ಕರೋನಾ ಏರುತ್ತಲಿದ್ದರೂ ಅವಸರದಲ್ಲಿ BIEC ಕೋವಿಡ್ ಕೇರ್ ಸೆಂಟರ್ ಮುಚ್ಚುತ್ತಿರುವ ರಾಜ್ಯ ಸರ್ಕಾರ
ಅಭಿಮತ

ಕರೋನಾ ಏರುತ್ತಲಿದ್ದರೂ ಅವಸರದಲ್ಲಿ BIEC ಕೋವಿಡ್ ಕೇರ್ ಸೆಂಟರ್ ಮುಚ್ಚುತ್ತಿರುವ ರಾಜ್ಯ ಸರ್ಕಾರ

ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರುಗತಿಯಲ್ಲಿ ಸಾಗುತ್ತಿದೆ. ಆದರೂ BIEC ಕೋವಿಡ್ ಕೇರ್ ಸೆಂಟರ್ ಮುಚ್ಚುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಎಷ್ಟು ಸರಿ ಎಂಬುದರ ಕೂಲಂಕುಷ ವಿಶ್ಲೇಷಣೆ ಇಲ್ಲಿದೆ.

ಯದುನಂದನ

ಆರಂಭದಲ್ಲಿ ಕರೋನಾ ವಿಷಯವನ್ನು ಮಾಧ್ಯಮಗಳು ಸಂಭ್ರಮಿಸಿದ್ದವು. ಜನರಲ್ಲಿ ಭಯವನ್ನು ಹುಟ್ಟಿಸಿದವು. ಬೆಂಗಳೂರು ಗಲಭೆ ಮತ್ತು ಡ್ರಗ್ಸ್ ಧಂಧೆಯ ವಿಷಯಗಳು ಮುನ್ನಲೆಗೆ ಬಂದದ್ದೇ ತಡ ಘನ ಮಾಧ್ಯಮಗಳಿಗೆ ಪ್ರತಿದಿನ ಸುಮಾರು 10 ಸಾವಿರ ಪ್ರಕರಣಗಳು ಕಂಡುಬರುತ್ತಿರುವ ಕರೋನಾಗೆ ಸಂಬಂಧಿಸಿದ ಸುದ್ದಿ ಕಾಲಕಸವಾಗಿ ಪರಿಣಮಿಸಿದೆ. ಇದನ್ನೇ ನೆಪ ಮಾಡಿಕೊಂಡು ರಾಜ್ಯ ಸರ್ಕಾರ ಮತ್ತೊಂದು ಅವಘಡ ಸೃಷ್ಟಿಸಲು ಹೊರಟಿದೆ.

ಕರೋನಾ ನಿಯಂತ್ರಣ ಮಾಡುವ ವಿಷಯದಲ್ಲಿ ಕೇರಳದಂತೆ ಕರ್ನಾಟಕ ಕೂಡ ಮಾದರಿ ರಾಜ್ಯ ಆಗಬಹುದಿತ್ತು. ಆರಂಭದಲ್ಲಿ ಅಂತಹ‌ ಸೂಚನೆ-ಸುಳಿವುಗಳು ಗೋಚರಿಸಿದ್ದವು. ರಾಜ್ಯದ ಆರೋಗ್ಯ ಮತ್ತು ಪೊಲೀಸ್ ಮೂಲಸೌಕರ್ಯಗಳು ಚೆನ್ನಾಗಿರುವುದರಿಂದ ಅದು ಸಾಧ್ಯವಿತ್ತು. ಲಾಕ್‌ಡೌನ್ ಅನ್ನು ಯಶಸ್ವಿಗೊಳಿಸಬಹುದಿತ್ತು. ಆದರೆ ಸರ್ಕಾರದ ನೇತಾರ ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಂಡ ಆತುರದ ನಿರ್ಧಾರಗಳು, ಸಂಬಂಧಪಟ್ಟ ಸಚಿವರ ನಡುವೆ ಸಮನ್ವಯ ಇಲ್ಲದೇ ಇದ್ದದ್ದು ಜೊತೆಗೆ ಕೇಂದ್ರ ಸರ್ಕಾರದ ಎಡವಟ್ಟುಗಳಿಂದ ಕರ್ನಾಟಕವೂ ಕರೋನಾ ಎಂಬ ಕ್ರೂರಿಗೆ ಆಹಾರವಾಗಬೇಕಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಳಿಕ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ನಲ್ಲಿ ಬೃಹತ್ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿತು. 10,100 ಹಾಸಿಗೆ ಹೊಂದಿದ್ದ ಈ ಕೋವಿಡ್ ಕೇರ್ ಸೆಂಟರ್ ಇಡೀ‌ ದೇಶದಲ್ಲೇ‌ ದೊಡ್ಡದೆಂದು ಗಮನ‌ ಸೆಳೆಯಿತು. ಆದರೆ ಆರಂಭದಲ್ಲೇ ಹಾಸಿಗೆಗಳು ಮತ್ತು ಪೀಠೋಪಕರಣಗಳನ್ನು ದುಬಾರಿ ಹಣ ಕೊಟ್ಟು ಬಾಡಿಗೆಗೆ ತರಲಾಗಿದೆ ಎಂದು ಚರ್ಚೆಯಾಗಿತ್ತು.‌ ಜತೆಗೆ ರಾಜ್ಯ ಬಿಜೆಪಿ ಸರ್ಕಾರ ಕರೋನಾ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆಯಾಯಿತು.‌ ಮತ್ತೆ ತಪ್ಪು ಅರಿವಾದ ರಾಜ್ಯ ಸರ್ಕಾರ ಹಾಸಿಗೆಗಳು ಮತ್ತು ಪೀಠೋಪಕರಣಗಳನ್ನು ಬಾಡಿಗೆ ತರುವ ಪ್ರಸ್ತಾಪ ಕೈಬಿಟ್ಟು ಖರೀದಿಸಿತು. ಇಷ್ಟೆಲ್ಲಾ ಆಗಿ ನಿರ್ಮಾಣವಾದ ಕೋವಿಡ್ ಕೇರ್ ಅನ್ನು ಈಗ ರಾಜ್ಯ ಸರ್ಕಾರ ಇದೇ ಸೆಪ್ಟೆಂಬರ್ 15ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ.

ವಾಸ್ತವವಾಗಿ ಸೌಮ್ಯ ರೋಗಲಕ್ಷಣ ಕಂಡುಬಂದವರಿಗೆ ಚಿಕಿತ್ಸೆ ಕೊಡಲೆಂದು ಈ ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆದರೆ ಇತ್ತೀಚಿಗೆ ಕೋವಿಡ್ ಕೇರ್ ಕೇಂದ್ರಕ್ಕೆ ರೋಗಲಕ್ಷಣ ಇರುವವರು ಬರುತ್ತಿಲ್ಲ ಎಂಬ ಕಾರಣದಿಂದ ಸ್ಥಗಿತಗೊಳಿಸಲಾಗುತ್ತಿದೆ. ಕೋವಿಡ್ ಕೇರ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ರಾಜೇಂದರ್ ಕುಮಾರ್ ಕಟಾರಿಯಾ ಅವರು ರೋಗಿಗಳ ಅಲಭ್ಯತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಜೊತೆಗೆ ಕೋವಿಡ್ ಕೇರ್ ಸ್ಥಗಿತಗೊಳಿಸುವಂತೆ ಸಲಹೆಯನ್ನೂ ನೀಡಿದ್ದಾರೆ‌. ಅವರು‌ ಕೊಟ್ಟ ಸಲಹೆ ಆಧಾರದ ಮೇಲೆ ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಕೋವಿಡ್ ಕೇರ್ ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶ ವಿವರಿಸಿದೆ.

ಇದಲ್ಲದೆ ಈ ಕೋವಿಡ್ ಕೇರ್ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದ 10,100 ಹಾಸಿಗೆಗಳು ಮತ್ತು ಪೀಠೋಪಕರಣಗಳನ್ನು ರಾಜ್ಯದ ವಿವಿಧ ಹಾಸ್ಟೆಲ್ ಮತ್ತು ಆಸ್ಪತ್ರೆಗಳಿಗೆ ವಿವರಿಸುವುದಕ್ಕೆ ನಿರ್ಧರಿಸಲಾಗಿದೆ. ಆ ಪೈಕಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ 2,500, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಹಾಸ್ಟೆಲ್ ಗೆ 1,000, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಸ್ಟೆಲ್ ಗೆ1,000 ಮತ್ತು ಬೆಂಗಳೂರಿನ ಜಿಕೆವಿಕೆ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗೆ 1,000 ಹಾಸಿಗೆ ಮತ್ತು ಪೀಠೋಪಕರಣಗಳನ್ನು ನೀಡಲಾಗುತ್ತದೆ. ಉಳಿದ ಹಾಸಿಗೆ ಪೀಠೋಪಕರಣಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಹಾಸ್ಟೆಲ್‌ಗಳಿಗೆ ಕೊಡಲಾಗುತ್ತದೆ ಎಂದು ಅದೇಶ ತಿಳಿದಿದೆ.

ಆದರೆ ರಾಜ್ಯದಲ್ಲಿ ಈಗಲೂ ಪ್ರತಿದಿನ ಸುಮಾರು 10 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲೂಬಹುದು. ಈ ಸಂದರ್ಭದಲ್ಲಿ ತರಾತುರಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಗಿತಗೊಳಿಸುವುದು ಸೂಕ್ತ ತೀರ್ಮಾನವಾಗಲಿದೆಯೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ‌‌. ರಾಜ್ಯ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕಾಗುತ್ತದೆ. ಸ್ಥಗಿತಗೊಳಿಸುವುದನ್ನೇ ಕೆಲ ದಿನಗಳವರೆಗೆ ಕಾದು ನೋಡಿ ಆಮೇಲೆ ಮಾಡಬಹುದು.

ಇದೇ ಕರೋನಾ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಹಲವು ಆತುರದ ನಿರ್ಧಾರ ಮಾಡಿವೆ. ಉದಾಹರಣೆಗೆ ಸ್ವಲ್ಪ ಸಮಯಾವಕಾಶ ಕೊಟ್ಟು ಲಾಕ್‌ಡೌನ್ ಜಾರಿಗೊಳಿಸಿದ್ದರೆ ಲಕ್ಷಾಂತರ ವಲಸೆ ಕಾರ್ಮಿಕರ ಜೀವನ ಬೀದಿ ಪಾಲಾಗುತ್ತಿರಲಿಲ್ಲ. ತಿಂಗಳುಗಳ‌ ಕಾಲ ಅವರು ಜೀವ ಬಿಗಿಹಿಡಿದು ಕಾಯುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ.‌ ಕರೋನಾ ಮುಗಿದ ಅಧ್ಯಾಯವಲ್ಲ, ಮುಂದಿನ ವರ್ಷವೂ ಇರಲಿದೆ ಎಂದು ಕೇಂದ್ರ ಸರ್ಕಾರದ ಟಾಸ್ಕ್ ಫೋರ್ಸ್ ಸದಸ್ಯ ಡಾ. ರಣದೀಪ್ ಗುಲೇರಿಯಾ ಅವರೇ ಅಭಿಪ್ರಾಯಪಟ್ಟಿದ್ದಾರೆ. ಈಗಲೂ ಅಷ್ಟೇ ರಾಜ್ಯ ಸರ್ಕಾರ ಯೋಚಿಸಿ ನಿರ್ಧರಿಸುವುದು ಸೂಕ್ತ.

Click here to follow us on Facebook , Twitter, YouTube, Telegram

Pratidhvani
www.pratidhvani.com