ನಿಜಕ್ಕೂ ಕರೋನಾ ವಿರುದ್ಧ ಜಯಗಳಿಸಿದೆಯೇ ಭಾರತ?
ಅಭಿಮತ

ನಿಜಕ್ಕೂ ಕರೋನಾ ವಿರುದ್ಧ ಜಯಗಳಿಸಿದೆಯೇ ಭಾರತ?

ಸಂಸತ್ತಿನಲ್ಲಿ ಆಡುವ ಮಾತು ಬೇರೆ ರೀತಿ ಇರಬೇಕು. ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುವ ಭಾಷಣ ಭಿನ್ನವಾಗಿರಬೇಕು. ಅದರಲ್ಲೂ ತಮ್ಮ ಸರ್ಕಾರದ ಲೋಪ ಮುಚ್ಚಿಕೊಳ್ಳುವ, ಸಮಸ್ಯೆಗಳಿಂದ ಪಲಾಯನ ಮಾಡುವ, ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಬಳಸಿಕೊಳ್ಳುವ, ಅಸತ್ಯ ನುಡಿಯುವ ಪರಿಪಾಠಕ್ಕೆ ಮುನ್ನುಡಿ ಬರೆದರೆ...

ಯದುನಂದನ

ತಾವು ಘನತೆವೆತ್ತ ಸಂಸತ್ತನ್ನು ಉದ್ದೇಶಿಸಿ ಆಡುವ ಮಾತುಗಳಿಗೂ, ದೇಶದ ಹೆಮ್ಮೆಯ ಪ್ರತೀಕವೆಂಬಂತೆ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ವೇಳೆ ದೇಶ ಉದ್ದೇಶಿಸಿ ಮಾಡುವ ಭಾಷಣಕ್ಕೂ ಹಾಗೂ ಚುನಾವಣಾ ವೇದಿಕೆಗಳಲ್ಲಿ ಅಬ್ಬರಿಸಿ, ಬೊಬ್ಬರಿಯುವುದಕ್ಕೂ ಯಾವ್ಯಾವ ವ್ಯತ್ಯಾಸವೂ ಇಲ್ಲ ಎನ್ನುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಬರೊಬ್ಬರಿ 86 ನಿಮಿಷ ಭಾಷಣ ಮಾಡಿದರು. ಅನಗತ್ಯವಾಗಿ ಚೀನಾ ವಿಷಯ ಪ್ರಸ್ತಾಪಿಸಿದರು. ದೇಶದ ಆರ್ಥಿಕ ಬೆಳವಣಿಗೆಗಳ ಬಗ್ಗೆ ಅರ್ಧಸತ್ಯಗಳನ್ನು ಹೇಳಿದರು. ಅದೇ ರೀತಿ 'ಭಾರತ ಕರೋನಾ ವಿರುದ್ಧದ ಹೋರಾಟದಲ್ಲಿ ಯಶಸ್ವಿ ಸಾಧಿಸಿದೆ' ಎಂಬ ಹಸಿ ಸುಳ್ಳನ್ನು ಹೇಳಿದರು.

ನಿಜಕ್ಕೂ ಭಾರತ ಕರೋನಾ ವಿರುದ್ಧ ಜಯಗಳಿಸಿದೆಯಾ?

ಮೋದಿ ಭಾಷಣ ಮಾಡಿ ಮುಗಿಸಿದ ಕೆಲವೇ ನಿಮಿಷಗಳ ಬಳಿಕ ಕೇಂದ್ರ ಆರೋಗ್ಯ ಇಲಾಖೆ 'ಆಗಸ್ಟ್ 14ರವರೆಗೆ ದೇಶದಲ್ಲಿ 25,26,193 ಜನರು ಕರೋನಾ ಸೋಂಕು ಪೀಡಿತರಾಗಿದ್ದಾರೆ' ಎಂದು ಅಧಿಕೃತವಾಗಿ ಪ್ರಕಟಿಸಿತು. ಅಂದರೆ 'ಕಾಲು ಕೋಟಿಗೂ ಹೆಚ್ಚು ಜನ. ಈ ಪೈಕಿ ಇನ್ನೂ 6,68,200 ಪ್ರಕರಣಗಳು ಸಕ್ರೀಯವಾಗಿವೆ. 49,036 ಜನ ಮೃತಪಟ್ಟಿದ್ದಾರೆ. ಇದು ಯಶಸ್ಸೆ?

ಇನ್ನೊಂದೆಡೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಐಸಿಎಂಆರ್ ಆಗಸ್ಟ್ 14ರವರೆಗೆ 2,85,63,095 ಜನರಿಗೆ ಕರೋನಾ ಪರೀಕ್ಷೆ ಮಾಡಿರುವುದಾಗಿ ಪ್ರಕಟಿಸಿದೆ. 136 ಕೋಟಿ ಜನ ಸಂಖ್ಯೆಯುಳ್ಳ ದೇಶದಲ್ಲಿ ಸುಮಾರು 3 ಕೋಟಿ (ಅಷ್ಟೂ ಇಲ್ಲ) ಜನರಿಗೆ ಪರೀಕ್ಷೆ ನಡೆಸಿ ಅದರ ಆಧಾರದ ಮೇಲೆ ಕರೋನಾ ವಿರುದ್ಧ ಜಯಸಿರುವುದಾಗಿ ಘೋಷಿಸಿಕೊಳ್ಳಬಹುದೇ? 'ಪರೀಕ್ಷೆಗಳನ್ನು ಹೆಚ್ಚು ಮಾಡಿದಷ್ಟು ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ಅದರಿಂದ ಸೋಂಕು ಪತ್ತೆಯಾದವರನ್ನು ಪ್ರತ್ಯೇಕಿಸಿ ರೋಗ ಹರಡುವುದನ್ನು ತಡೆಯಬಹುದು. ತಕ್ಷಣಕ್ಕೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಯಿತು ಎಂಬ ಆತಂಕ ನಿರ್ಮಾಣವಾದರೂ ಕ್ರಮೇಣ ರೋಗ ನಿಯಂತ್ರಣಕ್ಕೆ ಬರುತ್ತದೆ' ಎನ್ನುವುದು ಕೇಂದ್ರಾಡಳಿತ ಪ್ರದೇಶವೇ ಆಗಿರುವ ದೆಹಲಿಯಲ್ಲಿ ಸಾಬೀತಾದ ಸಂಗತಿಯಾಗಿದೆ.

ಆದರೆ, ಕೇಂದ್ರ ಸರ್ಕಾರ ದೇಶಾದ್ಯಂತ ಕರೋನಾ ಪರೀಕ್ಷೆಯನ್ನು ಹೆಚ್ಚಿಸಲು ಸಿದ್ದವಿಲ್ಲ. ಕೇಂದ್ರಾಡಳಿತ ಪ್ರದೇಶ ಮತ್ತು ರಾಷ್ಟç ರಾಜಧಾನಿಯಾಗಿರುವ ದೆಹಲಿಯಲ್ಲಿ ಕರೋನಾ ಪರೀಕ್ಷೆಗಳನ್ನು ಹೆಚ್ಚಿಸಿ ಅದರ ಶ್ರೇಯ ಪಡೆಯಲು ಕಸರತ್ತು ನಡೆಸಿದ ಕೇಂದ್ರ ಸರ್ಕಾರ ಅದೇ ಉತ್ಸಾಹವನ್ನು ಬೇರೆ ರಾಜ್ಯಗಳ ವಿಷಯದಲ್ಲಿ ತೋರಲಿಲ್ಲ. ಉದಾಹರಣೆಗೆ ಇಡೀ ದೇಶದಲ್ಲಿರುವ ಕರೋನಾ ಪ್ರಕರಣಗಳ ಪೈಕಿ ಮಹಾರಾಷ್ಟçದಲ್ಲೇ ಕಾಲು ಭಾಗ ಇದೆ. ಮಹಾರಾಷ್ಟçಕ್ಕೆ ನೆರವು ನೀಡಲು ಮನಸ್ಸು ಮಾಡುತ್ತಿಲ್ಲ. ನಂತರದ ಸ್ಥಾನದಲ್ಲಿರುವ ತಮಿಳುನಾಡಿಗೂ ಅಗತ್ಯ ನೆರವು ನೀಡುತ್ತಿಲ್ಲ. 'ಹೇಗೂ ಭಾರತದಲ್ಲಿ ಜನರ ರೋಗನಿರೋಧಕ ಶಕ್ತಿಯ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ಎಷ್ಟೋ ಜನಕ್ಕೆ ಕರೋನಾ ಬಂದು ಹೋಗಿರುವ ಸಾಧ್ಯತೆಯೂ ಇದೆ. ಈ ನಡುವೆ ಪರೀಕ್ಷೆ ನಡೆಸಿ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳುವ ಉಸುಬಾರಿ ಏಕೆ' ಎಂದು ಕೇಂದ್ರ ಸರ್ಕಾರ ಎದುರುತ್ತಿರಬಹುದು.

ಇಡೀ ವಿಶ್ವದಲ್ಲಿ ಅತಿಹೆಚ್ಚು ಕರೋನಾ ಪೀಡಿತರರಿರುವ ಪಟ್ಟಿಯಲ್ಲಿ ಅಮೇರಿಕಾ ಮತ್ತು ಬ್ರೆಜಿಲ್ ಬಳಿಕ ಭಾರತ ಮೂರನೇ ಸ್ಥಾನದಲ್ಲಿದೆ. ಕರೋನಾ ತವರು ಎಂದೇ ಹೇಳಲಾಗುವ ಚೀನಾ, ಕರೋನಾದಿಂದ ತತ್ತರಿಸಿದ್ದ ಇರಾನ್, ಸ್ಪೇನ್, ರಷ್ಯಾಗಳೆಲ್ಲವನ್ನೂ ಹಿಂದಿಕ್ಕಿದೆ. ಈಗ ದೇಶದಲ್ಲಿ ಪ್ರತಿದಿನ ಸುಮಾರು 65 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು (ಆಗಸ್ಟ್ 14ರಂದು 65,002 ಪ್ರಕರಣಗಳು) ಕೆಲವೇ ದಿನಗಳಲ್ಲಿ ಬ್ರೆಜಿಲ್ ದೇಶವನ್ನು ಹಿಂದೆ ದೂಡುವ ಸಾಧ್ಯತೆ ಇದೆ. ಆದರೂ ಇದನ್ನು 'ಯಶಸ್ಸು' ಎನ್ನಬೇಕೆ?

ಹಿಂದೆ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ 'ದೇಶದಲ್ಲಿ ಕರೋನಾ ಸಮುದಾಯಕ್ಕೆ ಹರಡಿದೆ. ಆದರೆ ಈ ವಿಷಯವನ್ನು ರಾಜ್ಯ ಸರ್ಕಾರಗಳು ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಸತ್ಯ ಸಂಗತಯನ್ನು ಒಪ್ಪಿಕೊಳ್ಳಲಿ. ಜೊತೆಗೆ ಮುಂದೇನು ಮಾಡಬೇಕೆಂಬ ಕ್ರಮ ಕೈಗೊಳ್ಳಲಿ' ಎಂದು ಹೇಳಿದ್ದರು. ಆದರೆ ಈ ಕ್ಷಣದವರೆಗೂ ಪ್ರಧನಿ ಮೋದಿ ಅವರಾಗಲಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಾಗಲಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಗಲಿ ಈ ವಿಷಯವನ್ನು ಒಪ್ಪಿಕೊಂಡಿಲ್ಲ. ಸಮಸ್ಯೆಯನ್ನು ಒಪ್ಪಿಕೊಂಡರೆ ಪರಿಹರಿಸಬೇಕಾಗುತ್ತದೆ. 'ಸಮಸ್ಯೆಯೇ ಇಲ್ಲ' ಎಂದು ಬಿಂಬಿಸಿಬಿಟ್ಟರೆ... ಈಗ ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ ಮಾಡಿರುವುದು ಅದೇ ಕೆಲಸವನ್ನು; ಸಮಸ್ಯೆ ಇಲ್ಲ ಎಂದು ಬಿಂಬಿಸುವುದನ್ನು, ಭಾರತ ಕರೋನಾ ವಿರುದ್ಧ ಜಯಸಿದೆ ಎಂದು ಬಿಂಬಿಸುವುದನ್ನು.

ಆರಂಭದಲ್ಲಿ ಕೆಂಪುಕೋಟೆಯ ಭಾಷಣವನ್ನು ಚುನಾವಣಾ ಭಾಷಣಕ್ಕೆ ಹೋಲಿಸಿದ್ದು ಇದೇ ಕಾರಣಕ್ಕೆ. ಚುನಾವಣಾ ಭಾಷಣಗಳಲ್ಲಿ ಗಾಂಭರ‍್ಯತೆ ಇರುವುದಿಲ್ಲ. ಅವು ಸತ್ಯವೇ ಇರಬೇಕು ಎಂದೇನಿಲ್ಲ. ಅರ್ಧಸತ್ಯವನ್ನೇ ಗಟ್ಟಿದನಿಯಲ್ಲಿ ಹೇಳಲಾಗುತ್ತದೆ. ಎಲ್ಲಾ ಪಕ್ಷಗಳ ಎಲ್ಲಾ ರಾಜಕಾರಣಿಗಳು ಹಾಗೆ ಮಾಡುತ್ತಾರೆ. ಅದು ಒಂದು ರೀತಿಯಲ್ಲಿ 'ಒಪ್ಪಿತ'ವಾಗಿದೆ. ಆದರೆ ಸಂಸತ್ತಿನಲ್ಲಿ ಆಡುವ ಮಾತು ಬೇರೆ ರೀತಿ ಇರಬೇಕು. ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುವ ಭಾಷಣ ಭಿನ್ನವಾಗಿರಬೇಕು. ಅದರಲ್ಲೂ ತಮ್ಮ ಸರ್ಕಾರದ ಲೋಪ ಮುಚ್ಚಿಕೊಳ್ಳುವ, ಸಮಸ್ಯೆಗಳಿಂದ ಪಲಾಯನ ಮಾಡುವ, ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಬಳಸಿಕೊಳ್ಳುವ, ಅಸತ್ಯ ನುಡಿಯುವ ಪರಿಪಾಠಕ್ಕೆ ಮುನ್ನುಡಿ ಬರೆದರೆ...

Click here to follow us on Facebook , Twitter, YouTube, Telegram

Pratidhvani
www.pratidhvani.com