ಅಭಿಮತ

ಪ್ರಚಾರದ ಬೆನ್ನು ತಟ್ಟಿಕೊಂಡವರಿಗೆ ಗಾಳಿ ಬಿಡಿಸಿದ ಟ್ವೀಟಿಗರು..!

ಟೈಮ್ಸ್ ನೌ ಸುದ್ದಿ ವಾಹಿನಿ & ಒ ಆರ್ ಮ್ಯಾಕ್ಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮೊದಲ ಸ್ಥಾನ ನೀಡಲಾಗಿದ್ದು, ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಎರಡನೇ ಸ್ಥಾನ ನೀಡಲಾಗಿದೆ.

ಕೃಷ್ಣಮಣಿ

ಕರೋನಾ ಸೋಂಕು ಭಾರತದಲ್ಲಿ ನಿಯಂತ್ರಣ ಆಗುತ್ತಿದೆಯೇ? ಈ ಪ್ರಶ್ನೆಯನ್ನು ಯಾರಿಗೇ ಕೇಳಿದರೂ ಉತ್ತರ ಮಾತ್ರ ಇಲ್ಲ ಎನ್ನುವುದೇ ಆಗಿದೆ. ಆದರೆ ಇದೀಗ ಎಲ್ಲಾ ರೀತಿಯ ವಿನಾಯಿತಿಗಳು ಜಾರಿಗೆ ಬರುತ್ತಿದೆ. ಇಂದಿನಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಶುರುವಾಗುತ್ತಿದ್ದು ನಾಳೆಯಿಂದ ರೈಲು ಸಂಚಾರವೇ ಶುರು ಆಗಲಿದೆ. ಇದೀಗ ಕರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ನಾವೇ ಮುಂದೆ ನಾವೇ ಮುಂದೆ ಎಂದು ಬೆನ್ನು ತಟ್ಟಿಕೊಳ್ಳುವ ಕೆಲಸ ಭರದಿಂದ ಸಾಗಿದೆ. ಈಗಾಗಲೇ ದೇಶದಲ್ಲಿ ಕರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ಯಾರು ಪ್ರಥಮ ಎನ್ನುವ ಬಗ್ಗೆ ಸಮೀಕ್ಷೆಯನ್ನೇ ನಡೆಸಲಾಗಿದೆ. ಕರೋನ ಸೋಂಕನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಕರ್ನಾಟಕದ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ದೇಶದಲ್ಲೇ 2ನೇ ಸ್ಥಾನ ನೀಡಲಾಗಿದೆ. ಈ ಬಗ್ಗೆ ಟೈಮ್ಸ್ ನೌ ಸುದ್ದಿ ವಾಹಿನಿ & ಒ ಆರ್ ಮ್ಯಾಕ್ಸ್ ಜಂಟಿಯಾಗಿ ಸಮೀಕ್ಷೆ ನಡೆಸಿದ್ದ ಬಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮೊದಲ ಸ್ಥಾನ ನೀಡಲಾಗಿದ್ದು, ಕರ್ನಾಟಕ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಎರಡನೇ ಸ್ಥಾನ ನೀಡಲಾಗಿದೆ. ಮೂರನೇ ಸ್ಥಾನವನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹಾಗೂ ನಾಲ್ಕನೇ ಸ್ಥಾನವನ್ನು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಐದನೇ ಸ್ಥಾನದಲ್ಲಿ ಉದ್ಧವ್ ಠಾಕ್ರೆ ಮತ್ತು ಕೊನೆ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕೊಡಲಾಗಿದೆ. ಆದರೆ ಸಮೀಕ್ಷೆ ನಡೆದಿರುವ ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಸಮೀಕ್ಷಾ ಸಂಸ್ಥೆ ಹಾಗೂ ಮಾಧ್ಯಮದ ವಿರುದ್ಧ ಜನರೇ ಹರಿಹಾಯುತ್ತಿದ್ದಾರೆ. ಇದಕ್ಕೆ ನಿಖರವಾದ ಕಾರಣವೂ ಇದೆ. ಅದೇನೆಂದರೆ ದೇಶದಲ್ಲಿ ಮೊದಲಿಗೆ ಕರೋನಾ ಸೋಂಕು ಕಾಲಿಟ್ಟಿದ್ದು, ದೇವರ ನಾಡು ಕೇರಳಕ್ಕೆ. ಆದರೆ ಕೇರಳ ಸರ್ಕಾರ ಕೈಗೊಂಡ ಕಾರ್ಯಗಳು ದೇಶದ ಗಮನ ಸೆಳೆದಿತ್ತು. ನಂತರ ಕೇರಳದಲ್ಲಿ ಕರೋನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ. ಆದರೆ ಕೇರಳ ಸಿಎಂ ಹೆಸರು ಲಿಸ್ಟ್‌ನಲ್ಲೇ ಇಲ್ಲ.

ಕೇರಳದಲ್ಲಿ ಮೇ 11ರ ಬೆಳಗ್ಗೆ 8 ಗಂಟೆ ಹೆಲ್ತ್ ಬುಲೆಟಿನ್ ಪ್ರಕಾರ ಇಡೀ ರಾಜ್ಯದಲ್ಲಿ 512 ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಅದರಲ್ಲಿ 489 ಪ್ರಕರಣಗಳು ಗುಣಮುಖ ಆಗಿವೆ. ಅಂದರೆ ಆ್ಯಕ್ಟೀವ್ ಆಗಿರುವ ಕರೋನಾ ಸೋಂಕಿತರ ಸಂಖ್ಯೆ ಕೇವಲ 23 ಮಾತ್ರ. ಅದರಲ್ಲೂ ಇಂದು 7 ಕರೋನಾ ಕೇಸ್ಗಳು ವಿದೇಶದಿಂದ ಆಗಮಿಸಿದವರಿಗೆ ಪತ್ತೆಯಾಗಿರುವುದು ಸೇರಿದಂತೆ ಈ ಹಂತಕ್ಕೆ ಬಂದಿದೆ. ಆದರೆ ದೆಹಲಿಯಲ್ಲಿ ನಿನ್ನೆ ಒಂದೇ ದಿನ 310 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 7233 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ ಕರ್ನಾಟಕದಲ್ಲಿ ಭಾನುವಾರ 54 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 848 ಪ್ರಕರಣಗಳು ಪತ್ತೆಯಾಗಿವೆ. ಇನ್ನೂ 31 ಜನರು ಸಾವಿನ ಮನೆ ಸೇರಿದ್ದಾರೆ. ತೆಲಂಗಾಣದಲ್ಲಿ ಭಾನುವಾರ 33 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 1196 ಕೇಸ್ಗಳಿವೆ, ಸಾವಿನ ಸಂಖ್ಯೆ 30 ಆಗಿದೆ. ತಮಿಳುನಾಡಿನಲ್ಲಿ ನಿನ್ನೆ 509 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 7,204 ಸೋಂಕಿತರಾಗಿದ್ದಾರೆ. ಇಲ್ಲೀವರೆಗೂ 47 ಜನರು ಸಾವನ್ನಪ್ಪಿದ್ದಾರೆ. ಅತ್ತ ಕರೋನಾ ಸೋಂಕಿನ ಸ್ವರ್ಗ ಎನ್ನಲಾಗುತ್ತಿರುವ ಮಹಾರಾಷ್ಟ್ರದಲ್ಲಿ 1,278 ಹೊಸ ಪ್ರಕರಣಗಳು ಭಾನುವಾರ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,171 ಆಗಿದೆ. ಸಾವಿನ ಸಂಖ್ಯೆ 832 ಆಗಿದೆ. ಇನ್ನು ಆರನೇ ಸ್ಥಾನ ಪಡೆದಿರುವ ಪಶ್ಚಿಮ ಬಂಗಾಳದಲ್ಲಿ ಭಾನುವಾರ 153 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1939 ಕೇಸ್‌ಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆ 185 ಆಗಿದೆ.

ಆದ್ರೆ ಕರೋನಾ ನಿರ್ವಹಿಸಿದ ರೀತಿಯನ್ನು ಯಾವ ಆಧಾರದಲ್ಲಿ ಸಮೀಕ್ಷೆ ಒಳಪಡಿಸಲಾಗಿದೆ ಎನ್ನುವುದನ್ನು ಸಮೀಕ್ಷಾ ವರದಿಯಲ್ಲಿ ಹೇಳಿಲ್ಲ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಶೇಕಡಾ 65ರಷ್ಟು ಅಂಕ, ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಶೇಕಡಾ 56ರಷ್ಟು ಅಂಕ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಶೇಕಡಾ 49ರಷ್ಟು ಅಂಕ, ತಮಿಳುನಾಡು ಸಿಎಂ ಪಳನಿಸ್ವಾಮಿ ಅವರಿಗೆ ಶೇಕಡಾ 40ರಷ್ಟು ಅಂಕ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಶೇಕಡಾ 35ರಷ್ಟು ಅಂಕ ಹಾಗೂ 6ನೇ ಸ್ಥಾನದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಶೇಕಡಾ 6ರಷ್ಟು ಅಂಕಗಳನ್ನು ನೀಡಲಾಗಿದೆ. ಮೆಟ್ರೋ ನಗರಗಳಲ್ಲಿ ಸೋಂಕು ಹರಡಿರುವುದನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲಾಗಿದೆ ಎನ್ನಲಾಗ್ತಿದೆ. ಆದರೆ ಸೋಂಕು ನಿಯಂತ್ರಣಕ್ಕೆ ಕೇರಳದಲ್ಲಿ ತೆಗೆದುಕೊಂಡ ಅಗತ್ಯ ಕ್ರಮಗಳನ್ನು ದೇಶದ ಯಾವುದೇ ರಾಜ್ಯವೂ ತೆಗೆದುಕೊಂಡಿಲ್ಲ. ಸೋಂಕು ತೀರ ಇಳಿಮುಖವಾಗಿದ್ದು, ಸಾಂಕ್ರಾಮಿಕ ಕಾಯಿಲೆ ಕರೋನಾ ನಿಯಂತ್ರಣ ಮಾಡುವಲ್ಲಿ ಮೊದಲ ಸ್ಥಾನದಲ್ಲಿರುವ ಕೇರಳ ಸಿಎಂ ಪಿಣರಾಯ್ ವಿಜಯನ್ ಅವರನ್ನು ಲಿಸ್ಟ್ನಲ್ಲೇ ಇಡದಿರುವುದು ಟ್ವಿಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಾರೆ ಸಮೀಕ್ಷಾ ಸಂಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆಗಳು ಕೆಲವು ರಾಜಕೀಯ ಹಿಂಬಾಲಕರ ಮರ್ಜಿಗೆ ಒಳಗಾಗಿ ಬೇಕಾದಂತೆ ಪ್ರಚಾರ ಕೊಡುವ ಕೆಲಸ ಮಾಡುತ್ತಿವೆ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿದೆ.

Click here Support Free Press and Independent Journalism

Pratidhvani
www.pratidhvani.com