ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?
ಭಾರತದ ಈಗಿನ ಕರೋನಾ ಪ್ರಕರಣಗಳ ಇಳಿಕೆಯ ಪ್ರಮಾಣದಲ್ಲಿ ಈ ರೀತಿಯ ಕೇವಲ ಶೇ.50ರಷ್ಟು ನಿಖರತೆ ಹೊಂದಿರುವ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಗಳ ಪಾಲೆಷ್ಟು ಮತ್ತು ನಿಜವಾಗಿಯೂ ಸೋಂಕು ಇಳಿಕೆಯಾದ ಪ್ರಮಾಣವೆಷ್ಟು ಎಂಬುದು ಗೊತ್ತಾಗಬೇಕಿದೆ. ಆಗ ಮಾತ್ರ ಈ ...
ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?

ದೇಶದಲ್ಲಿ ಹೊಸ ಕರೋನಾ ಪ್ರಕರಣಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಹೊಸ ಪ್ರಕರಣಗಳ ಪ್ರಮಾಣ ನಿರಂತರ ಕುಸಿತ ಕಾಣುತ್ತಿದ್ದು, ಸುಮಾರು ಒಂದು ತಿಂಗಳ ಹಿಂದೆ; ಸೆಪ್ಟೆಂಬರ್ 16ರಂದು ಬರೋಬ್ಬರಿ 97,859 ಹೊಸ ಪ್ರಕರಣಗಳೊಂದಿಗೆ ಮೊಟ್ಟಮೊದಲ ಬಾರಿಗೆ ಅತಿ ಹೆಚ್ಚು ದೈನಂದಿನ ಪ್ರಕರಣಗಳು ದಾಖಲಾದ ಬಳಿಕ, ಹೊಸ ಪ್ರಕರಣಗಳು ಇಳಿಮುಖವಾಗಿವೆ.

ಏಳು ದಿನಗಳ ಸರಾಸರಿ ಹೊಸ ಪ್ರಕರಣಗಳ ಪ್ರಮಾಣ ಸೆಪ್ಟೆಂಬರ್ ಎರಡನೇ ವಾರದ ಹೊತ್ತಿಗೆ 92,830 ಇದ್ದರೆ, ಈಗ ಅಕ್ಟೋಬರ್ ಎರಡನೇ ವಾರದಲ್ಲಿ ಆ ಪ್ರಮಾಣ 70,114ಕ್ಕೆ ಕುಸಿದಿದೆ. ಸೋಂಕಿನ ಪ್ರಮಾಣದಲ್ಲಿ ಆಗಿರುವ ಈ ಗಣನೀಯ ಬದಲಾವಣೆಗೆ ಕಾರಣ, ಕೋವಿಡ್ ನಿಯಂತ್ರಣ ಕ್ರಮಗಳನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇಂದ್ರದ ಸೂಚನೆಗಳನ್ನು ಅನುಸರಿಸಿ ಸೋಂಕು ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಂಗಳವಾರ ಬೆಳಗಿನವರೆಗೆ ಕಳೆದ 24 ತಾಸುಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 55,342 ಆಗಿದ್ದು, ಅದು ಕಳೆದ ಎರಡು ತಿಂಗಳಲ್ಲಿ ದಿನವೊಂದರ ಅತ್ಯಂತ ಕಡಿಮೆ ಪ್ರಕರಣಗಳು ವರದಿಯಾದ ದಾಖಲೆ. ಈ ನಡುವೆ ಬುಧವಾರ ಬೆಳಗ್ಗೆಗೆ ಅಂತ್ಯಗೊಂಡ 24 ತಾಸುಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 63,517ರಷ್ಟಾಗಿದೆ. ಒಂದೇ ದಿನದಲ್ಲಿ ಸುಮಾರು 8 ಸಾವಿರದಷ್ಟು ಪ್ರಕರಣಗಳ ಏರಿಳಿಕೆಯ ವ್ಯತ್ಯಾಸವಿದ್ದರೂ, ಏಳು ದಿನಗಳ ಸರಾಸರಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ ಎಂಬುದು ಗಮನಾರ್ಹ. ಹಾಗೇ ಸೋಂಕಿತರ ಸಾವಿನ ಪ್ರಮಾಣದಲ್ಲಿ ಕೂಡ ಕಳೆದ ಒಂದು ತಿಂಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಸೆ.15ರ ಹೊತ್ತಿಗೆ ಬರೋಬ್ಬರಿ 1283ರಷ್ಟಿದ್ದ ಸಾವಿನ ಪ್ರಮಾಣ, ಅ.13ರ ಮಂಗಳವಾರದ ಹೊತ್ತಿಗೆ 723ಕ್ಕೆ ಕುಸಿದಿದೆ. ಇದೇ ಕಾರಣಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆರೋಗ್ಯ ಸಚಿವರು ಖುದ್ದು ಇದೊಂದು ಆಶಾದಾಯಕ ಬೆಳವಣಿಗೆ ಎಂದು ಹೇಳಿದ್ದಾರೆ. ಜೊತೆಗೆ 2021ರ ಆರಂಭದ ಹೊತ್ತಿಗೆ ದೇಶದಲ್ಲಿ ಕರೋನಾ ಲಸಿಕೆ ಜನಬಳಕೆಗೆ ಲಭ್ಯವಾಗಬಹುದು ಎಂಬ ಮತ್ತೊಂದು ಸಂಗತಿಯನ್ನೂ ಸಚಿವರು ಘೋಷಿಸಿದ್ದಾರೆ.

ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?
ಕರೋನಾ ತಡೆಯುವಲ್ಲಿ ನಾವು ಮುಂದಿದ್ದೇವೆ ಎಂದ ಮೋದಿ ಮಾತು ಎಷ್ಟು ನಿಜ?

ಕೇಂದ್ರ ಸರ್ಕಾರ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳು ಹೇಳುತ್ತಿರುವ ಈ ಭರವಸೆಯ ಅಂಕಿಅಂಶಗಳನ್ನು ಇಟ್ಟುಕೊಂಡು ಹಲವು ಆರೋಗ್ಯ ತಜ್ಞರು ಕೂಡ ಇದೊಂದು ಆಶಾದಾಯಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇ ಹೊತ್ತಿಗೆ ನಿರಂತರ ಒಂದು ತಿಂಗಳ ಅವಧಿಯ ಸೋಂಕು ಪ್ರಮಾಣ ಮತ್ತು ಸಾವಿನ ಪ್ರಮಾಣದ ಕುಸಿತ ದೇಶದಲ್ಲಿ ಕರೋನಾ ಸೋಂಕಿನ ಏರುಗತಿ ಮುಗಿದುಹೋಗಿದೆ. ಇನ್ನೇನು ಕರೋನಾವನ್ನು ಮಣಿಸಿಬಿಟ್ಟೆವು. ಕರೋನಾ ಸಂಕಷ್ಟ ಮುಗಿದ ಅಧ್ಯಾಯ ಎಂದರ್ಥವಲ್ಲ. ವಾಸ್ತವವಾಗಿ ಸೋಂಕು ಇಳಿಕೆಯಾಗುತ್ತಿದೆ. ಸೋಂಕು ರೇಖೆ ನಿರಂತರ ಇಳಿಮುಖವಾಗಿ ಸಾಗುತ್ತಿದೆ ಎಂಬ ತಿರ್ಮಾನಕ್ಕೆ ಬರಲು ಇನ್ನೂ ಎರಡು ತಿಂಗಳ ಕಾಲ ಕಾಯಬೇಕಾಗಬಹುದು. ಆಗಲೂ ನಿರಂತರ ಇಳಿಕೆ ಕಾಯ್ದುಕೊಂಡರೆ ಮಾತ್ರ ಅದು ದೇಶದ ಜನರ ಮತ್ತು ಸರ್ಕಾರಗಳ ಕ್ರಮಗಳ ಫಲ ಎನ್ನಬಹುದು ಎಂದಿದ್ದಾರೆ.

ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?
ಜನರ ವಿಶ್ವಾಸ ಗಳಿಸುವ ಪಾರದರ್ಶಕ ವ್ಯವಸ್ಥೆ ಬರದೇ ಕರೋನಾಕ್ಕೆ ಕಡಿವಾಣ ಸಾಧ್ಯವಿಲ್ಲ!

ಈ ನಡುವೆ, ದೇಶಾದ್ಯಂತ ವಿವಿಧ ಹಬ್ಬ-ಉತ್ಸವಗಳ ಪರ್ವ ಇದೀಗ ಆರಂಭವಾಗಿದೆ. ಹಬ್ಬದ ಆಚರಣೆ, ಸಾಮೂಹಿಕ ಪೂಜೆ, ಉತ್ಸವ, ಹಬ್ಬದ ಖರೀದಿ ಮುಂತಾದ ವಿಷಯದಲ್ಲಿ ಜನ ಎಷ್ಟರಮಟ್ಟಿಗೆ ಸಂಯಮ ಕಾಯ್ದುಕೊಳ್ಳುತ್ತಾರೆ? ಎಷ್ಟರಮಟ್ಟಿಗೆ ಕರೋನಾ ತಡೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬುದು ಸೋಂಕಿನ ಏರಿಳಿಕೆಯ ಗತಿಯನ್ನು ನಿರ್ಧರಿಸಲಿದೆ. ಜೊತೆಗೆ ಚಳಿಗಾಲವೂ ಆರಂಭವಾಗುವುದರಿಂದ ಶೀತ ವಾತಾವರಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ ಎನ್ನಲಾಗುವ ವೈರಾಣು ಭವಿಷ್ಯ ಒಂದೆರಡು ತಿಂಗಳಲ್ಲಿ ಉಂಟುಮಾಡುವ ಪರಿಣಾಮಗಳನ್ನು ಕಾದುನೋಡಬೇಕಿದೆ ಎಂದೂ ಅವರು ಎಚ್ಚರಿಸಿದ್ದಾರೆ.

ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?
ಲಾಕ್ ಡೌನ್ ತಂದ ಅಪೌಷ್ಟಿಕತೆಯ ಆಪತ್ತಿನ ಎಚ್ಚರಿಕೆ ನೀಡಿದ ಯೂನಿಸೆಫ್

ಜೊತೆಗೆ ದೈನಿಕ ಪರೀಕ್ಷೆಗಳ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಭಾರತದಲ್ಲಿ ಕರೋನಾ ಪರೀಕ್ಷೆಗೆ ಬಳಸುತ್ತಿರುವ ಎರಡು ಮಾದರಿಗಳಲ್ಲಿ; ಆರ್ ಟಿ ಪಿಸಿಆರ್ ಮತ್ತು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆರ್ ಟಿ ಪಿಸಿಆರ್ ಪರೀಕ್ಷೆ ಹೆಚ್ಚು ವಿಶ್ವಾಸಾರ್ಹವಾಗಿದ್ದರೂ, ಅದರ ಫಲಿತಾಂಶಕ್ಕೆ ಹೆಚ್ಚು ಕಾಲಾವಧಿ ಬೇಕಾಗುತ್ತದೆ ಮತ್ತು ವೆಚ್ಚದ ವಿಷಯದಲ್ಲಿಯೂ ಅದು ದುಬಾರಿ. ಹಾಗಾಗಿ ತತಕ್ಷಣದ ಫಲಿತಾಂಶ ಸಿಗುವ ಮತ್ತು ತೀರಾ ಅಗ್ಗದ ಆಂಟಿಜನ್ ಪರೀಕ್ಷೆಯನ್ನೇ ಹೆಚ್ಚಾಗಿ ಮಾಡಲಾಗುತ್ತಿದೆ. ಆದರೆ, ಈ ಮೊದಲು, ಕರೋನಾ ಪ್ರಕರಣಗಳು ಅತಿ ಹೆಚ್ಚು ವರದಿಯಾಗುತ್ತಿದ್ದ ಸೆಪ್ಟೆಂಬರ್ ಎರಡನೇವಾರದ ವರೆಗೆ ದೇಶಾದ್ಯಂತ ಬಹುತೇಕ ಆರ್ ಟಿಪಿಸಿಆರ್ ಪರೀಕ್ಷೆಯನ್ನೇ ಹೆಚ್ಚಾಗಿ ಮಾಡಲಾಗುತ್ತಿತ್ತು. ಆರ್ ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಬಹುತೇಕ ನೂರಕ್ಕೆ ನೂರು ನಿಖರ. ಹಾಗಾಗಿ ಅದರಲ್ಲಿ ಸೋಂಕು ಪತ್ತೆ ಪ್ರಮಾಣ, ಪರೀಕ್ಷೆಗೊಳಗಾದವರ ಪೈಕಿ ಶೇ.20ರಷ್ಟಿತ್ತು.

ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?
ಕರೋನಾ ಅಪಾಯ: ದಿಢೀರ್ ಸಾವು ತಡೆಯಲು ಇನ್ನಾದರೂ ಸಿಗುವುದೇ ಗಮನ?

ಆದರೆ, ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ಪರೀಕ್ಷೆಯ ಫಲಿತಾಂಶ ಕೇವಲ ಶೇ.50ರಷ್ಟು ಮಾತ್ರ ನಿಖರತೆ ಹೊಂದಿದೆ. ಹಾಗಾಗಿ ಇದರಲ್ಲಿ ಪರೀಕ್ಷೆಗೊಳಗಾದವರ ಪೈಕಿ ಶೇ.6-7ರಷ್ಟು ಮಾತ್ರ ಸೋಂಕು ಪತ್ತೆಯಾಗುತ್ತಿದೆ. ಆಂಟಿಜನ್ ಪರೀಕ್ಷೆಗೊಳದಾದವರಿಗೆ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿ ಪಕ್ಕಾ ದೃಢಪಡಿಸಿಕೊಳ್ಳುವ ಪ್ರಮಾಣ ಕೂಡ ಕಡಿಮೆಯೇ. ಕೇವಲ ಸೋಂಕು ದೃಢಪಟ್ಟವರಿಗೆ ಮಾತ್ರ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ ವಿನಃ ಪರೀಕ್ಷೆಗೊಳಗಾದವರೆಲ್ಲರಿಗೂ ಅಲ್ಲ.

ಹಾಗಾಗಿ, ಭಾರತದ ಈಗಿನ ಕರೋನಾ ಪ್ರಕರಣಗಳ ಇಳಿಕೆಯ ಪ್ರಮಾಣದಲ್ಲಿ ಈ ರೀತಿಯ ಕೇವಲ ಶೇ.50ರಷ್ಟು ನಿಖರತೆ ಹೊಂದಿರುವ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಗಳ ಪಾಲೆಷ್ಟು ಮತ್ತು ನಿಜವಾಗಿಯೂ ಸೋಂಕು ಇಳಿಕೆಯಾದ ಪ್ರಮಾಣವೆಷ್ಟು ಎಂಬುದು ಗೊತ್ತಾಗಬೇಕಿದೆ. ಆಗ ಮಾತ್ರ ಈ ಅಂಕಿಅಂಶಗಳು ವಿಶ್ವಾಸಾರ್ಹವೆನಿಸುತ್ತವೆ ಎಂದು ಖ್ಯಾತ ವೈರಾಣುರೋಗ ತಜ್ಞ ಡಾ ಶಾಹೀದ್ ಜಮೀಲ್ ಹೇಳಿದ್ದಾರೆ.

ದೇಶದ ಕರೋನಾ ಪ್ರಕರಣ ಇಳಿಕೆ ನಿಜವಾಗಿಯೂ ಸಂಭ್ರಮದ ವಿಷಯವೆ?
ಮದುವೆಗೆ 50, ಸಿನಿಮಾ, ಕ್ಲಬ್ಬಿಗೆ ಸಾವಿರ ಮಂದಿ! ಸರ್ಕಾರದ ಎಡವಟ್ಟು ನಿಯಮ!

ಬಿಬಿಸಿಯೊಂದಿಗೆ ಮಾತನಾಡಿರುವ ಅವರು, “ದಿನನಿತ್ಯದ ಹೊಸ ಪ್ರಕರಣಗಳ ಮಾಹಿತಿಯೊಂದಿಗೆ ಸರ್ಕಾರ ಪರೀಕ್ಷೆಗಳ ಪೈಕಿ ಎಷ್ಟು ಆರ್ ಟಿ ಪಿಸಿಆರ್ ಪರೀಕ್ಷೆ ಮತ್ತು ಎಷ್ಟು ಆಂಟಿಜೆನ್ ಪರೀಕ್ಷೆಯ ಫಲಿತಾಂಶಗಳು ಎಂಬ ದತ್ತಾಂಶವನ್ನೂ ನೀಡಿದರೆ, ಆಗ ವಿಜ್ಞಾನಿಗಳು ನಿಖರವಾಗಿ ಏನಾಗುತ್ತಿದೆ ಎಂಬುದನ್ನು ಊಹಿಸಬಲ್ಲರು” ಎಂದಿದ್ದಾರೆ.

ಆದರೆ, ಸದ್ಯ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಆರ್ ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಎಷ್ಟು ಪ್ರಮಾಣದಲ್ಲಿ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿದೆ. ಹಾಗೂ ದಿನ ನಿತ್ಯ ವರದಿಯಾಗುವ ಸೋಂಕು ದೃಢ ಪ್ರಕರಣಗಳಲ್ಲಿ ಈ ಎರಡು ಪರೀಕ್ಷೆಗಳ ಪೈಕಿ ಯಾವುದರ ಪಾಲು ಎಷ್ಟು ಎಂಬು ವಿವರಗಳನ್ನು ಸರ್ಕಾರ ಯಾವುದೇ ಹಂತದಲ್ಲೂ ಬಹಿರಂಗಪಡಿಸುತ್ತಿಲ್ಲ ಎಂಬುದು ಗಮನಾರ್ಹ. ಜೊತೆಗೆ ಕಳೆದ ಕೆಲವು ದಿನಗಳಿಂದ ಜನರು ಸ್ವಯಂಪ್ರೇರಿತರಾಗಿ ಯಾವುದೇ ರೋಗ ಲಕ್ಷಣಗಳಿಲ್ಲದೆ ಇದ್ದರೂ ಪರೀಕ್ಷೆ ನಡೆಸಿಕೊಳ್ಳಲು ಅವಕಾಶ ನೀಡಲಾಗಿದೆ. ಹಾಗಾಗಿ ಪರೀಕ್ಷೆಗೊಳಗಾದವರ ಪೈಕಿ ಸೋಂಕಿತರಲ್ಲದವರ ಸಂಖ್ಯೆ ಕೂಡ ಹೆಚ್ಚಾಗುತ್ತಿರಬಹುದು ಎಂದೂ ಅಂದಾಜಿಸಲಾಗಿದೆ.

ಅದೇ ಹೊತ್ತಿಗೆ Antibody ಸಮೀಕ್ಷೆ ಮತ್ತು ಸಾಂಕ್ರಾಮಿಕದ ವಿವಿಧ ಮಾದರಿಗಳ ಪ್ರಕಾರ, ದೇಶದಲ್ಲಿ ಈಗಾಗಲೇ ಸುಮಾರು 12ರಿಂದ 13 ಕೋಟಿ ಮಂದಿ ಸೋಂಕಿತರಿರಬಹುದು ಎಂದು ಮಿಚಿಗನ್ ವಿವಿಯ ಬಯೋಸ್ಟ್ಯಾಟಿಟಿಕ್ಸ್ ಮತ್ತು ಎಪಿಡಮೋಲಜಿ ಪ್ರೊಫೆಸರ್ ಡಾ ಭ್ರಮರಾ ಮುಖರ್ಜಿ ಅಂದಾಜಿಸಿದ್ದಾರೆ ಎಂದು ವರದಿ ಹೇಳಿದೆ. ಅವರ ಪ್ರಕಾರ, ದೇಶದ ಶೇ.10ರಷ್ಟು ಮಂದಿ ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲೂ ದೇಶಾದ್ಯಂತ ನಡೆದ ಆಂಟಿಬಾಡಿ(ಪ್ರತಿಕಾಯ) ಪರೀಕ್ಷೆಯ ಫಲಿತಾಂಶ ಬರೋಬ್ಬರಿ 9 ಕೋಟಿ ಭಾರತೀಯರಲ್ಲಿ ಸೋಂಕು ಇರುವುದನ್ನು ಸಾಬೀತು ಮಾಡಿದೆ. ಅಂದರೆ, ಸರ್ಕಾರದ ಅಧಿಕೃತ ಅಂಕಿಅಂಶಗಳಿಗಿಂತ ಸುಮಾರು ಹದಿನೈದು ಪಟ್ಟು ಹೆಚ್ಚು ಜನರಿಗೆ ಸೋಂಕು ಇದೆ.

ಹಾಗಾಗಿ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಒದಗಿಸುವ ಅಂಕಿ-ಅಂಶಗಳು ಮತ್ತು ಅಂತಹ ಅಂಕಿಅಂಶಗಳನ್ನು ತನ್ನ ಮೂಗಿನ ನೇರಕ್ಕೆ ತಿರುಚಿ, ಲಾಭಕರ ಎನಿಸಿದ ಮಾಹಿತಿಯನ್ನು ಮಾತ್ರ ಪ್ರಚಾರ ಮಾಡಿ, ವಾಸ್ತವವಾಗಿ ಆತಂಕಕಾರಿಯಾದ ಮತ್ತು ಅಪಾಯಕಾರಿಯಾದ ಮಾಹಿತಿಯನ್ನು ಮುಚ್ಚಿಹಾಕುವ ಸಾಧ್ಯತೆಗಳೇ ಹೆಚ್ಚಿವೆ. ಇಂತಹ ಪರಿಸ್ಥಿತಿಯನ್ನು ಜನ ಅರೆಬರೆ ಮಾಹಿತಿ ಮತ್ತು ಸರ್ಕಾರದ ಹೇಳಿಕೆಗಳನ್ನು ನೆಚ್ಚಿ, ದೇಶ ಕರೋನಾ ಮುಕ್ತವಾಗುವತ್ತ ದಾಪುಗಾಲಿಟ್ಟಿದೆ. ಇನ್ನೇನು ಎಲ್ಲವೂ ನಿರಾಳ ಎಂಬ ಭಾವನೆ ತಳೆದರೆ ಅಪಾಯ ಕಟ್ಟಿಟ್ಟಬುತ್ತಿ. ಅದರಲ್ಲೂ ದಸರಾ, ದೀಪಾವಳಿ, ಕಾರ್ತೀಕ, ಕ್ರಿಸ್ ಮಸ್ ಉತ್ಸವಗಳ ಸಾಲು ಸಾಲು ಸಂಭ್ರಮದ ಹೊತ್ತಲ್ಲಿ ಸರ್ಕಾರ ಎಚ್ಚರಿಕೆಯಿಂದ ಇಂತಹ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಜನರಲ್ಲಿ ಉದಾಸೀನ, ಉಡಾಫೆ ಮನೋಭಾವ ತಲೆದೋರಿದರೆ, ಮುಂದಿನ ದಿನಗಳಲ್ಲಿ ಸೋಂಕು ಮತ್ತೆ ಅಷ್ಟೇ ವೇಗದಲ್ಲಿ ಏರಿಕೆಯಾಗಲಿದೆ. ಜೀವಕಂಟಕವಾಗಲಿದೆ ಎಂಬ ಎಚ್ಚರಿಕೆ ಇರಬೇಕು ಎಂದೂ ತಜ್ಞರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com