ಉಚಿತ ಮುಟ್ಟಿನ ಉತ್ಪನ್ನಗಳು: ಪ್ರಪಂಚಕ್ಕೇ ಮಾದರಿಯಾದ ಸ್ಕಾಟ್ಲೆಂಡ್‌ ಸರ್ಕಾರ

ಮುಟ್ಟು ಮತ್ತದರ ಆಸುಪಾಸಿನ ದಿನಗಳು ಒಂದು ರೀತಿಯಲ್ಲಿ ಬಹಿಷ್ಕಾರಕ್ಕೆ ಒಳಗಾಗಿರುವ, ಮುಟ್ಟಿನ ಬಗ್ಗೆ ಮಾತಾಡುವುದಕ್ಕೆ ನಿರ್ಬಂಧವಿರುವ ದೇಶದಲ್ಲಿ ಮುಟ್ಟಿನ ರಜೆ, ಸ್ವಚ್ಛತೆಗಾಗಿ ನೀತಿ, ನಿಯಮ ರೂಪಿಸುವುದು ದುಬಾರಿ ಅನಿಸಬಹುದು. ಆದರೆ, ಸರಿಯಾದ ದಿಕ್ಕಿನಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಕಾನೂನು ರೂಪಿಸುವುದು ಕಾಲದ ಬೇಡಿಕೆ.
ಉಚಿತ ಮುಟ್ಟಿನ ಉತ್ಪನ್ನಗಳು: ಪ್ರಪಂಚಕ್ಕೇ ಮಾದರಿಯಾದ ಸ್ಕಾಟ್ಲೆಂಡ್‌ ಸರ್ಕಾರ
JEFF MITCHELL

ನವೆಂಬರ್ 24ರಂದು ಸ್ಕಾಟಿಷ್ ಸಂಸತ್ತು ದೇಶಾದ್ಯಂತ ಉಚಿತವಾಗಿ ಮುಟ್ಟಿನ ಉತ್ಪನ್ನಗಳನ್ನು ವಿತರಿಸುವ ಕಾನೂನಿಗೆ ಸರ್ವಾನುಮತದಿಂದ ಅನುಮೋದನೆ ನೀಡಿದೆ. ಹೀಗೆ ಮುಟ್ಟಿನ ಉತ್ಪನ್ನಗಳನ್ನು ಉಚಿತವಾಗಿ ವಿತರಿಸುವ ಕಾಯ್ದೆ ತಂದ ಮೊದಲ ದೇಶ ಸ್ಕಾಟ್ಲೆಂಡ್. ಈ ಹೊಸ ಕಾನೂನಿನ ಪ್ರಕಾರ ಶಾಲೆ, ಕಾಲೇಜು, ಯುನಿವರ್ಸಿಟಿಗಳನ್ನು ಒಳಗೊಂಡಂತೆ ಸಾರ್ವಜನಿಕ ರಂಗದ ಎಲ್ಲಾ ಸಂಸ್ಥೆಗಳಲ್ಲಿ ಮುಟ್ಟಿನ ಉತ್ಪನ್ನಗಳು ಸಾರ್ವಜನಿಕವಾಗಿ ಲಭ್ಯವಿರಬೇಕು. ಹಾಗೆ ಲಭ್ಯವಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೇರಿದೆ.

ಪ್ಲಾನ್ ಇಂಟರ್ನ್ಯಾಷನಲ್ ಯುಕೆ (Plan International UK) ಯ 2017ರ ಸಮೀಕ್ಷೆಯ ಪ್ರಕಾರ ಪ್ರತಿ ಹತ್ತರಲ್ಲಿ ಒಬ್ಬ ಹೆಣ್ಣು ಮಗುವಿಗೆ ಮುಟ್ಟಿನ ಉತ್ಪನ್ನಗಳನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯವಿಲ್ಲ ಮತ್ತು ಹದಿನಾಲ್ಕರಿಂದ ಇಪ್ಪತ್ತೊಂದು ವರ್ಷ ವಯಸ್ಸಿನವರೆಗಿನ ಅರ್ಧದಷ್ಟು ಹೆಣ್ಣುಮಕ್ಕಳು ಮುಟ್ಟಿನ ಕಾರಣದ ಮುಜುಗರಕ್ಕೆ ಒಳಗಾಗುತ್ತಾರೆ ಹಾಗೂ ಅರ್ಧದಷ್ಟು ಹೆಣ್ಣುಮಕ್ಕಳು ಮುಟ್ಟಿನ ನೋವಿನಿಂದಾಗಿ ಒಂದಿಡೀ ದಿನದ ಶಾಲೆ ತಪ್ಪಿಸುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲದ, ಮುಟ್ಟು ಅಪವಿತ್ರ, ಮಲಿನ ಎಂದೆಲ್ಲಾ ಬಿಂಬಿಸಿಕೊಳ್ಳುವ ಭಾರತದಂತಹ ಮಡಿವಂತ ದೇಶದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ. 2011ರ ಜನಗಣತಿಯ ಪ್ರಕಾರ ಪ್ರತಿ ತಿಂಗಳು 336 ಲಕ್ಷ ಹೆಣ್ಣುಮಕ್ಕಳು ಋತುಚಕ್ರಕ್ಕೆ ಒಳಗಾಗುತ್ತಾರೆ. ಹಾಗಿದ್ದೂ ಮುಟ್ಟು ಮುಟ್ಟಬಾರದ, ಮಾತನಾಡಬಾರದ ಸಂಗತಿಯಾಗಿಯೇ ಉಳಿದಿದೆ. 2015-16ರ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (national family health survey) ಯ ಪ್ರಕಾರ ಕೇವಲ 36% ಹೆಣ್ಣುಮಕ್ಕಳಷ್ಟೇ ಸ್ಯಾನಿಟರ್ ನ್ಯಾಪಿಕಿನ್‌ಗಳನ್ನು ಬಳಸುತ್ತಾರೆ. UNICEF ಪ್ರಕಾರ ಭಾರತದ ಶೇಕಡಾ 71ರಷ್ಟು ಹೆಣ್ಣುಮಕ್ಕಳಿಗೆ ತಮ್ಮ ಮೊದಲ ಋತಚಕ್ರ ಆಗುವ ವರೆಗೂ ಮುಟ್ಟಿನ ಪ್ರಕ್ರಿಯೆಯ ಬಗ್ಗೆ ಅರಿವೇ ಇರುವುದಿಲ್ಲ.

ಉಚಿತ ಮುಟ್ಟಿನ ಉತ್ಪನ್ನಗಳು: ಪ್ರಪಂಚಕ್ಕೇ ಮಾದರಿಯಾದ ಸ್ಕಾಟ್ಲೆಂಡ್‌ ಸರ್ಕಾರ
ಮುಟ್ಟಿನ ರಜೆ; ಜವಾಬ್ದಾರಿ ಸರ್ಕಾರದ್ದು ಮಾತ್ರವೇ?

ಪ್ರತಿ ತಿಂಗಳ ಮುಟ್ಟನ್ನು ಆರೋಗ್ಯಕರ ರೀತಿಯಲ್ಲಿ ನಿಭಾಯಿಸಲಾಗದವರು ಗರ್ಭಕೋಶದ ಕ್ಯಾನ್ಸರ್, ಗರ್ಭನಾಳದ ಸೋಂಕು, ಹೆಪಟೈಟಿಸ್ ಬಿ, ಮೂತ್ರದಲ್ಲಿನ ಸೋಂಕು ಮುಂತಾದ ಗಂಭೀರ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಅನಾರೋಗ್ಯಕರ ಮುಟ್ಟು ನಿರ್ವಹಣೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಣ್ಣನ್ನು ಬಳಲಿಸುತ್ತದೆ.

NGO ಒಂದರ 2014ರ ವರದಿಯ ಪ್ರಕಾರ ಪ್ರತಿವರ್ಷ 23 ಲಕ್ಷದಷ್ಟು ಹೆಣ್ಣುಮಕ್ಕಳು ಮುಟ್ಟಿನ ಜಾಗೃತಿಯ ಬಗ್ಗೆ ಅರಿವಿಲ್ಲದೆ, ನ್ಯಾಪ್‌ಕಿನ್‌ಗಳ ಲಭ್ಯತೆ ಇಲ್ಲದೆ, ಸ್ವಚ್ಛತೆ ಸಾಧಿಸಲಾಗದೆ ಶಾಲೆ ತೊರೆಯುತ್ತಾರೆ. ಶಾಲೆ ತೊರೆಯದ ಮಕ್ಕಳು ಸಾಮನ್ಯವಾಗಿ ಪ್ರತಿ ತಿಂಗಳಿಗೆ ಐದು ದಿನಗಳಂತೆ ಶಾಲೆಗೆ ರಜೆ ಹಾಕುತ್ತಾರೆ. ಹೀಗೆ ಹೆಣ್ಣಿನ ದೇಹದಲ್ಲಿ ನಡೆಯುವ ಪ್ರಕೃತಿ ಸಹಜ ಪ್ರಕ್ರಿಯೆಯೊಂದು ಅವಳ ಶಿಕ್ಷಣ, ಆರೋಗ್ಯ, ಆತ್ಮವಿಶ್ವಾಸ ಮತ್ತು ಆತ್ಮಗೌರವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ದಕ್ಷಿಣ ಕೊರಿಯಾ, ಜಪಾನ್‌, ಇಂಡೋನೇಷ್ಯಾ, ತೈವಾನ್ ನಂತಹ ದೇಶಗಳು ಎರಡನೇ ಮಹಾಯುದ್ಧದ ಸಂದರ್ಭದಲ್ಲೇ ತನ್ನ ಮಹಿಳಾ ಉದ್ಯೋಗಿಗಳಿಗೆ ಸಂಬಳ ಸಹಿತ‌ ಮುಟ್ಟಿನ ರಜೆ ನೀಡುತ್ತಿದ್ದವು. ಭಾರತದಲ್ಲಿ ಇತ್ತೀಚೆಗೆ ಝೊಮಾಟೋ ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಘೋಷಿಸಿ ದೇಶವಿಡೀ ಸಂಚಲನವನ್ನು ಸೃಷ್ಟಿಸಿತ್ತು. ಆದರೆ ಝೊಮಾಟೋಕ್ಕಿಂತ ಮೊದಲೇ 'ಕಲ್ಚರಲ್ ಮೆಷಿನ್' 'ಗೊಝೂಪ್'ಗಳಂತಹ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮುಟ್ಟಿನ ಮೊದಲ ದಿನ ರಜೆ ತೆಗೆದುಕೊಳ್ಳಲು ಅವಕಾಶ ನೀಡಿದ್ದವು. ಕೇರಳದ ಒಂದು‌ ಮಹಿಳಾ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ 1912 ರಿಂದಲೇ ಮುಟ್ಟಿನ ರಜೆಯನ್ನು ನೀಡುತ್ತಿತ್ತು. ಬಿಹಾರದಲ್ಲಿ ಸರಕಾರಿ ಉದ್ಯೋಗಿಗಳು 1992ರಿಂದಲೂ ತಿಂಗಳಿಗೆ ಎರಡು ದಿನಗಳ ಮುಟ್ಟಿನ ರಜೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಒಂದು ವರ್ಗದ ಮಹಿಳೆಯರೇ ಈ‌ ಮುಟ್ಟಿನ ರಜೆಯನ್ನು ವಿರೋಧಿಸುತ್ತಾರೆ.

ಈಗಾಗಲೇ ಕೆಲಸದ ಸ್ಥಳದಲ್ಲಿನ ಪುರುಷರಿಗೆ ಹೋಲಿಸಿದರೆ ಕಡಿಮೆ ಸಂಬಳ, ನಿಧಾನಗತಿಯ ಪ್ರಮೋಷನ್‌ಗಳಂತಹ ತಾರತಮ್ಯ ನೀತಿಯನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ. ಇನ್ನು ಮುಟ್ಟಿನ ರಜೆಯೂ ಪ್ರಾರಂಭವಾದರೆ ಈ ತಾರತಮ್ಯ ಮತ್ತಷ್ಟು ಆಳವಾಗುತ್ತದೆ ಎನ್ನುವ ಭಾವನೆ ಅವರದು. ಆದರೆ ಮಹಿಳೆಯರು ತಮ್ಮ ದೈಹಿಕ ಸಂರಚನೆಯ ಕಾರಣದಿಂದ, ಪ್ರಕೃತಿದತ್ತ ಸಹಜ ಪ್ರಕ್ರಿಯೆಯ ಕಾರಣದಿಂದ ನೋವುಣ್ಣುವುದು, ಹಿಂದುಳಿಯುವುದು ನಿಲ್ಲಬೇಕೆಂದರೆ ಮುಟ್ಟಿನ ರಜೆ ಅನಿವಾರ್ಯ. ಆದರೆ ಅದು ಮತ್ತೊಂದು ರೀತಿಯ ಮಡಿವಂತಿಕೆಗೆ, ತಾರತಮ್ಯಕ್ಕೆ ಕಾರಣವಾಗದಿರುವ ಹಾಗಿರಬೇಕು.

ಹಾಗೆಯೇ ಭಾರತ ಸರಕಾರ 2014ರಲ್ಲಿ ಮುಟ್ಟಿನ ದಿನಗಳ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು 'ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ'ದ ಮೂಲಕ ಗ್ರಾಮೀಣ ಭಾಗದಲ್ಲಿ ನ್ಯಾಪ್ಕಿನ್‌ಗಳ ಬಳಕೆ ಮತ್ತು ತಯಾರಿಕೆಯ ತರಬೇತಿ ನೀಡಿತ್ತು. ಇದರ ಮುಂದುವರಿದ ಭಾಗವಾಗಿ ಈ ವರ್ಷದ ಸ್ವಾತಂತ್ರ್ಯೋತ್ಸವದ ಭಾಷಣ ಮಾಡುತ್ತಾ ಪ್ರಧಾನಿಯವರು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸುಲಭ ಲಭ್ಯತೆ ಸಾಧ್ಯವಾಗಲು ಬಜೆಟ್‌ನಲ್ಲಿ 12,000 ಕೋಟಿ ರೂಪಾಯಿಗಳನ್ನು 'ಸುವಿಧಾ' ಯೋಜನೆಗೆ ಮೀಸಲಿಡಲಾಗುತ್ತದೆ ಎಂದಿದ್ದರು. ಈ ಯೋಜನೆಯ ಪ್ರಕಾರ ಒಂದು ರೂಪಾಯಿಗೆ ಒಂದು ಪ್ಯಾಡ್ ಲಭ್ಯವಾಗುತ್ತದೆ.

ಮುಟ್ಟು ಮತ್ತದರ ಆಸುಪಾಸಿನ ದಿನಗಳು ಒಂದು ರೀತಿಯಲ್ಲಿ ಬಹಿಷ್ಕಾರಕ್ಕೆ ಒಳಗಾಗಿರುವ, ಮುಟ್ಟಿನ ಬಗ್ಗೆ ಮಾತಾಡುವುದಕ್ಕೆ ನಿರ್ಬಂಧವಿರುವ ದೇಶದಲ್ಲಿ ಮುಟ್ಟಿನ ರಜೆ, ಸ್ವಚ್ಛತೆಗಾಗಿ ನೀತಿ, ನಿಯಮ ರೂಪಿಸುವುದು ದುಬಾರಿ ಅನಿಸಬಹುದು. ಆದರೆ, ಸರಿಯಾದ ದಿಕ್ಕಿನಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಕಾನೂನು ರೂಪಿಸುವುದು ಕಾಲದ ಬೇಡಿಕೆ. ಈ ಹಿನ್ನೆಲೆಯಲ್ಲಿ ಸ್ಕಾಟಿಷ್ ಸಂಸತ್ತು ಇಡೀ ಜಗತ್ತಿಗೆ ಮಾದರಿಯಾಗಲಿ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com