ಜಾಗತಿಕ ರಾಜಕಾರಣ ಸ್ಥಿತ್ಯಂತರಕ್ಕೆ ನಾಂದಿ ಹಾಡಿತೆ ಕರೋನಾ?
ಅಭಿಮತ

ಜಾಗತಿಕ ರಾಜಕಾರಣ ಸ್ಥಿತ್ಯಂತರಕ್ಕೆ ನಾಂದಿ ಹಾಡಿತೆ ಕರೋನಾ?

ಚೀನಾದ ಈ ದೃಢ ಹೆಜ್ಜೆಯೊಂದಿಗೆ ಭವಿಷ್ಯದಲ್ಲಿ ಜಾಗತಿಕ ರಾಜಕಾರಣದ ಚಿತ್ರಣವೇ ಇಡಿಯಾಗಿ ಬದಲಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆ ದಿಸೆಯಲ್ಲಿ ಜಾಗತಿಕ ಮುಂಚೂಣಿ ಮಾಧ್ಯಮಗಳು ಈಗಾಗಲೇ ವಿಶ್ಲೇಷಣೆ ಮಾಡತೊಡಗಿವೆ. ಈ ನಡುವೆ ಭಾರತವನ್ನು ಕೂಡ ವಿಶ್ವ ಗುರು ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕರೋನಾ ಜಾಗತಿಕ ಮಹಾಮಾರಿ ಜಗತ್ತಿನಾದ್ಯಂತ ಅಪಾರ ಸಾವು-ನೋವಿಗೆ ಕಾರಣವಾಗಿರುವುದು, ಅತಿ ಚಿಕ್ಕ, ಅತಿ ದುರ್ಬಲ ದೇಶಗಳಿಂದ ಅತಿ ದೊಡ್ಡ, ಅತಿ ಶಕ್ತಿಶಾಲಿ ದೇಶಗಳವರೆಗೆ ಸೋಂಕು ಎಲ್ಲವನ್ನೂ ತತ್ತರಿಸುವಂತೆ ಮಾಡಿದೆ. ಅಮೆರಿಕದಂತಹ ದೇಶ ಕೂಡ ಸಾವು- ನೋವುಗಳನ್ನು ತಡೆಯಲಾಗದೆ ಅಸಹಾಯಕತೆಯಿಂದ ಕೈಚೆಲ್ಲಿದೆ. ಇಡೀ ಜಗತ್ತಿನ ಪ್ರಭಾವಿ ರಾಷ್ಟ್ರ ಈಗ ಕರೋನಾದ ರುದ್ರನರ್ತನದ ಸಾವಿನ ಮನೆಯಾಗಿ ಬದಲಾಗಿದೆ.

ಇದು ಜಾಗತಿಕ ಮಟ್ಟದಲ್ಲಿ ಕರೋನಾ ಸೃಷ್ಟಿಸಿದ ಮಾನವೀಯ ಸಂಕಷ್ಟದ, ದುರಂತದ ಚಿತ್ರಣ. ಸೋಂಕು, ಸಾವು, ನೋವು, ಲಾಕ್ ಡೌನ್, ವಲಸೆ, ಹಸಿವು, ಹಲ್ಲೆ, ಹೆದ್ದಾರಿ ಸಾವುಗಳನ್ನು ಮೀರಿಯೂ ಕರೋನಾ ಸೋಂಕು ಜಾಗತಿಕ ಮಟ್ಟದಲ್ಲಿ ಹಲವು ವಿಧದಲ್ಲಿ ತನ್ನ ಪ್ರಭಾವ ಮತ್ತು ಪರಿಣಾಮಗಳನ್ನು ಬೀರಿದೆ. ಬೀರುತ್ತಿದೆ. ಅದರಲ್ಲೂ ಸೋಂಕು ತಡೆ ಮತ್ತು ಸೋಂಕಿತರ ಚಿಕಿತ್ಸೆಯ ವಿಷಯದಲ್ಲಿ ಅಗತ್ಯವಾಗಿ ಬೇಕಾದ ವೈದ್ಯಕೀಯ ಸೌಲಭ್ಯ- ಸಲಕರಣೆಗಳ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ವ್ಯಾಕ್ಸಿನ್ ಕಂಡುಹಿಡಿಯುವಲ್ಲಿ ನಡೆಯುತ್ತಿರುವ ಪ್ರಯತ್ನಗಳು ಕರೋನಾವನ್ನು ಜಾಗತಿಕ ರಾಜಕಾರಣ ಗತಿಯನ್ನೇ ತಿರುವು ಮಾಡುವಷ್ಟು ಪ್ರಭಾವಿ ವಿದ್ಯಮಾನವಾಗಿ ಬದಲಾಯಿಸಿಬಿಟ್ಟಿವೆ.

ಸೋಂಕು ನಿಯಂತ್ರಣದಲ್ಲಿ ಸಾಧಿಸಿದ ಯಶಸ್ಸು, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿನ ಸಾಧನೆಗಳು ದೇಶ-ದೇಶಗಳ ಆಂತರಿಕ ವಲಯದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿಯೂ ದೇಶಗಳ ಪ್ರಭಾವ ಮತ್ತು ಪಾತ್ರವನ್ನು ನಿರ್ಧರಿಸತೊಡಗಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ 21ನೇ ಶತಮಾನ ಭಾರತದ ಶತಮಾನ, ಈ ಕರೋನಾ ವಿರುದ್ಧ ಗೆಲುವ ಸಾಧಿಸುವ ಭಾರತ, ಈ ಮಹಾಮಾರಿಯ ಬಳಿಕ ಜಾಗತಿಕ ನಾಯಕನಾಗಿ ಹೊರಹೊಮ್ಮಲಿದೆ ಎಂಬ ಬಹಳ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಅವರ ಆ ವಿಶ್ವಾಸದ ಮಾತುಗಳ ಹಿಂದೆಯೂ ಕರೋನಾ ಸೋಂಕಿನ ವಿಷಯದಲ್ಲಿ ದೇಶ ಆಂತರಿಕವಾಗಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಎಷ್ಟು ವ್ಯೂಹಾತ್ಮಕವಾಗಿ ಕಾರ್ಯತಂತ್ರಗಳನ್ನು ಜಾರಿಗೆ ತರಲಿದೆ ಎಂಬ ದೂರದೃಷ್ಟಿಯೇ ಇದ್ದಿರಬಹುದು. ಅಥವಾ ಸಾಮಾನ್ಯವಾಗಿ ಅವರ ಮಾತುಗಳ ಬಗ್ಗೆ ಬರುವ ಟೀಕೆಗಳಂತೆ ಸುಮ್ಮನೇ ತಮ್ಮ ವರ್ಚಸ್ಸು ವೃದ್ಧಿಯ ಹೇಳಿಕೆಯಾಗಿ ಆ ಮಾತು ಆಡಿರಬಹುದು.

ಆದರೆ, ಕರೋನಾ ಕಾಲದ ಬಳಿಕ ಜಾಗತಿಕ ನಾಯಕತ್ವಕ್ಕಾಗಿ ಮೋದಿಯವರಿಗಿಂತ ಹೆಚ್ಚು ವಿಶ್ವಾಸ ಮತ್ತು ಯೋಜಿತ ಕಾರ್ಯತಂತ್ರದೊಂದಿಗೆ ಚೀನಾ ದಾಪುಗಾಲಿಡುತ್ತಿದೆ. ಕರೋನಾದಂತಹ ಮಾರಕ ಮಹಾಮಾರಿಯ ತವರು ಚೀನಾ, ಆ ರೋಗದ ವಿರುದ್ಧ ತಾನು ಸಾಧಿಸಿದ ದಿಗ್ವಿಜಯ ಮತ್ತು ಆ ರೋಗದ ಸಂದರ್ಭದಲ್ಲಿ ತನ್ನ ಜಾಗತಿಕ ಪ್ರಭಾವವನ್ನು ವೃದ್ಧಿಸಿಕೊಳ್ಳುತ್ತಿರುವ ವೇಗದ ವಿಶ್ವಾಸದ ಮೇಲೆ ಅಂತಹ ದಾಪುಗಾಲು ಇಡುತ್ತಿದೆ ಮತ್ತು ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಆ ಹೆಜ್ಜೆಗಳು ಬಹಳ ದೃಢವಾಗಿಯೇ ಕಾಣುತ್ತಿವೆ ಎಂಬುದು ವಾಸ್ತವ.

ಜಾಗತಿಕವಾಗಿ 18ನೇ ಶತಮಾನದಲ್ಲಿ ವಸಾಹತುಶಾಹಿ ಶಕ್ತಿಯಾಗಿ ಹೊರಹೊಮ್ಮಿದ ಇಂಗ್ಲೆಂಡ್, ಸುಮಾರು ಎರಡು ಶತಮಾನಗಳ ಕಾಲ ಜಾಗತಿಕ ಶಕ್ತಿಯಾಗಿ ಮೆರೆಯಿತು. ಆದರೆ, 1956ರ ಹೊತ್ತಿಗೆ ಸುಯೇಜ್ ಕಾಲುವೆಯ ವಿವಾದ ಬ್ರಿಟಿಷರ ಜಾಗತಿಕ ಶಕ್ತಿಯ ಕಿರೀಟವನ್ನು ಮಣ್ಣುಪಾಲು ಮಾಡಿತು. ಆ ಬಳಿಕ ಈವರೆಗೆ ಸುಮಾರು ಐದು ದಶಕಗಳ ಕಾಲ ಅಮೆರಿಕ ಜಗತ್ತಿನ ದೊಡ್ಡಣ್ಣನಾಗಿ ಮೆರೆದಿದೆ. ಆದರೆ, ಇದೀಗ ‘ಅಮೆರಿಕ ಫಸ್ಟ್’ ಘೋಷಣೆಯೊಂದಿಗೆ ದೇಶದ ಶಕ್ತಿ ಕೇಂದ್ರ ಶ್ವೇತಭವನದ ಗಾದಿಯನ್ನೇರಿದ ಡೊನಾಲ್ಡ್ ಟ್ರಂಪ್ ಎಂಬ ಹುಂಬ ನಾಯಕನ ಅವಧಿಯಲ್ಲಿ ಅಮೆರಿಕ ಜಾಗತಿಕ ನಾಯಕನ ಸ್ಥಾನದಿಂದ ಸ್ವಕೇಂದ್ರಿತ ಕುಡುಮಿ ದೇಶವಾಗಿ ಕುಸಿಯುತ್ತಿದೆ. ಆಂತರಿಕವಾಗಿ ಮತ್ತು ಜಾಗತಿಕವಾಗಿ ತನ್ನ ವಿರೋಧಿಗಳನ್ನು ಹಣಿಯುವ ಏಕಮಾತ್ರ ನೀತಿಯನ್ನು ಹೊಂದಿರುವ ಟ್ರಂಪ್, ಅಂತಹ ಸಂಕುಚಿತ ಮತ್ತು ಮೂರ್ಖತನದ ಕಾರಣದಿಂದಾಗಿಯೇ ಇಂದು ಕರೋನಾದ ವಿಷಯದಲ್ಲಿ ಸಾವಿನ ಮನೆಯಾಗಿ ಬದಲಾಗಿರುವುದಷ್ಟೇ ಅಲ್ಲದೆ, ಜಾಗತಿಕವಾಗಿ ದಶಕಗಳಿಂದ ಆ ದೇಶ ಹೊಂದಿದ್ದ ಪ್ರಭಾವಕ್ಕೂ ಸೂತಕದ ಮಸಿ ಬಳಿದಿದೆ. ಅಮೆರಿಕದ ಈ ವೈಫಲ್ಯ ಮತ್ತು ಮಿತಿಯನ್ನೇ ಬಳಸಿಕೊಳ್ಳುತ್ತಿರುವ ಚಾಣಾಕ್ಷ ಚೀನಾ, ಕರೋನಾದ ಜಾಗತಿಕ ಸಂಕಷ್ಟವನ್ನೇ ತನ್ನ ಪಾಲಿನ ವರದಾನವಾಗಿ ಮಾರ್ಪಡಿಸಿಕೊಳ್ಳುತ್ತಿದೆ. ಅದು ಡ್ರ್ಯಾಗನ್ ವ್ಯೂಹಾತ್ಮಕ ತಂತ್ರಗಾರಿಕೆ!

ಭಾರತ, ಅಮೆರಿಕವೂ ಸೇರಿದಂತೆ ಕರೋನಾ ಸೋಂಕಿನಿಂದ ಕಂಗೆಟ್ಟಿರುವ ದೇಶಗಳಿಗೆ ಅಗತ್ಯ ಮಾರ್ಗದರ್ಶನ, ಸಲಹೆಸೂಚನೆ, ಮಾಸ್ಕ್, ವೆಂಟಿಲೇಟರು, ಪಿಪಿಇ ಕಿಟ್, ಔಷಧಿ, ವೈದ್ಯರ ನೆರವು ಸೇರಿದಂತೆ ಹಲವು ಬಗೆಯಲ್ಲಿ ಸಹಾಯ ಹಸ್ತ ಚಾಚಿರುವ ಚೀನಾ, ಅಂತಹ ನೆರವಿನ ರಾಜತಾಂತ್ರಿಕತೆಯ ಮೂಲಕವೇ ಜಾಗತಿಕ ಮಟ್ಟದಲ್ಲಿ ಹೊಸ ಭರವಸೆಯಾಗಿ ಹೊರಹೊಮ್ಮುತ್ತಿದೆ. ಅದರಲ್ಲೂ ಪ್ರಮುಖವಾಗಿ ಮಧ್ಯಪ್ರಾಚ್ಯ ಮತ್ತು ಯುರೋಪಿನ ಹಲವು ರಾಷ್ಟ್ರಗಳಲ್ಲಿ ಕರೋನಾ ವಿರುದ್ಧದ ಅವುಗಳ ಹೋರಾಟಕ್ಕೆ ಬೆಂಬಲವಾಗಿ ವೈದ್ಯಕೀಯ ಮತ್ತು ಹಣಕಾಸು ನೆರವು ನೀಡುವ ಮೂಲಕ ಚೀನಾ ತನ್ನ ಜಾಗತಿಕ ರಾಜಕೀಯ ಪ್ರಭಾವವನ್ನು ಕೂಡ ವೃದ್ಧಿಸಿಕೊಳ್ಳುತ್ತಿದೆ.

ಅದರಲ್ಲೂ ವಿಶೇಷವಾಗಿ ಇರಾನ್ ಮತ್ತು ಅದರ ಮಿತ್ರ ಮುಸ್ಲಿಂ ರಾಷ್ಟ್ರಗಳೊಂದಿಗೆ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರವಧಿಯ ಆರಂಭದಿಂದಲೂ ಹೊಂದಿರುವ ತೀವ್ರ ವಿರೋಧ ಮತ್ತು ಸೇಡಿನ ಧೋರಣೆಗಳು, ಚೀನಾದ ಪರ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿವೆ. ಟರ್ಕಿ, ಇರಾನ್, ಇರಾಕ್, ಕತಾರ್, ಸಿರಿಯಾ, ಲೆಬನಾನ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಕರೋನಾ ವಿರುದ್ಧದ ಸಮರಕ್ಕೆ ಕೈಜೋಡಿಸುವ ಮೂಲಕ ಚೀನಾ ಈ ಮೊದಲೇ ತನ್ನ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್(ಬಿಆರ್ ಐ) ಖಂಡಾಂತರ ಸಂಪರ್ಕ ಮೂಲಸೌಕರ್ಯ ಯೋಜನೆಯ ಮೂಲಕ ಹೊಂದಿದ್ದ ರಾಜತಾಂತ್ರಿಕ ಪ್ರಭಾವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದೆ. ಆ ವಲಯದ ಮೇಲಿನ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುತ್ತಿದೆ.

ಮಧ್ಯಪ್ರಾಚ್ಯ ವಲಯದಲ್ಲಿ ಟರ್ಕಿ ಬಳಿಕ ಅತಿ ಹೆಚ್ಚು ಕರೋನಾ ಪ್ರಕರಣಗಳನ್ನು ಕಂಡಿರುವ ಇರಾನ್ ಗೆ ನೆರವು ನೀಡುವ ವಿಷಯದಲ್ಲಿ ಅಮೆರಿಕದ ವಿರೋಧದ ಹೊರತಾಗಿಯೂ ಅದರ ಮಿತ್ರರಾಷ್ಟ್ರಗಳಾದ ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ದೊಡ್ಡ ಪ್ರಮಾಣದ ವೈದ್ಯಕೀಯ ಮತ್ತು ಆರ್ಥಿಕ ನೆರವು ನೀಡಿದವು. ಜರ್ಮಿನಿ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಜಂಟಿಯಾಗಿ ಸುಮಾರು 5.6 ಮಿಲಿಯನ್ ಡಾಲರ್ ಹಣಕಾಸು ನೆರವು ಘೋಷಿಸಿದವು. ಅದಲ್ಲದೆ ಯುಎಇ ಸೇರಿದಂತೆ ಸುಮಾರು 30 ದೇಶಗಳು ಇರಾನಿಗೆ ನೆರವು ನೀಡಿದವು. ಆದರೆ, ಚೀನಾ ನೀಡಿದ ನೆರವು ಬಹಳ ಮುಖ್ಯವಾಗಿತ್ತು. ಯುಎಇ ಮತ್ತು ಸೌದಿ ಅರೇಬಿಯಾದಂತಹ ಅಮೆರಿಕ ಮಿತ್ರರಾಷ್ಟ್ರಗಳು ಕೂಡ ಚೀನಾದ ಈ ತಂತ್ರಗಾರಿಕೆಗೆ ಮಾರುಹೋದವು. ಪರಿಣಾಮವಾಗಿ ಸದ್ಯ ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ಅಮೆರಿಕದ ಪ್ರಭಾವ ಮತ್ತು ಪ್ರಾಧಾನ್ಯತೆ ಕ್ಷೀಣಿಸಿದೆ ಎಂದು ಲಂಡನ್ ಪತ್ರಕರ್ತ ಡಾ ಬಾಮೊ ನೂರಿ ವಿಶ್ಲೇಷಿಸಿದ್ದಾರೆ(ದ ವೈರ್).

ವಿಶ್ವಸಂಸ್ಥೆ, ಐಎಂಎಫ್, ವಿಶ್ವಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆಯಂತಹ ಜಾಗತಿಕ ಮಟ್ಟದ ಪ್ರಭಾವಿ ಸಂಸ್ಥೆಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮೆರಿಕ ಇಂದು, ಟ್ರಂಪ್ ಅವರ ಸೀಮಿತ ರಾಜಕೀಯ ದೃಷ್ಟಿಕೋನ ಮತ್ತು ಜಾಗತಿಕ ಅರಿವಿನ ಕಾರಣದಿಂದಾಗಿ ಅಂತಹ ಎಲ್ಲಾ ಸಂಸ್ಥೆಗಳಿಂದ ದೂರಾಗುತ್ತಿದೆ. ಚೀನಾ ಸೇರಿದಂತೆ ತನ್ನ ಶತ್ರು ದೇಶಗಳಿಗೆ ಆ ಸಂಸ್ಥೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂಬ ಆರೋಪಗಳನ್ನು ಮಾಡಿ ಟ್ರಂಪ್ ಎಲ್ಲ ಜಾಗತಿಕ ಶಕ್ತಿ ಕೇಂದ್ರಗಳಿಂದ ಹಿಂದೆ ಸರಿಯುತ್ತಿರುವ ಹೊತ್ತಿಗೆ, ಚೀನಾ ಆ ಅವಕಾಶವನ್ನು ಬಳಸಿಕೊಂಡು ಆ ಸಂಸ್ಥೆಗಳ ಪ್ರಭಾವಿ ಸ್ಥಾನಗಳನ್ನು ಆಕ್ರಮಿಸುತ್ತಿದೆ. ಚೀನಾದ ಈ ತಂತ್ರಗಾರಿಕೆ ಕೂಡ ಅದರ ಜಾಗತಿಕ ರಾಜಕೀಯ ತಂತ್ರಗಾರಿಕೆಗೆ ಒದಗಿಬಂದಿದೆ ಎಂದು ನೂರಿ ವಿಶ್ಲೇಷಿಸಿದ್ದಾರೆ.

ಅದೇ ಹೊತ್ತಿಗೆ ಜಾಗತಿಕ ಪ್ರಭಾವಿ ಮಾಧ್ಯಮ ‘ದ ಎಕಾನಾಮಿಸ್ಟ್’ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಮೆರಿಕದ ಸಂಕುಚಿತ ವಿದೇಶಾಂಗ ನೀತಿ ಮತ್ತು ವಿವೇಚನಾಹೀನ ಜಾಗತಿಕ ನಡೆಗಳು ಆ ದೇಶವನ್ನು ಜಾಗತಿಕ ಪ್ರಭಾವಿ ರಾಷ್ಟ್ರ ಸ್ಥಾನದಿಂದ ಒಂದೊಂದೇ ಮೆಟ್ಟಿಲು ಜಾರಿಸುತ್ತಿವೆ. ಅದೇ ಹೊತ್ತಿಗೆ ಚೀನಾ ತನ್ನ ಚಾಣಾಕ್ಷ ಜಾಗತಿಕ ರಾಜಕೀಯ ತಂತ್ರಗಾರಿಕೆ ಮತ್ತು ವ್ಯವಹಾರ ತಂತ್ರಗಳ ಮೂಲಕ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. ಆ ಹಿನ್ನೆಲೆಯಲ್ಲಿಯೇ ಕೋವಿಡ್-19 ಮಹಾಮಾರಿ ವಿಶ್ವದ ಅತ್ಯಂತ ಅಪಾಯಕಾರಿ ದುರಂತವಾಗಿ, ವಿಪತ್ತಾಗಿ ಅಷ್ಟೇ ಅಲ್ಲ; ಜಾಗತಿಕ ರಾಜಕಾರಣವನ್ನು ಅಮೆರಿಕದಿಂದ ಬೇರೆಡೆಗೆ ತಿರುಗಿಸಿದ ಮಹತ್ವದ ತಿರುವಿನ ಘಟನೆಯಾಗಿಯೂ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ವಿಶ್ಲೇಷಿಸಿದೆ.

ಎರಡನೇ ಮಹಾಯುದ್ಧದ ಬಳಿಕ ಅಮೆರಿಕದ ಅಧ್ಯಕ್ಷರುಗಳು ಬಹಳ ಶ್ರಮವಹಿಸಿ, ಮಿಲಿಟರಿ ಬಲ ಮತ್ತು ಹಣಕಾಸಿನ ಶಕ್ತಿಯ ಮೇಲೆ ಕಟ್ಟಿದ್ದ ಜಾಗತಿಕ ಪ್ರಾಬಲ್ಯದ ಶ್ರೇಣೀಕೃತ ವ್ಯವಸ್ಥೆಯ ಆಧಾರಸ್ತಂಭಗಳನ್ನು ಕೆಡವಿ, ತನ್ನದೇ ಆದ ಹೊಸ ವ್ಯವಸ್ಥೆಯನ್ನು ಕಟ್ಟಲು ಚೀನಾ ಈ ಕರೋನಾ ಕಾಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ ಎಂದು ಎಕಾನಾಮಿಸ್ಟ್ ಹೇಳಿದೆ.

ತನ್ನದೇ ನೆಲದಲ್ಲಿನ ತನ್ನದೇ ಪ್ರಜೆಗಳ ಸಾವು-ನೋವಿಗೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಲಾಗದೆ, ನಾನೇನೂ ಮಾಡಲಾಗದು ಎಂದು ಕೈಚೆಲ್ಲಿರುವ ಅಮೆರಿಕ ಅಧ್ಯಕ್ಷರ ವರಸೆ ಆಂತರಿಕವಾಗಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆ ದೇಶದ ಚಿತ್ರಣವನ್ನು ಹೀನಾಯಗೊಳಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ನಾಯಕತ್ವದ ಶೂನ್ಯತೆ ಆವರಿಸುತ್ತಿದೆ ಎಂಬ ಹೊತ್ತಿಗೆ ಚೀನಾ ದಿಢೀರನೇ ಆ ಸ್ಥಾನ ತುಂಬುವ ವರಸೆ ತೋರುತ್ತಿದೆ. ವೈದ್ಯಕೀಯ ಮತ್ತು ಹಣಕಾಸು ನೆರವಿನ ಜೊತೆಗೆ ತನ್ನ ಪ್ರಭಾವಿ ಮಾಧ್ಯಮ ಪ್ರಾಪಗಾಂಡಾದೊಂದಿಗೆ ಜಾಗತಿಕವಾಗಿ ಈ ಸಂಕಷ್ಟದ ಹೊತ್ತಲ್ಲಿ ಎಲ್ಲ ದೇಶಗಳ ಜೊತೆ ತಾನಿದ್ದೇನೆ ಎಂಬ ಸಂದೇಶವನ್ನು ಕೂಡ ರವಾನಿಸುತ್ತಿದೆ. ಆ ಮೂಲಕ 21ನೇ ಶತಮಾನದ ತನ್ನದು, ಜಾಗತಿಕ ನಾಯಕತ್ವಕ್ಕೆ ತಾನಿದ್ದೇನೆ ಎಂಬ ಸಂದೇಶವನ್ನು ಕೂಡ ಚಾಣಾಕ್ಷ ಚೀನಾ ರವಾನಿಸಿದೆ!

ಚೀನಾದ ಈ ದೃಢ ಹೆಜ್ಜೆಯೊಂದಿಗೆ ಭವಿಷ್ಯದಲ್ಲಿ ಜಾಗತಿಕ ರಾಜಕಾರಣದ ಚಿತ್ರಣವೇ ಇಡಿಯಾಗಿ ಬದಲಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆ ದಿಸೆಯಲ್ಲಿ ಜಾಗತಿಕ ಮುಂಚೂಣಿ ಮಾಧ್ಯಮಗಳು ಈಗಾಗಲೇ ವಿಶ್ಲೇಷಣೆ ಮಾಡತೊಡಗಿವೆ. ಈ ನಡುವೆ ಭಾರತವನ್ನು ಕೂಡ ವಿಶ್ವ ಗುರು ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಆ ದಿಸೆಯಲ್ಲಿ ಮೋದಿಯವರ ಮುಂದೆ ಇರುವ ಜಾಗತಿಕ ವ್ಯೂಹಾತ್ಮಕ ಕಾರ್ಯತಂತ್ರವೇನು? ನಮ್ಮ ವಿದೇಶಾಂಗ ನೀತಿ ಏನು ಎಂಬುದು ಈಗ ಚರ್ಚೆಯಾಗಬೇಕಿದೆ. ಚೀನಾದ ಜೊತೆ ಪೈಪೋಟಿಗಿಳಿದು ಮೇಲುಗೈ ಸಾಧಿಸುವ ಮಟ್ಟಿನ ಆರ್ಥಿಕ ಮತ್ತು ರಾಜಕೀಯ ಪ್ರಭಾವ ಜಾಗತಿಕವಾಗಿ ಭಾರತಕ್ಕೆ ಇದೆಯೇ ಎಂಬುದು ಕೂಡ ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆ!

Click here Support Free Press and Independent Journalism

Pratidhvani
www.pratidhvani.com