ಭಕ್ತರ ಪೊಳ್ಳುತನ, ವಾಸ್ತವಿಕತೆ ಮತ್ತು ಪ್ರಜ್ಞಾವಂತರ ಜವಾಬ್ದಾರಿ
ಅಭಿಮತ

ಭಕ್ತರ ಪೊಳ್ಳುತನ, ವಾಸ್ತವಿಕತೆ ಮತ್ತು ಪ್ರಜ್ಞಾವಂತರ ಜವಾಬ್ದಾರಿ

2014ರ ಹಿಂದಿನಿಂದಲೂ ನೀವು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿದ್ದರೆ ನಿಮಗೆ ನಾಸ್ಟ್ರಡಾಮಸ್‌ ಹೆಸರು ನೆನಪಿನಲ್ಲಿರಬೇಕು. ಭಾರತದ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೈರಲ್‌ ಆಗಿದ್ದ ಪೋಸ್ಟ್‌ ಒಂದರಲ್ಲಿ ಭಾರತಕ್ಕೆ ಮೋದಿ ಎಂಬ ಪುಣ್ಯ ಪುರುಷನ ಆಗಮನವಾಗುತ್ತದೆ, ಬಳಿಕ ಭಾರತ ಖ್ಯಾತಿ ಇನ್ನಷ್ಟು ಹಬ್ಬುತ್ತದೆಂದು ನಾಸ್ಟ್ರಡಾಮಸ್‌ ಭವಿಷ್ಯ ನುಡಿದಿದ್ದಾರೆಂದು ಕಪೋಲಕಲ್ಪಿತವಾಗಿ ಬರೆಯಲಾಗಿತ್ತು.

ಫೈಝ್

ಫೈಝ್

ಭಕ್ತರು ಅಂದರೆ ಮುಖ್ಯವಾಗಿ ನರೇಂದ್ರ ಮೋದಿಗೆ ಮಾತ್ರ ಇರುವ ಅಭಿಮಾನಿಗಳ ಒಂದು ವಿಶೇಷ ತಳಿ. ಹಾಗೆಂದು ಭಕ್ತರು ಮೋದಿ ಪಕ್ಷದ ಅಭಿಮಾನಿಗಳಾಗಬೇಕೆಂದಿಲ್ಲ, ಆರೆಸ್ಸಸಿನ ಶಾಖೆಗಳಿಗೆ ತೆರಳಿ ಬೈಠಕ್‌ ಕೂತವರು ಆಗಿರಬೇಕಿಲ್ಲ. ಇದಲ್ಲದೆಯೂ ಮೋದಿಗೆ ಭಕ್ತರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆ ಪರಾಮರ್ಶಿಸದೆ, ಅದರ ವಿಮರ್ಷೆಯನ್ನೂ ಸಹಿಸದೆ ಅದನ್ನೇ ಪರಮ ಸತ್ಯವೆಂದು ಒಪ್ಪಿಕೊಳ್ಳುವವರನ್ನು ಭಕ್ತರೆಂದು ಕರೆಯಲಾಗುತ್ತದೆ. ಮೋದಿಯ ಈ ಆರಾಧನಾ ಮಂಡಳಿಯ ಸದಸ್ಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ವಾಟ್ಸಪ್‌, ಫೇಸ್‌ಬುಕ್‌ ಹಾಗೂ ಟ್ವಟರಿನಲ್ಲಿ ರೂಪುಗೊಳಿಸಲಾಗಿದೆ. ಮತ್ತು ಅವರಿಗೆ ಬೇಕಾದ ಫೀಡ್‌ಗಳನ್ನು ಅಲ್ಲೇ ನೀಡಲಾಗುತ್ತದೆ.

ಕೆಲವೊಂದು ಟಿ.ವಿ ಮಾಧ್ಯಮಗಳು ಹಾಗೂ ಮುದ್ರಣ ಸಂಸ್ಥೆಗಳು ಭಕ್ತರ ನಂಬಿಕೆಗೆ ತಕ್ಕಂತೆ ಅವರ ದೃಷ್ಟಿಕೋನಕ್ಕೆ ಪೂರಕವಾಗುವಂತಹ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಮಾಧ್ಯಮಗಳು ನೀಡುವ ದೃಷ್ಟಿಕೋನವು ನಿಚ್ಚಲ ಸತ್ಯದ ಮೇಲೆ, ನೈಜ ಘಟನಾವಳಿಗಳ ಅಡಿಪಾಯದ ಮೇಲೆ ನಿಂತಿರುವುದಿಲ್ಲ, ಬದಲಾಗಿ ಈ ಸುದ್ದಿ ಸಂಸ್ಥೆಗಳೇ ʼಕಲ್ಪನೆಯ ಆಧಾರದ ಮೇಲೆ ಪರ್ಯಾಯ ವಾಸ್ತವಿಕತೆʼಯನ್ನು ಕಟ್ಟಿಕೊಂಡಿರುತ್ತದೆ.

2017ರಲ್ಲಿ, ಮೋದಿ ಅಭಿಮಾನಿಗಳು ಆದರಿಸುವ, ಮೋದಿ ತನ್ನ‌ ಮಿತ್ರನೆಂದೇ ಪರಿಭಾವಿಸುವ ಡೊನಾಲ್ಡ್ ಟ್ರಂಪ್‌‌ ಪ್ರಮಾಣ ವಚನ ಸ್ವೀಕರಿಸುವ ಸಂಧರ್ಭದಲ್ಲಿ ಬೃಹತ್‌ ಜನಸಮೂಹ ಸೇರಿರುವಂತೆ ಫೊಟೋಷಾಪ್‌ ಮೂಲಕ ಚಿತ್ರಿಸಲಾಗಿತ್ತು. ಈ ಕುರಿತು ಸುದ್ದಿ ಸಂಸ್ಥೆಯೊಂದು ಪ್ರಶ್ನಿಸಿದಾಗ ʼನಮಗೆ ನಮ್ಮದೇ ಆದ ಕೆಲವು ಸತ್ಯಗಳಿವೆʼ ಎಂದು ಟ್ರಂಪ್‌ರ ಹಿರಿಯ ಸಲಹೆಗಾರ್ತಿ ಕೆಲ್ಲಿಯನ್‌ ಕಾನ್ವೆ ಬಹಿರಂಗವಾಗಿ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಯಾರ್ಕ್‌ ಟೈಮ್ಸ್‌ ಸತ್ಯ ಯಾರಿಗೂ ಸೇರಿದ ಸ್ವತ್ತಲ್ಲ ಎಂದು ಚಾಟಿ ಬೀಸಿತ್ತು. ಅದಾಗ್ಯು ಟ್ರಂಪ್‌ ಅಭಿಮಾನಿಗಳಿಗೆ ಟ್ರಂಪ್‌ ಹಾಗೂ ತಂಡ ಕಟ್ಟಿಕೊಟ್ಟ‌ ಪರ್ಯಾಯ ಸತ್ಯವೇ ವಾಸ್ತವವಾಗಿಬಿಟ್ಟಿತು. CNN ಮತ್ತು BBC ಚಾನೆಲ್‌ಗಳು ಸುಳ್ಳು ಸುದ್ದಿ ಪ್ರಸರಿಸುತ್ತದೆ ಎಂದು ಸ್ವತಃ ಟ್ರಂಪ್ ಹೇಳುವುದರೊಂದಿಗೆ ಟ್ರಂಪ್‌ ಅಭಿಮಾನಿಗಳು ಯಾವ ಸುದ್ದಿ ಮಾಧ್ಯಮಗಳನ್ನು ನೋಡಬಾರದೆಂದೂ ತೀರ್ಮಾನವಾಗಿಬಿಟ್ಟಿತು. ಫಾಕ್ಸ್‌ ನ್ಯೂಸ್‌ ಮಾತ್ರ ನಂಬಿಕರ್ಹ ಸುದ್ದಿ ಮಾಧ್ಯಮವಾಗಿಬಿಟ್ಟಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಆದರೆ ಭಾರತದಲ್ಲಿ, 2013-14 ರಲ್ಲಿ ಮೋದಿ ಹಾಗೂ ಅಮಿತ್‌ ಷಾ ರಾಷ್ಟ್ರೀಯ ನಾಯಕರಾಗಿ ಉದ್ಭವಿಸಿದೊಂದಿಗೆ ಇಂತಹ ಬೆಳವಣಿಗೆ ಪ್ರಾರಂಭಗೊಂಡಿದೆ. ಸ್ಮಾರ್ಟ್‌ಫೋನ್‌ ಚಾಲ್ತಿಯಿಂದ ಸಾಮಾನ್ಯರೂ ನವೀನ ತಂತ್ರಾಂಶಗಳನ್ನು ತಮ್ಮ ಕೈಗಳೊಳಗೆ ಪಡೆಯುತ್ತಿರುವುದನ್ನು ತಮಗೆ ಸಾಧಕವಾಗಿ ಬಿಜೆಪಿ ಬಳಸಿಕೊಂಡಿತು. ತನ್ನ ಐಟಿ ಸೆಲ್ಲಿನ ಮುಖ್ಯಸ್ಥನಾಗಿ ಅಮಿತ್‌ ಮಾಳವೀಯರನ್ನು ನೇಮಿಸಿಕೊಂಡ ಬಿಜೆಪಿ, ಅವರ ಕೈಕೆಳಗೆ 150 ಉದ್ಯೋಗಿಗಳನ್ನೂ ನೇಮಿಸಿತು. ಉತ್ತಮ ಸಂಭಾವನೆ ಪಡೆಯುತ್ತಿದ್ದ ಈ 150 ಮಂದಿಯ ತಂಡಕ್ಕೆ ಸಹಾಯ ಮಾಡಲು ಭಾರತದಾದ್ಯಂತ 20,000 ಪಕ್ಷದ ಕಾರ್ಯಕರ್ತರನ್ನು ರಾಜ್ಯ ಮತ್ತು ನಿಯೋಜಿಸಲಾಗಿತ್ತು. ಐಟಿ ಸೆಲ್‌ ತಯಾರಿಸುವ ಸಂದೇಶ ಮತ್ತು ಮೀಮ್‌ಗಳನ್ನು ವೈರಲ್‌ ಮಾಡುವುದು ಮತ್ತು ಎಲ್ಲರಿಗೆ ತಲುಪಿಸುವುದು ಈ ಕಾರ್ಯಕರ್ತರ ಕರ್ತವ್ಯ.

ಮೋದಿ ಪರವಾಗಿರುವ ಹಾಗೂ ವಿರೋಧ ಪಕ್ಷದ ನಾಯಕರನ್ನು ಜರಿಯುವ ಮೀಮ್‌ಗಳನ್ನು ವೈರಲ್‌ ಮಾಡಲೆಂದೇ ಫೇಸ್‌ಬುಕ್‌ಲ್ಲಿ ಹಲವಾರು ಫೇಕ್‌ ಪೇಜ್ಗಳನ್ನು, ಗುಂಪುಗಳನ್ನು ತೆರೆಯಲಾಗಿ,. ಆ ಮೂಲಕ ಲಕ್ಷಾಂತರ ಭಾರತೀಯರ ಮನಸ್ಸಿಗೆ ಇಲ್ಲದ ಗುಜರಾತ್‌ ಮಾದರಿಯನ್ನೂ, ಮೋದಿಯ ದೈವಿಕತೆಯನ್ನು ತುಂಬಲಾಯಿತು. ನೆನಪು ಮಾಡಿಕೊಳ್ಳಿ, 2014ರ ಮೊದಲು, ಭಾರತದಲ್ಲಿ ಕರೆಂಟೇ ಹೋಗದ ರಾಜ್ಯವೊಂದಿತ್ತು ಭಾರತದಲ್ಲಿ. ಅದು ಗುಜರಾತ್‌. ಅದರ ಮುಖ್ಯಮಂತ್ರಿ ನರೇಂದ್ರ ಮೋದಿ. ಅಂತಹ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿಬಿಟ್ಟರೆ ಪವಾಡಗಳೇ ಸಂಭವಿಸುವಂತೆ ಭಾರತ ಅಭಿವೃಧ್ದಿಯಾಗುತ್ತದೆಂದು ಭಾರತದ ಮನಸ್ಸುಗಳಿಗೆ ತುಂಬಿಸಲಾಯಿತು. ವಿದೇಶಗಳ ರಸ್ತೆಗಳನ್ನು ಗುಜರಾತ್‌ ರಸ್ತೆಗಳೆಂದೂ, ಶ್ರೀಮಂತ ರಾಷ್ಟ್ರಗಳ ವಿಮಾನ ನಿಲ್ದಾಣಗಳನ್ನು ಗುಜರಾತಿನ ಬಸ್‌, ರೈಲು ತಂಗುದಾಣಗಳೆಂದು ಸುಳ್ಳು ಸುಳ್ಳೇ ಮಾಹಿತಿಗಳು ಹರಿದಾಡತೊಡಗಿದವು.

ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿದ ಬಿಜೆಪಿ ಐಟಿಸೆಲ್‌, ನರೇಂದ್ರ ಮೋದಿಯ ಸುತ್ತಲೂ ಭ್ರಮಾಪ್ರಭೆಯನ್ನು ಸೃಷ್ಟಿಸಿಬಿಟ್ಟಿತು. ದೀಪದ ಬೆಳಕಿಗೆ ಕೀಟಗಳು ಆಕರ್ಷಿತಗೊಂಡು ತಮ್ಮ ಅಸ್ತಿತ್ವ ಕಳೆದುಕೊಳ್ಳುವಂತೆ, ಮೋದಿ ಪ್ರಭೆಗೆ ಸಿಲುಕಿದ ಭಕ್ತರು ತಮ್ಮ ವಿವೇಚನೆಯನ್ನು ಕಳೆದುಕೊಂಡರು. ಅಥವಾ ವಿವೇಚನೆ ಕಳೆದುಕೊಂಡವರು ಮೋದಿಯ ಭ್ರಮಾಪ್ರಭೆಗೆ ಆಕರ್ಷಿತಗೊಂಡರು.

ಒಂದು ಕಡೆ ಅಭಿವೃಧ್ಧಿಯ ಹರಿಕಾರನಾದ ಮೋದಿ, ಇನ್ನೊಂದು ಕಡೆಯಲ್ಲಿ ಹಿಂದುತ್ವದ ರಕ್ಷಕರಾಗಿ ಬಿತ್ತರಗೊಂಡರು. ಮತ್ತೊಂದು ಕಡೆ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಭರವಸೆಯಾಗಿ ರೂಪುಗೊಂಡರು. ಹೀಗೆ ಬಹುಮುಖವಾಗಿ ರೂಪುಗೊಂಡ ಮೋದಿಯ ಇಮೇಜ್‌ ಸಮಾಜದ ವಿವಿಧ ಸ್ತರಗಳ ಮಂದಿಯನ್ನು ತಲುಪಿತ್ತು. ಕೋಮುವಾದಿಗಳಲ್ಲದವರೂ ಮೋದಿಗಾಗಿ ಬಿಜೆಪಿಗೆ ಮತ ಚಲಾಯಿಸಿದರು. ಮೋದಿಯ ಇಮೇಜ್‌ ಎತ್ತಿಕಟ್ಟುವ ಜೊತೆಗೆ ಬಿಜೆಪಿ ಐಟಿ ಸೆಲ್‌ ಮಾಡಿದ ಇನ್ನೊಂದು ಪರಿಣಾಮಕಾರಿ ಕೆಲಸವೆಂದರೆ ಮೋದಿ ಎದುರಾಳಿಗಳ ಚಾರಿತ್ರ್ಯ ಹರಣ. ರಾಹಲು ಗಾಂಧಿಯನ್ನು ಪಪ್ಪುವೆಂದೂ, ಸೋನಿಯಾಗಾಂಧಿಯನ್ನು ಬಾರ್‌ ಡ್ಯಾನ್ಸರ್‌ ಎಂದು, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ರನ್ನು ರೋಬೋಟ್‌ ಎಂದು ಜರಿದ ಐಟಿಸೆಲ್‌ ಅಷ್ಟಕ್ಕೇ ನಿಲ್ಲಿಸದೆ ಗಾಂಧಿ ಹಾಗೂ ನೆಹರೂವನ್ನೂ ಎಳೆದು ತಂದಿತು. ಆ ಮೂಲಕ ಭಾರತದ ಪ್ರಾಚೀನ ಪಕ್ಷದ ಘನತೆಯನ್ನು ಕುಗ್ಗಿಸಿ ಆ ಸ್ಥಾನಕ್ಕೆ ತಾನು ತಲುಪುವ ದಾರಿಯನ್ನು ಸುಲಭಗೊಳಿಸಿತು. ಬಿಜೆಪಿ ಐಟಿ ಸೆಲ್‌ ನಡೆಸಿದ ಈ ತಂತ್ರಗಳು ಯಶಸ್ವಿಯಾದದ್ದೇ ಮೋದಿ ಪರವಾಗಿ ಸೋಶಿಯಲ್‌ ಮೀಡಿಯಾ ವಾರ್‌ಗಳಲ್ಲಿ ತೊಡಗಿದ ಭಕ್ತರಿಂದ.

ಮೋದಿಯ ಇಮೇಜನ್ನು ರಾಷ್ಟ್ರಭಕ್ತಿಯೊಂದಿಗೆ ಸಮೀಕರಿಸಿ ಮೋದಿ ಕಾಲದಲ್ಲಿ ರಾಷ್ಟ್ರಭಕ್ತಿಗೆ ಬೇರೆಯೇ ಆಯಾಮ ನೀಡಿದ ಐಟಿಸೆಲ್‌ ಮೋದಿ ವಿರೋಧಿಗಳನ್ನೆಲ್ಲಾ ರಾಷ್ಟ್ರ ವಿರೋಧಿಗಳಂತೆ ಚಿತ್ರಿಸಿತು. ಮೋದಿ ವಿರುದ್ಧ ದನಿಯೆತ್ತಿದ ಮುಸ್ಲಿಮರನ್ನು ಪಾಕಿಸ್ತಾನದೊಂದಿಗೂ, ಕ್ರೈಸ್ತರನ್ನು ಮಿಶನರಿಗಳೊಂದಿಗೂ, ಚಿಂತಕರನ್ನು ನಕ್ಸಲರೊಂದಿಗೂ ಚಿತ್ರಿಸಿತು ಬಿಜೆಪಿ ಐಟಿಸೆಲ್. ಧರ್ಮದೊಂದಿಗೆ ರಾಜಕಾರಣವನ್ನು ಬಹಿರಂಗವಾಗಿಯೇ ಪೋಣಿಸಿಕೊಂಡು ಬಂದ ಆರೆಸ್ಸಸಿನ ಪುತ್ರ ಪಕ್ಷ, ತನ್ನ ಐಟಿ ಸೆಲ್ಲಿನ ಮುಖಾಂತರ ತನ್ನ ವಿರೋಧ ಪಕ್ಷಗಳನ್ನೆಲ್ಲಾ ಹಿಂದೂ ಧರ್ಮ ವಿರೋಧಿಯಾಗಿ ಚಿತ್ರಿಸಿತು. ಕಮ್ಮಿ, ಕಾಂಗಿ, ಬುದ್ದಿಜೀವಿ, ಪ್ರಗತಿಪರರು ಎಲ್ಲಾ ಮೋದಿ ಭಕ್ತರ ನಿಘಂಟಿನಲ್ಲಿ ಕೊಳಕು ಪದಗಳಾಗಿ ಮರು ರೂಪ ಪಡೆಯಿತು.

ಭಾರತ ಸ್ವತಂತ್ರಗೊಂಡಾಗಿನಿಂದ ಭಾರತದ ಆಳ್ವಿಕೆ ನಡೆಸಿದ ಆಡಳಿತಗಾರರ ಸಾಧನೆಯನ್ನೆಲ್ಲಾ ಮೋದಿ ಬತ್ತಳಿಕೆಗೆ ತುರುಕಿಸಿಕೊಂಡ ಐಟಿ ಸೆಲ್‌ ತಾನು ಬ್ರೈನ್‌ ವಾಷ್‌ ಮಾಡಿದ ಭಕ್ತರನ್ನು ಭ್ರಮೆಯಲ್ಲಿರಿಸಿತು. ಭಾರತದ ಸೇನೆಯ ಸಾಧನೆಯನ್ನು ಮೋದಿಯ ಸಾಧನೆಯಂತೆ ವೈಭವೀಕರಿಸಿ ಮೋದಿ ಭಕ್ತರ ಈಗೋ ಸ್ಯಾಟಿಸ್‌ಫೈ ಮಾಡುತ್ತಲೇ ಬಂದಿರುವ ಬಿಜೆಪಿ ಐಟಿಸೆಲ್‌, ಬರಿಯ ಭೌಗೋಳಿಕ ಹಾಗೂ ಹಿಂದೂ ಧರ್ಮದ ಮೇಲಿನ ಪ್ರೇಮವನ್ನು ದೇಶಪ್ರೇಮವನ್ನಾಗಿಸಿತು.

ಭಾರತದ ಸರ್ಕಾರದ ಆಡಳಿತ ವೈಫಲ್ಯಗಳನ್ನೆಲ್ಲಾ ನೆಹರೂ ತಲೆಗೆ ಹೊರಿಸಿ, ಶುದ್ಧ ಅಪ್ರಬುಧ್ಧ ವಿಷಯಗಳನ್ನೇ ಭಕ್ತರ ತಲೆಗೆ ತುಂಬಿಸುವ ಐಟಿಸೆಲ್ ಪುರಾತನ ಭಾರತದಲ್ಲಿ ಪರಮಾಣು ತಂತ್ರಜ್ಞಾನದಿಂದ ಅಂತರಿಕ್ಷ ತಂತ್ರಜ್ಞಾನದವರೆಗೆ ಎಲ್ಲವೂ ಇತ್ತೆಂದು ಮೌಢ್ಯ ಬಿತ್ತರಿಸತೊಡಗಿತು. ಗಣಪನ ತಲೆ ಬದಲಾವಣೆ ಪ್ಲಾಸ್ಟಿಕ್‌ ಸರ್ಜರಿ ಇದ್ದುದಕ್ಕೆ ಉದಾಹರಣೆಯಾದರೆ, ಮಹಾಭಾರತದ ಬ್ರಹ್ಮಾಸ್ತ್ರ ನ್ಯೂಕ್ಲಿಯರ್‌ ಬಾಂಬ್‌ಗೆ, ಮಡಕೆಯಲ್ಲಿ ಮಗು ಜನಿಸಿದ್ದನ್ನು ಕ್ಲೋನಿಂಗ್‌ ಶಿಶುವಿಗೆ, ಪುಷ್ಪಕ ವಿಮಾನ ವೈಮಾನಿಕ ಸಾಧನೆಗೆ ಕೈಗನ್ನಡಿಯಾಯಿತು. ಅಲ್ಲದೆ ಗೋಮೂತ್ರ ಕ್ಯಾನ್ಸರಿಗೆ ಮದ್ದಾಗಬಲ್ಲದು ಎಂಬಂತಹ ವೈದ್ಯಕೀಯ ಆವಿಷ್ಕಾರಗಳ ತಲೆಗೆ ಹೊಡೆಯುವಂತಹ ಸುಳ್ಳುಗಳನ್ನು ಹರಿಯಬಿಟ್ಟಿತು. ‌

2014ರ ಹಿಂದಿನಿಂದಲೂ ನೀವು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿದ್ದರೆ ನಿಮಗೆ ನಾಸ್ಟ್ರಡಾಮಸ್‌ ಹೆಸರು ನೆನಪಿನಲ್ಲಿರಬೇಕು. ಭಾರತದ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವೈರಲ್‌ ಆಗಿದ್ದ ಪೋಸ್ಟ್‌ ಒಂದರಲ್ಲಿ ಭಾರತಕ್ಕೆ ಮೋದಿ ಎಂಬ ಪುಣ್ಯ ಪುರುಷನ ಆಗಮನವಾಗುತ್ತದೆ, ಬಳಿಕ ಭಾರತ ಖ್ಯಾತಿ ಇನ್ನಷ್ಟು ಹಬ್ಬುತ್ತದೆಂದು ನಾಸ್ಟ್ರಡಾಮಸ್‌ ಭವಿಷ್ಯ ನುಡಿದಿದ್ದಾರೆಂದು ಕಪೋಲಕಲ್ಪಿತವಾಗಿ ಬರೆಯಲಾಗಿತ್ತು.

ಅಷ್ಟಲ್ಲದೆ, ಪ್ರಾಚೀನ ಕಾಲದ ಈ ಕಲ್ಪಿತ ವೈಭವವನ್ನು ಜನರೆಡೆಗೆ ತಲುಪಿಸಿ ನಂಬಿಸಿದ ಐಟಿಸೆಲ್‌ ಭಾರತದ ಹಳೆ ವೈಭವವನ್ನು ಮತ್ತೆ ಪ್ರತಿಷ್ಟಾಪಿಸುವುದಕ್ಕಾಗಿಯೇ ಮೋದಿಯ ಆಗಮನವಾಗಿದೆಯೆಂದು ನಂಬಿಸತೊಡಗಿದವು. ಮೊದಲ ಕಲ್ಪನೆಯ ಭಾರತವನ್ನು ಆರಾಧಿಸತೊಡಗಿದ ವರ್ಗ ಎರಡನೇ ಸುಳ್ಳನ್ನೂ ಒಪ್ಪಿಕೊಳ್ಳುವಷ್ಟು ವಿವೇಚನೆ ಕಳೆದುಕೊಂಡಿತ್ತು.

ತೀರಾ ಇತ್ತೀಚೆಗಿನ ಉದಾಹರಣೆಯನ್ನೇ ಗಮನಿಸುವುದಾದರೆ, ದೀಪ ಉರಿಸಲು, ಜಾಗಟೆ ಬಾರಿಸಲು ಪ್ರಧಾನಿ ಕರೆ ನೀಡಿದೊಡನೆ ಶಂಖ-ಜಾಗಟೆಗಳ ವೈಬ್ರೇಶನ್‌ಗೆ, ದೀಪಗಳ ಬೆಳಕಿಗೆ ಕರೋನಾ ವೈರಸ್‌ ಸಾಯುತ್ತವೆಯೆಂದು ಇದೇ ಐಟಿಸೆಲ್‌ ವಿವೇಚನೆ ಕಳೆದುಕೊಂಡ ಮಂದಿಯ ಚಿಂತನೆಗೆ ಹಾಕಿತು. ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತು ಉದ್ದುದ್ದ ಬರಹಗಳು ಹರಿದಾಡತೊಡಗಿದವು. ಆ ಮಟ್ಟಿಗೆ ಮೋದಿಯ ಪೊಳ್ಳು ನಡೆಗೆ ಸುಳ್ಳು ವೈಜ್ಞಾನಿಕ ಕಾರಣಗಳನ್ನು ನೀಡುವ ಮಟ್ಟಕ್ಕೆ ಐಟಿ ಸೆಲ್‌ ಬಂದು ತಲುಪಿದೆ. ಇಷ್ಟೆಲ್ಲಾ ಮಾಡಿಯೂ ಭಾರತ ಯಾಕೆ ಕರೋನಾ ಪೀಡಿತ ಅಗ್ರ ಹತ್ತು ದೇಶಗಳೊಳಗೆ ಸ್ಥಾನ ಪಡೆದಿದೆಯೆಂದು ಕನಿಷ್ಟ ಸಾಮಾನ್ಯ ಜ್ಞಾನ ಉಪಯೋಗಿಸಿ ಭಕ್ತರು ಯೋಚಿಸುವುದಿಲ್ಲ.

ಐಟಿ ಸೆಲ್‌ನ ಸುಳ್ಳುಗಳು ಎಷ್ಟು ಪ್ರಬಲವಾಗಿ ಪರಿಣಾಮ ಬೀಳುತ್ತದೆ ಮತ್ತು ಭಕ್ತರು ಎಷ್ಟರಮಟ್ಟಿಗೆ ಪ್ರಶ್ನಿಸುವ ವಿವೇಚನೆಯನ್ನು ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಎರಡು ಉದಾಹರಣೆ ಕೊಡುತ್ತೇನೆ. ಕನ್ನಯ್ಯ ದೇಶದ್ರೋಹಿ ಘೋಷನೆ ಕೂಗಿದ್ದಾರೆಂದೂ, ಪ್ರಿಯಾಂಕ ವಾದ್ರಾ ಕುಟುಂಬ ಭ್ರಷ್ಟಾಚಾರ ಮಾಡಿದ್ದಾರೆಂದೂ ಐಟಿ ಸೆಲ್ಲಿನ ಸುಳ್ಳುಗಳನ್ನು ಈಗಲೂ ನಂಬುವ ಭಕ್ತರು ಸತ್ಯವನ್ನು ಹುಡುಕಲು ಯತ್ನಿಸುವುದಿಲ್ಲ, ಅಲ್ಲದೆ ಮೇಲೆ ಉದಾಹರಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳದ ಸರ್ಕಾರವನ್ನು ಪ್ರಶ್ನಿಸುವುದಿಲ್ಲ. ಇಂತಹ ಹಲವಾರು ವೈರುಧ್ಯಗಳೊಂದಿಗೆ ಭಾರತದ ದೊಡ್ಡ ಸಮೂಹ ನರಳುತ್ತಿದೆ.

ಮೋದಿಯನ್ನು ವೈಭವೀಕರಿಸುವ ಬಿಜೆಪಿ ಐಟಿಸೆಲ್‌ ಸತತ ಧ್ವೇಷ ಹಾಗೂ ಸುಳ್ಳು ಹರಡಿ ಭಕ್ತರ ಸಂವೇದನಾಶೀಲತೆಯನ್ನು ಕೊಂದುಬಿಟ್ಟಿದೆ. ಮನುಷ್ಯರಿಗಿರಬೇಕಾದ ಕನಿಷ್ಟ ಸಂವೇದನೆಯೂ ಇಲ್ಲದಂತೆ ವರ್ತಿಸುವ ಭಕ್ತರು ಮೋದಿಯನ್ನು ಪ್ರಶ್ನಿಸುವವರ ಸಾವುಗಳನ್ನು ವಿಭ್ರಂಜಿಸಿ ಆಸ್ವಾದಿಸುವಷ್ಟು ಮಾನವೀಯತೆ ಕಳೆದುಕೊಂಡುಬಿಟ್ಟಿದ್ದಾರೆ. ಕೊಲೆಯನ್ನೂ ಸಮರ್ಥಿಸುವ ಅಧೋಗತಿಗೆ ಇಳಿದುಬಿಟ್ಟ ಭಕ್ತರು, ಮೊದಲನೆಯದಾಗಿ ಗಾಂಧಿ ಹತ್ಯೆಯನ್ನು ಬಹಿರಂಗವಾಗಿ ಸಮರ್ಥಿಸಲು ಶುರು ಹಚ್ಚಿದರು. ಬಳಿಕ ಗೌರಿ ಲಂಕೇಶ್‌, ಪನ್ಸಾರೆ, ಧಾಭೋಲ್ಕರ್‌, ಎಂ ಎಂ ಕಲ್ಬುರ್ಗಿ ಮೊದಲಾದ ಚಿಂತಕರ ಕೊಲೆಗಳನ್ನು ಸಂಭ್ರಮಿಸುವಷ್ಟು ಮಟ್ಟಕ್ಕೆ ಇಳಿದುಬಿಟ್ಟರು.

ಇದೆಲ್ಲದರ ಪರಿಣಾಮವಾಗಿಯೇ ದೆಹಲಿಯಲ್ಲಿ ಕೇಂದ್ರ ಸರ್ಕಾರದ ನೂತನ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುವವರೆಡೆಗೆ ಗೋಲಿ ಮಾರೋ ಎಂದು ಬಿಜೆಪಿ ನಾಯಕ ಬಹಿರಂಗವಾಗಿ ಘೋಷಿಸಿರುವುದು, ಘೋಷನೆಯ ಬೆನ್ನಿಗೆ ಬಂದೂಕು ತೋರಿಸಿಕೊಂಡು ಯುವಕರು ನುಗ್ಗಿರುವುದು, ಅವರನ್ನು ಹೀರೋಗಳಂತೆ ಭಕ್ತರು ಅಭಿನಂದಿಸಿರುವುದು.

ಇದೆಲ್ಲದರಾಚೆಗೂ ಭಕ್ತರನ್ನು ಗೋಡ್ಸೆ ಆರಾಧನೆಯಲ್ಲಿ, ಗಾಂಧೀ ಧ್ವೇಷದಲ್ಲಿ ಮುಳುಗಿಸಿರುವ ಮೋದಿ ಹಾಗೂ ಸಂಘಪರಿವಾರಕ್ಕೆ ಜಗತ್ತಿಗೆ ಗೋಡ್ಸೆಗಿಂತ ಪ್ರಭಾವಿ ಬೀರಿದ್ದು ಅಹಿಂಸೆ ಪ್ರತಿಪಾದಿಸಿದ ಗಾಂಧಿ ಎಂಬುದು ಚೆನ್ನಾಗಿಯೇ ಗೊತ್ತು, ಹಾಗಾಗಿಯೇ ತನ್ನ ಅಭಿಮಾನಿಗಳು ತಮ್ಮ ಪ್ರೊಫೈಲ್‌ಗಳಲ್ಲಿ ಗೋಡ್ಸೆ ಚಿತ್ರವನ್ನು ಹಾಕಿಕೊಂಡಿದ್ದಾಗ್ಯೂ, ವಿದೇಶಿ ನಾಯಕರು ಬಂದಾಗ ಗಾಂಧಿಯ ಆಶ್ರಮಗಳಿಗೆ ಅತಿಥಿಗಳನ್ನು ಕರೆದೊಯ್ಯುವುದು ಮತ್ತು ಗಾಂಧಿಯ ಚರಕದ ಎದುರು ಕೂತು ನಾಟಕೀಯವಾಗಿ ಗಾಂಧಿ ಪ್ರೇಮ ಪ್ರಕಟಿಸುವುದು.

ಭಾರತ ಕರೋನಾ ಸಂಕಷ್ಟವನ್ನು, ಆರ್ಥಿಕ ಕುಸಿತದಂತಹ ಬಿಕ್ಕಟ್ಟುಗಳನ್ನು ಮಾತ್ರ ಎದುರಿಸುತ್ತಿಲ್ಲ. ಬದಲಾಗಿ ಭಾರತದ ಭವಿಷ್ಯಕ್ಕೆ ಕರಾಳವಾಗಿ ಸವಾಲಾಗಿರುವುದು, ಜೀವ ವಿರೋಧಿ ಸಿದ್ದಾಂತಗಳನ್ನು ಪರಾಮರ್ಶೆಯಿಲ್ಲದೆ ಒಪ್ಪಿಕೊಂಡ ದೊಡ್ಡ ಯುವ ಜನಾಂಗದಿಂದ, ಸಹಜೀವಿಗಳ ಕೊಲೆಯನ್ನು, ಮರಣವನ್ನು ಸಂಭ್ರಮಿಸುವ ನಾಗರಿಕರಿಂದ.! ಬುಧ್ಧನ ನಾಡಿನಲ್ಲಿ, ಗಾಂಧಿಯ ತವರಲ್ಲಿ ಇಂತಹದ್ದೊಂದು ರಾಕ್ಷಸೀಯ ಸಮೂಹ ಸನ್ನಿ ಇಷ್ಟು ಪ್ರಬಲವಾಗಿ ಹರಡಿರುವುದು ಆತಂಕವಲ್ಲದೆ ಮತ್ತೇನು?

ಸದ್ಯ ಭಕ್ತರ ವರಸೆಗಳನ್ನು ಕಂಡು ರೋಸಿ ಹೋಗಿರುವ ಹೆಚ್ಚಿನವರು ಭಕ್ತರನ್ನು ವಿರೋಧಿಸುವ ಮಟ್ಟದಿಂದ ಧ್ವೇಷಕ್ಕೆ ತಿರುಗಿದ್ದಾರೆ.ಧ್ವೇಷಕ್ಕೆ ಧ್ವೇಷವೇ ಉತ್ತರವಾದರೆ, ಎರಡೂ ಕಡೆಯಿಂದಲೂ ಧ್ವೇಷವೇ ತುಂಬಿಕೊಂಡರೆ ಭಾರತ ಇನ್ನಷ್ಟು ದುರ್ದಿನಗಳನ್ನು ನೋಡಬೇಕಾಗುತ್ತದೆ.

ಇತಿಹಾಸ ಲೋಲಕದಂತೆ, ಒಂದು ತುದಿಯ ಗರಿಷ್ಟ ಮಟ್ಟಕ್ಕೆ ತಲುಪಿದ ಲೋಲಕದ ಚೆಂಡು ಮತ್ತೆ ಹಿಂತಿರುಗಿ ಬರಲೇ ಬೇಕು. ಸತ್ಯಾಗ್ರಹ, ಅಹಿಂಸೆಯ ಹೋರಾಟಗಳನ್ನು ಲೋಕಕ್ಕೆ ಪರಿಚಯಿಸಿದ ಭಾರತ ಜಾಗತಿಕ ಯುಧ್ಧದ ಸಂಧರ್ಭದಲ್ಲಿ ಅಲಿಪ್ತ ನೀತಿಯನ್ನು ಅನುಸರಿಸಿ, ಶಾಂತಿ ಬಯಸುವ ದೇಶಗಳಿಗೆ ನಾಯಕನಂತೆ ವರ್ತಿಸಿತ್ತು. ಸದ್ಯ ಭಾರತದಲ್ಲಿ ಬಲಪಂಥೀಯತೆಯ ತೀವ್ರ ಪರಿಣಾಮದಿಂದ ಯುದ್ದೋನ್ಮಾದ, ಕೋಮು ಧ್ವೇಷ ಮತ್ತು ಅಪನಂಬಿಕೆಗಳಲ್ಲಿ ತುಂಬಿಕೊಂಡಿದೆ. ಈ ಉನ್ಮಾದ, ಭ್ರಮೆಗಳಲ್ಲಿರುವ ಭಾರತ ಮತ್ತೆ ಶಾಂತಿ, ಪ್ರೇಮದತ್ತ ಹೊರಳಿಕೊಳ್ಳುತ್ತೆಂಬ ಆಶಾವಾದದಿಂದ, ಪ್ರಜ್ಞಾವಂತರು ಹುಚ್ಚು ಹಿಡಿದ ಸಮಾಜದಲ್ಲಿ ವೈದ್ಯರಂತೆ ವರ್ತಿಸಬೇಕು. ಇದು ಈ ದುರಿತ ಕಾಲದ ಬೇಡಿಕೆ.

Click here to follow us on Facebook , Twitter, YouTube, Telegram

Pratidhvani
www.pratidhvani.com