ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ
ಅಭಿಮತ

ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ

ಭಾರತದ್ದು ವಿಫಲ ನಗರೀಕರಣ. ಉದಾಹರಣೆಗೆ ಒಂದು ಅಂದಾಜಿನ ಪ್ರಕಾರ ಭಾರತ ಶೇಕಡಾ 70ರಷ್ಟು ಹಳ್ಳಿಗಳನ್ನು ಹೊಂದಿದೆ. ಅಮೇರಿಕಾದ ಹಳ್ಳಿಗಳ ಪ್ರಮಾಣ ಶೇಕಡಾ 5ರಷ್ಟು. ಅಮೇರಿಕಾದಲ್ಲಿ ಶೇಕಡಾ 5ರಷ್ಟು ಮಾತ್ರ ಹಳ್ಳಿಗಳು ಉಳಿದಿವೆ ಎಂದರೆ ಉಳಿದದ್ದೆಲ್ಲವೂ ನಗರೀಕರಣವಾಗಿದೆ ಎಂದೇತಾನೇ ಅರ್ಥ. ಹಾಗಂತ ಅಲ್ಲಿನ ಕೃಷಿ ಉತ್ಪಾದನಾ ಸಾಮರ್ಥ್ಯ ಕುಸಿದಿಲ್ಲ.

ಯದುನಂದನ

ಪ್ರತಿ ದುರಂತವೂ ತನ್ನ ಗರ್ಭದ ಒಳಗೊಂದಿಷ್ಟು ಪಾಠಗಳನ್ನು ಅಡಗಿಸಿಕೊಂಡಿರುತ್ತದೆ. ಕರೋನಾ ಕೂಡ‌. ಕಣ್ಣಿಗೆ ಕಾಣದ ಕರೋನಾ ವೈರಾಣು, ಕಣ್ಣಿಗೆ ಕಾಣುವ ವಾಸ್ತವವೂ ಹೌದು. ಹಿಂದೆಯೂ ಇಂಥ ಹತ್ತು ಹಲವು ವೈರಾಣುಗಳು ಹುಟ್ಟಿವೆ, ಅವುಗಳಲ್ಲಿ ಕೆಲವು ಉಳಿದಿವೆ, ಕೆಲವು ಅಳಿದಿವೆ. ಕರೋನಾ ಉಳಿಯಲೂಬಹುದು, ಅಳಿಯಲೂಬಹುದು. ಈಗಂತೂ ಕರೋನಾ ಕಾಲ. ಹಾಗಾಗಿ ಕರೋನಾದೊಂದಿಗೇ ಬದುಕುಬೇಕು. ಕರೋನಾ ವಿರುದ್ಧವೇ ಹೋರಾಡಬೇಕು. ಅದಕ್ಕಾಗಿ ಕರೋನಾದಿಂದಲೇ ಕಲಿಯಬೇಕು.

ಕರೋನಾದಿಂದ ಕಲಿಯಬೇಕಿರುವ ಪಾಠಗಳು ಬಹಳಷ್ಟಿವೆ. ಸದ್ಯ ವಲಸೆ ಕಾರ್ಮಿಕರ ಬಗ್ಗೆ ಚರ್ಚಿಸೋಣ. ವಲಸೆ ಸದ್ಯದ ಸಮಸ್ಯೆ ಮಾತ್ರವಲ್ಲ.‌ ಅದಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ ಆ ಇತಿಹಾಸವನ್ನು ಮರೆತಿದ್ದೇವೆ. ವಲಸಿಗರಲ್ಲಿ ಹಲವು ವಿಧ. ಆದರೆ ಆಳುವ ಸರ್ಕಾರಗಳಿಗೆ ಅದರ ಸ್ಪಷ್ಟ ಕಲ್ಪನೆಯೇ ಇಲ್ಲ. ವಲಸಿಗರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದೇವೆ. ಅತ್ಯಂತ ನಿರ್ದಯಿಯಾಗಿ ನಡೆದುಕೊಂಡಿದ್ದೇವೆ. ಬೇಜವಾಬ್ದಾರಿಯಿಂದ ವರ್ತಿಸಿದ್ದೇವೆ. ಇದೆಲ್ಲದರ ಪರಿಣಾಮವಾಗಿ ಇಂದು ವಲಸೆ ಕಾರ್ಮಿಕರೂ ಅನಾಥ, ವಲಸೆ ಕಾರ್ಮಿಕರನ್ನು ನಂಬಿಕೊಂಡ ಹಲವು ಔದ್ಯೋಗಿಕ ಕ್ಷೇತ್ರಗಳೂ ಅನಾಥ.

ಕೃಷಿ, ಗ್ರಾಮೀಣ ಬದುಕು, ಜನಸಂಖ್ಯಾ ಬೆಳವಣಿಗೆಗಳಂತೆ ವಲಸೆ ಕೂಡ ನಮ್ಮ ನಡುವಿನ‌ ಅತ್ಯಂತ ಜಟಿಲವಾದ ಸಮಸ್ಯೆ. ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸಿಗರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಬೀದಿಗೆ ಬಿದ್ದ ಸಂದರ್ಭದಲ್ಲಾದರೂ ಅವರತ್ತ ನೋಡಬೇಕು. ರೈತನ ಸಮಸ್ಯೆ, ಹಳ್ಳಿಗನ ಸಮಸ್ಯೆ, ಜನಸಂಖ್ಯಾ ತೀವ್ರತೆಯ ಸಮಸ್ಯೆಗಳು ಅವರವರ ವೈಯಕ್ತಿಕ ಸಮಸ್ಯೆಗಳು ಮಾತ್ರವಲ್ಲ. ಈ ಘನ ಸಮಾಜದ ಸಮಸ್ಯೆ. ದೇಶದ ಸಮಸ್ಯೆ. ಹಾಗೆಯೇ ವಲಸಿಗರ ಸಮಸ್ಯೆ.

ಈ ವಲಸೆ ಸಮಸ್ಯೆಯನ್ನು ಆಳುವ ಸರ್ಕಾರಗಳು ಮೊದಲಿಗೆ ಸರಿಯಾಗಿ ಅರಿಯಬೇಕು. ಸಮಸ್ಯೆಯನ್ನು ಸರಿಯಾಗಿ ಗ್ರಹಿಸದಿದ್ದಾಗ ಪರಿಹಾರೋಪಾಯ ಕಂಡುಹಿಡಿಯಲು ಸಾಧ್ಯವಿಲ್ಲ. ಇಷ್ಟು ದಿನ ಆಗಿದ್ದೆ ಅದು. ಅದೇ ಕಾರಣಕ್ಕೆ ಆಗಾಗ ತಂದ ಕೆಲವೇ ಕೆಲವು ಸುಧಾರಣಾ ಕ್ರಮಗಳಿಂದ ಪರಿಣಾಮಕಾರಿಯಾದುದೇನೂ ಆಗಿಲ್ಲ. ಈಗಲಾದರೂ ವಲಸೆ ಎಂಬ‌ ಬೃಹತ್ ಸಮಸ್ಯೆಯ ಆಳ-ಅಗಲವನ್ನು ಶೋಧಿಸಬೇಕಿದೆ.

ಮೊದಲಿಗೆ ವಲಸಿಗರ ಸ್ಪಷ್ಟ ವರ್ಗೀಕರಣ ಆಗಬೇಕಿದೆ. ಸಮಾಜದ ವಿವಿಧ ವರ್ಗದ ಜನ ಅನ್ನ, ಅಕ್ಷರ, ಉದ್ಯೋಗ, ವೈಭೋಗ, ಆರೋಗ್ಯ ಅರಸಿ ನಗರಗಳಿಗೆ ಬಂದಿದ್ದಾರೆ. ಉನ್ನತ ವರ್ಗದವರು ಎಂದುಕೊಂಡವರ ಉನ್ನತಿಗೇನೂ ಧಕ್ಕೆಯಾಗಿಲ್ಲ. ಕೆಳ, ಮಧ್ಯಮ ವರ್ಗದವರ ಕಷ್ಟ ಮಾತ್ರ ಕರಗಿಲ್ಲ. ಸಾಮಾಜಿಕವಾಗಿ ಉನ್ನತ ಜಾತಿಯವರು ಎನಿಸಿಕೊಳ್ಳುವವರ ಉನ್ನತಿಗೂ ಚ್ಯುತಿ ಬಂದಿಲ್ಲ. ಕೆಳ‌ ಜಾತಿಯವರು, ಕೀಳು ಜಾತಿಯವರು ಎನಿಸಿಕೊಂಡವರ ಪಾಡು ಕ್ರಾಂತಿಕಾರಕ ಬದಲಾವಣೆಗಳನ್ನು ಕಂಡಿಲ್ಲ.

ದೇಶದ ಎಲ್ಲಾ ಮಹಾನಗರಗಳಿಗೆ ಪಕ್ಕದ ಊರುಗಳಿಂದ, ದೂರದ ಹಳ್ಳಿಗಳಿಂದ, ನೆರೆಯ ರಾಜ್ಯಗಳಿಂದ, ದೂರದ ದೇಶಗಳಿಂದ ಬಂದು ನೆಲೆಸಿದ್ದಾರೆ. ಇವರಲ್ಲಿ ದಿನಗೂಲಿ ಮಾಡುವವರು, ನಿರ್ದಿಷ್ಟವಾಗಿ ಸಂಬಳ ಪಡೆಯುವವರು, ನಗರಗಳಲ್ಲಿ ಗಳಿಸಿ ಅದರಲ್ಲೇ ಅಳೆದು ತೂಗಿ ಜೀವನ ಮಾಡುವವರು, ಸರ್ಕಾರಿ ನೌಕರಿ ಮತ್ತು ಖಾಸಗಿ ನೌಕರಿಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ವ್ಯಾಪಾರಕ್ಕಾಗಿ ಬಂದವರು, ವ್ಯಾಪಾರದಲ್ಲೂ ತಾತ್ಕಾಲಿಕವಾಗಿ, ಶಾಶ್ವತವಾಗಿ ನೆಲೆನಿಂತವರು ಹಲವಾರು ರೀತಿಯವರಿದ್ದಾರೆ. ಎಲ್ಲರೂ ವಲಸಿಗರು ಆದರೆ ಸಮಸ್ಯೆಗಳು ಮಾತ್ರ ಭಿನ್ನವಾದವು.

ಹೀಗೆ ಹಲವು‌ ಕಾರಣಗಳಿಗೆ, ಹಲವು ರೀತಿಯ ಜನ ಬಂದಿದ್ದಾರೆ. ಭಾರತದಲ್ಲಿ 2011ರ ಜನಗಣತಿಯ ಪ್ರಕಾರ 2001ರಿಂದ 2011ರಲ್ಲಿ ಅತಿಹೆಚ್ಚು ವಲಸೆ ಆಗಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಯೂ ಆಗಿದೆ. ಔದ್ಯೋಗಿಕ ಕ್ಷೇತ್ರ ವಿಸ್ತಾರವಾಗಿದ್ದಕ್ಕೂ ಆಗಿದೆ. ಹಿಂದಿನ‌ ದಶಕಗಳಲ್ಲೂ ಹೀಗೆ ದಶಕದಿಂದ ದಶಕಕ್ಕೆ ಏರಿಕೆಯಾಗಿದೆ.

ಈ ರೀತಿಯ ವಲಸೆ ಟ್ರೆಂಡ್ ಭಾರತದಲ್ಲಿ ಮಾತ್ರ ಇಲ್ಲ. ಜಗತ್ತಿನಾದ್ಯಂತ ಇದೆ. ಕೆಲವು‌ ದೇಶಗಳು ನಗರಗಳಿಗೆ ಆಗುವ ವಲಸೆಯನ್ನು ಸಮರ್ಥವಾಗಿ ನಿಭಾಯಿಸಿವೆ. ಭಾರತದ್ದು ವಿಫಲ ನಗರೀಕರಣ. ಉದಾಹರಣೆಗೆ ಒಂದು ಅಂದಾಜಿನ ಪ್ರಕಾರ ಭಾರತ ಶೇಕಡಾ 70ರಷ್ಟು ಹಳ್ಳಿಗಳನ್ನು‌ ಹೊಂದಿದೆ. ಅಮೇರಿಕಾದ ಹಳ್ಳಿಗಳ ಪ್ರಮಾಣ ಶೇಕಡಾ 5ರಷ್ಟು. ಅಮೇರಿಕಾದಲ್ಲಿ ಶೇಕಡಾ 5ರಷ್ಟು ಮಾತ್ರ ಹಳ್ಳಿಗಳು ಉಳಿದಿವೆ ಎಂದರೆ ಉಳಿದದ್ದೆಲ್ಲವೂ ನಗರೀಕರಣವಾಗಿದೆ ಎಂದೇತಾನೇ ಅರ್ಥ. ‌ಹಾಗಂತ ಅಲ್ಲಿನ ಕೃಷಿ ಉತ್ಪಾದನಾ ಸಾಮರ್ಥ್ಯ ಕುಸಿದಿಲ್ಲ. ಶೇಕಡಾ 70ರಷ್ಟು ಹಳ್ಳಿಗಳಿರುವ ಮಾತ್ರಕ್ಕೆ ಭಾರತದ ಕೃಷಿ ಉತ್ಪಾದನಾ ಸಾಮರ್ಥ್ಯ ಬಹಳ ಪ್ರಗತಿಯನ್ನೇನೂ ಸಾಧಿಸಿಲ್ಲ.

ತಾತ್ಪರ್ಯ ಇಷ್ಟೇ; ಕೆಲ ದೇಶಗಳಲ್ಲಿ ವಲಸೆಯನ್ನು ಸಮರ್ಥವಾಗಿ ನಿಭಾಯಿಸಿ ವಲಸಿಗರ ಬದುಕನ್ನು ಹಸನಾಗಿಸಲಾಗಿದೆ. ಭಾರತದ ವಲಸಿಗರ ಪೈಕಿ ಬಹುತೇಕರದ್ದು ಇದ್ದಲ್ಲಿ ಇರಲಾಗದ, ವಾಪಸ್ ಊರಿಗೆ ಹೋಗಲಾಗದ ತ್ರಿಶಂಕು ಪರಿಸ್ಥಿತಿ. ಈಗ ಕರೋನಾ ಬಂದಿದೆ. ಇದರಿಂದ ವಲಸಿಗರು ಮತ್ತಷ್ಟು ಅತಂತ್ರರೂ ಅಧೀರರೂ ಆಗಿದ್ದಾರೆ. ಈ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

Click here Support Free Press and Independent Journalism

Pratidhvani
www.pratidhvani.com