ಭಾರತದ ನಿರ್ಮಾಣದಲ್ಲಿ ಶಿಕ್ಷಕರು -ಸ್ಥಿತಿಗತಿ

ಶಿಕ್ಷಕನಾದವನು ತನ್ನ ಬೋಧನಾ ವಿಷಯವನ್ನು ಕೂಲಂಕಷವಾಗಿ ತಿಳಿದು ಕೊಂಡಿರಬೇಕಲ್ಲದೆ ವಿದ್ಯಾರ್ಥಿಗೆ ಸ್ಪೂರ್ತಿಯಸೆಲೆಯಾಗಿ ಕಾರ್ಯನಿರ್ವಹಿಸಲು ಕಂಕಣಬದ್ಧನಾಗಿರಬೇಕು. ಎಲ್ಲಕ್ಕೂ ಮಿಗಿಲಾಗಿ ಆತ ಕೀರ್ತಿಗಾಗಿಯಾಗಲೀ, ಅಧಿಕಾರಕ್ಕಾಗಿ ಆಗಲೀ ಕಾರ್ಯ ಪ್ರವೃತ್ತನಾಗಬಾರದು. ಉತ್ತಮ ಗುರುವಾದವನು ತನ್ನನ್ನು ತಾನು ತಿದ್ದಿಕೊಳ್ಳಲು ಸದಾ ಸಿದ್ಧನಿರಬೇಕು -ಡಾ. ಸರ್ವೆಪಳ್ಳಿ ರಾಧಾಕೃಷ್ಣನ್
ಭಾರತದ ನಿರ್ಮಾಣದಲ್ಲಿ ಶಿಕ್ಷಕರು -ಸ್ಥಿತಿಗತಿ
Admin

ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆ. ಭಾರತದ 2ನೆಯ ರಾಷ್ಟ್ರಪತಿಗಳು ಹಾಗೂ ಹೆಸರಾಂತ ಶಿಕ್ಷಣತಜ್ಣರಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬ ನಾಗರಿಕನ ಬದುಕಿಗೆ ಬುನಾದಿ ಹಾಕುವ, ಮಾರ್ಗದರ್ಶಕರಾಗಿರುವ ಶಿಕ್ಷಕರ ಸೇವೆ ಪ್ರಾತಃ ಸ್ಮರಣೀಯ. ಈ ಪವಿತ್ರ ಶಿಕ್ಷಕರ ದಿನದಂದು ಶಿಕ್ಷಕರ ಸೇವೆಯನ್ನು ಸ್ಮರಿಸುವುದು ಮತ್ತು ಪುರಸ್ಕರಿಸುವುದು ನಮ್ಮ ಕರ್ತವ್ಯ. ಶಿಕ್ಷಕರು ಕೇವಲ ಮಾಹಿತಿದಾರರು ಅಲ್ಲ, ಶಿಕ್ಷಣದ ಮೂಲಕ ನಮಗೆ ಜ್ಞಾನ ನೀಡುವವರು ಆಗಿದ್ದಾರೆ. ಒಂದು ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡುವುದಕ್ಕೆ ಶಿಕ್ಷಕ ಸಮುದಾಯದಿಂದ ಮಾತ್ರವೇ ಸಾಧ್ಯ. ಅದರಲ್ಲಿಯೂ ಪ್ರಾಥಮಿಕ, ಪ್ರೌಢಶಾಲಾ ಹಂತದ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವವನ್ನೂ ಮತ್ತಾರೂ ಬೀರಲು ಸಾಧ್ಯವಿಲ್ಲ. ವ್ಯಕ್ತಿ ಎಷ್ಟೇ ಎತ್ತರಕ್ಕೆ ತಲುಪಿದರೂ ತಮ್ಮ ಭವಿಷ್ಯತ್ತಿಗೆ ಬಾಲ್ಯದಲ್ಲೇ ಬುನಾದಿ ಹಾಕಿದ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ ಆದ್ದರಿಂದ ಶಿಕ್ಷಕರೂ ಸದಾ ಅಭಿನಂದನಾರ್ಹರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಶಾಲೆಯ ತರಗತಿ ಮತ್ತು ಇಡೀ ಶಿಕ್ಷಣ ವ್ಯವಸ್ಥೆಯ ನಡುವಿನ ಪ್ರಮುಖ ಮಧ್ಯವರ್ತಿಯಾಗಿ ಹಾಗೂ ಶಾಲೆಯ ಸಮತೆ ಮತ್ತು ಧಕ್ಷತೆಯನ್ನು ಹೆಚ್ಚಿಸಲು ಪರಿಣಾಮಕಾರಿ ಶಿಕ್ಷಕರ ಅವಶ್ಯಕವಿದೆ. ಶಿಕ್ಷಕರ ಕೆಲಸವು ಬಲು ಜಟಿಲವಾದದ್ದು ಮತ್ತು ರಾಷ್ಟ್ರದ ಭವಿಷ್ಯಕ್ಕೆ ಬಹಳ ಮೂಲಭೂತವಾದದ್ದು. ಶಿಕ್ಷಣ ಎಂಬುದು ಒಂದು ಸಂಕೀರ್ಣ ಪ್ರಕ್ರಿಯೆ. ಅದರಲ್ಲೂ ಭಾರತದಂತಹ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯವುಳ್ಳ ವೈವಿಧ್ಯಪೂರ್ಣವಾದ ದೇಶದಲ್ಲಿ ಅದು ಇನ್ನೂ ಜಟಿಲ. ಆದ್ದರಿಂದ ಅತ್ಯಂತ ದಕ್ಷವಾಗಿ ಕರಾರುವಾಕ್ಕಾಗಿ ಮತ್ತು ನಿಖರವಾಗಿ ಯೋಜನೆಗಳನ್ನು ಮಾಡಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಶಾಲೆಗಳಲ್ಲಿ ನಿಜವಾದ ಕಲಿಕೆ ನಡೆಯುತ್ತಿದೆಯೇ ಮತ್ತು ಶಾಲೆಯ ಉತ್ತಮ ಸಾಧನೆಗೆ ಕಾರಣೀಭೂತವಾದ ಅಂಶಗಳು ಯಾವುವು ಎಂಬುದನ್ನು ಕಾಣಲು ಶಾಲೆಗಳನ್ನು ನಿರ್ವಹಿಸಿಕೊಂಡು ಬರುವ ವ್ಯಕ್ತಿಗಳಲ್ಲಿ ಇರುವ ಮಕ್ಕಳನ್ನು ಪ್ರೀತಿಸುವ ಕಾಳಜಿಯುಳ್ಳ ಅದ್ವಿತೀಯ ಗುಣ. ಎಲ್ಲಿ ಶಾಲೆಯ ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯಾತೀತತೆಯಿಂದ ರೂಪಿತವಾದ ಶಿಕ್ಷಕರು ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗುತ್ತಾರೆ.

“ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿರುವ ಸುಧಾರಣೆಯೆಂದರೆ ಮುಂದಿನ ಬದುಕಿಗೆ ವ್ಯಕ್ತಿಯನ್ನು ಸಿದ್ಧಪಡಿಸುವುದಷ್ಟೇ ಶಿಕ್ಷಣ ಎನ್ನುವ ಸಂಕುಚಿತ ಭಾವನೆಯನ್ನು ತೊಡೆದು ಹಾಕುವುದು, ಬದಲಿಗೆ ಶಿಕ್ಷಣವನ್ನು ಪರಿಪೂರ್ಣ ಬದುಕಿನ ಒಂದು ಭಾಗ ಎನ್ನುವ ಭಾವನೆಯನ್ನು ಬೆಳೆಸುವುದು.”
ಜಾನ್ ಡ್ಯೂಯಿ (ಖ್ಯಾತ ಶಿಕ್ಷಣ ತಜ್ಞ)

ಈ ವಿಶಾಲವಾದ ಮತ್ತು ಆಳವಾದ ಉದ್ದೇಶದ ಹಿನ್ನೆಲೆಯಲ್ಲಿ, ಒಂದು ಶಾಲೆಯ ಶಿಕ್ಷಕನ ಪಾತ್ರವು ಇನ್ನಷ್ಟು ಮಹತ್ತ್ವವನ್ನು ಪಡೆದುಕೊಳ್ಳುತ್ತದೆ. ಶಾಲೆಯ ಶಿಕ್ಷಕರು ತನ್ನ ಶಾಲೆಯಲ್ಲಿ ಶಿಕ್ಷಣದ ಈ ಸದುದ್ದೇಶವನ್ನು ಸ್ವಯಂ ನಂಬಿ ಅದನ್ನು ಅನುಷ್ಠಾನಕ್ಕೆ ತರಲು ಕಂಕಣಬದ್ಧರಾಗಿರಬೇಕು. ಇಲ್ಲದೇ ಹೋದರೆ, ಆ ಶಾಲೆಯೂ ನಮ್ಮ ಸುತ್ತಲೂ ಕಾಣಬರುತ್ತಿರುವ ಯಥಾಪ್ರಕಾರ ಹಳೆಯ ಜಾಡಿನ ರೀತಿಯಲ್ಲಿಯೇ ನಿರ್ವಹಣೆಯಾಗಿ ಮಾಮೂಲಿ ಶಾಲೆಯಾಗುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಶಿಕ್ಷಣದ ಸದುದ್ದೇಶಗಳಿಗಾಗಿ ಕಂಕಣ ಬದ್ಧತೆಯಿಂದ ದುಡಿಯುವುದು ಸುಲಭದ ಮಾತಲ್ಲ. ಅನೇಕ ಅಡೆತಡೆಗಳನ್ನು ಎದುರಿಸಿ ಹೋರಾಡಬೇಕು. ನಿರಂತರವಾಗಿ ಜನರಿಗೆ ಅವುಗಳ ಮಹತ್ವವನ್ನು ಮನವರಿಕೆ ಮಾಡಿಸುತ್ತಾ ಹೋಗಬೇಕು. ಆದರೆ ಇಂಥ ಸವಾಲುಗಳು ಮತ್ತು ದುಡಿಮೆ ಎಲ್ಲ ಶಿಕ್ಷಕರಿಗೆ ಎದುರುಗೊಳ್ಳುವಂತಹುದೇ. ಇದಕ್ಕೆ ಸಮರ್ಥರಾದ ಮತ್ತು ಬಹಳ ಆತ್ಮವಿಶ್ವಾಸವುಳ್ಳ ಶಿಕ್ಷಕರು ಅಗತ್ಯವಿರುತ್ತಾರೆ. ಇದಕ್ಕಾಗಿ, ಶಾಲೆಯ ಮುಖ್ಯಸ್ಥರು, ಶಿಕ್ಷಕರು ಬೆಳೆದು ಅಭಿವೃದ್ಧಿ ಹೊಂದುವಂತಹ ಒಂದು ಸಾಮರ್ಥ್ಯವರ್ಧನೆಯ ವಾತಾವರಣವನ್ನು ರಚಿಸಬೇಕಾಗುತ್ತದೆ. ಹೀಗಾಗಬೇಕಾದರೆ ಪರಸ್ಪರ ನಂಬಿಕೆಯ, ಪ್ರಯೋಗ ಶೀಲತೆಯ ಮತ್ತು ಮುಕ್ತ ಅಭಿವ್ಯಕ್ತಿಯ ಸಂಸ್ಕೃತಿ ಬೆಳೆಯಬೇಕು. ಇದು ಶಾಲೆಯ ಸಂಸ್ಕೃತಿ ಎಂತಹುದು ಎಂಬುದನ್ನು ಅವಲಂಬಿಸಿರುತ್ತದೆ ಮತ್ತು ಶಾಲೆಯ ಸಂಸ್ಕೃತಿಯನ್ನು ರೂಪಿಸುವುದರಲ್ಲಿ ಶಾಲೆಯ ಶಿಕ್ಷಕ ಬಹಳ ನಿರ್ಣಾಯಕ ಪಾತ್ರವನ್ನು ಹೊಂದಿರುತ್ತಾನೆ. ನಮ್ಮ ಶಾಲೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿರಬೇಕು. ಇದರರ್ಥ ಶಾಲೆಯ ಶಿಕ್ಷಕನು ಎಲ್ಲ ವಿಷಯಗಳ ಬಗ್ಗೆ ವಿವೇಚನಾ ಪೂರ್ಣ ಚರ್ಚೆ ನಡೆಯುವಂತಹ ಮತ್ತು ವಿಷಯಗಳನ್ನು ಅಧಿಕಾರ ಮುದ್ರೆಯಿಂದ ನಿರ್ಣಯಿಸದ ಸಂಸ್ಕೃತಿಯನ್ನು ಬೆಳೆಸಲು ಸಮರ್ಥರಾಗಿರಬೇಕು.

ಕರ್ನಾ‍ಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 6024 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದು. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ತರಗತಿಯವರೆಗೆ ಶಿಕ್ಷಣ ಇಲಾಖೆಯಲ್ಲಿ ಒಟ್ಟು 352127 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಇದರಲ್ಲಿ ಒಟ್ಟು 3,03,498 (ಶೇಕಡ,86.19ರಷ್ಟು)ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು. 48,629 (ಶೇಕಡ. 13.81 ರಷ್ಟು) ಶಿಕ್ಷಕರ ಕೊರತೆಯಿರುವುದನ್ನು ಗಮನಿಸಬಹುದಾಗಿದೆ.

admin

ಮೂಲ: ಯೂಡೈಸ್, 2018-19

ರಾಜ್ಯದ ಮೂಲೆ ಮೂಲೆಯಲ್ಲೂ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಸ್ಥಿತಿ ಹಿಂದೆಂದಿಗಿಂತಲೂ ಇಂದು ಶೋಚನೀಯವಾಗಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಯಾವುದೇ ಶಾಲೆ ಜೀವಂತವಾಗಿ ಉಳಿಯಬೇಕೆಂದರೂ ಅದಕ್ಕೆ ಶಿಕ್ಷಕರೇ ಹೊಣೆಯಾಗುತ್ತಾರೆ. ಅಳಿಯಬೇಕೆಂದರೂ ಶಿಕ್ಷಕರೇ ಕಾರಣರಾಗಿರುತ್ತಾರೆ ಅನ್ನುವುದು ನಿಜವಾದರೂ ಶಿಕ್ಷಕರಿಗೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪರಸ್ಪರ ವಿಚಾರ ವಿನಿಮಯ ಇಲ್ಲದಿರುವುದು. ಸೂಕ್ತ ಕಾರ್ಯತಂತ್ರ, ಸೂಕ್ತವಲ್ಲದ ರಚನೆಗಳು, ಕಳಪೆ ಗುಣಮಟ್ಟದ ಜನಾಭಿವೃದ್ಧಿ ಹಾಗೂ ಜನರನ್ನು ಸಬಲಗೊಳಿಸಲು ಪೂರಕವಾಗಿರದ ಕಾರ್ಯನೀತಿಗಳು ಕಾರಣವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿರುವ ಬಹು ಮುಖ್ಯ ಸಮಸ್ಯೆಗಳೆಂದರೆ ಕಳಪೆ ಮಟ್ಟದ ಆಡಳಿತ, ಅಧಿಕಾರದ ಕೇಂದ್ರೀಕರಣ ಮತ್ತು ತಮ್ಮ ಮೇಲೆ ಪ್ರಭಾವ ಬೀರುವಂತಹ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳುವಲ್ಲಿ ವಿಫಲತೆ, ಜನತೆ ಭಾಗವಹಿಸಲು ಅವಕಾಶ ಇಲ್ಲದಿರುವುದು.

ಬಲು ವಿಸ್ತಾರವಾದ ಒಂದು ವ್ಯವಸ್ಥೆಯಲ್ಲಿ (ಶಿಕ್ಷಣ) ಪರಿಣಾಮಕಾರಿ ಆಡಳಿತ ನಿರ್ವಹಣೆಗೆ ಎಡೆಗೊಡದೇ ಕಾಡುತ್ತಿರುವ ಒಂದು ಬೃಹತ್ ಸಮಸ್ಯೆಯಾಗಿದೆ. ಇದರೊಟ್ಟಿಗೆ ಆಗಾಗ್ಗೆ ರಾಜಕೀಯ ಹಸ್ತ ಕ್ಷೇಪ, ಹಣಕಾಸು ಅತಿಯಾಗಿ ಸೋರಿ ಹೋಗುವುದು. ವಿವಿಧ ಹಂತಗಳಲ್ಲಿ ಯೋಜನೆಗಳ ಆಶಯ ಹಾಗೂ ಸ್ವರೂಪ ಬದಲಾಗುವುದು. ಉತ್ತರದಾಯಿತ್ವ ಉತ್ತೇಜಿಸಲು ಹೊಣೆ-ಮನ್ನಣೆ ವ್ಯವಸ್ಥೆಯೇ ಇಲ್ಲದಿರುವುದು ಇದನ್ನು ಇನ್ನೂ ಹದಗೆಡಿಸುತ್ತಿವೆ. ಯೋಜನೆಗಳು ಮತ್ತು ಕಾರ್ಯಕ್ರಮಗಳು ನಿರಂತರವಾಗಿ ನಡೆಯದ ರೀತಿಯಲ್ಲಿ ಶಿಕ್ಷಕರನ್ನು ಆಗಾಗ್ಗೆ ಡಿಪ್ಯೋಟೇಷನ್ ಹಾಗೂ ವರ್ಗಾವಣೆ ಮಾಡಲಾಗುತ್ತದೆ. ಇಂದು ಪ್ರಾಥಮಿಕ ಶಾಲೆಗಳಲ್ಲಿ 60 ಮಕ್ಕಳವರೆವಿಗೂ ಎರಡು ಶಿಕ್ಷಕರು ಕೆಲಸ ನಿರ್ವಹಿಸಬೇಕಾಗಿದೆ. ಈ ಕೆಳಕಂಡ ಕೋಸ್ಟಕದಲ್ಲಿ, ಬೋಧನೆಯಲ್ಲಿ ಎದರಿಸುತ್ತಿರುವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

admin

ಇದರಲ್ಲಿ ಒಬ್ಬ ಶಿಕ್ಷಕರು 12 ವಿಷಯಗಳನ್ನು, ಮತ್ತೊಬ್ಬರು 9 ವಿಷಯಗಳನ್ನು ಬೋಧಿಸಬೇಕಾಗಿದೆ. ವರ್ಷದಲ್ಲಿ 220 ದಿನಗಳು ಕನಿಷ್ಟ ಶಾಲೆಗಳು ನಡೆಯಬೇಕಾಗಿದ್ದು, ಇದರಲ್ಲಿ ಶೈಕ್ಷಣಿಕ ವರ್ಷದಲ್ಲಿ ಮುಖ್ಯ ಶಿಕ್ಷಕರಿಗೆ ಇಲಾಖೆಯಲ್ಲಿ 20 ಸಭೆಗಳು, 12 ಎಸ್.ಡಿ.ಎಂ.ಸಿ ಸಭೆಗಳು, 3 ಸಮುದಾಯದತ್ತ ಶಾಲೆ ಕಾರ್ಯಕ್ರಮ, 20 ದಿನ ಶಿಕ್ಷಕರ ಪುನಶ್ಚೇತನ ತರಬೇತಿಗಳು, ಬ್ಯಾಂಕ್ ವ್ಯವಹಾರಕ್ಕಾಗಿ ಅಂದಾಜು 20 ದಿನ, 12 ವೈಯಕ್ತಿಕ ರಜೆ, 4 ಸಾಂದರ್ಭಿಕ ರಜೆಗಳು, ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮ, ಬಿಸಿಊಟ ಹಾಗೂ ಕ್ಷೀರಾ ಭಾಗ್ಯಯೋಜನೆಯ ನಿರ್ವಹಣೆ, ಇಲಾಖೆಗೆ ಕಾಲಕಾಲಕ್ಕೆ ನೀಡಬೇಕಾದ ಮಾಹಿತಿಗಳು, ಮುಂತಾದ ಕಾರ್ಯಗಳಲ್ಲವೂ ಸೇರಿ ಶಿಕ್ಷಕರಿಗೆ ದೊರಕುವುದು ಅಂದಾಜು 130 ದಿನಗಳಷ್ಟೇ, ಇದರಲ್ಲಿ ಮಕ್ಕಳ ಸಮಗ್ರ ಜ್ಞಾನರ್ಜನೆಗೆ ಅವಕಾಶವಾಗುವ ಹಾಗೆ ಕಾಲಕಾಲಕ್ಕೆ ಮಕ್ಕಳ ಸಮಗ್ರ ಮೌಲ್ಯಮಾಪನ ಮಾಡಲೂಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಾಲೆಯಾಗಲು ಶಾಲೆಯ ಉತ್ತಮ ಸಾಂಸ್ಥಿಕ ಆಚರಣೆ ಮತ್ತು ಪರಂಪರೆಗಳು, ಶಾಲೆಯಲ್ಲಿ ಲಭ್ಯವಿರುವ ಭೌತಿಕ ಸೌಲಭ್ಯಗಳು ಹಾಗೂ ಸಂಪನ್ಮೂಲಗಳು, ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕ ವೃಂದದ ಗುಣಮಟ್ಟ, ಸಮುದಾಯ ಮತ್ತು ಶಾಲೆಯ ನಡುವಣ ಸಂಬಂಧ ಮತ್ತು ಶಾಲಾ ನಾಯಕತ್ವ ಇವುಗಳ ಮೇಲೂ ಶಿಕ್ಷಕರ ಕಾರ್ಯ ಅವಲಂಬಿಸಿರುತ್ತದೆ.

ಹೀಗಾಗಿ ಶಿಕ್ಷಣದ ಗುಣಮಟ್ಟ ವರ್ಧನೆ ಆಗಬೇಕಾದರೆ ಕೆಳಹಂತದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಆಧುನಿಕ ನಿರ್ವಹಣೆಯ ಮೂಲ ಸೂತ್ರಗಳನ್ನು ತಿಳಿಸಿ ಹೇಳಬೇಕು. ಅವರ ಸಂವೇದನೆಯನ್ನು ಜಾಗೃತಗೊಳಿಸಿ ಅವರಲ್ಲಿ ನಾಯಕತ್ವದ ಗುಣಗಳನ್ನು ಪುಷ್ಟೀಕರಿಸಿದರೆ ಮಾತ್ರ ಒಟ್ಟು ಚಿತ್ರ ಬದಲಾಗುತ್ತದೆ. ಶಿಕ್ಷಣ ವ್ಯವಸ್ಥೆಯ ತಳಮಟ್ಟದಲ್ಲಿರುವ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಇನ್ನಿತರ ಸಂಪನ್ಮೂಲ ವ್ಯಕ್ತಿಗಳ ಬಲವರ್ಧನೆ, ಆಡಳಿತ ನಿರ್ವಹಣೆ ಇಂದಿನ ತಾರಕಮಂತ್ರ, ಬೋಧನೆ-ಕಲಿಕೆ- ಆಡಳಿತ ನಿರ್ವಹಣೆ ಇತ್ಯಾದಿಗಳ ಗುಣಮಟ್ಟ ವೃದ್ಧಿಸುತ್ತದೆ ಎಂಬ ಆಶಯದೊಂದಿಗೆ ಶಿಕ್ಷಕರು ಶೈಕ್ಷಣಿಕವಾಗಿ ಜಾಗೃತರಾಗಬೇಕು. ಶಾಲೆಯಲ್ಲಿ ನಡೆಯುವ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮುಖ್ಯ ಶಿಕ್ಷಕರು ಕ್ರಿಯಾಶೀಲರಾದಾಗ ಆ ಶಾಲೆಯ ಸಹ ಶಿಕ್ಷಕರೂ ಜಾಗ್ರತರಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ ಶಾಲಾ ನಾಯಕತ್ವ ಮತ್ತು ಶಾಲಾ ನಿರ್ವಹಣೆಯ ಗುಣಮಟ್ಟ, ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡುವ ಯಾವುದೇ ಶಾಲೆಯು ಖಂಡಿತವಾಗಿಯೂ ತನ್ನ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣದ ಭರವಸೆ ನೀಡುತ್ತದೆ.

ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕಿದ್ದರೆ ಮತ್ತು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳು ಬರಬೇಕಿದ್ದರೆ, ಆಯಾ ಶಾಲೆಯ ಶಿಕ್ಷಕರ ಮನೋಭಾವ ಬದಲಾಗಬೇಕು. “ಬದಲಾವಣೆ ಎಂಬುದು ಮೊದಲು ನನ್ನಿಂದಲೇ ಪ್ರಾರಂಭವಾಗಬೇಕು” ಎಂಬ ಸ್ವಯಂ-ಪ್ರೇರಣೆ ಮತ್ತು ಆಸಕ್ತಿಯಿಂದ ಶಾಲೆಯನ್ನು ಉತ್ತಮಪಡಿಸಬೇಕು.

ನಿಷ್ಠೆ ಮತ್ತು ಪ್ರಾಮಾಣಿಕತೆ ನಶಿಸಿ ಹೋಗುತ್ತಿರುವಂತಹ ಒಂದು ಸಮಾಜದಲ್ಲಿ ಶಾಲೆಗಳು ಮತ್ತು ಶಾಲಾ ಶಿಕ್ಷಕರು ಆ ಸದ್ಗುಣಗಳನ್ನು ದೃಢವಾಗಿ ಬೇರೂರುವಂತೆ ಮಾಡಬಲ್ಲ ರೂವಾರಿಗಳಾಗಬೇಕು. ಇದಕ್ಕಾಗಿ, ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂಬಂಧ, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ನಡುವಿನ ಸಂಬಂಧ ಮತ್ತು ಶಾಲೆಯ ಮುಖ್ಯೋಪಾಧ್ಯಾಯರೊಡನೆ ಸಂಬಂಧ, ಹಾಗೂ ಸಮುದಾಯ ಮತ್ತು ಶಾಲೆಯೊಡನೆ ಸಂಬಂಧ ಇವುಗಳಲ್ಲಿ ಎದ್ದು ಕಾಣುವಂಥ ಪ್ರಾಮಾಣಿಕತೆ ಮತ್ತು ನಿಷ್ಠೆ ಇರುವಂಥ ಸಂಸ್ಕೃತಿಯನ್ನು ಶಾಲೆಯ ಶಿಕ್ಷಕರು ಬೆಳಸಬೇಕು.

ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠ, ಉದಾತ್ತ ಮತ್ತು ಧನ್ಯವಾದ ಸೇವೆಯಾಗಿದೆ. ಈ ವೃತ್ತಿಯಿಂದ ಒಬ್ಬ ವ್ಯಕ್ತಿಯ ಸಂಸ್ಕಾರ, ವರ್ತನೆ, ನಡವಳಿಕೆ ರೂಪುಗೊಳ್ಳುತ್ತದೆ. ಉತ್ತಮ ಶಿಕ್ಷಣದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ನಾವೆಲ್ಲರೂ ‘ರಾಷ್ಟ್ರ ನಿರ್ಮಾಣಕ್ಕೆ’ ನವ ಭಾಷ್ಯ ಬರೆಯಬೇಕಿದೆ. ಈ ದೇಶದ ಮಾನವ ಬಂಡವಾಳವನ್ನು ನಿರ್ಮಿಸುವ ಹೊಣೆ ನಮ್ಮೆಲ್ಲರದು. ನಮ್ಮ ಭಾರತ ಎಲ್ಲಾ ‘ಗುರುಚೇತನರ’ ಪ್ರೇರಣೆಯಿಂದ ‘ವಿಶ್ವಗುರು’ವಾಗುವ ಕಾಲ ಹತ್ತಿರವಾಗಲಿ ಎಂದು ಆಶಿಸುತ್ತಾ, ಪ್ರಸ್ತುತ ಶಿಕ್ಷಕರ ದಿನಾಚರಣೆಯಿಂದಲಾದರೂ ನಾವು ಉತ್ತಮ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಕರಿಗೆ ನಿರೀಕ್ಷಿಸೋಣ.. ನಮ್ಮ ಉನ್ನತಿಗೆ ಕಾರಣಕರ್ತರಾದ ಗುರುಗಳಿಗೆ ವಂದಿಸೋಣ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com