ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?

ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?

ಈಗ ಅರ್ನಾಬ್ ವಿಷಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣ ಎಂದು ಕಣ್ಣೀರು ಸುರಿಸುತ್ತಿರುವ ನಾಯಕರು, ಕನಿಷ್ಟ ಕಳೆದ ಆರೇಳು ತಿಂಗಳಲ್ಲಿ ಪತ್ರಕರ್ತರನ್ನು ಕೇವಲ ಪತ್ರಿಕಾವೃತ್ತಿಗೆ ಸಂಬಂಧಿಸಿದ ವಿಷಯದಲ್ಲಿ ಬಂಧಿಸಿದಾಗ ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ಗಮನಿಸಿದರೆ ಈ ನಾಯಕರ ಆಶಾಢಭೂತಿತನ ಜಗಜ್ಜಾಹೀರಾಗದೇ ಇರದು

ಭಾರತದ ಹೊಸ ಕಾಲದ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನದ ಹಿನ್ನೆಲೆಯಲ್ಲಿ ದೇಶದ ಎಡ-ಬಲ ಮತ್ತು ಮಧ್ಯಪಂಥೀಯರಿಂದ ಭರಪೂರ ಸಂತಾಪವೂ, ಸಂಭ್ರಮವೂ ವ್ಯಕ್ತವಾಗುತ್ತಿದೆ. ಎರಡು ದಿನಗಳಿಂದ ಬಹುತೇಕ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿ ಪತ್ರಕರ್ತನ ಬಂಧನವನ್ನು ಖಂಡಿಸಿ, ಇಲ್ಲವೇ ಸಮರ್ಥಿಸಿ ವಾದ- ವಿವಾದಗಳು ಸದ್ದು ಮಾಡುತ್ತಿವೆ.

ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?
ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಬಂಧನ

ತನ್ನ ಸ್ಟುಡಿಯೋ ನಿರ್ಮಾಣ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಒಬ್ಬರಿಗೆ ನೀಡಬೇಕಾದ ಕೆಲಸದ ಹಣವನ್ನು ನೀಡದೆ ಸತಾಯಿಸಿ, ಪತ್ರಕರ್ತ ಎಂಬ ತನ್ನ ಹೆಚ್ಚುಗಾರಿಕೆಯನ್ನು ಪ್ರಯೋಗಿಸಿ ಬೆದರಿಕೆ ಹಾಕಿ, ನೊಂದ ಆ ವಾಸ್ತುಶಿಲ್ಪಿ ಅನ್ವಯ್ ನಾಯಕ್ ಮತ್ತು ಆತನ ತಾಯಿ ಆತ್ಯಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪ ಅರ್ನಾಬ್ ಮತ್ತು ಇತರ ಇಬ್ಬರು ಆರೋಪಿಗಳ ಮೇಲಿತ್ತು. ಇದು 2018ರಲ್ಲಿ ಮುಂಬೈ ಸಮೀಪದ ರಾಯಗಢ ಜಿಲ್ಲೆಯ ಅಲಿಭಾಗ್ ಪೊಲೀಸ್ ಠಾಣೆಯಲ್ಲಿ ಆತ್ಯಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರ್ನಾಬ್ ಮತ್ತು ಇತರ ಇಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣ. ಅನ್ವಯ್ ನಾಯಕ್ ಕುಟುಂಬದವರು ನೀಡಿದ ದೂರು ಮತ್ತು ಸ್ವತಃ ಅನ್ವಯ್ ನಾಯಕ್ ಸಾವಿಗೆ ಮುನ್ನ ಬರೆದಿದ್ದ ಡೆತ್ ನೋಟ್ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಫ್ ಐಆರ್ ದಾಖಲಿಸಿ ಪ್ರಕರಣ ತನಿಖೆ ನಡೆಸಿದ್ದರು ಮತ್ತು 2019ರಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣದ ಮೇಲೆ ಪ್ರಕರಣವನ್ನು ರಾಯಗಢ ಪೊಲೀಸರು ರದ್ದುಪಡಿಸಿದ್ದರು. ಆದರೆ, ಕಳೆದ ಮೇನಲ್ಲಿ ಅನ್ವಯ್ ನಾಯಕ್ ಪತ್ನಿ ತನ್ನ ಪತಿ ಮತ್ತು ಅತ್ತೆಯ ಆತ್ಮಹತ್ಯಗೆ ಅರ್ನಾಬ್ ವಂಚನೆ ಮತ್ತು ಬೆದರಿಕೆಯೇ ಕಾರಣ. ಆದರೆ ತನಗೆ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದ್ದ ವೀಡಿಯೋ ವೈರಲ್ ಆಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಾಗಿ, ಪತ್ರಕರ್ತನಾಗಿ ಅರ್ನಾಬ್ ವೃತ್ತಿಗೂ, ಈ ಪ್ರಕರಣಕ್ಕೂ ಮತ್ತು ಈಗಿನ ಬಂಧನಕ್ಕೆ ನೇರವಾಗಿ ಯಾವ ಸಂಬಂಧವಿಲ್ಲ. ಕೆಲಸ ಮಾಡಿಸಿಕೊಂಡು, ಕೆಲಸ ಮಾಡಿದವರಿಗೆ ಸಕಾಲದಲ್ಲಿ ಹಣ ನೀಡದೆ ಸತಾಯಿಸಿದ್ದು ಮತ್ತು ಮಾಧ್ಯಮದ ವ್ಯಕ್ತಿ ಎಂಬ ತನ್ನ ವಿಶೇಷತೆಯನ್ನು ಬಳಸಿಕೊಂಡು ಅವರಿಗೆ ಬೆದರಿಕೆ ಹಾಕಿದ್ದು ಮತ್ತು ಒಟ್ಟಾರೆ ಅದೆಲ್ಲದರ ಪರಿಣಾಮವಾಗಿ ಇಬ್ಬರು ವ್ಯಕ್ತಿಗಳ ಆತ್ಮಹತ್ಯೆಗೆ ಕಾರಣವಾದ ಗುರುತರವಾದ ಕ್ರಿಮಿನಲ್ ಆರೋಪ ಅರ್ನಾಬ್ ಮೇಲಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮುಚ್ಚಿ ಹೋದ ಪ್ರಕರಣವನ್ನು ಪುನರ್ ತನಿಖೆಗೆ ಎತ್ತಿಕೊಂಡಿದ್ದು, ಆ ಸಂಬಂಧ ಅರ್ನಾಬ್ ಬಂಧಿಸಿ ಕರೆದೊಯ್ದಿದ್ದು ಮುಂತಾದವುಗಳ ಕಾನೂನು ಇತಿಮಿತಿಗಳ ಕುರಿತ ಚರ್ಚೆ ಬೇರೆ. ಆದರೆ, ಮೂಲತಃ ಈ ಬಂಧನಕ್ಕೂ ಅರ್ನಾಬ್ ಪತ್ರಿಕಾವೃತ್ತಿಗೂ ನೇರ ಸಂಬಂಧವಿಲ್ಲ. ಯಾವುದೇ ತನಿಖಾ ವರದಿಗಾಗಿ, ನಿಷ್ಪಕ್ಷಪಾತ ಪತ್ರಿಕಾ ವೃತ್ತಿ ನಿರ್ವಹಿಸಿದ್ದಕ್ಕಾಗಿ, ಪತ್ರಿಕಾ ವೃತ್ತಿ ಧರ್ಮಕ್ಕೆ ಬದ್ದನಾಗಿ ವರದಿ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಲ್ಲ ಮತ್ತು ಅದಕ್ಕಾಗಿ ಆದ ಬಂಧನವೂ ಅಲ್ಲ.

ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?
ಅರ್ನಾಬ್ ಬಂಧನಕ್ಕೆ 40 ಮಂದಿಯ ತಂಡ ರಚಿಸಿದ್ದ ಮಹಾರಾಷ್ಟ್ರ ಗೃಹ ಇಲಾಖೆ

ಆದರೆ, ಅರ್ನಾಬ್ ಬಂಧನದ ಕುರಿತು ಆತಂಕ ವ್ಯಕ್ತಪಡಿಸಿರುವ, ಕಾಳಜಿ ತೋರಿರುವ, ಖಂಡಿಸಿರುವ ಮತ್ತು ಆ ಮೂಲಕ ಇಡೀ ದೇಶದ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯವೇ ಹರಣವಾಗಿದೆ ಎಂದು ಪ್ರತಿಕ್ರಿಯಿಸಿರುವ ಮಂದಿ, ಇದೊಂದು ತುರ್ತುಪರಿಸ್ಥಿತಿ ಮರುಕಳಿಸಿದ ಸ್ಥಿತಿ. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಪತ್ರಕರ್ತರೊಬ್ಬರನ್ನು ಕ್ರಿಮಿನಲ್ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ, ದೇಶದ ಮಾಧ್ಯಮದ ಮೇಲೆ ಮುರಿದುಕೊಂಡು ಬಿದ್ದಿದೆ. ಅರ್ನಾಬ್ ಎಂದರೆ ಮಾಧ್ಯಮ, ಮಾಧ್ಯಮವೆಂದರೆ ಅರ್ನಾಬ್ ಎಂದು ಆತಂಕ ವ್ಯಕ್ತಪಡಿಸಲಾಗುತ್ತಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರಿಂದ ಗಲ್ಲಿ ನಾಯಕರವರೆಗೆ ಬಹುತೇಕ ಇಡೀ ಪಕ್ಷ ಅರ್ನಾಬ್ ಪರವಾಗಿ ದೇಶದ ಮಾಧ್ಯಮ ಸ್ವಾತಂತ್ರ್ಯ ಕಾಯುವ ಏಕೈಕ ಪಕ್ಷ ಎಂಬಂತೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವೆ ಸ್ಮೃತಿ ಇರಾನಿ, ಪ್ರಕಾಶ್ ಜಾವ್ಡೇಕರ್ ಆದಿಯಾಗಿ, ಕೊನೆಗೆ ಮಾಧ್ಯಮ ಸ್ವಾತಂತ್ರ್ಯ ದಮನಕ್ಕಾಗಿಯೇ ಹೆಸರಾಗಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕೂಡ ಪತ್ರಿಕಾಸ್ವಾತಂತ್ರ್ಯದ ನೆಪದಲ್ಲಿ ಅರ್ನಾಬ್ ಪರ ದನಿ ಎತ್ತಿದ್ದಾರೆ. ಹಾಗೆ ನೋಡಿದರೆ, ಭಾರತೀಯ ಜನತಾ ಪಾರ್ಟಿಯೂ ಸೇರಿದಂತೆ ದೇಶದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ವಿಷಯದಲ್ಲಿ ವ್ಯಕ್ತಪಡಿಸಿದ ಮಾಧ್ಯಮ ಸ್ವಾತಂತ್ರ್ಯ ಹರಣದ ಕುರಿತ ಆತಂಕ ಮೆಚ್ಚುವಂತಹದ್ದೇ.

ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?
ಅರ್ನಾಬ್‌ ಬಂಧನ: ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರದ ಮಂತ್ರಿಗಳು

ಆದರೆ, ನಿಜವಾಗಿಯೂ ಈ ನಾಯಕರು ಮಾಧ್ಯಮದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಯ ಬಗ್ಗೆ ಅಷ್ಟೊಂದು ಕಾಳಜಿ ಹೊಂದಿದ್ದಾರೆಯೇ? ಅವರದೇ ಆಡಳಿತದಲ್ಲಿ, ಅವರದೇ ರಾಜ್ಯ ಮತ್ತು ಖಾತೆ ವ್ಯಾಪ್ತಿಗೊಳಪಡುವ ವಿಷಯಗಳಲ್ಲಿ ಈ ನಾಯಕರುಗಳು ಮಾಧ್ಯಮಗಳನ್ನು, ಪತ್ರಕರ್ತರನ್ನು ಹೇಗೆ ನಡೆಸಿಕೊಂಡಿದ್ದಾರೆ? ತೀರಾ ಹಳೆಯ ವಿಷಯಗಳು ಬೇಡ. ಕನಿಷ್ಟ ಕಳೆದ ಆರೇಳು ತಿಂಗಳಲ್ಲಿ ಇದೇ ನಾಯಕರು ಪತ್ರಕರ್ತರನ್ನು, ಅದೂ ಅರ್ನಾಬ್ ರೀತಿಯಲ್ಲಿ ಕ್ರಿಮಿನಲ್ ಪ್ರಕರಣದ ವಿಷಯಕ್ಕೆ ಬದಲಾಗಿ, ಕೇವಲ ಪತ್ರಿಕಾವೃತ್ತಿ ಧರ್ಮ ಪಾಲನೆ ಮತ್ತು ವರದಿಗಾರಿಕೆಯ ವಿಷಯದಲ್ಲಿ ಹೇಗೆ ನಡೆಸಿಕೊಂಡಿದ್ದಾರೆ ಎಂಬುದನ್ನು ಗಮನಿಸಿದರೆ ಈ ನಾಯಕರ ಆಶಾಢಭೂತಿತನ ಜಗಜ್ಜಾಹೀರಾಗದೇ ಇರದು.

ಹೀಗೆ ಇತ್ತೀಚಿನ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಕ್ಕಾಗಿ, ದಿಟ್ಟ , ಜನಪರ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಗಾಗಿ ವಿವಿಧ ಸರ್ಕಾರಗಳಿಂದ, ಬಹುತೇಕ ಬಿಜೆಪಿ ಆಡಳಿತಗಳಿಂದಲೇ ಬಂಧನಕ್ಕೊಳಗಾದ ಪತ್ರಕರ್ತರ ಪಟ್ಟಿ ಇಲ್ಲಿದೆ. ‘ದ ವೈರ್’ ಅಂತರ್ಜಾಲ ಪತ್ರಿಕೆ ಮಾಡಿರುವ ಈ ಪಟ್ಟಿಯಲ್ಲಿ ಕೇವಲ ಪತ್ರಿಕಾ ವೃತ್ತಿಯ ಕಾರಣಕ್ಕಾಗಿ ಬಂಧಿತರಾದವರು ಮಾತ್ರ ಇದ್ದಾರೆ. ಅದರಲ್ಲೂ ಬಹುತೇಕ ಮುಖ್ಯವಾಹಿನಿ ಪತ್ರಕರ್ತರು ಇವರು. ಇನ್ನು ಎಫ್ ಐಆರ್ ದಾಖಲಿಸಿ, ಬಂಧನದ ವಾರಂಟ್ ನೀಡಿ ಇನ್ನೂ ಬಂಧಿಸದೇ ಇರುವ ಮತ್ತು ಮುಖ್ಯವಾಹಿನಿಯಿಂದ ಹೊರತಾದ ಪರ್ಯಾಯ ಮಾಧ್ಯಮಗಳ ಪತ್ರಕರ್ತರ ಪಟ್ಟಿ ಮಾಡಿದರೆ ಅದು ನೂರಾರು ಸಂಖ್ಯೆಯನ್ನು ಮೀರಬಹುದು.

ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?
ಅರ್ನಾಬ್ ಗೋಸ್ವಾಮಿಗೆ ತಿರುಗುಬಾಣವಾಗುವುದೇ ಹಲ್ಲೆ ಪ್ರಕರಣ?

ಅರ್ನಾಬ್ ವಿಷಯದಲ್ಲಿ ಪೈಪೋಟಿಗೆ ಬಿದ್ದಂತೆ ಬೆಂಬಲಕ್ಕೆ ನಿಂತಿರುವ ದೇಶದ ಗೃಹ ಸಚಿವರು ಸೇರಿದಂತೆ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಬೆಂಬಲ ಪಡೆಯುವುದಿರಲಿ, ಕನಿಷ್ಟ ಗಮನವನ್ನೂ ಸೆಳೆಯದ ಅಂತಹ ‘ನತದೃಷ್ಟ’ ಪತ್ರಕರ್ತರಲ್ಲಿ ತಕ್ಷಣಕ್ಕೆ ನೆನಪಾಗುವುದು ಇತ್ತೀಚೆಗೆ ಉತ್ತರಪ್ರದೇಶದ ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮನೆಯವರ ಸಂದರ್ಶನಕ್ಕೆ ತೆರಳಿದ್ದ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್. ಮಲೆಯಾಳಂ ನ್ಯೂಸ್ ಪೋರ್ಟಲ್ ವರದಿಗಾರರಾದ ಕಪ್ಪನ್ ಅವರನ್ನು ಅಕ್ಟೋಬರ್ 5ರಂದು, ಅರ್ನಾಬ್ ವಿಷಯದಲ್ಲಿಈಗ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಪಣತೊಟ್ಟಂತೆ ಮಾತನಾಡುತ್ತಿರುವ ಉತ್ತರಪ್ರದೇಶ ಸಿಎಂ ಆದೇಶದ ಮೇರೆಗೆ ಅಲ್ಲಿನ ಪೊಲೀಸರು ಬಂಧಿಸಿದ್ದರು. ಅಷ್ಟೇ ಅಲ್ಲ; ಕೇವಲ ವರದಿಗಾರಿಕೆಗೆ ಹೋದ ಅವರ ಮೇಲೆ ಅಪಾಯಕಾರಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ರಾಜ್ಯ ಸರ್ಕಾರದ ವಿರುದ್ಧ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.

ಮಣಿಪುರದ ಪತ್ರಕರ್ತ ಕಿಶೋರ್ ಚಂದ್ರ ವಾಂಗೆಮ್ ಅವರ ಬಂಧನ ಪ್ರಕರಣ ಕೂಡ ಭಿನ್ನವೇನಲ್ಲ. ಬಿಜೆಪಿ ನಾಯಕರೊಬ್ಬರ ಪತ್ನಿ ಹಂಚಿಕೊಂಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದಕ್ಕಾಗಿ ಅವರನ್ನು ದೇಶದ್ರೋಹ ಆರೋಪದಡಿ ಅಕ್ಟೋಬರ್ ನಲ್ಲಿ ಬಂಧಿಸಲಾಗಿದೆ. 2018ರಲ್ಲಿ ಕೂಡ ಆರ್ ಎಸ್ ಎಸ್, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹ ಪ್ರಕರಣದಡಿ ಅವರನ್ನು ಬಂಧಿಸಲಾಗಿತ್ತು. ಆದರೆ, ಆ ಆರೋಪಗಳನ್ನು ಹೈಕೋರ್ಟ್ ತಳ್ಳಿಹಾಕಿತ್ತು. ಇದೀಗ ಮತ್ತೆ ಅದೇ ರೀತಿಯ ಕ್ಷುಲ್ಲಕ ಕಾರಣಕ್ಕೆ ದೇಶದ್ರೋಹದಂತಹ ಆರೋಪ ಹೊರಿಸಿ ಬಂಧಿಸಲಾಗಿದೆ.

ಈಗ ಕಣ್ಣೀರುಗರೆವ ನಾಯಕರು ಪತ್ರಕರ್ತರ ನೈಜ ದಮನ ವಿಷಯದಲ್ಲಿ ಮಾಡಿದ್ದೇನು?
ಅರ್ನಾಬ್‌ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ

ಇದೇ ರೀತಿಯಲ್ಲೇ; ದ ವೈರ್ ಹಿಂದಿ ಆವೃತ್ತಿಗೆ ವರದಿ ಮಾಡುವ, ಸ್ವತಂತ್ರ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಕೂಡ ಉತ್ತರಪ್ರದೇಶ ಪೊಲೀಸರು ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಬಂಧಿಸಿದ್ದರು. ಅವರು ಟ್ವೀಟ್ ಕುರಿತು ದೇಶದ್ರೋಹದ ಪ್ರಕರಣ ದಾಖಲಿಸಿದ್ದ ಉತ್ತರಪ್ರದೇಶ ಪೊಲೀಸರು, ಅವರನ್ನು ಬಂಧಿಸಿದ್ದರು. ಆದರೆ, ಎರಡು ಬಾರಿಯೂ ನ್ಯಾಯಾಲಯ ಪೊಲೀಸರ ಆರೋಪಗಳನ್ನು ತಳ್ಳಿಹಾಕಿ, ಅವರನ್ನು ಬಿಡುಗಡೆ ಮಾಡಿತ್ತು.

ಅಸ್ಸಾಮಿ ಪತ್ರಕರ್ತ ರಾಜೀವ್ ಶರ್ಮಾ ಜಿಲ್ಲಾ ಅರಣ್ಯಾಧಿಕಾರಿಯೊಬ್ಬರು ಅಕ್ರಮ ಗೋ ಸಾಗಣೆ ಮತ್ತು ಇತರ ಕೃತ್ಯಗಳಲ್ಲಿ ಭಾಗಿಯಾದ ಬಗ್ಗೆ ತನಿಖಾ ವರದಿ ಮಾಡಿದ್ದಕ್ಕಾಗಿ ಕಳೆದ ಜುಲೈನಲ್ಲಿ ಬಂಧಿಸಲಾಗಿದೆ. ಪತ್ರಕರ್ತರ ಬಂಧನದ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದ ಬಳಿಕ ಅಸ್ಸಾಂ ಸರ್ಕಾರ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿದೆ.

ಗುಜರಾತಿನ ನ್ಯೂಸ್ ಪೋರ್ಟಲ್ ಸಂಪಾದಕ ಧಾವಲ್ ಪಟೇಲ್ ಅವರನ್ನು ಕೂಡ ದೇಶದ್ರೋಹ ಪ್ರಕರಣದಡಿ ಕಳೆದ ಮೇನಲ್ಲಿ ಬಂಧಿಸಲಾಗಿದೆ. ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು ಕರೋನಾ ನಿಯಂತ್ರಣದಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾಗಲಿದೆ ಎಂಬ ಕುರಿತು ವರದಿ ಮಾಡಿದ್ದಕ್ಕಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ಹೇರಲಾಗಿದೆ. ಕೆಲವು ವಾರಗಳ ಬಳಿಕ ನ್ಯಾಯಾಲಯ ಪಟೇಲ್ ಗೆ ಜಾಮೀನು ನೀಡಿತು.

ಹರ್ಯಾಣದ ಹಿಂದಿ ಪತ್ರಿಕಾ ಛಾಯಾಗ್ರಾಹಕ ನರೇಶ್ ಖೋಹಲ್ ಅವರನ್ನು, ಪೊಲೀಸರಿಗೆ ಕರೆ ಮಾಡಿ ತಮ್ಮ ಮನೆ ಬಳಿ ಕಲ್ಲು ತೂರಾಲಾಗುತ್ತಿದೆ ಎಂದು ದೂರು ನೀಡಿದ್ದಕ್ಕಾಗಿಯೇ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ಬಂಧಿಸಲಾಗಿತ್ತು. ಹರ್ಯಾಣದ ಝಾಜ್ಜರ್ ಪ್ರದೇಶದ ತಮ್ಮ ಮನೆ ಬಳಿ ಕಲ್ಲು ತೂರಾಟ ನಡೆಯುತ್ತಿದೆ ಎಂದು ಖೋಹಲ್ ಮೇ 7ರಂದು ಸಮೀಪದ ಪೊಲೀಸರಿಗೆ ಕರೆ ಮಾಡಿ ಹೇಳಿದ್ದರು. ಆದರೆ, ಅದಕ್ಕೆ ಪೊಲೀಸರು ಪ್ರತಿಕ್ರಿಯಿಸದೇ ಇದ್ದಾಗ, ಖುದ್ದು ಠಾಣೆಗೆ ಹೋಗಿ ದೂರು ನೀಡಿದ್ದರು. ಕಲ್ಲು ತೂರಾಟದ ಬಗ್ಗೆ ಕ್ರಮ ಕೈಗೊಳ್ಳುವ ಬದಲು, ಪೊಲೀಸರು ಖೋಹಲ್ ವಿರುದ್ಧವೇ ದೂರು ದಾಖಲಿಸಿ ಬಂಧಿಸಿದ್ದರು! ತಿಂಗಳ ಕಾಲ ಜೈಲಿನಲ್ಲಿ ಕಳೆದ ಬಳಿಕ ಪೊಲೀಸರ ಕೃತ್ಯ ಸಮರ್ಪಕವಲ್ಲ ಎಂದು ಕಂಡುಕೊಂಡ ಸರ್ಕಾರಿ ವಿಚಾರಣೆ, ಅವರ ಬಿಡುಗಡೆಗೆ ಶಿಫಾರಸು ಮಾಡಿತ್ತು.

ಮುಂಬೈನ ಜನಪ್ರಿಯ ಮರಾಠಿ ಸುದ್ದಿವಾಹಿನಿ ಎಬಿಪಿ ಮಝಾದ ಪತ್ರಕರ್ತ ರಾಹುಲ್ ಕುಲಕರ್ಣಿ ಬಂಧನ ಕೂಡ ಹೀಗೆ ಆಗಿತ್ತು. ಲಾಕ್ ಡೌನ್ ನಡುವೆ ಸಿಲುಕಿದ್ದ ವಲಸೆ ಕಾರ್ಮಿಕರಿಗಾಗಿ ಪ್ಯಾಸೆಂಜರ್ ರೈಲು ಬಿಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿ, ಭಾಂದ್ರಾ ರೈಲು ನಿಲ್ದಾಣದಲ್ಲಿ ವಲಸೆಕಾರ್ಮಿಕರ ಜನಸಂದಣಿಗೆ ಕಾರಣವಾದ ಆರೋಪ ಅವರ ಮೇಲೆ ಹೊರಿಸಲಾಗಿತ್ತು. ಏಪ್ರಿಲ್ ನಲ್ಲಿ ಬಂಧನಕ್ಕೊಳಗಾಗಿದ್ದ, ಅವರ ಮೇಲಿನ ಆರೋಪಗಳು ನಾಲ್ಕು ತಿಂಗಳ ಬಳಿಕ ಬಿದ್ದುಹೋದವು.

ದೆಹಲಿ ಪೊಲೀಸರು ಕಳೆದ ಸೆಪ್ಟೆಂಬರಿನಲ್ಲಿ ಚೀನಾದ ಪರ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ರಾಜರಹಸ್ಯ ಕಾಯ್ದೆಯಡಿ ಬಂಧಿಸಿದ ರಾಜೀವ್ ಶರ್ಮಾ, ಪ್ರಕರಣದಲ್ಲಿ ಕೂಡ ಆತನ ವಿರುದ್ಧದ ಆರೋಪಗಳು ಮತ್ತು ಬಂಧನದ ರೀತಿಯ ಬಗ್ಗೆ ಪತ್ರಿಕಾ ಸಂಸ್ಥೆಗಳು ಮತ್ತು ಪತ್ರಕರ್ತರ ಸಂಘಟನೆಗಳು ಆಕ್ಷೇಪವೆತ್ತಿದ್ದವು. ಸ್ವತಂತ್ರ ಪತ್ರಕರ್ತರಾಗಿದ್ದ ಶರ್ಮಾ, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್ ಸ್ಥಾಪಕ ನಿರ್ದೇಶಕರಾಗಿದ್ದ, ಆರ್ ಎಸ್ ಎಸ್ ಅಂಗಸಂಸ್ಥೆಯೊಂದರ ಜೊತೆ ಕೂಡ ಸಂಯೋಜಕರಾಗಿ ಕೆಲಸ ಮಾಡಿದ್ದರು ಎನ್ನಲಾಗಿತ್ತು!

ಲೇಹ್ ನ ಸ್ಟೇಟ್ ಟೈಮ್ಸ್ ವರದಿಗಾರ ತ್ಸೆವಾಂಗ್ ರಿಗ್ಜಿನ್ ಅವರನ್ನು ಸೆ.5ರಂದು ಬಂಧಿಸಲಾಗಿತ್ತು. ಲಡಾಖ್ ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್ ನೀಡಿದ ದೂರಿನ ಮೇಲೆ ಈ ಬಂಧನ ನಡೆದಿತ್ತು. ಫೇಸ್ ಬುಕ್ ಪೇಜ್ ವೊಂದರಲ್ಲಿ ರಿಗ್ಜಿನ್ ಹಾಕಿದ್ದ ಪೋಸ್ಟ್ ಒಂದಕ್ಕೆ ಯಾರೋ ಮೂರನೇ ವ್ಯಕ್ತಿ ಮಾಡಿದ ಕಾಮೆಂಟಿನಲ್ಲಿ ಸಂಸದರನ್ನು ಟೀಕಿಸಲಾಗಿತ್ತು ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ವಾಸ್ತವವಾಗಿ ಆ ಕಾಮೆಂಟಿಗೂ, ರಿಗ್ಜಿನ್ ಗೂ ಯಾವುದೇ ಸಂಬಂಧವಿರಲಿಲ್ಲ. ಆದರೂ ಬಿಜೆಪಿ ಸಂಸದರ ಒತ್ತಡಕ್ಕೆ ಬಿದ್ದ ಪೊಲೀಸರು ಬಂಧನದಂತಹ ಉಗ್ರ ಕ್ರಮಕೈಗೊಂಡಿದ್ದರು. ಆದರೆ, ಅದೇ ದಿನ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.

ಈ ಮೇಲಿನ ಯಾವ ಪ್ರಕರಣದಲ್ಲಿಯೂ ಈಗ ಅರ್ನಾಬ್ ವಿಷಯದಲ್ಲಿ ಪತ್ರಿಕಾ ಸ್ವಾತಂತ್ರದ ಪ್ರವರ್ತಕರಾಗಿ, ಸಮರ ಕಲಿಗಳಂತೆ ಮಾತನಾಡುತ್ತಿರುವ ಯಾವ ನಾಯಕರೂ ತುಟಿಬಿಚ್ಚಿರಲಿಲ್ಲ ಮತ್ತು ವಿಪರ್ಯಾಸವೆಂದರೆ: ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ಅದೇ ನಾಯಕರ ಆಣತಿಯಂತೆಯೇ ಕರ್ತವ್ಯನಿರತ ಪತ್ರಕರ್ತರನ್ನು ಅವರ ಮಾಧ್ಯಮ ವೃತ್ತಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕಾರಣಕ್ಕಾಗಿಯೇ ಬಂಧಿಸಲಾಗಿತ್ತು. ಅದರಲ್ಲೂ ದೇಶದ್ರೋಹ, ರಾಜ್ಯ ಸರ್ಕಾರದ ವಿರುದ್ಧ ಸಂಚು ಮುಂತಾದ ಗಂಭೀರ ಪ್ರಕರಣಗಳನ್ನು ಹೇರಿ ಮಾಧ್ಯಮಗಳ ದನಿ ಅಡಗಿಸುವ ಯತ್ನ ಮಾಡಲಾಗಿತ್ತು.

ಆ ಹಿನ್ನೆಲೆಯಲ್ಲಿ ಈಗ ಅರ್ನಾಬ್ ಎಂಬ ಪತ್ರಕರ್ತನ ವಿಷಯದಲ್ಲಿ; ಆತ ಮಾಡುತ್ತಿರುವುದು ಪತ್ರಿಕಾವೃತ್ತಿಯೇ ಎಂಬ ಬಗ್ಗೆಯೇ ಗಂಭೀರ ಚರ್ಚೆಗಳಿರುವಾಗ, ವೃತ್ತಿಗೆ ಯಾವ ರೀತಿಯಲ್ಲೂ ಸಂಬಂಧಪಡದ ಶುದ್ಧ ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಿರುವುದನ್ನು ಮಾಧ್ಯಮ ಸ್ವಾತಂತ್ರ್ಯದ ಹರಣ ಎನ್ನುತ್ತಿರುವುದರ ಹಿಂದೆ ಏನಿದೆ ಎಂಬ ಬಗ್ಗೆ ಕುತೂಹಲವೇನೂ ಉಳಿದಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com