ರೈ ವಿಷಯದಲ್ಲಿ ಅರಚಾಡಿದವರು ದತ್ ವಿಷಯದಲ್ಲಿ ಮುಗುಮ್ಮಾಗಿದ್ದು ಯಾಕೆ?
ಅಭಿಮತ

ರೈ ವಿಷಯದಲ್ಲಿ ಅರಚಾಡಿದವರು ದತ್ ವಿಷಯದಲ್ಲಿ ಮುಗುಮ್ಮಾಗಿದ್ದು ಯಾಕೆ?

‘ಭಕ್ತಪಡೆ’ಯ ದೇಶಪ್ರೇಮ ಮತ್ತು ದೇಶದ್ರೋಹದ ಮಾನದಂಡ ನಿಜವಾಗಿ ದೇಶದ ಹಿತವೇ, ದೇಶದ ಜನರ ಹಿತವೇ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹಿತವೇ? ಅಥವಾ ಒಬ್ಬ ವ್ಯಕ್ತಿ, ಒಂದು ಪಕ್ಷದ ಹಿತವೇ? ಎಂಬುದನ್ನು ಇದೀಗ ಈ ಪ್ರಕಾಶ್ ರೈ ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿವಾದ ಇನ್ನಷ್ಟು ಸ್ಪಷ್ಟಪಡಿಸಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ನಟ ಪ್ರಕಾಶ್ ರೈ ಅವರು ಅಭಿನಯಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಬೆಂಬಲಿಗರು ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿ, ಅನಗತ್ಯ ವಿವಾದವೆಬ್ಬಿಸಿದರು.

ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಐದು ತಿಂಗಳ ಸಂಪೂರ್ಣ ಸ್ಥಗಿತವಾಗಿದ್ದ ಕನ್ನಡವೂ ಸೇರಿದಂತೆ ಇಡೀ ಭಾರತದ ಚಿತ್ರರಂಗದ ಚಟುವಟಿಕೆಗಳಿ ಇದೀಗ ಈ ವಾರದಿಂದ ಆರಂಭವಾಗಿವೆ. ಆ ಹಿನ್ನೆಲೆಯಲ್ಲಿ ಬಹುಭಾಷಾ ಚಿತ್ರ ಕೆಜಿಎಫ್ ಚಾಪ್ಟರ್-2 ಚಿತ್ರತಂಡ ಕೂಡ ಮೊನ್ನೆಯಿಂದ ಚಿತ್ರೀಕರಣ ಆರಂಭಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿತ್ತು. ಆ ಚಿತ್ರಗಳಲ್ಲಿ ಪ್ರಕಾಶ್ ರೈ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಢೀರ್ ಹುಯಿಲೆಬ್ಬಿಸಿದ ‘ಭಕ್ತ ಪಡೆ’, ಪ್ರಕಾಶ್ ರೈ ಅವರಿಗೆ ‘ದೇಶದ್ರೋಹಿ’, ‘ಹಿಂದೂ ವಿರೋಧಿ’ ಮುಂತಾದ ತಮ್ಮ ರೆಡಿಮೇಡ್ ಹಣೆಪಟ್ಟಿಗಳನ್ನು ಹಚ್ಚಿ, ಅವರನ್ನು ಸಿನಿಮಾದಿಂದ ಕೈಬಿಡದೇ ಹೋದರೆ ನಾವು ಸಿನಿಮಾವನ್ನೇ ಬೈಕಾಟ್ ಮಾಡ್ತೀವಿ, ಬಹಿಷ್ಕರಿಸ್ತೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದರು. ಕನ್ನಡದ ಮತ್ತೊಬ್ಬ ಹಿರಿಯ ನಟ ಅನಂತನಾಗ್ ಅವರು ಇದೇ ಸರಣಿಯ ಮೊದಲ ಭಾಗದಲ್ಲಿ ಮಾಡಿದ್ದ ಪಾತ್ರವನ್ನೇ ಈಗ ರೈ ಅವರಿಗೆ ನೀಡಲಾಗಿದೆ ಎಂದೂ ಹೇಳುವ ಮೂಲಕ ಭಕ್ತರು, ಅನಂತ ನಾಗ್ ತಮ್ಮವರು, ರೈ ತಮ್ಮವರಲ್ಲ ಎಂಬ ವಾದವನ್ನೂ ಮುಂದಿಟ್ಟಿದ್ದರು!

ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಸುಳ್ಳು ಭರವಸೆಗಳು, ತಪ್ಪು ಆಡಳಿತ ನೀತಿಗಳು, ಒಂದು ಸಮುದಾಯ, ಕೋಮು ಗುರಿಯಾಗಿಸಿಕೊಂಡು ಭೀತಿ ಹುಟ್ಟಿಸುವ, ಭ್ರಮೆ ಬಿತ್ತುವ ರಾಜಕೀಯ ವರಸೆಗಳು ಸೇರಿದಂತೆ ದೇಶದ ಬಹುತ್ವ ಮತ್ತು ಸಂವಿಧಾನಿಕ ಸಹಬಾಳ್ವೆಯ ಆಶಯಗಳಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತದ್ವಿರುದ್ಧವಾದ ದಮನನೀತಿ, ದ್ವೇಷರಾಜಕಾರಣವನ್ನು ಪ್ರಶ್ನಿಸಿದ ಪ್ರಕಾಶ್ ರೈ ಅವರನ್ನು ಹೀಗೆ ರೆಡಿಮೇಡ್ ಹಣೆಪಟ್ಟಿ ಕಟ್ಟಿ ನಿಂದಿಸುವುದು, ಬೆದರಿಸುವುದು, ದಾಳಿ ನಡೆಸುವುದು ಹೊಸದೇನಲ್ಲ. ಆದರೆ, ಕೋಟ್ಯಂತರ ರೂಪಾಯಿ ಹಣ ಹೂಡಿ ನಿರ್ಮಾಣ ಮಾಡುವ ಒಂದು ಸಿನಿಮಾದ ವಿಷಯದಲ್ಲಿ ಇಂತಹ ವಿವಾದವಾದಾಗ ಸಹಜವಾಗೇ ಚಿತ್ರ ತಂಡ ಆತಂಕಕ್ಕೆ ಒಳಗಾಗುತ್ತದೆ. ಆ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕರು, ಸ್ಪಷ್ಟನೆ ನೀಡಿ, ಅನಂತ ನಾಗ್ ನಿರ್ವಹಿಸಿದ ಪಾತ್ರಕ್ಕೂ, ಎರಡನೇ ಭಾಗದಲ್ಲಿ ರೈ ಮಾಡುತ್ತಿರುವ ಪಾತ್ರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ವಿವಾದ ಬಹುತೇಕ ತಣ್ಣಗಾಗಿದೆ.

ಆದರೆ, ಈ ಇಡೀ ಪ್ರಕರಣ ಇತರ ಹಲವು ಸಂದರ್ಭಗಳಂತೆಯೇ, ತಮ್ಮನ್ನು ತಾವು ದೇಶಪ್ರೇಮಿಗಳೆಂದು, ದೇಶಭಕ್ತರೆಂದು ಸ್ವಯಂ ಪ್ರಮಾಣಪತ್ರ ಕೊಟ್ಟುಕೊಂಡು, ಮತ್ತೊಬ್ಬರ ದೇಶಪ್ರೇಮವನ್ನು, ತಾಯ್ನೆಲದ ಕುರಿತ ಬದ್ಧತೆ ಮತ್ತು ಕಾಳಜಿಯನ್ನು ಸದಾ ಕಟಕಟೆಯಲ್ಲಿ ನಿಲ್ಲಿಸಿ, ಕಲ್ಲು ಹೊಡೆಯುವ, ತಾವೇ ತೀರ್ಮಾನ ಕೊಟ್ಟು ಗುಂಪು ದಾಳಿಗೆ ಇಳಿಯುವ ಈ ‘ನಕಲಿ ಭಕ್ತ’ರ ವರಸೆ ಎಷ್ಟು ಆತ್ಮಘಾತುಕ, ಎಷ್ಟು ಪೊಳ್ಳು ಮತ್ತು ನಿಜವಾಗಿಯೂ ಸ್ವತಃ ಅವರೇ ಎಂತಹ ದೇಶದ್ರೋಹಿಗಳು ಎಂಬುದನ್ನು ಬಯಲು ಮಾಡಿದೆ. ಮತ್ತೊಬ್ಬರ ಬದ್ಧತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಸೀಳುನಾಯಿಗಳಂತೆ ಎರಗುವ ಈ ಟ್ರೋಲ್ ಪಡೆ ಎಂಬ ‘ಬಾಡಿಗೆ ಹಂತಕರು’ ಸ್ವತಃ ಎಷ್ಟು ಅಪ್ರಾಮಾಣಿಕರು ಎಂಬುದಕ್ಕೆ ಈ ವಿವಾದ ತಾಜಾ ಉದಾಹರಣೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೇ ಸಿನಿಮಾದಲ್ಲಿ ಈ ಭಕ್ತರು ಹೀಗೆ ಹಣೆಪಟ್ಟಿ ಹಚ್ಚುವ ‘ದೇಶದ್ರೋಹ’ ಆರೋಪದಡಿ ಬಂಧಿತನಾಗಿ, ಜೈಲುಶಿಕ್ಷೆಯನ್ನೂ ಅನುಭವಿಸಿ ಬಂದಿರುವ ನಟರೊಬ್ಬರು ಆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಡೀ ದೇಶವನ್ನೇ ಕೋಮು ದಳ್ಳುರಿಗೆ ನೂಕಿದ 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಎಕೆ-56 ಗನ್, 9 ಎಂಎಂ ಪಿಸ್ತೂಲ್ ಮತ್ತು ಮದ್ದುಗುಂಡು ಹೊಂದಿದ ಆರೋಪದ ಮೇಲೆ ಬಂಧಿತನಾಗಿ, ಇಂದಿನ ಯುಎಪಿಎ ಕಾಯ್ದೆಗಿಂತ ಬಿಗಿಯಾಗಿದ್ದ ಟಾಡಾ ಕಾಯ್ದೆಯಡಿ ಪ್ರಕರಣವನ್ನು ಎದುರಿಸಿ, ಕೊನೆಗೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಸುದೀರ್ಘ ಅವಧಿಯ ಶಿಕ್ಷೆಗೂ ಗುರಿಯಾಗಿದ್ದ ಸಂಜಯ್ ದತ್ ಸ್ವತಃ ಈ ಸಿನಿಮಾದಲ್ಲಿ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಾವೂದ್ ಇಬ್ರಾಹಿಂ ಸಹಚರ ಅಬು ಸಲೀಂನೊಂದಿಗೆ ಶಸ್ತ್ರಾಸ್ತ್ರ ಸಾಗಣೆಯಲ್ಲಿ ಭಾಗಿಯಾಗುವ ಮೂಲಕ 257 ಮಂದಿಯನ್ನು ಬಲಿತೆಗೆದುಕೊಂಡ ಮುಂಬೈ ದಾಳಿ ಸಂಚಿನ ಪಾಲುದಾರನಾದ ಗಂಭೀರ ಪ್ರಕರಣ ಅದು.

ಮುಖ್ಯವಾಗಿ 1992ರ ಬಾಬರಿ ಮಸೀದಿ ಧ್ವಂಸ ಘಟನೆಗೆ ಪ್ರತೀಕಾರವಾಗಿ ಮುಂಬೈ ಷೇರು ಮಾರುಕಟ್ಟೆ, ಶಿವಸೇನಾ ಪ್ರಧಾನ ಕಚೇರಿ, ಏರ್ ಇಂಡಿಯಾ ಕಚೇರಿ, ಪ್ಲಾಜಾ ಸಿನಿಮಾದಂತಹ ಪ್ರಮುಖ ಜನದಟ್ಟಣೆಯ ಕಟ್ಟಡಗಳನ್ನು ಗುರಿಯಾಗಿಸಿಕೊಂಡು 1993ರ ಮಾರ್ಚ್ 12ರಂದು ಮುಂಬೈ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಏಕಕಾಲಕ್ಕೆ ವಿವಿಧೆಡೆ ಸ್ಫೋಟಿಸಿದ್ದ 13 ಬಾಂಬುಗಳು 257 ಮಂದಿಯನ್ನು ಬಲಿತೆಗೆದುಕೊಂಡಿದ್ದವು. ಸುಮಾರು 1500 ಮಂದಿ ಗಾಯಗೊಂಡಿದ್ದರು. ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಭೀಕರ ಭಯೋತ್ಪಾದನಾ ಕೃತ್ಯವಾದ ಆ ಘಟನೆಯ ಬಳಿಕ ದೇಶದ ಉದ್ದಗಲಕ್ಕೂ ಹೊತ್ತಿ ಉರಿದ ಕೋಮು ದಳ್ಳುರಿಯಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು, ಸಾವಿರಾರು ಮಂದಿ ಮನೆಮಠ, ವ್ಯಾಪಾರ-ವಹಿವಾಟು, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಪಾಲಾಗಿದ್ದರು. ಲೆಕ್ಕವಿಲ್ಲದಷ್ಟು ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ ನಾಶವಾಗಿತ್ತು.

ಈ ಘಟನೆಯ ತನಿಖೆ ನಡೆಸಿದ ಪೊಲೀಸರು, ಪ್ರಮುಖ ಸೂತ್ರದಾರ ದಾವೂದ್ ಇಬ್ರಾಹಿಂನ ಬಲಗೈಬಂಟ ಯಾಕೂಬ್ ಮೆಮನ್ ಮತ್ತು ಅಬು ಸಲೇಂ ಇಡೀ ದಾಳಿಯ ಕಾರ್ಯಾಚರಣೆಯ ಹೊಣೆ ಹೊತ್ತಿದ್ದರು ಎಂಬುದನ್ನು ಕಂಡುಕೊಂಡಿದ್ದರು. ಅದೇ ಅಬು ಸಲೇಂನಿಂದ 3 ಎಕೆ-56 ಗನ್, ಒಂದು 9ಎಂಎಂ ಪಿಸ್ತೂಲ್, 9 ಮಾಗಜೀನ್, 450 ಕಾಟ್ರಿಡ್ಜ್ ಮತ್ತು 20 ಕೈಬಾಂಬುಗಳನ್ನು ದತ್ ಪಡೆದು ಸಂಗ್ರಹಿಸಿಟ್ಟುಕೊಂಡ ಆರೋಪದ ಮೇಲೆ ಅಪರಾಧ ಪತ್ತೆ ದಳ ಪೊಲೀಸರು 1993ರ ಏಪ್ರಿಲ್ 19ರಂದು ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಪೊಲೀಸರ ವಿಚಾರಣೆ ವೇಳೆ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂನಿಂದ ತಾನು ಈ ಶಸ್ತ್ರಾಸ್ತ್ರ ಪಡೆದಿರುವುದಾಗಿ ಸಂಜಯ್ ದತ್ತ ಒಪ್ಪಿಕೊಂಡಿದ್ದರು. ಬಳಿಕ ನ್ಯಾಯಾಲಯದಲ್ಲಿ ವ್ಯತಿರಿಕ್ತ ವಾದ ಮಂಡಿಸಿದ್ದರು.

ಪ್ರಕರಣದ ಕುರಿತು ತನಿಖಾಧಿಕಾರಿಗಳು 1993ರ ನವೆಂಬರ್ 4ರಂದು ಬಾಂಬೆ ನ್ಯಾಯಾಲಯಕ್ಕೆ ಸಲ್ಲಿಸಿದ ಸುಮಾರು 10 ಸಾವಿರ ಪುಟದ ಆರೋಪ ಪಟ್ಟಿಯಲ್ಲಿ ಸಂಜಯ್ ದತ್ ಸೇರಿದಂತೆ ಒಟ್ಟು 189 ಮಂದಿಯ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. 1993ರಿಂದ 2006ರವರೆಗೆ ಸಂಜಯ್ ದತ್ ಈ ಪ್ರಕರಣದಲ್ಲಿ ಜೈಲು ವಾಸ ಅನುಭಿಸಿದ್ದರು. ಆ ಅವಧಿಯಲ್ಲಿ ಎರಡು ಬಾರಿ ಜಾಮೀನಿನ ಮೇಲೆ ಕೆಲ ದಿನ ಹೊರಬಂದಿದ್ದರು ಕೂಡ. ಬಳಿಕ 2005ರಲ್ಲಿ ಟಾಡಾ ವಿಶೇಷ ನ್ಯಾಯಾಲಯ, ಟಾಡಾ ಪ್ರಕರಣದಲ್ಲಿ ದತ್ ಅವರನ್ನು ಕೈಬಿಟ್ಟಿತು. ಆದರೆ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಮಾತ್ರ ಮುಂದುವರಿದಿತ್ತು. ಬಳಿಕ 2007ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿನ್ಯಾಯಾಲಯ ದತ್ ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆದರೆ, ದತ್ ಆ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಮತ್ತೆ ಆರು ವರ್ಷಗಳ ಕಾನೂನು ಹೋರಾಟದ ಬಳಿಕ ಸುಪ್ರೀಂಕೋರ್ಟ ಕೂಡ, 2013ರಲ್ಲಿ ದತ್ ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅಂತಿಮ ಆದೇಶ ನೀಡಿತು.

ಈ ನಡುವೆ ಹಲವು ಬಾರಿ ಪೆರೋಲ್ ಪಡೆದು ಹೊರಗಿದ್ದ ಸಂಜಯ್ ದತ್, ಅಂತಿಮವಾಗಿ 2016ರ ಫೆಬ್ರವರಿ 25ರಂದು ತಮ್ಮ ಜೈಲುವಾಸ ಶಿಕ್ಷೆ ಮುಕ್ತಾಯಗೊಳಿಸಿ ಬಿಡುಗಡೆ ಹೊಂದಿದ್ದರು.

ಇದೀಗ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದತ್, ಸದ್ಯ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರ ಎಂಬ ಪ್ರಮುಖ ವಿಲನ್ ಪಾತ್ರ ನಿರ್ವಹಿಸುತ್ತಿರುವುದಾಗಿ ಚಿತ್ರ ತಂಡ ಹೇಳಿದೆ. ಆ ನಡುವೆ, ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ ನಟನ ಅಪರಾಧ ಹಿನ್ನೆಲೆಯ ಕಾರಣಕ್ಕೆ ಆ ಸಿನಿಮಾದಲ್ಲಿ ಆತನಿಗೆ ನಟಿಸಲು ಅವಕಾಶ ನೀಡಬಾರದು ಮತ್ತು ಅಲ್ಲದೆ ಆ ಸಿನಿಮಾ ಬಿಡುಗಡೆಗೂ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಹುಬ್ಬಳ್ಳಿಯ ಜಿ ಶಿವಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಳ್ಳಿಹಾಕಿದೆ. ರಾಜ್ಯದ ಜನತೆ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭಿಸಿರುವ ನಟ ಸಿನಿಮಾದಲ್ಲಿ ಅಭಿನಯಿಸುವುದನ್ನು ವಿರೋಧಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಆದರೆ, ಅಪರಾಧ ಕೃತ್ಯಕ್ಕಾಗಿ ಶಿಕ್ಷೆ ಅನುಭವಿಸಿದ ವ್ಯಕ್ತಿ ಸಿನಿಮಾದಲ್ಲಿ ನಟಿಸಬಾರದು ಎಂಬ ಯಾವುದೇ ಕಾನೂನು ಇಲ್ಲ ಎಂಬ ಹಿನ್ನೆಲೆಯಲ್ಲಿ ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿದೆ.

ವಿಪರ್ಯಾಸ ನೋಡಿ, ದೇಶದ ವಿರುದ್ಧದ ದಾಳಿಯಂತಹ ಗಂಭೀರ ಭಯೋತ್ಪಾದನಾ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಗಿ, ಶಿಕ್ಷೆಯನ್ನೂ ಅನುಭವಿಸಿದ ವ್ಯಕ್ತಿಯೊಬ್ಬನಿಗೆ ಸಿನಿಮಾದಲ್ಲಿ ನಟಿಸಲು ತಡೆಯೊಡ್ಡಲು ನ್ಯಾಯಾಲಯವೇ ನಿರಾಕರಿಸಿದೆ. ಆದರೆ, ಅಂತಹ ಹಿನ್ನೆಲೆಯ ನಟನ ಬಗ್ಗೆ ಚಕಾರವೆತ್ತದ ‘ಭಕ್ತ ಪಡೆ’, ದೇಶದ ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಹಕ್ಕು ವಂಚಿತರ ಬಗ್ಗೆ, ಬಡವರ ಬಗ್ಗೆ ಕಾಳಜಿ ತೋರುವ, ಅವರ ಪರವಾಗಿ ಸರ್ಕಾರವನ್ನು ಪ್ರಶ್ನಿಸುವ, ಆಳುವ ಮಂದಿಯನ್ನು ಪ್ರಶ್ನಿಸುವ ಕಾರಣಕ್ಕೆ ಪ್ರಕಾಶ್ ರೈ ಅವರನ್ನು ದೇಶದ್ರೋಹಿ, ಹಿಂದೂ ದ್ರೋಹಿ ಎಂದು ಹುಯಿಲೆಬ್ಬಿಸಿ ಸಿನಿಮಾ ಬಹಿಷ್ಕರಿಸುವ ಬೆದರಿಕೆಯೊಡ್ಡುತ್ತಾರೆ!

ದೇಶದ ಬಡತನದ ಬಗ್ಗೆ, ನಿರುದ್ಯೋಗದ ಬಗ್ಗೆ, ಕೃಷಿ ಬಿಕ್ಕಟ್ಟಿನ ಬಗ್ಗೆ, ಲಾಕ್ ಡೌನ್ ಸಂಕಷ್ಟದ ಬಗ್ಗೆ, ಕೂಲಿಕಾರ್ಮಿಕರ ಗೋಳಿನ ಬಗ್ಗೆ, ಸರ್ಕಾರದ ಕುಮ್ಮಕ್ಕಿನ ಹಿಂಸಾಚಾರದ ಬಗ್ಗೆ, ಒಂದು ಧರ್ಮ, ಕೋಮು ಗುರಿಯಾಗಿಸಿಕೊಂಡು ನಡೆಸುವ ಬಹುಸಂಖ್ಯಾತರ ದಬ್ಬಾಳಿಕೆಯ ಬಗ್ಗೆ, ಬಹುಸಂಖ್ಯಾತ ಸರ್ಕಾರದ ಪರೋಕ್ಷ ಬೆಂಬಲದ ಬಗ್ಗೆ ಸಭ್ಯ ಮತ್ತು ಸಂಯಮದ ಭಾಷೆಯಲ್ಲಿ, ಸಂವಿಧಾನದ ಚೌಕಟ್ಟಿನಲ್ಲಿ ಪ್ರಶ್ನಿಸಿದರೆ ಅದು ದೇಶಪ್ರೇಮವಾ? ಅಥವಾ ದೇಶದ್ರೋಹವಾ? ದೇಶದ ಎಲ್ಲ ಜನರಿಗೆ ಬದುಕುವ, ದುಡಿಯುವ ಹಕ್ಕು ನೀಡಿದ, ಸಂವಿಧಾನವನ್ನು ಬದಲಾಯಿಸುತ್ತೇವೆ. ಆ ಮೂಲಕ ಮತ್ತೆ ಶತಮಾನಗಳ ಹಿಂದಿನ ಜಾತಿ-ವರ್ಗದ ತಾರತಮ್ಯವನ್ನು ವ್ಯವಸ್ಥೆಯ ಸೂತ್ರವಾಗಿ ಜಾರಿಗೊಳಿಸುತ್ತೇವೆ ಎಂಬುದನ್ನು ಪ್ರಶ್ನಿಸಿದರೆ ಅದು ದೇಶದ್ರೋಹವಾಗುತ್ತದೆಯಾ? ಅಥವಾ ನೈಜ ದೇಶಪ್ರೇಮವಾ?

ಭಕ್ತಪಡೆಯ ದೇಶಪ್ರೇಮ ಮತ್ತು ದೇಶದ್ರೋಹದ ಮಾನದಂಡ ನಿಜವಾಗಿ ದೇಶದ ಹಿತವೇ, ದೇಶದ ಜನರ ಹಿತವೇ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹಿತವೇ? ಅಥವಾ ಒಬ್ಬ ವ್ಯಕ್ತಿ, ಒಂದು ಪಕ್ಷದ ಹಿತವೇ? ಎಂಬುದನ್ನು ಇದೀಗ ಈ ಪ್ರಕಾಶ್ ರೈ ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿವಾದ ಇನ್ನಷ್ಟು ಸ್ಪಷ್ಟಪಡಿಸಿದೆ. ದೇಶದ ಹೆಸರಿನಲ್ಲಿ, ಭಾರತ ಮಾತೆಯ ಹೆಸರಿನಲ್ಲಿ ನಿಜವಾಗಿಯೂ ಆ ಭಕ್ತಗಣ ಯಾರ ಹಿತಕ್ಕಾಗಿ, ಯಾರ ಗುಣಗಾನಕ್ಕಾಗಿ ಬಡಿದಾಡುತ್ತಿದೆ ಎಂಬುದು ಬಯಲಾಗಿದೆ. ಸೋಗಿನ ‘ದೇಶಭಕ್ತಿ’, ಸೋಗಲಾಡಿ ‘ದೇಶಪ್ರೇಮ’ದ ಅಸಲೀ ಮುಖ ಬೆತ್ತಲಾಗಿದೆ. ಹಾಗಾಗಿಯೇ, ಆರಂಭದ ಎರಡು ದಿನ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿದ ಆ ಬಾಡಿಗೆ ಭಕ್ತರು, ಯಾವಾಗ ಸಂಜಯ್ ದತ್ ಮತ್ತು ಮುಂಬೈ ಸರಣಿ ಸ್ಫೋಟ ಭಯೋತ್ಪಾದನಾ ಕೃತ್ಯದ ವಿಚಾರ ಮುನ್ನೆಲೆಗೆ ಬಂದಿತೋ ಆಗ ಬಹುತೇಕ ಸದ್ದಿಲ್ಲದೆ ಬದಿಗೆ ಸರಿದಿದ್ದಾರೆ!

Click here to follow us on Facebook , Twitter, YouTube, Telegram

Pratidhvani
www.pratidhvani.com