ಆತ್ಮನಿರ್ಭರರಾಗಿ ಎನ್ನುತ್ತಲೇ ಜನರ ಬದುಕು ಕಿತ್ತುಕೊಂಡರೆ ಅದು ‘K’ ಮಾದರಿ ಪ್ರಗತಿ!
ಅಭಿಮತ

ಆತ್ಮನಿರ್ಭರರಾಗಿ ಎನ್ನುತ್ತಲೇ ಜನರ ಬದುಕು ಕಿತ್ತುಕೊಂಡರೆ ಅದು ‘K’ ಮಾದರಿ ಪ್ರಗತಿ!

ಸಂಕಷ್ಟದ ಹೊತ್ತಲ್ಲಿ ನೆರವಿಗೆ ಕೈಚಾಚುವ ಶ್ರೀಸಾಮಾನ್ಯನ ಕೈಹಿಡಿದು ಎತ್ತಬೇಕಾದ ಸರ್ಕಾರ, ಪ್ರಭುತ್ವ ತನ್ನ ಹೊಣೆಗಾರಿಕೆ ಮರೆತು, ಕೈಎತ್ತಿ, ಬೆನ್ನು ತಿರುಗಿಸಿ ಕೂತಿದೆ. ‘ಅಚ್ಛೇದಿನ’ದ ಮಾತು ಮರೆಸಿ ‘ಆತ್ಮನಿರ್ಭರ’ರಾಗಿ ಎಂದು ಜನಸಾಮಾನ್ಯರಿಗೆ ಕರೆ ಕೊಡುತ್ತಲೇ ಮತ್ತೊಂದು ಬದಿಯಲ್ಲಿ ಜನರ ಬದುಕು ಎಂಬ ‘ಸ್ವರಾಜ್ಯ’ವನ್ನೇ ಕಿತ್ತುಕೊಳ್ಳಲಾಗುತ್ತಿದೆ. ಅದನ್ನೇ ಅರ್ಥಶಾಸ್ತ್ರಜ್ಞರು ‘K’ ಮಾದರಿ ಎಂದು ಕರೆದು ಎಚ್ಚರಿಸಿದ್ದಾರೆ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕರೋನಾ ಮುಂಚಿನ ನೋಟು ರದ್ದತಿ, ಜಿಎಸ್ ಟಿ ಜಾರಿ ಮತ್ತು ಅದೆಲ್ಲದರ ಪರಿಣಾಮವಾದ ಭಾರೀ ಆರ್ಥಿಕ ಕುಸಿತದೊಂದಿಗೆ ಈಗ ಕರೋನಾ ಲಾಕ್ ಡೌನ್ ಕೂಡ ಸೇರಿ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದೆ.

ಆದರೆ, ಜನಸಾಮಾನ್ಯರ ಬದುಕು ಹೈರಾಣಾಗುತ್ತಿರುವ ಹೊತ್ತಿಗೆ ದೇಶದ ಕೆಲವೇ ಕೆಲವು ಮಂದಿ ಬೃಹತ್ ಉದ್ಯಮಿಗಳು, ಉಳ್ಳುವರ ವಹಿವಾಟಿನ ಷೇರುಪೇಟೆ, ಬೆರಳೆಣಿಕೆಯ ಉದ್ಯಮಗಳು ಮಾತ್ರ ಭಾರೀ ಲಾಭದ ಹಾದಿಯಲ್ಲೇ ಇವೆ. ಇದು ಹೇಗೆ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಒಗಟಿಗೆ ಇದೀಗ ಜಾಗತಿಕ ಮಟ್ಟದಲ್ಲಿ ಹೊಸದೊಂದು ಸೂತ್ರ ಸಿಕ್ಕಿದ್ದು, ಅದನ್ನು ಇಂಗ್ಲಿಷ್ ವರ್ಣಮಾಲೆಯ ‘K’ ಮಾದರಿಯ ಆರ್ಥಿಕ ಪುನಃಶ್ಚೇತನ ಎಂದು ವ್ಯಾಖ್ಯಾನಿಸಲಾಗಿದೆ.

ಆ ಮೂಲಕ ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುವುದು, ಬಡವರು ಕಡುಬಡವರಾಗುತ್ತಲೇ ಹೋಗುವುದು, ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಹಿಗ್ಗುತ್ತಲೇ ಹೋಗುವುದು, ತನ್ನ ಆಡಳಿತ ನೀತಿ, ನಿಲುವುಗಳು, ಕಾರ್ಯ-ಯೋಜನೆಗಳ ಮೂಲಕ ಇಲ್ಲದರ ಹಿತ ಕಾಯಬೇಕಾದ ಸರ್ಕಾರಗಳು, ಅವರನ್ನು ಸಂಪೂರ್ಣ ನಿರ್ಲಕ್ಷಿಸಿ, ಇಲ್ಲವೇ ಬಡವರನ್ನು ಸುಲಿಗೆ ಮಾಡಿ ಉಳ್ಳವರ ಸೇವೆಗೆ ಟೊಂಕ ಕಟ್ಟಿ ನಿಲ್ಲುವ ಭಾರತದ ಸದ್ಯದ ‘ಆರ್ಥಿಕ ಬೆಳವಣಿಗೆ’ಯನ್ನು ವಿವರಿಸುವ ಮಾದರಿಯೊಂದನ್ನು ಅರ್ಥಶಾಸ್ತ್ರಜ್ಞರು ಕಟ್ಟಿಕೊಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇವಲ ಆರು ವರ್ಷಗಳ ಹಿಂದೆ ಜಗತ್ತಿನ ಅತಿ ವೇಗದ ಬೆಳವಣಿಗೆಯ ಮತ್ತು ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಆರ್ಥಿಕ ಶಕ್ತಿ ಎಂದು ಗುರುತಿಸಿಕೊಂಡಿದ್ದ ಮತ್ತು ಅತಿ ಶೀಘ್ರದಲ್ಲೇ ಆರ್ಥಿಕ ಶಕ್ತಿಶಾಲಿ ದೇಶಗಳ ಸಾಲಿಗೆ ಸೇರಲಿದೆ ಎಂದು ಊಹಿಸಲಾಗಿದ್ದ ಭಾರತದ ಆರ್ಥಿಕತೆ ಕೇವಲ ಆರು ವರ್ಷಗಳಲ್ಲಿ ಅತಿ ವೇಗದ ಕುಸಿತದ, ಅಧೋಮುಖಿ ಆರ್ಥಿಕತೆಯಾಗಿ ಹೊರಹೊಮ್ಮಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಬರೋಬ್ಬರಿ ಶೇ.23.9ರಷ್ಟು ಕುಸಿತ ದಾಖಲಿಸುವ ಮೂಲಕ ಜಿಡಿಪಿ ಪತನ ಅಪಾಯಕಾರಿ ಮುನ್ಸೂಚನೆ ನೀಡಿದೆ. ಇದೀಗ ಕೋವಿಡ್-19ರ ಏಟು, ದೊಡ್ಡ ಮಟ್ಟದ ಹಣಕಾಸಿನ ಬಿಕ್ಕಟ್ಟು, ಒಂದು ಕಡೆ ವಸೂಲಾಗದ ಸಾಲ(ಎನ್ ಪಿಎ) ಬಿಕ್ಕಟ್ಟಿನಿಂದ ಮುಳುಗುತ್ತಿರುವ ಬ್ಯಾಂಕಿಂಗ್ ವಲಯ, ಮತ್ತೊಂದು ಸಾಲ ಕಟ್ಟಲಾಗದೆ, ಹೊಸ ಸಾಲ ಹುಟ್ಟಿಸಲಾಗದೆ ಮುಳುಗುತ್ತಿರುವ ಕಾರ್ಪೊರೇಟ್ ವಲಯದ ಟ್ವಿನ್ ಬ್ಯಾಲೆನ್ಸ್ ಶೀಟ್ ಬಿಕ್ಕಟ್ಟು, ಹಿಂದೆಂದೂ ಕಾಣದ ಪ್ರಮಾಣದಲ್ಲಿ ಬೆಳೆದಿರುವ ನಿರುದ್ಯೋಗ ಮುಂತಾದ ಕಾರಣಗಳಿಂದಾಗಿ ಜಿಡಿಪಿ ದರ ಮತ್ತು ಒಟ್ಟಾರೆ ದೇಶದ ಪ್ರಗತಿ ಹಳ್ಳ ಹಿಡಿದಿದೆ.

‘ಅಚ್ಛೇದಿನ’, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’, ಏಕ್ ಭಾರತ್, ಶ್ರೇಷ್ಠ ಭಾರತ್, ಮೇಕ್ ಇನ್ ಇಂಡಿಯಾ, ‘ಲಿಂಕ್ ವೆಸ್ಟ್, ಆಕ್ಟ್ ಈಸ್ಟ್’ , ಮ್ಯಾಕ್ಸಿಮಮ್ ಗವರ್ನನೆನ್ಸ್, ಮಿನಿಮಮ್ ಗೌವರ್ನಮೆಂಟ್’, ‘ಪಢೇ ಭಾರತ್, ಬಢೇ ಭಾರತ್’, ‘ಸ್ಟಾರ್ಟ್ ಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ’ ಮುಂತಾದ ನೂರಾರು ಘೋಷಣೆಗಳ ಮೂಲಕವೇ ದೇಶವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ, ‘ವಿಶ್ವಗುರು’ವಾಗಿ ಮಾಡುತ್ತೇವೆ, ಐದು ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಿ ಬೆಳೆಸುತ್ತೇವೆ ಎಂದು ಭರವಸೆಗಳ ಹೊಳೆ ಹರಿಸಿದವರೇ, ತಮ್ಮ ಆಡಳಿತ ನೀತಿ-ನಿಲುವುಗಳ ಮೂಲಕ ದೇಶ ಆರ್ಥಿಕ ಬೆನ್ನುಲುಬು ಮುರಿದು ಹಾಕಿದ್ದಾರೆ. ದೇಶದ ಸಂಪತ್ತನ್ನು ವೃದ್ಧಿಸುತ್ತೇವೆ, ಬಡತನ ಅಳಿಸಿ, ಸಮೃದ್ಧಿಯನ್ನೇ ತರುತ್ತೇವೆ ಎಂದವರು, ಸ್ವತಂತ್ರ ಭಾರತದ ಇತಿಹಾಸದಲ್ಲೇ ಕಂಡರಿಯದ ಸಂಕಷ್ಟಗಳಿಗೆ ಜನರನ್ನು ತಳ್ಳಿದ್ದಾರೆ.

ಆದರೆ, ಅದೇ ಹೊತ್ತಿಗೆ ಅದೇ ಆಡಳಿತರೂಢ ಬಿಜೆಪಿ ಮತ್ತು ಪ್ರಧಾನಿ ಮೋದಿಯವರೊಂದಿಗೆ ಪರಮಾಪ್ತ ನಂಟುಹೊಂದಿರುವ ದೇಶದ ಬೆರಳೆಣಿಕೆ ಮಂದಿ ಬೃಹತ್ ಕಾರ್ಪೊರೇಟ್ ಕುಳಗಳ ಆಸ್ತಿ ಇಡೀ ಜಗತ್ತೇ ಅಚ್ಚರಿಪಡುವ ಮಟ್ಟಿಗೆ ಹಲವು ಪಟ್ಟು ಹೆಚ್ಚಿದೆ. ನಿರಂತರವಾಗಿ ದೇಶದ ವಿಮಾನ ನಿಲ್ದಾಣಗಳು, ಬಂದರುಗಳು, ರೈಲ್ವೆ ಜಾಲ, ಗಣಿ, ದೂರಸಂಪರ್ಕ ಸೇರಿದಂತೆ ಎಲ್ಲವನ್ನೂ ಆ ಒಂದಿಬ್ಬರು ಉದ್ಯಮಿಗಳು ಕಬಳಿಸುತ್ತೇ ಇದ್ದಾರೆ. ದೇಶದ ಶ್ರೀಸಾಮಾನ್ಯನ ಬೆವರಿನ ತೆರಿಗೆ ಹಣದಲ್ಲಿ ಕಟ್ಟಿಬೆಳೆಸಿದ ಸಂಸ್ಥೆಗಳನ್ನು ಆಡಳಿತಗಾರರು ಉದ್ಯಮಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಸಾರ್ವಜನಿಕರ ಕೈತಪ್ಪುತ್ತಿರುವ ಉದ್ಯಮಗಳು, ಖಾಸಗೀ ಕಾರ್ಪೊರೇಟ್ ಕುಳಗಳ ಕಿರೀಟವನ್ನು ಅಲಂಕರಿಸುತ್ತಿವೆ.

ಹಾಗೆ ನೋಡಿದರೆ, ದೇಶದ ಉದ್ಯಮ, ಶಿಕ್ಷಣ, ಕೃಷಿ, ಆರೋಗ್ಯ, ಸಾರಿಗೆ, ಕೃಷಿ(ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಳಿಕ) ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಹೀಗೆ ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ಕಬಳಿಸುವುದು ಮತ್ತು ಬಲಿಷ್ಠ ಮೀನುಗಳ ಪರ ಇಡೀ ವ್ಯವಸ್ಥೆಯೇ ಪಕ್ಷಪಾತಿಯಾಗಿ, ತಲೆ ಹಿಡಿಯುವುದು ನಡೆಯುತ್ತಿದೆ. ಹಾಗಾಗಿ ಒಂದು ಕಡೆ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಬರ್ಬರವಾಗುತ್ತಿರುವ ಹೊತ್ತಿಗೇ, ದೊಡ್ಡ ಕುಳಗಳ ಆಸ್ತಿ ಭಾರೀ ನೆಗೆತದೊಂದಿಗೆ ಗಗನಮುಖಿಯಾಗಿದೆ.

ತೀರಾ ವಿಪರ್ಯಾಸಕರ ಈ ವಿದ್ಯಮಾನವನ್ನೇ ಇದೀಗ ಆರ್ಥಿಕ ತಜ್ಞರು, ‘K’ ಮಾದರಿಯ ಆರ್ಥಿಕ ಬೆಳವಣಿಗೆ ಎಂದು ಕರೆದಿದ್ದಾರೆ. ಅಂದರೆ; ಒಂದು ಬಿಂದುವಿನಿಂದ ಹೊರಡುವ ಎರಡು ಗೆರೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿರಂತರ ಸಾಗುವುದು. ಅಂದರೆ; ‘K’ನಲ್ಲಿ ಮೊದಲ ಲಂಬರೇಖೆ ಆರ್ಥಿಕತೆಯ ಮಾನದಂಡವಾದರೆ, ಭಾರತದ ಕೆಲವೇ ಮಂದಿ ಕಾರ್ಪೊರೇಟ್ ಕುಳಗಳ ಸಂಪತ್ತಿನ ನಿರಂತರ ಏರುಗತಿಯನ್ನು ಏರಿಕೆಯ ರೇಖೆಯೂ, ಜನಸಾಮಾನ್ಯರ ಅಧೋಗತಿಯನ್ನು ಇಳಿಕೆ ರೇಖೆಯೂ ಪ್ರತಿನಿಧಿಸುತ್ತದೆ! ಬಡವರು ಇನ್ನಷ್ಟು, ಮತ್ತಷ್ಟು ಬಡವರಾದಷ್ಟೂ, ಬಡವರ ನಷ್ಟ, ಕೆಲವೇ ಮಂದಿ ಶ್ರೀಮಂತರ ಪಾಲಿಗೆ ಲಾಭವಾಗುತ್ತದೆ. ಬಡವರು ಕುಸಿದಷ್ಟೂ ಶ್ರೀಮಂತರು ಏಳುತ್ತಾರೆ, ಅವರ ಸಂಪತ್ತು ವೃದ್ಧಿಸುತ್ತದೆ.

ವಿವಿಧ ಜನ ಕಲ್ಯಾಣ ಕಾರ್ಯಕ್ರಮಗಳು, ಯೋಜನೆಗಳೂ, ಆರ್ಥಿಕ ನೆರವು, ಸಬ್ಸಿಡಿ, ಸಹಾಯಧನ, ಬೆಂಬಲಗಳ ಮೂಲಕ, ಅಗ್ಗದ ಶಿಕ್ಷಣ, ಸಾರಿಗೆ, ಆರೋಗ್ಯ, ದೂರಸಂಪರ್ಕ, ನಾಗರಿಕ ಮೂಲಸೌಕರ್ಯ ಮುಂತಾದ ಸಾರ್ವಜನಿಕ ಸೇವೆಗಳ ಮೂಲಕ ಬಡವರ ಸಂಕಷ್ಟವನ್ನು ದೂರಮಾಡುವುದು, ಅವರ ಬದುಕನ್ನು ಇನ್ನಷ್ಟು ಸಹನೀಯವಾಗಿಸುವುದು ಈ ಮೊದಲು ಸರ್ಕಾರದ ಹೊಣೆ ಎಂದು ಭಾವಿಸಲಾಗಿತ್ತು. ಆ ಕಾರಣಕ್ಕಾಗಿಯೇ ಒಂದು ಪಕ್ಷದ, ಒಬ್ಬ ವ್ಯಕ್ತಿಯ ಜನ ಕಲ್ಯಾಣ ಕಾರ್ಯಸೂಚಿ, ಅಜೆಂಡಾ, ಪ್ರಣಾಳಿಕೆಯ ಮೇಲೆ ಜನ ಯಾರು ಆಡಳಿತಕ್ಕೆ ಯೋಗ್ಯರು, ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಆದರೆ, ಈಗ ಹುಸಿ ರಾಷ್ಟ್ರೀಯತೆ, ಧರ್ಮಾಂಧತೆ, ಕೋಮುವಾದಗಳು ಮತದಾರನ ಬೆರಳು ಮತ್ತು ಮತ ಯಂತ್ರದ ಚಿಹ್ನೆಗಳ ನಡುವಿನ ಸಂಬಂಧವನ್ನು ನಿರ್ಧರಿಸತೊಡಗಿದ ಮೇಲೆ, ಆ ಯಾವ ಜನ ಕಲ್ಯಾಣ ಕಾರ್ಯಕ್ರಮಗಳೂ ರಾಜಕೀಯ ಕಾರ್ಯಸೂಚಿಯಾಗಿ, ರಾಜಕೀಯ ಬದ್ದತೆಯಾಗಿ ಉಳಿದಿಲ್ಲ.

ಬದಲಾಗಿ, ಸಾರ್ವಜನಿಕ ಸಾರಿಗೆ, ಸಂಪರ್ಕ, ಶಿಕ್ಷಣ, ಆರೋಗ್ಯ, ಉದ್ದಿಮೆಗಳೆಲ್ಲವನ್ನೂ ಆಡಳಿತ ಸರ್ಕಾರ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದವರೇ ಖಾಸಗಿಯವರಿಗೆ ಒಪ್ಪಿಸುವ ಮೂಲಕ, ಬಡವರ ಆರ್ಥಿಕ ಹೊರೆಯ ಮೇಲೆ ಚಪ್ಪಡಿ ಎಳೆಯುತ್ತಿದ್ದಾರೆ. ಬಡವರ ಬೆನ್ನು ಮೂಳೆ ಮುರಿದಷ್ಟು, ಅವರು ನೆಲ ಕಚ್ಚಿದಷ್ಟೂ ಉಳ್ಳವರಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೇ ಅಗ್ಗದ ರೈಲು ಪ್ರಮಾಣದ ಅವಕಾಶವನ್ನು, ಅಗ್ಗದ ಆರೋಗ್ಯ ಸೇವೆಯ ಸರ್ಕಾರಿ ಆಸ್ಪತ್ರೆಗಳನ್ನು, ಅಗ್ಗದ ಮೊಬೈಲ್ ಸೇವೆಯ ಸರ್ಕಾರಿ ದೂರಸಂಪರ್ಕ ಇಲಾಖೆಯನ್ನು, ಉಚಿತ ಶಿಕ್ಷಣದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿಯವರ ಮಡಿಲಿಗೆ ಬಾಗೀನವಾಗಿ ಅರ್ಪಿಸಲಾಗುತ್ತಿದೆ.

ಹಾಗಾಗಿ ಬಡವರ ಬಡತನ ಇನ್ನಷ್ಟು ಭೀಕರವಾಗುತ್ತಿದೆ. ಸಂಕಷ್ಟಗಳು ಇನ್ನಷ್ಟು ಗಾಢವಾಗುತ್ತಿವೆ. ದೇಶದ ಆರ್ಥಿಕತೆಯ ಅಸಮತೋಲನದ ಮೇಲೆ ಕಣ್ಣಿಡಬೇಕಾದ, ವ್ಯವಹಾರ- ವಹಿವಾಟಿನ ಮೇಲೆ ನಿಗಾ ವಹಿಸಬೇಕಾದ ಸಂಸ್ಥೆಗಳು, ಕಣ್ಗಾವಲು ವ್ಯವಸ್ಥೆಗಳು ಇಡಿಯಾಗಿ ಬೃಹತ್ ಕಂಪನಿಗಳ ಪರೋಕ್ಷ ವಕಾಲತು ವಹಿಸುತ್ತಿವೆ. ಕಡುಕಷ್ಟದ ಹೊತ್ತಲ್ಲಿ ಚೂರು ಆಸರೆಯಾಗುತ್ತಿದ್ದ ಸರ್ಕಾರಿ, ಸಾರ್ವಜನಿಕ ವ್ಯವಸ್ಥೆಗಳನ್ನು ಅವರಿಂದ ಕಿತ್ತುಕೊಳ್ಳುವ ಮೂಲಕ ಆಡಳಿತಗಾರರು ವಿಕಟ ಅಟ್ಟಹಾಸದ ನಗೆ ಬೀರುತ್ತಿದ್ದಾರೆ. ಹುಸಿ ದೇಶಭಕ್ತಿ, ಧರ್ಮಾಂಧತೆಯ ಘೋಷಣೆ ಕೂಗಿ ಬಡವರ ಹಸಿವಿನ ನಡುವೆ ಆವೇಶದ, ಅಫೀಮಿನ ಅಮಲು ಉಣಿಸಲಾಗುತ್ತಿದೆ. ನಿಜ ಕಷ್ಟ ಮರೆಸಲಾಗುತ್ತಿದೆ.

ಇದನ್ನೇ ಅರ್ಥಶಾಸ್ತ್ರಜ್ಞರು ‘K’ ಮಾದರಿಯ ಆರ್ಥಿಕ ಬೆಳವಣಿಗೆ ಎಂದು ಕರೆದಿದ್ದಾರೆ. ಹಾಗೆ ನೋಡಿದರೆ, ಇದು ಕೇವಲ ಭಾರತದ ಮಟ್ಟಿಗೆ ಮಾತ್ರವಲ್ಲದೆ, ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿಯೂ ಸದ್ಯ ಕಂಡುಬರುತ್ತಿರುವ ಒಂದು ವರಸೆ. ರಾಷ್ಟ್ರರಾಷ್ಟ್ರಗಳ ಮಟ್ಟದಲ್ಲಿ ಪ್ರಬಲ ಚೀನಾ ನಿರಂತರವಾಗಿ ಸಣ್ಣ ಮೀನುಗಳನ್ನು ಕಬಳಿಸುತ್ತಾ, ಜಗತ್ತಿನಾದ್ಯಂತ ತನ್ನ ಉದ್ಯಮ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದೆ. ಜಗತ್ತಿನ ಮೂಲೆಮೂಲೆಯಲ್ಲಿ ಬಂದರುಗಳನ್ನು ಕೈವಶಮಾಡಿಕೊಳ್ಳುತ್ತಾ, ದುರ್ಬಲ ದೇಶಗಳಿಗೆ ನೆರವಿನ ಹಸ್ತ ಚಾಚುವ ನೆಪದಲ್ಲಿ ಅವುಗಳನ್ನು ತನ್ನ ಅಡಿಯಾಳುಗಳನ್ನಾಗಿ ಮಾಡಿಕೊಳ್ಳುತ್ತಾ ಸಾಗಿದೆ. ಅದೇ ಹೊತ್ತಿಗೆ ನೂರಾರು ಆಫ್ರಿಕಾ, ಏಷ್ಯಾ ರಾಷ್ಟ್ರಗಳು ನಿರಂತರ ಬಡತನ, ಹಸಿವಿನ ಕೂಪದಲ್ಲಿ ಸಿಲುಕಿ ಹೈರಾಣಾಗಿವೆ.

ಹಾಗಂತ “ಇದಾವುದೂ ಕೋವಿಡ್ ಅಥವಾ ಕರೋನಾ ಲಾಕ್ ಡೌನ್ ತಂದ ಸಂಕಷ್ಟಗಳೇನಲ್ಲ. ಬದಲಾಗಿ ಭಾರತವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇಂತಹ ಉಳ್ಳವರ ಪರ ಮತ್ತು ಬಡವರ ವಿರೋಧಿ ಆಡಳಿತದ ವರಸೆಗಳು ಕೋವಿಡ್ ಪೂರ್ವದಿಂದಲೂ ಜಾರಿಯಲ್ಲಿದ್ದವು. ಆದರೆ, ಕೋವಿಡ್ ಸಂದರ್ಭವನ್ನು ಆಡಳಿತ ವ್ಯವಸ್ಥೆ ಮತ್ತು ಕಾರ್ಪೊರೇಟ್ ಕುಳಗಳ ಅಪವಿತ್ರ ಮೈತ್ರಿ ಪರಿಣಾಮಕಾರಿಯಾಗಿ ಬಳಸಿಕೊಂಡು, ಸಾರ್ವಜನಿಕ ವಲಯವನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳಲು ಯಶಸ್ವಿಯಾಯಿತು. ಪಿಪಿಪಿ ಅಥವಾ ಖಾಸಗೀ ಮತ್ತು ಸಾರ್ವಜನಿಕ ಪಾಲುದಾರಿಕೆ ಎಂಬುದು ಕೂಡ ಇಂತಹದ್ದೇ ಖಾಸಗೀಕರಣ ಮಾದರಿಯ ಆರಂಭಿಕ ಹೆಜ್ಜೆ. ಜೊತೆಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಉಗ್ರ ರಾಷ್ಟ್ರೀಯವಾದ, ಕೋಮು ಹಿಂಸಾಚಾರ, ಭಾಷೆ-ಜಾತಿಗಳ ಮೇಲೆ ಜನರನ್ನು ಒಡೆಯುವುದು ಮುಂತಾದ ತಂತ್ರಗಳಿಗೆ ಆಡಳಿತ ವ್ಯವಸ್ಥೆಗಳು ಮೊರೆಹೋಗಿವೆ. ಅದೇ ಹೊತ್ತಿಗೆ, ನಿಧಾನಕ್ಕೆ ಸಾರ್ವಜನಿಕ ವಲಯವನ್ನು ಆಕ್ರಮಿಸಿಕೊಳ್ಳುತ್ತಿರುವ ಬೃಹತ್ ಕಾರ್ಪೊರೇಟ್ ಕುಳಗಳು ದೇಶದ ಪ್ರಭುತ್ವವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಿವೆ(ಈವರೆಗೆ ಪರೋಕ್ಷವಾಗಿ ಅದನ್ನೇ ಮಾಡಿದ್ದವು!)” ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ!

ಅಂದರೆ, ಸಂಕಷ್ಟದ ಹೊತ್ತಲ್ಲಿ ನೆರವಿಗೆ ಕೈಚಾಚುವ ಶ್ರೀಸಾಮಾನ್ಯನ ಕೈಹಿಡಿದು ಎತ್ತಬೇಕಾದ ಸರ್ಕಾರ, ಪ್ರಭುತ್ವ ತನ್ನ ಹೊಣೆಗಾರಿಕೆ ಮರೆತು, ಕೈಎತ್ತಿ, ಬೆನ್ನು ತಿರುಗಿಸಿ ಕೂತಿದೆ. ‘ಅಚ್ಛೇದಿನ’ದ ಮಾತು ಮರೆಸಿ ‘ಆತ್ಮನಿರ್ಭರ’ರಾಗಿ ಎಂದು ಜನಸಾಮಾನ್ಯರಿಗೆ ಕರೆ ಕೊಡುತ್ತಲೇ ಮತ್ತೊಂದು ಬದಿಯಲ್ಲಿ ಜನರ ಬದುಕು ಎಂಬ ‘ಸ್ವರಾಜ್ಯ’ವನ್ನೇ ಕಿತ್ತುಕೊಳ್ಳಲಾಗುತ್ತಿದೆ. ಅದನ್ನೇ ಅರ್ಥಶಾಸ್ತ್ರಜ್ಞರು ‘K’ ಮಾದರಿ ಎಂದು ಕರೆದು ಎಚ್ಚರಿಸಿದ್ದಾರೆ!

Click here to follow us on Facebook , Twitter, YouTube, Telegram

Pratidhvani
www.pratidhvani.com