‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?

‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?

ತನಿಖಾ ಸಂಸ್ಥೆಗಳನ್ನು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ, ಸೇಡಿನ ಅಸ್ತ್ರವಾಗಿ, ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಇಷ್ಟೊಂದು ನಿರ್ಲಜ್ಜವಾಗಿ ಹಿಂದೆಂದೂ ಬಳಸಿರಲಿಲ್ಲ. ರಾಜಕೀಯ ಪ್ರೇರಿತ ದಾಳಿಗೆ ಉದ್ದೇಶಿತ ಪ ...

ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ದಾಳಿಗಳ ಬಳಿಕ ಈಗ ಸಿಬಿಐ ದಾಳಿ ನಡೆದಿದೆ. ಡಿ ಕೆ ಶಿವಕುಮಾರ್ ಅವರ ರಾಜಕೀಯ ಮತ್ತು ವ್ಯಾವಹಾರಿಕ ಬೆಳವಣಿಗೆಯ ವೇಗ ಕಂಡವರಿಗೆ ಈ ದಾಳಿಗಳು ತೀರಾ ಅಸಹಜ ಎನಿಸದಿರಬಹುದು. ಆದರೆ, ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ವಲಯದಲ್ಲಿ ಈ ನಿರಂತರ ದಾಳಿಗಳ ಬಗ್ಗೆ ದೊಡ್ಡ ಮಟ್ಟದ ಆಕ್ರೋಶ ಮತ್ತು ದಾಳಿಗಳು ರಾಜಕೀಯ ಪ್ರೇರಿತ ಎಂಬ ಆರೋಪ ಭುಗಿಲೆದ್ದಿದೆ.

ಹಾಗೆ ನೋಡಿದರೆ ಡಿ ಕೆ ಶಿವಕುಮಾರ್ ಅವರ ಮೇಲಾಗಲೀ ಅಥವಾ ರಾಜ್ಯದ ವಿವಿಧ ಪ್ರತಿಪಕ್ಷಗಳ ಮುಖಂಡರು ಮತ್ತು ಅವರ ಆಪ್ತರ ಮೇಲಾಗಲೀ ಸಿಬಿಐ, ಐಟಿ, ಇಡಿ ದಾಳಿಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಐದಾರು ವರ್ಷಗಳಲ್ಲಿ ಬಹುಶಃ ದೇಶದಲ್ಲಿ ಅತಿ ಹೆಚ್ಚು ಇಂತಹ ದಾಳಿಗಳು ನಡೆದಿರುವುದು ಕರ್ನಾಟಕದಲ್ಲೇ ಇರಬಹುದು. ಅದರಲ್ಲೂ ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆಗಳು ಮತ್ತು ಉಪ ಚುನಾವಣೆಗಳ ಸಂದರ್ಭದಲ್ಲಿ ಆಡಳಿತರೂಢ ಬಿಜೆಪಿ ಹೊರತುಪಡಿಸಿ ಉಳಿದ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮತ್ತು ಅವರ ಆಪ್ತರ ಮೇಲೆ ಐಟಿ, ಇಡಿ ಅಥವಾ ಸಿಬಿಐ ದಾಳಿ ನಡೆಯುವುದು ಇತ್ತೀಚಿನ ವರ್ಷಗಳಲ್ಲಿ ತೀರಾ ಸಹಜವೆಂಬಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಾಗಿಯೇ ಇಂತಹ ದಾಳಿಗಳು ನಡೆದಾಗ ಆ ದಾಳಿಗಳ ಹಿಂದಿನ ನೈಜ ಕಾರಣ ಮತ್ತು ದಾಳಿಗೊಳಗಾದವರ ಅಕ್ರಮಗಳ ಬಗ್ಗೆ ಚರ್ಚೆಯಾಗುವುದಕ್ಕಿಂತ ಹೆಚ್ಚು, ಅವುಗಳ ಹಿಂದಿನ ರಾಜಕೀಯದ ಬಗ್ಗೆ, ರಾಜಕೀಯ ತಂತ್ರಗಾರಿಕೆಯ ಬಗ್ಗೆ, ಸೇಡಿನ ರಾಜಕಾರಣದ ಬಗ್ಗೆ ಚರ್ಚೆಯಾಗುವುದೇ ಹೆಚ್ಚು. ಅದರಲ್ಲೂ ಜನಸಾಮಾನ್ಯರಲ್ಲಿ ಇಂತಹ ದಾಳಿಗಳ ಬಗ್ಗೆ ಯಾವುದೇ ಆಘಾತವಾಗಲೀ, ಕುತೂಹಲವಾಗಲೀ ಉಳಿಯದ ಮಟ್ಟಿಗೆ ಈ ದಾಳಿಗಳಿಗೂ, ಚುನಾವಣೆಗಳಿಗೂ ಮತ್ತು ಚುನಾವಣೆಯಲ್ಲಿ ಗೆಲುವು ಸಾಧಿಸುವ ಆಡಳಿತ ಪಕ್ಷದ ವರಸೆಗೂ ನಂಟು ಬೆಸೆದಿದೆ. ಹಾಗಾಗಿ ಚುನಾವಣೆಗಳು ಬರುತ್ತಿದ್ದಂತೆ ಇಂತಹ ದಾಳಿಗಳೂ ನಡೆಯಬಹುದು ಎಂಬುದನ್ನು ಜನಸಾಮಾನ್ಯರು ಮುಂಚಿತವಾಗಿಯೇ ಊಹಿಸತೊಡಗಿದ್ದಾರೆ.

ಡಿ ಕೆ ಶಿವಕುಮಾರ್ ವಿಷಯದಲ್ಲಿ ಕೂಡ ಹೀಗೆಯೇ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪಾಲಿನ ಪ್ರತಿಷ್ಠೆಯಾಗಿದ್ದ ಅವರ ತವರು ರಾಜ್ಯ ಗುಜರಾತಿನ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಅಡ್ಡಗಾಲಾದ ಡಿ ಕೆ ಶಿವಕುಮಾರ್ ವಿರುದ್ಧ ಮೊದಲ ಬಾರಿಗೆ 2017ರ ಆಗಸ್ಟ್ ನಲ್ಲಿ ಐಟಿ ದಾಳೀ ನಡೆದಿತ್ತು. ಈ ಮೊದಲ ದಾಳಿಗೆ ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆಯಾಗಲು ಬಯಸಿದ್ದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ತಡೆಯುವ ಮೋದಿ ಮತ್ತು ಶಾ ತಂತ್ರಗಾರಿಕೆ ಕಾರಣವಾಗಿತ್ತು. ಚುನಾವಣಾ ಚಾಣಾಕ್ಷರೆಂದೇ ಬಿಂಬಿಸಿಕೊಳ್ಳುವ ಆ ಜೋಡಿಯ ತಂತ್ರಗಾರಿಕೆಗೆ ಪ್ರತಿಯಾಗಿ ಡಿ ಕೆ ಶಿವಕುಮಾರ್, ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಕರೆತಂದು ಬೆಂಗಳೂರು ಹೊರವಲಯದ ರೆಸಾರ್ಟಿನಲ್ಲಿ ಇಟ್ಟು, ಸ್ವತಃ ತಮ್ಮದೇ ಉಸ್ತುವಾರಿಯಲ್ಲಿ ಆ ಚುನಾವಣೆ ನಡೆಸಿ ಅಹ್ಮದ್ ಪಟೇಲ್ ಆಯ್ಕೆಯಾಗುವಂತೆ ಪ್ರತಿತಂತ್ರ ಹೆಣೆದು ಯಶಸ್ವಿಯಾಗಿದ್ದರು. ಆ ಹಿನ್ನೆಲೆಯಲ್ಲೇ ಮೊದಲ ಐಟಿ ದಾಳಿ ನಡೆದಿತ್ತು ಎಂಬುದು ಜನಜನಿತ.

ಆ ಬಳಿಕ ಮತ್ತೆ, ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಅವರ ಮೇಲೆ ಇಡಿ ದಾಳಿ ನಡೆಸಿ ಅವರನ್ನು ಬಂಧಿಸಿತ್ತು. ಹಿಂದಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಪತನಗೊಳಿಸಿದ್ದ ಬಿಜೆಪಿ, ಆ ಬಳಿಕ ರಚಿಸಿದ್ದ ತನ್ನ ಸರ್ಕಾರ ಉಳಿಸಿಕೊಳ್ಳಲು ಈ 15 ಕ್ಷೇತ್ರಗಳ ಚುನಾವಣೆಯ ಗೆಲುವು ನಿರ್ಣಾಯಕವಾಗಿತ್ತು. ಆ ಹಿನ್ನೆಲೆಯಲ್ಲಿ ಚುನಾವಣೆ ತಯಾರಿಯ ಹಂತದಲ್ಲೇ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸುವ ಮೂಲಕ ಪ್ರತಿಪಕ್ಷ ಪಾಳೇಯದ ಪ್ರಬಲ ನಾಯಕನ್ನು ಚುನಾವಣಾ ಕಣದಿಂದ ಹೊರಗಿಡಲಾಯಿತು. ಹಾಗಾಗಿ ಅದೂ ಕೂಡ ಚುನಾವಣಾ ಪ್ರೇರಿತ ದಾಳಿಯೇ ಆಗಿತ್ತು ಎಂಬುದಕ್ಕೆ ಪ್ರತ್ಯೇಕ ಸಾಕ್ಷ್ಯಾಧಾರಗಳ ಜರೂರು ಇರಲಿಲ್ಲ.

ಆ ಬಳಿಕ ಈಗ ಮತ್ತೆ ಸಿಬಿಐ ದಾಳಿ ನಡೆದಿದೆ. ಈಗಲೂ ಚುನಾವಣೆಯ ನಂಟು ಇಲ್ಲದೇ ಇಲ್ಲ. ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಮೊದಲ ಚುನಾವಣೆ ಎದುರಿಸುತ್ತಿದ್ದಾರೆ. ಅವರ ಭದ್ರಕೋಟೆ ಎನಿಸಿರುವ ಪ್ರಭಾವ ಹೊಂದಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿ ಭರ್ಜರಿ ಚುನಾವಣಾ ತಯಾರಿಗಳು ನಡೆಯುತ್ತಿರುವ ಹೊತ್ತಲ್ಲೇ ಸಿಬಿಐ ದಾಳಿ ನಡೆದಿದೆ. ಹಾಗಾಗಿ ಇದೂ ಕೂಡ ರಾಜಕೀಯ ಪ್ರೇರಿತವೇ ಎಂಬ ಪ್ರತಿಪಕ್ಷಗಳ ವಾದ ಸಂಪೂರ್ಣ ನಿಜವಲ್ಲ ಎನ್ನಲಾಗದು.

ಇನ್ನು ಡಿ ಕೆ ಶಿವಕುಮಾರ್ ಅವರನ್ನು ಹೀಗೆ ದಾಳಿಗಳ ಮೇಲೆ ದಾಳಿ ನಡೆಸಿ ಕಟ್ಟಿಹಾಕುವುದರಿಂದ ಬಿಜೆಪಿಗೆ, ಅದರಲ್ಲೂ ಮುಖ್ಯವಾಗಿ ಆ ಪಕ್ಷದ ಪ್ರಮುಖರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಆಗುವ ಅನುಕೂಲಗಳೇನು? ಎಂಬುದನ್ನು ಗಮನಿಸುವುದಾದರೆ; 2018ರ ವಿಧಾನಸಭಾ ಚುನಾವಣೆಗೆ ಮುಂಚಿನ ಬೆಳವಣಿಗೆಗಳನ್ನು ಗಮನಿಸಬೇಕು. 2017ರ ಐಟಿ ದಾಳಿಗೆ ಮುನ್ನವೇ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳು ನಡೆದಿದ್ದವು. ಅದರಲ್ಲೂ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿಯೇ ಈ ಕುರಿತ ಪ್ರಸ್ತಾಪವನ್ನು ಕನಕಪುರದ ಸಹೋದರದ ಮುಂದೆ ಇಡಲಾಗಿತ್ತು. ಆದರೆ, ಕಾಂಗ್ರೆಸ್ಸಿನೊಂದಿಗಿನ ತಮ್ಮ ಸುದೀರ್ಘ ನಂಟು ಮತ್ತು ಭವಿಷ್ಯದಲ್ಲಿ ಇರುವ ಅವಕಾಶಗಳ ಹಿನ್ನೆಲೆಯಲ್ಲಿ ಅಂತಹ ಪ್ರಸ್ತಾಪವನ್ನು ಡಿ ಕೆ ಶಿವಕುಮಾರ್ ತಿರಸ್ಕರಿಸಿದ್ದರು.

ಕೆಲವು ತಿಂಗಳ ಕಾಲ ನಡೆದ ಈ ತಂತ್ರಗಾರಿಕೆ, ಒತ್ತಡ ಫಲಕೊಡದ ಹಿನ್ನೆಲೆಯಲ್ಲಿ ಅಂತಿಮವಾಗಿ ಬಿಜೆಪಿಯ ಮೋರ್ಚಾಗಳಂತೆ ಕೆಲಸ ಮಾಡುತ್ತಿವೆ ಎಂಬ ಜನಪ್ರಿಯ ಆರೋಪ ಹೊತ್ತಿರುವ ಐಟಿ, ಇಡಿ ಮತ್ತು ಸಿಬಿಐಗಳನ್ನು ಛೂ ಬಿಡಲಾಯಿತು ಎಂಬುದು ಒಳಮರ್ಮ. ಐಟಿ ದಾಳಿಯ ನಂತರ ಕೂಡ ಡಿ ಕೆ ಸಹೋದರರು, ಬಿಜೆಪಿಯ ಒತ್ತಡಕ್ಕೆ ಮಣಿಯುವ ಬದಲು ಸಿಡಿದೆದ್ದರು. ತಾವು ಕನಕಪುರ ಬಂಡೆ, ಇಂತಹ ದಾಳಿಗಳಿಂದ ತಮ್ಮನ್ನು ಬಗ್ಗುಬಡಿಯಲಾಗದು ಎಂದು ಪ್ರತಿ ಸವಾಲು ಹಾಕಿದ್ದರು. ಇದೀಗ ಮುಂದುವರಿದಿರುವ ದಾಳಿಗಳು ಅಂತಹ ತಂತ್ರಗಾರಿಕೆ ಮತ್ತು ಪ್ರತಿ ತಂತ್ರಗಾರಿಕೆ, ಸವಾಲು ಮತ್ತು ಪ್ರತಿಸವಾಲುಗಳ ಮುಂದುವರಿಕೆ ಅಷ್ಟೇ!

ಇನ್ನು ಡಿಕೆ ಸಹೋದರರನ್ನು ಹೊರತುಪಡಿಸಿಯೂ ರಾಜ್ಯದಲ್ಲಿ ಕಳೆದ ಆರೇಳು ವರ್ಷಗಳಲ್ಲಿ ಹಲವು ಐಟಿ, ಇಡಿ ಮತ್ತು ಸಿಬಿಐ ದಾಳಿಗಳು ನಡೆದಿವೆ. ಆದರೆ, ಅವುಗಳೆಲ್ಲವೂ ಬಹುತೇಕ ನಡೆದಿರುವುದು ಒಂದೋ ರಾಜಕಾರಣಿಗಳ ಮೇಲೆಯೇ ನೇರ ದಾಳಿ, ಇಲ್ಲವೇ ಅವರ ಆಪ್ತ ಗುತ್ತಿಗೆದಾರರು, ಉದ್ಯಮಿಗಳು ಮತ್ತು ಪಕ್ಷದ ಬೇರೆಬೇರೆ ಹಂತದ ನಾಯಕರ ಮೇಲಿನ ದಾಳಿಗಳು ಮತ್ತು ಅದರಲ್ಲೂ ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡ ದಾಳಿಗಳೇ ಎಂಬುದು ಗಮನಾರ್ಹ.

‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?
ಡಿಕೆಶಿ ವಿರುದ್ಧ ಬಿಜೆಪಿ ಏಸು ಕ್ರಿಸ್ತನ ಪ್ರತಿಮೆ ಅಸ್ತ್ರ ಬಳಸಲು ಕಾರಣವೇನು?

ಅದು 2018ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ದಾಳಿ ಇರಬಹುದು, 2019ರ ಲೋಕಸಭಾ ಚುನಾವಣೆ ಸಂದರ್ಭದ ದಾಳಿಗಳಿರಬಹುದು, 2019ರ ಮೇ ತಿಂಗಳಿನಲ್ಲಿ ನಡೆದ ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಗಳ ಸಂದರ್ಭದ ದಾಳಿಗಳಿರಬಹುದು, 2019ರ ಡಿಸೆಂಬರಿನಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸಂದರ್ಭದ ದಾಳಿಗಳಿರಬಹುದು,.. ಎಲ್ಲವೂ ಪ್ರಮುಖವಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು, ಅಥವಾ ಪ್ರಮುಖ ನಾಯಕರು, ಅಥವಾ ಅವರ ಆಪ್ತರ ಮೇಲೆಯೇ ನಡೆದಿವೆ. ಈ ಎಲ್ಲಾ ಚುನಾವಣಾ ಸಂದರ್ಭದಲ್ಲೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಅತಿ ಹೆಚ್ಚು ದಾಳಿಗಳು ನಡೆದಿದ್ದವು ಮತ್ತು ಎಲ್ಲವೂ ಬಿಜೆಪಿಗೆ ಗೆಲುವು ಕಷ್ಟಕರವಾಗಿದ್ದ ಕ್ಷೇತ್ರಗಳಿಗೆ ಸಂಬಂಧಿಸಿದಂತೆಯೇ ನಡೆದಿದ್ದವು ಎಂಬುದು ಈ ದಾಳಿಗಳ ಸಾಚಾತಾನಕ್ಕೆ ಹಿಡಿದ ಕನ್ನಡಿ.

ದೇಶದ ಜನಸಾಮಾನ್ಯರ ಬೆವರಿನ ಪ್ರತಿಫಲವಾದ ತೆರಿಗೆ ಹಣವನ್ನು ಲೂಟಿ ಹೊಡೆಯುವ, ದೇಶದ ಕಾನೂನು ಮತ್ತು ಜನಹಿತವನ್ನು ಗಾಳಿಗೆ ತೂರಿ ಅಕ್ರಮವಾಗಿ ಸಂಪಾದಿಸುವ ಆಸ್ತಿಪಾಸ್ತಿಯ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ಮೂಲಕ ವ್ಯವಸ್ಥೆಯ ಸಮತೋಲನ ಕಾಯುವ ಮತ್ತು ಸರಿದಾರಿಗೆ ತರುವ ಹೊಣೆಗಾರಿಕೆ ಐಟಿ, ಇಡಿ ಮತ್ತು ಸಿಬಿಐ ಸೇರಿದಂತೆ ವಿವಿಧ ತನಿಖಾಸಂಸ್ಥೆಗಳದ್ದು. ಆದರೆ, ಈ ಸಂಸ್ಥೆಗಳ ವಿಷಯದಲ್ಲಿ ಹಲವು ದಶಕಗಳಿಂದಲೂ ಜನಸಾಮಾನ್ಯರಿಗೆ ವಿಶ್ವಾಸ ಅಷ್ಟಕ್ಕಷ್ಟೇ ಎಂಬ ಸ್ಥಿತಿಗೆ ಸ್ವತಃ ಆ ಸಂಸ್ಥೆಗಳ ಇಂತಹ ಪಕ್ಷಪಾತಿ ಮತ್ತು ತೀರಾ ಕೈಗೊಂಬೆಯ ವರಸೆಗಳೇ ಕಾರಣ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ‘ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ ಎನಿಸಿಕೊಳ್ಳುವ ಸಿಬಿಐ, ಈಗ ಬಿಜೆಪಿ ಅವಧಿಯಲ್ಲಿ ‘ಕಮ್ಯುನಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’, ‘ಬಿಜೆಪಿ ಕಾವಲು ಪಡೆ’, ‘ಬಿಜೆಪಿ ಸಿಬಿಐ ಮೋರ್ಚಾ’ ಎನಿಸಿಕೊಳ್ಳುತ್ತಿದೆ.

‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?
ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಡಿಕೆಶಿ ಬಂಧನಕ್ಕೆ ಕಾರಣವೇ ಅಲ್ಲ!

ಇಂತಹ ಕುಹಕದ ಮಾತುಗಳಿಗೆ ಕಾರಣ, ಇತ್ತೀಚಿನ ವರ್ಷಗಳಲ್ಲಿ ಈ ತನಿಖಾ ಸಂಸ್ಥೆಗಳು ತಮ್ಮ ದಾಳಿಗೆ ಆಯ್ಕೆಮಾಡಿಕೊಳ್ಳುವ ಚುನಾವಣಾ ಸಂದರ್ಭ, ಪ್ರತಿಪಕ್ಷಗಳ ಪ್ರಮುಖರು, ಬಿಜೆಪಿ ಸೋಲಿನ ಭಯವಿರುವ ಕ್ಷೇತ್ರಗಳು ಮುಂತಾದ ಸಂದರ್ಭ ಮತ್ತು ವ್ಯಕ್ತಿಗಳೇ. ಚುನಾವಣಾ ಸಂದರ್ಭ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ರಾಜ್ಯದ ಮಟ್ಟಿಗಂತೂ ಸಿಬಿಐ ದಾಳಿಯಾಗಲೀ, ಕೇಂದ್ರ ಐಟಿ ದಾಳಿಯಾಗಲೀ, ಇಡಿ ದಾಳಿಯಾಗಲೀ ನಡೆದ ಉದಾಹರಣೆಗಳು ಇತ್ತೀಚಿನ ವರ್ಷಗಳಲ್ಲಿ ಇಲ್ಲವೇ ಇಲ್ಲ ಎಂಬಷ್ಟು ವಿರಳ. ಇನ್ನು ಪ್ರತಿ ಪಕ್ಷ ನಾಯಕರು ಮತ್ತು ಅವರ ಆಪ್ತರನ್ನು ಹೊರತುಪಡಿಸಿ, ಇನ್ನುಳಿದವರ ಮೇಲೆ ದಾಳಿ ನಡೆದ ಘಟನೆಗಳು ಕೂಡ ಇಲ್ಲ. ಸದ್ಯದ ಸ್ಥಿತಿಯಲ್ಲೇ ನೋಡುವುದಾದರೆ, ಅಕ್ರಮ ಆಸ್ತಿ, ಆದಾಯ ಮೀರಿದ ಗಳಿಕೆ, ವಿವಿಧ ಸರ್ಕಾರಿ ಯೋಜನೆಗಳ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರತಿಪಕ್ಷಗಳಿಗಿಂತ ಆಳುವ ಬಿಜೆಪಿ ಪಕ್ಷದ ನಾಯಕರು ಮತ್ತು ಅವರ ಮಕ್ಕಳ ಮೇಲಿರುವ ಆರೋಪಗಳೇ ಹೆಚ್ಚು. ಸ್ವತಃ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಮತ್ತು ಅವರ ಮನೆಮಂದಿಯ ಮೇಲೆ ಸ್ವತಃ ಸಿಬಿಐ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಮುಂದೆ ಪ್ರಕರಣಗಳು ಬಾಕಿ ಇವೆ. ಕೆಲವು ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿ ಸಾಲುಸಾಲು ಬಿಜೆಪಿ ನಾಯಕರು ಜೈಲು ಶಿಕ್ಷೆ ಅನುಭವಿಸಿದ್ದಾರೆ ಕೂಡ.

ರಾಜಕೀಯ ರಂಗ ಹೊರತುಪಡಿಸಿಯೂ ರಾಜ್ಯದಲ್ಲಿ ನೂರಾರು ಮಂದಿ ಉದ್ಯಮಿಗಳು, ಅಧಿಕಾರಿಗಳ ಅಕ್ರಮ ಸಂಪಾದನೆ, ಆಸ್ತಿಪಾಸ್ತಿ ಮತ್ತು ವಂಚನೆ- ಭ್ರಷ್ಟಾಚಾರಗಳು ಜನಜನಿತವಾಗಿವೆ ಮತ್ತು ಅಂತಹ ನೂರಾರು ಪ್ರಕರಣಗಳು ಸಿಬಿಐ, ಇಡಿ ಮತ್ತು ಕೇಂದ್ರ ಐಟಿ ಇಲಾಖೆ ಕಚೇರಿಗಳಲ್ಲಿ ಧೂಳು ತಿನ್ನುತ್ತಿವೆ. ಆದರೆ, ಆ ಯಾವ ಪ್ರಕರಣಗಳ ವಿಷಯದಲ್ಲಿಯೂ ತೋರದ ಆಸಕ್ತಿಯನ್ನು ಈ ತನಿಖಾ ಸಂಸ್ಥೆಗಳು ಪ್ರತಿಪಕ್ಷ ನಾಯಕರು ಮತ್ತು ಅವರ ಆಪ್ತರ ವಿಷಯದಲ್ಲಿ ಮಾತ್ರ, ಅದೂ ಚುನಾವಣಾ ಸಂದರ್ಭದಲ್ಲೇ ನೆನಪಿಸಿಕೊಂಡು ತೋರುತ್ತಿರುವುದರ ಹಿಂದೆ ಯಾವ ಉದ್ದೇಶವಿದೆ ಮತ್ತು ಯಾರ ಕೈವಾಡವಿದೆ ಎಂಬುದನ್ನು ವಿವರಿಸಬೇಕಿಲ್ಲ.

‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?
ಬಿಜೆಪಿಯಲ್ಲಿ ಅಕ್ರಮ ಇಲ್ಲವೇ?

ಆದರೆ, ಹೀಗೆ ತನಿಖಾ ಸಂಸ್ಥೆಗಳನ್ನು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ, ಸೇಡಿನ ಅಸ್ತ್ರವಾಗಿ, ಸ್ವಹಿತಾಸಕ್ತಿಯ ದಾಳಗಳಾಗಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಈ ಪ್ರಮಾಣದಲ್ಲಿ, ಇಷ್ಟೊಂದು ನಿರ್ಲಜ್ಜವಾಗಿ ಹಿಂದೆಂದೂ ಬಳಸಿರಲಿಲ್ಲ. ಅಂತಿಮವಾಗಿ ಇಂತಹ ರಾಜಕೀಯ ಪ್ರೇರಿತ ದಾಳಿಗಳಿಗೆ ಉದ್ದೇಶಿತ ಪ್ರತಿಪಕ್ಷಗಳು ಮತ್ತು ಅವುಗಳ ಪ್ರಭಾವಿ ನಾಯಕರು ಎಷ್ಟರಮಟ್ಟಿಗೆ ಬಲಿಯಾಗುತ್ತಾರೋ ಗೊತ್ತಿಲ್ಲ. ಆದರೆ, ದೇಶದ ಸಂವಿಧಾನಿಕ ವ್ಯವಸ್ಥೆಯ ಪ್ರಮುಖ ಅಂಗಸಂಸ್ಥೆಗಳಾದ ಇಂತಹ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯಂತೂ ಖಂಡಿತವಾಗಿಯೂ ಬಲಿಯಾಗುತ್ತಿದೆ. ಇದು ಜನಸಾಮಾನ್ಯರ ಆತಂಕಪಡಬೇಕಾದ ಸಂಗತಿ!

ಏಕೆಂದರೆ, ಒಮ್ಮೆ ಇಂತಹ ಸಂಸ್ಥೆಗಳು ಮತ್ತು ಅವುಗಳ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ಪಕ್ಷಪಾತಿ ಎಂಬುದು ಜಗಜ್ಜಾಹೀರಾದರೆ, ಇಡೀ ದೇಶದ ಅಕ್ರಮ ಸಂಪತ್ತು ಮತ್ತು ಗಳಿಕೆಯ ಮೇಲಿನ ಕಣ್ಗಾವಲು ವ್ಯವಸ್ಥೆಯೇ ಕುಸಿದುಬೀಳಲಿದೆ. ಇಂದಿನ ಕಾರ್ಪೊರೇಟ್ ಶಾಹಿ ಆಡಳಿತ ಮತ್ತು ಒಟ್ಟಾರೆ ಇಡೀ ವ್ಯವಸ್ಥೆಯ ಮೇಲೆ ಕಾರ್ಪೊರೇಟ್ ವಲಯ ಸಾಧಿಸುತ್ತಿರುವ ಹಿಡಿತದ ಹಿನ್ನೆಲೆಯಲ್ಲಿ ಇದು ಭಯಾನಕ ಪರಿಣಾಮಗಳಿಗೆ ಕಾರಣವಾಗಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com