ಮುಟ್ಟಿನ ರಜೆ; ಜವಾಬ್ದಾರಿ ಸರ್ಕಾರದ್ದು ಮಾತ್ರವೇ?
ಅಭಿಮತ

ಮುಟ್ಟಿನ ರಜೆ; ಜವಾಬ್ದಾರಿ ಸರ್ಕಾರದ್ದು ಮಾತ್ರವೇ?

ಉದ್ಯೋಗಗಳಲ್ಲಷ್ಟೇ ರಜೆ ಅಲ್ಲ. ಋತುಚಕ್ರದ ಅವಧಿಗಳಲ್ಲಿ ಮನೆಗೆಲಸದಲ್ಲೂ ಕೂಡಾ ರಜೆ ನೀಡುವುದು ಮನೆ ಗಂಡಸರು ಅಭ್ಯಾಸ ಮಾಡಿಕೊಳ್ಳಬೇಕು. ಸರ್ಕಾರ ಅಥವಾ ಖಾಸಗಿ ಸಂಸ್ಥೆ ರಜೆ ನೀಡುವುದು ಎಷ್ಟು ಮುಖ್ಯವೋ ಮನೆಗಳಲ್ಲೂ ರಜೆ ನೀಡುವುದು ಅಷ್ಟೇ ಮುಖ್ಯ

ಫೈಝ್

ಫೈಝ್

ಝೊಮ್ಯಾಟೊ ಕಂಪೆನಿ ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಘೋಷಿಸಿದ ಬಳಿಕ ಸಾರ್ವತ್ರಿಕವಾಗಿ ಮುಟ್ಟಿನ ರಜೆಯನ್ನು ನೀಡಬೇಕು ಎಂಬ ಕೂಗು ಏಳತೊಡಗಿವೆ. ಬಹುತೇಕ ದೇಶಗಳಲ್ಲಿ ಋತುಚಕ್ರದ ಅವಧಿಗೆ ರಜೆಯನ್ನು ನೀಡಲಾಗಿದ್ದರೂ, ಭಾರತದ ಸದನಗಳಲ್ಲಿ ಈ ಕುರಿತಾದ ಚರ್ಚೆಗಳು ಗಂಭೀರ ಸ್ವರೂಪವನ್ನೇ ಪಡೆದಿಲ್ಲ. ಬದಲಾಗಿ, ಭಾರತದ ಬಹುತೇಕ ಭಾಗ ಮುಟ್ಟಿನ ಬಗ್ಗೆ ಈಗಲೂ ಮೂಢನಂಬಿಕೆಯನ್ನು ಪಾಲಿಸಿಕೊಂಡು ಬಂದಿವೆ.

ಸಾಮಾಜಿಕ ವಲಯಗಳಲ್ಲಿ ಮುಟ್ಟಿನ ಅವಧಿಯ ರಜೆ ನೀಡುವ ಬಗ್ಗೆ ಈ ಹಿಂದೆ ಚರ್ಚೆಗಳು ನಡೆದಿತ್ತಾದರೂ, ಶಾಸನಗಳನ್ನು ರಚಿಸುವಲ್ಲಿಗೆ ಇದನ್ನು ಕೊಂಡೊಯ್ಯಲು ನಾವು ಎಡವಿದ್ದೇವೆ. ಮುಟ್ಟಿನ ಅವಧಿ ಪಡೆದುಕೊಳ್ಳುವಲ್ಲಿ ಮಹಿಳೆಯರಲ್ಲಿಯೇ ಪರ- ವಿರೋಧ, ತಟಸ್ಥ ಅಭಿಪ್ರಾಯಗಳು ಇವೆ. ಸಾಧಾರಣವಾಗಿ ಎಲ್ಲಾ ಮಹಿಳೆಯರಲ್ಲೂ ಋತುಚಕ್ರದ ಅವಧಿಯಲ್ಲಿ ತೀವ್ರ ಸಮಸ್ಯೆಗಳು ಎದುರಾಗುವುದಿಲ್ಲ. ಅಂತಹವರಿಗೆ ರಜೆಯ ಅಗತ್ಯವೂ ಇಲ್ಲದಿರುವುದರಿಂದ ಮುಟ್ಟಿನ ರಜೆಯ ಕಡೆಗೆ ಹೆಚ್ಚಿನ ಒಲವು ತೋರಿಸಿಲ್ಲ. ಇನ್ನು ಕೆಲವರು ತಟಸ್ಥವಾಗಿದ್ದಾರೆ. ಆದರೆ ಹಲವಾರು ಮಂದಿ ಸಮಸ್ಯೆ ಅನುಭವಿಸುವುದರಿಂದ ಮುಟ್ಟಿನ ರಜೆ ಬೇಕು ಎನ್ನುವ ಕೂಗು ಬಲವಾಗಿದೆ.

ಮುಟ್ಟಿನ ಅವಧಿಯ ಚರ್ಚೆ ಮುನ್ನಲೆಗೆ ಬಂದಂತೆ, ಈ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ವಾದಗಳನ್ನೂ ಎದುರುಗೊಳ್ಳುತ್ತೇವೆ. ಜೀವಮಾನದಲ್ಲೆಂದು ಜಾತಿಯ ಕಾರಣಕ್ಕೆ ಅವಮಾನ, ನೋವುಗಳನ್ನುಣ್ಣದವರು ʼದಲಿತ ದೌರ್ಜನ್ಯ ವಿರೋಧಿ ಕಾನೂನು ದುರುಪಯೋಗವಾಗುತ್ತಿವೆʼ ಎಂಬ ಅಳಲು ತೋಡಿಕೊಂಡರೆಂದು ದಲಿತ ದೌರ್ಜನ್ಯ ವಿರೋಧಿ ಕಾನೂನನ್ನು ನಿಷ್ಕ್ರಿಯಗೊಳಿಸುವುದನ್ನು ಸ್ವಾಗತಿಸಲಾಗುತ್ತದೆಯೇ? ಹಾಗಾಗಿ, ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ವಾದವೇ ಸಂವೇದನಾಹೀನ ಹಾಗೂ ಅಪ್ರಯೋಜಕ. ಅದನ್ನು ತಳ್ಳಿಯೇ ಹಾಕಬೇಕು.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಮಹಿಳಾ ಹೋರಾಟಾರ್ತಿ ಕೆ ನೀಲಾ ಹೇಗೆ ಹೆರಿಗೆ ರಜೆ ಇರುತ್ತದೆಯೋ, ಹಾಗೆಯೇ ಮುಟ್ಟಿನ ರಜೆ, ಮೆನಪಾಸ್‌ (menopause) ಸಂಧರ್ಭದಲ್ಲೂ ಒಂದಿಷ್ಟು ರಜೆಗಳು ಕೊಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಡಬೇಕು. ಮಹಿಳೆ, ಮನೆಯೊಳಗಿನ ಕೆಲಸವೂ ಮಾಡುತ್ತಾಳೆ, ಮಗುವನ್ನು 9 ತಿಂಗಳು ಹೊತ್ತು ಹೆತ್ತು ಬೆಳೆಸುವುದು ಕೂಡಾ ಮಹತ್ವದ ಕೆಲಸ, ಮತ್ತು ಆರ್ಥಿಕ ಕಾರಣ ಸಲುವಾಗಿ ಮನೆ ಹೊರಗಿನ ಕೆಲಸ, ಹೀಗೆ ಮಹಿಳೆ ಮೂರು ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತಾಳೆ. ಅವಳ ಈ ಕೆಲಸಗಳನ್ನು ಪರಿಗಣಿಸಬೇಕು. ಕೆಲವೊಬ್ಬರಿಗೆ ಋತುಚಕ್ರದ ಸಂಧರ್ಭದಲ್ಲಿ ವಿಪರೀತ ಹೊಟ್ಟೆನೋವು, ಸುಸ್ತು, ಕೈಕಾಲು ನೋವು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಈ ಸಂಧರ್ಭದಲ್ಲಿ ಸರಿಯಾದ ವಿಶ್ರಾಂತಿ ಬೇಕಾಗುತ್ತದೆ. ಹಾಗಾಗಿ ಮೂರು ಪಟ್ಟು ಹೆಚ್ಚು ಕೆಲಸ ಮಾಡುವ ಮಹಿಳೆಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇದು ಎಲ್ಲರ ಜವಾಬ್ದಾರಿಯಾಗಿದೆ. ಹೀಗೆ ರಜೆ ಕೊಡುವುದು ಅವಳಿಗೆ ಉಪಕಾರ ಮಾಡುವುದಲ್ಲ. ಬದಲಾಗಿ ಮೂರು ಪಟ್ಟು ಕೆಲಸ ಮಾಡುವ ಮಹಿಳೆಯನ್ನ ಅರ್ಥ ಮಾಡಿಕೊಳ್ಳುವುದು, ಅನುಕೂಲ ಕಲ್ಪಿಸುವುದಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಕಛೇರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಇನ್ನೂ ಪುರುಷಾಧಿಪತ್ಯ ಇರುವುದರಿಂದ ಮುಟ್ಟಿನ ರಜೆ ಸಂಬಂಧ ಸರ್ಕಾರವೇ ಗೈಡ್‌ಲೈನ್‌ ರೂಪಿಸಬೇಕು. ಮುಟ್ಟಿನ ರಜೆಗೆ ವ್ಯಕ್ತಿ, ಕಂಪೆನಿಗಳಿಂದ ಮಹಿಳೆಯರನ್ನು ಹಂಗು ಮುಕ್ತಗೊಳಿಸಬೇಕು. ಮಹಿಳೆಯರಿಗೆ ಅನುಕಂಪ ಬೇಕಿಲ್ಲ, ಹಕ್ಕುಗಳನ್ನು ನೀಡಬೇಕು ಮತ್ತು ಪಡೆಯಬೇಕು ಎಂದು ಕನ್ನಡದ ಟಿವಿ ಪತ್ರಕರ್ತ ನವೀನ್‌ ಸೂರಿಂಜೆ ಅಭಿಪ್ರಾಯ ಪಟ್ಟಿದ್ದಾರೆ.

"ಮುಖ ಸಿಂಡರಿಸ್ತಾ, ಸಿಡಿಮಿಡಿಗೊಳ್ತಾಳಲ್ಲ! ಯಾಕಿವತ್ತಿಷ್ಟು ಕೊಬ್ಬು ತೋರಿಸ್ತಿದ್ದಾಳೆ?" ಅನ್ನೋ 'ಗಂಡು' ಸಹೋದ್ಯೋಗಿಗಳ ಮಾತು ಮತ್ತು ಆಕಡೀಕಡೆ ನೋಡ್ತಾ, ಹೊಟ್ಟೆ ಮೇಲೆ ಕೈ ಇಡ್ತಾ, ಕೂತಲ್ಲಿ ಕೂತು ಕೆಲಸ ಮಾಡೋಕಾಗ್ದೆ ಚಡಪಡಿಸೋ ಕೆಲವು ಹೆಣ್ಣು ಸಹೋದ್ಯೋಗಿಗಳನ್ನ ನೋಡ್ತಾ, ಕೇಳಿಸ್ಕೋತಾ ಇರ್ತೀನಿ. ಇವೆರಡೂ ಪರಿಸ್ಥಿತಿಗಳಿಗೂ ಕಾರಣಗಳು ʼಹರಿವ ರಕ್ತ ಮತ್ತು ಹರಿಯದ ಮನಸ್ಥಿತಿʼ. ಟಾಯ್ಲೇಟ್ಗಳಲ್ಲಿ ನೇತಾಡುವ ಅಮ್ಮಂದಿರ ತುಂಡು ಬಟ್ಟೆಗಳು ಅಥವಾ ಕೆಲವೊಮ್ಮೆ ಪ್ರಯಾಣಕ್ಕೆ ಹೊರಡುವಾಗಿನ ಗೆಳತಿಯರ ತಳಮಳ ಮತ್ತು ಕಿರಿಕಿರಿಗಳು - ಇವೆಲ್ಲವು ಸಂಭವಿಸುವ ದಿನಗಳಿಗೆ ಒಂಚೂರು ಕಂಫರ್ಟ್ ಮತ್ತು ರೆಸ್ಟ್ ಬೇಕು. ಸಾಧ್ಯವಾದ್ರೆ ಒಂಚೂರು ಸಾಂತ್ವನ ಕೂಡಾ. ಈ ಮಾತುಗಳನ್ನ ಹರಿದು ಛಿದ್ರವಾದ, ಮುಟ್ಟದೇ ಬದಿಗಿಟ್ಟ ಮಹಿಳಾ ಇತಿಹಾಸವೊಂದರ ಮೇಲೇ ಆರಾಮಾಗಿ ಬದುಕ್ತಿರೋ, ಗಂಡು ಸಮಾಜದ ಭಾಗವಾಗಿ ಹೇಳ್ತಿದ್ದೀನಿ..”

ಗುರು ಸುಳ್ಯ

ಇನ್ನು ವೃತ್ತಿಪರ ಮಹಿಳೆಯರು ಮುಟ್ಟಿನ ಅವಧಿಯಲ್ಲಿ ತಮ್ಮ ಕೆಲಸಗಳಿಗೆ ರಜೆ ಪಡೆದು, ಆ ವಿಶ್ರಾಂತಿ ರಜೆಯಲ್ಲಿ ವಿಶ್ರಾಂತಿ ಪಡೆಯದೆ ಮನೆಗೆಲಸವನ್ನು ಮಾಡುವುದರಲ್ಲಿ ಯಾವ ಅರ್ಥವಿದೆ? ಮುಟ್ಟಾದ ಮಹಿಳೆಯರಿಗೆ ರಜೆ ನೀಡುವುದು ಸರ್ಕಾರ ಹಾಗೂ ಉದ್ಯಮಗಳ ಜವಾಬ್ದಾರಿ ಮಾತ್ರವಲ್ಲ. ಮನೆಯ ಕೆಲಸದಿಂದಲೂ ಮುಕ್ತಿ ಕೊಡಿಸಬೇಕಾದ ಜವಾಬ್ದಾರಿ ಮನೆಯ ಗಂಡಸರ ಮೇಲಿದೆ.

ಇದೇ ಅಭಿಪ್ರಾಯ ದಾಖಲಿಸಿರುವ ಯುವ ಕವಿ ರಾಜೇಂದ್ರ ಪ್ರಸಾದ್‌, ಮುಟ್ಟಾಗುವ ಹೆಣ್ಣುಗಳಿಗೆ ಅವರದೇ ಆದ ಸಮಸ್ಯೆಗಳಿವೆ. ಪುರುಷ ಪ್ರಧಾನ ಸಮಾಜ ಈ ಕಷ್ಟಗಳನ್ನು ಯಾವತ್ತೂ ಅರ್ಥ ಮಾಡಿಕೊಂಡಿಲ್ಲ. ಸಹಜವಾಗಿ ಕೊಡಬೇಕಾದ ಸವಲತ್ತುಗಳನ್ನು ನಾವು ನೀಡಿಲ್ಲ. ಹಾಗಾಗಿ ಈಗಲಾದರೂ ರಜೆ ನೀಡುವುದು ಕಡ್ಡಾಯವಾಗಬೇಕು. ಇದಕ್ಕೆ ಸರ್ಕಾರವೇ ರೂಪುರೇಷೆಗಳನ್ನು ತರಬೇಕು. ಉದ್ಯೋಗಗಳಲ್ಲಷ್ಟೇ ರಜೆ ಅಲ್ಲ. ಆ ಅವಧಿಗಳಲ್ಲಿ ಮನೆಗೆಲಸದಲ್ಲೂ ಕೂಡಾ ರಜೆ ನೀಡುವುದು ಮನೆ ಗಂಡಸರು ಅಭ್ಯಾಸ ಮಾಡಿಕೊಳ್ಳಬೇಕು. ಸರ್ಕಾರ ಅಥವಾ ಖಾಸಗಿ ಸಂಸ್ಥೆ ರಜೆ ನೀಡುವುದು ಎಷ್ಟು ಮುಖ್ಯವೋ ಮನೆಗಳಲ್ಲೂ ರಜೆ ನೀಡುವುದು ಅಷ್ಟೇ ಮುಖ್ಯವೆಂದು ಅವರು ಹೇಳಿದ್ದಾರೆ.

ಮುಟ್ಟಾಗುವಿಕೆಯೊಂದಿಗೆ ದೈಹಿಕ, ಮಾನಸಿಕ ಬದಲಾವಣೆ ಆಗುತ್ತಿರುತ್ತೆ. ಹಾಗಾಗಿ ಉಲ್ಲಾಸ ಕಳೆದುಕೊಂಡಿರುತ್ತೇವೆ. ಉಲ್ಲಾಸವಿಲ್ಲದಿರುವಾಗ ಕೆಲಸ ಮಾಡುವುದು ಹೇಗೆ? ಸಂಘಟಿತ, ಅಸಂಘಟಿತ ಎಲ್ಲಾ ವಲಯದ ಮಹಿಳೆಯರಿಗೂ ಮುಟ್ಟಿನ ರಜೆಯನ್ನು ನೀಡಬೇಕು. ಪೌರ ಕಾರ್ಮಿಕರಂತೂ ಇನ್ನಷ್ಟು ಸಮಸ್ಯೆಗಳನ್ನೆದುರಿಸುತ್ತಿರುತ್ತಾರೆ. ಮೂರು- ನಾಲ್ಕು ಗಂಟೆಗಳಲ್ಲಿ ಪ್ಯಾಡ್‌ ಬದಲಾವಣೆ ಮಾಡುವ ಅವಶ್ಯಕತೆ ಇರುತ್ತದೆ. ಆದರೆ ಚೇಂಜ್‌ ಮಾಡಲು ಸರಿಯಾದ ಟಾಯ್ಲೆಟ್‌, ಬಾತ್‌ರೂಮ್‌ ವ್ಯವಸ್ಥೆಗಳೇ ಇರುವುದಿಲ್ಲ. ಹಾಗಾಗಿ ಮುಟ್ಟಿನ ರಜೆ ನೀಡಬೇಕು.

ಗಾರ್ಮೆಂಟ್ಸ್‌ ಮುಂತಾದ ಕಡೆಗಳಲ್ಲಿ ವೇತನ ಕಡಿತಗೊಳಿಸಲಾಗುತ್ತದೆಯೆಂಬ ಕಾರಣಕ್ಕೆ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ರಜೆ ಪಡೆಯುತ್ತಿಲ್ಲ. ಬದಲಾಗಿ ವೇತನಯುಕ್ತ ರಜೆ ನೀಡಿದರೆ ಸಮಸ್ಯೆ ಆಗುವ ಮಹಿಳೆಯರು ರಜೆಯನ್ನು ಸ್ವಾಗತಿಸಲಿದ್ದಾರೆ ಎಂದು “ಮುಟ್ಟು ಏನಿದರ ಒಳಗುಟ್ಟುʼ ಕೃತಿಯ ಸಂಪಾದಕಿ ಆಗಿರುವ ಜ್ಯೋತಿ ಹಿತ್ನಾಳ್‌ ಅಭಿಪ್ರಾಯ ಪಟ್ಟಿದ್ದಾರೆ. ತಾನು ಸಂಪಾದಿಸಿರುವ ಮುಟ್ಟು ಏನಿದರ ಒಳಗುಟ್ಟು ಕೃತಿಯಲ್ಲಿ ಮುಟ್ಟಿನ ಕುರಿತಂತೆ ಗಂಡು- ಹೆಣ್ಣು ತಿಳಿದುಕೊಳ್ಳಬೇಕಾದ ಸಾಕಷ್ಟು ಮಾಹಿತಿಯುಕ್ತ ಲೇಖನಗಳಿವೆ, ಮುಟ್ಟಿನ ಕುರಿತಂತೆ ಪ್ರಶ್ನೆಗಳಿಗೆ ಉತ್ತರ ನೀಡುವ ಹಲವು ಲೇಖನಗಳ ಸಂಗ್ರಹ ಈ ಪುಸ್ತಕದಲ್ಲಿದೆ ಎಂದಿದ್ದಾರೆ.

ಮುಟ್ಟಿನ ಕುರಿತಂತೆ ಗೌಪ್ಯತೆ ಪಾಲಿಸಿಕೊಳ್ಳಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಜ್ಯೋತಿ ಹಿತ್ನಾಳ್‌, ಕೇಳಿಸಿಕೊಳ್ಳುವವರು ಮುಕ್ತವಾಗಿ ಕೇಳಿಸಿಕೊಳ್ಳದಾಗ ಗೌಪ್ಯತೆಯ ಪ್ರಶ್ನೆ ಎದುರಾಗುತ್ತದೆ. ಹೇಳುವವರ ಹಾಗೂ ಕೇಳಿಸಿಕೊಳ್ಳುವವರ, ಇಬ್ಬರ ಮನಸ್ಸು ಮುಕ್ತವಾಗಿ ತೆರೆದುಕೊಳ್ಳಬೇಕಾಗಿದೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ.

ಈ ಕುರಿತಂತೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಹಿಳೆಯರಿಗಿರುವ ಸಿಕ್‌ ಲೀವ್‌ನಲ್ಲಿ 30 ರಿಂದ 40 ಶೇಕಡಾ ಹೆಚ್ಚುಗೊಳಿಸಬೇಕೆಂದು ಅಭಿಪ್ರಾಯಿಸಿದ್ದಾರೆ. ಗಂಡಸರಿಗೆ ಒಂದು ತಲೆನೋವು, ಬೆನ್ನು ನೋವು ಬಂದಾಗ ಕೆಲಸ ಮಾಡುವ ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಅಂತಹದ್ದರಲ್ಲಿ ಮುಟ್ಟಿನ ಕಾರಣಕ್ಕೆ ದೈಹಿಕ, ಮಾನಸಿಕ ಉತ್ಸಾಹಗಳನ್ನು ಕಳೆದುಕೊಳ್ಳುವ, ಕಿರಿಕಿರಿಯನ್ನು ಅನುಭವಿಸುವ ಮಹಿಳೆಯರಿಗೆ ರಜೆ ಬೇಕೋ ಬೇಡವೋ ಎಂದು ಅವರೇ ತೀರ್ಮಾನ ಮಾಡಲಿ ಎಂದು ಹೇಳಿದ್ದಾರೆ.

ನನ್ನ ಋತುಚಕ್ರದ ಅವಧಿಗಳು ಭಯಾನಕ ಆಗಿರತ್ತವೆ. ಸೆಳೆತ ತಡಿಯೋಕೆ ಅಗಲ್ಲಾ. ಪ್ರತಿ 2-3 ತಿಂಗಳಿಗೆ ಒಂದು ಸಲ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗ್ತೀನಿ, ಅಷ್ಟು ಸುಸ್ತಾಗಿರ್ತೀನಿ. ಇಷ್ಟೆಲ್ಲಾ ಬಳಲುತ್ತಿರುವ ನಾವು ಕಾಲೇಜ್ ಗೋ ವರ್ಕ್ ಹೋದಾಗ ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ತುಂಬಾ ಒತ್ತಡದ ಆಗತ್ತೆ. 5 ದಿನಗಳವರೆಗೆ ಸ್ರಾವವಾದರೆ ಶಕ್ತಿಯೆಲ್ಲಾ ಉಡುಗಿ ಹೋಗಿರುತ್ತೆ. ಮುಟ್ಟಿನ ನೋವಿನ ಬಗ್ಗೆ ಆರೋಗ್ಯ ಇಲಾಖೆ ತಲೆಕೆಡಿಸೊಲ್ಲ ಹಾಗಾಗಿ ಸರ್ಕಾರವೂ ಈ ಕುರಿತಂತೆ ಯೋಚನೆ ಮಾಡಲ್ಲ.

ಹೆಣ್ಣು ಮಕ್ಕಳು ಅಂದ್ರೆ ಸಹಿಸ್ಕೋಬೇಕು ಅನ್ನೋದು ಅನ್ನೋದು ಲೋಕರೂಢಿ ಆಗಿಬಿಟ್ಟಿದೆ. ಅದಕ್ಕೆ ಸಹಿಸ್ಕೊ ಅಂತಾರೆ. ಇದು ತಪ್ಪು. ಹೆಣ್ಣು ಮಕ್ಕಳಿಗೆ ಅತೀ ಹೆಚ್ಚು ಸಪೋರ್ಟ್‌, ಅತೀ ಹೆಚ್ಚು ರೆಸ್ಟ್ ಬೇಕಿರೋದು ಆ ಸಮಯದಲ್ಲಿ. ಆದ್ದರಿಂದ ಪಿರಿಯಡ್ ರಜೆ ಒಂದು ಪ್ರಮುಖ ಅಗತ್ಯವಾಗಿದೆ ಎಂದು ಸಿನೆಮಾ ಪ್ರಮೋಷನ್‌ ಹೆಡ್‌ ಆಗಿರುವ ಮೀರಾ ಹೇಳಿದ್ದಾರೆ.

ಮುಟ್ಟು ಅನ್ನೋದು ಸೂಕ್ಷ್ಮ ವಿಷಯ, ಅದೇ ವೇಳೆ ಅಸಹ್ಯ ಪಡಬೇಕಾದ, ಹೇಳಿಕೊಳ್ಳಲು ನಾಚಿಕೊಳ್ಳಬೇಕಾದ ವಿಷಯವಲ್ಲ. ಸರ್ಕಾರದ ಆರೋಗ್ಯ ಸೇವೆಗಳು ಮುಟ್ಟಿನ ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಸಂಪ್ರದಾಯವಾದಿ ಆಚರಣೆಗಳಿಂದ ಪ್ರಗತಿಪರ ಆಚರಣೆಗಳಿಗೆ ತೆರೆದುಕೊಳ್ಳಲು ಸರ್ಕಾರ ಉತ್ತೇಜನ ನೀಡಬೇಕಿದೆ. ಸಾಮಾಜಿಕ ಟಾಬೂ(Taboo) ಆಗಿಯೇ ಉಳಿದುಬಿಟ್ಟ‌ ಋತುಸ್ರಾವದ ಬಗ್ಗೆ ಸಮಾಜದಲ್ಲಿ ಮುಕ್ತವಾಗಿ ಚರ್ಚೆಯಾಗಬೇಕಾದ ಅಗತ್ಯವಿದೆ.

ʼMenstrual problems cannot be brushed under the carpet. ಉದ್ಯೋಗದ ನಿಯಮಗಳೆಲ್ಲವೂ ಋತುಸ್ರಾವ ಆಗದವರು ಮಾಡಿರುವ ಕಾರಣ ಈ ಸಮಸ್ಯೆಯನ್ನು ಮುಖ್ಯವಾಗಿ ಪರಿಗಣಿಸಿಲ್ಲ, ಮಹಿಳೆಗೆ ಈ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ prostaglandins ತಂದಿಡುವ ನೋವು ಮತ್ತು ಮಾನಸಿಕ ಉದ್ವೇಗಗಳು ಆಕೆ ಸಹಜವಾಗಿ ಕೆಲಸ ಮಾಡಗೊಡುವುದಿಲ್ಲ, ಹಾಗಾಗಿ ದೈಹಿಕ ಶ್ರಮಬೇಡುವ ಕೆಲಸವಾಗಲಿ, ಮಾನಸಿಕ ಒತ್ತಡದ ಕೆಲಸವಾಗಲಿ ಎರಡು ದಿನಗಳಲ್ಲಿ ಕಷ್ಟಸಾಧ್ಯ, ಹೀಗಿರುವಾಗ ಕೆಮ್ಮು ಜ್ವರಗಳಷ್ಟೇ ರೆಸ್ಟ್ ಬೇಡುವ ಮುಟ್ಟಿನ ದಿನಗಳಲ್ಲಿ ಹೆಣ್ಣಿಗೆ ವೇತನ ಸಹಿತ ರಜೆಯನ್ನು ಕಡ್ಡಾಯ ಕಾನೂನಾಗಿಯೇ ತರಬೇಕು. ಎಂದು ಕವಯಿತ್ರಿ ದಾಕ್ಷಾಯಿಣಿ ದಯಾ ಹೇಳಿದ್ದಾರೆ. ಅದೇ ವೇಳೆ “ಹೀಗೆ ರಜೆ ನೀಡುವ ವಿಷಯದಲ್ಲಿ, ಆಕೆ ಅದೇ ಕಾರಣಕ್ಕೆ ಉದ್ಯೋಗದ ಅವಕಾಶಗಳಲ್ಲಿ ವಂಚಿತಳಾಗದಂತೆ ಹಾಗೂ ಮನೆಗಳಲ್ಲಿ ಮೂಲೆಗೆ ಸೇರದಂತೆ ಎಚ್ಚರ ವಹಿಸುವ ಅಗತ್ಯವೂ ಇದೆ.ʼ ಎಂದು ಹೇಳಿದ್ದಾರೆ.

“ಮುಟ್ಟಿನ ದಿನಗಳ ನೋವು ಸಂಕಟ, ಹಾರ್ಮೋನ್ ವ್ಯತ್ಯಾಸದಿಂದಾಗುವ ಕ್ಷೋಭೆ, ಕಿರಿ ಕಿರಿ ಅಷ್ಟಿಷ್ಟಲ್ಲ. ಪ್ರತಿ ತಿಂಗಳು ಯಾಕಪ್ಪಾ ಈ ಶಿಕ್ಷೆ ಅನ್ನಿಸುವುದೂ ಸುಳ್ಳಲ್ಲ. ಮುಟ್ಟು ಶಿಕ್ಷೆಯೂ ಅಲ್ಲ, ಮಾಲಿನ್ಯವೂ ಅಲ್ಲ, ವಿಶಿಷ್ಟವೂ ಅಲ್ಲ. ಅದು ಪ್ರಕೃತಿಯ ಅತ್ಯಂತ ಸಹಜ ಕ್ರಿಯೆ. ಅದನ್ನು ಸಹಜವಾಗಿಯೇ ಸ್ವೀಕರಿಸಬೇಕು. 'ಮುಟ್ಟಿನ ರಜೆ' ಎನ್ನುವುದು 'ಹೊರಗೆ ಕೂರು'ವ ಮಡಿವಂತಿಕೆಗೆ ಪರ್ಯಾಯವಾಗಬಾರದು ಅಷ್ಟೇ.”

ಫಾತಿಮಾ ರಳಿ಼ಯಾ ಹೆಜಮಾಡಿ

ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಯುವ ಕಥೆಗಾರ್ಥಿ ಫಾತಿಮಾ ರಲಿಯಾ ಹೆಜಮಾಡಿ “ಮುಟ್ಟಿನ ದಿನಗಳ ನೋವು ಸಂಕಟ, ಹಾರ್ಮೋನ್ ವ್ಯತ್ಯಾಸದಿಂದಾಗುವ ಕ್ಷೋಭೆ, ಕಿರಿ ಕಿರಿ ಅಷ್ಟಿಷ್ಟಲ್ಲ. ಎಷ್ಟೋ ಹೆಣ್ಣು ಮಕ್ಕಳು ಮುಟ್ಟಿನ ನೋವಿಗೆ ಹೆದರಿಯೇ ಮುಟ್ಟನ್ನು ಮುಂದೂಡುವ ಮದ್ದು ಸೇವಿಸಿ ಅನಾರೋಗ್ಯವನ್ನು ಆಹ್ವಾನಿಸಿಕೊಳ್ಳುತ್ತಾರೆ. ಪ್ರತಿ ತಿಂಗಳು ಯಾಕಪ್ಪಾ ಈ ಶಿಕ್ಷೆ ಅನ್ನಿಸುವುದೂ ಇದೆ. ಮುಟ್ಟು ಶಿಕ್ಷೆಯೂ ಅಲ್ಲ, ಮಾಲಿನ್ಯವೂ ಅಲ್ಲ, ವಿಶಿಷ್ಟವೂ ಅಲ್ಲ. ಅದು ಪ್ರಕೃತಿಯ ಅತ್ಯಂತ ಸಹಜ ಕ್ರಿಯೆ. ಅದನ್ನು ಸಹಜವಾಗಿಯೇ ಸ್ವೀಕರಿಸಬೇಕು.ಜ್ವರ, ಶೀತಗಳಂತಹ ಪ್ರಕೃತಿ ಸಹಜ ಅಸೌಖ್ಯಗಳಿಗೆ ರಜೆ ಇರುವಂತೆ ಮುಟ್ಟಿನ ರಜೆಯೂ ಇದ್ದರೆ ಎಷ್ಟೋ ಹೆಣ್ಣುಮಕ್ಕಳು ನೆಮ್ಮದಿ ಕಂಡುಕೊಳ್ಳಬಹುದು. ಆದರೆ ಈ ರಜೆ ಮಾಧ್ಯಮಗಳು ಹೈಪ್ ಸೃಷ್ಟಿಸುವ ಮೇಲ್ಮಧ್ಯಮ ವರ್ಗದ ಮಹಿಳೆಗೆ, ವರ್ಕಿಂಗ್ ವುಮನ್‌ಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ವರ್ಗದ ಮಹಿಳೆಯರಿಗೂ ಅನ್ವಯಿಸುವಂತಿರಬೇಕು. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ 'ಮುಟ್ಟಿನ ರಜೆ' ಎನ್ನುವುದು 'ಹೊರಗೆ ಕೂರು'ವ ಮಡಿವಂತಿಕೆಯ ಅನಿಷ್ಟಕ್ಕೆ ಪರ್ಯಾಯವಾಗಬಾರದು..” ಎಂದಿದ್ದಾರೆ.

ಇನ್ನು ಮುಟ್ಟಿನ ರಜೆಯ ಅಗತ್ಯವನ್ನು ಸರಳವಾಗಿ ವಿವರಿಸಿದ ಶಿಕ್ಷಕಿ ಶಿವಿ ಮಲ್ಲಿಕಾರ್ಜುನಪ್ಪ “ಮುಟ್ಟಿನ ರಜೆ ಬೇಕೇ ಬೇಕು.ಅದು ಈ ಸಮಾಜ ತಮ್ಮ ಹುಟ್ಟಿಗೆ ಕಾರಣವಾದ ನೋವನ್ನ ಅರ್ಥ ಮಾಡ್ಕೊಳ್ಳೋ ಒಂದು ಸಣ್ಣ ಪ್ರಯತ್ನ ಆಗಬಹುದು. ಹೆಣ್ಣು ಹುಟ್ಟುತ್ತಲೇ ಅನಿಷ್ಟ,ಮುಟ್ಟಾದರೆ ಅನಿಷ್ಟ ಅನ್ನೋ ಜನರಿರುವ ನಮ್ ಸಮಾಜದಲ್ಲಿ ಅದೂ ಪುರುಷ ಪ್ರಧಾನ ಮನಸ್ಥಿತಿಗಳ ನಡುವೆ ಇಂಥ ಯೋಚನೆ ಬಂದ್ರೆ ಅದೊಂದು ಖುಷಿಯ ಸಂಗತಿ. ತುಂಬಾ ಹೆಣ್ಮಕ್ಕ್ಳು ನೋವು ತಡೆಯಲಾರ್ದೆ ಪಡಸಾಲೆ ತುಂಬಾ ಉರುಳಾಡ್ತಾರೆ ಆ ದಿನಗಳಲ್ಲಿ. ಅಂಥದರಲ್ಲಿ ಪ್ರಯಾಣ ಮಾಡಿ ಕಷ್ಟಕರ ಕೆಲಸ ಮಾಡಕಾಗತ್ತಾ? ನಮ್ಮಲ್ಲಿ ಸರಿಯಾದ ಶೌಚಾಲಯ, ನೀರು ಇರಲ್ಲ. ಇನ್ನು ಮನೆಯಿಂದ ಹೊರಗೆ ಈ ಮುಟ್ಟಿನ ನಿರ್ವಹಣೆ ಎಷ್ಟು ಕಷ್ಟ ಗೊತ್ತ? ಹೊಲಕ್ಕೋ, ಗಾರ್ಮೆಂಟಿಗೋ ಮತ್ತೆಲ್ಲೋ ಕೂಲಿಗೆ ಹೋಗೋ ಹೆಣ್ಮಕ್ಕಳ ಕತೆ ಹೇಗೆ? ನಾನು ಎಷ್ಟೋ ವರ್ಷ ನಮ್ಮ ಶಾಲೆಯಲ್ಲಿ ಸರಿಯಾದ ಶೌಚಾಲಯ, ನೀರು ಇರದ ಕಾರಣಕ್ಕೆ (ಕುಡಿಯೋಕೇ ನೀರಿರಲ್ಲ ಇಲ್ಲಿ) ರಜೆ ಹಾಕೊಂಡು ಮನೇಲಿರ್ತಿದ್ದೆ. ಸಮಾಜಕ್ಕೆ ತಮ್ಮನ್ನ ಹೆತ್ತವರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ರೆ ಈ ರಜೆಯನ್ನ ಬೇಡ ಅಂತ ಹೇಳಲ್ಲ.” ಎಂದಿದ್ದಾರೆ.

“ಗಂಡಸರ ಮಾತು ಕೇಳಿ ಮುಟ್ಟಿನ ರಜೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಮೂರ್ಖತನ. ಕೆಲಸದ ಸ್ಥಳಗಳಲ್ಲಿ HR ನೋಡಿಕೊಳ್ಳುವ ಗಂಡಸರಿಗೆ ಹೆಣ್ಣುಮಕ್ಕಳ ಕಷ್ಟಗಳು ಅರ್ಥವೇ ಆಗುವುದಿಲ್ಲ. ಅದಕ್ಕಿಂತಲೂ ಕಾಡುವ ವಿಷಯವೆಂದರೆ ಇಂತಹ ಗಂಡಸರಿಗೆ ತಮ್ಮ ಮನೆಯ ಹೆಣ್ಣುಮಕ್ಕಳ ನೋವಿನ ಬಗ್ಗೆಯೇ ಗೊತ್ತಿರುವುದಿಲ್ಲ. ಎರಡು ರಾಜ್ಯಗಳಲ್ಲಿ, ಎರಡು ವಿಭಿನ್ನ ಜನಸಮುದಾಯದ ನಡುವೆ ಕೆಲಸ ಮಾಡಿರುವ ನನ್ನ ಅನುಭವದ ಪ್ರಕಾರ ಎಲ್ಲ ಆಫೀಸುಗಳಲ್ಲೂ ಮುಟ್ಟಿನ ವಿಚಾರದಲ್ಲಿ ಗಂಡಸರ ವರ್ತನೆ ಒಂಥರಾ ವಿಚಿತ್ರವಾಗಿರುತ್ತದೆ. ಅವರಿಗದು ಕೇವಲ ತಮಾಷೆಯ ವಿಷಯವಾಗಿರುತ್ತದೆ. ಆ ನೋವು, ಸಂಕಟದ ಸಮಯದಲ್ಲಿ ಇವರ ಕೆಟ್ಟ ತಮಾಷೆಗಳನ್ನ ಕೇಳಿಸಿಕೊಳ್ಳುವ ಮಹಿಳೆಯರ ಪಾಡು ಹೇಳುವುದೇ ಬೇಡ ಎಂದಿರುವ ಶಾಹಿನಾ ಸುನೈಫ್‌ ಸುಳ್ಯ ಮುಟ್ಟಿನ ರಜೆ ಬೇಕು ಎಂಬ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಇನ್ನು ತಮ್ಮ ಕಛೇರಿಗಳಲ್ಲಿ ತಮ್ಮ ಮಹಿಳಾ ಸಹೋದ್ಯೋಗಿಗಳ ನೋವನ್ನು ಅರ್ಥ ಮಾಡಿಕೊಂಡಿರುವ ಸೂಕ್ಷ್ಮ ಸಂವೇದಿ ಕವಿ ಗುರು ಸುಳ್ಯ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. "ಮುಖ ಸಿಂಡರಿಸ್ತಾ, ಸಿಡಿಮಿಡಿಗೊಳ್ತಾಳಲ್ಲ! ಯಾಕಿವತ್ತಿಷ್ಟು ಕೊಬ್ಬು ತೋರಿಸ್ತಿದ್ದಾಳೆ?" ಅನ್ನೋ 'ಗಂಡು' ಸಹೋದ್ಯೋಗಿಗಳ ಮಾತು ಮತ್ತು ಆಕಡೀಕಡೆ ನೋಡ್ತಾ, ಹೊಟ್ಟೆ ಮೇಲೆ ಕೈ ಇಡ್ತಾ, ಕೂತಲ್ಲಿ ಕೂತು ಕೆಲಸ ಮಾಡೋಕಾಗ್ದೆ ಚಡಪಡಿಸೋ ಕೆಲವು ಹೆಣ್ಣು ಸಹೋದ್ಯೋಗಿಗಳನ್ನ ನೋಡ್ತಾ, ಕೇಳಿಸ್ಕೋತಾ ಇರ್ತೀನಿ. ಇವೆರಡೂ ಪರಿಸ್ಥಿತಿಗಳಿಗೂ ಕಾರಣಗಳು ʼಹರಿವ ರಕ್ತ ಮತ್ತು ಹರಿಯದ ಮನಸ್ಥಿತಿʼ. ಟಾಯ್ಲೇಟ್ಗಳಲ್ಲಿ ನೇತಾಡುವ ಅಮ್ಮಂದಿರ ತುಂಡು ಬಟ್ಟೆಗಳು ಅಥವಾ ಕೆಲವೊಮ್ಮೆ ಪ್ರಯಾಣಕ್ಕೆ ಹೊರಡುವಾಗಿನ ಗೆಳತಿಯರ ತಳಮಳ ಮತ್ತು ಕಿರಿಕಿರಿಗಳು - ಇವೆಲ್ಲವು ಸಂಭವಿಸುವ ದಿನಗಳಿಗೆ ಒಂಚೂರು ಕಂಫರ್ಟ್ ಮತ್ತು ರೆಸ್ಟ್ ಬೇಕು. ಸಾಧ್ಯವಾದ್ರೆ ಒಂಚೂರು ಸಾಂತ್ವನ ಕೂಡಾ. ಈ ಮಾತುಗಳನ್ನ ಹರಿದು ಛಿದ್ರವಾದ, ಮುಟ್ಟದೇ ಬದಿಗಿಟ್ಟ ಮಹಿಳಾ ಇತಿಹಾಸವೊಂದರ ಮೇಲೇ ಆರಾಮಾಗಿ ಬದುಕ್ತಿರೋ, ಗಂಡು ಸಮಾಜದ ಭಾಗವಾಗಿ ಹೇಳ್ತಿದ್ದೀನಿ..”

“ಮುಟ್ಟು ಒಂದು ಸಹಜ ಕ್ರಿಯೆ ಅಂತಾ ತುಂಬಾ ಸಲ ನಾನೇ ಮಾತಾಡ್ತಿರ್ತೀನಿ ಆದ್ರೆ ಮುಟ್ಟಾಗೋ ದಿನಗಳಲ್ಲಿ ನಾನು ಸಹಜವಾಗಿರೋಕೆ ಸಾಧ್ಯವಾಗಲ್ಲ. ಆ ಒಂದು ವಾರ ನನ್ನ ಮೈಮನಸು ಸಹಜ ಸ್ಥಿತಿಯಲ್ಲಿ ಇರೋದಿಲ್ಲಾ. ಅದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮಸ್ಯೆ ಅನುಭವಿಸ್ಬೇಕು. ಕನಿಷ್ಟ ಎರಡು ದಿನ ಕೆಲಸದ ಒತ್ತಡದಿಂದ ಬಿಡಿಸಿಕೊಂಡು ನಮ್ಮ ಮೈಮನಸ್ಸಿಗೆ ನಿರಾಳವಾಗೋತರ ದಿನ ಕಳೀಬೇಕು ಅನ್ನಿಸುತ್ತೆ. ಕನಿಷ್ಠ ಒಂದು ದಿನದ ಮಟ್ಟಿಗಾದರೂ ಮುಟ್ಟಿನ ರಜೆ ನಿಜಕ್ಕೂ ಅನಿವಾರ್ಯ.” ಎಂದು ಕವಯಿತ್ರಿ ಮಂಜುಳಾ ಹುಲಿಕುಂಟೆ ಹೇಳಿದ್ದಾರೆ.

2018 ರಲ್ಲಿ ಬ್ಯುಸಿನೆಸ್‌ ಲೈನ್‌ ನ ಒಂದು ವರದಿಯಲ್ಲಿ “ಬಿಹಾರ ಸರ್ಕಾರವು 1992 ರಿಂದಲೇ ಮಹಿಳಾ ಉದ್ಯೋಗಿಗಳಿಗೆ ಎರಡು ದಿನಗಳ ಕಾಲ ಋತುಚಕ್ರದ ರಜೆ ನೀಡುತ್ತಿದೆ. ಯಾವುದೇ ಸಮರ್ಥನೆಯನ್ನು ನೀಡದೆಯೇ ಮಹಿಳೆಯರು, ತಿಂಗಳ ಯಾವ ಎರಡು ದಿನಗಳಲ್ಲಿ ರಜೆ ತೆಗೆದುಕೊಳ್ಳಬಹುದು ಮಹಿಳೆಯರು ನಿರ್ಧರಿಸಬಹುದು” ಎಂಬ ಮಾಹಿತಿಯನ್ನು ಉಲ್ಲೇಖಿಸಿದೆ. ಬಿಹಾರದಲ್ಲಿ ಸರ್ಕಾರ 4 ದಶಕಗಳ ಹಿಂದೆಯೇ ಇಂತಹ ಜೀವಪರವಾದ ಕಾನೂನು ರೂಪಿಸಲು ಸಾಧ್ಯವಾಗುವುದಿದ್ದರೆ ಭಾರತ ಎಲ್ಲಾ ರಾಜ್ಯಗಳಲ್ಲೂ ಈ ನಿಯಮ ಅಳವಡಿಸಿಕೊಳ್ಳಲು ಸಾಧ್ಯವಾಗಬೇಕಲ್ಲವೇ..

1912 ರಲ್ಲಿಯೇ ಕೇರಳದ ಶಾಲೆಯೊಂದರಲ್ಲಿ ಮುಟ್ಟಿನ ರಜೆಯನ್ನು ನೀಡಲಾಗುತ್ತಿತ್ತು, ನಾವು ನೂರು ವರ್ಷಗಳನ್ನು ದಾಟಿ ಬಂದಿದ್ದೇವೆ, ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ರಜೆಯ ಅಗತ್ಯತೆಯ ಕುರಿತಂತೆ ಈಗಲೂ ಚರ್ಚೆ ನಡೆಸುತ್ತಿದ್ದೇವೆ. 20 ನೇಯ ಶತಮಾನದ ಆರಂಭದಾಲ್ಲೇ ಜಪಾನ್‌ ದೇಶ ಮುಟ್ಟಿನ ರಜೆಯ ಅಗತ್ಯತೆಯನ್ನು ಮನಗಂಡಿತ್ತು. ಕಾರ್ಮಿಕ ಸಂಘಟನೆಗಳು ಮಹಿಳೆಯರಿಗೆ ಋತುಸ್ರಾವದ ರಜೆಗೆ ಹೋರಾಟಗಳನ್ನು ನಡೆಸಿದ್ದವು.

ಜಪಾನ್, ತೈವಾನ್, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮತ್ತು ಜಾಂಬಿಯಾ ಮುಂತಾದ ದೇಶಗಳಲ್ಲಿ ಮುಟ್ಟಿನ ರಜೆ ನಿಯಮ ಇದೆ. ಭಾರತದಲ್ಲೂ ತೀರಾ ಇತ್ತೀಚಿನ ವರ್ಷಗಳಲ್ಲಿ ಬೆರಳೆಣಿಕೆಯ ಖಾಸಗಿ ಕಂಪೆನಿಗಳು ಇಂತಹ ನೀತಿಗಳನ್ನು ಪ್ರಾರಂಭಿಸಿವೆ. ಅದರಲ್ಲಿ ಇತ್ತೀಚೆಗಿನ ಸೇರ್ಪಡೆ ಝೊಮ್ಯಾಟೊ. ಎಲ್ಲಾ ಖಾಸಗಿ ಕಂಪೆನಿಗಳು ಈ ನಿಯಮವನ್ನು ರೂಪಿಸಿದ್ದರಾದರೂ, ಸಂಘಟಿತ ವಲಯದ ಮಹಿಳೆಯರಷ್ಟೇ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಅಸಂಘಟಿತ ಮಹಿಳಾ ಕಾರ್ಮಿಕರು ಕೋಟಿಗಳ ಸಂಖ್ಯೆಯಲ್ಲಿದ್ದಾರೆ. ಅವರಲ್ಲನೇಕರು ಕೂಡಾ ತಿಂಗಳು ತಿಂಗಳು ಕಿಬ್ಬೊಟ್ಟೆಯಲ್ಲಿ ಕೈ ಇಟ್ಟೇ ಕೆಲಸ ಮಾಡುತ್ತಿದ್ದಾರೆ.

ಹಿಂದಿನ ವರ್ಷ ಸ್ಯಾನಿಟರಿ ಪ್ಯಾಡ್‌ಗಳ ತೆರಿಗೆಯನ್ನು ಹೆಚ್ಚಿಸಿದ್ದ ಭಾರತ ಸರ್ಕಾರ, ಈ ವರ್ಷ 1 ರುಪಾಯಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವ ಯೋಜನೆಯ ಬಗ್ಗೆ ಹೇಳಿದೆ. ಸ್ವತಃ ಪ್ರಧಾನ ಮಂತ್ರಿಯೇ ಕೆಂಪಕೋಟೆಯಲ್ಲಿ ಸ್ವತಂತ್ರೋತ್ಸವದ ಅಂಗವಾಗಿ ನಡೆಸಿದ ಭಾಷಣದಲ್ಲಿ ಇದರ ಬಗ್ಗೆ ಮಾತನಾಡಿದ್ದಾರೆ. ಮಹಿಳೆಯರನ್ನು ಆರ್ಥಿಕ ಸಬಲೀಕರಣೆದೆಡೆಗೆ ಕರೆದೊಯ್ಯಲು ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ. ಭೇಟಿ ಬಚಾವೋ ಯೋಜನೆಯ ರುವಾರಿಗಳಿಗೆ ಸಂಸತ್ತಿನಲ್ಲಿ ಈ ಮುಟ್ಟಿನ ಕುರಿತ ರಜೆಗೆ ನಿರ್ಣಯ ಮಂಡಿಸಲು ಇದಕ್ಕಿಂತ ಪ್ರಾಶಸ್ತ್ಯ ಕಾಲ ಇರಲಾರದು. ಸರ್ಕಾರ ಆ ನಿಟ್ಟಿನಲ್ಲಿ ಹೆಜ್ಜೆ ಇಡಲಿ.

Click here to follow us on Facebook , Twitter, YouTube, Telegram

Pratidhvani
www.pratidhvani.com