ಮರೆತುಹೋದ ಜವಾಬ್ದಾರಿ: ಭಾರತದಲ್ಲಿ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ
ಅಭಿಮತ

ಮರೆತುಹೋದ ಜವಾಬ್ದಾರಿ: ಭಾರತದಲ್ಲಿ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ

ಈ ಬಾರಿಯ ಕೋವಿಡ್ – 19 ಪಿಡುಗು, ಸಾರ್ವತ್ರಿಕವಾಗಿ ಲಭ್ಯ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಯ ಅಗತ್ಯತೆಯನ್ನು ಈ ಹಿಂದೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒತ್ತಿ ಹೇಳಿದೆ.

ನ್ಯಾಯಮೂರ್ತಿ ವಿ ಗೋಪಾಲ ಗೌಡ/ ಗುಂಜನ್‌ ಜೇನಾ

ಗುಂಜನ್ ಜೆನಾ ಸ್ವತಂತ್ರ ಕಾನೂನು ಸಂಶೋಧಕ.ಭಾರತದಲ್ಲಿ, 2009ರಿಂದ 2019ರ ತನಕ ಜಿ.ಡಿ.ಪಿ.ಯ 2%ಕ್ಕಿಂತಲೂ ಕಡಿಮೆ ಪ್ರಮಾಣವನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗಿದೆ. ಈ ಶೇಕಡಾವಾರು ಪ್ರಮಾಣದಲ್ಲಿ ಇನ್ನಷ್ಟು ಇಳಿಕೆಯಾಗಿದ್ದು, ಕಳೆದ ವರ್ಷ ಕೇವಲ ಜಿ.ಡಿ.ಪಿಯ 1.1%ದಷ್ಟು ಮೊತ್ತವನ್ನು ಸಾರ್ವಜನಿಕ ಆರೋಗ್ಯದ ಮೇಲೆ ಹೂಡಿಕೆ ಮಾಡಲಾಗಿದೆ. ಈ ಕೊರತೆಯು ಪ್ರತಿಕೂಲ ಪರಿಣಾಮವನ್ನು ಬೀರಿದ್ದು, ಚಾಲ್ತಿಯಲ್ಲಿರುವ ಕೋವಿಡ್-19 ಪಿಡುಗನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಭಾರತವು ಹಿಂದೆ ಬಿದ್ದಿರುವುದಕ್ಕೆ ಕಾರಣವೆನಿಸಿದೆ. ಲಭ್ಯವಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಅತ್ಯಧಿಕ ಕೋವಿಡ್ – 19 ಪ್ರಕರಣಗಳ ಸಂಖ್ಯೆಯಲ್ಲಿ, ಅಮೆರಿಕ ಮತ್ತು ಬ್ರೆಜಿಲ್ ನ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ.

ಈ ಲೇಖನವನ್ನು ಬರೆಯುವ ಸಂದರ್ಭದಲ್ಲಿ, ಭಾರತದಲ್ಲಿ 14 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 32,771 ಸಾವುಗಳು ಸಂಭವಿಸಿವೆ. ಅಲ್ಲದೆ ಪ್ರತಿ ದಿನ 48,000ದಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಈ ವಿಪತ್ತನ್ನು ನಿರ್ವಹಣೆ ಮಾಡಿದ ರೀತಿಯು, ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ದೌರ್ಬಲ್ಯವನ್ನು ಎತ್ತಿ ತೋರಿಸಿದೆ. ಅಲ್ಲದೆ ಕೇಂದ್ರ ರಾಜ್ಯ ಸರ್ಕಾರಗಳೆರಡೂ ದಶಕಗಳಿಂದ ಈ ಕುರಿತು ತೋರಿರುವ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಯಿಂದ ನುಣುಚಿಕೊಂಡಿರುವುದಕ್ಕೆ ಕನ್ನಡಿ ಹಿಡಿದಿದೆ. ಜೊತೆಗೆ, ಇದು ಭಾರತೀಯ ಸಮಾಜದ ಅತ್ಯಂತ ಬಡ ಮತ್ತು ದುರ್ಬಲರ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವೆನಿಸಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು ಅನುಸ್ಥಾಪಿಸಿದ ಸಾಂವಿಧಾನಿಕ ಜವಾಬ್ದಾರಿಗಳು ಮತ್ತು ವಿಶ್ವದೆಲ್ಲೆಡೆ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸುವ ಕುರಿತು ಇರುವ ಅತ್ಯುತ್ತಮ ಮಾನದಂಡಗಳನ್ನು ಉಲ್ಲಂಘಿಸಿ ನಿರಂತರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸಾರ್ವಜನಿಕ ಆರೋಗ್ಯವನ್ನು ನಿರ್ಲಕ್ಷಿಸಿದ ಕಾರಣ ಉಂಟಾಗಿರುವ ಪರಿಣಾಮವನ್ನು ಇದು ಗಮನಿಸುವಂತೆ ಮಾಡಿದ್ದನ್ನು ನಾವು ಅಲ್ಲಗಳೆಯುವಂತಿಲ್ಲ.

ಭಾರತದಲ್ಲಿ ಆರೋಗ್ಯದ ಹಕ್ಕು

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯು (ಭಾರತವೂ ಇದಕ್ಕೆ ಸಹಿ ಹಾಕಿದೆ) ಆಹಾರ, ಬಟ್ಟೆ, ವಸತಿ, ಆರೋಗ್ಯ ಸೇವೆ ಮತ್ತು ಅಗತ್ಯ ಸಾಮಾಜಿಕ ಸೇವೆಗಳು, ಮತ್ತು ನಿರುದ್ಯೋಗ, ಅನಾರೋಗ್ಯ, ವಿಕಲತೆ, ವಿಧವೆಯಾದಾಗ, ವೃದ್ಧಾಪ್ಯ ಅಥವಾ ಮಾನವನ ನಿಯಂತ್ರಣಕ್ಕೆ ಮೀರಿದ ಕಾರಣದಿಂದ ಜೀವನೋಪಾಯಕ್ಕೆ ಕೊರತೆಯಾದಾಗ ಭದ್ರತೆಯ ಹಕ್ಕು – ಇವೆಲ್ಲವೂ ಸೇರಿದಂತೆ ಮಾನವನ ಆರೋಗ್ಯ ಮತ್ತು ಯೋಗಕ್ಷೇಮ ಸೇರಿದಂತೆ ಗುಣಮಟ್ಟದ ಜೀವನದ ಹಕ್ಕನ್ನು ಗುರುತಿಸುತ್ತದೆ.

ಆರೋಗ್ಯ ಸೇವೆಯ ಹಕ್ಕನ್ನು ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ಹಕ್ಕಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಸಂವಿಧಾನದ ಅನುಚ್ಛೇದ 47, ಈ ಕೆಳಗಿನ ನಿರ್ದೇಶನವನ್ನು ಸರ್ಕಾರಕ್ಕೆ ಜಾರಿಗೊಳಿಸಿದೆ –

“ಸರ್ಕಾರವು ತನ್ನ ಜನರ ಪೌಷ್ಠಿಕಾಂಶ ಪ್ರಮಾಣ ಮತ್ತು ಜೀವನ ಗುಣಮಟ್ಟವನ್ನು ವೃದ್ಧಿಸುವುದನ್ನು ಮತ್ತು ಸಾರ್ವಜನಿಕ ಆರೋಗ್ಯದ ಸುಧಾರಣೆಯನ್ನು ತನ್ನ ಪ್ರಾಥಮಿಕ ಕರ್ತವ್ಯವೆಂದು ಪರಿಗಣಿಸಬೇಕು ಮತ್ತು ಮುಖ್ಯವಾಗಿ, ವೈದ್ಯಕೀಯ ಉದ್ದೇಶಗಳಿಗೆ ಹೊರತಾಗಿ, ಆರೋಗ್ಯಕ್ಕೆ ಅಪಾಯಕಾರಿ ಎನಿಸುವ ಮಾದಕ ಪಾನೀಯ ಮತ್ತು ದ್ರವ್ಯಗಳ ಸೇವನೆಯನ್ನು ನಿಷೇಧಿಸಲು ಸರ್ಕಾರವು ಪ್ರಯತ್ನಿಸಬೇಕು.”

ಆದರೆ ಇದನ್ನು ಸರ್ಕಾರದ ಮೇಲೆ ಹೇರುವಂತಿಲ್ಲ. ಏಕೆಂದರೆ ಇದು ನಿರ್ದೇಶಕ ತತ್ವವಾಗಿದೆ. ಆದರೆ ಅಖಿಲ ಭಾರತೀಯ ಶೋಷಿತ ಕರ್ಮಚಾರಿ ಸಂಘ v. ಭಾರತ ಕೇಂದ್ರ ಸರ್ಕಾರ 1981 AIR 298 ಮತ್ತು ಇತರರು 1987 AIR 990 - ಈ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು, ನಿರ್ದೇಶಕ ತತ್ವಗಳನ್ನು ದೇಶದ ಮೇಲೆ ಹೇರುವಂತಿಲ್ಲ, ಆದರೂ ಅವುಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದೆ. ಅಲ್ಲದೆ ಸರ್ಕಾರವು ಕೆಲವು ನಿರ್ದೇಶಕ ತತ್ವಗಳಿಗೆ ಬದ್ಧರಾಗಿರುವಂತೆ ಮಾಡಲು ಸರ್ವೋಚ್ಚ ನ್ಯಾಯಾಲಯಕ್ಕೆ ಪರ‍್ವ ನಿರ್ದೇಶನವಿದೆ ಎಂದು ಸಹ ಇದು ಹೇಳಿದೆ. ಅಲ್ಲದೆ, ಜಾರಿಗೊಳ್ಳಲು ಇರುವ ಮಿತಿಯಿಂದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದೇಶಕ ತತ್ವಗಳ ನಡುವಿನ ಸಮರಸದ ಅಂತರ್ ಸಂಬಂಧವನ್ನು, ಮುಖ್ಯವಾಗಿ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳಿಗೆ ಪೂರಕ ಮತ್ತು ಸಹಾಯಕ ಎಂದು ಸ್ಪಷ್ಟವಾಗಿ ನಿರೂಪಿಸುವಲ್ಲಿ ದೇಶದ ಪರಮೋಚ್ಛ ನ್ಯಾಯಾಲಯವು ಸಾಕಷ್ಟು ಮುಂದೆ ಸಾಗಿರುವುದನ್ನು ರಾಜ್ಯ ನೀತಿಯ ನಿರ್ದೇಶಕ ತತ್ವಗಳ ವ್ಯಾಪ್ತಿ ಮತ್ತು ಉದ್ದೇಶದ ಕುರಿತ ನ್ಯಾಯಶಾಸ್ತ್ರೀಯ ಪ್ರಗತಿಯು ದಾಖಲಿಸಿದೆ.

ಅಲ್ಲದೆ, ಭಾರತದ ಸರ್ವೋಚ್ಚ ನ್ಯಾಯಾಲಯವು, ದೇಶದ ಅನೇಕ ಉಚ್ಛ ನ್ಯಾಯಾಲಯಗಳೊಂದಿಗೆ ಸೇರಿ, ಸಂವಿಧಾನದ ಅನುಚ್ಛೇದ 21ರಲ್ಲಿ ಪ್ರತಿಷ್ಠಾಪಿಸಿರುವ ಬದುಕಿನ ಹಕ್ಕಿನ ಅಡಿಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಹಕ್ಕುಗಳ ವರ್ಗೀಕರಣವನ್ನು ಮಾಡಲು ಯತ್ನಿಸಿದೆ.

ಬಂಗಲ್ ಖೇತ್ ಮಜ್ದೂರ್ ಸಮಿತಿ ಮತ್ತು ಇತರರು VS ಪಶ್ಚಿಮ ಬಂಗಾಳ ಸರ್ಕಾರ ಮತ್ತು ಇತರರು 1196 (4) SCC 36 - ಈ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯವು ಈ ರೀತಿ ಹೇಳಿದೆ: “ಅನುಚ್ಛೇದ 21, ಪ್ರತಿ ವ್ಯಕ್ತಿಯ ಬದುಕುವ ಹಕ್ಕನ್ನು ಕಾಪಾಡುವ ಜವಾಬ್ದಾರಿಯನ್ನು ಸರ್ಕಾರದ ಹೆಗಲಿಗೆ ಹೇರುತ್ತದೆ. ಹೀಗಾಗಿ, ಮಾನವನ ಬದುಕನ್ನು ಕಾಪಾಡುವುದು ಅತ್ಯಂತ ಪ್ರಮುಖ ವಿಚಾರವಾಗಿದೆ. ಸರ್ಕಾರವು ನಡೆಸುವ ಸರ್ಕಾರಿ ಆಸ್ಪತ್ರೆಗಳು ಮತ್ತು ಅಲ್ಲಿ ನಿಯೋಜಿಸಲಾಗಿರುವ ವೈದ್ಯಕೀಯ ಅಧಿಕಾರಿಗಳು, ಮಾನವನ ಜೀವವನ್ನು ಉಳಿಸುವುದಕ್ಕಾಗಿ ವೈದ್ಯಕೀಯ ನೆರವನ್ನು ನೀಡಲು ಜವಾಬ್ದಾರರಾಗಿದ್ದಾರೆ. ಚಿಕಿತ್ಸೆಯು ಅಗತ್ಯವಿರುವ ವ್ಯಕ್ತಿಗೆ ಕ್ಲಪ್ತ ಕಾಲದಲ್ಲಿ ವೈದ್ಯಕೀಯ ನೆರವು ಒದಗಿಸಲು ಸರ್ಕಾರಿ ಆಸ್ಪತ್ರೆಯೊಂದು ವಿಫಲವಾದಲ್ಲಿ, ಇದು ಅನುಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಲಾದ ಬದುಕಿನ ಹಕ್ಕಿನ ಉಲ್ಲಂಘನೆ ಎನಿಸುತ್ತದೆ.”

ಪಂಜಾಬ್ ಸರ್ಕಾರ v. ರಾಮ್ ಲುಭಯಾ ಬಗ್ಗಾ (1998) 4 SCC 117 - ಈ ಪ್ರಕರಣದಲ್ಲಿ ಆರೋಗ್ಯ ಸೇವೆಯ ವಿಚಾರಕ್ಕೆ ಇನ್ನಷ್ಟು ಒತ್ತು ನೀಡಲಾಗಿದೆ. ಭಾರತದ ಸಂವಿಧಾನದ ಅನುಚ್ಛೇದ 47ರ ಜೊತೆ ಗುರುತಿಸಿಕೊಳ್ಳುವ ಅನುಚ್ಛೇದ 21ರ ಅಡಿಯಲ್ಲಿ, ಪ್ರಾಥಮಿಕ ಜವಾಬ್ದಾರಿ ಎನಿಸಿರುವ ಆರೋಗ್ಯ ಸೇವೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಆರೋಗ್ಯದ ಸಾಮಾನ್ಯ ಹಕ್ಕಿನ ವ್ಯಾಪ್ತಿಯ ಹೊರಗೆ, ಕಾರ್ಮಿಕರ ಆರೋಗ್ಯದ ಹಕ್ಕುಗಳಿಗೆ ಸಂಬಂಧಿಸಿದಂತೆಯೂ ಸರ್ವೋಚ್ಚ ನ್ಯಾಯಾಲಯವು ತರ‍್ಪನ್ನು ನೀಡಿದೆ. ವಿನ್ಸೆಂಟ್ (ಮೇಲಿನ)ನಲ್ಲಿ, ಈ ನ್ಯಾಯಾಲಯವು, ಅನುಚ್ಛೇದ 21ರ ಅಡಿ ಬರುವ ಬದುಕಿನ ರ‍್ಥ ಮತ್ತು ಅದರ ಆಧಾರದಲ್ಲಿಯೇ ಈ ರೀತಿ ತರ‍್ಪು ನೀಡಿದೆ: “ಹೀಗಾಗಿ ಸಂವಿಧಾನದ ಅನುಚ್ಛೇದಗಳು 39(C), 41, ಮತ್ತು 43ರ ಜೊತೆ ಗುರುತಿಸಿಕೊಂಡಿರುವ ಅನುಚ್ಛೇದ 21ರ ಅಡಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಯ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕು ಮತ್ತು ಕೆಲಸಗಾರರ ಬದುಕನ್ನು, ಮಾನವ ಗೌರವದೊಂದಿಗೆ ಅರ್ಥಪೂರ್ಣ ಮತ್ತು ಉದ್ದೇಶವುಳ್ಳ ಬದುಕಾಗಿ ಮಾಡಬೇಕು. ಬದುಕಿನ ಹಕ್ಕು, ಆರೋಗ್ಯದ ರಕ್ಷಣೆಯನ್ನು ಒಳಗೊಂಡಿದೆ ಹಾಗೂ ಕೆಲಸಗಾರನ ಶಕ್ತಿಯು, ಮಾನವ ಗೌರವದೊಂದಿಗೆ ವ್ಯಕ್ತಿಯೊಬ್ಬ ಜೀವಿಸಲು ಬೇಕಾದ ಕನಿಷ್ಠ ಅಗತ್ಯತೆಯಾಗಿದೆ.”

ಸಿ.ಇ.ಎಸ್.ಇ ಲಿಮಿಟೆಡ್ VS ಸುಭಾಶ್ಚಂದ್ರ ಬೋಸ್ 1992 AIR 573 ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯವು ಈ ರೀತಿ ಹೇಳಿದೆ: “ಜೀವನೋಪಾಯದ ಹಕ್ಕು, ಅನುಚ್ಛೇದ 21ರಲ್ಲಿ ಖಾತರಿಪಡಿಸಿರುವ ಬದುಕಿನ ಹಕ್ಕಿನಿಂದ ಉದ್ಭವಿಸುತ್ತದೆ. ಕಾರ್ಮಿಕರೊಬ್ಬರ ಆರೋಗ್ಯ ಮತ್ತು ಶಕ್ತಿಯು ಬದುಕಿನ ಹಕ್ಕಿನ ಸಮಗ್ರ ಭಾಗವೆನಿಸಿದೆ.”

ಅಲ್ಲದೆ, ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಮತ್ತು ಇತರರು ಗಿ ಭಾರತ ಸರ್ಕಾರ 1995 AIR 922 – ಈ ಪ್ರಕರಣದಲ್ಲಿ, ಈ ಕೆಳಗಿನ ತರ‍್ಪಿನ ಮೂಲಕ ಈ ಅಂಶಕ್ಕೆ ಇನ್ನಷ್ಟು ಬಲ ನೀಡಲಾಗಿದೆ. “ಹೀಗಾಗಿ, ಆರೋಗ್ಯ ಮತ್ತು ವೈದ್ಯಕೀಯ ಸೇವೆಯ ಹಕ್ಕು, ಸಂವಿಧಾನದ ಅನುಚ್ಛೇದಗಳು 39(C), 41 ಮತ್ತು 43ರ ಜೊತೆ ಗುರುತಿಸಿಕೊಂಡಿರುವ ಅನುಚ್ಛೇದ 21ರ ಅಡಿ ಮೂಲಭೂತ ಹಕ್ಕು ಎನಿಸಿದೆ ಮತ್ತು ಕೆಲಸಗಾರನ ಬದುಕನ್ನು ಮಾನವ ಗೌರವದೊಂದಿಗೆ ಅರ್ಥಪೂರ್ಣ ಮತ್ತು ಉದ್ದೇಶವುಳ್ಳ ಬದುಕಾಗಿ ಮಾಡಬೇಕು.”

ಮೇಲಿನ ಉದಾಹರಣೆಗಳಲ್ಲಿ ನೋಡಿದಂತೆ, ಅನುಚ್ಛೇದ 21ರ ಅಡಿಯಲ್ಲಿ ಬರುವ ಬದುಕುವ ಹಕ್ಕು, ಆರೋಗ್ಯದ ಮತ್ತು ವೈದ್ಯಕೀಯ ಸೇವೆ/ಆರೋಗ್ಯ ಸೇವೆಯ ಹಕ್ಕನ್ನು ಒಳಗೊಂಡಿದೆ (ಮುಖ್ಯವಾಗಿ ಕೆಲಸಗಾರರ ವಿಚಾರದಲ್ಲಿ) ಎಂದು ಬಲವಾಗಿ ವಾದಿಸಲು ಸಾಕಷ್ಟು ಆಧಾರಗಳಿವೆ. ಕ್ರಮ ಕೈಗೊಳ್ಳುವಲ್ಲಿ ಉಂಟಾಗುವ ವಿಳಂಬವು, ಸೂಕ್ತ ಸಾಮರ್ಥ್ಯದ ಕೊರತೆ ಮತ್ತು ಈಗಿನ ಹಾಗೂ ಹಿಂದೆ ಬಂದು ಹೋದ ಪಿಡುಗುಗಳ ನಿವಾರಣೆಗೆ ಸೂಕ್ತ ಹೂಡಿಕೆಯ ಕೊರತೆಯು ಭಾರತದ ನಾಗರಿಕರ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಎನಿಸುತ್ತದೆ. ಜೊತೆಗೆ, ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರನ್ನು ನೋಡಿಕೊಂಡ ರೀತಿಯು, ಸರ್ವೋಚ್ಚ ನ್ಯಾಯಾಲಯದ ಪ್ರಕಾರ ಅವರು ಮೂಲಭೂತ ಹಕ್ಕುಗಳಾಗಿ ಪಡೆಯಬೇಕಿದ್ದ ಆರೋಗ್ಯ ಮತ್ತು ಭದ್ರತೆಯ ಉಲ್ಲಂಘನೆಯಾಗಿದೆ.

ಸಾರ್ವಜನಿಕ ಆರೋಗ್ಯ ಸೌಕರ್ಯಗಳ ನಿರ್ಲಕ್ಷ್ಯ

ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ವಿಚಾರವು ದೀರ್ಘ ಕಾಲದಿಂದ ನಿರ್ಲಕ್ಷ್ಯ ಮತ್ತು ಹಣಕಾಸಿನ ಕೊರತೆಗೆ ಒಳಗಾಗಿದೆ. ಭಾರತಕ್ಕೆ ಸ್ವಾತಂತ್ರ‍್ಯ ದೊರೆತ ಸಂದರ್ಭದಲ್ಲಿ 39 ಕೋಟಿಯಷ್ಟು ಇದ್ದ ಜನಸಂಖ್ಯೆಯು ಇಂದು 135 ಕೋಟಿಗೆ ತಲುಪಿದ್ದರೂ, ಇದೇ ಪ್ರಮಾಣದಲ್ಲಿ ಆರೋಗ್ಯ ಸೇವೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಮ್ಮ ಆಳುವ ವರ್ಗವು ಆಸಕ್ತಿ ತೋರಿಸಿಲ್ಲ. ಮುಖ್ಯವಾಗಿ ಸ್ವಾತಂತ್ರ‍್ಯಾನಂತರದ ಗ್ರಾಮೀಣ ಭಾರತದಲ್ಲಿ ಆರೋಗ್ಯ ಕ್ಷೇತ್ರವು ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ದೇಶವೊಂದರ ಸರ್ವತೋಮುಖ ಅಭಿವೃದ್ಧಿಗೆ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅಗತ್ಯವಿದೆ ಎಂದು ಆರಂಭದಲ್ಲಿಯೇ ಗುರುತಿಸಿದ್ದರೂ ಈ ನಿಟ್ಟಿನಲ್ಲಿ ಕೆಲಸ ನಡೆದಿಲ್ಲ. ಈ ನಿಟ್ಟಿನಲ್ಲಿ 1946ರ ಭೋರೆ ವರದಿಯು, ಇಂಗ್ಲೆಂಡ್ ನ ಆ ಕಾಲದ ಹೊಸ ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಸೂಕ್ತ ಉದಾಹರಣೆಯನ್ನಾಗಿ ಪರಿಗಣಿಸಿತ್ತು ಮತ್ತು ಈ ಕೆಳಗಿನ ಶಬ್ದಗಳಲ್ಲಿ ಇದರ ಅಗತ್ಯತೆಯನ್ನು ಒತ್ತಿ ಹೇಳಿತ್ತು:

“ಇದೊಂದು ಆದರ್ಶವಾಗಿದ್ದು ನಮ್ಮ ದೇಶವು ಈ ಮೂಲಕ ನಮ್ಮೆದುರೇ ಉನ್ನತ ಸ್ಥಾನಕ್ಕೆ ತಲುಪಬಹುದಾಗಿದೆ, ಆದರೆ ಆಲಸ್ಯದ ಪ್ರವೃತ್ತಿ ಮತ್ತು ಪರಿಸ್ಥಿತಿಯು ಅನುಕೂಲಕರವಾಗಿದ್ದಾಗ ಮಾತ್ರ ದೂರದ ನೆರಳಿನ ವಸ್ತುವಿನಂತೆ ಇದನ್ನು ಪರಿಗಣಿಸಬಾರದು, ಬದಲಾಗಿ ಆದಷ್ಟು ಬೇಗನೇ ಸಾಧಿಸಬೇಕಾದ ನಿರ್ದಿಷ್ಟ ಗುರಿಯಾಗಿ ಇದನ್ನು ನೋಡಬೇಕು; ಇದು ದೇಶದ ಪ್ರಗತಿಗೆ ಅತ್ಯಗತ್ಯವಾಗಿರುವ ಕಾರಣ, ಈ ದೆಸೆಯಲ್ಲಿ ದೇಶದ ಆರೋಗ್ಯ ಮತ್ತು ಕಲ್ಯಾಣದ ಕುರಿತು ಕಾಳಜಿ ಇರುವ ಎಲ್ಲಾ ಪಾಲುದಾರರ ವತಿಯಿಂದ ಜಗ್ಗದ, ಕೇಂದ್ರೀಕೃತವಾದ ಮತ್ತು ನಿರಂತರವೆನಿಸುವ ಪ್ರಯತ್ನದ ಅಗತ್ಯವಿದೆ.”

ಇದರ ಹೊರತಾಗಿಯೂ ಭಾರತದಲ್ಲಿ ಆರೋಗ್ಯ ಸೇವೆಯ ಮೇಲೆ ಮಾಡಿರುವ ಸಾರ್ವಜನಿಕ ಖರ್ಚಿನ ಪ್ರಮಾಣ ತೀರಾ ಕಡಿಮೆ. ಅಲ್ಲದೆ, ಒಟ್ಟು ಆರೋಗ್ಯ ಸೇವೆಯ ಮೇಲೆ ಮಾಡಿರುವ 33 ಶೇಕಡಾದಷ್ಟು ಖರ್ಚು, ಜಾಗತಿಕ ಮಟ್ಟದಲ್ಲಿ ತೀರಾ ಕಡಿಮೆ ಪ್ರಮಾಣ ಎನಿಸಿದೆ. ಆರೋಗ್ಯದ ಮೇಲೆ ಮಾಡಿರುವ ಸಾರ್ವಜನಿಕ ಖರ್ಚಿನ ವಿಚಾರದಲ್ಲಿ, 191 ರಾಷ್ಟ್ರಗಳ ಪೈಕಿ ಭಾರತವು 184ನೇ ಸ್ಥಾನವನ್ನು ಹೊಂದಿದೆ. ಭಾರತದ ಸುಮಾರು ಕಾಲು ಭಾಗದಷ್ಟು ಜನಸಂಖ್ಯೆಯು ಪ್ರತೀ ದಿನ ಒಂದು ಡಾಲರ್ ಗಿಂತ ಕಡಿಮೆ ಮೊತ್ತದಲ್ಲಿ ಜೀವನ ಸಾಗಿಸುತ್ತಿದೆ. ಸುಮಾರು 77 ಶೇಕಡಾದಷ್ಟು ಜನರು ಪ್ರತಿ ದಿನ 2 ಡಾಲರ್ ಗಿಂತ ಕಡಿಮೆ ಮೊತ್ತದಲ್ಲಿ ಬದುಕಬೇಕಾಗಿದೆ. ಅಲ್ಲದೆ ಪ್ರಪಂಚದ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ, ಭಾರತೀಯರು ತಮ್ಮ ಆರೋಗ್ಯ ಸೇವೆಗಾಗಿ ಗರಿಷ್ಠ ಪ್ರಮಾಣದ ಹಣವನ್ನು ತಮ್ಮ ಕಿಸೆಯಿಂದಲೇ ಖರ್ಚು ಮಾಡಬೇಕಿದೆ. ಆರೋಗ್ಯದ ಮೇಲೆ ಉಂಟಾಗುತ್ತಿರುವ ಒಟ್ಟು ಖರ್ಚಿನ ಪೈಕಿ 62.4%ರಷ್ಟು ಪ್ರಮಾಣವನ್ನು ಸಾರ್ವಜನಿಕರೇ ತಮ್ಮ ಕಿಸೆಯಿಂದ ಪಾವತಿಸಬೇಕು. ಇದರಲ್ಲಿ ಸರ್ಕಾರದ ಕೊಡುಗೆ 27% ಮಾತ್ರ. ಆದರೆ ಈ ದೇಶದ ತಲಾ ಜಿ.ಡಿ.ಪಿ.ಯು $6888 PPP ಆಗಿದ್ದು, ಬಹುಪಾಲು ಜನರು ಇಲ್ಲಿ ಇದಕ್ಕಿಂತ ಕಡಿಮೆ ಪ್ರಮಾಣದ ಮೊತ್ತದಲ್ಲಿ ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ 71ನೇ ಸಮೀಕ್ಷೆಯ ಪ್ರಕಾರ, ಆಸ್ಪತ್ರೆಗೆ ದಾಖಲಾದ ಪ್ರತಿ ಪ್ರಕರಣದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕ್ರಮವಾಗಿ ರೂ. 16,956 ಮತ್ತು ರೂ. 26,455 ನಷ್ಟು ಖರ್ಚು ಉಂಟಾಗುತ್ತದೆ.

ನಮ್ಮ ನೆರೆಯ ಪುಟ್ಟ ದ್ವೀಪರಾಷ್ಟ್ರವೆನಿಸಿರುವ ಶ್ರೀಲಂಕಾದಲ್ಲಿ ಆರೋಗ್ಯ ಸೇವೆಗಾಗಿ ಉಂಟಾಗುವ ಒಟ್ಟು ಖರ್ಚಿನಲ್ಲಿ ಜನರು ತಮ್ಮ ಕಿಸೆಯಿಂದ ಪಾವತಿಸುವ ಮೊತ್ತವು 49% ಆಗಿದ್ದರೆ, ಸರ್ಕಾರವು 43%ರಷ್ಟು ಮೊತ್ತವನ್ನು ಭರಿಸುತ್ತದೆ. ಶ್ರೀಲಂಕಾದ ಸಾಮಾನ್ಯ ಆರೋಗ್ಯ ಸ್ಥಿತಿ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇದು ಪ್ರತಿಫಲಿಸುತ್ತಿದೆ. ದಕ್ಷಿಣ ಏಷ್ಯಾದ ರಾಷ್ಟ್ರಗಳ ಮಾನವ ಅಭಿವೃದ್ಧಿ ಸೂಚ್ಯಂಕವು 0.607 ಆಗಿದ್ದರೆ, ಈ ದ್ವೀಪರಾಷ್ಟ್ರದ ಸೂಚ್ಯಂಕವು 0.757 ಆಗಿದೆ.

ವಿಸ್ತೃತವಾಗಿ ಹೇಳುವುದಾದರೆ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲು ಎರಡು ಮಾದರಿಗಳಿವೆ. ಮೊದಲನೆಯದು, ಅಮೆರಿಕದಲ್ಲಿರುವ ಖಾಸಗಿ ವಿಮೆ ಆಧರಿತ ಮಾದರಿ; ಎರಡನೆಯದು, ಯುರೋಪಿಯನ್ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ಒಲವು ತೋರಿರುವ ಸಾರ್ವಜನಿಕ ಹೂಡಿಕೆ ಆಧರಿತ ಮಾದರಿ.

ಶ್ರೀಲಂಕಾವು, ಸಾರ್ವತ್ರಿಕವಾಗಿ ದೊರೆಯುವಂತೆ ಮಾಡಿರುವ ಮತ್ತು ಉಚಿತ ಆರೋಗ್ಯ ಸೇವೆಯನ್ನು ಹೊಂದಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿಯೂ ಇದೇ ರೀತಿಯ ಮಾದರಿ ಇದೆ. ಕೂಡಲೇ ಪುಟಿದೇಳಬಲ್ಲ ಮತ್ತು ಅತ್ಯಾಧುನಿಕ ಆರೋಗ್ಯ ಸೇವೆ ವ್ಯವಸ್ಥೆ ಹೊಂದಿದ್ದ ಕಾರಣ, ಆರಂಭದಲ್ಲಿ ವ್ಯಾಪಕವಾಗಿ ಬಾಧಿಸಿದ ಕೋವಿಡ್ – 19 ಪಿಡುಗು ಇನ್ನಷ್ಟು ಹರಡುವುದನ್ನು ನಿಯಂತ್ರಿಸುವಲ್ಲಿ ಯುರೋಪಿಯನ್ ರಾಷ್ಟ್ರಗಳು ಯಶಸ್ವಿಯಾದವು. ಮುಂದೆ ವಿವರಿಸಿರುವಂತೆ, ಖಾಸಗಿ ವಿಮೆ ಆಧರಿತ ಮಾದರಿಗೆ ಹೋಲಿಸಿದಾಗ ಈ ದೇಶಗಳು ಆರೋಗ್ಯ ಸೇವೆ ಒದಗಿಸುವಲ್ಲಿ ಮೇಲುಗೈ ಸಾಧಿಸಿದವು.

ಇನ್ನೊಂದೆಡೆ, ಕೋವಿಡ್ – 19 ಪಿಡುಗು ಬಾಧಿಸುವ ಮೊದಲು ಸಹ, ಅಮೆರಿಕದಲ್ಲಿ ಚಾಲ್ತಿಯಲ್ಲಿರುವ ಖಾಸಗಿ ವಿಮೆ ಆಧರಿತ ಮಾದರಿಯು ತನ್ನ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿಲ್ಲ. ಉದಾಹರಣೆಗೆ, 1980ರಿಂದ 2016ರ ತನಕ, ಎಲ್ಲಾ ಕಾರಣಗಳಿಂದಾಗಿ ಉಂಟಾದ ಒಟ್ಟಾರೆ ಸಾವಿನ ಪ್ರಮಾಣದಲ್ಲಿ, ಇತರ ಸಮಾನ ರಾಷ್ಟ್ರಗಳಲ್ಲಿ 43%ದಷ್ಟು ಇಳಿಕೆ ಕಂಡುಬಂದರೆ ಅಮೆರಿಕದಲ್ಲಿ 30%ದಷ್ಟು ಮಾತ್ರ ಇಳಿಕೆಯಾಗಿದೆ. ಸಂಪತ್ತಿನ ಪ್ರಮಾಣ ಮತ್ತು ಆರ್ಥಿಕ ಏಳಿಗೆಯು, ಪ್ರಸವ ಸಂದರ್ಭದಲ್ಲಿ ಉಂಟಾಗುವ ತಾಯಿಯ ಮರಣ ಪ್ರಮಾಣದ ಇಳಿಕೆಯ ಜೊತೆ ಅತೀ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಆದರೆ ಇತರ ಸಮಾನ ರಾಷ್ಟ್ರಗಳಿಗೆ (1,00,000 ಸಜೀವ ಜನನಗಳಿಗೆ 4.4) ಹೋಲಿಸಿದರೆ, ಗರ್ಭಧಾರಣೆಗೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿ ಅಮೆರಿಕದ ದಾಖಲೆ (1,00,000 ಸಜೀವ ಜನನಗಳಿಗೆ 16.9) ತುಂಬಾ ಕಳಪೆ ಎನಿಸಿದೆ. ಈ ಬಾರಿ ಕೋವಿಡ್ – 19 ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಅಮೆರಿಕದ ವ್ಯವಸ್ಥೆಯು ಎಡವಿರುವುದು ಇದಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಆದರೆ ಸಂಕೀರ್ಣ ಆರ್ಥಿಕ ಮತ್ತು ರಾಜಕೀಯ ಅಂಶಗಳೂ ಇದರಲ್ಲಿ ಸೇರಿಕೊಂಡಿರುವುದರಿಂದ ನಿರ್ದಿಷ್ಟ ಕಾರಣದತ್ತ ಬೊಟ್ಟು ಮಾಡುವುದು ಸುಲಭದ ಕೆಲಸವಲ್ಲ. ಆದರೆ ತನ್ನ ಜಿ.ಡಿ.ಪಿ.ಯ 17 ಶೇಕಡಾದಷ್ಟು ಪಾಲನ್ನು ಅಮೆರಿಕವು ಸಾರ್ವಜನಿಕ ಆರೋಗ್ಯದ ಮೇಲೆ ಖರ್ಚು ಮಾಡುತ್ತದೆ ಎಂಬುದನ್ನು ನಾವು ಗಮನಿಸಬೇಕು.

ಈಗ ಭಾರತದ ಮೇಲೆ ಬೆಳಕು ಹರಿಸೋಣ. ಭೋರೆ ವರದಿಯು 1946ರಲ್ಲಿ ಶಿಫಾರಸು ಮಾಡಿದ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ ಸೇವೆ ವ್ಯವಸ್ಥೆಯನ್ನು ಭಾರತ ಸರ್ಕಾರವು ಪರಿಗಣಿಸಿತು ಹಾಗೂ ವಿವಿಧ ರಾಷ್ಟ್ರೀಯ ಆರೋಗ್ಯ ನೀತಿಗಳ ಮೂಲಕ ಇದನ್ನು ಜಾರಿಗೊಳಿಸಿತು ಹಾಗೂ ವಿವಿಧ ಉಪಕ್ರಮಗಳ ಮೂಲಕ ಇದರ ಜಾರಿಗೊಳಿಸುವಿಕೆಯನ್ನು ಖಾತರಿಪಡಿಸಿತು. ಉದಾಹರಣೆಗೆ, 2000ದ ಒಳಗೆ ಎಲ್ಲರಿಗೂ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು 1978ರಲ್ಲಿ ಪ್ರಾಥಮಿಕ ಆರೋಗ್ಯ ಕರ‍್ಯನೀತಿಯನ್ನು ಪ್ರತಿಪಾದಿಸಿತು. ಇದರ ಪರಿಣಾಮವಾಗಿ 1983ರಲ್ಲಿ ಭಾರತದಲ್ಲಿ ಮೊದಲ ರಾಷ್ಟ್ರೀಯ ಆರೋಗ್ಯ ನೀತಿಯನ್ನು ರೂಪಿಸಲಾಯಿತು. ಇದೇ ರೀತಿ, 2015ರೊಳಗೆ ಸಾಧಿಸಬೇಕಿದ್ದ ಸಹಸ್ರಮಾನ ಅಭಿವೃದ್ಧಿ ಉದ್ದೇಶಗಳಿಗೆ ಭಾರತವು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ. ಆದರೆ ಸಾರ್ವಜನಿಕ ಹೂಡಿಕೆಯಲ್ಲಿನ ಕಡಿತ ಮತ್ತು ನಿರಂತರ ನಿರ್ಲಕ್ಷ್ಯದ ಕಾರಣ ಸಾರ್ವತ್ರಿಕ ಉಚಿತ ಆರೋಗ್ಯ ಸೇವೆ ಒದಗಿಸುವಲ್ಲಿ ಈ ಮೇಲಿನ ಎಲ್ಲಾ ಪ್ರಯತ್ನಗಳಿಗೆ ಅಡ್ಡಿ ಉಂಟಾಗಿದೆ.

ಉಪಸಂಹಾರ

ಅಗತ್ಯ ನೀತಿ ರೂಪಿಸುವ ಪ್ರಕ್ರಿಯೆಯಲ್ಲೂ ಈ ನಿರ್ಲಕ್ಷ್ಯ ಕಂಡುಬಂದಿದೆ. ಭಾರತವು ಹೊಸ ಹಾಗೂ ನವೀಕೃತ ಫರ‍್ಮಸ್ಯುಟಿಕಲ್ ನೀತಿಯನ್ನು ಇನ್ನಷ್ಟೇ ಪಡೆಯಬೇಕಿದೆ. ಇದರ 2017ರ ಪುನರಾವೃತ್ತಿ ಕರಡು ಇನ್ನೂ ನೆನೆಗುದಿಗೆ ಬಿದ್ದಿದೆ. ಅಲ್ಲದೆ, 2017ರ ರಾಷ್ಟ್ರೀಯ ಆರೋಗ್ಯ ನೀತಿಯು, 2025ರ ಹೊತ್ತಿಗೆ ಆರೋಗ್ಯದ ಮೇಲಿನ ಹೂಡಿಕೆಯನ್ನು ಜಿ.ಡಿ.ಪಿ.ಯ 2.5%ಕ್ಕೆ ಏರಿಸಲು ಚಿಂತನೆ ನಡೆಸಿದ್ದರೂ, ಈ ದಿಸೆಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕಳೆದ ಬಾರಿ ಜಿ.ಡಿ.ಪಿ.ಯ 1.1% ಶೇಕಡಾದಷ್ಟು ಪ್ರಮಾಣವನ್ನು ಮಾತ್ರ ಆರೋಗ್ಯ ಸೇವೆಗಾಗಿ ಮೀಸಲಿಡಲಾಗಿದೆ.

ಪರಿಸ್ಥಿತಿ ಹೀಗಿರುವಾಗ, ವೈದ್ಯಕೀಯ ಕ್ಷೇತ್ರದಲ್ಲಿ ಸಾರ್ವಜನಿಕ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡುವ ಬದಲು, ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಖಾಸಗೀಕರಣವನ್ನು ಉತ್ತೇಜಿಸುವ ವರದಿಯೊಂದನ್ನು ನೀತಿ ಆಯೋಗವು ಕಳೆದ ವರ್ಷ ಹೊರತಂದಿದೆ. ಮೇಲೆ ಖರ್ಚಿಸಿರುವಂತೆ, ಸಾರ್ವಜನಿಕ ಮತ್ತು ಉಚಿತ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ಸಮಾನ ರಾಷ್ಟ್ರಗಳಿಗೆ ಹೋಲಿಸಿದಾಗ, ಅತ್ಯಧಿಕವಾಗಿ ಖಾಸಗೀಕರಣಕ್ಕೆ ಒಳಗಾಗಿರುವ ಅಮೆರಿಕದ ಆರೋಗ್ಯ ವ್ಯವಸ್ಥೆಯೂ ನಿರೀಕ್ಷಿತ ಫಲಿತಾಂಶವನ್ನು ನೀಡುವಲ್ಲಿ ಎಡವಿರುವುದನ್ನು ನಾವು ಗಮನಿಸಬಹುದು.

ಈ ಬಾರಿಯ ಕೋವಿಡ್ – 19 ಪಿಡುಗು, ಸಾರ್ವತ್ರಿಕವಾಗಿ ಲಭ್ಯ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಯ ಅಗತ್ಯತೆಯನ್ನು ಈ ಹಿಂದೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒತ್ತಿ ಹೇಳಿದೆ. ಪೋಲಿಯೋದಂತಹ ಪಿಡುಗನ್ನು ತೊಲಗಿಸಲು ಈ ಹಿಂದೆ ಪಟ್ಟ ಶ್ರಮ ಮತ್ತು ಕೇರಳ, ಗೋವಾ ಅಥವಾ ಛತ್ತೀಸ್ ಗಢದಲ್ಲಿ ಇರುವ ಯಶಸ್ವಿ ಆರೋಗ್ಯ ವ್ಯವಸ್ಥೆಯನ್ನು ಹೋಲುವ ಮಾದರಿಯನ್ನು ಅನುಸರಿಸಿ ಭಾರತದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕ್ರಿಯೆಯ ದೃಷ್ಟಿಕೋನವನ್ನು ತಮ್ಮದಾಗಿಸುವತ್ತ ಗಮನಹರಿಸಬೇಕಿದೆ. ಈ ವಿಚಾರವನ್ನು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ಆಗಾಗ್ಗೆ ಪುನರುಚ್ಛರಿಸಿರುವ ಸಾಂವಿಧಾನಿಕ ಜವಾಬ್ದಾರಿಯನ್ನು ಪರಿಗಣಿಸಿ, ದಶಕಗಳಿಂದ ಸಾರ್ವಜನಿಕ ಆರೋಗ್ಯದತ್ತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೋರಿರುವ ನಿರ್ಲಕ್ಷ್ಯವನ್ನು ಸರಿಪಡಿಸಿ, ಈ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ನೀಡಬೇಕಿದೆ.

ಜಸ್ಟಿಸ್ ವಿ. ಗೋಪಾಲ ಗೌಡ(ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರರು)/ ಗುಂಜನ್ ಜೆನಾ (ಸ್ವತಂತ್ರ ಕಾನೂನು ಸಂಶೋಧಕರು)

Click here to follow us on Facebook , Twitter, YouTube, Telegram

Pratidhvani
www.pratidhvani.com