ಆರೋಗ್ಯ ಕ್ಷೇತ್ರದ ರಾಷ್ಟ್ರೀಕರಣದ ಅಗತ್ಯತೆ: ಕೋವಿಡ್ ಕಲಿಸಿದ ಪಾಠ
ಅಭಿಮತ

ಆರೋಗ್ಯ ಕ್ಷೇತ್ರದ ರಾಷ್ಟ್ರೀಕರಣದ ಅಗತ್ಯತೆ: ಕೋವಿಡ್ ಕಲಿಸಿದ ಪಾಠ

ಈಗ ಕರೋನ ಮಹಾಮಾರಿ ದೇಶವನ್ನು ಆವರಿಸಿರುವಾಗ ಅರೋಗ್ಯ ಕ್ಷೇತ್ರವನ್ನು ತತ್ ಕ್ಷಣ ರಾಷ್ಟ್ರೀಕರಣಗೊಳಿಸುವುದು ಸಾದ್ಯವಾಗದ ಮಾತು. ಆದರೆ, ಹಂತ ಹಂತವಾಗಿ ಈ ಕುರಿತು ಹೆಜ್ಜೆ ಇಟ್ಟಲ್ಲಿ ಮುಂದೆ ಬರುವಂತಹ ಸಂಕಷ್ಟಗಳಿಗೆ ಸರ್ಕಾರವು ಖಾಸಗಿ ಆಸ್ಪತ್ರೆಗಳ ಬಳಿ ಅಂಗಲಾಚುವ ದುರ್ದಿನಗಳು ಬರಲಿಕ್ಕಿಲ್ಲ.

ಕೋವರ್ ಕೊಲ್ಲಿ ಇಂದ್ರೇಶ್

ವಿಶ್ವದ ಬಹುತೇಕ ಎಲ್ಲ ದೇಶಗಳೂ ಇಂದು ಕೋವಿಡ್ ೧೯ ಎಂಬ ಸಾಂಕ್ರಮಿಕ ರೋಗಕ್ಕೆ ಹೆದರಿ ಹೋಗಿವೆ. ವಿಶ್ವದ ಅತ್ಯಂತ ದೊಡ್ಡ ಆರ್ಥಿಕತೆ ಹೊಂದಿರುವ ಅಮೇರಿಕಾವೇ ತನ್ನಲ್ಲಿ ಅಗಿರುವ ಸಾವಿನ ಸಂಖ್ಯೆಗೆ ಬೆಚ್ಚಿ ಬಿದ್ದಿದೆ. ಎಲ್ಲ ದೇಶಗಳೂ ಸೋಂಕನ್ನು ತಡೆಯಲು ಅನೇಕ ಮಾರ್ಗೋಪಾಯಗಳನ್ನು ಅನುಸರಿಸುತ್ತಿವೆ. ಆದರೆ ಈ ರೀತಿಯ ಸಾಂಕ್ರಮಿಕ ಸೋಂಕು ಜಗತ್ತಿಗೆ ಬಂದಿರುವುದು ಇದೇ ಮೊದಲೇನಲ್ಲ ಎಂಬುವುದು ವಾಸ್ತವ. 1918ನೇ ಇಸವಿಯಲ್ಲಿ ಸ್ಪಾನಿಷ್ ಫ್ಲೂ ಎಂಬ ಸಾಂಕ್ರಮಿಕ ಜ್ವರಕ್ಕೆ ವಿಶ್ವಾದ್ಯಂತ 5 ಕೋಟಿ ಜನರು ಪ್ರಾಣ ತೆತ್ತಿದ್ದರು. ಆಗ ಸರ್ಕಾರಗಳು ಜನರನ್ನ ರೋಗ ಹರಡುವಿಕೆಗೆ ಕಾರಣ ಎಂದು ದೂಷಿಸಲಿಲ್ಲ. ಬದಲಿಗೆ ವಿವಿಧ ದೇಶಗಳ ಸರ್ಕಾರಗಳು ಜನತೆಗೆ ಆರೋಗ್ಯ ಸುರಕ್ಷೆಯನ್ನು ಒದಗಿಸಲು ಶ್ರಮಿಸಿದವು. ಇದರಲ್ಲಿ ಜನಸಂಖ್ಯಾ ಪ್ರಮಾಣದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು, ಆರೋಗ್ಯ ಸಚಿವಾಲಯಗಳ ರಚನೆ ಮತ್ತು ವೈದ್ಯಕೀಯ ದತ್ತಾಂಶಗಳ ವ್ಯವಸ್ಥಿತ ಸಂಗ್ರಹ ಸೇರಿವೆ.

ಈಗಿನ 2020 ನೇ ಇಸವಿಯಲ್ಲಿ ಕೂಡ ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಲ್ಲಿ ಒಂದು ಶತಮಾನದ ಹಿಂದೆ ನಮ್ಮಲ್ಲಿ ಅರೋಗ್ಯ ರಕ್ಷೆ ಕುರಿತು ತಂದ ಸುಧಾರಣೆಗಳನ್ನು ಈಗಲೂ ಜಾರಿಗೆ ತರಲು ಭಾರತಕ್ಕೆ ಅವಕಾಶವಿದೆ. ಕರೋನ ವೈರಸ್ ಸಾಂಕ್ರಾಮಿಕಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಗಳು ಭಾರತದ ಸಾರ್ವಜನಿಕ ಆರೋಗ್ಯದ ಆಡಳಿತದಲ್ಲಿ ಮೂಲಭೂತ ದೋಷಗಳನ್ನು ಪ್ರಶ್ನಿಸಿವೆ.

ಸಾರ್ವಜನಿಕ ಆರೋಗ್ಯವನ್ನು ಏಕಕಾಲೀನ ಪಟ್ಟಿಗೆ ಸರಿಸುವುದು ಇಂದಿನ ಆದ್ಯತೆಯ ಆಗತ್ಯವಾಗಿದೆ. ಆದರೆ ಈಗ ಕರೋನ ಮಹಾಮಾರಿ ದೇಶವನ್ನು ಆವರಿಸಿರುವಾಗ ಅರೋಗ್ಯ ಕ್ಷೇತ್ರವನ್ನು ತತ್ ಕ್ಷಣ ರಾಷ್ಟ್ರೀಕರಣಗೊಳಿಸುವುದು ಸಾದ್ಯವಾಗದ ಮಾತು. ಆದರೆ, ಹಂತ ಹಂತವಾಗಿ ಈ ಕುರಿತು ಹೆಜ್ಜೆ ಇಟ್ಟಲ್ಲಿ ಮುಂದೆ ಬರುವಂತಹ ಸಂಕಷ್ಟಗಳಿಗೆ ಸರ್ಕಾರವು ಖಾಸಗಿ ಆಸ್ಪತ್ರೆಗಳ ಬಳಿ ಅಂಗಲಾಚುವ ದುರ್ದಿನಗಳು ಬರಲಿಕ್ಕಿಲ್ಲ.

ಈಗ ಸದ್ಯಕ್ಕೆ ಕೇಂದ್ರ ಸರ್ಕಾರ ಮಾಡಬಹುದಾದದ್ದು ಏನೆಂದರೆ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಬೇಕಿದೆ. ಅಷ್ಟೇ ಅಲ್ಲ ಈಗಾಗಲೇ ಕೇಂದ್ರ ತಂಡವು ವಿವಿಧ ರಾಜ್ಯಗಳ ಅರೋಗ್ಯ ಕ್ಷೇತ್ರದ ಬೆಳವಣಿಗೆ ಮತ್ತು ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸುತಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ನಿತ್ಯ ವರದಿ ತರಿಸಿಕೊಳ್ಳುತಿದ್ದು ವಿವಿಧ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಲಾಕ್ ಡೌನ್ ಮತ್ತು ಸೀಲ್ ಡೌನ್ ಮಾಡಲು ಸ್ಪಷ್ಟ ನಿರ್ದೇಶನಗಳನ್ನು ಕೊಡಬೇಕಿದೆ. ಈಗ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಮಾಡುವುದಕ್ಕೂ ಕೂಡ ಉದ್ಯಮಿಗಳು, ರಾಜಕಾರಣಿಗಳು ಪ್ರಭಾವ ಬೀರುತಿದ್ದು ಕೇಂದ್ರವೇ ಇದನ್ನು ನಿರ್ವಹಿಸಿದರೆ ಸ್ಥಳೀಯ ಲಾಬಿ, ಪ್ರಭಾವಕ್ಕೆ ಆಸ್ಪದವೇ ಇರುವುದಿಲ್ಲ. ಕೋವಿಡ್ 19 ಪ್ರಸರಣದ ನಂತರ ಅರೋಗ್ಯ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡುವ ಕುರಿತು ಕೆಲ ದೇಶಗಳಲ್ಲಿ ಚರ್ಚೆಯೂ ನಡೆದಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಕರೋನ ವೈರಸ್ ಸೋಂಕು ಹರಡತೊಡಗಿರುವಂತೆ ಆಸ್ಪತ್ರೆಗೆ ದಾಖಲಾಗುವ ಸೋಂಕು ಪೀಡಿತರ ಸಂಖ್ಯೆಯೂ ಕೂಡ ದ್ವಿಗುಣಗೊಂಡಿತು. ಆದರೆ ದೆಹಲಿ ಅಥವಾ ಬೆಂಗಳೂರೇ ಆಗಲಿ ಅಲ್ಲಿನ ಸರ್ಕಾರಿ ಆಸ್ಪತ್ರೆಗಳ ಕಳಪೆ ಸೇವೆ ಬಗ್ಗೆ ಮಾಧ್ಯಮಗಳ ವರದಿಗಳು ಎಲ್ಲವನ್ನು ಬಿಚ್ಚಿಟ್ಟಿವೆ. ಬೆಂಗಳೂರಿನಲ್ಲಿ ಖಾಸಗೀ ಆಸ್ಪತ್ರೆಗಳೂ ಕರೋನ ವಿರುದ್ದ ಹೋರಾಟದಲ್ಲಿ ಕೈ ಜೋಡಿಸಿವೆ ಎಂದು ಸ್ವತಃ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಅಲ್ಲದೆ 10 ಸಾವಿರ ಹಾಸಿಗೆಗಳು ಈಗಲೂ ರೋಗಿಗಳ ಸೇವೆಗೆ ಲಭ್ಯವಿದೆ ಎಂದು ಹೇಳಿಕೊಂಡಿದ್ದರು. ಆದರೆ ಟಿವಿ ಮಾಧ್ಯಮಗಳು ಕುಟುಕು ಕಾರ್ಯಾಚರಣೆ ನಡೆಸಿದಾಗ ಯಾವುದೇ ಖಾಸಗೀ ಆಸ್ಪತ್ರೆಯವರೂ ರೋಗಿಗಳನ್ನು ಸೇರಿಸಿಕೊಳ್ಳಲು ಸಿದ್ದರಿರಲಿಲ್ಲ. ಅಷ್ಟೇ ಅಲ್ಲ ದೂರವಾಣಿ ಕರೆಗಳಿಗೆ ಬೆಡ್ ಖಾಲಿ ಇಲ್ಲ ಎಂದೇ ಹೇಳಿದರು.

ಇದೀಗ ಮಂಗಳವಾರ ಪುನಃ ಮುಖ್ಯ ಮಂತ್ರಿಗಳು ಖಾಸಗೀ ಆಸ್ಪತ್ರೆಗಳ ಸಂಘದವರೊಂದಿಗೆ ಸಭೆ ನಡೆಸಿ ಖಾಸಗೀ ಅಸ್ಪತ್ರೆಗಳಲ್ಲಿ ಈಗಲೂ ಮೂರು ಸಾವಿರ ಹಾಸಿಗೆಗಳು ಖಾಲಿ ಇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಕೋವಿಡ್ 19 ಸೋಂಕು ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವ ದರ 2220 ರೂಪಾಯಿಗಳಾಗಿದ್ದ ಖಾಸಗೀ ಆಸ್ಪತ್ರೆಗಳು ಇದಕ್ಕೆ 6000 ರೂಪಾಯಿಗಳ ವರೆಗೂ ದರ ವಿಧಿಸುತ್ತಿವೆ. ಕೆಲವು ಆಸ್ಪತ್ರೆಗಳಿಗೆ ಇದೇ ಕಾರಣಕ್ಕೆ ಅರೋಗ್ಯ ಇಲಾಖೆ ನೋಟೀಸ್ ಕೂಡ ನೀಡಿದೆ. ಇದೇ ಸ್ಥಿತಿ ದೆಹಲಿಯ ಮತ್ತು ಮುಂಬೈನ ಖಾಸಗೀ ಅಸ್ಪತ್ರೆಗಳಲ್ಲಿಯೂ ಇದೆ. ಈ ವೈರಸ್ ಸಾಂಕ್ರಾಮಿಕವು ಮೂಲಭೂತ ದೌರ್ಬಲ್ಯತೆಗಳನ್ನು ಬಹಿರಂಗಪಡಿಸಿದೆ.

ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ನಿಂತಿರುವ ಪುಟ್ಟ ರಾಜ್ಯ ಕೇರಳ ಸರ್ಕಾರವು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಔಷಧಾಲಯಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಿಸಲು ವಿಶೇಷ ಅಧಿಕಾರವನ್ನು ಸ್ಥಳಿಯ ಗ್ರಾಮ ಪಂಚಾಯತ್ ಗಳಿಗೇ ನೀಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಲಾದರೂ ಎಚ್ಚತ್ತುಕೊಂಡು ಆರೋಗ್ಯ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಸಿದೆ. ಇದರಿಂದ ಜನತೆಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗಲಿದೆ. ಆದರೆ ಈಗಿನ ಕೇಂಧ್ರ ಸರ್ಕಾರ ಬಹುತೇಕ ಕ್ಷೇತ್ರಗಳಲ್ಲಿ ಖಾಸಗೀಕರಣವನ್ನು ಹೇರುತ್ತಿದೆ. ಅದು ಸರ್ಕಾರಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಕೋಟ್ಯಾಂತರ ರೂಪಾಯಿಗಳ ಷೇರುಗಳ ಬಂಡವಾಳದ ಹಿಂತೆಗೆತ ಆಗಿರಬಹುದು. ಏರ್ ಇಂಡಿಯಾ ಮಾರಾಟ ಆಗಿರಬಹುದು ಅಥವಾ ಇತ್ತೀಚೆಗೆ ಪ್ರಕಟಿಸಿದ ರೈಲು ಗಳ ಖಾಸಗೀಕರಣ ಅಗಿರಬಹುದು. ಇದು ಎಲ್ಲವೂ ಕೇಂದ್ರ ಸರ್ಕಾರವು ಲಾಭಯುಕ್ತ ಸಂಸ್ಥೆಗಳನ್ನೂ ಖಾಸಗೀಕರಣ ಮಾಡುವಲ್ಲಿ ಅಮಿತಾಸಕ್ತಿಯನ್ನು ಎತ್ತಿ ತೋರಿಸುತ್ತಿದೆ. ಅದೇ ರೀತೀ ಆರೋಗ್ಯ ಕ್ಷೇತ್ರವನ್ನೂ ಕೇಂದ್ರದ ಅಧೀನದಲ್ಲಿರುವ ಆಸ್ಪತ್ರೆಗಳನ್ನೂ ಖಾಸಗೀಕರಣಗೊಳಿಸಲು ಹೊರಟರೆ ಪ್ರತಿಷ್ಟಿತ ಆಸ್ಪತ್ರೆಗಳಾದ ಏಮ್ಸ್, ಕಿದ್ವಾಯಿ, ಜಯದೇವ ಮುಂತಾದ ಆಸ್ಪತ್ರೆಗಳು ಖಾಸಗಿಯವರ ಪಾಲಾಗಬಹುದು. ಹಾಗಾಗಿ ಜನಪರ ಸರ್ಕಾರಗಳು ಈ ದಿಸೆಯಲ್ಲಿ ಆಲೋಚಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಜನತೆಯ ಆರೋಗ್ಯ ರಕ್ಷಿಸಬಹುದು.

Click here to follow us on Facebook , Twitter, YouTube, Telegram

Pratidhvani
www.pratidhvani.com