ಗಾಂಧೀ ಮಹಾತ್ಮನೆಂಬ ದಿವ್ಯತೆಯ ಮಹತ್ವ

ಪ್ರಾರಂಭದ ಕೆಲವು ವರ್ಷಗಳು ಗಾಂಧೀಜಿ ಇಂಗ್ಲೆಂಡಿನ ಮಿತ್ರರಾಗಿದ್ದರು ಹಾಗೂ ಭಾರತದಲ್ಲಿ ರಾಣಿಯ ಆಳ್ವಿಕೆಯನ್ನು ಒಪ್ಪಿಕೊಂಡಿದ್ದರು. ಬ್ರಿಟನ್ ಸರ್ವಾಧಿಪತ್ಯದ ಲಾಭಗಳನ್ನೂ ಕೊಡುಗೆಗಳನ್ನೂ ಅನುಭವಿಸಿದ್ದರು.
ಗಾಂಧೀ ಮಹಾತ್ಮನೆಂಬ ದಿವ್ಯತೆಯ ಮಹತ್ವ

ಮೋಹನ್‌ದಾಸ್ ಕರಮ್ ಚಂದ್ ಗಾಂಧೀ (1869 - 1948) ಭಾರತದ ಸ್ವಾತಂತ್ರ್ಯ ಶಿಲ್ಪಿ, ಅಹಿಂಸಾತ್ಮಕ ಕ್ರಾಂತಿಯಿಂದ ಬ್ರಿಟಿಷರ ಚಕ್ರಾಧಿಪತ್ಯವನ್ನು ಭಾರತದಲ್ಲಿ ಕೊನೆಗಾಣಿಸಿದರು. ಸತ್ಯಶೋಧನೆ ಬದುಕಿನ ಸೂತ್ರವಾಗಿತ್ತು. ಎಲ್ಲರ ಒಳಿತಿನಲ್ಲಿಯೇ ವ್ಯಕ್ತಿಯ ಒಳಿತು. ಯಾವ ಕೆಲಸವೂ ತುಚ್ಚವಲ್ಲ, ಯಾವುದೂ ದೊಡ್ಡದಲ್ಲ, ವ್ಯಕ್ತಿತ್ವ ವಿಕಾಸವೇ ಜೀವನ ತತ್ವದ ವಿಕಾಸ ಎಂದು ಬೋಧಿಸಿದರು. ಸಾಮಾನ್ಯ ವ್ಯಕ್ತಿಯ ಹಕ್ಕುಗಳಿಗೆ ಮಾನ್ಯತೆ ಇರುವ, ಅವನ್ನು ಅವನು ರಕ್ಷಿಸಿಕೊಳ್ಳಲು ಅವಕಾಶವಿರುವ, ಶೋಷಣರಹಿತವಾದ ಸಮಾಜವೇ ಇವರ ಚಿಂತನದ ಸಾರವಾಗಿತ್ತು. ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಸ್ಪಶ್ಯತಾ ನಿವಾರಣೆ, ಮಾತೃಭಾಷೆ ಶಿಕ್ಷಣ, ಖಾದಿ ಬಳಕೆ ಇವರ ಆದರ್ಶವಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಭಾರತದಲ್ಲಿ ಸ್ವಾತಂತ್ರ್ಯವನ್ನು ಬಯಸುವ ಕೇವಲ ಒಂದಷ್ಟು ಜನರಷ್ಟೇ ಪತ್ಯೇಕವಾಗಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ತೀವ್ರವಾದಿಗಳೂ ಮತಾಂಧರೂ ಇದ್ದರು. ಪ್ರಜ್ಞಾವಂತ ಮುಂದಾಳುಗಳು 'ಹೋಮ್‌ರೂಟ್' ಅಥವಾ ಬ್ರಿಟಿಷ್ ಸಾಮ್ರಾಜ್ಯದೊಳಗೇ 'ಡೊಮಿನಿಯನ್ ಸ್ಟೇಟಸ್' ಸಿಕ್ಕರೆ ಸಾಕೆನ್ನುವ ಚಿಂತನೆ ನಡೆಸಿದ್ದರು. ಜನಸಾಮಾನ್ಯರು ಈ ಎಲ್ಲದರಿಂದ ಹೊರತಾಗಿ, ಅಥವಾ ಈ ಕುರಿತು ಮೌಢತೆಯಿಂದಾಗಿ ತಮ್ಮ ಪಾಡಿಗೆ ಇರುತ್ತಿದ್ದರು. ಭಾರತದ ಕೆಲವು ರಾಜರುಗಳು, ಅಗರ್ಭ ಶ್ರೀಮಂತರು, ರಾಜ ಪರಿವಾರ, ಸರ್ಕಾರಿ ಹುದ್ದೆಯಲ್ಲಿರುವವರು ಮತ್ತು ಸಾಕಷ್ಟು ಸಂಖ್ಯೆಯ ನೌಕರರು ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಬಯಸುತ್ತಿರಲಿಲ್ಲ ಎಂಬುದು ಸತ್ಯವೇ. ಅವರು ತಮ್ಮದೇ ಆದ ಕಾರಣಗಳಿಗಾಗಿ ಬ್ರಿಟಿಷರಿಗೆ ಎಲ್ಲ ಬಗೆಯ ಸಹಕಾರವನ್ನೂ ನೀಡುತ್ತಿದ್ದರು.

ಗಾಂಧಿಯವರ ಹೆಸರು ಕೀರ್ತಿಗಳು ಪ್ರವರ್ಧಮಾನಕ್ಕೆ ಬರುವಲ್ಲಿ ಈ ದೇಶದ ಬಡೆ ಹಾಗೂ ತಳ ಜನರ ಆಶೋತ್ತರಗಳ ಕೊಡುಗೆ ಮುಖ್ಯವಾಗಿದೆ. ಭಾರತದ ಜನರು ತಮ್ಮ ಸ್ವಾತಂತ್ರ್ಯ ಹೋರಾಟದ ನಾಯಕನಾಗಿ ಭರವಸೆ ಇಟ್ಟು ಗಾಂಧಿಯವರನ್ನು ಆಯ್ಕೆ ಮಾಡಿಕೊಂಡರು. ಪ್ರಾರಂಭದ ಕೆಲವು ವರ್ಷಗಳು ಗಾಂಧೀಜಿ ಇಂಗ್ಲೆಂಡಿನ ಮಿತ್ರರಾಗಿದ್ದರು ಹಾಗೂ ಭಾರತದಲ್ಲಿ ರಾಣಿಯ ಆಳ್ವಿಕೆಯನ್ನು ಒಪ್ಪಿಕೊಂಡಿದ್ದರು. ಬ್ರಿಟನ್ ಸರ್ವಾಧಿಪತ್ಯದ ಲಾಭಗಳನ್ನೂ ಕೊಡುಗೆಗಳನ್ನೂ ಅನುಭವಿಸಿದ್ದರು. ಮಹಾಯುದ್ಧದ ಸಂದರ್ಭದಲ್ಲಿಯೂ ಅವರು ಬ್ರಿಟಿಷ್ ಮಿತ್ರಕೂಟವನ್ನು ಬೆಂಬಲಿಸಿದ್ದರು ಹಾಗೂ ಪ್ರತಿಬಾರಿಯೂ ಬ್ರಿಟನ್ ಸಾಮ್ರಾಜ್ಯದ ಪರವಾಗಿಯೇ ನಿಂತಿದ್ದರು.

ಗಾಂಧೀ ಮಹಾತ್ಮನೆಂಬ ದಿವ್ಯತೆಯ ಮಹತ್ವ
ಗಾಂಧಿ ಜಯಂತಿ ವಿಶೇಷ: ಗ್ರಂಥ ಜೋಳಿಗೆ - ಮೋದಿಯ ಬಳಿಗೆ

ಯುದ್ಧಾನಂತರ ಅವರು ' ಹೋಮ್‌ರೂಲ್ ಗಿಂತ ಹೆಚ್ಚಾಗಿ ಸುಧಾರಣಾ ಕಾರ್ಯಗಳನ್ನು ತೀವ್ರವಾಗಿ ಪ್ರತಿಪಾದಿಸಿದರು. ಹಾಗಾದರೆ ಗಾಂಧೀಜಿ ಬದಲಾಗಿದ್ದಲ್ಲಿ, ಇದಕ್ಕೆ ಉತ್ತರ ಜನರಲ್ ಡಯರ್‌ನ ಎದುರು ನಿಲ್ಲಿಸುತ್ತದೆ. ಜನರಲ್ ಡಯರ್ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸೇರಿದ್ದ ಮುಗ್ಧ ಭಾರತೀಯರ ಮೇಲೆ ಗುಂಡಿನ ಮಳೆಗೆರೆಯುವ ಆದೇಶ ಹೊರಡಿಸಿದೆ. ಇದರ ಪರಿಣಾಮಕ್ಕೆ ನಾನೂರಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದರು. ಮುದುಕರು, ಹೆಂಗಸರು, ಮಕ್ಕಳೂ ಸೇರಿದಂತೆ ಅಲ್ಲಿ ಸೇರಿದ್ದ ಬಹುಪಾಲು ಜನರು ಸಾಮೂಹಿಕ ಹತ್ಯಾಕಾಂಡಕ್ಕೆ ಬಲಿಯಾದರು. ಈ ಘಟನೆ ಗಾಂಧೀಜಿಯವರನ್ನು ಇನ್ನಿಲ್ಲದಂತೆ ಕಾಡಿತು. ಇದರ ಪರಿಣಾಮವಾಗಿ ಅವರ ಚಿಂತನಾ ಧಾಟಿ ಬದಲಾಯಿತು. ಅವರು ಸ್ವಾತಂತ್ರ್ಯ ಚಳುವಳಿಯ ಚುಕ್ಕಾಣಿ ಹಿಡಿದರು. ಆ ದಿನದಿಂದ ಅವರು ಇಂಗ್ಲೆಂಡ್ ಸರ್ಕಾರದ ನೇರ ಎದುರಾಳಿಯಾದರು. ಈ ವೃತ್ತಿ ಅಂದು ದೇಶದ ಜನಗಳ ಭವಿಷ್ಯವನ್ನು ಅಕ್ಷರಶಃ ತನ್ನ ಕೈಯಲ್ಲಿ ಹಿಡಿದು ಸಾಗಿದರು. ಗಾಂಧಿ ಮಾತನಾಡಿದರೆ ಅದು ಭಾರತ ಮಾತನಾಡಿದಂತೆ. ಗಾಂಧಿ ನಡೆಸುವ ಚಟುವಟಿಕೆ ಎಂದರೆ ಅದು ಭಾರತದ ಚಟುವಟಿಕೆ, ಗಾಂಧಿಯನ್ನು ಬಂಧಿಸಿ ಸೆರೆಯಲ್ಲಿಟ್ಟರೆ ಇಡಿಯ ಭಾರತ ತಳಮಳಿಸುತಿತ್ತು ಮತ್ತು ಪ್ರತಿಕ್ರಿಯಿಸುತ್ತಿತ್ತು.

ಗಾಂಧೀ ತತ್ವ ಮಹೋನ್ನತವಾದದ್ದು. ಅದು ಹಿಂಸೆಗೆ ಅತೀತವಾದ ಆತ್ಮಶಕ್ತಿ. ಹಿಂಸಾತ್ಮಕ ಪ್ರತಿರೋಧವಿಲ್ಲದ, ಧಾರ್ಮಿಕ ಪ್ರವೃತ್ತಿಯ, ಸ್ಥಳೀಯ ಎಲ್ಲೆಗಳನ್ನೂ ದಾಟಿ ವಿಶ್ವಾತ್ಮಕವಾಗಿ ಬೆಳೆದು ನಿಂತ ಮಹತ್ವದ ವ್ಯಕ್ತಿ. ಅವರು ಆದ್ಯಾತ್ಮಿಕ ಸ್ತರಕ್ಕೆ ಏರಿ ನಿಂತವರು. ಬದುಕು,ಚಲನೆ ಮತ್ತು ಅಸ್ತಿತ್ವಗಳ ಕಾಳಜಿ ಅವರದು. ಅವರ ಹೋರಾಟ ಅರಸೊತ್ತಿಗೆ ಮತ್ತು ರಾಜ್ಯಗಳ ವಿರಚ್ಛವಾಗಿರಲಿಲ್ಲ. ಅವರನ್ನು ಭಗವಂತ ಹಾಗೂ ಮನುಷ್ಯರ ಆತ್ಮಗಳನ್ನು ಮುಖಾಮುಖಿಯಾಗಿಸುವ ಹೋರಾಟ. ತನ್ನ ಹಾಗೂ ತನ್ನ ಜನರ ರಾಜಕೀಯ ವಿಮುಕ್ತಿಯ ಜೊತೆಗೆ ಮತ್ತು ಅದರಾಚೆಗಿನ ಆದ್ಯಾತ್ಮಿಕ ಮುಕ್ತಿಯನ್ನು ಸಾಧಿಸುವ ಬಗೆಗೆ ಅವರ ಚಿಂತನೆಯು ಹರಡಿಕೊಂಡಿತ್ತು.

ಗಾಂಧೀ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚಾರಿಸುತ್ತಾರೆಂದರೆ ಅವರ ಹಿಂದೆ ಭಾರೀ ಜನಸಮೂಹವೇ ಹೊರಟು ನಿಲ್ಲುತ್ತಿತ್ತು. ಅವರು ಯಾವುದೇ ಪಟ್ಟಣ ಅಥವಾ ನಗರದಲ್ಲಿ ಮಾತಾನಾಡಲು ಬರುತ್ತಾರೆಂದರೆ ಇಪ್ಪತ್ತೈದರಿಂದ ಎಪ್ಪತ್ತೈದು ಸಾವಿರದ ತನಕ ಜನರು ಬಂದು ನೆರೆಯುತ್ತಿದ್ದರು. ಈ ಜನಸಾಗರದಲ್ಲಿ ಮುಗ್ಗರು, ಬುದ್ಧಿವಂತರೆನ್ನದೆ ಎಲ್ಲ ಬಗೆಯ, ಎಲ್ಲ ಸ್ತರದ ಜನರೂ ಇರುತ್ತಿದ್ದರು. ಮಹಾತ್ಮನ ಮಾತುಗಳ ಮೋಡಿಗೆ ಸಿಕ್ಕು ಪರಿವರ್ತನೆಗೊಂಡ, ಪ್ರೇರಣೆಗೊಂಡು ಕಾರ್ಯಸಾಧನೆಗಿಳಿದ ಜನರ ಅದೆಷ್ಟೋ ಉದಾಹರಣೆಗಳು ದಂತಕತೆಗಳಂತೆ ಸುಳಿದಾಡುತ್ತಿದ್ದವು. ಭಾರತದ ಮೂಲೆಮೂಲೆಗಳಲ್ಲಿನ ಜನರಿಗೆ ಅವರೊಳಗಿನ ದಿವ್ಯತೆ ಹಾಗೂ ಅದ್ಯಾತ್ಮಿಕ ಪ್ರಭೆಯನ್ನು ಗುರುತಿಸಿದ್ದರು. ಅವರ ಅನುಯಾಯಿಗಳು ಭಾರತದ್ಯಾದಂತ ಇದ್ದರು ಮತ್ತು ಅವರೆಲ್ಲರೂ ಹೆಚ್ಚು ಬದ್ಧತೆಯುಳ್ಳವರೂ ಶಿಸ್ತಿನ ಜೀವನ ಶೈಲಿ ಅನುಸರಿಸುವ ಆದ್ಯಾತ್ಮ ಪ್ರವೃತ್ತಿಯವರಾಗಿದ್ದರು. ಈ ಬಗೆಯ ನಿದರ್ಶನ ನಮ್ಮ ಈವರೆಗಿನ ಇತಿಹಾಸದಲ್ಲಿ ಮತ್ತೆಲ್ಲೂ ನೋಡಲು ಸಿಗದು.

ಈ ವ್ಯಕ್ತಿತ್ವದಲ್ಲಿ ಸಾಧಾರಣ ಅನ್ನಿಸುವ ಅಂಶಗಳೇ ಕಾಣಿಸುವುದಿಲ್ಲ. ಮೇಲ್ನೋಟಕ್ಕಂತೂ ಕಾಣುವಂತಹದ್ದಲ್ಲ. ಗಾಂಧೀಜಿಯ ದೇಹ ಅತ್ಯಂತ ಸಣಕಲು, ಅನುಕಂಪ ತರಿಸುವಷ್ಟು ನಗಣ್ಯ ಶಾರೀರಿಕ ನಿಲುವು. ತೂಕ ಹೆಚ್ಚಿಲ್ಲ. ಎಲ್ಲ ಬಗೆಯ ನಿಶ್ಯಕ್ತಿ, ಆಕರ್ಷಕ ನಿಲುವಿಲ್ಲ, ಅದ್ಭುತ ಮಾತುಗಾರರಲ್ಲ, ಪ್ರಖಾಂಡ ಪಂಡಿತರಲ್ಲ, ಈ ಎಲ್ಲದರ ಹೊರತಾಗಿಯೂ ಗಾಂಧಿ ಸೆಳೆಯುತ್ತಿದ್ದರು ಎನ್ನುವುದಾದರೆ, ಅದು ಅವರ ಕುಂದದ ಅಧ್ಯಾತ್ಮಿಕ ಪ್ರಭೆಯ ಸೌಂದರ್ಯ.

ಸಮುದಾಯದ ಬದುಕನ್ನೇ ತನ್ನ ಬದುಕಾಗಿಸಿಕೊಂಡಿರುವ ಅವರ ಸಮರ್ಪಣಾ ಭಾವ ಜನರನ್ನು ತೀವ್ರವಾಗಿ ತಟ್ಟುತ್ತಿತ್ತು. ಗಾಂಧೀಜಿ ಉತ್ತಮ ಕುಟುಂಬದಲ್ಲಿ ಜನಿಸಿ, ಎಲ್ಲ ಸವಲತ್ತುಗಳೊಡನೆ ಬೆಳೆದವರು. ಭಾರತ ಮತ್ತು ಇಂಗ್ಲೆಂಡುಗಳಲ್ಲಿ ವಿದ್ಯಾಭ್ಯಾಸ ಪಡೆದವರು. ಅವರು ಮುಂಬಯಿಗೆ ಹಿಂದಿರುಗಿ ವಕೀಲಿ ವೃತ್ತಿಯನ್ನೂ ಆರಂಭಿಸಿದರು.

ಆದರೆ ನಂತರದ ದಿನಗಳಲ್ಲಿ ಇತರ ಮನುಷ್ಯರಂತೆ ಲೌಕಿಕ ಯಶಸ್ಸಿನ ಮೆಟ್ಟಿಲುಗಳನ್ನು ಏರುವ ಬದಲಾಗಿ ಕೆಳಕೆಳಕ್ಕೆ ಬದುಕಿನ ಬುಡಮಟ್ಟಕ್ಕೆ ಇಳಿದು ನೋಡಿದರು. ಮನುಷ್ಯನ ನಿಗೂಢತೆಗಳನ್ನು ನೋವನ್ನೂ ಬಗೆದು ನೋಡಲು, ಒಳಹೊಕ್ಕು ಅರಿಯಲು ಮುಂದಾದರು. ರಕ್ತ, ಬೆವರು, ಕಣ್ಣೀರುಗಳೊಳಗೆ ಹುದುಗಿ ಹೋದ ಮನುಷ್ಯನ ಕಥನಗಳನ್ನು ಅರಿಯುವ ಯತ್ನಕ್ಕಿಳಿದರು, ಮನುಷ್ಯನ ಯಾತನೆಗಳಲ್ಲವನ್ನೂ ತೊಡೆದು ಹಾಕುವ ಪರಿಹಾರ ಸೂತ್ರದ ಚಿಂತನೆ ನಡೆಸಿದರು. ಸಮಾಜದಲ್ಲಿ ಕೆಳ ಸ್ತರಕ್ಕೆ ತುಳಿಯಲ್ಪಟ್ಟ ಜನಾಂಗಗಳನ್ನು ತಮ್ಮ ಸಂಗಾತಿಗಳಾಗಿ ಮಾಡಿಕೊಂಡರು ಹಾಗೂ ಅವರೊಂದಿಗೆ ಜಗತ್ತಿನ ಕಹಿಯನ್ನು ಸ್ವತಃ ತಾವೂ ಹಂಚಿಕೊಂಡರು. ಸುಧಾರಣೆಯ ಅಡ್ಡಿ ಆತಂಕಗಳನ್ನು ಎದುರಿಸಿ, ನಿವಾರಣೋಪಾಯ ಕಂಡುಕೊಂಡು, ಅನಂತರವಷ್ಟೇ ಇತರರನ್ನು ಈ ಪಥದತ್ತ ನಡೆಯಲು ಉದ್ದೀಪಿಸಿದರು.

ಇತರರನ್ನು ಹಿಂಸೆ ಮಾಡದೆ ಸ್ವತಃ ತಾನೇ ಯಾತನೆಗೆ ಒಳಪಡುವ ಇವರ ಕಠಿಣ ವ್ರತವು ಜನರಲ್ಲಿ ಮತ್ತಷ್ಟು ಹೆಚ್ಚಿನ ಗೌರವ ಭಾವನೆ ಮೂಡಿಸಲು ಸಹಕಾರಿಯಾಯಿತು. ಬಹಿರಂಗದಲ್ಲಿಯೂ ಅವರದು ತ್ಯಾಗಜೀವಿಯೇ, ತಮ್ಮ ಅಸ್ತಿಪಾಸ್ತಿಗಳನ್ನು ತ್ಯಜಿಸಿದರು. ಸಾಮಾಜಿಕ ಸ್ಥಾನಮಾನಗಳನ್ನು ಬಿಟ್ಟುಕೊಟ್ಟರು. ಉದ್ಯೋಗವನ್ನೂ ಬಿಟ್ಟರು. ದೈನಂದಿನ ಜೀವನದಲ್ಲಿ ಊಟ ಪಾದಗಳಲ್ಲಿ ಕಠಿಣ ನಿಯಮಗಳನ್ನು ಪಾಲಿಸತೊಡಗಿದ್ದರು. ನಾವು ಸಂಸ್ಥೆಗಳನ್ನು ಉನ್ನತ ಸಂಘಟನಾ ಚಾತುರ್ಯದಿಂದ ಗೆಲ್ಲಬೇಕು. ಶಿಸ್ತನ್ನು ಹೆಚ್ಚಿನ ಶಿಸ್ತಿನಿಂದಲೂ ತ್ಯಾಗವನ್ನೂ ಮಹೋನ್ನತ ತ್ಯಾಗದಿಂದಲೂ ಗೆಲ್ಲಬೇಕು ಎನ್ನುವುದು ಅವರ ಒಟ್ಟು ಹೋರಾಟದ ಚಿಂತನೆಯಾಗಿತ್ತು.

ಬಿಹಾರದ ಚಂಪಾರಣ್ಯದ ರೈತರ ಸುಧಾರಣೆಗೆ ಹೋರಾಟ, ಅಹಮದಾಬಾದಿನ ಗಿರಣಿ ಕಾರ್ಮಿಕರಿಗೆ ನ್ಯಾಯ, ಚರಕ - ಸ್ವರಾಜ್ಯ ಪ್ರತೀಕ, ತುಂಡು ಬಟ್ಟೆಧಾರಿಯಾಗಿ ಅಸಹಕಾರ ಚಳುವಳಿ ಬಲಪಡಿಸಿದರು. ಸಂಪೂರ್ಣ ಸ್ವರಾಜ್ಯಕ್ಕಾಗಿ ಹೋರಾಟಕ್ಕೆ ಉಪ್ಪಿನ ಸತ್ಯಾಗ್ರಹ. ಅಸ್ಪಶ್ಯರ ಹಿತಸಾಧನೆಗೆ ಹರಿಜನ ವಾರಪತ್ರಿಕೆ ಸ್ಥಾಪಿಸಿದರು. ಪ್ರಜಾತಂತ್ರವೆಂದರೆ ಪ್ರಜೆಗಳು ಸದಾ ವಿಧೇಯರಾಗಿ ವರ್ತಿಸುವುದಲ್ಲ. ಬಹುಸಂಖ್ಯಾತರಿಂದ ಭಿನ್ನವಾದ ಅಭಿಪ್ರಾಯ ಉಳ್ಳವರಾಗಿ ವರ್ತಿಸುವ ಹಕ್ಕು ಎಲ್ಲರಿಗು ಇರುತ್ತದೆ. ಇದು ವಿಚಾರ ಸ್ವಾತಂತ್ರ್ಯ ಮತ್ತು ಕ್ರಿಯಾ ಸ್ವಾತಂತ್ರ್ಯಗಳು ವ್ಯಕ್ತಿ ಸ್ವಾತಂತ್ರದಲ್ಲಿ - ಅಡಗಿರುತ್ತದೆ. ವ್ಯಕ್ತಿ ತನ್ನ ಪೂರ್ಣತೆಗೆ ಬೆಳೆದು, ತನ್ನ ಶಕ್ತಿಗಳನ್ನೆಲ್ಲ ಸಾಧಿಸಿಕೊಂಡು ಅದರ ಎಲ್ಲ ಫಲಗಳನ್ನು ಸಮಾಜಕ್ಕೆ ಹಿಂದಿರುಗಿಸುವುದೇ ನಿಜವಾದ ವ್ಯಕ್ತಿ ಸ್ವಾತಂತ್ರ್ಯದ ಅರ್ಥ ಎಂದು ಭಾವಿಸಿದ್ದರು.

ಜಾತಿ ಪದ್ಧತಿ, ಅಸ್ಪೃಶ್ಯತೆ, ಮೂಢನಂಬಿಕೆ, ಬಾಲ್ಯ ವಿವಾಹ, ಮಧ್ಯಪಾನ ನಿರೋಧ, ವಿಧವೆಯರ ಸ್ಥಿತಿ, ಸ್ತ್ರೀ ಸ್ವಾತಂತ್ರ್ಯ ತಿದ್ದಲು ಸುಧಾರಣೆ ಅಗತ್ಯ ಎಂದು ವಾದಿಸಿದ್ದಾರೆ, ಅಹಿಂಸಾತ್ಮಕ ಸಮಾಜಕ್ಕೆ ಶ್ರಮನಿಷ್ಠ ಕಾಯಕ ಅಥವ ಅನ್ನ ಕಾಯಕ ಆಧಾರವಾಗಿರತಕ್ಕದ್ದು, ಸ್ವದೇಶಿತ ಅರ್ಥವಿಚಾರದ ಅವಿಭಾಜ್ಯ ಅಂಗವಾಗಿದೆ. ಭಾರತದ ಅರ್ಥವ್ಯವಸ್ಥೆ ಗ್ರಾಮ ಸ್ವಾವಲಂಬನೆಯ ಆಧಾರದ ಮೇಲೆ ನಿರ್ಮಾಣವಾಗಬೇಕು, ಪ್ರತಿಹಳ್ಳಿಯೂ ಅದಕ್ಕೆ ಅಗತ್ಯವಾದ ವಸ್ತುಗಳನ್ನು ಉತ್ಪಾದನೆ ಮಾಡಿಕೊಳ್ಳಬೇಕು. ಗ್ರಾಮ ಅರ್ಥ ವ್ಯವಸ್ಥೆ ಕೃಷಿ ಮತ್ತು ಕುಟೀರ ಉದ್ಯಮಗಳ ಆಧಾರದ ಮೇಲೆ ನಿಲ್ಲಬೇಕು, ಗ್ರಾಮಕ್ಕೆ ಅಗತ್ಯವಾದ ಆಹಾರ ಧಾನ್ಯ, ಹತ್ತಿ, ಎಣ್ಣೆ ಕಾಳುಗಳು, ತರಕಾರಿ, ದನಗಳಿಗೆ ಹೀಗೆ ಎಲ್ಲವನ್ನೂ ಗ್ರಾಮದಲ್ಲೇ ಉತ್ಪಾದನೆ ಮಾಡಿಕೊಳ್ಳಬೇಕು. ಹತ್ತಿನೂಲು ಬಟ್ಟೆಯನ್ನು ನೇಯ್ದುಕೊಳ್ಳಬೇಕು. ಕೃಷಿ ಗ್ರಾಮೋದ್ಯೋಗಗಳಿಗೆ ಬೇಕಾದ ಉಪಕರಣಗಳು ಗ್ರಾಮದಲ್ಲೇ ತಯಾರಾಗಬೇಕು, ಆರೋಗ್ಯ ರಕ್ಷಣೆ, ನೈರ್ಮಲ್ಯ, ಗ್ರಾಮ ರಕ್ಷಣೆ ಎಲ್ಲವೂ ಹಳ್ಳಿಯವರದ್ದೇ ಜವಾಬ್ದಾರಿ. ಈ ರೀತಿಯಲ್ಲಾದರೆ ಪ್ರತಿ ಗ್ರಾಮವೂ ಸ್ವಾವಲಂಬಿ ಘಟಕ. ಭಾರತ ಸ್ವಾವಲಂಬಿ ಗ್ರಾಮ ಘಟಕಗಳ ಅಜೇಯ ಗಣರಾಜ್ಯವಾಗುತ್ತದೆ. ಪೂರ್ಣ ಸ್ವರಾಜ್ಯದ ಸ್ಥಾಪನೆಗೆ ರಾಜಕೀಯ ಸ್ವಾತಂತ್ರ್ಯ ಮೊದಲ ಮೆಟ್ಟಿಲು. ಸ್ವರಾಜ್ಯದ ರಾಜಕಾರಣ ಸೇವಾ ಪರವಾದ ರಾಜಕಾರಣವಾಗಿದೆ ಎಂದು ಭಾವಿಸಿದ್ದರು. ಇನ್ನೊಬ್ಬರ ಸೇವೆಯಲ್ಲಿ ನಮ್ಮನ್ನು ಕಳೆದುಕೊಳ್ಳುವುದೇ ತನ್ನನ್ನು ತಾನು ಕಂಡುಕೊಳ್ಳುವ ದಾರಿ ಎಂಬುದು ಅವರ ಉಕ್ತಿ.

ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಜತಂತ್ರಜ್ಞರಾಗಿ, ಧಾರ್ಮಿಕ ಪುರುಷರಾಗಿ, ಆಧ್ಯಾತ್ಮ ಸಾಧಕರಾಗಿದ್ದ, ಈ ಪುಟ್ಟ ಗಾತ್ರದ ವ್ಯಕ್ತಿಯ ಸಹಿಷ್ಣುತೆ, ಅಹಿಂಸಾ ತತ್ವಗಳು ಬ್ರಿಟಿಷ್ ಸಾಮ್ರಾಜ್ಯಕ್ಕೆ ಖಡ್ಗಕ್ಕಿಂತಲೂ ಆತಂಕಕಾರಿ ಆಯುಧಗಳಾಗಿ ಪರಿಣಮಿಸಿವೆ. ದೈನ್ಯತೆಯಲ್ಲಿ, ತ್ಯಾಗದಲ್ಲಿ, ಸಹಜೀವಿಗಳೆಡೆಗಿನ ಪ್ರೀತಿಯಲ್ಲಿ ಅವರು ಸರ್ವೋತ್ಕೃಷ್ಟರಾಗಿ ನಿಲ್ಲುತ್ತಾರೆ. ಇಂತಹವರು ಜನ್ಮ ತಳೆಯುವುದು ಸಾವಿರ ಅಥವಾ ಎರಡು ಸಾವಿರಗಳಿಗೊಮ್ಮೆಯಷ್ಟೇ ಪ್ರೀತಿಯೇ ಚೈತನ್ಯವಾಗಿರುವ ಈ ಮನುಷ್ಯ ಎಲ್ಲರ ಜೀವದಲ್ಲೂ ಉಸಿರಾಡುತ್ತಾರೆ. ಗಾಂಧೀಜಿಯ ಅಂತಃಸತ್ವವನ್ನು ಈ ತಲೆಮಾರಿನ ಜನ ಕಂಡುಕೊಂಡು ಅನುಸರಿಸಿದ್ದೇ ಆದಲ್ಲಿ, ಬಲಪ್ರಯೋಗದ ಕರಾಳಯುಗ ಕೊನೆಗೊಂಡು ಪ್ರೀತಿಯ, ಭ್ರಾತೃತ್ವದ, ಶಾಂತಿಯ ಹೊಸಯುಗ ಆರಂಭಗೊಳ್ಳುವುದರಲ್ಲಿ ಸಂದೇಹವಿಲ್ಲ.

ಲೇಖಕರು - ಡಾ. ರಾಜೇಂದ್ರಪ್ರಸಾದ್ ಪಿ, ಎಂಎಸ್‌ಡಬ್ಲೂ, ಪಿಹೆಚ್‌ಡಿ ಹಿರಿಯ ಸಂಶೋಧಕರು -ಗ್ರಾಸ್‌ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್‌, ಮೈಸೂರು

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com