ಈ ಸೌಭಾಗ್ಯಕ್ಕೆ ನಮಗೆ ಪರಿಷತ್ ಎಂಬ ಮತ್ತೊಂದು ಸದನ ಬೇಕೆ?

ತೀರಾ ರಾಜ್ಯದ ಜನತೆಯೇ ತಲೆತಗ್ಗಿಸುವಂತಹ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಷತ್ ಎಂಬ ಮತ್ತೊಂದು ಸದನದ ಅಗತ್ಯ ಮತ್ತು ಅನಿವಾರ್ಯತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಜನರ ತೆರಿಗೆ ಹಣದ ಪೋಲು ತಡೆಯುವ ಜೊತೆಗೆ, ರಾಜ್ಯದ ಸಭ್ಯ ಸಂಸ್ಕೃತಿಗೆ ಮಸಿ ಬಳಿವ ಗೂಂಡಾಗಿರಿ ವರ್ತನೆಯ ಕಳಂಕ ಕಳಚಲು ಕೂಡ ಇದು ಸಕಾಲ.
ಈ ಸೌಭಾಗ್ಯಕ್ಕೆ ನಮಗೆ ಪರಿಷತ್ ಎಂಬ ಮತ್ತೊಂದು ಸದನ ಬೇಕೆ?

ವಿಧಾನ ಪರಿಷತ್ ಎಂದರೆ ತೀರಾ ಇತ್ತೀಚಿನವರೆಗೆ ಅದು ಬುದ್ಧಿಜೀವಿಗಳ ಸದನ, ಮೇಲ್ಮನೆ ಎಂದೇ ಹೇಳಲಾಗುತ್ತಿತ್ತು. ಪರಿಷತ್ ಸದಸ್ಯರ ಅರ್ಹತೆ ಮತ್ತು ಆಯ್ಕೆಯಿಂದ ಹಿಡಿದು ಅವರ ಸಭಾ ನಡವಳಿಕೆ, ಸದನದ ಕಲಾಪದ ಗಾಂಭೀರ್ಯದವರೆಗೆ ಎಲ್ಲರೂ ಮೇಲ್ಮನೆ ಎಂಬ ಹೆಸರಿಗೆ ತಕ್ಕಂತೆಯೇ ಉನ್ನತ ಮಟ್ಟದಲ್ಲಿರುತ್ತಿದ್ದವು. ದಶಕಗಳಿಂದ ಕಾಯ್ದುಕೊಂಡು ಬಂದಿದ್ದ ಅಂತಹ ಘನತೆ ಮತ್ತು ಹೆಚ್ಚುಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಕುಸಿಯತೊಡಗಿದೆ ಎಂಬ ಮಾತುಗಳು ಸಾಮಾನ್ಯವಾಗಿದ್ದವು. ಆದರೆ, ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಇಡೀ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹಿಂದೆಂದೂ ಕಂಡುಕೇಳರಿಯದ ಮಟ್ಟಿಗೆ ಮೇಲ್ಮನೆಯ ಘನತೆಯನ್ನು ಮಣ್ಣುಪಾಲುಮಾಡಿದೆ.

ಗೋ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ಮಂಡನೆ ಮಾಡಿ, ಅವರನ್ನು ಇಳಿಸಿ, ಅವರ ಸ್ಥಾನದಲ್ಲಿ ತಮ್ಮ ಪಕ್ಷದವರನ್ನೇ ಕೂರಿಸಿ, ಅವರ ಮೂಲಕ ವಿವಾದಿತ ಮಸೂದೆಯನ್ನು ಮಂಡಿಸಿ, ಅನುಮೋದನೆ ಪಡೆಯುವ ತಂತ್ರ ಹೆಣೆದಿತ್ತು. ಜೆಡಿಎಸ್ ಕೂಡ ಬಿಜೆಪಿಯ ಆ ತಂತ್ರಕ್ಕೆ ಕೈಜೋಡಿಸಿತ್ತು. ಆ ತಂತ್ರಗಾರಿಕೆಯ ಭಾಗವಾಗಿಯೇ ವಿಧಾನಪರಿಷತ್ ವಿಶೇಷ ಅಧಿವೇಶನ ಕರೆಯಲಾಗಿತ್ತು. ಕಾಂಗ್ರೆಸ್ ಕೂಡ ಈ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು, ಸಭಾಪತಿ ಸ್ಥಾನವನ್ನು ಉಳಿಸಿಕೊಳ್ಳಬೇಕು ಮತ್ತು ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಪರಿಷತ್ ಅನುಮೋದನೆ ಪಡೆಯದಂತೆ ನೋಡಿಕೊಳ್ಳಬೇಕು ಎಂದು ಸಿದ್ಧತೆ ಮಾಡಿಕೊಂಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಆದರೆ, ಮಂಗಳವಾರ ಬೆಳಗ್ಗ ಸದನಕ್ಕೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆಗಮಿಸುವ ಮುನ್ನವೇ ಬಿಜೆಪಿ ಸದನದ ನಿಯಮ, ಘನತೆಯನ್ನು ಗಾಳಿಗೆ ತೂರಿ ಉಪ ಸಭಾಪತಿ ಜೆಡಿಎಸ್ ನ ಎಸ್ ಎಲ್ ಧರ್ಮೇಗೌಡರನ್ನು ಸಭಾಪತಿಯ ಪೀಠದಲ್ಲಿ ಕೂರಿಸಿತು. ಅದನ್ನು ಕಂಡು ಕೆರಳಿದ ಕಾಂಗ್ರೆಸ್ ಸದಸ್ಯರು, ಸಭಾಪತಿಗಳು ಇರುವಾಗ ಧರ್ಮೇಗೌಡರು ಆ ಸ್ಥಾನದಲ್ಲಿ ಕೂರುವಂತಿಲ್ಲ ಎಂದು ಆಕ್ಷೇಪವೆತ್ತಿ ಪೀಠದ ಮುಂದೆ ಹೋಗಿ ವಾಗ್ವಾದ ನಡೆಸಿದರು. ಆ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಧರ್ಮೇಗೌಡರ ಪರ ಕಾಂಗ್ರೆಸ್ ಸದಸ್ಯರ ಜೊತೆ ವಾಗ್ವಾದಕ್ಕಿಳಿದರು. ಆ ಬಳಿಕ ನಡೆದದ್ದು ಎಲ್ಲವೂ ದೇಶದ ಪ್ರಜಾತಂತ್ರದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಎಂದೆಂದಿಗೂ ಉಳಿಯುವಂತಹ ಹೇಯ ನಡವಳಿಕೆ.

ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಧರ್ಮೇಗೌಡರನ್ನು ಅಕ್ಷರಶಃ ದರದರನೇ ಎಳೆದು ಹಾಕಲಾಯಿತು, ಕಾಂಗ್ರೆಸ್ ಸದಸ್ಯ ಚಂದ್ರಶೇಖರ ಪಾಟೀಲರನ್ನು ಎಳೆದಾಡುತ್ತಲೇ ಸಭಾಪತಿ ಪೀಠದಲ್ಲಿ ಕೂರಿಸಲಾಯಿತು. ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಾರಾಮಾರಿಗೆ, ಅವಾಚ್ಯ ನಿಂದನೆ, ಅರಚಾಟ, ರಂಪಾಟಕ್ಕೆ ಸದನ ಮೂಕಸಾಕ್ಷಿಯಾಯಿತು. ಪೀಠವನ್ನೇ ಕಿತ್ತೆಸೆಯುವ, ಬಾಗಿಲು ಒದ್ದು ಮುರಿಯುವ, ಸಭಾಪತಿ ಪೀಠಕ್ಕೆ ಬರದಂತೆ ಬಾಗಿಲು ಹಾಕಿ ತಡೆಯುವ ನಾಚಿಕೆಗೇಡಿನ ಕೃತ್ಯಗಳು ನಡೆದವು. ಅಂತಿಮವಾಗಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕೂಡ ಮಾರ್ಷಲ್ ಗಳ ಬಿಗಿ ಭದ್ರತೆಯಲ್ಲಿ ಪೀಠಕ್ಕೆ ಬಂದು, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ, ಇನ್ನಷ್ಟು ಮುಜುಗರದಿಂದ, ಹೇಯ ನಡವಳಿಕೆಯಿಂದ ಮೇಲ್ಮನೆಯನ್ನು ಪಾರುಮಾಡಿದರು.

ಈ ಸೌಭಾಗ್ಯಕ್ಕೆ ನಮಗೆ ಪರಿಷತ್ ಎಂಬ ಮತ್ತೊಂದು ಸದನ ಬೇಕೆ?
ವಿಧಾನ ಪರಿಷತ್‌ನಲ್ಲಿ ನಡೆದ ಗೂಂಡಾಗಿರಿ ಪ್ರಜಾಪ್ರಭುತ್ವದ ಕಗ್ಗೊಲೆ - ಸಿದ್ದರಾಮಯ್ಯ

ಸಂಸದೀಯ ಪಟುಗಳಾದ ಆಯನೂರು ಮಂಜುನಾಥ್, ಸಚಿವ ಜೆ ಮಾಧುಸ್ವಾಮಿ, ಎಂ ನಾರಾಯಣಸ್ವಾಮಿ, ಬಿ ಕೆ ಹರಿಪ್ರಸಾದ್, ಅರುಣ್ ಶಹಾಪೂರರಂತಹ ಹಿರಿಯರ ಸೇರಿದಂತೆ ಪಕ್ಷಾತೀತವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರುಗಳೆಲ್ಲ ಬಹುತೇಕ ಸದನ ಘನತೆಯನ್ನೇ ಮರೆತು ನಡೆದುಕೊಂಡರು. ಇನ್ನು ಬಸವರಾಜ ಹೊರಟ್ಟಿಯವರಂಥ ಹಿರಿಯರು ಇಂತಹ ಘಟನೆಗಳಿಗೆ ಮೂಕಸಾಕ್ಷಿಗಳಾದರು.

ಪರಿಷತ್ತಿನ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ತಾರಕಕ್ಕೇರಿದೆ. ಸದನದ ಘಟನೆಗಳಿಗೆ ಕಾಂಗ್ರೆಸ್ ಕಾರಣವೆಂದು ಆರೋಪಿಸಿ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿ ಕಾಂಗ್ರೆಸ್ ಸದಸ್ಯರನ್ನು ವಜಾಗೊಳಿಸುವಂತೆ ಮನವಿ ಮಾಡಿದೆ. ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಬಹಿರಂಗ ಹೇಳಿಕೆ, ಪ್ರತಿಹೇಳಿಕೆಗಳ ಮೂಲಕ ಸದನದ ಮರ್ಯಾದೆ ಕಳೆದ ಕೃತ್ಯಕ್ಕೆ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ಮುಳುಗಿದ್ದಾರೆ. ಈ ನಡುವೆ ಹಲವು ಹಿರಿಯ ರಾಜಕಾರಣಿಗಳು, ಮುತ್ಸದ್ಧಿ ನಾಯಕರು ಪರಿಷತ್ ಬೆಳವಣಿಗೆಗಳ ಬಗ್ಗೆ ಖೇದ ವ್ಯಕ್ತಪಡಿಸಿದ್ದು, ಇದೊಂದು ರಾಜ್ಯದ ಸಂಸದೀಯ ಪರಂಪರೆಗೇ ಮಸಿ ಬಳಿಯುವ ಕೃತ್ಯ ಎಂದಿದ್ದಾರೆ.

ಗಮನಾರ್ಹ ಸಂಗತಿ ಎಂದರೆ; ಈ ಹಿಂದೆ ಕೂಡ ಬಿಜೆಪಿ ಅಧಿಕಾರದಲ್ಲಿದ್ದಾಗ ವಿಧಾನ ಪರಿಷತ್ ರಣರಂಗವಾದ ಘಟನೆ ನಡೆದಿತ್ತು. ಕೆಲವು ವಿಧೇಯಕಗಳ ಮಂಡನೆ ವೇಳೆಯೇ ಆಗಲೂ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು., ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಪರಿಷತ್ ಪ್ರವೇಶಿಸದಂತೆ ಮಾರ್ಷಲ್ಗಳ ಮೂಲಕ ಬಲಪ್ರಯೋಗವನ್ನೂ ಮಾಡಲಾಗಿತ್ತು.

ಇದೀಗ ಮತ್ತೆ ಬಿಜೆಪಿಯ ಕೋಮು ಹಿತಾಸಕ್ತಿಯ ಮಸೂದೆಯೊಂದರ ವಿಷಯದಲ್ಲಿಯೇ ಪರಿಷತ್ ರಣರಂಗವಾಗಿದೆ. ಹಾಗೆ ನೋಡಿದರೆ, ವಿವಾದಾತ್ಮಕ ಗೋ ಹತ್ಯೆ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಬಿಜೆಪಿ ಇಷ್ಟು ಧಾವಂತದಲ್ಲಿ ಮಂಡಿಸಿ ಪರಿಷತ್ ಅನುಮೋದನೆಗೆ ಮುಂದಾಗಿರುವುದು ಏಕೆ? ಮತ್ತು ಆ ವಿಧೇಯಕ ಮಂಡನೆಗೆ ಅವಕಾಶ ನಿರಾಕರಿಸಿದ ಕಾರಣಕ್ಕೆ ಸಭಾಪತಿಯ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು ಸರಿಯೇ ಎಂಬ ಪ್ರಶ್ನೆ ಕೂಡ ಇದೆ. ಜೊತೆಗೆ ಅದೆಲ್ಲದರ ಹೊರತಾಗಿಯೂ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ, ಸಭಾಧ್ಯಕ್ಷರಿಗೆ ಸದಸ್ಯರ ಬೆಂಬಲವಿಲ್ಲ ಎಂಬುದು ಸಾಬೀತಾಗುವ ಮೊದಲೇ ವಿಶೇಷ ಅಧಿವೇಶನ ಕರೆದು, ಆ ಕಲಾಪಕ್ಕೆ ಸಭಾಪತಿ ಹಾಜರಾಗುವ ಮೊದಲೇ ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿ, ವಿಧೇಯಕ ಮಂಡಿಸುವ ಧಾವಂತ ಯಾಕೆ? ಮತಬ್ಯಾಂಕ್ ಮೇಲೆ ಕಣ್ಣಿಟ್ಟು, ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಅವಸರದಲ್ಲಿ ಅನುಮೋದನೆ ಪಡೆಯಲು ಬಿಜೆಪಿ ನಡೆಸಿದ ಈ ನಡವಳಿಕೆ ಪರಿಷತ್ತಿನ ಘನತೆಗೆ ಮಸಿಬಳಿಯಲಿಲ್ಲವೆ? ಎಂಬ ಪ್ರಶ್ನೆಗಳೂ ಎದ್ದಿವೆ.

ಅದೇ ಹೊತ್ತಿಗೆ ಕಾಂಗ್ರೆಸ್ ಸದಸ್ಯರು ಉಪಸಭಾಪತಿಯನ್ನು ಪೀಠದಿಂದ ಕೆಳಗಿಳಿಸಲು ನಡೆಸಿದ ಪ್ರಯತ್ನಗಳು ಕೂಡ ಸದನಕ್ಕಾಗಲೀ, ರಾಜಕಾರಣಕ್ಕಾಗಲೀ ಘನತೆ ತರುವಂತವಲ್ಲ ಎಂಬುದು ನಿರ್ವಿವಾದ. ರಾಜ್ಯದ ಜನತೆ ತಮ್ಮ ನಡವಳಿಕೆ ಗಮನಿಸುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಅತ್ಯಂತ ಘನತೆಯ ಸದನದಲ್ಲಿ ತಾವು ಹೇಗೆ ನಡೆದುಕೊಳ್ಳುತ್ತಿದ್ದೇವೆ ಎಂಬುದು ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿಯಾಗಲಿದೆ ಎಂಬ ಕನಿಷ್ಟ ವಿವೇಚನೆಯನ್ನೂ ಬಿಟ್ಟು ಸದಸ್ಯರು ವರ್ತಿಸಿರುವ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಮತ್ತು ವಾಕರಿಕೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಹಾಗೆ ನೋಡಿದರೆ; ಪರಿಷತ್ ಆಗಲೀ, ವಿಧಾನಸಭೆಯಾಗಲೀ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ನಡವಳಿಕೆಗಳು ಅನಿರೀಕ್ಷಿತವೇನೂ ಅಲ್ಲ. ಏಕೆಂದರೆ; ರಾಜಕಾರಣದಲ್ಲಿ ವ್ಯಕ್ತಿಯ ಚಾರಿತ್ರ್ಯ, ನಾಯಕತ್ವ, ಜನಪರ ಕಾಳಜಿ, ಹೋರಾಟದ ಹಿನ್ನೆಲೆ, ಸಭ್ಯತೆಗಳ ಬದಲಿಗೆ, ಹಣ ಬಲ, ತೋಳ್ಬಲ, ವಸೂಲಿಬಾಜಿ, ಪ್ರಭಾವಗಳೇ ಆಯ್ಕೆಯ ಮಾನದಂಡಗಳಾಗಿರುವಾಗ, ಬೇವು ಬಿತ್ತಿ ಮಾವು ಕೊಯ್ಯಲಾದೀತೆ? ಎಂಬುದು ರಾಜ್ಯದ ಮತದಾರ ಮತ್ತು ರಾಜಕೀಯ ಪಕ್ಷಗಳು ಕೇಳಿಕೊಳ್ಳಬೇಕಾದ ಪ್ರಶ್ನೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿಧಾನಪರಿಷತ್ ಆಯ್ಕೆಯ ಮಾನದಂಡಗಳೇ ಬದಲಾಗಿಬಿಟ್ಟಿವೆ. ಈ ಮೊದಲು ಸಾಹಿತಿ, ಬುದ್ಧಿಜೀವಿ, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ಮುಂತಾದ ಸಮಾಜದ ಕೆನೆಪದರಕ್ಕೆ ಆ ಸದನ ಪ್ರಾತಿನಿಧ್ಯ ಮೀಸಲಾಗಿತ್ತು. ಹಾಗಾಗಿಯೇ ಅದು ಬುದ್ಧಿವಂತರ ಸದನ ಎಂದಾಗಿತ್ತು. ಅಲ್ಲಿನ ಚರ್ಚೆಗಳು, ಕಲಾಪಗಳು ವಿಧಾನಸಭೆಯ ಚರ್ಚೆಗಳಿಗೆ ಕೈದೀವಿಗೆಯಂತಿರುತ್ತಿದ್ದವು. ವಿಧಾನಸಭೆಯಲ್ಲಿ ಪಕ್ಷ ಮತ್ತು ಯಾವುದೋ ಲಾಭಿಯ ಪರ ಹಿತಾಸಕ್ತಿಯ ಕಾರಣಕ್ಕೆ ಮಸೂದೆ, ವಿಧೇಯಕಗಳು ಅನುಮೋದನೆಗೊಂಡರೂ ಪರಿಷತ್ತಿನಲ್ಲಿ ಅವುಗಳ ಸಾಧಕಬಾಧಕಗಳ ವಿಸ್ತೃತ ಮತ್ತು ಪ್ರಾಜ್ಞ ಚರ್ಚೆ ನಡೆದು ಜನರ ಹಿತಕ್ಕೆ ಅನುಗುಣವಾಗಿ ಅನುಮೋದನೆ, ನಿರಾಕರಣೆಗಳು ತೀರ್ಮಾನವಾಗುತ್ತಿದ್ದ ದಿನಗಳಿದ್ದವು.

ಆದರೆ, ಈಗ ಅಕ್ರಮ ಗಣಿ, ರಿಯಲ್ ಎಸ್ಟೇಟ್, ಆಭರಣ, ಗೂಂಡಾಗಿರಿ ಸೇರಿದಂತೆ ಹಲವು ಬಗೆಯ ವಂಚನೆ, ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದವರಿಗೇ ಪಕ್ಷಗಳು ಕರೆದು ಮೇಲ್ಮನೆಗೆ ಆಯ್ಕೆಮಾಡುವ ಪರಿಸ್ಥಿತಿ ಇದೆ. ಹಾಗಾಗಿ, ಸಹಜವಾಗೇ ಸದಸ್ಯರಂತೆಯೇ ಸದನವೂ ಬದಲಾಗಿದೆ. ಆ ಹಿನ್ನೆಲೆಯಲ್ಲಿಯೇ ಕಳೆದ ಕೆಲವು ವರ್ಷಗಳಿಂದ ನಿಜವಾಗಿಯೂ ರಾಜ್ಯಕ್ಕೆ ಪರಿಷತ್ ಎಂಬ ಮತ್ತೊಂದು ಸದನದ ಅಗತ್ಯವಿದೆಯೇ ಎಂಬ ಚರ್ಚೆ ಶುರುವಾಗಿದೆ. ದೇಶದಲ್ಲಿ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಪರಿಷತ್ ವ್ಯವಸ್ಥೆ ಇಲ್ಲದೆಯೂ ಶಾಸಕಾಂಗದ ವ್ಯವಹಾರಗಳು ಸುಸೂತ್ರವಾಗಿ ನಡೆಯುತ್ತಿವೆ. ಕೇರಳವಂತೂ ದೇಶದಲ್ಲಿಯೇ ಅತ್ಯಂತ ಉತ್ತಮವಾದ ಸಂಸದೀಯ ವ್ಯವಸ್ಥೆ, ಪ್ರಜಾಸತ್ತಾತ್ಮಕ ಆಡಳಿತ ಮತ್ತು ಜನಪರ ಕಾರ್ಯಕ್ರಮಗಳಿಂದಾಗಿ ಹೆಸರಾಗಿದೆ. ಹಾಗಿರುವಾಗ, ಕರ್ನಾಟಕದಲ್ಲಿ ಇಂತಹ ಅಪಸಹ್ಯಗಳನ್ನು ನೋಡಲು ಈ ಸದನ ಎಂಬ ಬಿಳಿಯಾನೆ ಬೇಕೆ ಎಂಬ ಮಾತು ಮತ್ತೊಮ್ಮೆ ಚರ್ಚೆಗೆ ಬಂದಿದೆ.

ತೀರಾ ರಾಜ್ಯದ ಜನತೆಯೇ ತಲೆತಗ್ಗಿಸುವಂತಹ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಷತ್ ಎಂಬ ಮತ್ತೊಂದು ಸದನದ ಅಗತ್ಯ ಮತ್ತು ಅನಿವಾರ್ಯತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಜನರ ತೆರಿಗೆ ಹಣದ ಪೋಲು ತಡೆಯುವ ಜೊತೆಗೆ, ರಾಜ್ಯದ ಸಭ್ಯ ಸಂಸ್ಕೃತಿಗೆ ಮಸಿ ಬಳಿವ ಗೂಂಡಾಗಿರಿ ವರ್ತನೆಯ ಕಳಂಕ ಕಳಚಲು ಕೂಡ ಇದು ಸಕಾಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com