ಜನರನ್ನು ನಯವಾಗಿ ವಂಚಿಸುತ್ತಿರುವ ಪ್ರಧಾನಿ ಮೋದಿಗೆ ಅಧಿಕಾರದಲ್ಲಿರಲು ನೈತಿಕತೆ ಇದೆಯೇ?
ಅಭಿಮತ

ಜನರನ್ನು ನಯವಾಗಿ ವಂಚಿಸುತ್ತಿರುವ ಪ್ರಧಾನಿ ಮೋದಿಗೆ ಅಧಿಕಾರದಲ್ಲಿರಲು ನೈತಿಕತೆ ಇದೆಯೇ?

ಕರೋನಾ ಸೋಂಕು ಪ್ರಧಾನಿ ಮೋದಿ ಆಡಳಿತದ ವೈಫಲ್ಯಗಳ ಮೇಲಿದ್ದ ಸಿಹಿ- ಸಿಹಿ, ಹಸಿ- ಹಸಿ ಸುಳ್ಳುಗಳ ಹೊದಿಕೆಯನ್ನು ಕಿತ್ತೊಗೆದಿದೆ. ಪ್ರತಿ ಹಂತದಲ್ಲೂ ಮೋದಿ ಪ್ರಬುದ್ಧತೆ ಪ್ರದರ್ಶಿಸುವಲ್ಲಿ ವಿಫಲರಾಗುತ್ತಿದ್ದಾರೆ. ನಿರ್ಗತಿಕರಾದ ವಲಸೆ ಕಾರ್ಮಿಕರ ಬಗ್ಗೆ ಪ್ರಧಾನಿ ಮೋದಿ ತಳೆದ ನಿರ್ದಯ, ಅಮಾನವೀಯ ನಿಲುವನ್ನು ಅವರ ಬೆಂಬಲಿಗರು ಕ್ಷಮಿಸಬಹುದು, ಆದರೆ, ಈ ದೇಶದ ಇತಿಹಾಸ ಎಂದೂ ಕ್ಷಮಿಸದು!

ರೇಣುಕಾ ಪ್ರಸಾದ್ ಹಾಡ್ಯ

ಕರೋನಾ ಸಂಕಷ್ಟಗಳ ನಿವಾರಣೆಗಾಗಿ ಪ್ರಧಾನಿ ನರೇಂದ್ರಮೋದಿ ಅವರು ‘ಪ್ರೈಮ್ ಟೈಮ್’ ನಲ್ಲಿ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದಾಗಲೇ ಈ ಪ್ಯಾಕೇಜಿನ ‘ಸತ್ಯಾಸತ್ಯತೆ’ಗಳ ಬಗ್ಗೆ ‘ಪ್ರತಿಧ್ವನಿ’ ಬೆಳಕು ಚೆಲ್ಲಿತ್ತು. ಲೆಕ್ಕಾಚಾರ ಇಲ್ಲದೇ, ಅತ್ಯಂತ ಲಘುವಾಗಿ ಘೋಷಣೆ ಮಾಡಲಾಗಿದ್ದ ಆ ‘ಪ್ಯಾಕೇಜು’ ಜನರ ಹಾದಿ ತಪ್ಪಿಸುವ ಮತ್ತು ಕರೋನಾ ನಿರ್ವಹಣೆಯ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಮೋದಿಯ ಜಾಣ್ಮೆಯ ನಡೆ ಎಂದೂ ‘ಪ್ರತಿಧ್ವನಿ’ ಹೇಳಿತ್ತು. ಅದನ್ನೀಗ ಮುಖ್ಯವಾಹಿನಿ ಮಾಧ್ಯಮಗಳು ಚರ್ಚಿಸುತ್ತಿವೆ.

ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರುಪಾಯಿಗಳ ಲೆಕ್ಕವಿಲ್ಲದ ಪ್ಯಾಕೇಜಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಲೆಕ್ಕಕೊಡುವ ಹತಾಶ ಪ್ರಯತ್ನ ವಿಫಲವಾಗಿದೆ. ಸುಧೀರ್ಘ ನಾಲ್ಕು ಕಂತುಗಳಲ್ಲಿ ನಿರ್ಮಲಾ ಸೀತಾರಮನ್ ವಿವರಿಸುವಲ್ಲಿ ಬಸವಳಿದು ಹೋಗಿದ್ದಾರೆ. ಇಲ್ಲದ ಲಕ್ಷ ಲಕ್ಷ ಕೋಟಿಗಳಿಗೆ ಲೆಕ್ಕ ಕೊಡುವ ಮತ್ತು ಆ ಲೆಕ್ಕದ ಮೂಲಕ ಪ್ರಧಾನಿ ನರೇಂದ್ರ ಮೋದಿ ನಯವಾಗಿ ದೇಶದ ಜನರನ್ನು ವಂಚಿಸುವ ಪ್ರಯತ್ನವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಭಾಗಷಃ ಸಫಲರಾಗಿದ್ದಾರೆ. ಭಾಗಷಃ ಸಫಲತೆ ಏಕೆಂದರೆ- ‘ಮೋದಿ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜಿನ ಮೂಲಕ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ’ ಎಂಬುದು ಸಾಮಾನ್ಯ ನಾಗರಿಕನಿಗೂ ಅರ್ಥವಾಗಿದೆ. ಮೋದಿ ತಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿರುವುದು ಮಾತ್ರ ‘ಮೋದಿ ಅಭಿಮಾನಿ’ಗಳಿಗೆ ಅರ್ಥವಾಗಿಲ್ಲ. ಅಷ್ಟಕ್ಕೂ ಮೋದಿ ಹೆಚ್ಚೂಕಮ್ಮಿ ಶೇ.38ರಷ್ಟು ಮತಪಡೆದು ಗೆದ್ದವರು!

ಪ್ಯಾಕೇಜುಗಳಿಗೆ ಹತ್ತಾರು ಆಯಾಮಗಳಲ್ಲಿ ಹಲವಾರು ಅರ್ಥಗಳಿವೆ. ಕರೋನಾ ಸೋಂಕು ಹರಡುತ್ತಿರುವ ಹೊತ್ತಿನಲ್ಲಿ ಜನರ ಸಂಕಷ್ಟಕ್ಕೆ ಪ್ಯಾಕೇಜು ಎಂದರೆ ಒಂದೇ ಅರ್ಥ. ಅದು- ಸಂಕಷ್ಟದಲ್ಲಿರುವ ಜನರಿಗೆ ನೇರವಾಗಿ (ಅಂದರೆ ಅವರ ಖಾತೆಗಳಿಗೆ ಪಾವತಿಸಿ, ಖಾತೆಯೇ ಇಲ್ಲದವರಿಗೆ ವ್ಯವಸ್ಥಿತವಾಗಿ ನೀಡುವ) ನಗದು ಪಾವತಿಸುವುದು, ಆ ಮೂಲಕ ಆಹಾರ ಮತ್ತಿತರ ಅತ್ಯಗತ್ಯವಸ್ತುಗಳನ್ನು ಖರೀದಿಸಲು ನೆರವು ನೀಡಿ, ‘ಹಸಿವು ರಹಿತ ಗೌರವಯುತ ಜೀವನ’ ನಡೆಸಲು ಅವಕಾಶ ಮಾಡಿಕೊಡುವುದಾಗಿದೆ.

ದುರಾದೃಷ್ಟವಶಾತ್ ಪ್ರಧಾನಿ ನರೇಂದ್ರ ಮೋದಿ ಪ್ಯಾಕೇಜನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ತಾವು ಪ್ಯಾಕೇಜಿನ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುವ ವಿಷಯವು ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿದ್ದೂ ಸಹ ತಮ್ಮೆಲ್ಲ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಗುಮ್ಮಾಗಿದ್ದಾರೋ? ಅಥವಾ ಅವರಿಗೆ ಸಲಹೆ ನೀಡುವವರು ಮೋದಿ ಅವರನ್ನೇ ಹಾದಿತಪ್ಪಿಸಿದ್ದಾರೋ? ಗೊತ್ತಿಲ್ಲ! ‘ಜನರು ನೀವು ಹೇಳಿದ್ದೆಲ್ಲವನ್ನು ನಂಬುತ್ತಾರೆ’ ಎಂದು ಮೋದಿ ಸಲಹೆಗಾರರು ಪ್ರಧಾನಿ ಮೋದಿಯನ್ನೇ ನಂಬಿಸಿ ಈ ಅವಾಂತರಗಳಿಗೆ ಕಾರಣವಾಗಿದ್ದಾರಾ? ಅದೂ ಗೊತ್ತಿಲ್ಲ. ಸತತ ನಾಲ್ಕು ದಿನಗಳ ಕಾಲ ಕರಾರುವಕ್ಕಾಗಿ ಮಧ್ಯಾಹ್ನ/ಸಂಜೆ ನಾಲ್ಕು ಗಂಟೆಗೆ ಮಾಧ್ಯಮಗೋಷ್ಠಿಗಳ ಮೂಲಕ ಪ್ಯಾಕೇಜುಗಳನ್ನು ಕಂತು ಕಂತಿನಲ್ಲಿ ವಿವರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ತಾವು ಘೋಷಿಸುತ್ತಿರುವುದು ಪ್ಯಾಕೇಜು ಅಲ್ಲಾ ಎಂಬುದು ಗೊತ್ತಾಗಲಿಲ್ಲವೇ? ಗೊತ್ತಿಲ್ಲ!

ಆದರೆ, ಗೊತ್ತಿರುವ ಮತ್ತು ನಿಧಾನವಾಗಿ ಗೊತ್ತಾಗುತ್ತಿರುವ ಸತ್ಯ ಸಂಗತಿ ಏನೆಂದರೆ- ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಪ್ಯಾಕೇಜು ನಿಜವಾದ ಪ್ಯಾಕೇಜಲ್ಲ. ಅದು ಬರೀ ಲೆಕ್ಕಾಚಾರಗಳ ಮೂಲಕ ಜನರಿಗೆ ಮಂಕುಬೂದಿ ಎರಚುವ, ಆ ಮೂಲಕ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಹತಾಶ ಪ್ರಯತ್ನ ಎಂಬುದು.

ಪ್ರಧಾನಿ ನರೇಂದ್ರಮೋದಿ ಅವರ ಮೂಲಭೂತ ಸಮಸ್ಯೆ ಏನೆಂದರೆ, ತಾವು ಮಾಡಿದ್ದೇ ಸರಿ ಎಂಬ ನಂಬಿಕೆ ಮತ್ತು ಬೇರೆಯವರು ಮಾಡಿದ್ದೆಲ್ಲ ಸರಿಯಲ್ಲ ಎಂಬ ಮಹಾನಂಬಿಕೆ. ಕರೋನಾದಂತಹ ಸಂಕಷ್ಟಕಾಲದಲ್ಲಿ ಲಾಕ್ ಡೌನ್ ಘೋಷಣೆ ಇರಲಿ, ಮೋದಿ ಸರ್ಕಾರದ ನಿರ್ದಯ ನಿಲುವುಗಳಿಂದಾಗಿ ನಿರ್ಗತಿಕರಾದ ವಲಸೆ ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಕಾರ್ಯತಂತ್ರ ರೂಪಿಸುವುದಾಗಲಿ, ಪ್ಯಾಕೇಜುಗಳನ್ನು ಘೋಷಿಸುವುದಾಗಲೀ- ಎಲ್ಲವನ್ನೂ ಸರ್ವಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ ನಂತರ ಕೈಗೊಳ್ಳಬೇಕಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ‘ಸಂಸದೀಯ ಸೌಜನ್ಯ ನಡವಳಿಕೆ’ ತೀರಾ ಅಗತ್ಯವೂ ಹೌದು. ಅಂತಹ ಸೌಜನ್ಯವನ್ನು ಪ್ರಧಾನಿ ಮೋದಿ ಪ್ರದರ್ಶಿಸಲಿಲ್ಲ.

ಪ್ರಧಾನಿ ಮೋದಿ ಯಾಕೆ ಪ್ರತಿ ಪಕ್ಷದ ನಾಯಕರೊಂದಿಗೆ ಚರ್ಚಿಸಬೇಕಿತ್ತು ಎಂದರೆ- ಮೋದಿಗೆ ಅರ್ಥವಾಗದ ಎಷ್ಟೋ ಸಂಗತಿಗಳು, ದೇವೇಗೌಡರಂತಹ ಮತ್ಸದ್ಧಿಗಳಿಗೆ, ರಾಹುಲ್ ಗಾಂಧಿಯಂತಹ ಯುವನಾಯಕರಿಗೆ, ಮಮತಾ ಬ್ಯಾನರ್ಜಿ, ಪಿನರಾಯ್ ವಿಜಯ್, ಕೆ. ಚಂದ್ರಶೇಖರರಾವ್, ಅಶೋಕ್ ಗೆಹ್ಲಾಟ್, ತಮ್ಮದೇ ಪಕ್ಷದ ಬಿ.ಎಸ್. ಯಡಿಯೂರಪ್ಪ, ಶಿವರಾಜ್ ಸಿಂಗ್ ಚೌವ್ಹಾಣ್ ಅಂತಹ ನುರಿತ ನಾಯಕರಿಗೆ ಗೊತ್ತಿರುತ್ತದೆ. ಆಯಾ ರಾಜ್ಯಗಳ ಸಂಕಷ್ಟಗಳು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಗೊತ್ತಿರುತ್ತದೇ ಹೊರತು ದೆಹಲಿಯಲ್ಲಿ ಕೂತವರಿಗಲ್ಲ.

ಒಂದು ವೇಳೆ ಪ್ರಧಾನಿ ಮೋದಿ ಸರ್ವಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ್ದರೆ, ಈ ದೇಶ ಕಂಡ ಅತ್ಯಂತ ಅಮಾನವೀಯವಾದ ನಿರ್ಗತಿಕರಾದ ವಲಸೆ ಕಾರ್ಮಿಕರ ಸಂಕಷ್ಟಗಳು ಎದುರಾಗುತ್ತಲೇ ಇರಲಿಲ್ಲ, ಅಥವಾ ಆ ಸಮಸ್ಯೆಯು ಇಷ್ಟೊಂದು ಬೃಹತ್ತಾಗಿ ಬೆಳೆಯುತ್ತಿರಲಿಲ್ಲ. ಗರ್ಭಿಣಿಯರು, ಮಕ್ಕಳು, ವೃದ್ಧರು ಬರಿಗಾಲಲ್ಲಿ ನಡೆದು ತಮ್ಮ ಗೂಡು ಸೇರಬೇಕಾದ ಹಾದಿಯಲ್ಲೇ ಪ್ರಾಣಬಿಡುವ, ರೈಲುಹಳಿಗಳ ಮೇಲೆ ಪಯಣ ಮುಗಿಸುವ, ಗೂಡು ಸೇರುವ ಆಸೆಯನ್ನು ಹೆದ್ದಾರಿ ಅಪಘಾತಗಳಲ್ಲೇ ಅಂತ್ಯಗೊಳಿಸಿಕೊಳ್ಳುವ ದುಸ್ಥಿತಿ ಬರುತ್ತಿರಲಿಲ್ಲ.

ಅಷ್ಟಕ್ಕೂ ಮೋದಿ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ಮಾಡಲೆತ್ನಿಸಿದ್ದು ಯಾವಾಗ? ಎರಡನೇ ಹಂತದ ಲಾಕ್ಡೌನ್ ಘೋಷಿಸುವ ಮುನ್ನ. ಮೊದಲ ಹಂತದ ಲಾಕ್ಡೌನ್ ಘೋಷಿಸುವ ಮುನ್ನ ರಾಜ್ಯಗಳೊಂದಿಗೂ ಸಮಾಲೋಚಿಸಲಿಲ್ಲ. ಖುದ್ಧು ಪ್ರಧಾನಿ ಮೋದಿಗೆ ಅಥವಾ ಪ್ರಧಾನಿ ಮೋದಿ ಸಲಹೆಗಾರರಿಗೆ, ದೂರಾಲೋಚನೆಗಳಾಗಲೀ, ಮುಂದಾಲೋಚನೆಗಳಾಗಲೀ ಇಲ್ಲ ಎಂಬುದಕ್ಕೆ ಕರೊನಾ ಸೋಂಕಿನ ಆರಂಭದಲ್ಲೇ ಚಪ್ಪಾಳೆ ತಟ್ಟಿಸಿ, ದೀಪಾ ಹಚ್ಚಿಸುವುದರಲ್ಲೇ ಸಾಬೀತಾಗಿ ಹೋಯಿತು. ವಿಶ್ವವ್ಯಾಪಿ ಪ್ರಚಾರ ಗಿಟ್ಟಿಸುವ ಸಲುವಾಗಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಧಾನಿ ಮೋದಿಗೆ, ಈಗ ಗುಜರಾತ್ ರಾಜ್ಯದಲ್ಲಿ ಅದರಲ್ಲೂ ಅಹ್ಮದಾಬಾದ್ ನಲ್ಲಿ 8,144 (ಮೇ 16 ರಂದು) ಸೋಂಕು ಪ್ರಕರಣಗಳು ವರದಿಯಾಗಿರುವ ಬಗ್ಗೆ ಕಾಳಜಿಯೇ ಇದ್ದಂತಿಲ್ಲ. ಡಿಸೆಂಬರ್ ಅಂತ್ಯದಲ್ಲೇ ಕರೋನಾ ಸೋಂಕು ಹಡಲಾರಂಭಿಸಿ, ಜನವರಿ ಅಂತ್ಯದಲ್ಲಿ ಭಾರತ ಸೇರಿದಂತೆ ವಿಶ್ವದ್ಯಾಂತ ವ್ಯಾಪಿಸಲಾರಂಭಿಸಿದ್ದರೂ, ಫೆಬ್ರವರಿ 24ರಂದು ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಯಾದರು.

ಪ್ರಧಾನಿ ನರೇಂದ್ರಮೋದಿಗೆ ಅಥವಾ ಅವರ ಸಲಹೆಗಾರರಿಗೆ ದೂರಾಲೋಚನೆ ಅಥವಾ ಮುಂದಾಲೋಚನೆ ಇದ್ದಿದ್ದರೆ ಖಂಡಿತವಾಗಿಯೂ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಫೆಬ್ರವರಿ 24ರಂದು ಆಯೋಜಿಸುತ್ತಿರಲಿಲ್ಲ, ಮುಂದೂಡಿ, ಮುಂದೆಂದಾದರೂ ಆಯೋಜಿಸುತ್ತಿದ್ದರು. ಪ್ರಧಾನಿ ಮೋದಿಯ ಪ್ರಚಾರದ ಹುಚ್ಚಿಗೆ ಮತ್ತು ಕರೋನಾ ಸೊಂಕಿನ ಕಿಚ್ಚಿಗೆ ಅಹ್ಮದಾಬಾದ್ ಸೋಂಕು ಪೀಡಿತವಾಗಿದೆ. ಇದರ ನೈತಿಕ ಹೊಣೆಯನ್ನು ಯಾರು ಹೊರಬೇಕು? ಖುದ್ಧು ಪ್ರಧಾನಿ ನರೇಂದ್ರ ಮೋದಿ ಹೊರುತ್ತಾರೆಯೇ? ಅಥವಾ ಅವರ ಸಲಹೆಗಾರರು ಹೊರುತ್ತಾರೆಯೇ? ನೈತಿಕತೆ ಇದ್ದದ್ದೇ ಆದರೆ, ಮೋದಿ ಅಧಿಕಾರದಲ್ಲಿ ಮುಂದುವರೆಯುತ್ತಿದ್ದರೇ?

ಕರೋನಾ ಸೋಂಕು ಬರುವ ಮುನ್ನವೇ ನಮ್ಮ ದೇಶದ ಆರ್ಥಿಕತೆಗೆ ಹಿಂಜರಿಕೆಯ ಸೋಂಕು ತಗುಲಿತ್ತು. ಆದರೆ, ಕರೋನಾ ಸೋಂಕು ಬಂದು ಮೋದಿ ಆಡಳಿತದ ವೈಫಲ್ಯಗಳ ಮೇಲಿದ್ದ ಸಿಹಿ- ಸಿಹಿ, ಹಸಿ- ಹಸಿ ಸುಳ್ಳುಗಳ ಹೊದಿಕೆಯನ್ನು ಕಿತ್ತೊಗೆದಿದೆ. ಪ್ರತಿ ಹಂತದಲ್ಲೂ ಪ್ರಧಾನಿ ಮೋದಿ ಪ್ರಬುದ್ಧತೆ ಪ್ರದರ್ಶಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕರೋನಾ ಸೋಂಕು ಆರಂಭದಲ್ಲೇ ಚಪ್ಪಾಳೆ, ದೀಪಾ ಹಚ್ಚುವಿಕೆ, ವಲಸೆ ಕಾರ್ಮಿಕರ ಬಗ್ಗೆ ಚಿಂತಿಸದೇ ಏಕಾಏಕಿ ಲಾಕ್ಡೌನ್ ಘೋಷಣೆ, ವಲಸೆಕಾರ್ಮಿಕರಿಗೆ ನೆರವಾಗದೇ ಉದ್ಯಮಿಗಳಿಗೆ ನೆರವಾಗುವ, ಸಾರ್ವಜನಿಕ ಉದ್ಯಮಗಳನ್ನು ಮಾರುವ ಇರಾದೆಯ 20 ಲಕ್ಷ ಕೋಟಿ ಪ್ಯಾಕೇಜು ಘೋಷಣೆಗಳ ಮೂಲಕ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ.

ಪ್ರಧಾನಿ ಮೋದಿ ನಿರ್ಗತಿಕರಾದ ವಲಸೆ ಕಾರ್ಮಿಕರ ಬಗ್ಗೆ ತಳೆದ ನಿರ್ದಯ, ಅಮಾನವೀಯ ನಿಲವನ್ನು ಅವರ ಅಭಿಮಾನಿಗಳು, ಹಿಂಬಾಲಕರು ಕ್ಷಮಿಸಬಹುದು, ಆದರೆ, ಈ ದೇಶದ ಇತಿಹಾಸ ಎಂದೂ ಕ್ಷಮಿಸದು!

Click here Support Free Press and Independent Journalism

Pratidhvani
www.pratidhvani.com