ಜನರ ವಿಶ್ವಾಸ ಗಳಿಸುವ ಪಾರದರ್ಶಕ ವ್ಯವಸ್ಥೆ ಬರದೇ ಕರೋನಾಕ್ಕೆ ಕಡಿವಾಣ ಸಾಧ್ಯವಿಲ್ಲ!
ಅಭಿಮತ

ಜನರ ವಿಶ್ವಾಸ ಗಳಿಸುವ ಪಾರದರ್ಶಕ ವ್ಯವಸ್ಥೆ ಬರದೇ ಕರೋನಾಕ್ಕೆ ಕಡಿವಾಣ ಸಾಧ್ಯವಿಲ್ಲ!

ಜನರ ಸಾವಿನ ಮೇಲೆ ದಂಧೆ ಮಾಡುವ ವ್ಯವಸ್ಥೆ, ಮರೆತ ಕನಿಷ್ಟ ಮಾನವೀಯತೆಯನ್ನು ಮರಳಿ ಪಡೆಯದೇ ಹೋದರೆ, ಅದಕ್ಕೆ ಬಡಿದ ಧನದಾಹದ ಮಾರಕ ವೈರಸ್ಗೆ ಸರಿಯಾದ ಚಿಕಿತ್ಸೆ ದೊರೆಯದೆ ಹೋದರೆ, ಕರೋನಾವನ್ನು ಮಣಿಸುವ ಪ್ರಧಾನಿ ಮೋದಿಯಿಂದ ಹಿಡಿದು ಆಳುವ ಪಕ್ಷದ ವಿವಿಧ ನಾಯಕರ ಹೇಳಿಕೆಗಳು ಈಗಿನಂತೆ ಅಪಹಾಸ್ಯದ ಸಂಗತಿಗಳಾಗೇ ಉಳಿದುಹೋಗಲಿವೆ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ವಿಷಯದಲ್ಲಿ ಭಾರತ ಸದ್ಯ ಎರಡು ದಾಖಲೆ ನಿರ್ಮಿಸಿದೆ. ಒಂದು; ದಿನವೊಂದರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿರುವುದು. ಮತ್ತೊಂದು, ಕೋವಿಡ್ ನಿಂದಾಗಿ ಜಿಡಿಪಿ ಕುಸಿತ ಕಂಡ ಜಗತ್ತಿನ ಪ್ರಮುಖ ಆರ್ಥಿಕತೆಗಳ ಪಟ್ಟಿಯಲ್ಲಿ ಶೇ.23.9ರಷ್ಟು ಕುಸಿತದೊಂದಿಗೆ ಅತಿ ಹೆಚ್ಚು ಆರ್ಥಿಕ ನಷ್ಟಕ್ಕೆ ತುತ್ತಾಗಿರುವುದು.

ಈ ಎರಡೂ ಸಂಗತಿಗಳ ಮೂಲ ಜಾಗತಿಕ ಸಾಂಕ್ರಾಮಿಕ ತಡೆಯ ಮುಂಜಾಗ್ರತೆ, ನಿರ್ವಹಣೆ ಮತ್ತು ಆರ್ಥಿಕತೆಯ ರಕ್ಷಣೆಯ ವಿಷಯದಲ್ಲಿ ಆಡಳಿತ ವ್ಯವಸ್ಥೆಯ ಲೋಪಗಳೇ ಎಂಬುದು ನಿರ್ವಿವಾದದ ಸಂಗತಿ.

ಸೋಮವಾರ ಬೆಳಗ್ಗೆ 8ಕ್ಕೆ ಅಂತ್ಯಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 78,761 ಹೊಸ ಕರೋನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಭಾರತ ಜಗತ್ತಿನಲ್ಲೇ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಕಂಡ ಮೊದಲ ದೇಶವಾಗಿ ದಾಖಲೆ ನಿರ್ಮಿಸಿದೆ. ಅದೇ ವೇಳೆ, ಒಟ್ಟಾರೆ ಕರೋನಾ ಪ್ರಕರಣಗಳ ಪ್ರಮಾಣ 35,42,733ಕ್ಕೆ ತಲುಪಿತ್ತು. ಸೋಮವಾರ ರಾತ್ರಿಯ ಹೊತ್ತಿಗೆ ಈ ಪ್ರಮಾಣ, 36,21,245ಕ್ಕೆ ತಲುಪಿದ್ದು, ಒಟ್ಟು ಮೃತರ ಸಂಖ್ಯೆ 64,469ರ ಗಡಿ ದಾಟಿದೆ. ಕಳೆದ ಐದು ದಿನಗಳಿಂದಲೂ ದೇಶದಲ್ಲಿ ನಿರಂತರವಾಗಿ ದೈನಂದಿನ ಹೊಸ ಪ್ರಕರಣಗಳ ಪ್ರಮಾಣ 70 ಸಾವಿರಕ್ಕಿಂತ ಹೆಚ್ಚಿನ ದಾಖಲೆ ಬರೆಯುತ್ತಲೇ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದೇ ಹೊತ್ತಿಗೆ ಮತ್ತೊಂದು ಕಡೆ; ಈ ಕರೋನಾ ದಾಳಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಗತ್ತಿನ ಪ್ರಬಲ ಆರ್ಥಿಕತೆ ಹೊಂದಿದ್ದ ರಾಷ್ಟ್ರಗಳ ಪೈಕಿ, ಚೀನಾ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳೂ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದೊಡ್ಡ ಮಟ್ಟದ ಜಿಡಿಪಿ ಪತನ ಕಂಡಿವೆ. ಚೀನಾ ಶೇ.3.2ರಷ್ಟು ಧನಾತ್ಮಕ ಜಿಡಿಪಿ ಬೆಳವಣಿಗೆ ದಾಖಲಿಸಿದ್ದರೆ, ಭಾರತದ ಜಿಡಿಪಿ ಶೇ.23.9ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಉಳಿದಂತೆ, ಅಮೆರಿಕ, ಜಪಾನ್, ಜರ್ಮನಿ, ಕೆನಡಾ, ಇಟಲಿ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಗಳು ಕೆಲ ಗಣನೀಯ ಕುಸಿತ ದಾಖಲಿಸಿವೆ. ಆದರೆ, ಈ ಪಟ್ಟಿಯಲ್ಲಿ ಭಾರತದ ಪತನ ಅತಿ ಹೆಚ್ಚು ಎಂಬುದು ಗಮನಾರ್ಹ.

ಕರೋನಾ ಪ್ರಕರಣ ಏರಿಕೆ ಮತ್ತು ಜಿಡಿಪಿ ಕುಸಿತದ ಬಗ್ಗೆ ವ್ಯಾಪಕ ಚರ್ಚೆಗಳು ಬಿರುಸುಗೊಂಡಿದ್ದು, ಎರಡೂ ವಿಷಯದಲ್ಲಿ ಕೇಂದ್ರ ಸರ್ಕಾರದ ವಾದ, ಎಂದಿನಂತೆ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬುದೇ ಆಗಿದೆ. ಅದಕ್ಕಾಗಿ ಅದು ರೂಢಿಯಂತೆ ತನ್ನನ್ನು ಸಮರ್ಥಿಸಿಕೊಳ್ಳಲು, ದೇಶದ ಜನರನ್ನು ನಂಬಿಸಲು ಬೇಕಾದ ಪೂರಕ ಅಂಕಿಅಂಶಗಳನ್ನು ಮಾತ್ರ ಹೆಕ್ಕಿ ಜನರ ಮುಂದಿಟ್ಟು ಎಲ್ಲವೂ ಸುಸೂತ್ರವಾಗೇ ಇದೆ ಎಂಬ ತನ್ನ ಪ್ರಖ್ಯಾತ ವರಸೆಯನ್ನೇ ಮುಂದುವರಿಸಿದೆ.

ದಿನವೊಂದರ ದಾಖಲೆಯ ಹೊಸ ಪ್ರಕರಣಗಳ ಪತ್ತೆಗೆ ನೈಜ ಕಾರಣ ದೇಶದಲ್ಲಿ ಕರೋನಾ ಪತ್ತೆ ಪರೀಕ್ಷೆ ಪ್ರಮಾಣದಲ್ಲಿ ದಿಢೀರ್ ಏರಿಕೆಯಾಗಿರುವುದು. ದಿನವೊಂದಕ್ಕೆ ದೇಶದಲ್ಲಿ ಸದ್ಯ 10 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈವರೆಗೆ ನಡೆಸಿದ ಒಟ್ಟು ಕರೋನಾ ಪರೀಕ್ಷೆಗಳ ಪ್ರಮಾಣ 4.14 ಕೋಟಿ ಗಡಿ ದಾಟಿದೆ. ಪರೀಕ್ಷಾ ಪ್ರಮಾಣದಲ್ಲಿ ಆಗಿರುವ ದಿಢೀರ್ ಏರಿಕೆಯಿಂದಾಗಿ ಭಾನುವಾರ ದಾಖಲೆಯ ಹೊಸ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ದೇಶದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಬರೋಬ್ಬರಿ 30,044 ಜನರಿಗೆ ಕರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಕ್ರಿಯಿಸಿದೆ.

ಆದರೆ, ಜಾಗತಿಕವಾಗಿ ಅತಿ ಹೆಚ್ಚು ಕರೋನಾ ಪ್ರಕರಣಗಳನ್ನು ಕಂಡಿರುವ ಮೊದಲ ಹತ್ತು ದೇಶಗಳ ಪೈಕಿ, ಕರೋನಾ ಪರೀಕ್ಷೆಯ ವಿಷಯದಲ್ಲಿ ಭಾರತ ಬಹುತೇಕ ಕೊನೆಯ ಸ್ಥಾನದಲ್ಲಿದೆ ಎಂಬುದು ವಾಸ್ತವ. ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಎಷ್ಟು ಮಂದಿಗೆ ಕರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಮಾನದಂಡದ ಪ್ರಕಾರ, ಕೇವಲ 10 ಸಾವಿರ ಜನರಿಗೆ ಪರೀಕ್ಷೆ ನಡೆಸುತ್ತಿರುವ ಮೆಕ್ಸಿಕೋ ಅತಿಹೆಚ್ಚು ಬಾಧಿತ ಮೊದಲ ಹತ್ತು ರಾಷ್ಟ್ರಗಳ ಪೈಕಿ ಕೊನೆಯ ಸ್ಥಾನದಲ್ಲಿದೆ. ಆ ಬಳಿಕ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 30 ಸಾವಿರ ಮಂದಿಗೆ ಪರೀಕ್ಷೆ ನಡೆಸುವ ಮೂಲಕ ಭಾರತ, ಮೆಕ್ಸಿಕೋ ನಂತರದ ಸ್ಥಾನದಲ್ಲಿದೆ. ಅಂದರೆ, ಕೊನೆಯಿಂದ ಎರಡನೇ ಸ್ಥಾನದಲ್ಲಿದೆ! ಅದೇ ಹೊತ್ತಿಗೆ ಅತಿಹೆಚ್ಚು ಪ್ರಕರಣಗಳು ದೃಢಪಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತ, ಮೂರನೇ ಸ್ಥಾನದಲ್ಲಿದ್ದು, ಅಮೆರಿಕ ಮತ್ತು ಬ್ರಿಜಿಲ್ ಬಳಿಕದ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಅತಿ ಹೆಚ್ಚು; 61,81,394 ಪ್ರಕರಣಗಳನ್ನು ದಾಖಲಿಸಿದ್ದರೆ, ಬ್ರಿಜಿಲ್ ನಲ್ಲಿ 38,62,311 ಪ್ರಕರಣಗಳು ದಾಖಲಾಗಿವೆ. ಮುಂದಿನ 48 ಗಂಟೆಗಳಲ್ಲಿ ಬಹುತೇಕ ಬ್ರಿಜಿಲ್ ಹಿಂದಿಕ್ಕಲಿರುವ ಭಾರತ, ಎರಡನೇ ಸ್ಥಾನಕ್ಕೇರಲು ಕ್ಷಣಗಣನೆ ಆರಂಭಿಸಿದೆ. ಅಮೆರಿಕದಲ್ಲಿ ಪ್ರತಿ ಹತ್ತು ಲಕ್ಷ ಜನರ ಪೈಕಿ ಬರೋಬ್ಬರಿ 2,47,150 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದ್ದರೆ, ಬ್ರಿಜಿಲ್ ನಲ್ಲಿ 67,443 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕೇವಲ 9.95 ಲಕ್ಷ ಪ್ರಕರಣಗಳನ್ನು ಹೊಂದಿರುವ ರಷ್ಯಾ ಪ್ರತಿ ಹತ್ತು ಲಕ್ಷ ಮಂದಿಗೆ ಬರೋಬ್ಬರಿ 2.51 ಲಕ್ಷ ಜನರಿಗೆ ಕರೋನಾ ಪರೀಕ್ಷೆ ನಡೆಸುವ ಮೂಲಕ ಸಾಂಕ್ರಾಮಿಕ ನಿಯಂತ್ರಣದಲ್ಲಿ ಮಾದರಿ ನಡೆ ಅನುಸರಿಸಿದೆ!

ಅಂದರೆ, ಭಾರತದ ಜನದಟ್ಟಣೆ, ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ, ನಮ್ಮ ಪರೀಕ್ಷಾ ಪ್ರಮಾಣ ತೀರಾ ನಗಣ್ಯ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯ, ಮರಣ ಪ್ರಮಾಣ ಮತ್ತು ಗುಣಮುಖರಾಗುವ ಪ್ರಮಾಣವನ್ನು ಮುಂದಿಟ್ಟುಕೊಂಡು ಸಾಂಕ್ರಾಮಿಕ ಕೈಮೀರಿ ಹೋಗಿಲ್ಲ ಎಂಬ ಆರು ತಿಂಗಳ ಹಿಂದಿನ ವಾದನ್ನೇ ಮುಂದಿಡುತ್ತಿದೆ. ಸೋಮವಾರ ಕೂಡ ಇದೇ ವಾದ ಹೂಡಿರುವ ಸಚಿವಾಲಯ, ಸೋಂಕಿನ ಪ್ರಮಾಣ 35 ಲಕ್ಷ ದಾಟಿದ್ದರೂ ಸಕ್ರಿಯ ಪ್ರಕರಣಗಳು ಕೇವಲ 7,65,302 ಮಾತ್ರ ಇದ್ದು, ಗುಣಮುಖರಾದವರ ಸಂಖ್ಯೆ 27,13,933 ಮಂದಿ. ಹಾಗಾಗಿ ಗುಣಮುಖರಾಗುವವರ ಪ್ರಮಾಣ ಶೇ.76.61ಕ್ಕೆ ಏರಿಕೆಯಾಗಿದ್ದರೆ, ಮರಣ ಪ್ರಮಾಣ ಶೇ.1.79ಕ್ಕೆ ಕುಸಿದಿದೆ ಎಂದು ಹೇಳಿದೆ. ಜೊತೆಗೆ ಮೃತರ ಪೈಕಿ ಶೇ.70ರಷ್ಟು ಕೋವಿಡ್ ಜೊತೆಗೆ ಇತರೆ ಮಾರಣಾಂತಿಕ ರೋಗಗಳ ಕಾರಣದಿಂದ ಸಂಭವಿಸಿವೆ ಎಂದು ಹೇಳುವ ಮೂಲಕ ಕೋವಿಡ್ ಗಂಭೀರತೆಯನ್ನು ಲಘುವಾಗಿ ಗ್ರಹಿಸುವ ಯತ್ನವೂ ನಡೆದಿದೆ.

ಆದರೆ, ಪ್ರಕರಣಗಳ ಏರಿಕೆಗೆ ಒಂದು ಕಡೆ ಪರೀಕ್ಷೆ ಪ್ರಮಾಣ ಹೆಚ್ಚಳ ಕಾರಣವಾದಂತೆಯೇ, ಮತ್ತೊಂದು ಕಡೆ ಹಂತಹಂತವಾಗಿ ಸರ್ಕಾರ ಜಾರಿಗೊಳಿಸಿದ ಅನ್ ಲಾಕ್ ಕ್ರಮಗಳೂ ಕಾರಣ. ಜೊತೆಗೆ, ಸೋಂಕು ಮಹಾನಗರಗಳಿಂದ ಇದೀಗ ಗ್ರಾಮೀಣ ಪ್ರದೇಶಕ್ಕೆ ಹರಡಿರುವುದು ಕೂಡ ದೊಡ್ಡ ಪಾತ್ರ ವಹಿಸಿದೆ. ಜೊತೆಗೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸರ್ಕಾರದ ಲಾಕ್ ಡೌನ್ ಸಡಿಲಿಕೆ ಕ್ರಮಗಳು, ಸಭೆ- ಸಮಾರಂಭಗಳಿಗೆ ಅವಕಾಶ, ಮಾಲ್- ಸಂತೆಗಳಿಗೆ ಅವಕಾಶದಂತಹ ಕ್ರಮಗಳು ರೋಗಲಕ್ಷಣರಹಿತ ಸೋಂಕಿತರಿಂದ ಇತರರಿಗೆ ಸೋಂಕು ವ್ಯಾಪಕವಾಗಿ ಹರಡಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಇದೀಗ ಮೆಟ್ರೋ ರೈಲು ಮತ್ತು ಇತರ ಸಮುದಾಯ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಲು, ಪಬ್, ಕ್ಲಬ್, ಜಿಮ್ ಗಳಿಗೆ ಅವಕಾಶ ನೀಡಲು ಕೂಡ ನಿರ್ಧರಿಸಲಾಗಿದೆ. ಇದು ಕೂಡ ಕೆಲವೇ ದಿನಗಳಲ್ಲಿ ಸೋಂಕಿನ ಪ್ರಮಾಣವನ್ನು ಸ್ಫೋಟಕ ಪ್ರಮಾಣದಲ್ಲಿ ಏರಿಕೆ ಮಾಡಲಿದೆ. ಖಂಡಿತವಾಗಿಯೂ ಇನ್ನು ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಹಾಟ್ ಸ್ಪಾಟ್ ಆಗಿ ನಂಬರ್ ಒನ್ ಸ್ಥಾನಕ್ಕೆ ಏರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಪರ್ಯಾಸದ ಸಂಗತಿಯೆಂದರೆ; ಇಷ್ಟಾಗಿಯೂ ಕೇಂದ್ರ ಸರ್ಕಾರ ಅಧಿಕೃವಾಗಿ ಈವರೆಗೆ ಕೋವಿಡ್-19 ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂಬುದನ್ನು ಒಪ್ಪಿಕೊಂಡಿಲ್ಲ ಮತ್ತು ದೇಶದ ಜನದಟ್ಟಣೆಗೆ ಹೋಲಿಸಿದರೆ ಪರೀಕ್ಷೆಗಳ ಪ್ರಮಾಣ ತೀರಾ ಕಡಿಮೆ ಇದೆ ಎಂಬುದನ್ನು ಕೂಡ ಒಪ್ಪಿಕೊಳ್ಳಲು ಸಿದ್ಧವಿಲ್ಲ!

ಹಾಗೆ ನೋಡಿದರೆ, ಈಗಿನ ಈ ಸೋಂಕು ಮತ್ತು ಸಾವಿನ ಲೆಕ್ಕ ಕೂಡ ಪ್ರಾಮಾಣಿಕವಾಗಿಲ್ಲ, ವಾಸ್ತವಾಂಶಗಳು ಬೇರೆಯೇ ಇವೆ ಎಂಬ ವಾದಗಳೂ ಇವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳಿಗೆ ತಕ್ಕಂತೆ ಬಹುತೇಕ ರಾಜ್ಯ ಸರ್ಕಾರಗಳು ಕೋವಿಡ್ ಪ್ರಕರಣ ಮತ್ತು ಸಾವುಗಳನ್ನು ವರದಿ ಮಾಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ. ಕೋವಿಡ್ ನಿಂತ ಸಾವು ಕಂಡಿದ್ದರೂ ಅವರಿಗೆ ಇದ್ದ ಇತರೆ ಗಂಭೀರ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ತೋರಿಸಲಾಗುತ್ತಿದೆ. ಜೊತೆಗೆ ಕರೋನಾ ದೃಢಪಡುವ ಮುಂಚೆಯೇ ಸಂಭವಿಸುವ ಸಾವುಗಳನ್ನು ದೃಢಪಟ್ಟ ನಂತರ ಕೂಡ ಕೋವಿಡ್ ಸಾವಿನ ಪಟ್ಟಿಗೆ ಸೇರಿಸಲಾಗುತ್ತಿಲ್ಲ. ಹಾಗಾಗಿ ಶವಾಗಾರ ಅಥವಾ ಸ್ಮಶಾನಗಳಲ್ಲಿನ ಮೃತದೇಹಗಳ ಸಂಖ್ಯೆಗೂ, ಆಸ್ಪತ್ರೆಗಳ ಅಂಕಿಅಂಶಕ್ಕೂ ತಾಳೆಯಾಗುತ್ತಿಲ್ಲ ಎನ್ನಲಾಗುತ್ತಿದೆ! ಅಂದರೆ, ಈಗಿರುವ ಪ್ರಕರಣಗಳು ಕೂಡ ವಾಸ್ತವವಾಗಿ ಇರುವ ಸೋಂಕು ಮತ್ತು ಸಾವಿನ ಪ್ರಕರಣಗಳಿಗೆ ಹೋಲಿಸಿದರೆ ತೀರಾ ಕಡಿಮೆಯೇ ಎಂಬ ಅಭಿಪ್ರಾಯಗಳೂ ಇವೆ.

ಮತ್ತೊಂದು ಕಡೆ; ಸದ್ಯದ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆ ಮತ್ತು ನಿಗಾ ವಿಷಯದಲ್ಲಿ ಸರ್ಕಾರ ಮತ್ತು ಖಾಸಗೀ ಆಸ್ಪತ್ರೆಗಳ ಕಾರ್ಯವಿಧಾನ ಜನಸಾಮಾನ್ಯರಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಕರೋನಾ ಪರೀಕ್ಷೆ, ಲಾಕ್ ಡೌನ್, ಸೀಲ್ ಡೌನ್, ಕೋವಿಡ್ ಕೇರ್ ಸೆಂಟರ್, ಕೋವಿಡ್ ಚಿಕಿತ್ಸಾ ಕೇಂದ್ರ,ಆಸ್ಪತ್ರೆ, ಅಲ್ಲಿನ ವಿವಿಧ ಚಿಕಿತ್ಸೆ ಮತ್ತು ಪರೀಕ್ಷೆಗಳು ಮತ್ತು ಅವುಗಳಿಗಾಗಿ ವಸೂಲಿ ಮಾಡುತ್ತಿರುವ ದರಗಳು, ಶವ ಪರೀಕ್ಷೆ, ಶವ ಹಸ್ತಾಂತರ, ಶವ ಸಂಸ್ಕಾರ ಸೇರಿದಂತೆ ಪ್ರತಿ ಹಂತದಲ್ಲಯೂ ಹಲವು ವಿಷಯದಲ್ಲಿ ಸಾಕಷ್ಟು ಗೌಪ್ಯತೆ ಮತ್ತು ಅನುಮಾನಾಸ್ಪದ ನಡೆಗಳು ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿವೆ.

ಈ ಎಲ್ಲಾ ಸಂಗತಿಗಳಲ್ಲಿ ವ್ಯವಸ್ಥೆ ಪಾರದರ್ಶಕವಾಗಿರುವ ಬದಲು ದಿನಕಳೆದಂತೆ ಹೆಚ್ಚುಹೆಚ್ಚು ರಹಸ್ಯವಾಗತೊಡಗಿದೆ. ಗೌಪ್ಯತೆ ಹೆಚ್ಚಿದಷ್ಟು ಅನುಮಾನಗಳು, ಆತಂಕಗಳು ಹೆಚ್ಚತೊಡಗಿವೆ. ಹಾಗಾಗಿ ಜನ ಕರೋನಾ ಪರೀಕ್ಷೆಗೇ ಹಿಂದೇಟು ಹಾಕತೊಡಗಿದ್ದಾರೆ ಎಂಬುದು ತಳಮಟ್ಟದ ಕಟುವಾಸ್ತವ. ಜೊತೆಗೆ, ಆಂಟಿಜೆನ್ ಪರೀಕ್ಷೆ ಮತ್ತು ಪಿಸಿಆರ್ ಪರೀಕ್ಷೆಗಳ ನಡುವೆ ಸಾಕಷ್ಟು ವ್ಯತ್ಯಾಸವಾಗುತ್ತಿರುವುದು ಕೂಡ ಜನರಲ್ಲಿ ಶಂಕೆ ಹೆಚ್ಚಿಸುತ್ತಿದೆ. ಒಬ್ಬ ವ್ಯಕ್ತಿಗೆ, ಸ್ಥಳದಲ್ಲೇ ಫಲಿತಾಂಶ ಗೊತ್ತಾಗುವ ಆಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಬಳಿಕ, ಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಬಂದ ಪ್ರಕರಣಗಳು ಹೆಚ್ಚುತ್ತಿದ್ದು, ಆ ಎರಡು ಪರೀಕ್ಷೆಗಳ ನಡುವೆ ಶಂಕಿತ ಸೋಂಕಿತರ ಐಸೋಲೇಷನ್, ಕ್ವಾರಂಟೈನ್, ಸೀಲ್ ಡೌನ್ ಮತ್ತು ಬಹುತೇಕ ವೇಳೆ ದಿಢೀರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ತೋರುವ ಧಾವಂತ ಜನರಲ್ಲಿ ಗೊಂದಲಗಳನ್ನು ಬಿತ್ತುತ್ತಿದೆ. ಇನ್ನು ಚಿಕಿತ್ಸೆ, ಚಿಕಿತ್ಸಾ ವೆಚ್ಚ, ತಡರಾತ್ರಿಯ ದಿಢೀರ್ ಸಾವುಗಳು ಮತ್ತು ಅಂತಹ ಸಾವು ಸಂಭಸಿದಾಗ ಶವಗಳನ್ನು ಅತಿ ಗೌಪ್ಯವಾಗಿ ವಿಲೇಮಾಡುವ ವಿಧಾನಗಳು ಕೂಡ ದೊಡ್ಡ ಮಟ್ಟದ ಊಹಾಪೋಹಗಳಿಗೆ ಕಾರಣವಾಗಿವೆ. ಜೊತೆಗೆ ಸೀಲ್ ಡೌನ್ ಮನೆಗಳ ಅಗತ್ಯಗಳಿಗೆ ಸ್ಪಂದಿಸದ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ ಬೇರೆ!

ಈ ಎಲ್ಲಾ ಕಾರಣಗಳಿಂದಾಗಿ ಕರೋನಾ ವಿಷಯದಲ್ಲಿ ಭಯಕ್ಕಿಂತ ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಬಂದರೆ ಎದುರಿಸಬೇಕಾದ ಅನಾಹುತಗಳ ಬಗ್ಗೆ, ಅನಾದರದ ಬಗ್ಗೆ ಮತ್ತು ವ್ಯವಸ್ಥೆಯ ಅಮಾನವೀಯ ದಂಧೆಕೋರತನದ ಬಗ್ಗೆ ಜನರಲ್ಲಿ ಭಯ ಹೆಚ್ಚಾಗಿದೆ. ವ್ಯವಸ್ಥೆ ಜನರ ನಂಬಿಕೆ ಕಳೆದುಕೊಳ್ಳುತ್ತಿದೆ. ಜನರಲ್ಲಿ ವ್ಯವಸ್ಥೆಯ ಬಗ್ಗೆ ನಂಬಿಕೆ ಹುಟ್ಟಿಸದೇ ಹೋದರೆ, ವಿಶ್ವಾಸ ಉಳಿಯದೇ ಹೋದರೆ, ಕರೋನಾ ಪ್ರಕರಣಗಳ ಏರುಗತಿಗೆ ಬ್ರೇಕ್ ಹಾಕುವುದು ಸಾಧ್ಯವೇ ಇಲ್ಲ. ಹಾಗಾಗಿ, ಮಾರ್ಚ್ ನಿಂದ ಆರಂಭವಾಗಿ ಈವರೆಗೆ, ಈ ಐದು ತಿಂಗಳಲ್ಲಿ ಲಾಕ್ ಡೌನ್, ಸೀಲ್ ಡೌನ್, ಮಾಸ್ಕ್, ಭೌತಿಕ ಅಂತರ, ಕೈ ತೊಳೆಯುವಿಕೆ ಮುಂತಾದ ಎಲ್ಲ ಬಗೆಯ ತಿಪ್ಪರಲಾಗದ ಬಳಿಕವೂ ಸಮತಟ್ಟು (ಫ್ಲಾಟರಿಂಗ್) ಮಾಡಲಾಗದ ಕೋವಿಡ್ ರೇಖೆ, ಇನ್ನಷ್ಟು ಗಗನಚುಂಬಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಜನರ ಸಾವಿನ ಮೇಲೆ ದಂಧೆ ಮಾಡುವ ವ್ಯವಸ್ಥೆ, ಮರೆತ ಕನಿಷ್ಟ ಮಾನವೀಯತೆಯನ್ನು ಮರಳಿ ಪಡೆಯದೇ ಹೋದರೆ, ಅದಕ್ಕೆ ಬಡಿದ ಧನದಾಹದ ಮಾರಕ ವೈರಸ್ಗೆ ಸರಿಯಾದ ಚಿಕಿತ್ಸೆ ದೊರೆಯದೆ ಹೋದರೆ, ಕರೋನಾವನ್ನು ಮಣಿಸುವ ಪ್ರಧಾನಿ ಮೋದಿಯಿಂದ ಹಿಡಿದು ಆಳುವ ಪಕ್ಷದ ವಿವಿಧ ನಾಯಕರ ಹೇಳಿಕೆಗಳು ಈಗಿನಂತೆ ಅಪಹಾಸ್ಯದ ಸಂಗತಿಗಳಾಗೇ ಉಳಿದುಹೋಗಲಿವೆ! ಹಾಗಾಗಿ, ಕರೋನಾಕ್ಕೆ ಕಡಿವಾಣ ಹಾಕಲು ಸದ್ಯಕ್ಕೆ ಇರುವ ದೊಡ್ಡ ಸವಾಲು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು, ವಿಶ್ವಾಸವನ್ನು ಮರಳಿ ಸ್ಥಾಪಿಸುವುದು.. !

Click here to follow us on Facebook , Twitter, YouTube, Telegram

Pratidhvani
www.pratidhvani.com