ಕಮಲಾ ಹ್ಯಾರೀಸ್ ಪ್ರಕರಣ: ಭಾರತ ವಿರೋಧಿ ಡೊನಾಲ್ಡ್ ಟ್ರಂಪ್‌ರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
ಅಭಿಮತ

ಕಮಲಾ ಹ್ಯಾರೀಸ್ ಪ್ರಕರಣ: ಭಾರತ ವಿರೋಧಿ ಡೊನಾಲ್ಡ್ ಟ್ರಂಪ್‌ರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಭಾರತೀಯ ಮೂಲದ ಮತಗಳ ಮೇಲೆ ಕಣ್ಣುಹಾಕಿದ್ದ ಟ್ರಂಪ್ ಇದೇ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಬಂದು ಮಾತನ್ನಾಡಿದ್ದರು. ಪದೇ ಪದೇ ನರೇಂದ್ರ ಮೋದಿಯನ್ನು 'ಗುಡ್ ಫ್ರೆಂಡ್' ಎನ್ನುತ್ತಿರುವುದು. ಆದರೀಗ ಭಾರತೀಯ ಮತಗಳನ್ನು ಗುರಿಯಾಗಿರಿಸಿಕೊಂಡು ಡೆಮಾಕ್ರೆಟಿಕ್ ಪಕ್ಷ ಕಮಲಾ ಹ್ಯಾರೀಸ್ ಅವರಿಗೆ ಮಣೆ ಹಾಕಿದೆ. ಇದು ಟ್ರಂಪ್ಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ

ಯದುನಂದನ

ಅಮೆರಿಕಾದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರೀಸ್, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್ ಅವರಿಗಿಂತ ಕೆಟ್ಟವರು. ಡೆಮೆಕ್ರೆಟಿಕ್ ಪಕ್ಷ ಕಮಲಾ ಹ್ಯಾರೀಸ್ ಅವರಿಗಿಂತಲೂ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದಿತ್ತು. ಆದರೆ ಜೋ ಬಿಡೆನ್ ಚೆಲ್ಲಾಟದ ಚೆಲುವೆಯನ್ನು (ಪೊಕಾಹೊಂಟಾಸ್) ಆಯ್ಕೆ ಮಾಡಿದ್ದಾರೆ. ಕಮಲಾ ಹ್ಯಾರೀಸ್‌ಗಿಂತಲೂ ಹೆಚ್ಚು ಭಾರತೀಯರ ಬೆಂಬಲ ನನಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ವಿಷಯ ಈಗ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಡೊನಾಲ್ಡ್ ಟ್ರಂಪ್ ಎದುರಾಳಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ (ಚೆಲ್ಲಾಟದ ಚೆಲುವೆ) ನೀಡಿದ್ದಾರೆ. ಭಾರತೀಯ ಮೂಲದ ಅಭ್ಯರ್ಥಿ ಬಗ್ಗೆಯೇ ಬೊಟ್ಟು ಮಾಡಿದ್ದಾರೆ. ಕಮಲಾ ಹ್ಯಾರೀಸ್ ಹೆಗಲೆ ಮೇಲೆ ಜೋ ಬಿಡೆನ್ ಅವರತ್ತ ಗುಂಡು ಹಾರಿಸಿದ್ದಾರೆ. ಚುನಾವಣೆ ಗೆಲ್ಲಲು ಕೀಳಾಗಿ ನಡೆದುಕೊಳ್ಳುತ್ತಿದ್ದಾರೆ. ಡೆಮೆಕ್ರೆಟಿಕ್ ಪಕ್ಷದ ಅಭ್ಯರ್ಥಿ ಬಗ್ಗೆ ಇವರೇಕೆ ತೆಲೆಕೆಡಿಸಿಕೊಳ್ಳುತ್ತಿದ್ದಾರೆ ಎಂಬೆಲ್ಲಾ ಚರ್ಚೆಯಾಗುತ್ತಿದೆ. ಆದರೆ, ಡೊನಾಲ್ಡ್ ಟ್ರಂಪ್ ಹೀಗೆ ಹುಚ್ಚುಚ್ಚಾಗಿ ಮಾತನಾಡಿರುವುದನ್ನು ಎರಡು ರೀತಿಯಲ್ಲಿ ನೋಡಬೇಕು. ಒಂದು ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ತಂತ್ರದ ಭಾಗವಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂಬ ಬಗ್ಗೆ. ಇನ್ನೊಂದು ಪ್ರಧಾನ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಅವರನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೂ ಟ್ರಂಪ್ ಭಾರತೀಯರ ಬಗ್ಗೆ ನಡೆದುಕೊಳ್ಳುತ್ತಿರುವುದರ ಬಗ್ಗೆ.

ಮೊದಲನೆಯದಾಗಿ ಡೊನಾಲ್ಡ್ ಟ್ರಂಪ್‌ಗೆ ಸೋಲುವ ಭಯ ಕಾಡುತ್ತಿರುವುದು ನಿಶ್ಚಿತ. ಅದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆಡಳಿತ ನಡೆಸಿಲ್ಲದಿರುವುದು, ಕರೋನಾ ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಸೇರಿ ಹಲವು ಕಾರಣಗಳು. ಹಾಗಾಗಿಯೇ ಚುನಾವಣಾ ಸಿದ್ದತೆಗಳನ್ನು ಆರಂಭಿಸಿರುವ ಅವರು ಮತ್ತೊಮ್ಮೆ ಅಮೆರಿಕನ್ನರ ವಿಶ್ವಾಸ ಗಳಿಸಲು ನಾನಾ ನಮೂನೆಯ ಕಸರತ್ತು ನಡೆಸುತ್ತಿದ್ದಾರೆ. ಕಳೆದ ಬಾರಿ ಮೆಕ್ಸಿಕನ್ನರ ಹಾವಳಿಯನ್ನು ತಡೆಗಟ್ಟುತ್ತೇನೆ ಮೆಕ್ಸಿಕನ್ನರು ಅಮೆರಿಕಾದ ಗಡಿ ಒಳಗೆ ಬಾರದಂತೆ ತಡೆಯಲು ಅಮೆರಿಕಾ ಮತ್ತು ಮೆಕ್ಸಿಕನ್ ನಡುವೆ ಗೋಡೆ ನಿರ್ಮಿಸುತ್ತೆನೆ ಎಂದು ಭರವಸೆ ನೀಡಿದ್ದರು. ಅದೇ ಹಳೆಯ ಮಾತುಗಳನ್ನಾಡಿ, ಮೆಕ್ಸಿಕನ್ನರ ವಿಷಯದಲ್ಲಿ ಮತ್ತೊಮ್ಮೆ ರಾಜಕೀಯ ಮಾಡಲು ಸಾಧ್ಯವಿಲ್ಲ.

ಇತ್ತೀಚೆಗೆ ಬಿಳಿಯರು ಮತ್ತು ಕರಿಯರು ನಡುವಿನ ಜಗಳ ಹೆಚ್ಚಾದರೆ 'ವೈಟ್ ಸುಪ್ರಿಮಸಿ' (ಬೆಳ್ಳಗಿರುವುದೇ ಭಾಗ್ಯ ಎಂಬ ನಿಲುವು) ಹೊಂದಿರುವ ಅಮೆರಿಕಾದ ಬಹುಸಂಖ್ಯಾತರು ತಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ ಬಿಳಿಯರು ಮತ್ತು ಕರಿಯರ ನಡುವಿನ ಜಗಳ ಎಂದಿನಂತೆ ಅಲ್ಲಿ ಶೀತಲ ಸಮರವಾಗಿಯೇ ಮುಂದುವರೆಯುತ್ತಿದೆಯೇ ವಿನಃ ದೊಡ್ಡ ಪ್ರಮಾಣದಲ್ಲಿ ಧಂಗೆ ಎದ್ದು ಟ್ರಂಪ್‌ನ್ನು ಬೆಂಬಲಿಸುವ ರೀತಿಯ ವಾತಾವರಣ ನಿರ್ಮಾಣ ಆಗಲಿಲ್ಲ.

ಕರೋನಾ ವಿಷಯದಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಡೊನಾಲ್ಡ್ ಟ್ರಂಪ್ ಚೀನಾ ದೇಶದ ಮೇಲೆ ಹರಿಹಾಯ್ದರು. ಮೆಕ್ಸಿಕನ್ ಬದಲಿಗೆ ಈ ಬಾರಿ ಚೀನಾ ಎಂಬ ಹೊಸ ಶತ್ರುವನ್ನು ತೋರಿಸಿ ಚುನಾವಣೆ ಗೆಲ್ಲಬಹುದು ಎಂದುಕೊAಡಿದ್ದರು. ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೂ ಕದನಕ್ಕಿಳಿದರು. ಆದರೆ ಸದ್ಯ ಭಾರತದಂತೆ ಚೀನಾವನ್ನು ತಾಂತ್ರಿಕವಾಗಿ, ಔದ್ಯೋಗಿಕವಾಗಿ ಎದುರು ಹಾಕಿಕೊಂಡರೆ ಅಮೆರಿಕಾಕ್ಕೆ ನಷ್ಟ. ಚೀನಾದ ಟಿಕ್‌ಟಾಕ್ ಅನ್ನು ಭಾರತ ಬ್ಯಾನ್ ಮಾಡುತ್ತಿದ್ದಂತೆ 'ಅಮೆರಿಕಾ ದೇಶದಲ್ಲಿ ನಡೆಯುವ ಟಿಕ್‌ಟಾಕ್ ವ್ಯವಹಾರನ್ನು ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು, ಇಲ್ಲದಿದ್ದರೆ ತಾವು ಕೂಡ ಟಿಕ್‌ಟಾಕ್ ಬ್ಯಾನ್ ಮಾಡಬೇಕಾಗುತ್ತದೆ' ಎಂದು ಸ್ವತಃ ಡೊನಾಲ್ಡ್ ಟ್ರಂಪ್ ಘರ್ಜಿಸಿದರು. ಆದರೆ ಟ್ರಂಪ್ ಬೆದರಿಕೆಗೆ ಬಗ್ಗದ ಟಿಕ್‌ಟಾಕ್, ಅಮೆರಿಕಾ ಬದಲಿಗೆ ತನ್ನ ಡೆಟಾ ಸೆಂಟರ್ ಅನ್ನು ಮತ್ತಷ್ಟು ಬಂಡವಾಳದೊಂದಿಗೆ ಐರ್ಲೆಂಡ್‌ನಲ್ಲಿ ಆರಂಭಿಸುವುದಾಗಿ ಘೋಷಿಸಿತು. ಒಟ್ಟಾರೆ ಚೀನಾದೊಂದಿಗಿನ ಜಗಳ ಹೆಚ್ಚಾಗಿ ಅಲ್ಲಿಂದ ಕಂಪನಿಗಳು ಕಾಲ್ಕಿತ್ತರೆ ಅಮೆರಿಕಾದ ನಿರುದ್ಯೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಅದರಿಂದ ಈಗ ಟ್ರಂಪ್ ಚೀನಾ ವಿಷಯದಲ್ಲಿ ಮೊದಲಿನ ರೀತಿಯಲ್ಲಿ ಅಬ್ಬರಿಸುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರೀಸ್ ತೋರುತ್ತಿರುವ 'ಮೃದು ಬಲಪಂಥೀಯವಾದ' ಡೊನಾಲ್ಡ್ ಟ್ರಂಪ್ ಅವರ ನಿದ್ದೆಗೆಡಿಸಿದೆ. ಅಧ್ಯಕ್ಷ ಸ್ಥಾನದ ಜೋ ಬಿಡೆನ್ ಅವರ 'ಲಿಬರಲ್' ಮತ್ತು ಉಪಾಧ್ಯಕ್ಷ ಸ್ಥಾನದ ಕಮಲಾ ಹ್ಯಾರೀಸ್ ಅವರ 'ಮೃದು ಬಲಪಂಥೀಯವಾದ'ದ ಕಾಂಬಿನೇಷನ್ ಯಶಸ್ವಿಯಾಗಿಬಿಡಬಹುದು ಎಂಬ ಹೆದರಿಕೆ ಶುರುವಾಗಿದೆ. ಅದೇ ಕಾರಣಕ್ಕೆ ಕಮಲಾ ಹ್ಯಾರೀಸ್ ಮೇಲೆ ಕೆಂಡಕಾರಿದ್ದಾರೆ. ಭಾರತೀಯ ಮೂಲದ ಮತಗಳ ಮೇಲೆ ಕಣ್ಣುಹಾಕಿದ್ದ ಟ್ರಂಪ್ ಇದೇ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಭಾರತಕ್ಕೆ ಬಂದು ಮಾತನ್ನಾಡಿದ್ದರು. ಪದೇ ಪದೇ ನರೇಂದ್ರ ಮೋದಿಯನ್ನು 'ಗುಡ್ ಫ್ರೆಂಡ್' ಎನ್ನುತ್ತಿರುವುದು. ಆದರೀಗ ಭಾರತೀಯ ಮತಗಳನ್ನು ಗುರಿಯಾಗಿರಿಸಿಕೊಂಡು ಡೆಮಾಕ್ರೆಟಿಕ್ ಪಕ್ಷ ಕಮಲಾ ಹ್ಯಾರೀಸ್ ಅವರಿಗೆ ಮಣೆ ಹಾಕಿದೆ. ಇದು ಟ್ರಂಪ್‌ಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಇದಲ್ಲದೆ ಡೊನಾಲ್ಡ್ ಟ್ರಂಪ್ ಭಾರತದ ಬಗ್ಗೆ ನಡೆದುಕೊಳ್ಳುತ್ತಿರುವ ಬಗ್ಗೆಯೂ ಯೋಚಿಸಲೇಬೇಕು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ 'ಭಾರತೀಯರು ಬಂದು ನಮ್ಮ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ' ಎಂಬ ಅಮೆರಿಕನ್ನರ ಭಾವನೆಗಳಿಗೆ ಗೊಬ್ಬರ ನೀರು ಎರೆದು ಪೋಷಿಸಿದ್ದರು. ಅದಾದ ಮೇಲೆ ಭಾರತೀಯರಿಗೆ ವೀಸಾ ನೀಡುವ ಬಗ್ಗೆ ಕಿರಿಕಿರಿ ಮಾಡುತ್ತಲೇ ಬಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಉಂಟಾದರೆ ಅನಾವಶ್ಯಕವಾಗಿ 'ತಾನು ಮಧ್ಯಸ್ಥಿಕೆ' ವಹಿಸಲು ಸಿದ್ದ ಎಂದು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷವಾದಾಗಲೂ 'ತಾನು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುತ್ತೇನೆ' ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಡೊನಾಲ್ಡ್ ಟ್ರಂಪ್ ದೂರವಾಣಿಯಲ್ಲಿ ಮಾತನಾಡಿದರು ಎಂದು ಅಮೆರಿಕಾ ವಿದೇಶಾಂಗ ಇಲಾಖೆ ಹೇಳಿತ್ತು. ಇದೇ ವೇಳೆ 'ಮೋದಿ ನನ್ನ ಒಳ್ಳೆಯ ಸ್ನೇಹಿತ' ಎಂದು ಹೇಳಲಾಗಿತ್ತು. ಮಧ್ಯಸ್ಥಿಕೆ ವಹಿಸುವುದಾದರೆ ಇಬ್ಬರನ್ನೂ ಸಮಾನವಾಗಿ ಕಾಣಬೇಕೇ ವಿನಃ ಒಬ್ಬರು ನನ್ನ ಸ್ನೇಹಿತರು ಎಂದರೆ ಇನ್ನೊಬ್ಬರಿಗೆ ವಿಶ್ವಾಸ ಮೂಡುವುದಾದರೂ ಹೇಗೆ? ಇದರಿಂದ ಭಾರತ-ಚೀನಾ ಅಥವಾ ಭಾರತ-ಪಾಕಿಸ್ತಾನ ನಡುವಿನ ಸಮಸ್ಯೆ ಬಿಗಡಾಯಿಸುವುದೇ ಹೊರತು ಬಗೆಹರಿಯುವುದಿಲ್ಲ. ಹೀಗೆ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವುದೇ ಅಮೆರಿಕಾದ ಗುರಿಯಾಗಿದೆ.

ಇತ್ತೀಚೆಗೆ ಕರೋನಾ ರೋಗಕ್ಕೆ ಮದ್ದು ಪಡೆಯುವಾಗಲೂ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದರು. ಮದ್ದಿಲ್ಲದ ಕರೋನಾಗೆ ಪರ್ಯಾಯ ಮದ್ದು ಎಂಬಂತೆ ಬಳಸಬಹುದಾದ ಹೈಡ್ರೋಕ್ಸಿಕ್ಲೋರೋಕ್ವಿನ್ ಅನ್ನು ಪೂರೈಸದಿದ್ದರೆ ಭಾರತದ ಇತರೆ ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಬೇಕಾಗುತ್ತದೆ ಎಂದು ಧಮಕಿ ಹಾಕಿದ್ದರು. ಡೊನಾಲ್ಡ್ ಟ್ರಂಪ್ ಹಾಕಿದ ಧಮಕಿಗೆ ಬೆದರಿದ ನರೇಂದ್ರ ಮೋದಿ ಸರ್ಕಾರ ಅವರು ಕೇಳಿದಷ್ಟು ಹೈಡ್ರೋಕ್ಸಿಕ್ಲೋರೋಕ್ವಿನ್ ಅನ್ನು ಪೂರೈಸಿತು. ಭಾರತವು ಚೀನಾದ ಮೊಬೈಲ್ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡಿದಾಗ ನಿಜಕ್ಕೂ ಅಮೆರಿಕಾ, ಭಾರತದ ಪರವಾಗಿಯೇ ಇದ್ದಿದ್ದರೆ, ಚೀನಾ ವಿರುದ್ದ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡಿದ್ದರೆ ತಮ್ಮ ದೇಶದಲ್ಲೂ ಬ್ಯಾನ್ ಮಾಡಬಹುದಾಗಿತ್ತು. ಆದರೆ ಅಮೆರಿಕಾ 'ನಿಮ್ಮ ಅಪ್ಲಿಕೇಷನ್‌ಗಳನ್ನು ನಮ್ಮ ದೇಶದ ಕಂಪನಿಗಳಿಗೆ ಕೊಟ್ಟುಬಿಡಿ' ಎನ್ನುವ ವ್ಯಾಪರ ಆರಂಭಿಸಿತು. ಹೀಗೆ ನಿರಂತರವಾಗಿ ಭಾರತದ ವಿರುದ್ಧವೇ ಇರುವ ಡೊನಾಲ್ಡ್ ಟ್ರಂಪ್ ಅವರಿಂದ ಕಮಲಾ ಹ್ಯಾರೀಸ್ ಬಗ್ಗೆ ಇನ್ನೇನು ನಿರೀಕ್ಷಿಸಲು ಸಾಧ್ಯ?

Click here to follow us on Facebook , Twitter, YouTube, Telegram

Pratidhvani
www.pratidhvani.com