ʼಪ್ರಜಾಪ್ರಭುತ್ವದ ತಾಯಿʼಯಿಂದ ರೈತರ ಕುರಿತು ಮೌನವೇಕೆ?

ದೇಶದಲ್ಲಿ ಹೆಚ್ಚುತ್ತಿರುವ ಮತದಾನದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಭಾರತವನ್ನು ʼಪ್ರಜಾಪ್ರಭುತ್ವದ ತಾಯಿʼ ಎಂದು ಕರೆದಿರುವ ಪ್ರಧಾನಿ ಮೋದಿಯವರು, ಆ ತಾಯಿಯು ತನ್ನ ಮಕ್ಕಳಾದ ರೈತರ ಪ್ರತಿಭಟನೆಯ ಕುರಿತು ಏಕೆ ಸೊಲ್ಲೆತ್ತುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಅನಿವಾರ್ಯತೆಯಿದೆ.
ʼಪ್ರಜಾಪ್ರಭುತ್ವದ ತಾಯಿʼಯಿಂದ ರೈತರ ಕುರಿತು ಮೌನವೇಕೆ?

ಗುರುವಾರ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತವನ್ನು ʼಪ್ರಜಾಪ್ರಭುತ್ವದ ತಾಯಿʼ ಎಂದು ಹೊಗಳಿದ್ದಾರೆ. ದೇಶದಲ್ಲಿ ಏರುತ್ತಿರುವ ಮತದಾನದ ಪ್ರಮಾಣ ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಆದರೆ, ಈ ಪ್ರಜಾಪ್ರಭುತ್ವದ ತಾಯಿ, ತನ್ನ ಮಕ್ಕಳಾದ ರೈತರ ಪ್ರತಿಭಟನೆಯ ಕುರಿತು ಏಕೆ ಮೌನವಾಗಿದೆ ಎಂದು ಪ್ರಧಾನಿಯವರು ಹೇಳಲಿಲ್ಲ.

ಇದು ನಿಜಕ್ಕೂ ಆಶ್ಚರ್ಯಕರ. ಏಕೆಂದರೆ, ರೈತರನ್ನು ಭೂ ತಾಯಿಯ ಮಕ್ಕಳು ಎಂದು ಕರೆಯುತ್ತಾರೆ. ಭಾರತಾಂಬೆಯ ಸುಪುತ್ರರು ಎಂದು ಕರೆಯುತ್ತಾರೆ. ಆದರೆ, ಅದೇ ಭಾರತಾಂಬೆಯ ನೆಲವನ್ನು ಆಳುತ್ತಿರುವ, ಸೈನ್ಯದ, ಧರ್ಮದ, ರೈತರ ಹಾಗೂ ನಕಲಿ ಅಭಿವೃದ್ದಿಯ ಹೆಸರಲ್ಲಿ ಗದ್ದುಗೆ ಹಿಡಿದಿರುವ ಪ್ರಭುತ್ವಶಾಹಿ ವರ್ಗದವರಿಗೆ ಬಹಿರಂಗವಾಗಿ ಭೂತಾಯಿಯ ಮಕ್ಕಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಮಾತನಾಡಲು ನಾಲಗೆ ಹೊರಬರುವುದಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಮಾತೆತ್ತದರೆ ಐತಿಹಾಸಿಕ ನಿರ್ಧಾರ ಎಂದು ಬೊಗಳೆ ಬಿಡುವ ಬಿಜೆಪಿ ನಾಯಕರು, ನಿನ್ನೆ ಹೊಸ ಪಾರ್ಲಿಮೆಂಟ್‌ ಭವನಕ್ಕೆ ಅಡಿಗಲ್ಲು ಹಾಕಿ ಮತ್ತದೇ ಮಾತನ್ನು ಪುನರಾವರ್ತಿಸಿದ್ದಾರೆ. “ಇಂದು ಭಾರತದ ಪ್ರಜಾಪ್ರಭುತ್ವದಲ್ಲಿ ಐತಿಹಾಸಿಕ ದಿನ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದರೊಂದಿಗೆ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ ಎಂದು ಕೂಡಾ ಹೇಳಿದ್ದಾರೆ. ಕೇವಲ ಎರಡು ದಿನಗಳ ಹಿಂದೆ ನೀತಿ ಆಯೋಗದ ಅಧ್ಯಕ್ಷರಾಗಿರುವ ಅಮಿತಾಬ್‌ ಕಾಂತ್‌ ಅವರು ʼಭಾರತದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಜಾಪ್ರಭತ್ವವಿದೆ,” ಎಂದು ಹೇಳಿದ್ದಾರೆ.

ಹೀಗೆ ಸರ್ಕಾರದ ಒಂದೊಂದು ವಿಭಾಗಗಳು, ವಿರೋಧಾಭಾಸದ ಹೇಳಿಕೆಗಳನ್ನು ನೀಡಿ ದೇಶದಲ್ಲಿರುವ ಪ್ರಜಾಪ್ರಭುತ್ವವನ್ನು ಲೇವಡಿ ಮಾಡುತ್ತಿದೆಯೇ ಹೊರತು, ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಆಶಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿಲ್ಲ. ಒಂದು ವೇಳೆ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದಲ್ಲಿ, ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳಿಗೆ ಅಪಾರವಾದ ಮೌಲ್ಯವಿದೆ. ಅದನ್ನು ಸರ್ಕಾರ ಅರ್ಥಮಾಡಿಕೊಂಡಿದ್ದಲ್ಲಿ, ಕೊರೆಯುವ ಚಳಿಗೆ ರೈತರ ಮೇಲೆ ಜಲಫಿರಂಗಿಗಳನ್ನು ಪ್ರಯೋಗಿಸುವ ಹೇಯ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲವೇನೋ. ಮಾತ್ರವಲ್ಲದೇ, ದೇಶದಲ್ಲಿ ಪ್ರಜಾಪ್ರಭುತ್ವವೇ ಅಪಾಯದಲ್ಲಿರುವಾಗ ಸರ್ವಾಧಿಕಾರ ದೇಶದ ಬಾಗಿಲು ಬಡಿಯುತ್ತಿರುವಾಗ ಹೊಸ ಪಾರ್ಲಿಮೆಂಟ್‌ ಭವನಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ಸುರಿದು ʼಭವ್ಯ ಭಾರತದ ನಿರ್ಮಾಣʼದ ಹುಸಿ ಭರವಸೆಯನ್ನು ನೀಡುತ್ತಿರಲಿಲ್ಲವೇನೋ.

ಏನೇ ಆದರೂ, ಭಾರತದ ಪ್ರಜಾಪ್ರಭುತ್ವ ಎಲ್ಲಾ ದೇಶಗಳಿಗೂ ಮಾದರಿ ಎಂದು ಇಲ್ಲಿಯವರೆಗೆ ಭಾರತೀಯರು ಹೆಮ್ಮೆಯಿಂದ ಹೇಳಿಕೊಂಡು ಬರುತ್ತಿದ್ದರು. ಆದರೆ, ಯಾವಾಗ ಪ್ರತಿಭಟನೆಯ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯ, ಆಹಾರ ಸ್ವಾತಂತ್ರ್ಯ ಹೀಗೆ ಪ್ರಜಾಪ್ರಭತ್ವ ಹಾಗೂ ಸಂವಿಧಾನದ ಮೂಲ ಆಶಯಗಳನ್ನೇ ದಮನ ಮಾಡುವ ಮೂಲಕ ʼಪ್ರಜಾಪ್ರಭುತ್ವದ ತಾಯಿʼಯ ಮಕ್ಕಳು ರೈತರ ಕುರಿತು ಮೌನ ವಹಿಸಿರುವುದು ನಿಜಕ್ಕೂ ದುರದೃಷ್ಟಕರ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com