹಿತಕಾಯುವ ಪರಮ ಉದ್ದೇಶದ ಒಂದು ಕಾಯ್ದೆ ಜಾರಿಗೆ ಬರಲು ಕಾರಣವಾದ ಹೆಗ್ಗಳಿಕೆ ಚರಣ್ ಸಿಂಗ್ ಅವರದ್ದಾದರೆ, ಅಂತಹದ್ದೊಂದು ಕಾಯ್ದೆಯನ್ನು ಮೊಟ್ಟಮೊದಲು ಜಾರಿಗೆ ತಂದ ರಾಜ್ಯಗಳ ಪೈಕಿ ಒಂದಾದ ಹೆಗ್ಗಳಿಕೆ, ಪಂಜಾಬಿನದ್ದಾಗಿತ್ತು!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಕತಾಳೀಯವೆಂದರೆ; ಅದೇ ಪಂಜಾಬಿನ ರೈತರೇ ಇಂದು ಎಪಿಎಂಸಿ ವ್ಯವಸ್ಥೆಯೂ ಸೇರಿದಂತೆ ರೈತರ ಮತ್ತು ಕೃಷಿಯ ಹಿತ ಕಾಯುವ ಹಲವು ಸುರಕ್ಷತಾ ಕಾನೂನುಗಳನ್ನು ಬದಿಗೆ ಸರಿಸುವ ಮತ್ತು ಸುಮಾರು ನೂರು ವರ್ಷಗಳ ಹಿಂದೆ ಚರಣ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದ ವ್ಯಾಪಾರಿಗಳ ಶೋಷಣೆಗೆ ಮುಕ್ತ ಅವಕಾಶ ಕಲ್ಪಿಸುವ ಮೂಲಕ ವ್ಯಾಪಾರಿಗಳ ಹಿತಕಾಯುವ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿದ್ದಾರೆ. ಉಡದ ಪಟ್ಟಿನ ರೀತಿಯ ಪಟ್ಟು ಹಿಡಿದು ದೆಹಲಿಯ ಚಳಿ, ಶೀತಗಾಳಿಗೂ ಜುಪ್ಪೆನ್ನದೆ ನಡುಬೀದಿಯಲ್ಲೇ ದಿನವಿಡೀ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ದೇಶದಲ್ಲಿ ಪ್ರಮುಖವಾಗಿ ಹವಾಮಾನ ವೈಪರೀತ್ಯ, ಮಾರುಕಟ್ಟೆ ಬೆಲೆ ಏರಿಳಿಕೆಗಳೇ ರೈತನ ಪಾಲಿನ ಬೆಂಬಿಡದ ಶಾಪವಾಗಿವೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ಬೆಳೆ ಉಳಿಸಿಕೊಂಡರೆ, ಮಾರುಕಟ್ಟೆಯ ಬೆಲೆ ಏಳಿಕೆಯ ವೈಪರೀತ್ಯಗಳಿಗೆ ನೆಲಕಚ್ಚುವ ಅಸಹಾಯಕ ಸ್ಥಿತಿ ರೈತನದ್ದು. ಇಂತಹ ಪರಿಸ್ಥಿತಿಯಲ್ಲೂ ಆತನ ಪಾಲಿಗೆ ಒಂದಿಷ್ಟಾದರೂ ಕನಿಷ್ಟ ಆದಾಯದ ಮತ್ತು ಪಟ್ಟ ಪರಿಶ್ರಮಕ್ಕೆ ಕನಿಷ್ಟ ಬೆಲೆ ಖಾತರಿಪಡಿಸುವ ವ್ಯವಸ್ಥೆ ಎಂದಿದ್ದರೆ ಅದು; ಎಪಿಎಂಸಿ ವ್ಯವಸ್ಥೆ ಮತ್ತು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಗಳು ಮಾತ್ರ. ಈಗ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ಕಾಯ್ದೆಗಳು ಅಂತಹ ಕನಿಷ್ಟ ಸುರಕ್ಷತೆಯನ್ನೂ, ಖಾತರಿಯನ್ನೂ ವ್ಯವಸ್ಥಿತವಾಗಿ ಮತ್ತು ಹಂತಹಂತವಾಗಿ ತೆಗೆದುಹಾಕಲಿವೆ ಎಂಬುದು ರೈತರ ಈ ಮಟ್ಟಿನ ಹೋರಾಟಕ್ಕೆ ಇರುವ ಕಾರಣ.

ಅದರಲ್ಲೂ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ(ಉತ್ತೇಜನ ಮತ್ತು ಬೆಂಬಲ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಯ ಕೃಷಿ ಒಪ್ಪಂದ(ಸಬಲೀಕರಣ ಮತ್ತು ರಕ್ಷಣೆ) ಹಾಗೂ ಅಗತ್ಯ ವಸ್ತು(ತಿದ್ದುಪಡಿ) ಕಾಯ್ದೆಗಳು ಮೇಲ್ನೋಟಕ್ಕೆ ಕೃಷಿಕರಿಗೆ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಲಿವೆ. ಗುತ್ತಿಗೆ ಕೃಷಿ ಮತ್ತು ಫಸಲು ಮಾರಾಟ ವ್ಯವಸ್ಥೆಗೆ ಕಾನೂನು ಭದ್ರತೆ ನೀಡಲಿವೆ ಹಾಗೂ ಅಗತ್ಯವಸ್ತು ಕಾಯ್ದೆಯಿಂದ ಬಹುತೇಕ ಕೃಷಿ ಉತ್ಪನ್ನಗಳನ್ನು ಹೊರಗಿಡುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಕಂಪನಿಗಳು ಮತ್ತು ರೈತರಿಗೆ ಅನುಕೂಲ ಕಲ್ಪಿಸಲಿವೆ ಎನಿಸುತ್ತದೆ. ಸರ್ಕಾರ ಕೂಡ ಇದನ್ನೇ ಹೇಳುತ್ತಿದೆ. ಆದರೆ, ಈ ಮೂರೂ ಕಾಯ್ದೆಗಳು ಒಂದು ಕಡೆಗೆ ಎಪಿಎಂಸಿ ವ್ಯವಸ್ಥೆಯಲ್ಲಿ ರೈತರಿಗೆ ಈಗ ಖಾತರಿ ಇರುವ ಕನಿಷ್ಟ ಬೆಂಬಲ ಬೆಲೆಯ ಸುರಕ್ಷತೆಯನ್ನೇ ಅಪ್ರಸ್ತುತಗೊಳಿಸುತ್ತವೆ. ಮುಕ್ತ ಮಾರುಕಟ್ಟೆಯಲ್ಲಿ ಆರಂಭದಲ್ಲಿ ಸ್ಪರ್ಧಾತ್ಮಕ ಬೆಲೆ ಸಿಗುವ ನಿರೀಕ್ಷೆ ಇದ್ದರೂ, ಕ್ರಮೇಣ ಆ ಕ್ಷೇತ್ರದ ಬೃಹತ್ ಕಂಪನಿಗಳ ಏಕಸ್ವಾಮ್ಯದ ಬಳಿಕ ಮಾರುಕಟ್ಟೆಯ ಮೇಲೆ ಅವರೇ ಸಂಪೂರ್ಣ ಹಿಡಿತ ಸಾಧಿಸುವುದರಿಂದ ರೈತನ ಬೆಳೆಗೆ ಅಂತಹ ಒಂದೆರಡು ಬಲಿಷ್ಟ ಕಂಪನಿಗಳು ನಿಗದಿ ಮಾಡುವುದೇ ಬೆಲೆಯಾಗಲಿದೆ. ಹಾಗಾಗಿ ಒಂದು ಕಡೆ ಎಪಿಎಂಸಿ ವ್ಯವಸ್ಥೆಯನ್ನೂ, ಮತ್ತೊಂದು ಕಡೆ ಕನಿಷ್ಟ ಬೆಂಬಲ ಬೆಲೆಯನ್ನೂ ವ್ಯವಸ್ಥಿತವಾಗಿ ತೆಗೆದುಹಾಕುವ ಈ ಕಾಯ್ದೆಗಳು ರೈತರ ಪಾಲಿಗೆ ಮರಣಶಾಸನವಾಗಲಿವೆ ಎಂಬುದು ಸ್ವತಃ ರೈತರೂ, ಕೃಷಿ ತಜ್ಞರೂ ವ್ಯಕ್ತಪಡಿಸುತ್ತಿರುವ ಆತಂಕ.

ಆ ಆತಂಕದ ಹಿನ್ನೆಲೆಯಲ್ಲೇ ರೈತರು ಹೀಗೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಟಕ್ಕೆ ಇಳಿದಿದ್ದಾರೆ. ಸರ್ಕಾರ ಕೂಡ ತನ್ನ ಹೊಸ ಕಾಯ್ದೆಗಳು ಕೃಷಿಕರ ವಿರುದ್ಧವಿಲ್ಲ, ಬೃಹತ್ ಕಾರ್ಪೊರೇಟ್ ಕಂಪನಿಗಳ ಪರವಿಲ್ಲ ಎಂಬುದನ್ನು ಮನವರಿಕೆ ಮಾಡುವಲ್ಲಿ ಸೋತಿದೆ. ಅಷ್ಟಕ್ಕೂ ಕೃಷಿಕರ ಪ್ರಮುಖ ಆತಂಕಗಳ ಬಗ್ಗೆ ಸರ್ಕಾರ ನೇರವಾಗಿ ಸ್ಪಷ್ಟನೆ ನೀಡುವ ಬದಲು, ರೈತರ ವಿರುದ್ಧವೇ ಶಂಕೆ ಬಿತ್ತುವ, ಅನುಮಾನ ಸೃಷ್ಟಿಸುವ ಮತ್ತು ಆ ಮೂಲಕ ಅನ್ನದಾತರನ್ನೇ ಅವಮಾನಿಸುವ ಪ್ರಯತ್ನಗಳನ್ನು ನಡೆಸುತ್ತಿದೆ. ರೈತರನ್ನು ಭಯೋತ್ಪಾದಕರು, ಭಯೋತ್ಪಾದಕರ ಕುಮ್ಮಕ್ಕಿನಿಂದ ಹೋರಾಡುತ್ತಿರುವವರು ಎಂದು ಕೇಂದ್ರ ಸಚಿವರೇ ಆರೋಪಿಸಿದ್ದಾರೆ. ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಮೂದಲಿಸಿದ್ದಾರೆ. ಸ್ವತಃ ಪ್ರಧಾನಿ ಮತ್ತು ಗೃಹ ಸಚಿವರು ಕೂಡ ರೈತರ ಹೋರಾಟ ರಾಜಕೀಯಪ್ರೇರಿತ, ಅವರು ನಿಜವಾದ ರೈತರಲ್ಲ ಎಂಬಂತಹ ಹೇಳಿಕೆಗಳನ್ನು ನೀಡಿದ್ದಾರೆ.

ರೈತರ ನಿಜ ಆತಂಕವನ್ನು ದೂರ ಮಾಡುವ ಬದಲು, ಅವರನ್ನು ವಿಶ್ವಾಸಕ್ಕೆ ಪಡೆದು ಕಾಯ್ದೆಯ ತಪ್ಪುಗಳನ್ನು ಸರಿಪಡಿಸುವ ಮಾತುಗಳನ್ನಾಡುವ ಬದಲು ಆರಂಭದಲ್ಲಿಯೇ ಅನ್ನದಾತರನ್ನು ಅವಮಾನಿಸು, ಅನುಮಾನಿಸುವ ಯತ್ನಗಳ ಫಲವಾಗಿಯೇ ಈಗ ತಿಂಗಳ ಬಳಿಕವೂ ಹೋರಾಟ ಸರ್ಕಾರ ಮತ್ತು ಧರಣಿನಿರತರ ನಡುವಿನ ಬಗೆಹರಿಯದ ಬಿಕ್ಕಟ್ಟಾಗಿ ಪರಿಣಮಿಸಿದೆ. ಐದು ಸುತ್ತಿನ ಮಾತುಕತೆಯ ಪ್ರಯತ್ನಗಳ ಹೊರತಾಗಿಯೂ ರೈತರು ದೆಹಲಿಯ ಗಡಿ ಹೆದ್ದಾರಿಗಳನ್ನು ಬಿಟ್ಟು ಕದಲುತ್ತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೋರಾಟ ಮತ್ತಷ್ಟು ತೀವ್ರವಾಗುತ್ತಿದ್ದು ನಿತ್ಯ ಸಾವಿರಾರು ಮಂದಿ ರೈತರು ದೇಶದ ಮೂಲೆಮೂಲೆಯಿಂದ ಬಂದು ಪ್ರತಿಭಟನೆಯ ಪ್ರವಾಹಕ್ಕೆ ಸೇರತೊಡಗಿದ್ದಾರೆ.

ಚಳಿ ಮತ್ತು ನಿಶ್ಯಕ್ತಿಯಿಂದ ಹಲವು ರೈತರು ಈಗಾಗಲೇ ಸಾವುಕಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸರಾಸರಿ ದಿನಕ್ಕೆ ಎರಡು-ಮೂರು ಮಂದಿ ಪ್ರತಿಭಟನಾನಿರತ ರೈತರು ಹೋರಾಟಕ್ಕೆ ಜೀವ ಬಿಡುತ್ತಿದ್ದಾರೆ. ಆದರೂ ಸರ್ಕಾರ ಸ್ವತಃ ರೈತರೇ ಬೇಡ ಎನ್ನುತ್ತಿರುವ ಮೂರು ಕಾಯ್ದೆಗಳನ್ನು ವಾಪಸು ಪಡೆಯುವ ಮನುಷ್ಯತ್ವ ತೋರುತ್ತಿಲ್ಲ. ಯಾರನ್ನು ಉದ್ದೇಶಿಸಿ ಕಾನೂನು ತರಲಾಗುತ್ತಿದೆಯೋ, ಯಾರ ಹಿತ ಕಾಯುವುದಾಗಿ ಹೇಳಲಾಗುತ್ತಿದೆಯೋ ಅವರೇ ಆ ಕಾಯ್ದೆಗಳು ತಮ್ಮ ಹಿತಕ್ಕೆ ಮಾರಕ, ತಮ್ಮ ಪಾಲಿನ ಮರಣ ಶಾಸನ ಎಂದು ದೇಶವ್ಯಾಪಿ ಪ್ರಬಲ ಪ್ರತಿರೋಧ ತೋರುತ್ತಿದ್ದರೂ ಆಳುವ ಸರ್ಕಾರ ಒಂದೇ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಸರ್ಕಾರದ ಈ ನಿರ್ದಯ, ಸರ್ವಾಧಿಕಾರಿ ಧೋರಣೆಯ ಹಿಂದೆ ಯಾರ ಹಿತ ಕಾಯುವ ಬದ್ಧತೆ ಅಡಗಿದೆ ಎಂಬುದನ್ನು ದೇಶದ ಜನ ಅರ್ಥಮಾಡಿಕೊಳ್ಳತೊಡಗಿದ್ದಾರೆ. ಹಾಗಾಗಿ ನಿಧಾನವಾಗಿ ಬಿಜೆಪಿ ಮತ್ತು ಸಂಘಪರಿವಾರದ ವಲಯವೂ ಸೇರಿದಂತೆ ದೇಶದ ಜನಸಾಮಾನ್ಯರು ರೈತರ ಪರ ಮಿಡಿಯತೊಡಗಿದ್ದಾರೆ. ಸರ್ಕಾರದ ಹಠಮಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ.

ಹಾಗಾಗಿ, ಸದ್ಯಕ್ಕೆ ದೇಶದ ರೈತರ ಹೋರಾಟ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಸರ್ವಾಧಿಕಾರಿ ಧೋರಣೆ, ಕಾರ್ಪೊರೇಟ್ ಹಿತ ಕಾಯುವ ನಿರ್ಲಜ್ಜ ವರಸೆ ಮತ್ತು ರೈತರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಹಿತ ಬಲಿ ಕೊಟ್ಟು ತಮ್ಮ ಆಪ್ತ ವಲಯ, ಸ್ವಹಿತಾಸಕ್ತ ಗುಂಪುಗಳ ಹಿತ ಕಾಯುವ ವರಸೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚರ್ಚೆಯ ವಿಷಯವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ, ಇತ್ತೀಚಿನ ದಿನಗಳಲ್ಲಿ ಈ ಚಳವಳಿ, ಕೇವಲ ಮೂರು ಕಾಯ್ದೆಗಳ ಅನುಕೂಲ- ಅನಾನುಕೂಲದ ಚರ್ಚೆಯಾಗಿ, ವಾಗ್ವಾದವಾಗಿ ಮಾತ್ರವಲ್ಲದೆ, ಒಟ್ಟಾರೆ ದೇಶದ ಜನಸಾಮಾನ್ಯರು ವರ್ಸಸ್ ಪ್ರಭಾವಿ ಉದ್ಯಮಿಗಳ ನಡುವೆ ಸರ್ಕಾರ, ಆಡಳಿತ ವ್ಯವಸ್ಥೆಯ ಅಂತಿಮ ಆಯ್ಕೆ ಯಾರು ಎಂಬ ಕುರಿತ ವಾಗ್ವಾದವಾಗಿ ವಿಸ್ತರಿಸಿದೆ.

ಅಷ್ಟರಮಟ್ಟಿಗೆ ಪಂಜಾಬ್ ಮತ್ತು ಹರ್ಯಾಣದ ರೈತರಿಂದ ಆರಂಭಗೊಂಡ, ದೇಶದ ಐತಿಹಾಸಿಕ ಈ ರೈತ ಚಳವಳಿ, ಇದೀಗ ಭಾರತ ಮತ್ತು ಇಂಡಿಯಾದ ನಡುವಿನ ಸಂಘರ್ಷವಾಗಿ, ಬಡವರು ಮತ್ತು ಬಲ್ಲಿದರ ಹಿತಾಸಕ್ತಿ ಸಂಘರ್ಷವಾಗಿ ಬದಲಾಗಿದೆ. ಹಾಗಾಗಿ ಆಳುವ ಮಂದಿ ನಡುಬೀದಿಯಲ್ಲಿ ಬೆತ್ತಲಾಗತೊಡಗಿದ್ದಾರೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com