ಸಿಂಗಾಪುರ ಸರ್ಕಾರದಿಂದ ಕೃತಕ ಮಾಂಸ ಮಾರಾಟ ಮಾಡಲು ಅನುಮತಿ

ಆಹಾರದ ರಾಜಕೀಯ ಭಾರತದಂತಹ ದೇಶದಲ್ಲಿ ಅಧಿಕಾರ ಗ್ರಹಣಕ್ಕೂ ದಾರಿಯಾಗಿರುವ ಈ ಸನ್ನಿವೇಶದಲ್ಲಿ ಕೃತಕವಾಗಿ ತಯಾರಿಸಲ್ಪಡುವ ಮಾಂಸ, ಸಸ್ಯಾಹಾರಗಳು ಪರಿಹಾರ ಒದಗಿಸುತ್ತಾ? ಅಥವಾ ಆಹಾರವು ಉಳ್ಳವರ ಸೊತ್ತಾಗಿ ಮಾತ್ರ ಉಳಿದುಬಿಡುತ್ತದಾ?
ಸಿಂಗಾಪುರ ಸರ್ಕಾರದಿಂದ ಕೃತಕ ಮಾಂಸ ಮಾರಾಟ ಮಾಡಲು ಅನುಮತಿ

ಸಿಂಗಾಪುರ ಸರ್ಕಾರವು ಅಮೆರಿಕ ಮೂಲದ ಸ್ಟಾರ್ಟ್ ಅಪ್ ಕಂಪೆನಿ 'ಈಟ್ ಜಸ್ಟ್'ಗೆ ಪ್ರಯೋಗಾಲಯದಲ್ಲಿ ಬೆಳೆದ ಕೋಳಿ ಮಾಂಸ ಮಾರಾಟ ಮಾಡಲು ಅನುಮತಿ ನೀಡಿದೆ. ಕಂಪೆನಿ ಹೇಳಿಕೊಳ್ಳುವಂತೆ, 'ಜಸ್ಟ್ ಈಟ್' ಪ್ರಾಣಿ ವಧೆಯಿಲ್ಲದೆ ಪ್ರಯೋಗಾಲಯದಲ್ಲಿ ಮಾಂಸ ಕೃತಕವಾಗಿ ತಯಾರಿಸಿ ಮಾರಾಟ ಮಾಡಲು ಅನುಮತಿ ಪಡೆದ ಪ್ರಂಪಚದ ಮೊದಲ ಕಂಪೆನಿ ಅದು.

ಕಂಪೆನಿಯ ಸಿಇಒ ಜೋಶ್ ಟೆಟ್ರಿಕ್ ಪ್ರಕಾರ ಸಿಂಗಾಪುರದ ರೆಸ್ಟೋರೆಂಟ್‌ಗಳಲ್ಲಿ ಹೀಗೆ ಉತ್ಪತ್ತಿಸಿದ ಮಾಂಸವನ್ನು ಪ್ರೀಮಿಯಂ ಕೋಳಿಯ ದರದಲ್ಲೇ ಮಾರಾಟ ಮಾಡಲಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆರೋಗ್ಯ, ಪ್ರಾಣಿ ಸಂರಕ್ಷಣೆ ಮತ್ತು ಪರಿಸರದ ಬಗೆಗಿನ ಕಾಳಜಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪರ್ಯಾಯ ಮಾಂಸಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪ್ರಾಣಿಗಳ ಸ್ನಾಯುಗಳನ್ನು ಬಳಸಿ ತಯಾರಾಗುವ, ಸ್ವಚ್ಛ ಮಾಂಸ ಎಂದು ಕರೆಸಿಕೊಳ್ಳುತ್ತಿರುವ ಪ್ರಯೋಗಾಲಯದಲ್ಲಿ ತಯಾರಿಸಲ್ಪಡುವ ಮಾಂಸದ ಉತ್ಪಾದನಾ ವೆಚ್ಚ ಅಧಿಕವಾಗಿದೆ.

ಸುಮಾರು 5.7ಮಿಲಿಯನ್ ಜನಸಂಖ್ಯೆ ಇರುವ ಸಿಂಗಾಪುರದ ಒಟ್ಟು ಬೇಡಿಕೆಯಲ್ಲಿ ಶೇಕಡಾ ಹತ್ತರಷ್ಟನ್ನು ಮಾತ್ರ ಕಂಪೆನಿಗೆ ಸದ್ಯಕ್ಕೆ ಪೂರೈಸಲು ಸಾಧ್ಯವಿದೆ. ಸುಧಾರಿತ ತಂತ್ರಜ್ಞಾನ ಬಳಸಿ ಮುಂದಿನ‌ ಒಂದು ದಶಕದಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸಿ ಖರ್ಚನ್ನು ಕಡಿಮೆ ಮಾಡುವ ಯೋಜನೆಗಳಿವೆ ಎನ್ನುತ್ತಾರೆ ಜೋಶ್ ಟೆಟ್ರಿಕ್. ಅಷ್ಟೇ ಅಲ್ಲದೆ ಅಮೆರಿಕ ಆಡಳಿತದಿಂದಲೂ ಅನುಮತಿ ಪಡೆಯುವ ಯೋಜನೆ ತಮ್ಮ ಮುಂದಿದೆ. ಆದರೆ ನಮ್ಮ ಮೊದಲ ಆಯ್ಕೆ ಸಿಂಗಾಪುರವೇ ಆಗಿರುತ್ತದೆ ಎಂದೂ ಹೇಳುತ್ತಾರೆ. ಸಿಂಗಾಪುರದಲ್ಲಿಯೇ ಸಸ್ಯ ಮೂಲವನ್ನು ಉಪಯೋಗಿಸಿ ಮೊಟ್ಟೆ ತಯಾರಿಸುವ ಯೋಜನೆಯೂ ಕಂಪೆನಿಯ ಮುಂದಿದೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು "ಸಿಂಗಾಪುರದ ನಡೆಯನ್ನು‌ ನೋಡಿ ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಇತರ ದೇಶಗಳು ಏನು ಮಾಡಬಹುದು ಎನ್ನುವ ಯೋಚನೆ ನನಗಿದೆ, ಸಿಂಗಾಪುರದ ಬೆಳವಣಿಗೆಯನ್ನು ಮಾದರಿಯಾಗಿಟ್ಟುಕೊಂಡು ಉಳಿದ ದೇಶಗಳೂ ಈ ಬಗ್ಗೆ ಯೋಚಿಸಬಹುದು" ಎಂದಿದ್ದಾರೆ.

ಸಿಂಗಾಪುರದ ಆಹಾರ ಇಲಾಖೆಯು 'ಈಟ್ ಜಸ್ಟ್'ಗೆ ಅನುಮತಿ ನೀಡುವ ಮೊದಲು ಕಂಪೆನಿಯ ಕಾರ್ಯವಿಧಾನ, ಉತ್ಪಾದನಾ ನಿಯಂತ್ರಣ ಮತ್ತು ಸುರಕ್ಷತೆಯ ಪರೀಕ್ಷೆಗಳನ್ನು ಹತ್ತಿರದಿಂದ ಗಮನಿಸಿ, ತೃಪ್ತಿಯಾದ ಮೇಲಷ್ಟೇ ಅನುಮತಿ ನೀಡಲಾಗಿದೆ ಎಂದಿದೆ.

'ಈಟ್ ಜಸ್ಟ್' ಕಂಪೆನಿಯನ್ನು 2011ರಲ್ಲಿ ಹುಟ್ಟುಹಾಕಲಾಗಿದ್ದು ಹಾಂಕಾಂಗ್‌ನ ಬ್ಯುಸಿನೆಸ್ ಲಿಕಾ-ಶಿಂಗ್ ಮತ್ತು ಸಿಂಗಾಪುರದ ಟೆಮಾಸೆಕ್ ಕಂಪೆನಿಯ ಬೆನ್ನಹಿಂದಿದ್ದಾರೆ. ಪ್ರಾರಂಭದಲ್ಲಿ ಕಂಪೆನಿಯು ಸುಮಾರು ಮೂರು ಮಿಲಿಯನ್‌ನಷ್ಟು ಹಣ ಸಂಗ್ರಹ ಮಾಡಿತ್ತು, ಈಗ ಅದು ಸುಮಾರು 1.2 ಬಿಲಿಯನ್ ಬೆಲೆಬಾಳುತ್ತದೆ ಎನ್ನುತ್ತಾರೆ ಟೆಟ್ರಿಕ್. 2021 ಅಂತ್ಯವಾಗುವ ಮೊದಲು ಕಂಪೆನಿಯು ಲಾಭದಾಯಕ ಹಾದಿಯಲ್ಲಿ ಮುಂದುವರಿಯಲಿದೆ ಎನ್ನುವ ದೃಢ ವಿಶ್ವಾಸ ಅವರಿಗಿದೆ.

'ಈಟ್ ಜಸ್ಟ್' ಒಂದೇ ಅಲ್ಲದೆ ಪ್ರಪಂಚಾದ್ಯಂತ ಒಂದು ಡಝನ್‌ಗಿಂತಲೂ ಅಧಿಕ ಕಂಪೆನಿಗಳು ಸಾಂಪ್ರದಾಯಿಕ ಮಾಂಸಕ್ಕೆ ಪರ್ಯಾಯವಾಗಿ ಕೃತಕವಾಗಿ ಮೀನು, ಬೀಫ್ ಮತ್ತು ಕೋಳಿಯ ಮಾಂಸ ತಯಾರಿಸುವ ಪ್ರಯೋಗ ಮಾಡುತ್ತಿದೆ.‌ ಮತ್ತು ಅಂತಹಾ ಕಂಪೆನಿಗಳಿಗೆ, ಪ್ರಯೋಗಗಳಿಗೆ ಬಿಲ್ ಗೇಟ್ಸ್, ರಿಚರ್ಡ್ ಬ್ರಾನ್ಸನ್ ಗಳಂತಹ ಪ್ರಖ್ಯಾತ ಕಂಪೆನಿಗಳು ಹಣಕಾಸಿನ ಸಹಾಯವನ್ನೂ ಒದಗಿಸುತ್ತಿವೆ.

ಏರುತ್ತಿರುವ ಜನಸಂಖ್ಯೆ, ಆಹಾರದ ಸಮಸ್ಯೆ ದಿನೇ ದಿನೇ ಬಿಗಾಡಾಯಿಸುತ್ತಿರುವ, ಆಹಾರದ ರಾಜಕೀಯ ಭಾರತದಂಹ ದೇಶದಲ್ಲಿ ಅಧಿಕಾರ ಗ್ರಹಣಕ್ಕೂ ದಾರಿಯಾಗಿರುವ ಈ ಸನ್ನಿವೇಶದಲ್ಲಿ ಕೃತಕವಾಗಿ ತಯಾರಿಸಲ್ಪಡುವ ಮಾಂಸ, ಸಸ್ಯಾಹಾರಗಳು ಪರಿಹಾರ ಒದಗಿಸುತ್ತಾ? ಅಥವಾ ಆಹಾರವು ಉಳ್ಳವರ ಸೊತ್ತಾಗಿ ಮಾತ್ರ ಉಳಿದುಬಿಡುತ್ತದಾ? ಕಾದು ನೋಡಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com