ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?

ದೇಶದ ಜನರ ಜೀವರಕ್ಷಣೆಯ ನಿಟ್ಟಿನಲ್ಲಿ ಮಾಡಲೇಬೇಕಾದ ಕೆಲಸಗಳನ್ನು ಮಾಡದೆ, ಹೊಣೆಗೇಡಿತನವನ್ನು ಮುಚ್ಚಿಕೊಳ್ಳಲು ಜನಪ್ರಿಯ ಪ್ರಚಾರದ ಮೊರೆಹೋಗಲಾಗುತ್ತಿದೆ. ಚಪ್ಪಾಳೆ, ಶಂಕ-ಜಾಗಟೆ ಬಾರಿಸುವುದು, ದೀಪ ಹಚ್ಚುವುದು ಮುಂತಾದ ಪ್ರದರ್ಶನಗಳ ಬಳಿಕ ಈಗ ‘ಕೋ ...
ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
Image Courtesy: The Print

ಕರೋನಾ ಪ್ರಕರಣಗಳ ಭಾರೀ ಏರಿಕೆಯ ಮೂಲಕ ಭಾರತ ‘ವಿಶ್ವಗುರು’ವಾಗುವತ್ತ ದಾಪುಗಾಲಿಡುತ್ತಿರುವ ಹೊತ್ತಲ್ಲಿ ಪ್ರಧಾನಿ ಮೋದಿಯವರು ಕೋವಿಡ್-19ರ ನಿಯಂತ್ರಣಕ್ಕಾಗಿ ಜನಾಂದೋಲನಕ್ಕೆ ಕರೆ ನೀಡಿದ್ದಾರೆ.

ಕೈತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವುದನ್ನು ದೇಶದ ಜನಮಾನಸದಲ್ಲಿ ರೂಢಿಗೊಳಿಸಲು ಮತ್ತು ಆ ಮೂಲಕ ಕರೋನಾ ವೈರಾಣುವಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಈ ಹಂತದಲ್ಲಿ ಬದುಕಿಗೆ ಅನಿವಾರ್ಯ ಎಂಬ ಹಿನ್ನೆಲೆಯಲ್ಲಿ ಆ ಕುರಿತು ಸಾಮೂಹಿಕ ಜನಜಾಗೃತಿ ಉದ್ದೇಶದಿಂದ ಈ ಜನಾಂದೋಲನಕ್ಕೆ ಕರೆ ನೀಡುತ್ತಿರುವುದಾಗಿ ಮೋದಿ ಹೇಳಿದ್ದಾರೆ. “ಕರೋನಾ ವಿರುದ್ಧ ಒಂದಾಗಿ ಹೋರಾಡೋಣ. ಮಾಸ್ಕ್ ಧರಿಸುವುದು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಪರಸ್ಪರ ಕನಿಷ್ಟು ಎರಡು ಗಜ ಅಂತರ ಕಾಯ್ದುಕೊಳ್ಳುವುದನ್ನು ಮರೆಯದಿರೋಣ” ಎಂದು ಪ್ರಧಾನಿ ದೇಶದ ಜನತೆಗೆ ಕರೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೋದಿಯವರ ಈ ಜನಾಂದೋಲನದ ಕರೆಗೆ ಪೂರಕವಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ದನಿ ಗೂಡಿಸಿದ್ದು, “ಮಾಸ್ಕ್, ‘ಸಾಮಾಜಿಕ ಅಂತರ’ ಮತ್ತು ಪದೇಪದೆ ಕೈತೊಳೆದುಕೊಳ್ಳುವುದು ಮಾತ್ರ ಸದ್ಯಕ್ಕೆ ಜೀವ ಸುರಕ್ಷತೆಗೆ ಇರುವ ಏಕೈಕ ಅಸ್ತ್ರಗಳು. ಕೋವಿಡ್-19 ವ್ಯಾಕ್ಸಿನ್ ಲಭ್ಯವಿಲ್ಲದ ಈ ಹೊತ್ತಿನಲ್ಲಿ ಈ ಅಸ್ತ್ರಗಳನ್ನು ಹೊರತುಪಡಿಸಿ ಜೀವರಕ್ಷಣೆಗೆ ಬೇರೆ ದಾರಿ ಇಲ್ಲ” ಎಂದು ಹೇಳಿದ್ದಾರೆ.

ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ಜನತೆಯಲ್ಲಿ ಕೋವಿಡ್-19 ಶಿಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಈ ಜನಾಂದೋಲನ ಅಭಿಯಾನ ಆರಂಭಿಸುತ್ತಿದ್ದು, ದೇಶದ ಸೆಲೆಬ್ರಿಟಿಗಳು, ಮಾಧ್ಯಮಗಳು ಸೇರಿದಂತೆ ಸಾಧ್ಯವಿರುವ ಜನಪ್ರಿಯ ಪ್ರಚಾರ ಮತ್ತು ಜಾಗೃತಿ ಮಾಧ್ಯಮಗಳನ್ನು ಬಳಸಿಕೊಂಡು ಆ ಜನಾಂದೋಲನ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಕರೋನಾ ಸಂಕಷ್ಟ: ಜನರ ಜೀವಕ್ಕೇ ಸಂಚಕಾರವಾಗುತ್ತಿವೆ ಸರ್ಕಾರದ ಸುಳ್ಳುಗಳು!

ಈ ನಡುವೆ ದೇಶದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 69 ಲಕ್ಷ ಮೀರಿದ್ದು, ಸಾವಿನ ಸಂಖ್ಯೆ ಕೂಡ ಒಂದು ಲಕ್ಷ ಮೀರಿದೆ. ಅಧಿಕೃತವಾಗಿ ಸರ್ಕಾರದ ಅಂಕಿಅಂಶಗಳು ಇವು. ಆದರೆ, ವಾಸ್ತವವಾಗಿ ದೇಶದಲ್ಲಿ ಕರೋನಾ ಅನಾಹುತಗಳು ಇದರ ಹತ್ತಾರು ಪಟ್ಟು ಹೆಚ್ಚಿವೆ. ಅದರಲ್ಲೂ ಮುಖ್ಯವಾಗಿ 50 ವರ್ಷ ಮೇಲ್ಪಟ್ಟ ಮತ್ತು ವಿವಿಧ ಮಾರಕ ರೋಗಗಳಿಂದ ಬಳಲುತ್ತಿರುವವರ ಪಾಲಿಗೆ ಈ ಮಹಾಮಾರಿ ತಂದೊಡ್ಡಿರುವ ಅಪಾಯಗಳನ್ನು ಈವರೆಗೆ ಸರ್ಕಾರವಾಗಲೀ, ಸರ್ಕಾರಿ ವೈದ್ಯಕೀಯ ಸಂಸ್ಥೆಗಳಾಗಲೀ ಅಧ್ಯಯನಕ್ಕೆ ಒಳಪಡಿಸಿದ ಉದಾಹರಣೆಗಳಿಲ್ಲ. ಮೇನಲ್ಲಿ ಲಾಕ್ ಡೌನ್ ತೆರವುಗೊಳಿಸಿದ ಬಳಿಕ ನಾಲ್ಕೂವರೆ ತಿಂಗಳಲ್ಲಿ ದೇಶದಲ್ಲಿ ಆಗಿರುವ ಹೃದಯಾಘಾತದ ಸಾವುಗಳ ಕುರಿತ ಸರಿಯಾದ ವಿಶ್ಲೇಷಣೆ ನಡೆದು ವಿವರಗಳು ಬಹಿರಂಗವಾದರೆ, ದೇಶದ ಕರೋನಾ ಸಾವಿನ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಲಿದೆ ಎಂಬುದು ವೈದ್ಯಕೀಯ ರಂಗದ ತಜ್ಞರೇ ವ್ಯಕ್ತಪಡಿಸುವ ಆತಂಕ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ದಾಸ್ತಾನಿರುವ “ಧನ-ಧಾನ್ಯ” ಬಳಸಿಕೊಂಡು ಪ್ರಧಾನಿ ಮೋದಿ ಜನರ ಸಂಕಷ್ಟ ನಿವಾರಿಸುವರೇ?

ರೋಗ ಈಗಾಗಲೇ ದೇಶದಲ್ಲಿ ಸಮುದಾಯಿಕ ಸೋಂಕಾಗಿ ಮಾರ್ಪಟ್ಟಿದೆ ಮತ್ತು ಈ ಹಂತದಲ್ಲಿ ಸೋಂಕಿನ ಆರಂಭದ ಹೊತ್ತಲ್ಲಿ ಅದರ ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿರ್ಣಾಯಕ ಕ್ರಮಗಳಾದ ಸಾಮೂಹಿಕ ಕರೋನಾ ಪರೀಕ್ಷೆ, ರೋಗಲಕ್ಷಣರಹಿತ ಸೋಂಕಿತರ ಚಿಕಿತ್ಸೆ ಮುಂತಾದ ಕ್ರಮಗಳು ನಿಷ್ಪ್ರಯೋಜಕ. ಬದಲಾಗಿ ರೋಗ ಲಕ್ಷಣವಿರುವ ಸೋಂಕಿತರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ತೀವ್ರ ಅನಾರೋಗ್ಯಕ್ಕೀಡಾಗುವ ಸೋಂಕಿತರಿಗೆ ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಅಗತ್ಯ ಆರೋಗ್ಯ ಮತ್ತು ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳನ್ನು ಖಾತರಿಪಡಿಸುವುದು ಈ ಹಂತದಲ್ಲಿ ನಿರ್ಣಾಯಕ. ಆ ನಿಟ್ಟಿನಲ್ಲಿ ಕನಿಷ್ಟ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಕರೋನಾ ಕ್ಲಿನಿಕ್ ಮತ್ತು ಕನಿಷ್ಟ ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಬೇಕಿದೆ ಎಂಬುದು ತಜ್ಞರ ಸಲಹೆ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಕರೋನಾ ಕುರಿತ ಸುಳ್ಳು ಮಾಹಿತಿಗಳ ಕಾಟ; ದಿನ ಪತ್ರಿಕೆಗಳಿಗೆ ಸಂಕಷ್ಟ

ಆದರೆ, ಪ್ರಧಾನಿ ಮೋದಿಯವರ ಸರ್ಕಾರ ಮಾರ್ಚ್ 24ರಂದು ಮೊಟ್ಟಮೊದಲ ಬಾರಿಗೆ ಕರೋನಾ ನಿಯಂತ್ರಣದ ಸರ್ಕಾರಿ ಕ್ರಮವಾಗಿ ಲಾಕ್ ಡೌನ್ ಹೇರಿದ ಕ್ಷಣದಿಂದ ಈವರೆಗೂ ಬಹುತೇಕ ಆದ್ಯತೆ ನೀಡುತ್ತಿರುವುದು ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ‘ಸಾಮಾಜಿಕ ಅಂತರ’(ವಾಸ್ತವವಾಗಿ ಅದು ಭೌತಿಕ ಅಂತರ ಎಂಬುದು ಸರಿಯಾದ ಬಳಕೆ, ಆದರೆ, ಅಸ್ಪೃಶ್ಯತೆ ಆಚರಣೆಯಂತಹ ಅಮಾನವೀಯ ವ್ಯವಸ್ಥೆಯನ್ನು ಪ್ರತಿಪಾದಿಸಿದ ಮನುವಾದದ ವಕ್ತಾರಿಕೆ ನಡೆಸುವ ಬಿಜೆಪಿಗೆ ಸಮಕಾಲೀನ ಅಸ್ಪೃಶ್ಯತೆಯ ಸಮಾನಾರ್ಥಕ ಪದ ಸಾಮಾಜಿಕ ಅಂತರವೇ ಹೆಚ್ಚು ಅಪ್ಯಾಯಮಾನ!) ದಂತಹ ವಿಷಯಗಳಿಗೇ ವಿನಃ, ವಾಸ್ತವವಾಗಿ ಸಾಂಕ್ರಾಮಿಕ ದೇಶವಿಡೀ ಹರಡಿರುವಾಗ ಅದರಿಂದ ಜೀವಗಳನ್ನು ರಕ್ಷಿಸುವ ವಾಸ್ತವಿಕ ಕ್ರಮಗಳ ಬಗ್ಗೆಯಲ್ಲ ಎಂಬುದನ್ನು ದೇಶದ ವೈದ್ಯಕೀಯ ವಲಯದ ಸ್ಥಿತಿಗತಿಯೇ ಸಾರಿಹೇಳುತ್ತಿದೆ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಕರೋನಾ ಅಪಾಯ: ದಿಢೀರ್ ಸಾವು ತಡೆಯಲು ಇನ್ನಾದರೂ ಸಿಗುವುದೇ ಗಮನ?

ಒಂದು ಕಡೆ ವೇತನ ಕಡಿತ ಮತ್ತು ವೇತನ ವಿಳಂಬದ ವಿರುದ್ಧ ಕರೋನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿರುವ ಸರ್ಕಾರಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ, ಧರಣಿ ನಡೆಸುತ್ತಿರುವ ಸುದ್ದಿಗಳೂ ನಿತ್ಯ ಒಂದಿಲ್ಲ ಒಂದು ಭಾಗದಿಂದ ವರದಿಯಾಗುತ್ತಲೇ ಇವೆ. ಮತ್ತೊಂದು ಕಡೆ ಸಕಾಲದಲ್ಲಿ ವೆಂಟಿಲೇಟರ್ ಸಿಗದೆ, ವಾರ್ಡ್ ಸಿಗದೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಎಡತಾಕುವ ರೋಗಿಗಳು ಸಾವು ಕಾಣುತ್ತಿರುವುದಂತೂ ನಿತ್ಯದ ಮಾಮೂಲಿ ಸಂಗತಿ ಎಂಬಷ್ಟು ಸರ್ವೇಸಾಮಾನ್ಯವಾಗಿದೆ. ಇಂತಹ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ಕಳೆದ ಆರು ತಿಂಗಳಲ್ಲಿ ಮೋದಿಯವರ ಸರ್ಕಾರ ಏನು ಮಾಡಿದೆ ಎಂಬುದು ಪ್ರಶ್ನೆ. ಅದರಲ್ಲೂ ಪಿಎಂ ಕೇರ್ಸ್ ನಂತಹ ಕೋವಿಡ್-19 ನಿಧಿ ಆರಂಭಿಸಿ ದೇಶದ ಸರ್ಕಾರಿ ನೌಕರರು ಮತ್ತು ಸರ್ಕಾರಿ ಸಂಸ್ಥೆಗಳಿಂದ ಸಾವಿರಾರು ಕೋಟಿ ದೇಣಿಗೆ ಪಡೆದ ಬಳಿಕವೂ ಕರ್ನಾಟಕದಂತಹ ದೇಶದಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳ ಮೂಲಕ ಕೋವಿಡ್ ಬಿಕ್ಕಟ್ಟು ಎದುರಿಸುತ್ತಿರುವ ಹೊತ್ತಲ್ಲಿಯೂ ನಯಾಪೈಸೆ ನೆರವು ಕೊಟ್ಟಿಲ್ಲವೆಂದರೆ ಅದರ್ಥವೇನು?

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಸದ್ಯಕ್ಕಂತೂ ವ್ಯಾಕ್ಸಿನ್ ಸಿಗಲಾರದು, ಅಂತಹ ಭ್ರಮೆಯೂ ಬೇಡ ಎಂದ ತಜ್ಞರು!

ಒಂದು ಕಡೆ ವೈದ್ಯಕೀಯ ಮತ್ತು ಆರೋಗ್ಯ ವ್ಯವಸ್ಥೆಯನ್ನು ಭೀಕರ ಸಾಂಕ್ರಾಮಿಕವನ್ನು ನಿರ್ವಹಿಸುವ ಮಟ್ಟಿಗೆ ಸುಧಾರಿಸುವ ನಿಟ್ಟಿನಲ್ಲಿ ಮೋದಿಯವರ ಸರ್ಕಾರದ ವೈಫಲ್ಯಕ್ಕೆ ಜಾಗತಿಕ ಮಟ್ಟದಲ್ಲಿ ಅತಿ ವೇಗದ ಸೋಂಕು ಪ್ರಕರಣ ಏರಿಕೆ ಮತ್ತು ಸಾವಿನ ಪ್ರಮಾಣದಲ್ಲಿನ ಏರಿಕೆ(ರೋಗಲಕ್ಷಣರಹಿತ ಸಾವುಗಳನ್ನೂ ಸೇರಿ)ಯೇ ಅಂಗೈ ಹುಣ್ಣಿನಷ್ಟೇ ಸ್ಪಷ್ಟ ನಿದರ್ಶನವಾಗಿದ್ದರೆ, ಮತ್ತೊಂದು ಕಡೆ ದೇಶದ ಜನರ ಜೀವರಕ್ಷಣೆಯ ನಿಟ್ಟಿನಲ್ಲಿ ಮಾಡಲೇಬೇಕಾದ ಕೆಲಸಗಳನ್ನು ಮಾಡದೆ, ಹೊಣೆಗೇಡಿತನವನ್ನು ಮುಚ್ಚಿಕೊಳ್ಳಲು ಜನಪ್ರಿಯ ಪ್ರಚಾರದ ಮೊರೆಹೋಗಲಾಗುತ್ತಿದೆ. ಚಪ್ಪಾಳೆ, ಶಂಕ-ಜಾಗಟೆ ಬಾರಿಸುವುದು, ದೀಪ ಹಚ್ಚುವುದು ಮುಂತಾದ ಪ್ರದರ್ಶನಗಳ ಬಳಿಕ ಈಗ ಕೋವಿಡ್-19 ಜನಾಂದೋಲನ ಅಭಿಯಾನದ ಮತ್ತೊಂದು ಟೋಕನಿಸಂ ವರಸೆ ಆರಂಭವಾಗಿದೆ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಜನರ ಸಾವಿರಾರು ಕೋಟಿ ತೆರಿಗೆ ಹಣ ಪಡೆದೂ ತಿರುಪತಿ ಹುಂಡಿಯಾಯ್ತೆ ಪಿಎಂ ಕೇರ್ಸ್?

ಮತ್ತೊಂದು ಕಡೆ ಕೋವಿಡ್ ನಿಂದ ರಕ್ಷಣೆ ಪಡೆಯಲು ಮತ್ತು ಸೋಂಕು ನಿವಾರಣೆಗಾಗಿ ಆರ್ಯುವೇದ ಮತ್ತು ಯುನಾನಿ ಪದ್ಧತಿಯ ಪ್ರೋಟೋಕಾಲ್ ಹೊರಡಿಸಿ ಸ್ವತಃ ವೈದ್ಯಕೀಯ ವಲಯದಿಂದಲೇ ಮುಖಭಂಗಕ್ಕೆ ಒಳಗಾಗಿದೆ. ಸೋಂಕಿನ ಆರಂಭದಿಂದಲೇ ಕೇವಲ ಸರ್ಕಾರಕ್ಕೆ ಪೂರಕವಾದ ಮತ್ತು ಅದರ ಸಾಧನೆ ಎಂದು ಬಿಂಬಿಸಲು ಅನುಕೂಲಕರವಾದ ಮಾಹಿತಿಯನ್ನಷ್ಟೇ ಹೊರಬಿಡುವ ಮೂಲಕ ವಾಸ್ತವಾಂಶಗಳನ್ನು ಮುಚ್ಚಿಟ್ಟು ದೇಶದ ಜನತೆಯನ್ನು ಅಪಾಯಕ್ಕೆ ಸಿಲುಕಿದವರಲ್ಲಿ ಪ್ರಮುಖರಾದ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರು, ಕೋವಿಡ್ ರೋಗಲಕ್ಷಣರಹಿತ ಸೋಂಕಿತರಿಗೆ ಆರ್ಯುವೇದ ಚಿಕಿತ್ಸೆ ನೀಡುವ ಕುರಿತು ಹೊರಡಿಸಿದ ಪ್ರೋಟೊಕೋಲ್ ಕೂಡ ಯಾವುದೇ ವೈಜ್ಞಾನಿಕ ಸಂಶೋಧನೆಯಾಗಲೀ, ವೈದ್ಯಕೀಯ ಪ್ರಯೋಗದ ಆಧಾರವಾಗಲೀ ಇಲ್ಲದ ಭೋಳೇತನದ ಪ್ರೋಟೋಕಾಲ್. ಇಂತಹ ಚಿಕಿತ್ಸೆ ಮತ್ತು ಮುಂಜಾಗ್ರತೆಯನ್ನು ಅಧಿಕೃತವಾಗಿ ಸೂಚಿಸುವ ಮೂಲಕ ಸಚಿವರು ದೇಶದ ಜನತೆಗೆ ಮತ್ತು ಇಡೀ ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಸ್ವತಃ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕಿಡಿಕಾರಿದೆ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಪ್ರಧಾನಿ ಕಾಳಜಿ ಬೆತ್ತಲಾಗಿಸಿತೆ ‘ಪಿಎಂ ಕೇರ್ಸ್ ವೆಂಟಿಲೇಟರ್’ ಖರೀದಿ ವ್ಯವಹಾರ?

ಬಹುಶಃ ದೇಶದ ಇತಿಹಾಸದಲ್ಲೇ ಹೀಗೆ ಐಎಂಎ ಯಿಂದ ತೀವ್ರ ಟೀಕೆಗೆ ಗುರಿಯಾದ ಮತ್ತು ದೇಶದ ಜನತೆಗೆ ದ್ರೋಹ ಬಗೆಯುತ್ತಿದ್ದೀರಿ ಎಂಬ ಆಕ್ರೋಶಕ್ಕೆ ಈಡಾದ ಮೊದಲ ಆರೋಗ್ಯ ಸಚಿವರು ಮೋದಿಯ ಸಹೋದ್ಯೋಗಿಯೇ ಇರಬಹುದು. ಪ್ರೋಟೋಕಾಲ್ ವಿಷಯದಲ್ಲಿ ಐಎಂಎ ಅಧಿಕೃತ ಹೇಳಿಕೆಯ ಮೂಲಕ ಸರ್ಕಾರದ ಕೋವಿಡ್ ನಿರ್ವಹಣೆಯ ಮೂರ್ಖತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ದೇಶದ ವೈದ್ಯಕೀಯ ಮತ್ತು ಆರೋಗ್ಯ ವಲಯದ ನೂರಾರು ಪರಿಣಿತರು, ಹೇಗೆ ಮೋದಿಯವರ ಸರ್ಕಾರ ಹೆಜ್ಜೆಹೆಜ್ಜೆಗೂ ಕೋವಿಡ್ ನಿರ್ವಹಣೆಯಲ್ಲಿ ಮತ್ತು ಸೋಂಕು ತಡೆಯಲ್ಲಿ ಎಡವಿದೆ ಎಂಬುದನ್ನು ಬೇರೆ ಬೇರೆ ಸಂದರ್ಭದಲ್ಲಿ ಬಹಿರಂಗಪಡಿಸಿದ್ಧಾರೆ. ಈಗಲೂ ಹಲವು ಖ್ಯಾತ ವೈದ್ಯರು ಅಧಿಕೃತವಾಗಿ ಹೇಳಲು ಹಿಂಜರಿದರೂ, ಆಪ್ತ ಮಾತುಕತೆಯಲ್ಲಿ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಇಂತಹ ಭೀಕರ ಸಂದರ್ಭದಲ್ಲಿಯೂ ಹೆಚ್ಚೇನೂ ಬದಲಾವಣೆಯಾಗಿಲ್ಲ, ಸಿಬ್ಬಂದಿ, ಸಿಬ್ಬಂದಿ ಸೌಲಭ್ಯ, ವೈದ್ಯಕೀಯ ಸಲಕರಣೆ ಮತ್ತು ಸೌಲಭ್ಯ ಸೇರಿದಂತೆ ಪ್ರತಿಯೊಂದು ವಿಷಯದಲ್ಲಿಯೂ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬುದನ್ನು ಹೇಳುತ್ತಾರೆ.

ಮೋದಿಯವರ ಕೋವಿಡ್-19 ಜನಾಂದೋಲನ ಕೂಡ ಕೇವಲ ಟೋಕನಿಸಂನ ಮತ್ತೊಂದು ವರಸೆಯೇ?
ಕರೋನಾ ತಡೆಯುವಲ್ಲಿ ನಾವು ಮುಂದಿದ್ದೇವೆ ಎಂದ ಮೋದಿ ಮಾತು ಎಷ್ಟು ನಿಜ?

ಈವರೆಗೆ ದೇಶದ ಆರೋಗ್ಯ ಸಚಿವರಾಗಲೀ, ಕರ್ನಾಟಕದ ಆರೋಗ್ಯ ಸಚಿವರಾಗಲೀ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ನಿರ್ವಹಣೆಗೆ ಸದ್ಯ ಇರುವ ವ್ಯವಸ್ಥೆಗಳ ಬಗ್ಗೆಯಾಗಲೀ, ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಸಂಖ್ಯೆ ಎಷ್ಟು, ವಾಸ್ತವವಾಗಿ ಅಗತ್ಯ ವೈದ್ಯರ ಪ್ರಮಾಣವೆಷ್ಟು, ಸಿದ್ಧಪಡಿಸಿರುವ ಹಾಸಿಗೆಗಳು ಮತ್ತು ಕೋವಿಡ್ ಸೆಂಟರ್ ಪ್ರಮಾಣವೆಷ್ಟು? ನಿಜವಾಗಿಯೂ ಬೇಡಿಕೆ ಇರುವ ಪ್ರಮಾಣವೆಷ್ಟು? ಅಗತ್ಯ ವೆಂಟಿಲೇಟರು, ಆಮ್ಲಜನಕ ಪ್ರಮಾಣ ಮತ್ತು ಲಭ್ಯವಿರುವ ಪ್ರಮಾಣವೆಷ್ಟು? ಎಂಬ ನಿರ್ಣಾಯಕ ಮಾಹಿತಿಯನ್ನು ಪ್ರಕಟಿಸಿದ ಉದಾಹರಣೆಗಳೇ ಇಲ್ಲ. ಜನರಿಗೆ ವಿಶ್ವಾಸ ಹುಟ್ಟಿಸುವ, ಭರವಸೆ ಹುಟ್ಟಿಸುವ ಮತ್ತು ಅವರ ಜೀವಕ್ಕೆ ಖಾತರಿ ನೀಡುವ ಯಾವ ಕ್ರಮಗಳನ್ನೂ ಕೈಗೊಳ್ಳದ ಆಡಳಿತ ವ್ಯವಸ್ಥೆಗಳು, ಜನರ ಜೀವಭಯವನ್ನೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅವಕಾಶವಾಗಿ ಬಳಸಿಕೊಳ್ಳುತ್ತವೆ ಎಂಬುದಕ್ಕೆ ದೇಶದ ಸದ್ಯದ ಸ್ಥಿತಿ ತಾಜಾ ನಿದರ್ಶನ.

ಹಾಗಾಗಿ, ಆಗಬೇಕಾದ ಬದಲಾವಣೆಗಳನ್ನು ತರಲಾರದ, ಆ ಬಗ್ಗೆ ಆಸಕ್ತಿಯಾಗಲೀ ಕಾಳಜಿಯಾಗಲೀ ತೋರದ ಸರ್ಕಾರ, ಜನರ ಜೀವ ರಕ್ಷಣೆಗಿಂತ ತನ್ನ ವರ್ಚಸ್ಸು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೋವಿಡ್ ಸಂಬಂಧಿತ ಸಾವುನೋವು, ಸೋಂಕಿತರ ಸಂಖ್ಯೆ ಮುಂತಾದ ವಾಸ್ತವಾಂಶಗಳನ್ನು ಮುಚ್ಚಿಟ್ಟು, ಜನರ ಗಮನವನ್ನು ಕೇವಲ ಮುಂಜಾಗ್ರತಾ ಕ್ರಮಗಳತ್ತ ಮಾತ್ರ ಕೇಂದ್ರೀಕರಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಈ ಜನಾಂದೋಲನ ಕೂಡ ಅಂತಹದ್ದೇ ಮತ್ತೊಂದು ಸರ್ಕಸ್ ಎಂಬುದು ಆರೋಗ್ಯ ತಜ್ಞರ ಹತಾಶೆಯ ಪ್ರತಿಕ್ರಿಯೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com