ರಷ್ಯಾ ಚುನಾವಣೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಸರ್ವಾಧಿಕಾರಿ ಮಾದರಿ
ಅಭಿಮತ

ರಷ್ಯಾ ಚುನಾವಣೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಸರ್ವಾಧಿಕಾರಿ ಮಾದರಿ

ವ್ಲಾದಿಮಿರ್ ಪುಟಿನ್ ತಾನು ಅಧಿಕಾರ ಹಿಡಿಯಲೇಬೇಕು ಎಂಬ ಏಕೈಕ ಉದ್ದೇಶದಿಂದ ರಷ್ಯಾ ಸಂವಿಧಾನಕ್ಕೆ ಒಂದೇ ಏಟಿಗೆ ಇನ್ನೂರಕ್ಕೂ ಹೆಚ್ಚು ತಿದ್ದುಪಡಿಗಳನ್ನು ತಂದಿದ್ದಾರೆ. ಆದರೆ ಸಂವಿಧಾನ ತಿದ್ದುಪಡಿಯಲ್ಲಿ ತನ್ನ ಅಧಿಕಾರಾವಧಿ ವಿಸ್ತರಿಸುವ ವಿಷಯ ಹೆಚ್ಚು ಚರ್ಚೆಗೆ ಬಾರದಂತೆ ನೋಡಿಕೊಂಡಿದ್ದಾರೆ. ಬದಲಿಗೆ ರಷ್ಯಾ ಜನರ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿದ್ದಾರೆ.

ಯದುನಂದನ

ಕರೋನಾ ಸುದ್ದಿಗಳ ಹಾವಳಿ ನಡುವೆ ವ್ಲಾದಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗಲಿಲ್ಲ. ದೊಡ್ಡ ಮಟ್ಟದಲ್ಲಿ ಚರ್ಚೆ ಆಗದಿರಲು ಭಾರತದ ಮುಖ್ಯ ವಾಹಿನಿಯ ಮನೋಧರ್ಮವೂ ಕಾರಣ. ಏಕೆಂದರೆ ಈ ವಿಷಯವನ್ನು ದೊಡ್ಡದಾಗಿ ಚರ್ಚೆ ಮಾಡಲು ಹೊರಟರೆ ದೇಶದೊಳಗಣ ಸರ್ವಾಧಿಕಾರಿ ಬಗ್ಗೆ ಕೂಡ ಮಾತನಾಡಬೇಕಾಗಿರುತ್ತಿತ್ತು. ನಮ್ಮ ದೇಶ ಮಾತ್ರವಲ್ಲ, ಜಗತ್ತಿನ ಇವತ್ತಿನ ಮುಂಚೂಣಿ ನಾಯಕರ ಬಗ್ಗೆ ಮತ್ತು ಅ ದೇಶಗಳ ಮತದಾರರ ಮನಸ್ಥಿತಿ ಬಗ್ಗೆ ಕೂಡ ಚರ್ಚೆ ಮಾಡಬೇಕಾಗುತ್ತಿತ್ತು.

ಇರಲಿ, ರಷ್ಯಾದಲ್ಲಿ ಈಗ ನಡೆದಿರುವುದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿತನದ ಪರಮಾವಧಿತನ. ಒಂದು ಕಾಲದಲ್ಲಿ ವ್ಯವಸ್ಥೆಯ ವಿರುದ್ಧ ಕ್ರಾಂತಿಯ ಕಹಳೆ ಊದಿದ್ದ ರಷ್ಯಾದ ಮಹಾ ಜನತೆ ಈಗ ವ್ಲಾದಿಮಿರ್ ಪುಟಿನ್ ಎಂಬ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ, ಅಧಿಕಾರದಾಹಿ ನಾಯಕನಿಗೆ ಜೈಕಾರ ಹಾಕಿದ್ದಾರೆ. ಹಾಗೆ ಜನವೇ ತನ್ನ ಅಧಿಕಾರವನ್ನು ಶಾಶ್ವತಗೊಳಿಸುವಂತೆ ವ್ಲಾದಿಮಿರ್ ಪುಟಿನ್ ಮಹಾನ್ ನಾಟಕ ಆಡಿದ್ದಾರೆ.

ವ್ಲಾದಿಮಿರ್ ಪುಟಿನ್ ಬರೊಬ್ಬರಿ ಇಪ್ಪತ್ತು ವರ್ಷಗಳ ಕಾಲ ರಷ್ಯಾದ ಚುಕ್ಕಾಣಿ ಹಿಡಿದಿದ್ದಾರೆ; ಅಧ್ಯಕ್ಷರಾಗಿ ಮತ್ತು ಪ್ರಧಾನಿಯಾಗಿ, ಪ್ರಧಾನಿಯಾಗಿದ್ದಾಗ ತಮ್ಮ ಕೈಗೊಂಬೆಯಾಗಿದ್ದವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2024ರವರೆಗಿನ‌ ಅವಧಿಗೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿ 2036ರವರೆಗೂ ಆಯ್ಕೆ ಆಗಿದ್ದಾರೆ‌. ತಲಾ ಆರು ವರ್ಷಗಳ ಇನ್ನೆರಡು ಅವಧಿಗೆ ಅಧ್ಯಕ್ಷರಾಗಿರುವುದು ಸಂವಿಧಾನವನ್ನು ಬುಡಮೇಲು ಮಾಡುವ ಮುಖಾಂತರ.

ವ್ಲಾದಿಮಿರ್ ಪುಟಿನ್ ತಾನು ಅಧಿಕಾರ ಹಿಡಿಯಲೇಬೇಕು ಎಂಬ ಏಕೈಕ ಉದ್ದೇಶದಿಂದ ರಷ್ಯಾ ಸಂವಿಧಾನಕ್ಕೆ ಒಂದೇ ಏಟಿಗೆ ಇನ್ನೂರಕ್ಕೂ ಹೆಚ್ಚು ತಿದ್ದುಪಡಿಗಳನ್ನು ತಂದಿದ್ದಾರೆ. ಆದರೆ ಸಂವಿಧಾನ ತಿದ್ದುಪಡಿಯಲ್ಲಿ ತನ್ನ ಅಧಿಕಾರಾವಧಿ ವಿಸ್ತರಿಸುವ ವಿಷಯ ಹೆಚ್ಚು ಚರ್ಚೆಗೆ ಬಾರದಂತೆ ನೋಡಿಕೊಂಡಿದ್ದಾರೆ. ಬದಲಿಗೆ ರಷ್ಯಾ ಜನರ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿದ್ದಾರೆ. ರಷ್ಯಾ ನೆಲದ ಮೇಲೆ ಅತಿಕ್ರಮಣ ಮಾಡುವ ಯಾವುದೇ ರೂಪದ ವಿದೇಶಿ ಶಕ್ತಿಗಳನ್ನು ಹತ್ತಿಕ್ಕಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಇರಲಿದೆ ಎಂಬ ತಿದ್ದುಪಡಿ ತಂದಿದ್ದಾರೆ.

1941ರಿಂದ 1947ರವರೆಗೆ ನಡೆದ ಎರಡನೇ ವಿಶ್ವ ಮಹಾಯುದ್ಧದ ಐತಿಹಾಸಿಕ ಸತ್ಯಗಳನ್ನು ರಕ್ಷಿಸುವುದು ಮತ್ತು ಈ ಯುದ್ಧದಲ್ಲಿ ಹೋರಾಡಿದ ಸೈನಿಕರ ಯಶೋಗಾಥೆಯನ್ನು ಉಳಿಸಿಕೊಳ್ಳುವ ವಿಷಯಗಳಿಗೂ ಸಂವಿಧಾನ ತಿದ್ದುಪಡಿ ತಂದಿದ್ದಾರೆ.

ರಾಷ್ಟ್ರೀಯ ಭಾವನೆಗಳಿಗೆ ಕಾವು ಕೊಟ್ಟಿದ್ದಷ್ಟೇಯಲ್ಲದೆ ಸಂಪ್ರದಾಯವಾದಿ ಮನೋಧರ್ಮಕ್ಕೆ ಕುಮ್ಮಕ್ಕು ನೀಡುವ ತಿದ್ದುಪಡಿ ತಂದಿದ್ದಾರೆ‌. ರಷ್ಯಾ ಸಂಪ್ರದಾಯವಾದಿಗಳ ಮನಗೆಲ್ಲಲು ಅತಿ ಕಡಿಮೆ ಪ್ರಮಾಣದಲ್ಲಿರುವ ತೃತೀಯ ಲಿಂಗಿಗಳನ್ನು ಕಾನೂನು ಮೂಲಕ ಹತ್ತಿಕ್ಕುವ ತಿದ್ದುಪಡಿ ಸೇರಿಸಿದ್ದಾರೆ. ದೇವರು ಮತ್ತು ನಂಬಿಕೆ ವಿಷಯಗಳಲ್ಲಿ ತಿದ್ದುಪಡಿ ತಂದು ಈ ಭಾವನೆಗಳನ್ನು ಅಧಿಕೃತಗೊಳಿಸುವ ಪ್ರಯತ್ನ ಮಾಡಿದ್ದಾರೆ‌. ಹೀಗೆ ಎರಡು ಪ್ರಮುಖ ವಿಷಯಗಳನ್ನು ಸಂವಿಧಾನ ತಿದ್ದುಪಡಿಯಲ್ಲಿ ತಂದು ಅವುಗಳೊಟ್ಟಿಗೆ ತಮ್ಮ ಅಧಿಕಾರ ವಿಸ್ತರಣೆ ಮಾಡಿಕೊಳ್ಳುವ ಹುನ್ನಾರವನ್ನು ಸಾಧಿಸಿಕೊಂಡಿದ್ದಾರೆ.

ವ್ಲಾದಿಮಿರ್ ಪುಟಿನ್ ಬೀಸಿದ ರಾಷ್ಟ್ರೀಯ ಭಾವನೆ, ಯುದ್ಧ, ಸೈನಿಕರು, ದೇಶ, ನೆಲ, ಸಂಪ್ರದಾಯ, ದೇವರು, ನಂಬಿಕೆ ಎಂಬ ಭಾವನಾತ್ಮಕ ಬಲೆಗೆ ರಷ್ಯಾದ ಜನ ಬಿದ್ದಿದ್ದಾರೆ. ಪರಿಣಾಮವಾಗಿ ಇದೇ ಪುಟಿನ್ ಆಡಳಿತದಲ್ಲಿ ದೇಶದ ಸಾಲ ಶಿಖರ ತಲುಪಿದ್ದರೂ, ನಿರುದ್ಯೋಗ ಸಮಸ್ಯೆ ಆಕಾಶದೆತ್ತರಕ್ಕೆ ಬೆಳೆದಿದ್ದರೂ, ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದರೂ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ವ್ಯವಹಾರಿಕವಾಗಿ ಏನೇನೂ ಸಾಧನೆ ಆಗದಿದ್ದರೂ ಜನ ಮತ ಮುದ್ರೆ ಒತ್ತಿದ್ದಾರೆ.

ಪುಟಿನ್ ಆಡಳಿತದ ಸರ್ವಾಧಿಕಾರಿ ಧೋರಣೆಗೆ, ಭಾವನೆ ಉದ್ದೀಪಿನಗೊಳಿಸುವಿಕೆಗೆ ಚುನಾವಣೆಯ ದಿನ ಸೇನಾ ಸ್ಮಾರಕವೊಂದನ್ನು ಅವರು ಉದ್ಘಾಟಿಸಿದ್ದು ಮತ್ತು ಎಲ್ಲಾ ಮತಗಟ್ಟೆಗಳಲ್ಲೂ ಪುಟಿನ್ ಫೊಟೋಗಳ‌ನ್ನು ಹಾಕಲಾಗಿದ್ದು ಉತ್ತಮವಾದ ಉದಾಹರಣೆಗಳು. ಆ ಬಗ್ಗೆ ಅಲ್ಲಿನ ಚುನಾವಣಾ ಆಯೋಗ ಮೌನವಾಗಿದೆ. ಮಾರಿಕೊಂಡ ಮಾಧ್ಯಮಗಳು 'ಇದು ಚುನಾವಣೆಯೇ ಅಲ್ಲ, ಚುನಾವಣಾ ನಿಯಮಗಳನ್ನೂ ಪಾಲಿಸಲಾಗಿಲ್ಲ' ಎಂಬ ಪ್ರತಿಪಕ್ಷಗಳ ಕೂಗಿಗೆ ಕಿವುಡಾಗಿವೆ.

ವ್ಲಾದಿಮಿರ್ ಪುಟಿನ್ ಸಂವಿಧಾನ ತಿದ್ದುಪಡಿ ಮೂಲಕವೇ ಜೀವಿತಾವಧಿಗೂ ತಾನೇ ಅಧ್ಯಕ್ಷನಾಗಿರಬಹುದಿತ್ತು. ಆದರೆ ಇಷ್ಟರಿಂದ ಮಾತ್ರ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಾನು ಪ್ರಭಾವಿ ಎಂಬ ಸಂದೇಶ ಸಾರಲು ಸಾಧ್ಯವಿಲ್ಲ, ಜೊತೆಗೆ ಟೀಕೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು 'ಜನರ ಒಪ್ಪಿಗೆಯ' ಶಾಸ್ತ್ರ ಮಾಡಿದ್ದಾರೆ. ಅದನ್ನು ಐತಿಹಾಸಿಕ ರಷ್ಯನ್ ರೆಫರೆಂಡಂ ಎಂದು ಹೇಳಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸಿದ ಸರ್ವಾಧಿಕಾರ ಅಲ್ಲದೆ ಮತ್ತೇನು?

ಅಂದಹಾಗೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ನಡೆಸುವ, ರಾಷ್ಟ್ರೀಯ ಮತ್ತು ಸಂಪ್ರದಾಯದ ಭಾವನೆಗಳನ್ನು ಬಡಿದೆಬ್ಬಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಾದರಿ ರಷ್ಯಾಕ್ಕೆ ಮಾತ್ರ ಸೀಮಿತವಾಗಿಲ್ಲ. ಹಾಗಾಗಿ ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಾದ ವಿಷಯವಲ್ಲವೇ?

Click here to follow us on Facebook , Twitter, YouTube, Telegram

Pratidhvani
www.pratidhvani.com