ರಾಯಣ್ಣ ಪ್ರತಿಮೆ ವಿವಾದ: ರಾಜಕೀಯ ನಾಯಕರ ದ್ವಂದ್ವ ನೀತಿಯ ಅನಾವರಣ
ಅಭಿಮತ

ರಾಯಣ್ಣ ಪ್ರತಿಮೆ ವಿವಾದ: ರಾಜಕೀಯ ನಾಯಕರ ದ್ವಂದ್ವ ನೀತಿಯ ಅನಾವರಣ

ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿ ವರ್ಗ ಕುಣಿಯುವುದನ್ನು ಬಿಡಬೇಕು. ಕರ್ನಾಟಕದಲ್ಲಿ ಇದ್ದವರೆಲ್ಲರೂ ಕನ್ನಡಿಗರು, ಕನ್ನಡಿಗರೇ ಸಾರ್ವಭೌಮರು. ಪರ ಭಾಷಾ ಪ್ರೇಮಿಗಳ ಒತ್ತಡಕ್ಕೆ ಮಣಿಯುವುದು ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾದಂತೆಯೇ ಸರಿ.

ಕೃಷ್ಣಮಣಿ

ಬೆಳಗಾವಿಯಲ್ಲಿ ಶುರುವಾಗಿದ್ದ ವಿವಾದ ಸುಖಾಂತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ. ಆದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವ ಕಾರಣಕ್ಕೆ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ನಡುವೆ ಶಾಂತಿ ಒಪ್ಪಂದದಲ್ಲಿ ನಡೆದಿರುವ ಹೊಂದಾಣಿಕೆ ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಮಾರಕವಾದ ನಡೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಅಥವಾ ಬೆಳಗಾವಿ ಜಿಲ್ಲಾಡಳಿತ ಕೆಚ್ಚೆದೆ ಪ್ರದರ್ಶನ ಮಾಡಬೇಕಿರುವ ಈ ಸಮಯದಲ್ಲಿ ಮರಾಠಿಗರ ಮುಂದೆ ನಡುಬಗ್ಗಿಸಿ ನಿಲ್ಲುವ ಮೂಲಕ ಕನ್ನಡಿಗರು ನಾಚಿಕೆ ಪಟ್ಟುಕೊಳ್ಳುವಂತೆ ಮಾಡಿದೆ.

ಸಂಗೊಳ್ಳಿ ರಾಯಣ್ಣ ‌ಮೂರ್ತಿ ಸ್ಥಾಪನೆ ವಿವಾದ ಇತ್ಯರ್ಥ ಆದ ಬಳಿಕ ಛತ್ರಪತಿ ಶಿವಾಜಿ ಮೂರ್ತಿ ಹಾಗೂ ‌ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಲಾಯ್ತು. ಕನ್ನಡ ಪರ ಹಾಗೂ ಮರಾಠಿ ಸಂಘಟನೆಯ ಮುಖಂಡರು ಮಾಲಾರ್ಪಣೆ ಮಾಡಿದರು. ಎಡಿಜಿಪಿ ಅಮರ ಕುಮಾರ್ ಪಾಂಡೆ, ಡಿಸಿ ಎಂ.ಜಿ ಹಿರೇಮಠ, ಕರವೇ ಮುಖಂಡರು ಭಾಗಿಯಾಗಿದ್ದರು. ಉಭಯ ಸಮುದಾಯದ ಮುಖಂಡರು ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು. ಬಳಿಕ ಮಾತನಾಡಿರುವ ಬೆಳಗಾವಿಯಲ್ಲಿ ಎಡಿಜಿಪಿ ಅಮರ ಕುಮಾರ್ ಪಾಂಡೆ, ಲಾಠಿಚಾರ್ಚ್ ಬಗ್ಗೆ ಗೃಹ ಸಚಿವರು ತನಿಖೆಗೆ ಆದೇಶ ಮಾಡಿದ್ದಾರೆ. ಛತ್ರಪತಿ ಶಿವಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇಬ್ಬರು ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಗ್ರಾಮದ ಶಾಂತಿ ಸುವ್ಯವಸ್ಥೆ ಕಾಪಾಡಲು ನಿರ್ಣಯ ಮಾಡಿದ್ದು, ಇದಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ. ಶಿವಾಜಿ ಮೂರ್ತಿ ಬಳಿ ಒಂದೇ ಬಾವುಟ ಇರಬೇಕು. ಸಂಗೊಳ್ಳಿ ರಾಯಣ್ಣ ಮೂರ್ತಿ ಬಳಿ ಒಂದೇ ಬಾವುಟ ಇರಬೇಕು. ಇಬ್ಬರು ನಾಯಕರಿಗೆ ಸಮಾನವಾಗಿ ಗೌರವದಿಂದ ಕಾಣಬೇಕು ಎಂದು ನಿರ್ಧಸಲಾಗಿದೆ. ಕಿಡಿಗೇಡಿಗಳು ಬಂದು ವಾತಾವರಣ ಕೆಡಿಸದಂತೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಮಾತನಾಡಿ, ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ವಿಚಾರದಲ್ಲಿ ಪೀರನವಾಡಿ ಗ್ರಾಮದ ಜನರೇ ನಿರ್ಣಯ ಮಾಡಲು ಅವಕಾಶ ಕೊಡಲಾಗಿತ್ತು. ಇದಕ್ಕಾಗಿ ಶಾಂತಿ ಸಭೆಯನ್ನು ಆಯೋಜನೆ ಮಾಡಿದ್ದೆವು. ಎರಡು ಸಮಾಜದಿಂದ ತಲಾ ಐದು ಜನರನ್ನು ಕೂರಿಸಿಕೊಂಡು ಸಭೆಯನ್ನು ಮಾಡಿದ್ದೆವು. ಪರಸ್ಪರ ಚರ್ಚಿಸಿ ನಿರ್ಧಾರ ಮಾಡಿದ್ದಾರೆ. ಇದನ್ನು ಜಿಲ್ಲಾಡಳಿತ ಅತ್ಯಂತ ಗೌವರದಿಂದ ಕಾಣಲಿದೆ. ವೃತ್ತಕ್ಕೆ ಶಿವಾಜಿ ಮಹಾರಾಜ್ ವೃತ್ತ ಎಂದು ನಾಮಕರಣ ಮಾಡಲು ಎಲ್ಲಾ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಬೆಳಗಾವಿಯ ವಿವಾದಿತ ಸ್ಥಳ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ವಿಚಾರವಾಗಿ ವಿವಾದವಾಗಿ ಆ ವಿವಾದ ಮುಕ್ತಾಯವಾದ ಬಳಿಕ ರಾಯಣ್ಣ ಬ್ರಿಗೇಡ್‌ಕಟ್ಟುವ ಮೂಲಕ ರಾಜಕೀಯ ಉನ್ನತಿ ಸಾಧಿಸಲು ಮುಂದಾಗಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ‌, ಅಬಕಾರಿ ಸಚಿವ ಹೆಚ್ ನಾಗೇಶ್‌ಭೇಟಿ ನೀಡಿ, ಶಿವಾಜಿ ಹಾಗೂ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಕೆ ಮಾಡಿದ್ರು. ರಾಯಣ್ಣ ಸರ್ಕಲ್‌ನಲ್ಲಿ (ಅಧಿಕೃತವಾಗಿ ಶಿವಾಜಿ ಸರ್ಕಲ್‌) ಸೇರಿದ್ದ ನೂರಾರು ಜನ ಅಭಿಮಾನಿಗಳು ಸಂಭ್ರಮಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ‌, ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರ ಸೌಹಾರ್ಧತೆ ಮೂಲಕ ಇತ್ಯರ್ಥವಾಗಿದೆ. ಇಬ್ಬರು ಮಹಾನ್ ನಾಯಕರಿಗೆ ಅಗೌರವ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಶಿವಸೇನೆ ನಾಯಕರು ಪತ್ರಗಳಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ದಾಖಲು ಮಾಡಿರುವ ಪ್ರಕರಣ ವಾಪಸ್ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸಣ್ಣಪುಟ್ಟ ಗಲಾಟೆಯಾಗಿದೆ. ಎರಡು ಕಡೆಯವರ ಪ್ರಕರಣ ವಾಪಸ್ ಪಡೆಯಲು ಚರ್ಚೆ ಮಾಡುತ್ತೇನೆ. ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ದಾಖಲಿಸಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಏನಾದರೂ ಅನುವಾಹುತ ಆಗಿದ್ದರೆ ನೀವೆ ಪ್ರಶ್ನೆ ಮಾಡುತ್ತಿದ್ದಿರಿ. ಹೀಗಾಗಿ ಕೇಸ್ ದಾಖಲಿಸಲಾಗಿದೆ. ಇದನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇನೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಅಧಿಕೃತ ಮಾಡುವ ಬಗ್ಗೆಯೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿರೋಧಿಸಿ ಮರಾಠಿ ಭಾಷಿಕರ ಪುಂಡಾಟ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿವೆ. ವಿಜಯಪುರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಂಇಎಸ್ ಪುಂಡರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಕರವೇ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಇದೇ ವೇಳೆ ನವನಗರ ಬಸ್‌ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ವೇಳೆ ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಿಸಲು ಕರವೇ ಕಾರ್ಯಕರ್ತರು ಆಗ್ರಹಿಸಿದರು.

ಬೆಳಗಾವಿಯ‌ಲ್ಲಿನ ಘಟನೆ ಬಗ್ಗೆ ಇತ್ತ ಚಾಮರಾಜನಗರದಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್‌ಕುಮಾರ್‌, ಕನ್ನಡದ ವಿರುದ್ಧ, ಭಾಷೆಯ ಹಾಗೂ ಕನ್ನಡ ಅಸ್ಮಿತೆಯ ವಿರುದ್ಧ ಮಾತನಾಡಿದರೆ ಯಾರು ಸಹಿಸುವುದಿಲ್ಲ ಎನ್ನುವ ಮೂಲಕ ಎಂಇಎಸ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಮ್ಮ ಜನರ ಭಾವನೆಯನ್ನ ಅರಿತು ಈ ಮಾತನ್ನ ಹೇಳುತ್ತಿದ್ದೇನೆ. ಬೆಳಗಾವಿಯ ನಗರ ಪಾಲಿಕೆಯನ್ನ ನಾನೇ ಸುಪರ್ ಸೀಡ್ ಮಾಡಿದ್ದೆ, ಇದು ಅವರಿಗೆ ನೆನಪಿನಲ್ಲಿರಲಿ. ನೆಲ, ಜಲ, ಈ ನೆಲದ ಇತಿಹಾಸ ಬಗ್ಗೆ ಮಾತನಾಡಿದರೆ ಎಂಇಎಸ್ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಎಂಇಎಸ್‌ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಎಂಇಎಸ್ ಪಕ್ಷ ಇನ್ನೂ ಹಳೇ ಕಾಲದ ಚಿಂತನೆಯಲ್ಲಿದೆ. ಅವರು ಉದ್ದಟತನವನ್ನ ಬೆಳಗಾವಿಯ ಯುವ ಜನತೆ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಶಾಂತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ವಾಟಾಳ್ ನಾಗರಾಜ್‌ ವಿರೋಧ ಮಾಡಿದ್ದಾರೆ. "ರಾಯಣ್ಣ ಪ್ರತಿಮೆ ಜಾಗದಲ್ಲಿ ಶಿವಾಜಿ ಸರ್ಕಲ್ ಅಂತಾ ಯಾವನೂ ಪೊಲೀಸ್ ಆಫೀಸರ್ ರಾಜಿ ಮಾಡಿದ್ದು"..? ಎಂದು ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ವಾಟಾಳ್ ನಾಗರಾಜ್ ಪ್ರಶ್ನೆ ಮಾಡಿದ್ದಾರೆ. ʼಮರಾಠಿಯವರಿಗೆ ಕರ್ನಾಟಕ ಅರ್ಧ ಬರೆದು ಕೊಟ್ಟಿದ್ದೀರೇನ್ರಿ..? ಎಂಇಎಸ್ ನವರನ್ನು ಒದ್ದು ಹೊರಗೆ ಹಾಕಿ. ರಾಯಣ್ಣ ಪ್ರತಿಮೆ ಇರೋ ಜಾಗದಲ್ಲಿ ಶಿವಾಜಿ ಸರ್ಕಲ್ ಎನ್ನುವುದನ್ನು ನಾವು ಒಪ್ಪಲ್ಲ. ಆಗಸ್ಟ್ 31ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ. ಇದಕ್ಕೂ ಬಗ್ಗದಿದ್ದರೇ ಕರ್ನಾಟಕ ಬಂದ್‌ ಗೆ ಕರೆ ನೀಡ್ತೀವಿ. ಬೆಳಗಾವಿ ನಮ್ಮದು, ಮರಾಠಿಗರದ್ದು, ಶಿವಸೇನೆಯರದ್ದಲ್ಲ". ಎಂದು ವಾಟಾಳ್‌ ಗುಡುಗಿದ್ದಾರೆ. ಇನ್ನೂ ಬಿ.ಎಸ್. ಯಡಿಯೂರಪ್ಪ ಎಚ್ಚರ ಎಚ್ಚರ ಎಂದ ಸಿಎಂ ಯಡಿಯೂರಪ್ಪಗೂ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಪ್ರತಿಮೆ ರಾಯಣ್ಣದು ಸರ್ಕಲ್‌ ಹೆಸರು ಶಿವಾಜಿದು ಯಾಕೆ..?

ರಾಜಕಾರಣಿಗಳು ಮತಗಳ ಆಸೆಯಿಂದ ಕರ್ನಾಟಕದ ಅರ್ಧ ಭಾಗವನ್ನು ಬರೆದು ಕೊಟ್ಟರೂ ಅಚ್ಚರಿಯೇನಿಲ್ಲ. ಒಂದು ಸರ್ಕಲ್‌ ಗೆ ನಾಮಕರಣ ಮಾಡುವುದಕ್ಕೆ ಕೆಲವೊಂದು ನೀತಿ ನಿಯಮಗಳಿವೆ. ಅಲ್ಲಿನ ಜಿಲ್ಲಾ ಪಂಚಾಯ್ತಿ ಅಥವಾ ನಗರ ಸಭೆ ಅಥವಾ ಪಾಲಿಕೆ ಅಥವಾ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಬೇಕು, ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆ ನಡೆಸಬೇಕು. ಎಲ್ಲರ ಸಹಮತ ಪಡೆದುಕೊಂಡು ನಾಮಕರಣ ಮಾಡುವ ನಿರ್ಧಾರ ಮಾಡಬೇಕು. ಇದು ಪ್ರತಿಮೆ ಸ್ಥಾಪನೆ ಮಾಡಲು ಅನ್ವಯ ಆಗುವುದಿಲ್ಲವೇ ಎಂದರೆ ಖಂಡಿತ ಅದೇ ನಿಯಮ ಇಲ್ಲೂ ಕೂಡ ಅನ್ವಯ ಆಗುತ್ತದೆ. ಆದರೆ ನಮ್ಮ ಕರ್ನಾಟಕದ ನೆಲದೊಳಗೆ ಕನ್ನಡಿಗ ಯುವಕರು ಅತ್ಯುತ್ಸಹದಿಂದ ಪ್ರತಿಮೆ ಸ್ಥಾಪಿಸಿದ್ದಾರೆ. ಅದಕ್ಕೆ ಸ್ಥಳೀಯ ಆಡಳಿತ ಮಾನ್ಯತೆ ಕೊಡಬಹುದು.

ನಮ್ಮ ಕರ್ನಾಟಕದಲ್ಲಿ ನಮ್ಮ ನೆಚ್ಚಿನ ನಾಯಕನ ಮೂರ್ತಿ ಸ್ಥಾಪನೆಗೆ ಮರಾಠಿ ಭಾಷಿಕರು ವಿರೋಧ ಮಾಡಿದರು ಎನ್ನುವ ಕಾರಣಕ್ಕೆ ಆ ಸರ್ಕಲ್‌ ಗೆ ಶಿವಾಜಿ ಸರ್ಕಲ್‌ ಎಂದು ನಾಮಕರಣ ಮಾಡುವುದು ಯಾವ ನ್ಯಾಯ..? ವಾಟಾಳ್‌ ನಾಗರಾಜ್‌ ಪ್ರಶ್ನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ನಾಳೆ ಬೆಂಗಳೂರಿನ ಯಾವುದೋ ಒಂದು ನಗರದಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲು ಮುಂದಾಗಿರುತ್ತೆ. ಆದರೆ, ಅಲ್ಲಿನ ಜನ ನಾವು ತಮಿಳು ಭಾಷಿಕರು, ಇಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುವುದು ಬೇಡ ಎಂದರೆ ಸುಮ್ಮನಾಗುವರೇ..? ಅಥವಾ ಕರುಣಾನಿಧಿ ಸರ್ಕಲ್‌ ಎಂದು ನಾಮಕರಣ ಮಾಡಿ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡುವಿರಾ..? ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿ ವರ್ಗ ಕುಣಿಯುವುದನ್ನು ಬಿಡಬೇಕು. ಕರ್ನಾಟಕದಲ್ಲಿ ಇದ್ದವರೆಲ್ಲರೂ ಕನ್ನಡಿಗರು, ಕನ್ನಡಿಗರೇ ಸಾರ್ವಭೌಮರು. ಪರ ಭಾಷಾ ಪ್ರೇಮಿಗಳ ಒತ್ತಡಕ್ಕೆ ಮಣಿಯುವುದು ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾದಂತೆಯೇ ಸರಿ.

Click here to follow us on Facebook , Twitter, YouTube, Telegram

Pratidhvani
www.pratidhvani.com