ಗಾಳಿಯಿಂದ ನೀರು ಉತ್ಪಾದನೆಯ ಮೋದಿ ಉಪಾಯ ಟೀಕೆಗೊಳಗಾಗಿದ್ದು ಏಕೆ?

ಒಂದು ರೀತಿಯಲ್ಲಿ ಮೋದಿಯವರ ಸಲಹೆ ತಾಂತ್ರಿಕವಾಗಿ ಒಂದು ಪ್ರಯೋಗವಾಗಿದ್ದರೂ, ಅದು ಹೊಸದಲ್ಲ ಮತ್ತು ವಾಸ್ತವವಾಗಿ ಜಾರಿಗೆ ತರಲು ಪ್ರಾಯೋಗಿಕವಾಗಿ ಸದ್ಯಕ್ಕಂತೂ ಕಷ್ಟಸಾಧ್ಯ. ಆ ಹಿನ್ನೆಲೆಯಲ್ಲಿ ರಾಹುಲ್ ಅವರ ವಿಡಂಬನೆಯನ್ನು ಕೂಡ ಸಾರಾಸಗಟಾಗಿ ತಳ್ಳಿ ...
ಗಾಳಿಯಿಂದ ನೀರು ಉತ್ಪಾದನೆಯ ಮೋದಿ ಉಪಾಯ ಟೀಕೆಗೊಳಗಾಗಿದ್ದು ಏಕೆ?

ಚರಂಡಿ ಗ್ಯಾಸಿನಿಂದ ಒಲೆ ಉರಿಸುವುದು, ಮೋಡದ ಮರೆಯಲ್ಲಿ ರಾಡಾರ್ ಕಣ್ತಪ್ಪಿಸಿ ಯುದ್ಧ ವಿಮಾನ ಹಾರಿಸುವುದು, ಡಿಜಿಟಲ್ ಕ್ಯಾಮರಾವೇ ಇರದ ಕಾಲದಲ್ಲಿ ಡಿಜಿಟಲ್ ಫೋಟೋ ತೆಗೆದು, ಇಂಟರ್ ನೆಟ್ ಇಲ್ಲದ ಕಾಲದಲ್ಲಿ ಆ ಫೋಟೋವನ್ನು ಇಮೇಲ್ ಮಾಡಿರುವುದು, ಮುಂತಾದ ಸಾಲುಸಾಲು ವಿಡಂಬನಾತ್ಮಕ ಸಾಹಸಗಳ ಬಳಿಕ ಪ್ರಧಾನಿ ಮೋದಿಯವರ ಮತ್ತೊಂದು ಉಪಾಯ ಈಗ ತೀವ್ರ ವಿಡಂಬನೆಗೆ ಒಳಗಾಗಿದೆ. ಅದು, ಟರ್ಬೈನ್ ಬಳಸಿ ಗಾಳಿಯಿಂದ ನೀರು ಮತ್ತು ಆಮ್ಲಜನಕ ತಯಾರು ಮಾಡುವ ಮೋದಿಯವರ ಹೊಸ ಐಡಿಯಾ!

ಡೆನ್ಮಾರ್ಕಿನ ಖ್ಯಾತ ಗಾಳಿಯಂತ್ರ(ಟರ್ಬೈನ್) ಉತ್ಪಾದಕ ಸಂಸ್ಥೆ ವಿಸ್ತಾ ವಿಂಡ್ ಸಿಸ್ಟಮ್ಸ್ ಸಿಇಒ ಹೆನ್ರಿಕ್ ಆಂಡರ್ಸನ್ ಜೊತೆಗಿನ ವೀಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಈ ಐಡಿಯಾ ಕೊಟ್ಟಿದ್ದಾರೆ. ನೀವು ಪವನ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ತಯಾರಿಕೆಯಲ್ಲಿ ಹೆಸರಾಗಿದ್ದೀರಿ. ಆದರೆ, ಈಗ ಜಗತ್ತಿಗೆ ಆಮ್ಲಜನಕ ಮತ್ತು ಶುದ್ಧ ಕುಡಿಯುವ ನೀರಿನ ಅಗತ್ಯ ಕೂಡ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ನೀವು ಹೆಚ್ಚು ತೇವಾಂಶಭರಿತ ಪ್ರದೇಶದಲ್ಲಿ ಗಾಳಿಯಿಂದ ನೀರನ್ನು ಉತ್ಪಾದಿಸುವ ಮತ್ತು ಅದೇ ಹೊತ್ತಿಗೆ ಆಮ್ಲಜನಕವನ್ನೂ ಉತ್ಪಾದಿಸುವ ಟರ್ಬೈನ್ ತಂತ್ರಜ್ಞಾನವನ್ನು ಏಕೆ ಶೋಧಿಸಬಾರದು ಎಂದು ಮೋದಿಯವರು ಆಂಡರ್ಸನ್ ಅವರಿಗೆ ಸಲಹೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗಾಳಿಯಲ್ಲಿರುವ ತೇವಾಂಶವನ್ನು ಟರ್ಬೈನ್ ಗಳು ಹೀರಿಕೊಂಡು, ಆವಿ ರೂಪದಲ್ಲಿ ಅದನ್ನು ಸಂಗ್ರಹಿಸಿದರೆ, ಬಳಿಕ ಅದನ್ನು ಸಾಂದ್ರೀಕರಿಸಿ ನೀರು ಪಡೆಯಬಹುದು. ಹಾಗೇ ಅದೇ ಹೊತ್ತಿಗೆ ಗಾಳಿಯಲ್ಲಿರುವ ಆಮ್ಲಜನಕವನ್ನು ಪ್ರತ್ಯೇಕಿಸಿ ಉಪ ಉತ್ಪನ್ನವಾಗಿ ಅದನ್ನು ಉತ್ಪಾದಿಸಬಹುದು. ಆ ಮೂಲಕ ಏಕಕಾಲಕ್ಕೆ ಪವನ ವಿದ್ಯುತ್, ನೀರು ಮತ್ತು ಆಮ್ಲಜನಕ ಸೇರಿದಂತೆ ಮೂರೂ ಅತ್ಯಗತ್ಯ ವಸ್ತುಗಳನ್ನು ಪಡೆಯಬಹುದು ಎಂದು ಪ್ರಧಾನಿ ಮೋದಿ ವಿವರಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಆಂಡರ್ಸನ್, ನಿಮ್ಮ ಉಪಾಯಗಳು ಅದ್ಭುತವಾಗಿವೆ. ತೀವ್ರ ಆಸಕ್ತಿಯ ನಿಮ್ಮ ಉಪಾಯಗಳನ್ನು ಕಾರ್ಯಗತಗೊಳಿಸಲು ನಮ್ಮ ಎಂಜಿನಿಯರುಗಳು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದರು.

ಆದರೆ, ವೀಡಿಯೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಾರತಕ್ಕೆ ಇರುವ ನಿಜವಾದ ಅಪಾಯ ನಮ್ಮ ಪ್ರಧಾನಿಗೆ ಬಹಳಷ್ಟು ಅರ್ಥವಾಗುವುದೇ ಇಲ್ಲ ಎಂಬುದಲ್ಲ. ಬದಲಾಗಿ ಆ ಸತ್ಯವನ್ನು ಅವರ ಹಿಂದೆ ಮುಂದೆ ಇರುವ ಯಾರೂ ಅವರಿಗೆ ಹೇಳುವ ಧೈರ್ಯ ಹೊಂದಿಲ್ಲ ಎಂಬುದು ನಿಜವಾದ ಅಪಾಯ” ಎಂದು ವ್ಯಂಗ್ಯವಾಡಿದ್ದರು.

ಆ ಬಳಿಕ ಈ ವಿಷಯ ಪ್ರಧಾನಿಗಳ ಈ ಹಿಂದಿನ ಹಲವು ಇಂತಹದ್ದೇ ಕ್ರಾಂತಿಕಾರಿ ಉಪಾಯಗಳಂತೆಯೇ ಮತ್ತೊಂದು ಎಂದು ಟ್ರೋಲ್ ಗೆ ಒಳಗಾಗಿತ್ತು. ಈ ಮೊದಲು ಗುಜರಾತಿನ ವಡೋದರದಲ್ಲಿ ಇಲ್ಲದ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದಾಗ ಅಲ್ಲಿನ ಗಟಾರಾಕ್ಕೇ ಪೈಪ್ ಹಾಕಿ ಅದನ್ನು ಚಹಾ ಮಾಡುವ ಸ್ಟೌವಿಗೆ ಸಂಪರ್ಕಿಸಿ, ಗಟಾರಾದ ಗ್ಯಾಸಿನಲ್ಲಿಯೇ ಚಹಾ ಕುದಿಸಿ ಮಾರುತ್ತಿರುವ ಬಗ್ಗೆ ಹೇಳಿದ್ದ ಕ್ರಾಂತಿಕಾರಕ ಉಪಾಯ, ಕಳೆದ ವರ್ಷ ಪಾಕಿಸ್ತಾನದ ಮೇಲಿನ ಸರ್ಜಿಕಲ್ ದಾಳಿ ವೇಳೆ ಸೇನಾ ಕಾರ್ಯಾಚರಣೆಯನ್ನು ವಿವರಿಸುವಾಗ ಮೋಡ ಕವಿದ ಹೊತ್ತಲ್ಲಿ ರಾತ್ರಿ ಪಾಕಿಸ್ತಾನದ ರಾಡಾರ್ ಗಳಿಗೆ ನಮ್ಮ ವಿಮಾನ ಕಣ್ಣಿಗೆ ಬೀಳುವುದಿಲ್ಲ. ಹಾಗಾಗಿ ಮೋಡ ಕವಿದಾಗ ದಾಳಿ ಮಾಡಿ ಎಂದು ತಾವೇ ಸೇನಾಧಿಕಾರಿಗಳಿಗೆ ಖುದ್ದು ಸಲಹೆ ನೀಡಿದ್ದಾಗಿ ಹೇಳಿದ ಮತ್ತೊಂದು ಕ್ರಾಂತಿಕಾರಕ ಉಪಾಯ, ಜೊತೆಗೆ 1980ರ ದಶಕದಲ್ಲಿ ದೇಶದಲ್ಲಿ ಇಂಟರ್ ನೆಟ್ ಮತ್ತು ಡಿಜಿಟಲ್ ಕ್ಯಾಮರಾಗಳೇ ಇಲ್ಲದ ಕಾಲದಲ್ಲಿ ಡಿಜಿಟಲ್ ಕ್ಯಾಮರಾದಲ್ಲಿ ಆಡ್ವಾಣಿಯವರ ಫೋಟೊ ತೆಗೆದು ತಾವೇ ಸ್ವತಃ ಅದನ್ನು ಅವರಿಗೆ ಇಮೇಲ್ ಮಾಡಿದ್ದಾಗಿ ಹೇಳಿದ ಮತ್ತೊಂದು ಮಹೋನ್ನತ ಸಾಧನೆಯಂತಹ ಹಲವು ಅಚ್ಚರಿಗಳ ಸಾಲಿಗೆ ಇದೂ ಸೇರಿದೆ ಎಂಬ ಟೀಕೆಗಳೂ ವ್ಯಕ್ತವಾಗಿದ್ದವು.

ಅದರ ಬೆನ್ನಲ್ಲೇ ಬಿಜೆಪಿಯ ಐಟಿ ಸೆಲ್ ಮತ್ತು ಕೆಲವು ಸಚಿವರು ಮೋದಿಯವರ ಐಡಿಯಾವನ್ನು ಸಮರ್ಥಿಸಿ ಕೆಲವು ಹಳೆಯ ವರದಿಗಳನ್ನು ಉಲ್ಲೇಖಿಸಿ, ಗಾಳಿಯಿಂದ ವಿದ್ಯುತ್ ಮಾತ್ರವಲ್ಲದೆ ನೀರು ತಯಾರಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ನೀವು ದಯವಿಟ್ಟು ಈ ವರದಿಗಳನ್ನು ಓದಿ, ಅರ್ಥಮಾಡಿಕೊಳ್ಳಬಲ್ಲಿರಿ ಎಂದೇನೂ ನಮಗೆ ಭರವಸೆ ಇಲ್ಲ ಎಂದು ಮೂದಲಿಸಿದ್ದರು. ಜೊತೆಗೆ ಕೇಂದ್ರ ಸರ್ಕಾರದ ಮುಂಚೂಣಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್(ಸಿಎಸ್ ಐಆರ್) ಕೂಡ ಟ್ವೀಟ್ ಮಾಡಿ, ಮೋದಿಯವರ ಸಲಹೆ ಅವಾಸ್ತವವೇನಲ್ಲ. ಈಗಾಗಲೇ ಸಾಂದ್ರೀಕರಣದ ಮೂಲಕ ಗಾಳಿಯಿಂದ ನೀರನ್ನು ಬೇರ್ಪಪಡಿಸುವ ಜನರೇಟರ್ ಮಾದರಿಯ ತಂತ್ರಜ್ಞಾನ ಪ್ರಯೋಗವಾಗಿದೆ. ಈಗಾಗಲೇ ಹೈದರಾಬಾದ್ ಮೂಲದ ಐಐಸಿಟಿ ಮತ್ತು ಮೈತ್ರಿ ಆಕ್ವಾಟೆಕ್ ಎಂಬ ಖಾಸಗೀ ಕಂಪನಿ ಈ ತಾಂತ್ರಿಕತೆಯಲ್ಲಿ ನೀರು ಉತ್ಪಾದಿಸುವ ‘ಮೇಘಧೂತ್’ ಯೋಜನೆಗೆ ಪರಸ್ಪರ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿತ್ತು.

ಜೊತೆಗೆ ಭೂ ವಿಜ್ಞಾನ ಸಚಿವಾಲಯ ಮತ್ತು ಅದರ ಕಾರ್ಯದರ್ಶಿ ಕೂಡ ಪ್ರತ್ಯೇಕ ಟ್ವೀಟ್ ಮಾಡಿ, ಅಧಿಕ ತೇವಾಂಶದ ಗಾಳಿಯಿಂದ ತೀರ ಪ್ರದೇಶದಲ್ಲಿ ನೀರು ಮತ್ತು ಆಮ್ಲಜನಕ ಪ್ರತ್ಯೇಕಿಸುವ ತಂತ್ರಜ್ಞಾನ ಪ್ರಾಯೋಗಿಕವಾಗಿ ಸಾಧ್ಯವಿದೆ. ಸಮಾಜದ ಅನುಕೂಲಕ್ಕಾಗಿ ಈ ಸವಾಲನ್ನು ಸಚಿವಾಲಯ ಸ್ವೀಕರಿಸಲಿದೆ ಎಂದು ಹೇಳಿದ್ದರು.

ಪ್ರಧಾನಿ ಮೋದಿಯವರ ಐಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಪಹಾಸ್ಯ ಮತ್ತು ಟೀಕೆಗೆ ಒಳಗಾಗುತ್ತಿರುವ ನಡುವೆಯೇ, ರಾಹುಲ್ ಗಾಂಧಿಯವರನ್ನೂ ಭರ್ಜರಿ ಟ್ರೋಲ್ ಮಾಡಲಾಗುತ್ತಿದೆ. ‘ಆಫ್ರಿಕಾದ ಹಳ್ಳಿಗಳಲ್ಲಿ ತೀರಾ ಗುಡ್ಡಗಾಡು ಜನ ಕೂಡ ಗಾಳಿಯಿಂದ ತಮ್ಮದೇ ಆದ ರೀತಿಯಲ್ಲಿ ನೀರು ಉತ್ಪಾದಿಸಿಕೊಳ್ಳುತ್ತಿದ್ದಾರೆ. ಇದನ್ನು ಪುರಸ್ಕರಿಸಲು ಸಿಎಸ್ ಐಆರ್ ನಂತಹ ಉನ್ನತ ಸಂಸ್ಥೆಯ ವಿಜ್ಞಾನಿಗಳೇ ಬೇಕಾಗಿಲ್ಲ’ ಎಂದು ರಾಹುಲ್ ಗಾಂಧಿಯ ಕಾಲು ಎಳೆದಿದ್ದರೆ, ಮತ್ತೊಂದು ಕಡೆ ‘ಗಾಳಿಯಂತ್ರಗಳ ಭಾಹುಗಳಿಗೆ ಸ್ಟೀಲ್ ಪ್ಲೇಟುಗಳನ್ನು ಜೋಡಿಸಿದರೆ, ಕರೋನಾವನ್ನು ಕೂಡ ಅದು ಬೆದರಿಸಿ ಓಡಿಸಬಲ್ಲದು. ಇಂತಹ ಅದ್ಭುತ ಯೋಚನೆ ನಮ್ಮ ಮೋದಿಯವರಿಗೆ ಮಾತ್ರ ಬರಲು ಸಾಧ್ಯ’ ಎಂದು ತಿರುಗೇಟು ನೀಡಲಾಗುತ್ತಿದೆ.

ಒಂದು ಕಡೆ ಪ್ರಧಾನಿಯವರ ಉಪಾಯದ ಪರ ಸರ್ಕಾರಿ ಸಂಸ್ಥೆಗಳು ಮತ್ತು ಅವರದೇ ಪಕ್ಷ ಮತ್ತು ಸಂಪುಟದ ಕಡೆಯಿಂದ ಭರಪೂರ ಬೆಂಬಲ ಮತ್ತು ಪ್ರಾಯೋಗಿಕವಾಗಿ ಅಂತಹ ತಂತ್ರಜ್ಞಾನ ಈಗಾಗಲೇ ಜಾರಿಯಲ್ಲಿದೆ ಎಂಬ ಹೇಳಿಕೆಗಳು ಬರುತ್ತಿದ್ದರೆ, ಮತ್ತೊಂದು ಕಡೆ ಸ್ವತಂತ್ರ ವಿಜ್ಞಾನಿಗಳು ಮತ್ತು ಸಂಶೋಧಕರು, ಇಂತಹ ತಂತ್ರಜ್ಞಾನ ಹಲವು ವರ್ಷಗಳ ಹಿಂದಿನಿಂದಲೂ ಇದ್ದರೂ, ಅದು ಪ್ರಾಯೋಗಿಕವಾಗಿ ಸಾಧುವಲ್ಲ ಮತ್ತು ವಾಸ್ತವವಾಗಿ ತೀರಾ ದುಬಾರಿ ಎಂಬ ಕಾರಣಕ್ಕೆ ಅವುಗಳೆಲ್ಲಾ ಕೇವಲ ತಾಂತ್ರಿಕ ಪ್ರಯೋಗಗಳಾಗಿ ಮಾತ್ರ ಉಳಿದಿವೆ. ಔದ್ಯಮಿಕವಾಗಿ ಅಂತಹ ಪ್ರಯೋಗಳು ಅನ್ವಯವಾಗಬೇಕಾದರೆ ಕೇವಲ ವೈಜ್ಞಾನಿಕ ಪರಿಶೋಧನೆಯ ತಾಂತ್ರಿಕತೆ ಮಾತ್ರ ಸಾಲದು. ಜೊತೆಗೆ ಹಣಕಾಸು ಸೇರಿದಂತೆ ವಿವಿಧ ಆಯಾಮಗಳಿಂದ ಅದು ಪ್ರಾಯೋಗಿಕವಾಗಿ ಸಾಧ್ಯವೂ, ಸಾಧುವೂ ಆಗಿರಬೇಕಾಗುತ್ತದೆ. ಸದ್ಯಕ್ಕಂತೂ ಅಂತಹ ಸಾಧ್ಯತೆಯಾಗಲೀ, ಪ್ರಾಯೋಗಿಕ ಅನುಕೂಲಕಾರಿ ತಂತ್ರಜ್ಞಾನವಾಗಲೀ ಇಲ್ಲ ಎಂದಿದ್ದಾರೆ.

ಅನ್ವಯಿಕ ತಂತ್ರಜ್ಞಾನ ವಲಯದ ಪನಾಶೆ ಡಿಜಿಲೈಫ್ ಲಿ.ನ ಎಂಡಿ ಅಮಿತ್ ರಾಂಭಿಯಾ, “ತೇವಾಂಶದ ಸಾಂದ್ರೀಕರಣ ಎಂಬುದು ಟರ್ಬೈನ್ ಪಾಲಿನ ಶತ್ರು” ಎಂದು ಹೇಳುತ್ತಾ, “ಟರ್ಬೈನ್ ಪವನಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಅದರ ಬ್ಲೇಡು(ಭಾಹು)ಗಳು ಕೂಡ ಅದಕ್ಕೆಂದೇ ವಿನ್ಯಾಸಗೊಂಡಿದ್ದು, ಅವು ತೇವಾಂಶವನ್ನು ನಿರಂತರವಾಗಿ ಹೊರಹಾಕುತ್ತವೆ. ಒಂದು ವೇಳೆ ತೇವಾಂಶ ಅವುಗಳ ಒಳಗೆ ಹೆಚ್ಚಾದಲ್ಲಿ ಅದು ಆ ಬಾಹುಗಳಿಗೇ ಅಪಾಯಕಾರಿ. ಪವನ ವಿದ್ಯುತ್ ಟರ್ಬೈನ್ ಹೊರತುಪಡಿಸಿ ಬೇರೆ ತಂತ್ರಜ್ಞಾನದಲ್ಲಿ ಗಾಳಿಯಿಂದ ಕುಡಿಯುವ ನೀರು ಉತ್ಪಾದಿಸುವ ಪ್ರಯತ್ನಗಳು ನಡೆದಿವೆ. ಅಂತಹ ಕೆಲವು ಸಣ್ಣಮಟ್ಟದ ಮತ್ತು ಕಡಿಮೆ ವೆಚ್ಚದ ಪ್ರಯತ್ನಗಳು ಇರುವಾಗ ಪ್ರತಿ ಟರ್ಬೈನ್ ಗೆ ಸುಮಾರು 5-6 ಕೋಟಿಯಷ್ಟು ವೆಚ್ಚ ತಗಲುವ ದುಬಾರಿ ಪ್ರಯೋಗಗಳನ್ನು ಯಾಕೆ ಮಾಡಬೇಕು? ಎಂದೂ ಪ್ರಶ್ನಿಸಿದ್ದಾರೆ.

ಹಾಗೇ ಜಗತ್ತಿನಲ್ಲೇ ಟರ್ಬೈನ್ ಮೂಲಕ ಗಾಳಿಯಿಂದ ತೇವಾಂಶ ಬೇರ್ಪಡಿಸುವ ನೀರನ್ನು ಉತ್ಪಾದಿಸುವ ಔದ್ಯಮಿಕ ಪ್ರಯತ್ನ ಕೆಲವು ವರ್ಷಗಳ ಹಿಂದೆ ಅಬುದಾಬಿಯಲ್ಲಿ ನಡೆದಿತ್ತು. 2012ರಲ್ಲಿ ಇವೊಲೆ ವಾಟರ್ ಎಂಬ ಫ್ರೆಂಚ್ ಕಂಪನಿ ಅಂತಹ ಪ್ರಯತ್ನ ನಡೆಸಿ, 24 ಮೀಟರ್ ಎತ್ತರದ ಟರ್ಬೈನ್ ಮೂಲಕ ಮರುಭೂಮಿಯಲ್ಲಿ ಗಂಟೆಗೆ 62 ಲೀಟರ್ ನೀರು ಉತ್ಪಾದನೆ ಮಾಡಲಾಗಿತ್ತು. ಆದರೆ, ವಿದ್ಯುತ್ ಮತ್ತು ನಿರ್ವಹಣೆಯ ಅಧಿಕ ವೆಚ್ಚದ ಕಾರಣಕ್ಕೆ ನೀರು ಉತ್ಪಾದನೆ ತೀರಾ ದುಬಾರಿಯಾದ ಹಿನ್ನೆಲೆಯಲ್ಲಿ ಕಂಪನಿ ಉತ್ಪಾದನೆ ಸ್ಥಗಿತಗೊಳಿಸಿ ಹಲವು ವರ್ಷಗಳಾಗಿವೆ. ಕಂಪನಿ ಈಗ ಆ ಉದ್ಯಮವನ್ನೇ ಕೈಬಿಟ್ಟಿದೆ ಎಂದು ‘ದ ಹಿಂದೂ’ ವರದಿ ಹೇಳಿದೆ. ಹಾಗಾಗಿ ಮೋದಿಯವರ ಉಪಾಯ ಈವರೆಗೂ ಕೇವಲ ತಾಂತ್ರಿಕ ಪ್ರಯೋಗವಾಗಿ ಯಶಸ್ವಿಯಾಗಿದೆಯೇ ವಿನಃ ವ್ಯವಹಾರಿಕವಾಗಿ, ಉದ್ಯಮವಾಗಿ ಯಶಸ್ಸು ಕಂಡಿಲ್ಲ!

ಹಾಗಾಗಿ ಒಂದು ರೀತಿಯಲ್ಲಿ ಮೋದಿಯವರ ಸಲಹೆ ತಾಂತ್ರಿಕವಾಗಿ ಒಂದು ಪ್ರಯೋಗವಾಗಿದ್ದರೂ, ಅದು ಹೊಸದಲ್ಲ ಮತ್ತು ವಾಸ್ತವವಾಗಿ ಜಾರಿಗೆ ತರಲು ಪ್ರಾಯೋಗಿಕವಾಗಿ ಸದ್ಯಕ್ಕಂತೂ ಕಷ್ಟಸಾಧ್ಯ. ಆ ಹಿನ್ನೆಲೆಯಲ್ಲಿ ರಾಹುಲ್ ಅವರ ವಿಡಂಬನೆಯನ್ನು ಕೂಡ ಸಾರಾಸಗಟಾಗಿ ತಳ್ಳಿಹಾಕಲಾಗದು!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com