ರೆಡ್ ಝೋನ್ ವಲಸಿಗರಿಗೆ ಅನುಮತಿ ನೀಡಿ ಎಡವಿತೇ ಸರ್ಕಾರ?
ಅಭಿಮತ

ರೆಡ್ ಝೋನ್ ವಲಸಿಗರಿಗೆ ಅನುಮತಿ ನೀಡಿ ಎಡವಿತೇ ಸರ್ಕಾರ?

ರಾಜ್ಯದಲ್ಲಿ ಇದೀಗ ಹಳ್ಳಿಗಳಿಗೂ ಸೋಂಕು ವಿಸ್ತರಿಸುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇರುವ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಂತಹ ರಾಜ್ಯಗಳಿಂದ ಬರುವವರಿಗೆ ಅನುಮತಿ ನೀಡುವ ಬಗ್ಗೆ ರಾಜ್ಯ ಪುನರ್ ಪರಿಶೀಲನೆ ಮಾಡಬೇಕಾಗಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕರೋನಾ ಸೋಂಕು ನಿಯಂತ್ರಣದ ವಿಷಯದಲ್ಲಿ ಸರ್ಕಾರದ ಏಕೈಕ ಪರಿಣಾಮಕಾರಿ ಕ್ರಮ ಎನ್ನಲಾಗುತ್ತಿರುವ ಲಾಕ್ ಡೌನ್ ಮೂರನೇ ಹಂತ ಕೂಡ ಮುಕ್ತಾಯ ಕಾಣುತ್ತಿದೆ.

ಆ ಹಿನ್ನೆಲೆಯಲ್ಲಿ 55 ದಿನಗಳ ನಿರಂತರ ದೇಶವ್ಯಾಪಿ ಲಾಕ್ ಡೌನ್ ಕರೋನಾ ನಿಯಂತ್ರಣದ ದಿಸೆಯಲ್ಲಿ ನಿಜಕ್ಕೂ ಫಲಕೊಟ್ಟಿದೆಯೇ? ಲಾಕ್ ಡೌನ್ ಹೇರುವಾಗ ಮತ್ತು ಆ ಬಳಿಕ ಕೇಂದ್ರ ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ಸೋಂಕು ಹರಡುವಿಕೆ ತಡೆಯುವಲ್ಲಿ ಸರ್ಕಾರದ ಈ ಏಕೈಕ ಕ್ರಮ ಸಫಲವಾಗಿದೆಯೇ? ಎಂಬ ಪ್ರಶ್ನೆಗಳಿಗೆ ನಮ್ಮ ಮುಂದೆ ದಿನದಿಂದ ಯಾವ ಲಂಗುಲಗಾಮಿಲ್ಲದೆ ಏರುತ್ತಲೇ ಇರುವ ಸೋಂಕಿನ ಪ್ರಮಾಣ ಮತ್ತು ಒಟ್ಟಾರೆ ಒಂದು ಲಕ್ಷ ಸಮೀಪಿಸಿದ ಸೋಂಕಿತರ ಒಟ್ಟು ಸಂಖ್ಯೆಗಳೇ ಉತ್ತರ ಹೇಳುತ್ತಿವೆ. ಈ ನಡುವೆಯೂ ಲಾಕ್ ಡೌನ್ ಸೋಂಕು ಹರಡುವಿಕೆಯ ವ್ಯಾಪಕತೆ ಮತ್ತು ವೇಗವನ್ನು ಗಣನೀಯವಾಗಿ ತಗ್ಗಿಸಿದೆ ಎಂದು ಸರ್ಕಾರ ಹೇಳುತ್ತಿದೆ.

ಸೋಂಕಿನ ಪ್ರಮಾಣ, ನೇರವಾಗಿ ಎಷ್ಟು ವ್ಯಾಪಕವಾಗಿ ಕರೋನಾ ವೈರಾಣು ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬುದರ ಮೇಲೆ ನಿಂತಿದೆ. ಹಾಗಾಗಿ ಈಗಿನ ಪರೀಕ್ಷೆ ಪ್ರಮಾಣಕ್ಕೆ ಹೋಲಿಸಿದರೆ ಪತ್ತೆಯಾಗಿರುವ ಸೋಂಕಿನ ಪ್ರಮಾಣ ದೇಶದ ಜನಸಂಖ್ಯೆಯ ಅಪಾರ ಪ್ರಮಾಣದ ಮುಂದೆ ಅತ್ಯಲ್ಪವೇ. ಆದರೆ, ಪರೀಕ್ಷೆಯೇ ಕಡಿಮೆ ಪ್ರಮಾಣದಲ್ಲಿರುವಾಗ, ಕ್ಲಸ್ಟರ್ ಮತ್ತು ಸಮುದಾಯವಾರು ವ್ಯಾಪಕ ಪರೀಕ್ಷೆಗಳನ್ನು ನಡೆಸದೇ ಇರುವಾಗ ರೋಗ ನಿಯಂತ್ರಣದಲ್ಲಿದೆ ಎಂದು ನಂಬುವುದು ಆತ್ಮಹತ್ಯಾತ್ಮಕವಾಗಲಿದೆ ಎಂಬುದಕ್ಕೆ ಮುಂಬೈ ಮಹಾನಗರವೊಂದರದಿಂದಲೇ ದೇಶದ ಮೂಲೆಮೂಲೆ ಹರಡುತ್ತಿರುವ ಕರೋನಾ ಸೋಂಕು ಪ್ರಕರಣಗಳೇ ನಿದರ್ಶನ.

ಎರಡನೇ ಹಂತದ ಲಾಕ್ ಡೌನ್ ಬಳಿಕ ದೊರೆತ ಅಂತರ ರಾಜ್ಯ ಪ್ರಯಾಣ ಅವಕಾಶ ಬಳಸಿಕೊಂಡು ಮುಂಬೈನಿಂದ ವಾಪಸು ತಮ್ಮ ಮೂಲ ನೆಲೆಗಳಿಗೆ ಬಂದವರಿಂದ ದಿಢೀರನೇ ಕಳೆದ 10-12 ದಿನಗಳಿಂದ ದೇಶದ ಮೂಲೆಮೂಲೆಗಳಲ್ಲಿ ಕರೋನಾ ಸೋಂಕು ಪ್ರಕರಣಗಳು ಉಲ್ಬಣಗೊಂಡಿವೆ. ಅಂಕಿಅಂಶಗಳು ನೀಡುವ ಚಿತ್ರಣ ಎಷ್ಟು ಭಯಾನಕವಾಗಿದೆ ಎಂದರೆ ಮುಂಬೈನಿಂದ ಬಂದವರಲ್ಲಿ ಶೇ99 ರಷ್ಟು ಮಂದಿಗೆ ಸೋಂಕು ದೃಢಪಡುತ್ತಿರುವ ಆತಂಕವಿದೆ.

ಕರ್ನಾಟಕದ್ದೇ ಉದಾಹರಣೆ ತೆಗೆದುಕೊಂಡರೂ ಕಳೆದ ಹತ್ತು ದಿನಗಳಿಂದ, ಅಂದರೆ ಮೇ 8ರ ಬಳಿಕ ರಾಜ್ಯದ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಏರಿಕೆ ಕಂಡುಬಂದಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಮೇ 8ರವರೆಗೆ ಒಂದು ಗತಿಯಲ್ಲಿದ್ದರೆ, ಆ ಬಳಿಕ ದಿಢೀರ್ ಏರುಗತಿಯಲ್ಲಿದೆ. ಸೋಂಕು ಹೊಸ ಹೊಸ ಜಿಲ್ಲೆಗಳಿಗೆ ವ್ಯಾಪಿಸಿದೆ. ಆವರೆಗೆ ಒಂದೂ ಪ್ರಕರಣ ವರದಿಯಾಗದೇ ಹಸಿರು ವಲಯದಲ್ಲಿದ್ದ ಜಿಲ್ಲೆಗಳಲ್ಲಿ ಕೂಡ ಕಳೆದ ಹತ್ತು ದಿನದಲ್ಲಿ ಪ್ರಕರಣದ ಸಂಖ್ಯೆ ದಿಢೀರನೇ ಎರಡಂಕಿ ದಾಟಿದೆ. ಶಿವಮೊಗ್ಗ ಇರಬಹುದು, ಹಾಸನವಿರಬಹುದು; ಹಸಿರು ವಲಯದಲ್ಲಿದ್ದ ಜಿಲ್ಲೆಗಳಲ್ಲಿ ದಿಢೀರನೇ ಸೋಂಕು ವ್ಯಾಪಕವಾಗಿದೆ. ಸಮಾಧಾನದ ಸಂಗತಿ ಎಂದರೆ ಈ ಹೊಸ ಪ್ರಕರಣಗಳ ಪೈಕಿ ಬಹುತೇಕ ಕ್ವಾರಂಟೈನ್ ನಲ್ಲಿ ಇರುವವರೇ ಎಂಬುದು.

ಭಾನುವಾರ ಕೂಡ ರಾಜ್ಯದ ಸೋಂಕಿತರ ಸಂಖ್ಯೆ ದಿಢೀರನೇ ಏರಿಕೆ ಕಂಡಿದ್ದು, ಈವರೆಗಿನ ದಿನವೊಂದರ ಅತಿ ಹೆಚ್ಚು ಪ್ರಕರಣಗಳ ದಾಖಲೆಯಾಗಿದೆ. ಈ ಹೊಸ ಪ್ರಕರಣಗಳ ಪೈಕಿ ಮಂಡ್ಯ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಎಲ್ಲವೂ ಮುಂಬೈ ಸಂಪರ್ಕದವುಗಳೇ ಆಗಿವೆ. ಜೊತೆಗೆ ರಾಜ್ಯದಲ್ಲಿ ಭಾನುವಾರ ದೃಢಪಟ್ಟಿರುವ ಪ್ರಕರಣಗಳಲ್ಲಿ ಕೂಡ ಶೇ80ರಷ್ಟು ಮುಂಬೈ ಮೂಲದವೇ ಆಗಿವೆ.

ಅಂದರೆ ಮೊದಲನೆಯದಾಗಿ ಎರಡನೇ ಹಂತದ ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ತೀವ್ರಗತಿಯಲ್ಲಿ ಪ್ರಕರಣಗಳ ಏರಿಕೆಗೆ ಮೂಲ ಕಾರಣ ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತಿನ ಅಹಮದಾಬಾದ್ನಿಂದ ಮೂಲ ನೆಲೆಗಳಿಗೆ ವಾಪಸು ಬಂದವರು ಮತ್ತು ಅವರಲ್ಲಿ ಕೆಲವರು ಕ್ವಾರಂಟೈನ್ ಆಗದೇ, ಜಿಲ್ಲಾಡಳಿತಗಳ ಕಣ್ಣುತಪ್ಪಿಸಿ ತಿರುಗಾಡಿದ್ದರ ಪರಿಣಾಮವಾಗಿ(ಶಿವಮೊಗ್ಗದ ತೀರ್ಥಹಳ್ಳಿ ಪ್ರಕರಣದ ರೀತಿ) ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು. ಅಂದರೆ; ಮುಖ್ಯವಾಗಿ ಎರಡು ವಾರಗಳಲ್ಲಿ ರಾಜ್ಯಕ್ಕೆ ಪ್ರವೇಶ ಪಡೆದ ಹೊರಗಿನವರಿಂದಲೇ ರಾಜ್ಯದಲ್ಲಿ ಪ್ರಕರಣಗಳು ಏರಿಕೆಯಾಗಿವೆ.

ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ಪಾಸ್ ನೀಡಿಯೇ ಕರೆಸಿಕೊಳ್ಳಲಾಗುತ್ತಿದೆ. ಕ್ವಾರಂಟೈನ್ ಮಾಡಲಾಗುತ್ತಿದೆ. ಮುಂಬೈನಂತಹ ಸೂಕ್ಷ್ಮ ಪ್ರದೇಶದಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವ ಷರತ್ತಿನ ಮೇಲೆಯೇ ಅವರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಹಸಿರು ವಲಯದ ಪ್ರದೇಶದಿಂದ ಬರುವವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂಬುದು ಅಂತರ ರಾಜ್ಯ ಪ್ರಯಾಣಕ್ಕೆ ಅನುಮತಿ ನೀಡುವಾಗ ಮತ್ತು ಆ ಬಳಿಕವೂ ರಾಜ್ಯ ಸರ್ಕಾರ ಮತ್ತು ವಿವಿಢ ಜಿಲ್ಲಾಡಳಿತಗಳು ಪದೇ ಪದೇ ಹೇಳುತ್ತಿರುವ ಸಂಗತಿ.

ಆದರೆ, ಜಿಲ್ಲಾಡಳಿತಗಳ ಕಣ್ಗಾವಲು ಚೆಕ್ ಪೋಸ್ಟಗಳ ಕಣ್ತಪ್ಪಿಸಿ, ಅಥವಾ ಗೋಲ್ ಮಾಲ್ ಮಾಡಿ ಒಳನುಸುಳಿ ಯಾವ ಕ್ವಾರಂಟೈನ್ ಇಲ್ಲದೆ ರಾಜಾರೋಷವಾಗಿ ಬೀದಿಬೀದಿ ಅಲೆದು ಹಲವರಿಗೆ ರೋಗ ಹರಡಿದ ತೀರ್ಥಹಳ್ಳಿಯ ಪಿ 995ರಂಥ ಪ್ರಕರಣಗಳು ಇಡೀ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿವೆ. ಶಿವಮೊಗ್ಗ ಯಾವ ಗಡಿ ತಪಾಸಣಾ ಕೇಂದ್ರಗಳಲ್ಲೂ ಸಿಕ್ಕಿಕೊಳ್ಳದೆ, ಕಣ್ತಪ್ಪಿಸಿ ಮುಂಬೈನಿಂದ ಶಿವಮೊಗ್ಗ ನಗರಕ್ಕೆ ಬಂದಿದ್ದ ಪಿ 995, ನಗರದಲ್ಲಿ ಆಟೋವೊಂದರಲ್ಲಿ ಪ್ರಯಾಣಿಸಿದ್ದ. ಆ ಬಳಿಕ ಪಿ 995ಗೆ ಸೋಂಕು ದೃಢಪಡುವವರೆಗೆ ಆ ಆಟೋ ಚಾಲಕನ ಸಂಪರ್ಕಕ್ಕೆ ಬಂದವರು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.

ಇನ್ನುಆತ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ತಲುಪುವವರೆಗೆ ಮತ್ತು ತನ್ನ ಗ್ರಾಮದಲ್ಲಿ ಎಷ್ಟು ಜನರ ಸಂಪರ್ಕಕ್ಕೆ ಬಂದಿದ್ದ, ಅವರುಗಳು ಎಲ್ಲಿದ್ದಾರೆ ಎಂಬ ಕುರಿತು ಜಿಲ್ಲಾಡಳಿತ ತಪಾಸಣೆ ನಡೆಸತೊಡಗಿದೆ. ಈಗಾಗಲೇ ಈತನೊಬ್ಬನ ಕಾರಣಕ್ಕೆ ಹಲವಾರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆತನ ಪ್ರಾಥಮಿಕ ಸಂಪರ್ಕಿತರು ಮದುವೆ, ಮಸಣ, ಪಾರ್ಟಿಗಳಲ್ಲಿ ಹೋಗಿ ಬಂದಿದ್ದಾರೆ. ಉದ್ಯೋಗಖಾತ್ರಿ, ಫ್ಯಾಕ್ಟರಿ ಕೆಲಸಗಳಿಗೂ ಹೋಗಿದ್ದಾರೆ. ಅವರೆಲ್ಲರನ್ನೂ ಪತ್ತೆ ಮಾಡಿ, ಅವರ ಸಂಪರ್ಕಕ್ಕೆ ಬಂದವರನ್ನು ತಪಾಸಣೆಗೊಳಪಡಿಸಿ ಸೋಂಕು ಖಚಿತಪಡಿಸಿಕೊಂಡು ರೋಗ ನಿಯಂತ್ರಿಸುವ ಹರಸಾಹಸದ ಸವಾಲು ಜಿಲ್ಲಾಡಳಿತದ ಮುಂದಿದೆ.

ಎಲ್ಲಾತಪಾಸಣೆ, ಚೆಕ್ ಪೋಸ್ಟುಗಳನ್ನು ಮೀರಿಯೂ ತರಕಾರಿ ಲಾರಿಗಳಲ್ಲಿ, ಸರಕು ಸಾಗಣೆ ವಾಹನಗಳಲ್ಲಿ, ಸೈಕಲು, ಕಾಲ್ನಡಿಗೆಯಲ್ಲಿ ಬಂದವರು ಅವರ ಸಂಕಷ್ಟ, ನೋವುಗಳೊಂದಿಗೆ ಸೋಂಕಿನ ಅಪಾಯವನ್ನೂ ಹೊತ್ತುತಂದು ಜನಸಮುದಾಯಕ್ಕೆ ಹಬ್ಬಿಸುವ ಸಾಧ್ಯತೆಗಳ ಕುರಿತು, ತೀರ್ಥಹಳ್ಳಿಯ ಪ್ರಕರಣ ಒಂದು ಉದಾಹರಣೆ ಅಷ್ಟೇ.

ಜೊತೆಗೆ, ಸಾಂಸ್ಥಿಕ ಕ್ವಾರಂಟೈನ್ ಆದವರು ಕೂಡ ಕ್ವಾರಂಟೈನ್ ಜಾಗದಲ್ಲಿಯೇ ಪರಸ್ಪರ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಕೂಡ ಹೆಚ್ಚಿದೆ. ಏಕೆಂದರೆ; ಹೊರ ಜಿಲ್ಲೆಯಿಂದ ಬಂದವರನ್ನು ಗಡಿಯಲ್ಲಿಯೇ ವಶಕ್ಕೆ ಪಡೆದು ಕ್ವಾರಂಟೈನ್ ಮಾಡಿದರೂ, ತತಕ್ಷಣವೇ ಅವರ ಗಂಟಲು ದ್ರವದ ಮಾದರಿ ತೆಗೆದು ತಪಾಸಣೆಗೆ ಕಳಿಸಲಾಗುತ್ತಿದೆಯೇ? ಅಥವಾ ಕೇವಲ ರೋಗ ಲಕ್ಷಣ ಹೊಂದಿರುವವರನ್ನು ಮಾತ್ರ ವೈರಾಣು ಪರೀಕ್ಷೆಗೆ ಪರಿಗಣಿಸಲಾಗುತ್ತಿದೆಯೇ ಎಂಬುದು ಕೂಡ ಮುಖ್ಯ. ಅಲ್ಲದೆ, ಗಂಟಲು ದ್ರವ ಮಾದರಿ ತಪಾಸಣೆ ವರದಿಬರುವವರೆಗೆ ಎಲ್ಲರನ್ನೂ ಒಂದೇ ಕಡೆ(ಸುಮಾರು ಒಂದೊಂದು ಕೊಠಡಿಯಲ್ಲಿ 20-25 ಜನ) ಕ್ವಾರಂಟೈನ್ ಮಾಡಲಾಗುತ್ತಿದೆ. ಐಸೋಲೇಷನ್ ಮಾಡುವಷ್ಟು ಸ್ಥಳಾವಕಾಶ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ. ಹಾಗಾಗಿ ಕ್ವಾರಂಟೈನ್ ಸಂದರ್ಭದಲ್ಲಿಯೇ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು ಎಂಬ ಆತಂಕ ಕೂಡ ಇದೆ.

ಈ ಆತಂಕಗಳ ಹಿನ್ನೆಲೆಯಲ್ಲಿ ಈಗ ಅತಿ ಹೆಚ್ಚು ಪ್ರಕರಣಗಳು ಇರುವ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಂತಹ ರಾಜ್ಯಗಳಿಂದ ಬರುವವರಿಗೆ ಅನುಮತಿ ನೀಡುವ ಬಗ್ಗೆ ರಾಜ್ಯ ಪುನರ್ ಪರಿಶೀಲನೆ ಮಾಡಬೇಕಾದ ಅಗತ್ಯ ಎದುರಾಗಿದೆ. ಮುಖ್ಯವಾಗಿ ಪಾಸುಗಳ ದುರುಪಯೋಗ, ಪಾಸ್ ಬಳಸದೇ ಒಳನುಸುಳುವ ಪ್ರಕರಣಗಳು ಮತ್ತು ಹಾಗೆ ಒಳ ಬಂದವರಿಂದಾಗಿ ರಾಜ್ಯದಲ್ಲಿ ವ್ಯಾಪಕವಾಗಿ ಏರಿಕೆಯಾಗುತ್ತಿರುವ ಸೋಂಕು ರಾಜ್ಯದ ದೈನಂದಿನ ಬದುಕಿನ ಮೇಲೆ, ಉದ್ಯಮ- ವ್ಯವಹಾರ ಚಟುವಟಿಕೆಗಳ ಮೇಲೆ ಮತ್ತು ಮುಖ್ಯವಾಗಿ ಹಾಗೆ ಬಂದರರಲ್ಲಿ ಸೋಂಕು ದೃಢಪಟ್ಟ ಬಳಿಕ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳು ಮತ್ತು ಅದಕ್ಕಾಗಿ ತೆರಬೇಕಾದ ವೆಚ್ಚ ಮತ್ತು ಶ್ರಮದ ಹಿನ್ನೆಲೆಯಲ್ಲಿ ಕೂಡ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ. ಅಪಾಯಕಾರಿ ಪ್ರಮಾಣದಲ್ಲಿ ಸೋಂಕು ಹೊಂದಿರುವ ರಾಜ್ಯಗಳಿಂದ ಪ್ರಯಾಣವನ್ನು ನಿರ್ಬಂಧಿಸುವುದು ಸಾಧ್ಯವಿಲ್ಲದೆ ಹೋದಲ್ಲಿ, ಕನಿಷ್ಟ ಕೆಂಪು ವಲಯದಲ್ಲಿರುವ ನಗರಗಳಿಂದ ಬರುವವರನ್ನಾದರೂ ನಿರ್ಬಂಧಿಸುವ ಅನಿವಾರ್ಯತೆ ಎದುರಾಗಿದೆ.

ಅದರಲ್ಲೂ ಈವರೆಗೆ ಬಹುತೇಕ ನಗರ ಮತ್ತು ಪಟ್ಟಣಗಳಿಗೆ ಸೀಮಿತವಾಗಿದ್ದ ಕರೋನಾ ಸೋಂಕು ಅಂತರರಾಜ್ಯ ವಲಸಿಗರ ನಿರ್ಲಕ್ಷ್ಯ, ಜಿಲ್ಲಾಡಳಿತಗಳ ಉದಾಸೀನದ ಕಾರಣದಿಂದ ಈಗ ಚಿಕ್ಕಪುಟ್ಟ ಹಳ್ಳಿಗಳಿಗೂ ವ್ಯಾಪಿಸತೊಡಗಿದೆ(ತೀರ್ಥಹಳ್ಳಿ ಪ್ರಕರಣದಂತೆ). ಇದು ತೀರಾ ಅಪಾಯಕಾರಿ. ಅಲ್ಲದೆ, ಮುಂಗಾರು ಹಂಗಾಮಿನ ಈ ಹೊತ್ತಿನ ಬಿರುಸಿನ ಕೃಷಿ ಚಟುವಟಿಕೆಗಳು ಮತ್ತು ಅಲ್ಲಿ ಜನ ಸಮುದಾಯಿಕವಾಗಿ ಸೇರಿ ಕೆಲಸ ಮಾಡುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಕೂಡ ಹಳ್ಳಿಗಳಿಗೆ ಸೋಂಕು ವ್ಯಾಪಿಸುವುದ ಊಹೆಗೂ ಮೀರಿದ ಅನಾಹುತಕ್ಕೆ ಕಾರಣವಾಗಬಹುದು. ಅದು ಅಂತಿಮವಾಗಿ ತೆರಲಾರದ ಜೀವ ಹಾನಿ ಮತ್ತು ಆರ್ಥಿಕ ನಷ್ಟಕ್ಕೆ ರಾಜ್ಯವನ್ನು ನೂಕಬಹುದು. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ತುರ್ತು ನಿರ್ಧಾರ ಕೈಗೊಳ್ಳಬೇಕಾದ ಎಚ್ಚರಿಕೆಯ ಘಂಟೆ ಮೊಳಗಿದೆ. ಈ ಭಾನುವಾರದ ಆಘಾತಕಾರಿ ಪ್ರಮಾಣದ ಸೋಂಕಿನ ಏರಿಕೆ ಮೊಳಗಿಸಿರುವ ಆ ಎಚ್ಚರಿಕೆಯ ಘಂಟೆಯನ್ನು ಸರ್ಕಾರ ಆಲಿಸಿ, ಸರಿಯಾದ ದಿಕ್ಕಿನಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದೇ ಎಂಬುದನ್ನು ಕಾದುನೋಡಬೇಕಿದೆ.

Click here Support Free Press and Independent Journalism

Pratidhvani
www.pratidhvani.com