ಪ್ರಾಯೋಜಿತ ಹಬ್ಬಗಳಿಂದ ಹೊರಬರೋಣ

ಕಂಪನಿಗಳಿಗೆ ಹಬ್ಬಗಳನ್ನು ಪ್ರಾಯೋಜಿಸಿ ಹಣ ಮಾಡಿಕೊಳ್ಳಲು ಧರ್ಮಬೇಧವಿಲ್ಲ ತಾನೆ?
ಪ್ರಾಯೋಜಿತ ಹಬ್ಬಗಳಿಂದ ಹೊರಬರೋಣ

ಭಾರತೀಯ ಸಂಪ್ರದಾಯದಲ್ಲಿ ಹಬ್ಬ ಹರಿದಿನಗಳಿಗೆ ಅಪಾರ ಪ್ರಾಮುಖ್ಯತೆಯಿದೆ. ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಆಯಾಮಗಳೂ ಹಬ್ಬಗಳಿಗಿವೆ. ಹಬ್ಬ ಬಂತೆಂದರೆ ಮನೆಮನೆಗಳಲ್ಲಿ ಉತ್ಸಾಹ ಗರಿಗೆದರುತ್ತದೆ. ದೀನರಿಗೆ ಉಪಕರಿಸಿ, ಪಶುಗಳನ್ನು ಪ್ರೀತಿಸಿ,ಪರಿಸರವನ್ನು ಪೂಜಿಸಿ- ಇಷ್ಟನ್ನು ನಮ್ಮಿಂದ ಮಾಡಿಸುವ ವೈವಿಧ್ಯಮಯ ಹಬ್ಬಗಳ ನೈಜ ಆಚರಣೆಯಲ್ಲಿ ಸಂಸ್ಕೃತಿಯು ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತದೆ.

ದೀಪಾವಳಿಯು ದಿವಾಳಿಯೆಂದು ಕರೆಯಲ್ಪಡುತ್ತಿರುವ ಇಂದು, ನಾವು ಆಚರಿಸುವ ಬಹುತೇಕ ಎಲ್ಲ ಹಬ್ಬಗಳನ್ನೂ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಪ್ರಾಯೋಜಿಸಲು ಪೈಪೋಟಿ ನಡೆಸುತ್ತಿವೆ. ಶುದ್ಧಾನುಶುದ್ಧ ಪ್ರಾದೇಶಿಕ ಆಚರಣೆಗಳನ್ನು ಸಹ ತಮ್ಮ ಸ್ಟ್ರಾಟರ್ಜಿಗೆ ಬಳಸುವ ಕಲೆಯಲ್ಲಿ ಕಂಪನಿಗಳು ನಿಷ್ಣಾತರಾಗಿವೆ. ನಾವುಗಳು ಪ್ರಾಯೋಜಿತ ಮನುಷ್ಯರಾಗುತ್ತಿದ್ದೇವೆ. ಹಬ್ಬಗಳು ಬಂತೆಂದರೆ ಸಾಕು, ಆನ್ಲೈನ್ ಶಾಪಿಂಗ್ ಸೈಟ್ ಗಳು ಬಿಗ್ ಬಿಲಿಯನ್ ಡೇ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಹಪಾಹಪಿತನ ಆರಂಭಿಸುತ್ತವೆ. ಯಾವ ಖರೀದಿ ತಾಣದಲ್ಲಿ ಕಡಿಮೆ‌ ಬೆಲೆಗೆ ಸಿಗುತ್ತದೆಯೆಂಬ ಆಸೆಯಲ್ಲಿ ಜನಸಾಮಾನ್ಯರೂ ಹುಡುಕಾಟ ನಡೆಸುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಂತರ್ಜಾಲ ವಹಿವಾಟು ತಾಣಗಳು ಉಚಿತವಾಗಿ ಮಾರುತ್ತಿದ್ದೇವೇನೋ ಎಂದು ನಂಬಿಸುವಷ್ಟು ಆಫರ್ ಗಳನ್ನು ಹಬ್ಬದ ದಿನಗಳಲ್ಲಿ ನೀಡುತ್ತವೆ. ಪತ್ರಿಕೆಗಳಲ್ಲಿ ಆದಿನಗಳಲ್ಲಿ ಸುದ್ದಿಗೆ ಜಾಗವೇ ಇಲ್ಲ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತೇವೆಂಬ ಜಾಹೀರಾತಿನ ಮೂಲಕ ನಮ್ಮನ್ನು ಪ್ರಚೋದಿಸುತ್ತಿವೆ. ಪ್ರತ್ಯೇಕವಾಗಿ ಕಂಪನಿಗಳ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲವೆಂದು ಭಾವಿಸುವೆ. ಇದು ಕೊಳ್ಳುಬಾಕತನ ಹೆಚ್ಚಲೂ ಕಾರಣವಾಗಿದೆ. ಶಾಪಿಂಗ್ ಸೈಟಿನಿಂದ ಹೊಸ ವಸ್ತುವೊಂದು ಮನೆಗೆ ಬಂದರೆ ಮಾತ್ರ ಹಬ್ಬ ಎಂಬಷ್ಟರ ಮಟ್ಟಿಗೂ ಹಲವರ ಮನಸ್ಥಿತಿ ಬದಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ವಸ್ತುಗಳದ್ದೇ ದೊಡ್ಡಪಾಲು. 'ಇ -ತ್ಯಾಜ್ಯ'ದ ಹೆಚ್ಚಳಕ್ಕೆ ದಾರಿಮಾಡಿರುವುದೂ ಇದೇ.

ಇದ್ದಿದ್ದರಲ್ಲೇ ಸರಳವಾಗಿ ಹಬ್ಬ ಮಾಡುವ ನಮ್ಮ ಪೂರ್ವಿಕರನ್ನು ನೆನೆಯಬೇಕಾದ ಎಂದಿಗಿಂತ ಇಂದು ಅವಶ್ಯಕತೆಯಿದೆ. ಸರಳ ಮತ್ತು ಅರ್ಥಪೂರ್ಣ ಹಬ್ಬಗಳು ಹಿಂದಿನಿಂದ ನಡೆದುಬಂದ ರೂಡಿ.‌ ಕೋವಿಡ್ -19 ರ ಕಾಲದಲ್ಲಿ ಕೊಳ್ಳುಬಾಕತನ ವೈಯಕ್ತಿಕ ಆರ್ಥಿಕ ಸಾಮರ್ಥ್ಯವನ್ನು ಕುಗ್ಗಿಸದಿರಲಿ.

ಸಹಜ ಪರಿಸರ ಪರ ಆಚರಣೆಗೆ ಒತ್ತು ನೀಡುವ ಪರಂಪರೆಯನ್ನು ಮತ್ತೆ ನೆನಪಿಸಿಕೊಳ್ಳಬೇಕು. ಆನ್ಲೈನ್ ಶಾಪ್ ಗಳಿಗಿಂತ ನಮ್ಮ ಸುತ್ತಮುತ್ತಲಿನ ಸ್ಥಳೀಯ ಅಂಗಡಿಕಾರರು ಬದುಕುವುದು ಮುಖ್ಯ. ಏಕೆಂದರೆ ಅವರೆಲ್ಲರೂ ನಮ್ಮವರೇ. ನಮ್ಮದೇ ಗೆಳೆಯರು, ಸಂಬಂಧಿಕರು, ಪರಿಚಯಸ್ಥರು. ಅವರ ಅಂಗಡಿಗಳಲ್ಲಿ ಖರೀದಿಸಿದರೆ ಅವರ ಕಿಸೆಗೂ ನಾಲ್ಕು ಕಾಸು ಸೇರುತ್ತದೆ. ನಮ್ಮ ಮನೆಯ ಜೊತೆಗೆ ಅವರ ಮನೆಯಲ್ಲೂ ಬೆಳಕು ಹಬ್ಬುತ್ತದೆ.

 ಕಂಪನಿಗಳಿಗೆ ಹಬ್ಬಗಳನ್ನು ಪ್ರಾಯೋಜಿಸಿ ಹಣ ಮಾಡಿಕೊಳ್ಳಲು ಧರ್ಮಬೇಧವಿಲ್ಲ ತಾನೆ? ಎಲ್ಲ ಧರ್ಮಗಳ ಎಲ್ಲ ಹಬ್ಬಗಳೂ ಸರಳ ಮತ್ತು ನೈಜ ತತ್ವವನ್ನೇ ಮುಂದಿಟ್ಟುಕೊಂಡು ಆಚರಿಸಲ್ಪಡಬೇಕು. ಹಬ್ಬಗಳ ಆಚರಣೆ ಆನ್ಲೈನ್ ಶಾಪಿಂಗ್ ಸೈಟ್ ಗಳ ಪ್ರಾಯೋಜಕತ್ವಗಳಿಂದ ಅತ್ಯಂತ ಜರೂರಾಗಿ ಹೊರಬರಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com