ರಾಜಕಾರಣಿಗಳಿಗೇಕೆ ಸರ್ಕಾರಿ ಆಸ್ಪತ್ರೆಗಳೆಂದರೆ ಅಸಡ್ಡೆ?
ಅಭಿಮತ

ರಾಜಕಾರಣಿಗಳಿಗೇಕೆ ಸರ್ಕಾರಿ ಆಸ್ಪತ್ರೆಗಳೆಂದರೆ ಅಸಡ್ಡೆ?

ಒಂದು ವೇಳೆ ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆಯನ್ನು ಸರ್ಕಾರ ಒದಗಿಸಿದ್ದು ನಿಜವಾದಲ್ಲಿ, ಜನ ಪ್ರತಿನಿಧೀಗಳು ಕೂಡಾ ಅಲ್ಲಿಯೇ ಚಿಕಿತ್ಸೆ ಪಡೆಯಲು ಏನು ತೊಂದರೆ? ಎಂಬ ಪ್ರಶ್ನೆ ಇಂದು ಮತ ಹಾಕಿದವರು ಕೇಳುತ್ತಿದಾರೆ.

ಕೃಷ್ಣಮಣಿ

ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳು ಬಡವರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಬಡವರ ಪಾಲಿಗೆ ಆರೋಗ್ಯ ಕಾಪಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ಸರ್ಕಾರಿ ಆಸ್ಪತ್ರೆಗಳು. ಆದರೆ ಜನಪ್ರತಿನಿಧಿಗಳು ಮಾತ್ರ ಸರ್ಕಾರಿ ಆಸ್ಪತ್ರೆಗಳು ಎಂದರೆ ಮಾರುದ್ದ ಓಡಿ ಹೋಗುತ್ತಿದ್ದಾರೆ. ಅದರಲ್ಲೂ ಕರೋನಾ ಸೋಂಕಿಗೆ ತುತ್ತಾಗುತ್ತಿರುವ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಂದ ಹಿಡಿದು ವಿರೋಧ ಪಕ್ಷದ ನಾಯಕರ ವರೆಗೂ ಖಾಸಗೀ ಆಸ್ಪತ್ರೆಗಳಿಗೇ ಧಾವಿಸುತ್ತಿರುವುದು ಹಾಗೂ ಕೇಂದ್ರದ ಮಂತ್ರಿವರ್ಯರೂ ಕೂಡಾ ಖಾಸಗೀ ಆಸ್ಪತ್ರೆಗಳ ಮೊರೆ ಹೋಗುತ್ತಿರುವುದು ನಿಜಕ್ಕೂ ಪ್ರಶ್ನಾರ್ಥಕವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಕರೋನಾ ಸೋಂಕಿಗೆ ತುತ್ತಾಗಿದ್ದು, ಆ ಬಳಿಕ ಹರಿಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿರ್ಧಾರವನ್ನು ಕಾಂಗ್ರೆಸ್‌ ಸಂಸದ ಶಶಿ ತರೂರು ಪ್ರಶ್ನೆ ಮಾಡಿದ್ದಾರೆ. ಅಮಿತ್‌ ಷಾ ಯಾಕೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು ಆಗಲಿಲ್ಲ ಎಂದು ಟೀಕಿಸಿದ್ದಾರೆ. ಭಾನುವಾರದಿಂದ ಸೋಂಕಿನಿಂದ ಬಳಲುತ್ತಿರುವ ಅಮಿತ್‌ ಷಾ ಇನ್ನೂ ಕೂಡ ಚೇತರಿಕೆ ಕಂಡಿಲ್ಲ. ಈ ಬಗ್ಗೆ ಟ್ವೀಟ್‌ ಮಾಡಿರುವ ಶಶಿ ತರೂರು ನನಗೆ ಆಶ್ಚರ್ಯವಾಗುತ್ತಿದೆ. ಆರೋಗ್ಯ ಹದಗೆಟ್ಟಾಗ ಏಮ್ಸ್‌ ಆಸ್ಪತ್ರೆಯನ್ನು ಯಾಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂದಿದ್ದಾರೆ. ಸರ್ಕಾರಿ ಸಂಸ್ಥೆಗಳಲ್ಲಿ ದಾಖಲಾಗುವ ಮೂಲಕ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ರಾಷ್ಟ್ರ ನಾಯಕರಲ್ಲಿ ಕೇವಲ ಅಮಿತ್‌ ಶಾ ಅಷ್ಟೇ ಅಲ್ಲ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವ್ಹಾಣ್‌, ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಸೇರಿದಂತೆ ಇನ್ನೂ ಹಲವು ರಾಷ್ಟ್ರ ನಾಯಕರು ಕೂಡಾ ಖಾಸಗೀ ಆಸ್ಪತ್ರೆಗಳೇ ತಮಗೆ ಸೂಕ್ತ ಎಂದು ಅವುಗಳಲ್ಲೇ ದಾಖಲಾಗಿದ್ದಾರೆ.

ಇನ್ನು ರಾಜ್ಯದಲ್ಲಿ ಕರೋನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭಿಸುತ್ತಿದೆ. ರಾಜ್ಯದ ಪ್ರಮುಖ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ 19ಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ನಮ್ಮ ಸರ್ಕಾರಿ ವೈದ್ಯರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕರೋನಾ ವಾರಿಯರ್ಸ್ ಜನರ ಪ್ರಾಣ ಉಳಿಸಲು ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಸಿ ಎಂ ಬಿ ಎಸ್‌ ಯಡಿಯೂರಪ್ಪ ನೀಡಿದ್ದರು. ಆದರೆ, ಸ್ವತಃ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿ ಎಸ್ ಯಡಿಯೂರಪ್ಪನವರೇ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಯಾವ ಸಂದೇಶ ರವಾನಿಸಲು ಯತ್ನಿಸುತ್ತಿದ್ದಾರೆ ಎನ್ನುವ ಜಿಜ್ಞಾಸೆ ಮೂಡುವಂತೆ ಮಾಡಿದ್ದಾರೆ. ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಹಣವಿಲ್ಲದ ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದು ಎನ್ನುವ ಸಂದೇಶವೇ..? ಎನ್ನುವ ಪ್ರಶ್ನೆಗಳಿಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉತ್ತರಿಸಬೇಕಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಡಿಯೂರಪ್ಪನವರು ದಾಖಲಾಗಿರುವ ಆಸ್ಪತ್ರೆಯಲ್ಲಿಯೇ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೂಡಾ ದಾಖಲಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಕೂಡಾ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಏರಿಸುವ ಕ್ರಮಗಳನ್ನು ಕೈಗೊಂಡಿಲ್ಲವೇ? ಈಗ ಆಡಳಿತ ಪಕ್ಷದ ಕಾರ್ಯ ವೈಖರಿಯನ್ನು ಮಾತಿಗೆ ದೂರುವುದೇನೋ ಸರಿಯೆಂದು ಒಪ್ಪಿಕೊಳ್ಳಬಹುದು. ಆದರೆ, ತಾವು ಅಧಿಕಾರದಲ್ಲಿದ್ದಾಗ ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಿದ ಅಭಿವೃದ್ದಿಯನ್ನು ಜನರ ಮುಂದೆ ತೆರೆದಿಡಲು ಸಿದ್ದರಾಮಯ್ಯನವರಿಗೆ ಒಂದೊಳ್ಳೆಯ ಅವಕಾಶವಿತ್ತು. ಇದಕ್ಕೂ ಮಿಗಿಲಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಯಾವ ರೀತಿಯ ಚಿಕಿತ್ಸೆ ಸಿಗುತ್ತಿದೆ ಎಂಬುದರ ಕುರಿತು ಸ್ಪಷ್ಟವಾದ ಚಿತ್ರಣವೂ ಲಭಿಸುತ್ತಿತ್ತು. ಆದರೆ, ಹೀಗಾಗಲಿಲ್ಲ.

ಈ ರೀತಿ ಕೇಂದ್ರ ಹಾಗೂ ರಾಜ್ಯದ ನಾಯಕರು ಪದೇ ಪದೇ ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಮಾತ್ರ ಎಂಬ ಸಂದೇಶವನ್ನು ಸಾರುತ್ತಲೇ ಬಂದಿದ್ದಾರೆ. ಇದು ಕೇವಲ ಈಗಿನ ಪರಿಸ್ಥಿತಿಯಲ್ಲ. ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿಪಾಠ. ಒಂದು ವೇಳೆ ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆಯನ್ನು ಸರ್ಕಾರ ಒದಗಿಸಿದ್ದು ನಿಜವಾದಲ್ಲಿ, ಜನ ಪ್ರತಿನಿಧೀಗಳು ಕೂಡಾ ಅಲ್ಲಿಯೇ ಚಿಕಿತ್ಸೆ ಪಡೆಯಲು ಏನು ತೊಂದರೆ? ಎಂಬ ಪ್ರಶ್ನೆ ಇಂದು ಮತ ಹಾಕಿದವರು ಕೇಳುತ್ತಿದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com