ಪಟ್ಟು ಸಡಿಲಸದ ರೈತರು, ಹಠ ಬಿಡದ ಸರ್ಕಾರ: ಕೃಷಿ ಕಾಯ್ದೆಗಳ‌ ಹಿಂಪಡೆಯುವ ಬಗ್ಗೆ ಮುಂದೇನು?

ರಿಹಾರವಿರದ ಸಮಸ್ಯೆ ಇರಲಾರದು‌‌. ಪರಿಹಾರ ಹುಡುಕುವ ಕೆಲಸ ಸರ್ಕಾರದ್ದು. ಪ್ರತಿಷ್ಠೆ ಬಿಟ್ಟರೆ ಪರಿಹಾರ ಸಿಗುವುದು ಖರೆ. ಆದರೆ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಷ್ಠೆ ಬಿಡುತ್ತಿಲ್ಲ. ಇನ್ನೊಂದೆಡೆ ರೈತರು ಕೂಡ ಪಟ್ಟು ಬಿಡುತ್ತಿಲ್ಲ. ಸರಿ, ಹಾಗಾದರೆ ಮುಂದೇನು?
ಪಟ್ಟು ಸಡಿಲಸದ ರೈತರು, ಹಠ ಬಿಡದ ಸರ್ಕಾರ: ಕೃಷಿ ಕಾಯ್ದೆಗಳ‌ ಹಿಂಪಡೆಯುವ ಬಗ್ಗೆ ಮುಂದೇನು?

ಇತ್ತೀಚಿಗೆ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದು ಅವುಗಳನ್ನು ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಹಾಗೂ ರೈತ ಸಂಘಟನೆಗಳ ಜೊತೆ ಈಗಾಗಲೇ 5 ಸಭೆಗಳಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತ್ಯೇಕವಾಗಿ 'ಅನೌಪಚಾರಿಕ'ವಾದ ಸಭೆಯೊಂದನ್ನು ನಡೆಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಮತ್ತು ಅನ್ನದಾತರ ನಡುವೆ ಪರಸ್ಪರ ಸಹಮತ ಮೂಡಿಲ್ಲ. ಮಾತುಕತೆಗಳು ಮುರಿದುಬಿದ್ದ ಹಿನ್ನೆಲೆಯಲ್ಲಿ ಈಗ ಎರಡೂ ಪಾಳೆಯದವರು ತಮ್ಮ ತಮ್ಮ ನಿಲುವನ್ನು ಇನ್ನಷ್ಟು ಗಟ್ಟಿಗಳಿಸಿಕೊಂಡಿದ್ದಾರೆ.

ಅಂದರೆ, ರೈತರು ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರೆಸುವ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಷಯವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, 'ರೈತರ ಹೋರಾಟಕ್ಕೆ ಮಣಿಯಲೇಬಾರದೆಂದು' ನಿರ್ಧರಿಸಿದೆ. ಪರಿಣಾಮವಾಗಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಬಗ್ಗೆ ಉಂಟಾಗಿದ್ದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ರೈತರು ದೆಹಲಿಯ ಸಿಂಘು ಗಡಿಯಲ್ಲಿ ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಡಿಸೆಂಬರ್ 8ರಂದು 'ಭಾರತ್ ಬಂದ್'ಗೂ ಕರೆ ಕೊಟ್ಟಿದ್ದರು. ಈ ನಡುವೆ ರೈತರಿಗೆ ಕೇಂದ್ರ ಸರ್ಕಾರಕ್ಕೆ ತಮ್ಮ ಕಷ್ಟ ಅರಿವಾಗಬಹುದು ಎಂಬ ನಿರೀಕ್ಷೆ ಇತ್ತು.‌ ಅದೇ ಆಶಾಭಾವದೊಂದಿಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದರು. ಸದ್ಯ ಅಂತಹ ಆಶಾಭಾವ ಉಳಿದಿಲ್ಲ. ಸಮಾಲೋಚನೆ, ಸಂವಾದಗಳಿಂದ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ಹುದುಗಿಹೋಗಿರುವುದರಿಂದ ರೈತರು ಪ್ರತಿಭಟನೆ ಮೂಲಕವೇ ನ್ಯಾಯ ಕಂಡುಕೊಳ್ಳಬೇಕೆಂದು ನಿರ್ಧರಿಸಿದ್ದಾರೆ.

ಮೊದಲಿಗೆ ಇಂದು (ಡಿಸೆಂಬರ್ 12) ದೇಶದ ಎಲ್ಲಾ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿದ್ದಾರೆ. ಈವರೆಗೆ ಪಂಜಾಬ್ ಮತ್ತು ಹರಿಯಾಣದಿಂದ ದೆಹಲಿಗೆ ಬರುವ ಹೆದ್ದಾರಿಯನ್ನು ಮಾತ್ರ ಬಂದ್ ಮಾಡಲಾಗಿತ್ತು. ಈಗ ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ದೆಹಲಿ ತಲುಪಬಹುದಾದ ದಾರಿಗಳನ್ನೂ ಮುಚ್ಚಲಾಗಿದೆ. ಜೊತೆಗೆ ಬಿಜೆಪಿ ನಾಯಕರ ಮನೆ ಎದುರು ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ.

ಬಳಿಕ ಡಿಸೆಂಬರ್ 14ರಂದು ದೇಶದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಹಾಗೂ ಬಿಜೆಪಿ ನಾಯಕರಿಗೆ ಘೆರಾವ್ ಹಾಕಲು ನಿಶ್ಚಯಿಸಿದ್ದಾರೆ. ಜೊತೆಗೆ ದೇಶದಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಪಡಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಒಟ್ಟಿನಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದು ರೈತರ ಬಲವಾದ ನಿಲುವಾಗಿದೆ.

ಇದಲ್ಲದೆ ಡಿಎಂಕೆ ಸಂಸದ ತಿರುಚಿ ಶಿವ ಮತ್ತು ಆರ್‌ಜೆಡಿ ಸಂಸದ ಮನೋಜ್ ಝಾ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಭಾರತೀಯ ಕಿಸಾನ್ ಯೂನಿಯನ್ ಪರವಾಗಿ ಭಾನು ಪ್ರತಾಪ್ ಸಿಂಗ್ ಕೂಡ ಅರ್ಜಿ ಸಲ್ಲಿಸಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಕಾನೂನು ಹೋರಾಟ ಕೂಡ ಆರಂಭವಾಗಿದೆ.

ಇನ್ನೊಂದೆಡೆ ಮಾತುಕತೆಯ ಮೂಲಕ ಮನವೊಲಿಸಲಾಗದ ಕೇಂದ್ರ ಸರ್ಕಾರ ಪರೋಕ್ಷವಾಗಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ರೈತರ ವಿರುದ್ಧವೇ ಸಂಚು ರೂಪಿಸಿದೆ. ಈಗಾಗಲೇ ಗೋದಿ ಮೀಡಿಯಾ (ಸಾಕು ಮಾಧ್ಯಮಗಳು) ಮೂಲಕ 'ಪ್ರತಿಭಟನಾನಿರತ ರೈತರು ಖಾಲಿಸ್ತಾನಿಗಳು', 'ಇದು ರಾಜಕೀಯ ಪ್ರೇರಿತ ಹೋರಾಟ', 'ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಬೃಹತ್ ಹೋರಾಟಕ್ಕೆ ವಿದೇಶಗಳಿಂದ ಹಣ ಹರಿದುಬರುತ್ತಿದೆ' ಎಂದು ಬಿಂಬಿಸುತ್ತಿರುವ ಬಿಜೆಪಿ ಈಗ 'ವಿವಾದಾತ್ಮಕ ಕೃಷಿ ಕಾನೂನುಗಳು ರೈತರ ಪರವಾಗಿವೆ' ಎಂದು ದೇಶಾದ್ಯಂತ ಅಬ್ಬರದ ಪ್ರಚಾರ ನಡೆಸಲು ಮುಂದಾಗಿದೆ.

ಇದನ್ನು ಕೂಡ ಅಭಿಯಾನದ ರೀತಿಯಲ್ಲಿ ನಡೆಸುತ್ತಿರುವ ಬಿಜೆಪಿ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳು ಸೇರಿದಂತೆ ಒಟ್ಟು 700 ಕಡೆ ಪತ್ರಿಕಾಗೋಷ್ಠಿಗಳನ್ನು ನಡೆಸಲು ನಿಶ್ಚಯಿಸಿದೆ. ಇದಲ್ಲದೆ 700 ಕಡೆ 'ಚೌಪಾಲ' (ಒಂದು ರೀತಿಯ ಚರ್ಚೆ, ವಿಚಾರ ಸಂಕಿರಣ, ಸಂವಾದ)ಗಳನ್ನು ನಡೆಸುವುದಕ್ಕೂ ನಿರ್ಧರಿಸಿದೆ. ಈ ಪತ್ರಿಕಾಗೋಷ್ಠಿ ಅಥವಾ ಚೌಪಾಲಗಳಲ್ಲಿ 'ವಿವಾದಾತ್ಮಕ ಕೃಷಿ ಕಾನೂನುಗಳು ರೈತರ ಪರವಾಗಿವೆ' ಎಂದಷ್ಟೇ ಸಮರ್ಥಿಸಿಕೊಳ್ಳುವುದಿಲ್ಲ. ಬದಲಿಗೆ 'ಈ ರೈತರ ಹೋರಾಟ ರಾಜಕೀಯ ಪ್ರೇರಿತವಾದುದು', 'ವಿದೇಶಗಳ ಕುಮ್ಮಕ್ಕಿನಿಂದ ನಡೆಯುತ್ತಿರುವುದು', ಅದರಲ್ಲೂ 'ಚೀನಾ ದೇಶ ತೆರೆಯ ಹಿಂದಿದೆ' ಎಂದು ಬಿಂಬಿಸಲು ಯೋಜಿಸಲಾಗಿದೆ. ಈ ಮೂಲಕ ಬಿಜೆಪಿ ಅಥಾರ್ತ್ ಕೇಂದ್ರ ಸರ್ಕಾರ 'ಯಾವ ಕಾರಣಕ್ಕೂ ರೈತರ ಹೋರಾಟಕ್ಕೆ ಕಿಮ್ಮತ್ತು ಕೊಡುವುದಿಲ್ಲ, ತಾನು ತಂದಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವುದಿಲ್ಲ' ಎಂದು ಸ್ಪಷ್ಟವಾದ ಸಂದೇಶ ರವಾನಿಸಿದೆ.

ರೈತರು, ಕಾರ್ಮಿಕರು ಅಥವಾ ಬೇರೊಂದು ವರ್ಗ ತಮಗೆ ಅನ್ಯಾಯವಾದಾಗ ಇಂಥ ಹೋರಾಟಗಳನ್ನು ಮಾಡುವುದು, ಪಟ್ಟು ಹಿಡಿದು ಕೂರುವುದು ಸರ್ವೆಸಾಮಾನ್ಯ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಕೂಡ ಸಾರ್ವಜನಿಕರ ಹಕ್ಕು. ರೈತರಿರಲಿ ಮತ್ಯಾವುದೇ ವರ್ಗದವರಿರಲಿ ಪ್ರತಿಭಟನೆಗೆ ಕುಳಿತಾಗ, ಅದೂ ಶಾಂತಯುತ ಪ್ರತಿಭಟನೆ ನಡೆಸುತ್ತಿದ್ದಾಗ ಆಳುವ ಸರ್ಕಾರ ಹಠ ಹಿಡಿಯಬಾರದು. ಪರಿಹಾರವಿರದ ಸಮಸ್ಯೆ ಇರಲಾರದು‌‌. ಪರಿಹಾರ ಹುಡುಕುವ ಕೆಲಸ ಸರ್ಕಾರದ್ದು. ಪ್ರತಿಷ್ಠೆ ಬಿಟ್ಟರೆ ಪರಿಹಾರ ಸಿಗುವುದು ಖರೆ. ಆದರೆ ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಷ್ಠೆ ಬಿಡುತ್ತಿಲ್ಲ. ಇನ್ನೊಂದೆಡೆ ರೈತರು ಕೂಡ ಪಟ್ಟು ಬಿಡುತ್ತಿಲ್ಲ. ಸರಿ, ಹಾಗಾದರೆ ಮುಂದೇನು?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com