ಕೋವಿಡ್ ಎರಡನೇ ಅಲೆಯ ಆತಂಕದ ನಡುವೆ ಶಾಲಾ ಆರಂಭದ ತಲ್ಲಣ!

ಜಾಗತಿಕವಾಗಿ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ಹೋಗುತ್ತಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಮತ್ತೆ ಶಾಲೆಗಳನ್ನು ಚಳಿಗಾಲದ ನಡುವೆಯೇ ಪುನರಾರಂಭಿಸುವುದು ಎಷ್ಟು ಸುರಕ್ಷಿತ? ದೇಶ ಎರಡನೇ ಸುತ್ತಿನ ಸೋಂಕಿನ ಅಲೆಯತ್ತ ಸಾಗುತ್ತಿದೆ ಎಂಬ ಆತಂಕದ ಹೊತ್ತಲ್ಲಿ ಸರ್ಕಾರ ದುಡುಕಿನ ನಿರ್ಧಾರ ಕೈಗೊಳ್ಳದಿರಲಿ ಎಂಬುದು ಪೋಷಕರ ನಿರೀಕ್ಷೆ.
ಕೋವಿಡ್ ಎರಡನೇ ಅಲೆಯ ಆತಂಕದ ನಡುವೆ ಶಾಲಾ ಆರಂಭದ ತಲ್ಲಣ!

ಶಾಲೆಗಳನ್ನು ಪುನರಾರಂಭಿಸಲು ಶಿಕ್ಷಣ ಇಲಾಖೆ ಮತ್ತೆ ಸಿದ್ಧತೆ ನಡೆಸಿದೆ. ಈ ಸಂಬಂಧ ನಾಳೆಯಿಂದ ಮೂರು ದಿನಗಳ ಕಾಲ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನಿರಂತರ ಸಭೆ ನಡೆಸಿ, ನ.6 ಹೊತ್ತಿಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಒಂದು ಕಡೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ, ಅವರ ಕಲಿಕೆಯ ಒಂದು ವರ್ಷ ವ್ಯರ್ಥವಾಗಿಹೋಗುತ್ತದೆ. ಶಿಕ್ಷಣ ವರ್ಷ ಮತ್ತು ಇಲಾಖೆಯ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಡಕುಗಳಿಗೂ ಈ ಬಿಡುವು ಕಾರಣವಾಗುತ್ತದೆ. ಜೊತೆಗೆ ಮುಖ್ಯವಾಗಿ ಖಾಸಗೀ ಶಾಲಾ ಕಾಲೇಜು ಶಿಕ್ಷಕರು ಮತ್ತು ಅರೆಕಾಲಿಕ ಶಿಕ್ಷಕರ ವೇತನದ ಮೇಲೆ ಈಗಾಗಲೇ ಈ ಬಿಡುವು ಬೀರಿರುವ ಗಂಭೀರ ಪರಿಣಾಮ, ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರ ಸ್ವರೂಪ ಪಡೆಯಬಹುದು ಎಂಬುದು ಶಾಲೆಯನ್ನು ಆರಂಭಿಸುವ ಕುರಿತ ಧಾವಂತದ ಹಿಂದಿನ ಕಾರಣಗಳು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದೇ ಹೊತ್ತಿಗೆ ಕರೋನಾ ಸೋಂಕು ಮಕ್ಕಳ ಮೇಲೆ ಬೀರುವ ಪರಿಣಾಮ, ಒಂದೇ ಕಡೆ ಸಾವಿರಾರು ಮಕ್ಕಳು ದಿನದ ಬಹುತೇಕ ಸಮಯವನ್ನು ಒಟ್ಟಾಗಿ ಕಳೆಯುವುದರಿಂದ ಮತ್ತು ಒಟ್ಟಾಗಿ ಪ್ರಯಾಣಿಸುವುದರಿಂದಾಗಿ ಸೋಂಕು ಹರಡುವಿಕೆ ಮತ್ತು ತೀವ್ರತೆಯ ಪರಿಣಾಮಗಳೇನು ಎಂಬುದೂ ಸೇರಿದಂತೆ ಹಲವು ಸಂಗತಿಗಳು ಇನ್ನೂ ನಿಗೂಢವಾಗೇ ಉಳಿದಿವೆ. ಈ ಕುರಿತು ಈ ಹಿಂದಿನ ಅನುಭವಗಳಾಗಲೀ, ಅಥವಾ ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳಾಗಲೀ ಲಭ್ಯವಿಲ್ಲ. ಹಾಗಾಗಿ ಕರೋನಾ ಸೋಂಕಿನ ಬರೋಬ್ಬರಿ ಎಂಟು ತಿಂಗಳ ಬಳಿಕವೂ ಈ ವಿಷಯದಲ್ಲಿ ಆತಂಕ ಮತ್ತು ಅನಿಶ್ಚಿತತೆ ಮುಂದುವರಿದಿದೆ.

ಹಾಗಾಗಿಯೇ ಪ್ರತಿ ಬಾರಿ ಶಾಲಾ-ಕಾಲೇಜು ಪುನರಾರಂಭದ ಕುರಿತು ಸರ್ಕಾರ ಮತ್ತು ಸಚಿವರು ಪ್ರಸ್ತಾಪಿಸುತ್ತಿದ್ದಂತೆ ಪೋಷಕರು ಮತ್ತು ಸಾರ್ವಜನಿಕ ವಲಯದಿಂದ ಆತಂಕ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ತೆರೆಯುವ ಬಗ್ಗೆ ಪೋಷಕರ ವರ್ಗದ ಜೊತೆಗೆ ಶಿಕ್ಷಣ ತಜ್ಞರು ಮತ್ತು ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಕರೋನಾ ಸಂಪೂರ್ಣ ತೊಲಗುವವರೆಗೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಸರ್ಕಾರಕ್ಕೆ ಅಧಿಕೃತ ಹೇಳಿಕೆಯ ಮೂಲಕ ಆಗ್ರಹಿಸಿವೆ.

ಈ ನಡುವೆ, ಈಗಾಗಲೇ ನವೆಂಬರ್ 17ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಆರಂಭಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಸರ್ಕಾರ, ಆ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೋಡಿಕೊಂಡು ಅದರ ಬೆನ್ನಲ್ಲೇ ಪದವಿಪೂರ್ವ ತರಗತಿಗಳನ್ನೂ ಆರಂಭಿಸಲು ಸಜ್ಜಾಗಿದೆ. ನಂತರ ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಈ ಸಂಬಂಧ ರಚಿಸಿದ್ದ ತಜ್ಞರ ಸಮಿತಿ ಕೂಡ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ ಶಾಲೆಗಳನ್ನು ಹಂತಹಂತವಾಗಿ ಆರಂಭಿಸಬಹುದು ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಈಗ ಕನಿಷ್ಟ ಈ ವರ್ಷಾಂತ್ಯದ ಒಳಗೆ ಶಾಲೆಗಳನ್ನು ಆರಂಭಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ.

ಈ ನಡುವೆ, ಉತ್ತರಾಖಂಡ್ ನಲ್ಲಿ ಇತ್ತೀಚೆಗಷ್ಟೇ ಶಾಲೆ ಆರಂಭಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅಲ್ಲಿನ ಅಲ್ಮೊರಾ ಜಿಲ್ಲೆಯ ರಾಣಿಖೇತ್ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕರೋನಾ ದೃಢಪಟ್ಟಿದ್ದು, ಆತನ ಸಂಪರ್ಕಕ್ಕೆ ಬಂದಿದ್ದ 12ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಮತ್ತು ಶಾಲೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಮತ್ತೊಂದು ಕಡೆ ದೆಹಲಿ ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ಕೋವಿಡ್ ಪ್ರಕರಣಗಳ ಎರಡನೇ ಮತ್ತು ಮೂರನೇ ಅಲೆ ವ್ಯಾಪಿಸುತ್ತಿದ್ದು, ಕಳೆದ ವಾರದಿಂದೀಚೆಗೆ ಹೊಸ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಮತ್ತೆ ಏರುಗತಿ ಪಡೆದುಕೊಂಡಿದೆ. ದೇಶವ್ಯಾಪಿ ಕೂಡ ಕೆಲ ದಿನಗಳ ಅವಧಿಯ ಹೊಸ ಪ್ರಕರಣಗಳ ಕುಸಿತದ ಬಳಿಕ ಮತ್ತೆ ಏರುಗತಿ ಕಂಡುಬಂದಿದ್ದು, ಚಳಿಗಾಲದ ಶೀತ ವಾತಾವರಣ ವೈರಸ್ ಹರಡುವಿಕೆಯನ್ನು ಇನ್ನಷ್ಟು ವೇಗ ಗೊಳಿಸಬಹುದು ಎಂಬ ಆತಂಕವನ್ನು ಹಲವು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಮೆರಿಕ, ಇಟಲಿ, ಬ್ರಿಟನ್, ಜರ್ಮನಿ, ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಎರಡನೇ ಸುತ್ತಿನ ಕರೋನಾ ಹರಡುವಿಕೆ ವ್ಯಾಪಕವಾಗಿ ಹಬ್ಬಿದ್ದು, ಬಹುತೇಕ ಕಡೆ ಮತ್ತೊಂದು ಸುತ್ತಿನ ಲಾಕ್ ಡೌನ್ ಹೇರಲಾಗಿದೆ. ಬ್ರಿಟನ್, ಫ್ರಾನ್ಸ್, ಆಸ್ಟ್ರಿಯಾ, ಗ್ರೀಸ್, ಸ್ಪೇನ್, ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ಎರಡನೇ ಸುತ್ತಿನ ಸಂಪೂರ್ಣ ಮತ್ತು ಭಾಗಶಃ ಲಾಕ್ ಡೌನ್ ಹೇರಲಾಗಿದೆ. ಆದಾಗ್ಯೂ ಅಲ್ಲಿನ ಶಾಲಾ ಕಾಲೇಜು ಮತ್ತು ನಿರ್ಬಂಧ ರಹಿತ ಜನರ ದಟ್ಟಣೆಯ ವ್ಯಾಪಾರ ವಹಿವಾಟು ಚಟುವಟಿಕೆಗಳೇ ಪ್ರಮುಖವಾಗಿ ಸೋಂಕು ಮತ್ತೆ ವ್ಯಾಪಿಸಲು ಕಾರಣ ಎನ್ನಲಾಗುತ್ತಿದೆ. ಫ್ರಾನ್ಸ್, ಬ್ರಿಟನ್ ಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮತ್ತೆ ಜಾರಿಗೆ ಬಂದಿದೆ. ಅಮೆರಿಕದಲ್ಲಿ ಕೂಡ ಎರಡನೇ ಅಲೆಯ ಸೋಂಕು ಪ್ರಮಾಣ ವ್ಯಾಪಕವಾಗಿ ಹರಡುತ್ತಿದ್ದು, ಅಲ್ಲಿನ ಚುನಾವಣಾ ಮುಖ್ಯವಿಷಯವಾಗಿದೆ. ಆದರೆ, ಲಾಕ್ ಡೌನ್ ಹೇರುವುದಿಲ್ಲ. ಲಾಕ್ ಡೌನ್ ನಿಂದ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡುವುದಿಲ್ಲ ಎಂದು ಟ್ರಂಪ್ ಹೇಳುತ್ತಿದ್ದಾರೆ.

ಜಾಗತಿಕವಾಗಿ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ಹೋಗುತ್ತಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಮತ್ತೆ ಶಾಲೆಗಳನ್ನು ಚಳಿಗಾಲದ ನಡುವೆಯೇ ಪುನರಾರಂಭಿಸುವುದು ಎಷ್ಟು ಸುರಕ್ಷಿತ? ದೇಶ ಎರಡನೇ ಸುತ್ತಿನ ಸೋಂಕಿನ ಅಲೆಯತ್ತ ಸಾಗುತ್ತಿದೆ ಎಂಬ ಆತಂಕದ ಹೊತ್ತಲ್ಲಿ ಸರ್ಕಾರ ದುಡುಕಿನ ನಿರ್ಧಾರ ಕೈಗೊಳ್ಳದಿರಲಿ ಎಂಬುದು ಪೋಷಕರ ನಿರೀಕ್ಷೆ.

ಈ ನಡುವೆ, ಕೆಲವು ಆರೋಗ್ಯ ತಜ್ಞರು ಮತ್ತು ವೈದ್ಯರು ಶಾಲೆಗಳನ್ನು ಆದಷ್ಟು ಬೇಗ ಪುನರಾರಂಭಿಸುವುದು ಒಳಿತು. ಮಕ್ಕಳಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುವುದರಿಂದ ಅವರಿಗೆ ಸೋಂಕು ಮಾರಣಾಂತಿಕವಾಗುವ ಸಾಧ್ಯತೆಗಳು ವಿರಳ ಎಂಬುದು ಈಗಾಗಲೇ ಗೊತ್ತಾಗಿದೆ. ಜಗತ್ತಿನ ವಿವಿಧ ಕಡೆ ನಡೆದಿರುವ ಅಧ್ಯಯನಗಳು ಕೂಡ ಇದನ್ನೇ ಹೇಳುತ್ತಿವೆ. ಶಾಲೆಗಳನ್ನು ಆರಂಭಿಸುವುದನ್ನು ಮುಂದೂಡಿದಷ್ಟು ನಾವು ಸೋಂಕಿನ ಹರಡುವಿಕೆಯ ಅವಧಿಯನ್ನೂ ಮುಂದೂಡುತ್ತಿದ್ದೇವೆ ಎಂದರ್ಥ. ಆ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಂದೂಡಿದಷ್ಟೂ ಅಪಾಯ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಆದರೆ, ಮಕ್ಕಳ ಮೇಲೆ ಕೋವಿಡ್ ಪರಿಣಾಮಗಳೇನು? ತರಗತಿ ಆರಂಭವಾದರೆ ಸಾಮೂಹಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಒಂದೇ ಜಾಗದಲ್ಲಿ ಬಹುತೇಕ ಸಮಯ ಕಳೆಯುವಾಗ, ಅದರಿಂದಾಗಿ ಕೋವಿಡ್ ಹರಡುವಿಕೆ ಮತ್ತು ಅದು ಮಕ್ಕಳ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಭಾರತದ ಮಟ್ಟಿಗಂತೂ ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದ ಬಗ್ಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರವಾಗಲೀ ಅಥವಾ ಶೈಕ್ಷಣಿಕ ಹಾಗೂ ವೈದ್ಯಕೀಯ ಸಂಬಂಧಿ ಉನ್ನತ ಸಂಸ್ಥೆಗಳಾಗಲೀ ಈ ಸೂಕ್ಷ್ಮ ವಿಷಯದ ಕುರಿತು ನಿರ್ದಿಷ್ಟ ಅಧ್ಯಯನಗಳನ್ನು ಕೂಡ ನಡೆಸಿಲ್ಲ. ಹಾಗಿರುವಾಗ ಸಾಮಾನ್ಯ ಊಹೆ ಮತ್ತು ಅಂದಾಜಿನ ಮೇಲೆ ಮಕ್ಕಳ ಜೀವದ ಜೊತೆ ಆಟವಾಡುವುದು ತರವೇ ಎಂಬ ಪ್ರಶ್ನೆಯೂ ಎದ್ದಿದೆ.

ಎಂಟು ತಿಂಗಳ ಅವಧಿಯಲ್ಲಿ ಶಾಲೆಗಳ ಪುನರಾರಂಭದ ಸಾಧಕ-ಬಾಧಕಗಳ ಕುರಿತು ವಾಸ್ತವಾಂಶ ಆಧಾರಿತ ವೈಜ್ಞಾನಿಕ ಅಧ್ಯಯನಗಳಾಗಲೀ, ಪ್ರಯೋಗಗಳಾಗಲೀ ನಡೆಸಲಾರದ ಸರ್ಕಾರ, ಶಾಲೆಗಳನ್ನು ಆರಂಭಿಸುವ ಬಗ್ಗೆ ತೋರುತ್ತಿರುವ ಕಾಳಜಿಯನ್ನು ಅದರ ಸಾಧಕ-ಬಾಧಕಗಳ ಅಧ್ಯಯನದ ಬಗ್ಗೆಯೂ ತೋರಿದ್ದರೆ ಬಹುಶಃ ಇಷ್ಟರಲ್ಲಾಗಲೀ ಒಂದು ವೈಜ್ಞಾನಿಕ ಮತ್ತು ಸುರಕ್ಷಿತ ಮಾದರಿ ಕಂಡುಕೊಳ್ಳುವುದು ಸಾಧ್ಯವಿತ್ತು. ಆದರೆ, ಅಂತಹ ಪ್ರಯತ್ನಗಳು ನಡೆದಿಲ್ಲ. ತಜ್ಞರ ಸಮಿತಿಗಳನ್ನು ನೇಮಕ ಮಾಡಿದ್ದರೂ, ಅವು ವೈಜ್ಞಾನಿಕ ವಿಶ್ಲೇಷಣೆ ಮತ್ತು ಪ್ರಯೋಗಗಳ ಮೂಲಕ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಬದಲು, ಕೇವಲ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಸೀಮತವಾಗಿದ್ದವು. ಹಾಗಾಗಿ ಸರ್ಕಾರ ಮತ್ತು ಪೋಷಕರ ನಡುವಿನ ಗೊಂದಲ ಈಗಲೂ ಮುಂದುವರಿದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com