ನಾಝಿವಾದವನ್ನೇ ʼರಾಷ್ಟ್ರೀಯತೆʼ ಎಂದು ಬಿಂಬಿಸಿದ್ದ ಹಿಟ್ಲರ್ ಮತ್ತು ಆತನ ಸಂಘಟನೆ
ಹಿಂಡಿನಬರ್ಗ್ ತನ್ನ ರಾಜಕೀಯ ಎದುರಾಳಿಗಳಾದ ಕಮುನಿಷ್ಟರನ್ನು ನಿಯಂತ್ರಿಸಲು ಹಿಟ್ಲರನನ್ನು ಬಳಸಿ ಬಿಸಾಕಬಹುದೆಂದು ಅತಿ ವಿಶ್ವಾಸವನ್ನು ಹೊಂದಿದ್ದ. ಅಂದು ಜರ್ಮನಿಯ ಆರ್ಥಿಕ ಸ್ಥಿತಿ ಕೂಡ ಶೋಚನೀಯವಾಗಿತ್ತು. ಅದನ್ನು ಸರಿಪಡಿಸುವ ಮಾತನಾಡುತ್ತಿದ್ದ ಹ ...
ನಾಝಿವಾದವನ್ನೇ ʼರಾಷ್ಟ್ರೀಯತೆʼ ಎಂದು ಬಿಂಬಿಸಿದ್ದ ಹಿಟ್ಲರ್ ಮತ್ತು ಆತನ ಸಂಘಟನೆ

ನಾವೆಲ್ಲ ಜಗತ್ತಿನ ಅನೇಕ ಸರ್ವಾಧಿಕಾರಿಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದೇವೆ. ಆ ಎಲ್ಲ ಸರ್ವಾಧಿಕಾರಿಗಳಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ಒಂದು ವಿಶೇಷ ಸ್ಥಾನವನ್ನು ಹೊಂದಿದ್ದಾನೆ. ಏಕೆಂದರೆ ಇರಾಕಿನ ಸದ್ಧಾಮ ಹುಸೇನ್ˌ ಪಾಕಿಸ್ತಾನದ ಜಿಯಾ ಉಲ್ ಹಕ್ ಇವರು ಯಾವುದೇ ಮೂಲಭೂತವಾದಿ ಸಂಘಟನೆಗೆ ಸೇರಿರಲಿಲ್ಲ. ವ್ಯಕ್ತಿಗತವಾಗಿ ಸರ್ವಾಧಿಕಾರಿಗಳಾಗಿ ಮೆರೆದು ಮಣ್ಣಾದವರು. ಇಟಲಿಯ ಮೂಸಲೋನಿಯ ಇಟಿಲಿಯನ್ ಫ್ಯಾಸಿಷ್ಟ ಪಾರ್ಟಿ ಮತ್ತು ಹಿಟ್ಲರ್ ನ ನಾಝಿ ಸಂಘಟನೆಗಳು ಬಲಪಂಥೀಯ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು. ಹಿಟ್ಲರ್ ಕುರಿತು ಕೆಲವು ದಿನಗಳ ಹಿಂದೆ ಬಿಬಿಸಿ ವಾಹಿನಿ ಪ್ರಸಾರ ಮಾಡಿದ " ರೈಜ್ ಆಫ್ ನಾಝಿಸ್" ದಾರವಾಹಿ ಅರ್ಥಪೂರ್ಣವಾಗಿ ಮೂಡಿಬಂದಿತ್ತು. ಅಡಾಲ್ಫ್ ಹಿಟ್ಲರ್ ಜರ್ಮನಿಯ ಜನರನ್ನು ಒಳ್ಳೆಯ ದಿನಗಳು ತರುವುದಾಗಿ ಬಣ್ಣದ ಮಾತನಾಡುತ್ತ ಹೇಗೆ ಅಧಿಕಾರಕ್ಕೆ ಬಂದ ಎನ್ನುವುದನ್ನು ಮತ್ತು ಜರ್ಮನ್ನಿನ ಜನ ಹಿಟ್ಲರನ ಮಾತಿಗೆ ಮರುಳಾಗಿ ಆತ ಅಧಿಕಾರ ಹಿಡಿಯಲು ಹೇಗೆ ಸಹಕರಿಸಿದ್ದರು ಎನ್ನುವುದನ್ನು ಈ ದಾರವಾಹಿ ಚನ್ನಾಗಿ ತೋರಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಲಪಂಥೀಯ ಧಾರ್ಮಿಕ ಮೂಲಭೂತವಾದಿಗಳು ಸುಲಭವಾಗಿ ಜನರನ್ನು ಮರಳು ಮಾಡಲು ಬಳಸುವ ತಂತ್ರವೆಂದರೆ ತಾವು ಪ್ರತಿಪಾದಿಸುವ ಧರ್ಮ ತತ್ವವೇ ರಾಷ್ಟೀಯತೆ ಎಂದು ಬಿಂಬಿಸುವುದು. ಏಕೆಂದರೆ ಕೇವಲ ರಾಷ್ಟ್ರೀಯತೆ ಒಂದನ್ನೇ ಹೇಳುತ್ತಾ ಹೋದರೆ ಸಾಮಾನ್ಯ ಜನರನ್ನು ನಂಬಿಸುವುದು ಕಷ್ಟ. ಹಾಗಾಗಿ ಧರ್ಮದ ವಿಷ ಜನರ ಮಿದುಳಿಗೆ ಬೆರೆಸಿ ಅದನ್ನೇ ರಾಷ್ಟ್ರೀಯತೆ ಎಂದು ಮರಳುಗೊಳಿಸುವುದರಲ್ಲಿ ಅವರು ನಿಪುಣರು. ಜರ್ಮನ್‌ನಲ್ಲಿ ಮೂಲಭೂತವಾದಿಗಳು ನಾಝಿವಾದವನ್ನು ರಾಷ್ಟ್ರೀಯವಾದವಾಗಿಸಿ ಹಿಟ್ಲರನಂತ ಅಪಾಯಕಾರಿ ಸರ್ವಾಧಿಕಾರಿ ಹುಂಬನನ್ನು ಹುಟ್ಟುಹಾಕಿ ಆತನ ಮೂಲಕ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳುತ್ತಾರೆ. ಧಾರ್ಮಿಕ ಮೂಲಭೂತವಾದಿಗಳು ಸದಾ ಕಾರ್ಪೋರೇಟ್ ಕಳ್ಳರೊಂದಿಗೆ ಅಕ್ರಮ ಸಂಬಂಧಗಳನ್ನಿಟ್ಟುಕೊಂಡಿರುತ್ತಾರೆ. ಜರ್ಮನ್‌ನ ಜನತೆಗೆ ನಾಝಿ ರಾಜ್ಯದ ಅಗತ್ಯವಿರಲಿಲ್ಲ. ಆದರೆ ಅಲ್ಲಿನ ಮೂಲಭೂತವಾದಿಗಳು ನಾಝಿವಾದವನ್ನೇ ರಾಷ್ಟ್ರೀಯವಾದವೆಂದು ಬಿಂಬಿಸುವ ಮೂಲಕ ಅಲ್ಲಿನ ಜನಸಾಮಾನ್ಯರನ್ನು ನಂಬಿಸುವಲ್ಲಿ ಸಫಲರಾದರು. ನಾಝಿವಾದದ ಅಪಾಯವನ್ನು ಅಲ್ಲಿನ ಚಿಂತಕರು ಮತ್ತು ಬುದ್ದಿಜೀವಿಗಳು ಊಹಿಸಿದ್ದರಾದರೂ ಅದನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ.

ಆಗ ಹಿಂಡೆನಬರ್ಗ್ ಎನ್ನುವ ಅವಕಾಶವಾದಿ ಮನುಷ್ಯ ಜರ್ಮನಿಯ ಅದ್ಯಕ್ಷನಾಗಿದ್ದ. ಹಿಂಡೆನಬರ್ಗ್ ಮತ್ತು ಆತನ ಚಾನ್ಸಲರಗಳಿಗೆ ನಾಝಿಗಳು ಜರ್ಮನ್ ಗಣರಾಜ್ಯವನ್ನು ನಾಶಪಡಿಸುವ ಕುರಿತು ಗೊತ್ತಿತ್ತು. ಆದರೆˌ ಹಿಂಡಿನಬರ್ಗ್ ತನ್ನ ರಾಜಕೀಯ ಎದುರಾಳಿಗಳಾದ ಕಮುನಿಷ್ಟರನ್ನು ನಿಯಂತ್ರಿಸಲು ಹಿಟ್ಲರನನ್ನು ಬಳಸಿ ಬಿಸಾಕಬಹುದೆಂದು ಅತಿ ವಿಶ್ವಾಸವನ್ನು ಹೊಂದಿದ್ದ. ಅಂದು ಜರ್ಮನಿಯ ಆರ್ಥಿಕ ಸ್ಥಿತಿ ಕೂಡ ಶೋಚನೀಯವಾಗಿತ್ತು. ಅದನ್ನು ಸರಿಪಡಿಸುವ ಮಾತನಾಡುತ್ತಿದ್ದ ಹಿಟ್ಲರನನ್ನು ನಂಬಿದ ಹಿಂಡೆನಬರ್ಗ್ ಹಿಟ್ಲರನ ರಾಕ್ಷಸಿ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಿಲ್ಲ. ಆತನ ಒಳ್ಳೆಯ ದಿನಗಳು ತರುತ್ತೇನೆ ಎನ್ನುವ ಬಣ್ಣದ ಮಾತುಗಳಿಗೆ ಜರ್ಮನಿಯ ಜನರು ಕೂಡ ಮಾರುಹೋಗಿದ್ದರು. ದೇಶದ ಹಳಿತಪ್ಪಿದ ಆರ್ಥಿಕತೆ ಸರಿಪಡಿಸುವ ಹಿಟ್ಲರನ ಮಾತುಗಳಿಂದ ಆತ ಜರ್ಮನ್ನರಿಗೆ ಆಶಾಕಿರಣದಂತೆ ಗೋಚರಿಸಿದ. ಆದರೆ ಆತನ ರಕ್ಕಸ ವ್ಯಕ್ತಿತ್ವˌ ಸರ್ವಾಧಿಕಾರಿ ನಡತೆˌ ನಿರ್ದಯಿ ಮತ್ತು ಚಂಡಮಾರುತದಂತ ವಿನಾಶಕಾರಿ ಪ್ರವ್ರತ್ತಿಗಳು ಅಲ್ಲಿನ ಜನರಿಗೆ ಅರ್ಥವಾಗಲೇಯಿಲ್ಲ.

ಹಿಟ್ಲರನನ್ನು ನಂಬಿದ ಹಿಂಡೆನಬರ್ಗ್ ತನ್ನ ಚಾನ್ಸಲರ್ ಗಳನ್ನು ತೆಗೆದು ಹಾಕಿ ಹಿಟ್ಲರನನ್ನು ಚಾನ್ಸಲರ್ ಆಗಿ ಜನೆವರಿ 1933 ರಲ್ಲಿ ನೇಮಿಸಿದ. ಕೆಲವು ಚಾನ್ಸಲರ್ ಗಳನ್ನು ಹಿಟ್ಲರನ ಅಧೀನದಲ್ಲಿ ಡೆಪ್ಯೂಟಿ ಚಾನ್ಸಲರ್ ಆಗಲು ಒಪ್ಪಿಸಿದ. ಇದಾದ ಕೇವಲ ಆರೇ ತಿಂಗಳಲ್ಲಿ ಹಿಟ್ಲರ ಸುನಾಮಿಯತೆ ಜರ್ಮನಿಯ ಪ್ರಜಾಪ್ರಭುತ್ವಕ್ಕೆ ಎರಗಿಬಿಟ್ಟ. ಜರ್ಮನ್ ವಿನಾಶಕಾರಕ ದಿಕ್ಕಿನೆಡೆಗೆ ಕ್ಷೀಪ್ರ ಬದಲಾವಣೆಗಳನ್ನು ಕಾಣತೊಡಗಿತು. ಹಿಟ್ಲರನ ಹಿಂದೆ ಮೂಲಭೂತವಾದಿ ನಾಝಿ ಸಂಘಟನೆ ಬೆಂಗಾವಲಾಗಿ ಕೆಲಸ ಮಾಡುತ್ತಿತ್ತು. ಮುಂದೆ ಒಂದೇ ತಿಂಗಳಲ್ಲಿ ಅದ್ಯಕ್ಷ ಹಿಂಡೆನಬರ್ಗ್ ನಾಝಿಗಳಿಗೆ ವಿಶೇಷವಾದ ಆಪತ್ಕಾಲೀನ ಅಧಿಕಾರ ನೀಡುವ ನಿರ್ಧಾರವನ್ನು ಮಾಡಿ ಅನುಷ್ಠಾನಗೊಳಿಸಿದ.

ಈ ಹೊಸ ವಿಶೇಷ ಅಧಿಕಾರದ ಮೂಲಕ ಜರ್ಮನಿಯ ನಾಗರಿಕರನ್ನು ನಿರ್ಧಿಷ್ಟವಾದ ಯಾವುದೇ ಆರೋಪಗಳಿಲ್ಲದೆಯೂ ಬಂಧನಕ್ಕೊಳಪಡಿಸುವˌ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕಸಿಯುವˌ ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತಿಕೊಳ್ಳುವ ಅಧಿಕಾರ ಹಿಟ್ಲರ್ ಪಡೆದುಕೊಳ್ಳುತ್ತಾನೆ. ಆ ವಿಶೇಷ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಹಿಟ್ಲರ್ ಒಂದೇ ವಾರದ ಅವಧಿಯಲ್ಲಿ ತನ್ನ ದುರಾಡಳಿತವನ್ನು ವಿರೋಧಿಸುವ ಇಪ್ಪತ್ತೈದು ಸಾವಿರ ಜನರನ್ನು ಬಂಧಿಸುತ್ತಾನೆ. ಅಧಿಕಾರದ ಮದವೇರಿಸಿಕೊಂಡ ಹಿಟ್ಲರ್ ಮುಂದೆ 1933, ಮಾರ್ಚಿ 23 ರಂದು ಕಾನೂನೊಂದನ್ನು ರೂಪಿಸಿ ದೇಶದ ಜನತಂತ್ರ ವ್ಯವಸ್ಥೆಯನ್ನು ಸಸ್ಪೆಂಡ್ ಮಾಡುತ್ತಾನೆ. ಸಂಸತ್ತಿನ ಸದನಗಳ ಅನುಮೋದನೆ ಇಲ್ಲದೆಯೂ ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹಿಟ್ಲರ್ ಪಡೆಯುತ್ತಾನೆ. ಜರ್ಮನಿಯ ಅದ್ಯಕ್ಷ ಹಿಂಡಿನಬರ್ಗ್ ಮತ್ತು ಉಳಿದ ಚಾನ್ಸಲರ್ ಗಳು ಆತನ ಸುನಾಮಿ ನಡವಳಿಕೆಯನ್ನು ತಡೆಯಲು ಅಸಮರ್ಥರಾಗುತ್ತಾರೆ. ಕಮುನಿಷ್ಟರನ್ನು ನಿಯಂತ್ರಿಸಲು ಬಳಸಿ ಒಗೆಯಬೇಕೆಂದು ಹಿಟ್ಲರ್ ನನ್ನು ಚಾನ್ಸಲರ್ ಮಾಡಿದ ಹಿಂಡೆನಬರ್ಗ್ ನ ಯೋಜನೆ ತಲೆಕೆಳಗಾಗುತ್ತದೆ. ಆತ ತನ್ನ ಮಾತು ಕೇಳಬಹುದೆಂಬ ನಿರೀಕ್ಷೆ ಹುಸಿಯಾಗುತ್ತದೆ.

ಜರ್ಮನ್ನಿನ ಬಾವೇರಿಯಾ ಪ್ರದೇಶದಲ್ಲಿ ವಾಸವಿದ್ದ ಹೆನ್ರಿಚ್ ಹಿಮ್ಲರ್ ಎನ್ನುವ ಧಾರ್ಮಿಕ ಮೂಲಭೂತವಾದಿ ಸ್ಕಾಟ್ಝಸ್ಟಾಫೆಲ್ ಎಂಬ ಹೆಸರಿನ ಮೂಲಭೂತವಾದಿ ಸಂಘದ ಮುಖ್ಯಸ್ಥನಾಗಿದ್ದು ಆತ ಹಿಟ್ಲರನನ್ನು ಬೆಂಬಲಿಸುತ್ತಿರುತ್ತಾನೆ. ಹಿಟ್ಲರನನ್ನು ಹುಟ್ಟುಹಾಕಿದ್ದ ಈ ನಾಝಿ ಸಂಘ ಹಿಟ್ಲರನ ಮೂಲಕ ತನ್ನ ಕಾರ್ಯ ಸಾಧಿಸುತ್ತದೆ. ಸ್ಕಾಟ್ಝಸ್ಟಾಫೆಲ್ ಸಂಘದ ಕಾರ್ಯಕರ್ತರು ಯಹೂದ್ಯ ವಿರೋಧಿˌ ಕಮುನಿಷ್ಟ ವಿರೋಧಿ ಮತ್ತು ದೇಶದ ಸಂವಿಧಾನ ಹಾಗು ಜನತಂತ್ರದ ವಿರೋಧಿಗಳಾಗಿರುತ್ತಾರೆ. ದೇಶದಲ್ಲಿ ಧರ್ಮದ ಹೆಸರಿನಲ್ಲಿ ಸಂಘಟನೆಗಿಳಿಯುವ ಆ ನಾಝಿಗಳುˌ ನಾಝಿ ವಿರೋಧಿಗಳನ್ನು ಯಾವ ಕಾರಣವೂ ಇಲ್ಲದೆ ಬಂಧಿಸುತ್ತಿರುತ್ತಾರೆ. ಹೆನ್ರಿಚ್ ಹಿಮ್ಲರ್ ಮತ್ತು ಸ್ಕಾಟ್ಝಸ್ಟಾಫೆಲ್ ಸಂಘದ ಕಾರ್ಯಕರ್ತರು ಜರ್ಮನಿಯ ಎಲ್ಲ ರಾಜ್ಯಗಳ ಮತ್ತು ಎಲ್ಲ ಆಡಳಿತಾತ್ಮಕ ಮುಖ್ಯಸ್ಥಾನಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಹಿಟ್ಲರ್ ದುರಾಡಳಿತದ ದುರುಪಯೋಗ ಪಡಿಸಿಕೊಳ್ಳುವ ಈ ಸಂಘವು ಆರ್ಥಿಕವಾಗಿ ನಾಝಿ ರಾಜ್ಯದ ಅತ್ಯತ ಶಕ್ತಿಶಾಲಿ ಸಂಘಟನೆಯಾಗಿ ರೂಪುಗೊಳ್ಳುತ್ತದೆ. ಹಿಟ್ಲರ್ ನ ಭ್ರಷ್ಟಾಚಾರ ಹಣವೆಲ್ಲ ಈ ಸಂಘದ ಸಂಘಟನೆಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ. ಈ ಹಿಮ್ಲರ್ ಮತ್ತು ಆತನ ಸಂಘಕ್ಕೆ ಹಿಟ್ಲರನ ಲೋಪದೋಷಗಳುˌ ಶಕ್ತಿಹೀನತೆಗಳ ಬಗ್ಗೆ ಚನ್ನಾಗಿ ಗೊತ್ತಿರುತ್ತದೆ. ಕಾನೂನಿನ ಹೆಸರಿನಲ್ಲಿ ಎಲ್ಲ ಅವ್ಯವಹಾರಗಳನ್ನು ರಾಜಾರೋಷವಾಗಿ ಮಾಡುತ್ತಿದ್ದ ಹಿಟ್ಲರ್ ಸಹಜವಾಗಿ ನ್ಯಾಯಾಂಗ ಮತ್ತು ಕಾರ್ಯಾಂಗಕ್ಕೆ ಹೆದರುತ್ತಿದ್ದ. ಆತನಿಗೆ ತನ್ನ ಜೀವದ ಭಯವೂ ಸಾಕಷ್ಟಿತ್ತು. ಹಿಮ್ಲರ್ ಮತ್ತು ಆತನ ಸಂಘವು ಹಿಟ್ಲರ್ ನ ಈ ಎಲ್ಲ ವೀಕ್ನೆಸ್ ತಿಳಿದುಕೊಂಡು ಆತನನ್ನು ಆಟ ಆಡಿಸುತ್ತಿದ್ದರು.

ಹಿಟ್ಲರ್ ದುರಾಡಳಿತವನ್ನು ಕಿತ್ತಿ ಒಗೆಯುವ ಎಲ್ಲ ಅವಕಾಶಗಳು ಅಲ್ಲಿನ ಜನರಿಗೆ ಇತ್ತು. ಆದರೆ ಜನರು ಆ ಎಲ್ಲ ಅವಕಾಶಗಳನ್ನು ಕಳೆದುಕೊಂಡರು. ಹಿಟ್ಲರ್ ವಿರುದ್ಧ ಮಾತನಾಡುವ ಗಟ್ಟಿಗರನ್ನು ಅಲ್ಲಿನ ಜನ ಬೆಂಬಲಿಸಲಿಲ್ಲ. ಹಾನ್ಸ್ ಲಿಟ್ಟೆನ್ ಎನ್ನುವ ವಕೀಲ ಹಿಟ್ಲರ್ ನ ದುರಾಡಳಿತದ ವಿರುದ್ಧ ಸಿಡಿದೆದ್ದಿದ್ದ. ಹಿಟ್ಲರ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದ. ಆದರೆ ಆತನಿಗೆ ಅಲ್ಲಿನ ವ್ಯವಸ್ಥೆ ನಿರೀಕ್ಷಿತ ಬೆಂಬಲ ನೀಡಲಿಲ್ಲ. ದೇಶಕ್ಕೆ ಬಂದೆರಗುವ ತೊಂದರೆಗಳನ್ನು ಮತ್ತು ತನಗೆ ಎದುರಾಗುವ ವಿರೋಧಗಳನ್ನು ಹಿಟ್ಲರ್ ತನ್ನ ಪರವಾಗಿ ತಿರುಗುವಂತೆ ಮಾಡುವ ಕಲೆಯನ್ನು ತಿಳಿದವನಾಗಿದ್ದ. ಆತ ಜನರೆದುರಿಗೆ ಅಳುವುದುˌ ದೇಶಕ್ಕಾಗಿ ಆತ ಫಕೀರನಂತೆ ಜೀವಿಸುತ್ತಿರುವುದಾಗಿ ಹೇಳುವುದುˌ ತಾನು ದೇಶಕ್ಕಾಗಿ ದುಡಿಯುತ್ತಿರುವುದರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂಬ ಭಾವನಾತ್ಮಕ ಭಾಷಣ ಮಾಡುವುದು ಇವು ಆತನ ಕಪಟ ಕಾರ್ಯತಂತ್ರಗಳಾಗಿದ್ದವು.

ಅಧಿಕಾರ ಹಿಡಿದ ಕೇವಲ ಮೂರೇ ತಿಂಗಳಲ್ಲಿ ಹಿಟ್ಲರ್ ತನ್ನ ವಿರೋಧಿಗಳನ್ನೆಲ್ಲ ಅಕಾರಣ ಬಂಧಿಸಿದ. ನ್ಯಾಯಾಂಗವನ್ನು ಸಂಪೂರ್ಣ ನಾಝಿಮಯ ಮಾಡಿಟ್ಟ. ಕಾರ್ಯಾಂಗದಲ್ಲಿ ನಾಝಿಗಳನ್ನು ಕೂರಿಸಿದ್ದ. ಜರ್ಮನಿಯ ನಾಗರಿಕರಿಗೆ ನಾಝಿವಾದವೇ ರಾಷ್ಟ್ರೀಯತೆ ಎಂಬ ನಶೆ ಏರಿಸಿದ. ಹಿಟ್ಲರ್ ನನ್ನು ಚಾನ್ಸಲರ್ ಪದವಿಯಿಂದ ಇಳಿಸುವ ಅಧಿಕಾರ ಹೊಂದಿದ್ದ ಜರ್ಮನಿಯ ಅದ್ಯಕ್ಷ ಹಿಂಡೆನಬರ್ಗ್ ಕೂಡ ಕೊನೆಗೆ ಅಸಾಹಯಕನಾದ. ಹಿಂಡೆನಬರ್ಗ್ 1934 ರಲ್ಲಿ ಮರಣ ಹೊಂದಿದ. ಆತನ ಮರಣಾನಂತರ ಹಿಟ್ಲರ್ ತನ್ನ ಡೆಪ್ಯೂಟಿ ಚಾನ್ಸಲರಗಳಿಬ್ಬರನ್ನು ಹತ್ಯೆಮಾಡಿಸಿದ. ಹಿಟ್ಲರ್ ಒಂದು ರಾತ್ರಿ ಇಡೀ ಹಿಂಡೆನಬರ್ಗ್ ಮತ್ತು ಆ ಡೆಪ್ಯೂಟಿ ಚಾನ್ಸಲರಗಳ ಸಾವನ್ನು ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿದ. ಆಮೇಲೆ ಹಿಟ್ಲರ್ ಜರ್ಮನಿಯ ಅದ್ಯಕ್ಷನಾಗಿ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸಲಾರಂಭಿಸಿದ. ಆತನ ಹುಚ್ಚಾಟಗಳುˌ ಜನವಿರೋಧಿ ಕಾನೂನುಗಳುˌ ಆತನ ಅಹಸ್ಯ ತರಿಸುವ ನಡವಳಿಕೆಗಳು ಅಲ್ಲಿನ ಜನರು ಅಸಾಹಕರಾಗಿ ಅನುಭವಿಸಬೇಕಾಯಿತು.

ಕಾಲಕಾಲಕ್ಕೆ ಈ ಬಲಪಂಥೀಯ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಹಿಟ್ಲರನಂಥ ಸಂವಿಧಾನ ವಿರೋಧಿ ಮತ್ತು ಜನತಂತ್ರ ವಿರೋಧಿ ಸರ್ವಾಧಿಕಾರಿಗಳನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ನಾಝಿವಾದದ ಮಾದರಿಯಲ್ಲೇ ಅನೇಕ ಮೂಲಭೂತವಾದಿ ಸಘಟನೆಗಳು ಕಾರ್ಯವನ್ನು ಮಾಡುತ್ತಿರುತ್ತವೆ. ನಾಝಿವಾದಿಗಳು ದೇಶದ ಅಭಿವ್ರದ್ಧಿಯ ಬಣ್ಣಬಣ್ಣದ ಮಾತನಾಡುತ್ತ ದೇಶದ ಜನರ ಕಣ್ಣಿಗೆ ಹೇಗೆಲ್ಲ ಮಣ್ಣು ಹಾಕಿ ತಮ್ಮ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಿಕೊಂಡರೊ ಅದೇ ಬಗೆಯ ಧಾರ್ಮಿಕ ಮೂಲಭೂತವಾದಿಗಳು ಪ್ರತಿಯೊಂದು ದೇಶದಲ್ಲೂ ಬಾಲ ಬಿಚ್ಚುತ್ತಿರುತ್ತಾರೆ. ಅವರ ಬಣ್ಣದ ಮಾತಿಗೆ ಮರುಳಾಗುವ ಆಯಾ ದೇಶದ ಜನರು ಹೇಗೆಲ್ಲ ಆನಂತರ ಮೋಸ ಹೋಗುತ್ತಾರೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ನಾಝಿ ಮಾದರಿಯ ಧಾರ್ಮಿಕ ಮೂಲಭೂತವಾದವನ್ನು ನಾವು ರಾಷ್ಟ್ರೀಯತೆ ಎಂದು ಭಾವಿಸಲೇಬಾರದು. ಮೂಲಭೂತವಾದಿಗಳು ಯಾವತ್ತು ರಾಷ್ಟ್ರೀಯವಾದಿಗಳಾಗಿರಲು ಸಾಧ್ಯವೇಯಿಲ್ಲ. ದೇಶದ ಪ್ರಜಾಪ್ರಭುತ್ವವನ್ನು ಬಹು ಸೂಕ್ಷ್ಮವಾಗಿ ನಾಶಗೊಳಿಸುವ ನಾಝಿ ಮಾದರಿಯ ಬೆಳವಣಿಗೆಗಳು ಯಾವುದೇ ದೇಶಕ್ಕಾಗಲಿ ಅವು ಅತ್ಯಂತ ಅಪಾಯಕಾರಿ. ಈ ಮೂಲಭೂತವಾದಿಗಳ ಹುಸಿ ರಾಷ್ಟ್ರೀಯತೆಯನ್ನು ಅರ್ಥಮಾಡಿಕೊಂಡು ಜನರು ಸಾಂಘಿಕವಾಗಿ ಇಂಥ ದುಷ್ಟ ಶಕ್ತಿಗಳನ್ನು ನಾಶಗೊಳಿಸಿ ನೆಲದ ಜನತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com