KGF ಚಾಪ್ಟರ್-2 ವಿವಾದ: ಪ್ರಕಾಶ್ ರೈ ವಿರುದ್ಧ‌ ಕಿಡಿಕಾರಲು ನಿಜ ಕಾರಣವೇನು?
ಅಭಿಮತ

KGF ಚಾಪ್ಟರ್-2 ವಿವಾದ: ಪ್ರಕಾಶ್ ರೈ ವಿರುದ್ಧ‌ ಕಿಡಿಕಾರಲು ನಿಜ ಕಾರಣವೇನು?

ಪ್ರಕಾಶ್ ರೈ ಅವರಷ್ಟೇ ಅಲ್ಲ; ಯಾರೇ ಪ್ರಧಾನಿ ಮೋದಿ ವಿರುದ್ಧ, ಬಿಜೆಪಿ ಆಡಳಿತ ಮತ್ತು ಪಕ್ಷದ ವಿರುದ್ಧ, ಸಂಘಪರಿವಾರದ ಅಜೆಂಡಾದ ವಿರುದ್ಧ ದನಿ ಎತ್ತಿದರೆ ಅವರನ್ನು ಹೀಗೆ ಹಣಿಯಲಾಗುತ್ತದೆ. ಅವರ ವ್ಯವಹಾರ, ಉದ್ಯಮ, ವೃತ್ತಿ, ಪ್ರವೃತ್ತಿಗಳನ್ನು ನಾಶಗೊಳಿಸಲು ಅಧಿಕೃತ ಆಡಳಿತ ಯಂತ್ರ ಮತ್ತು ಅನಧಿಕೃತವಾದ ಈ ಹತಾರಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ನಟ ಪ್ರಕಾಶ್ ರೈ ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಲ್ಲಿದ್ಧಾರೆ. ನಟನೆಯೊಂದಿಗೆ ಸಾಮಾಜಿಕ ಚಟುವಟಿಕೆ, ರಾಜಕೀಯದಲ್ಲಿಯೂ ಸಕ್ರಿಯವಾಗಿರುವ ಅವರು, ಇತ್ತೀಚಿನ ದಿನಗಳಲ್ಲಿ ತಮ್ಮ ನಟನೆಗಿಂತ ಇತರ ಕಾರಣಗಳಿಂದಾಗಿ ವಿವಾದಕ್ಕೀಡಾಗುತ್ತಿರುವುದು, ಬಿಜೆಪಿ ಮತ್ತು ಸಂಘಪರಿವಾರದ ಮಂದಿಯ ಆಕ್ರೋಶ, ನಿಂದನೆ, ಬೆದರಿಕೆಯ ಕಾರಣಕ್ಕೆ ಸುದ್ದಿಯಾಗುವುದೇ ಹೆಚ್ಚು.

ಈ ಬಾರಿ ಕೂಡ ಸಿನಿಮಾವೊಂದರಲ್ಲಿ ಅವರಿಗೆ ಅವಕಾಶ ನೀಡಿದ್ದನ್ನೇ ನೆಪ ಮಾಡಿಕೊಂಡು ಸ್ವಯಂಘೋಷಿತ ‘ದೇಶಭಕ್ತರು’ ಪ್ರಕಾಶ್ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ಈಗಾಗಲೇ ಭರ್ಜರಿ ಹಿಟ್ ಆಗಿದ್ದ ಕೆಜಿಎಫ್ ಸಿನಿಮಾದ ಎರಡನೇ ಭಾಗದಲ್ಲಿ ಪ್ರಕಾಶ್ ರೈ ಅವರು ಅಭಿನಯಿಸುತ್ತಿದ್ದಾರೆ ಮತ್ತು ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಆ ಸಿನಿಮಾದ ಚಿತ್ರೀಕರಣ ಮತ್ತೆ ಆರಂಭವಾಗಿದೆ ಎಂಬುದು ಸುದ್ದಿಯಾಗುತ್ತಿದ್ದಂತೆ, ಕೆಲವು ಮಾಧ್ಯಮಗಳು ಮತ್ತು ಪ್ರಕಾಶ್ ರೈ ವಿರೋಧಿ ‘ಭಕ್ತ ಗಣ’ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿ ಮೆರೆಯುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಸಿನಿಮಾದಲ್ಲಿ ಪ್ರಕಾಶ್ ರೈ ಅವರ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ? ಅವರ ಪಾತ್ರ ಹೊಸದೇ ಅಥವಾ ಈಗಾಗಲೇ ಮೊದಲ ಭಾಗದಲ್ಲಿದ್ದ ಪಾತ್ರದ ಮುಂದುವರಿಕೆಯೇ? ಮೊದಲ ಭಾಗದಲ್ಲಿ ಅಭಿನಯಿಸಿದ್ದ ಯಾವುದಾದರೂ ನಟರ ಬದಲಿಗೆ ಇವರು ಆ ಪಾತ್ರ ಮಾಡುತ್ತಿದ್ದಾರೆಯೇ? ಅಥವಾ ಇದು ಸಂಪೂರ್ಣ ಭಿನ್ನ ಪಾತ್ರವೆ? ಎಂಬ ವಿವರಗಳನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸುವ ಮುನ್ನವೇ ಕೆಲವು ಕನ್ನಡ ಮಾಧ್ಯಮಗಳು ಹಿರಿಯ ನಟ ಅನಂತನಾಗ್ ಅವರ ಬದಲಿಗೆ ರೈ ಸಿನಿಮಾಕ್ಕೆ ಪ್ರವೇಶ ಪಡೆದಿದ್ದಾರೆ. ಮೊದಲ ಭಾಗದಲ್ಲಿ ಅನಂತನಾಗ್ ನಿರ್ವಹಿಸಿದ್ದ, ರಾಕಿ ಕಥೆ ಹೇಳುವ ಪತ್ರಕರ್ತನ ಪಾತ್ರದಲ್ಲಿ ರೈ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ಮಾಡಿದ ಕಪೋಲಕಲ್ಪಿತ ವರದಿಯನ್ನೇ ಇಟ್ಟುಕೊಂಡು, ‘ಮೋದಿ ಭಕ್ತರು’ ಎಂದು ಸ್ವಯಂಘೋಷಿತ ಗುಂಪುಗಳು ರೈ ವಿರುದ್ಧ #boycott_kgf_chapter_2 ಹ್ಯಾಷ್ ಟ್ಯಾಗ್ ನಡಿ ಟ್ವಿಟರ್ ನಲ್ಲಿ ವಿಷಕಾರುತ್ತಿವೆ.

ಅನಂತ ನಾಗ್ ಅವರ ಪಾತ್ರವನ್ನು ಪ್ರಕಾಶ್ ರೈಗೆ ಯಾಕೆ ನೀಡಿದಿರಿ, ಸಿನಿಮಾದಿಂದ ’ದೇಶ ವಿರೋಧಿ’, ‘ಹಿಂದೂವಿರೋಧಿ’, ‘ಅರ್ಬನ್ ನಕ್ಸಲ್’, ‘ತುಕ್ಡೆ ತುಕ್ಡೆ ಗ್ಯಾಂಗ್ ಮೆಂಬರ್’, ಪ್ರಕಾಶ್ ಅವರನ್ನು ಕೈಬಿಡದೇ ಇದ್ದರೆ ನಿಮ್ಮ ಸಿನಿಮಾವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಆ ಗುಂಪುಗಳು ಗುರುವಾರ ಬೆಳಗ್ಗೆಯಿಂದ ಹುಯಿಲೆಬ್ಬಿಸಿವೆ. ಈ ನಡುವೆ ಕನ್ನಡ ಮಾಧ್ಯಮಗಳು ಕೂಡ ಉರಿವ ಬೆಂಕಿಗೆ ತುಪ್ಪ ಸುರಿದು ಚಳಿ ಕಾಯಿಸಿಕೊಳ್ಳುವ ವರಸೆ ತೋರಿವೆ. ಒಂದು ರೀತಿಯಲ್ಲಿ ಸಿನಿಮಾದಿಂದ ಅನಂತ ನಾಗ್ ಅವರು ಹೊರಹೋದ ಬಳಿಕ ಆ ಪಾತ್ರವನ್ನು ರೈ ಅವರಿಗೆ ನೀಡಲಾಗಿದೆ ಎಂದು ಕಥೆ ಕಟ್ಟಿ ಪರೋಕ್ಷವಾಗಿ ರೈ ವಿರೋಧಿಗಳಿಗೆ ಪ್ರಚೋದನೆ ನೀಡುವ ನಿಟ್ಟಿನಲ್ಲೂ ಕೆಲವು ಮಾಧ್ಯಮಗಳು ಕೆಲಸ ಮಾಡುತ್ತಿವೆ.

ಆದರೆ, ಈ ವಿವಾದ ಜೋರಾಗುತ್ತಿರುವುದನ್ನು ಕಂಡ, ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಗುರುವಾರ ಸ್ಪಷ್ಟನೆ ನೀಡಿದ್ದು, ಸಿನಿಮಾದ ಮೊದಲ ಭಾಗದಲ್ಲಿ ಅನಂತ್ ನಾಗ್ ನಿರ್ವಹಿಸಿದ ಪಾತ್ರಕ್ಕೂ, ಎರಡನೇ ಭಾಗದಲ್ಲಿ ರೈ ನಿರ್ವಹಿಸುತ್ತಿರುವ ಪಾತ್ರಕ್ಕೂ ಯಾವುದೇ ಸಂಬಂಧವಿಲ್ಲ. ಅವೆರಡೂ ಸಂಪೂರ್ಣ ಭಿನ್ನ ಪಾತ್ರಗಳು ಎಂದು ಹೇಳಿದ್ದಾರೆ. ಆ ಮೂಲಕ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಆದರೆ, ಪ್ರಧಾನಿ ಮೋದಿಯವರ ಆಡಳಿತ ಮತ್ತು ಪೊಳ್ಳು ಭರವಸೆಗಳನ್ನು ಪ್ರಶ್ನಿಸುವವರಲ್ಲಿ ಮೊದಲಿಗರಾಗಿರುವ (ಲೋಕಸಭಾ ಚುನಾವಣೆ ಸೋಲಿನ ಬಳಿಕ ಅವರ ದನಿ ಕ್ಷೀಣಿಸಿದೆ ಎಂಬುದು ಬೇರೆ ವಿಷಯ!) ಪ್ರಕಾಶ್ ರೈ ಅವರನ್ನು ಅದೊಂದೇ ಕಾರಣಕ್ಕಾಗಿ ವಿರೋಧಿಸುವ, ದಾಳಿ ಮಾಡುವ, ಬೆಂಕಿ ಕಾರುವ ಮಂದಿಗೆ ಈ ಸ್ಪಷ್ಟನೆ ಸಮಾಧಾನ ತಂದಿಲ್ಲ. ಅವರಿಗೆ ಸಿನಿಮಾದಲ್ಲಿ ಅವಕಾಶವನ್ನೇ ನೀಡಬಾರದು. ಅವರು ಸಿನಿಮಾದಲ್ಲಿದ್ದರೆ ತಾವು ಸಿನಿಮಾ ಬಹಿಷ್ಕರಿಸುತ್ತೇವೆ. ಅವರನ್ನು ಸಿನಿಮಾದಿಂದ ಕೈಬಿಡಿ ಎಂಬುದು ಭಕ್ತರ ಆಗ್ರಹ. ಆದರೆ, ಆ ಬಗ್ಗೆ ಸಿನಿಮಾ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಾಗೆ ನೋಡಿದರೆ ಪ್ರಕಾಶ್ ರೈ ವಿರುದ್ಧ ಬಿಜೆಪಿ ಮತ್ತು ಸಂಘಪರಿವಾರದ ಮಂದಿಯ ಈ ದ್ವೇಷ ಹೊಸದೇನಲ್ಲ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಂತಹ ಘಟನೆಯ ಬಗ್ಗೆ ಪ್ರಧಾನಿ ಮೋದಿ ಮೌನವನ್ನು ಪ್ರಶ್ನಿಸಿ ರೈ #JustAsking ಹ್ಯಾಷ್ ಟ್ಯಾಗ್ ಬಳಸಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳತೊಡಗಿದ ಮೇಲೆ ಮೋದಿ ಭಕ್ತರ ಆಕ್ರೋಶ ಭುಗಿಲೆದ್ದಿದೆ. ಗೌರಿ ಹತ್ಯೆಯ ವಿಷಯಕ್ಕೆ ಮಾತ್ರ ಸೀಮಿತವಾಗದೆ ಅವರು, ದೇಶದ ನಿರುದ್ಯೋಗ, ಬಡತನ, ಹಸಿವು, ಆರ್ಥಿಕ ಕುಸಿತ, ಗುಂಪು ಹತ್ಯೆ, ಗೋರಕ್ಷಕರ ಅಟ್ಟಹಾಸ, ದಲಿತರು, ಅಲ್ಪಸಂಖ್ಯಾತರ ಮೇಲಿನ ಸಂಘಪರಿವಾರದ ದಾಳಿ, ಬಿಜೆಪಿ ಮತ್ತು ಅದರ ಸಿದ್ಧಾಂತವನ್ನು ಒಪ್ಪದ, ಮೋದಿ ಆಡಳಿತವನ್ನು ಟೀಕಿಸುವ, ಪ್ರಶ್ನಿಸುವ ಪತ್ರಕರ್ತರು, ಸಾಹಿತಿಗಳು, ಸಿನಿಮಾ ಕಲಾವಿದರ ಮೇಲಿನ ವ್ಯವಸ್ಥಿತ ದಾಳಿಗಳನ್ನು, ಸ್ವತಃ ಸರ್ಕಾರವೇ ಐಟಿ, ಇಡಿಯಂತಹ ಸಂಸ್ಥೆಗಳನ್ನು ಬಳಸಿಕೊಂಡು ನಡೆಸಿದ ದಮನ ಪ್ರಯತ್ನಗಳನ್ನು ಕೂಡ ಅವರು ‘ಸುಮ್ಮನೇ ಕೇಳ್ತಿದೀನಿ’ ಎಂದು ಮರ್ಮಾಘಾತದ ಪ್ರಶ್ನೆಗಳನ್ನು ಎತ್ತತೊಡಗಿದಂತೆ ಅವರ ಮೇಲಿನ ಹೇಯ ದಾಳಿಗಳು ಉಗ್ರ ಸ್ವರೂಪ ಪಡೆದುಕೊಂಡವು.

ಹತ್ಯೆ ಬೆದರಿಕೆಗಳು, ನೇರ ದಾಳಿ ಯತ್ನಗಳು ಕೂಡ ನಡೆದವು. ಆಡಳಿತ ವ್ಯವಸ್ಥೆ ತನ್ನ ಪ್ರಭಾವ ಬಳಸಿ ಅವರಿಗೆ ಬಹುತೇಕ ಹಿಂದಿ ಮತ್ತು ಉತ್ತರ ಭಾರತೀಯ ಸಿನಿಮಾ ವಲಯದಲ್ಲಿ ಅವಕಾಶಗಳೇ ಸಿಗದಂತೆ ನೋಡಿಕೊಂಡಿತು. ಈ ವಿಷಯವನ್ನು ಸ್ವತಃ ರೈ ಅವರೇ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಗೌರಿ ಹತ್ಯೆಯ ಬಳಿಕ ಮೋದಿಯವರನ್ನು ಪ್ರಶ್ನಿಸತೊಡಗಿದ ಮೇಲೆ, ಅವರ ಆಡಳಿತದ ಬಗ್ಗೆ ಟೀಕೆ ಮಾಡತೊಡಗಿದ ಮೇಲೆ ಕಳೆದ ಎರಡು ವರ್ಷಗಳಿಂದ ಹಿಂದಿ ಸಿನಿಮಾದಲ್ಲಿ ಒಂದೇ ಒಂದು ಅವಕಾಶ ಸಿಕ್ಕಿಲ್ಲ ಎಂದು ಈ ಹಿಂದೆ ಹೇಳಿಕೊಂಡಿದ್ದರು.

ಒಂದು ಸರ್ಕಾರವನ್ನು, ಅದರ ಆಡಳಿತ ನೀತಿ ಮತ್ತು ನಿಲುವುಗಳ ಕಾರಣಕ್ಕೆ, ಜನ ವಿರೋಧಿ ನಡೆಗಳ ಕಾರಣಕ್ಕೆ, ಪ್ರಜಾಪ್ರಭುತ್ವ ದಮನದ ಕಾರಣಕ್ಕೆ, ತಾನೇ ಕೊಟ್ಟ ಭರವಸೆಗಳನ್ನು ಮರೆತ ಕಾರಣಕ್ಕೆ, ದೇಶದ ಪ್ರಗತಿ ಮತ್ತು ವೈಚಾರಿಕ ವಿಕಾಸಕ್ಕೆ ಅಡ್ಡಿಯಾದ ಕಾರಣಕ್ಕೆ, ದೇಶದ ಸಂವಿಧಾನದ ವಿರುದ್ಧ ಮತ್ತು ಅದರ ಆಶಯದ ವಿರುದ್ಧ ಆಡಳಿತದ ಕಾರಣಕ್ಕೆ, ದೇಶವನ್ನು ಕೋಮು ಮತ್ತು ಧರ್ಮದ ಆಧಾರದ ಮೇಲೆ ಒಡೆಯುತ್ತಿರುವ ಮತ್ತು ಹಿಂಸೆ ಮತ್ತು ದ್ವೇಷದ ಕುಲುಮೆಯಾಗಿ ಪರಿವರ್ತಿಸುತ್ತಿರುವ ಕಾರಣಕ್ಕೆ ಟೀಕಿಸುವ, ಪ್ರಶ್ನಿಸುವ ವ್ಯಕ್ತಿಗಳನ್ನು ಒಂದು ಸರ್ಕಾರದ, ಪಕ್ಷದ, ಒಬ್ಬ ನಾಯಕನ ಟೀಕಾಕಾರರು, ವಿಮರ್ಶಕರು, ವಿರೋಧಿಗಳು ಎಂದು ಪರಿಗಣಿಸದೆ, ಅವರನ್ನು ದೇಶದ್ರೋಹಿಗಳು, ಹಿಂದೂ ವಿರೋಧಿಗಳು ಎಂದು ಬಿಂಬಿಸುವುದು ಮತ್ತು ಸಹಿಷ್ಣುತೆ, ಸಹಬಾಳ್ವೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡುವವರನ್ನು ಅರ್ಬನ್ ನಕ್ಸಲರು ಎಂದು ಕರೆದು ದಾಳಿ ನಡೆಸುವುದು ಕಳೆದ ಐದಾರು ವರ್ಷಗಳ ಹೊಸ ವರಸೆ.

ಒಬ್ಬ ನಾಯಕ, ಒಂದು ಪಕ್ಷ, ಒಂದು ಸಿದ್ಧಾಂತ, ಒಂದು ಧರ್ಮವನ್ನು ಇಡೀ ದೇಶವೇ ಎಂಬಂತೆ ಬಿಂಬಿಸುವುದು, ಆ ವ್ಯಕ್ತಿಯನ್ನು ಪ್ರಶ್ನಿಸಿದರೆ, ಟೀಕಿಸಿದರೆ ಅದು ದೇಶದ ವಿರುದ್ಧದ ಟೀಕೆ, ವಿರೋಧ ಎಂದು ಬಿಂಬಿಸುವುದು ಕೇವಲ ಅಂಧ ಭಕ್ತಿಯ, ವ್ಯಕ್ತಿ ಆರಾಧನೆಯ ಪರಾಕಾಷ್ಠೆಯಲ್ಲ, ಬದಲಾಗಿ, ಆಡಳಿತ ವ್ಯವಸ್ಥೆಯೊಂದು ತನ್ನ ವಿರೋಧಿಗಳನ್ನು, ಟೀಕಾಕಾರರನ್ನು ಹಣಿಯಲು ಪ್ರಯೋಗಿಸುವ ಅಸ್ತ್ರ. ಟ್ರೋಲ್ ಗಳು, ಟ್ರೋಲ್ ಪಡೆಗಳು, ಗುಂಪುಗಳು ಈ ಹತಾರವನ್ನು ಝಳಪಿಸುವ ಕೈಗಳು ಮಾತ್ರ. ಆಳುವ ಬಿಜೆಪಿ ಮತ್ತು ಅದರ ಸಂಘಪರಿವಾರ ದೇಶದ ಮೇಲಿನ ತನ್ನ ಹಿಡಿತವನ್ನು ಭದ್ರಪಡಿಸಿಕೊಳ್ಳಲು ಈ ಹತಾರ ಮತ್ತು ಅದನ್ನು ಹಿಡಿಯುವ ಕೈಗಳನ್ನು ಬಹಳ ವ್ಯವಸ್ಥಿತವಾಗಿ, ಸಕ್ರಿಯವಾಗಿಡುವ ತನ್ನದೇ ಮಿಷನರಿಯನ್ನು ಹೊಂದಿದೆ. ಅಂತಹ ಹತಾರಗಳನ್ನು ಸದಾ ಚುರುಕಾಗಿ, ಹರಿತವಾಗಿಡುವ ಜೊತೆಗೆ ಅದನ್ನು ಝಳಪಿಸುವ ಕೈಗಳಿಗೆ ಬೇಕಾದ ಬಲವನ್ನೂ, ಶಕ್ತಿಯನ್ನೂ ನಿಯಮಿತವಾಗಿ ತುಂಬುತ್ತಿದೆ. ಹಾಗಾಗಿ ಪ್ರಕಾಶ್ ರೈ ಅವರಷ್ಟೇ ಅಲ್ಲ; ಯಾರೇ ಪ್ರಧಾನಿ ಮೋದಿ ವಿರುದ್ಧ, ಬಿಜೆಪಿ ಆಡಳಿತ ಮತ್ತು ಪಕ್ಷದ ವಿರುದ್ಧ, ಸಂಘಪರಿವಾರದ ಅಜೆಂಡಾದ ವಿರುದ್ಧ ದನಿ ಎತ್ತಿದರೆ ಅವರನ್ನು ಹೀಗೆ ಹಣಿಯಲಾಗುತ್ತದೆ. ಅವರ ವ್ಯವಹಾರ, ಉದ್ಯಮ, ವೃತ್ತಿ, ಪ್ರವೃತ್ತಿಗಳನ್ನು ನಾಶಗೊಳಿಸಲು ಅಧಿಕೃತ ಆಡಳಿತ ಯಂತ್ರ ಮತ್ತು ಅನಧಿಕೃತವಾದ ಈ ಹತಾರಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ.

ಈಗ ಕೆಜಿಎಪ್ ಚಾಪ್ಟರ್-2ರ ವಿಷಯದಲ್ಲೂ ಅದೇ ಆಗಿರುವುದು. ಪ್ರಕಾಶ್ ರೈ ಹೊರತಾಗಿ ಮತ್ತಾವುದೇ ನಟ ಆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೆ, ಅಥವಾ ಸ್ವತಃ ಅನಂತ್ ನಾಗ್ ಅವರ ಪಾತ್ರವನ್ನು ಮಾಡಿದ್ದರೂ ಈ ಹತಾರ ಮತ್ತು ಅದರ ಹಿಂದಿನ ಕೈಗಳಿಗೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಸಮಸ್ಯೆ ಇರುವುದು ಸಿನಿಮಾದ ವಿಷಯದಲ್ಲಾಗಲೀ, ಪಾತ್ರದ ವಿಷಯದಲ್ಲಾಗಲೀ ಅಲ್ಲ. ಸಮಸ್ಯೆ ಇರುವುದು ಮೋದಿ ಟೀಕಾಕಾರರಾಗಿ ಗುರುತಿಸಿಕೊಂಡಿರುವ ಪ್ರಕಾಶ್ ರೈ ವಿಷಯದಲ್ಲಿ ಮಾತ್ರ.

ಅಂದರೆ, ಸಿನಿಮಾ, ನಾಟಕ, ಚಿತ್ರಕಲೆ, ಒಂದು ಸಾಹಿತ್ಯ ಕೃತಿ, ಒಂದು ಸಂಗೀತ,.. ಹೀಗೆ ಯಾವುದೇ ಸಾಂಸ್ಕೃತಿಕ ಸಂಗತಿಗಳನ್ನು ಕೂಡ ಕ್ಷುಲ್ಲಕ ರಾಜಕಾರಣದಿಂದ ಹೊರತಾಗಿ, ಧರ್ಮ ದ್ವೇಷ, ಕೋಮು ವಿಷದಿಂದ ಹೊರತಾಗಿ ನೋಡಲಾಗದ ಮಟ್ಟಿಗೆ ಈ ಸಮಾಜ ಕೊಳೆತುಹೋಗಿದೆ. ಹಾಗಾಗಿ ಒಂದು ಸಿನಿಮಾಕ್ಕೆ ಇಂಥವರನ್ನೇ ಹಾಕಿಕೊಳ್ಳಿ, ಇಂಥವರನ್ನು ಹಾಕಿಕೊಳ್ಳಬೇಡಿ, ಈ ನಾಟಕವನ್ನೇ ಮಾಡಿ, ಅದನ್ನು ಮಾಡಬೇಡಿ, ಈ ಸಾಹಿತ್ಯ ರಚಿಸಿ, ಅದನ್ನು ರಚಿಸಬೇಡಿ, ಇದನ್ನೇ ಹಾಡಿ, ಅದನ್ನು ಹಾಡಬೇಡಿ ಎಂದು ಕೆಲವೇ ಕೆಲವು ಮಂದಿ ಸಾಂಸ್ಕೃತಿಕ ಲೋಕದ ಮೇಲೆ ಗೂಂಡಾಗರ್ಧಿ ಮಾಡುವುದು ವಾಡಿಕೆಯಾಗಿದೆ ಮತ್ತು ಆಯಾ ವಲಯದ ಕೆಲವರ ಪಾಲಿಗೆ ಅದು ಒಪ್ಪಿತವೂ ಆಗಿದೆ! ಹಾಗಾಗಿಯೇ ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳ ಕಾರಣಕ್ಕೆ ನಟನೊಬ್ಬನಿಗೆ ಒಂದು ಸಿನಿಮಾ ರಂಗ ಅಘೋಷಿತ ಬಹಿಷ್ಕಾರ ಹಾಕುತ್ತದೆ, ಮತ್ತೊಂದು ಕಡೆ ಸಿನಿಮಾವನ್ನೇ ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಒಡ್ಡಲಾಗುತ್ತಿದೆ!

Click here to follow us on Facebook , Twitter, YouTube, Telegram

Pratidhvani
www.pratidhvani.com